Tag: ಹೊಸ ವರ್ಷಾಚರಣೆ

  • ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    – ಮೈಸೂರು, ಮಡಿಕೇರಿಯಲ್ಲಿ ಪ್ರವಾಸಿಗರ ದಂಡು

    ಬೆಂಗಳೂರು: ಇಡೀ ಜಗತ್ತಿನಲ್ಲಿ ಕೊರೊನಾ ಸುನಾಮಿ ಎದ್ದಿದೆ. ಈ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಗೆ ಕೊರೋನಾ ಕೊಳ್ಳಿ ಇಟ್ಟಿದೆ. ಎಲ್ಲಿಯೂ ಯಾವುದೇ ಸಂಭ್ರಮಾಚರಣೆಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಸತತ 2ನೇ ವರ್ಷವೂ ಸರ್ಕಾರ ಹೊಸ ವರ್ಷಾಚರಣೆಯ ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ ವಿಧಿಸಿದೆ.

    ಬೆಂಗಳೂರಲ್ಲಿ ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರಿಣಾಮ ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಳ್ತಿದ್ದ, ಡಿಜೆ, ಅಬ್ಬರದ ಕುಣಿತ, ಜನಜಂಗುಳಿ.. ಹೀಗೆ ನಶೆಯ ಲೋಕದಲ್ಲಿ ತೇಲಿ ಹೋಗ್ತಿದ್ದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್‍ಗಳು ಬಿಕೋ ಎನ್ನುತ್ತಿವೆ. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಎಳೆದು ಬಂದ್ ಮಾಡಿದ್ದಾರೆ.

    ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್ – ಮೆಯೋ ಹಾಲ್‍ವರೆಗೆ ನಿರ್ಜನ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ. ರೆಸಿಡೆನ್ಸಿ ರಸ್ತೆ, ಸೇಂಟ್‍ಮಾಕ್ರ್ಸ್ ರೋಡ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‍ಸ್ಟ್ರೀಟ್ ಸೇರಿದಂತೆ 11 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಾರ್ಟಿ ಮುಗಿಸಿ ಬರುವ ಹೆಣ್ಣುಮಕ್ಕಳ ರಕ್ಷಣೆಗಾಗಿ 10 ಕಡೆ ಸೇಫ್ಟಿ ಐಲ್ಯಾಂಡ್‍ಗಳನ್ನ ನಿರ್ಮಿಸಲಾಗಿದೆ. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

    ಬುಕ್ ಮಾಡಿದವರಿಗಷ್ಟೇ ಪಬ್, ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವರು ಮಧ್ಯಾಹ್ನದಿಂದಲೇ ಪಾರ್ಟಿಯಲ್ಲಿ ತೊಡಗಿದ್ರು. ಇನ್ನು ಕೆಲವೇ ಕ್ಷಣಗಳಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್, ರೆಸಾರ್ಟ್, ಎಲ್ಲಾ ಅಂಗಡಿ-ಮುಂಗಟ್ಟು ಬಂದ್ ಆಗಲಿವೆ. ಪ್ರಮುಖ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲಿದ್ದು, ಪೊಲೀಸರು ಎಲ್ಲವನ್ನೂ ಮಾನಿಟರ್ ಮಾಡ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ಮೇಲೆ ಕೇಸ್ ಹಾಕಲಿದ್ದಾರೆ.

    ಇತ್ತ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಚಿಕ್ಕಬಳ್ಳಾಪುರದ ನಂದಿಬೆಟ್ಟ ಜನವರಿ 2ರವರೆಗೆ ಬಂದ್ ಆಗಿದೆ. ಗುಡಿಬಂಡೆಯ ಆವಲಬೆಟ್ಟಕ್ಕೂ ನಿರ್ಬಂಧ ಹೇರಲಾಗಿದೆ. ಸ್ಕಂದಗಿರಿಯಲ್ಲಿ ಚಾರಣಕ್ಕೆ ಮಾತ್ರ ಅವಕಾಶ ಇದೆ. ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಬರುವಂತಿಲ್ಲ. ಮಂಡ್ಯದ ಮೇಲುಕೋಟೆ, ಕೆರೆ ತೊಣ್ಣೂರು, ಕುಂತಿಬೆಟ್ಟಕ್ಕೆ ತೆರಳುವುದಕ್ಕೆ ನಾಳೆ ರಾತ್ರಿ 10ವರೆಗೆ ನಿರ್ಬಂಧ ಹೇರಲಾಗಿದೆ. ಉಡುಪಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರು ಕಂಡುಬಂದ್ರು.

    ದಕ್ಷಿಣ ಕನ್ನಡದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಉಳ್ಳಾಲ, ಸುರತ್ಕಲ್ ಸೇರಿ ಎಲ್ಲಾ ಬೀಚ್‍ಗಳು ಸಂಜೆಯವರೆಗೂ ತುಂಬಿ ತುಳುಕ್ತಿದ್ವು. ಸಂಜೆ 7 ಗಂಟೆ ನಂತರ ಎಲ್ಲಾ ಬಂದ್ ಆಯ್ತು. ಉತ್ತರ ಕನ್ನಡದ ಬೀಚ್‍ಗಳಲ್ಲಿ ರಾತ್ರಿ 8 ಗಂಟೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಬಹುತೇಕ ಪ್ರವಾಸಿಗರು ಗೋವಾ ಬೀಚ್ ಕಡೆಗೆ ಮುಖ ಮಾಡಿದ್ರು. ಇನ್ನು, ಮೈಸೂರು ವರ್ಷದ ಕೊನೆಯ ದಿನ ತುಂಬಿ ತುಳುಕ್ತಿತ್ತು. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಬಂದಿದ್ದಾರೆ. ತುಮಕೂರಿನ ದೇವರಾಯನದುರ್ಗ, ನಾಮದಚಿಲುಮೆಗೆ ನಾಳೆ ಬೆಳಗ್ಗೆ 5 ಗಂಟೆವರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

  • ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

    ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

    ಚಾಮರಾಜನಗರ: ಹೊಸ ವರ್ಷದ ಮುನ್ನಾ ದಿನ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ಕ್ರಿಸ್‍ಮಸ್ ದಿನದಿಂದಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಸಾವಿರ ಜನರು ಸಫಾರಿ ಮಾಡಿದ್ದು, ಅರಣ್ಯ ಇಲಾಖೆಗೆ 22 ಲಕ್ಷ ರೂ. ಆದಾಯ ಬಂದಿದೆ.

    ಬಂಡೀಪುರದಲ್ಲಿ ಇಂದು ಮತ್ತು ನಾಳೆ ಅರಣ್ಯ ಇಲಾಖೆಯ ಕಾಟೇಜ್, ಡಾರ್ಮೆಟರಿಗಳಲ್ಲಿ ವಾಸ್ತವ್ಯ ಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಬೆಳಗ್ಗೆ, ಸಂಜೆ ಸಫಾರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಿಧೆಡೆಯಿಂದ ಪ್ರವಾಸಿಗರ ದಂಡು ಲಗ್ಗೆ ಇಟ್ಟಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಮಾಸ್ಕ್ ಧರಿಸಿ ಬಂದಿದ್ದರೂ ಸಹ ಸಾಮಾಜಿಕ ಅಂತರ ಮಾಯವಾಗಿತ್ತು. ಇದನ್ನೂ ಓದಿ: ಮುಂಬೈಯಲ್ಲಿ ಜ.15ರವರೆಗೆ 144 ಸೆಕ್ಷನ್ ಜಾರಿ – ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ

    ಅದಲ್ಲದೇ ಚಾಮರಾಜನಗರ ಜಿಲ್ಲಾದ್ಯಂತ ರೆಸಾರ್ಟ್ ಗಳು ಹೌಸ್ ಪುಲ್ ಆಗಿವೆ. ರೆಸಾರ್ಟ್ ನಲ್ಲಿ ಡಿಜೆ, ಪಾರ್ಟಿ, ಪೈರ್ ಕ್ಯಾಂಪ್ ಗೆ ಬ್ರೇಕ್ ಹಾಕಲಾಗಿದೆ. ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲೂ ಕೋವಿಡ್ ನೆಗೆಟಿವ್ ರಿಪೋರ್ಟ್, ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದಾರೆ. ಆದರೂ ಹೊಸ ವರ್ಷದ ಆಚರಣೆ ಹಿನ್ನೆಲೆ ರೆಸಾರ್ಟ್ ಗಳೆಲ್ಲ ತುಂಬಿ ತುಳುಕುತ್ತಿವೆ.

  • ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಸುತ್ತಮುತ್ತ ಹೈಅಲರ್ಟ್

    ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಸುತ್ತಮುತ್ತ ಹೈಅಲರ್ಟ್

    ಚಿಕ್ಕಬಳ್ಳಾಪುರ: ಇನ್ನೇನು 2021 ಕಳೆದು 2022 ರನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗುತ್ತಿದೆ. ಹೀಗಾಗಿ ಒಂದೆಡೆ ಸಂತಸ ಮತ್ತೊಂದೆಡೆ ಹೊಸವರ್ಷವನ್ನು ಸಾರ್ವಜನಿಕವಾಗಿ ಆಚರಿಸಲಾಗದೆ ಅಸಮಾಧಾನ ಎದ್ದಿದೆ. ಕಫ್ರ್ಯೂ ಮಧ್ಯೆಯೂ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಬಾರದು, ಆಚರಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಇತ್ತ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲೀಕರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

    ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಅದ್ಧೂರಿ ಹೊಸ ವರ್ಷಾಚರಣೆ ಮಾಡಲು ನಿರ್ಬಂಧ ಇರುವ ಹಿನ್ನೆಲೆ ಕಳ್ಳ ಮಾರ್ಗದ ಮೂಲಕ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಗಳಲ್ಲಿ ಹೊಸ ವರ್ಷಾಚರಣೆ ಮಾಡುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರು ಜಂಟಿ ಸಭೆ ನಡೆಸಿದ್ದಾರೆ. ಈ ವೇಳೆ ಹೋಟೆಲ್, ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲಿಕರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ಮತ್ತೊಂದೆಡೆ ನಂದಿಗಿರಿಧಾಮವನ್ನು ಜನವರಿ 2ರ ಬೆಳಗ್ಗೆ ಆರು ಗಂಟೆವರೆಗೂ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ನಂದಿಗಿರಿಧಾಮಕ್ಕೆ ಬಂದವರು ಅಕ್ಕ-ಪಕ್ಕದ ಬೆಟ್ಟ ಗುಡ್ಡಗಳತ್ತ ಮುಖ ಮಾಡಿ ಕುಡಿದು ಕುಣಿದು ತೂರಾಡಬಹುದು. ಇದರಿಂದ ಸಮಸ್ಯೆ ಆಗುತ್ತೆ ಅಂತ ಅರಣ್ಯ ಇಲಾಖೆ ರಾತ್ರಿ ವೇಳೆ ಅರಣ್ಯ ಪ್ರವಾಸೋದ್ಯಮವನ್ನು ಬಂದ್ ಮಾಡಿದೆ. ಬೆಳಗ್ಗಿನ ಜಾವದಲ್ಲಿ ಮಾತ್ರ ಸ್ಕಂದಗಿರಿ, ಚನ್ನಗಿರಿ ಹಾಗೂ ಬ್ರಹ್ಮಗಿರಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಅಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಸಹ ಪ್ರವಾಸಿಗರು ಬಾರದಂತೆ ಬೆಟ್ಟ ಗುಡ್ಡಗಳ ಕಡೆ ಬಂದೋಬಸ್ತ್ ಮಾಡಿದೆ.

  • ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಹೊಸ ವರ್ಷವನ್ನು ಬಹಳ ಸರಳವಾಗಿ ಬರಮಾಡಿಕೊಳ್ಳಲಾಯಿತು. ಮಹಾಮಾರಿ ಕೊರೊನಾ ವೈರಸ್, ಓಮಿಕ್ರಾನ್ ಆತಂಕದಿಂದ ಭಾರೀ ಸಡಗರಕ್ಕೆ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಳವಾಗಿಯೇ ಹೊಸ ವರ್ಷವನ್ನು ಆಚರಣೆ ಮಾಡಿಕೊಳ್ಳಲಾಯಿತು. ಆದರೆ ವಿದೇಶಗಳಲ್ಲಿ ಭಾರೀ ಸಂಭ್ರಮ, ಸಡಗರದಿಂದಲೇ ನ್ಯೂ ಇಯರ್ ಅನ್ನು ವೆಲ್ ಕಮ್ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಳೆ ಸಿಂಚನವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಮಳೆ ಬಂದ ಕಾರಣವೂ ಜನ ಬೇಗ ಮನೆ ಸೇರಿಕೊಂಡರು. ಪ್ರತಿ ವರ್ಷದ ಹೊಸ ವರ್ಷಕ್ಕೆ ಬೆಂಗಳೂರಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಿದೆ. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಂಡೋಪತಂಡವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜಮಾಯಿಸಿ, ರೋಡ್‍ಗಳನ್ನು ಬಂದ್ ಮಾಡಿದ್ರು.

    ಹೊಸ ವರ್ಷ ಬಂತು ಅಂದ್ರೆ ಜನ ಬೆಂಗಳೂರಿನ ಈ ರೋಡ್‍ಗೆ ಬರೋದು ಮೋಜು ಮಸ್ತಿ ಮಾಡೋದು ಸಾಮಾನ್ಯ. ಆದರೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ಮತ್ತು ಮೂರನೇ ಅಲೆಯ ಭಯಕ್ಕೆ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಹಾಗಾಗಿ ಬೆಂಗಳೂರಿನ ಬ್ರೀಗೆಡ್ ರೋಡ್ ಖಾಲಿಯಾಗಿದೆ.ಬ್ರಿಗೇಡ್ ರೋಡ್‍ನ ಪಬ್ ಅಂಡ್ ಬಾರ್ ರೆಸ್ಟೋರೆಂಟ್‍ಗಳು ನ್ಯೂ ಇಯರ್ ಸೆಲೆಬ್ರೇಷನ್ ಟೈಮ್ ನಲ್ಲಿ ಕಾಲಿಡಲು ಸಹ ಜಾಗವಿಲ್ಲದಂತೆ ತುಂಬಿ ತುಳುಕುತ್ತಿತ್ತು. ಆದರೇ ಈ ವರ್ಷ ಮೂರನೇ ಅಲೆಯ ಭೀತಿಗೆ ಸರ್ಕಾರ ಮಾಡಿರೋ ಟಫ್ ರೂಲ್ಸ್ ಕಾರಣದಿಂದ ಖಾಲಿ ಖಾಲಿಯಾಗಿದೆ. ಸಂಜೆ 6 ಗಂಟೆಗೇ ಈ ಪ್ರಮುಖ ರೋಡ್‍ಗಳ ಬಂದ್ ಮಾಡಿರೋದಕ್ಕೆ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಯುಬಿ ಸಿಟಿಯ ರಸ್ತೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ರಂಗು ರಂಗಾಗಿರುತ್ತಿದ್ದ ಯುಬಿ ಸಿಟಿ ಇಂದು ಸಂಪೂರ್ಣ ಕಳೆಗುಂದಿದೆ. ಡಿಜೆ ಮೋಜು ಮಸ್ತಿ ಇಲ್ಲದ ರಸ್ತೆಯಲ್ಲಿ ಮನೆಗಳತ್ತ ಜನ ಮುಖ ಮಾಡಿದ್ದಾರೆ. ಪಬ್, ರೆಸ್ಟೋರೆಂಟ್‍ಗಳ ಮುಂದೆ ಜನರಿಗಿಂತ ಪೊಲೀಸರೇ ಹೆಚ್ಚಿದ್ದರು. ಕೋರಮಂಗಲದಲ್ಲಿ 80 ಅಡಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಜನ ಪಬ್‍ಗಳಿಗೆ ಬೆರಳೆಣಿಕೆ ಜನ ಬಂದಿದ್ದರು. ರಾತ್ರಿ 9.30ರ ಒಳಗೆ ಊಟ ಮುಗಿಸಿಕೊಂಡರು. ಇನ್ನು ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಕ್ಲಬ್, ಪಬ್‍ಗೆಳಿಗೆ ಎಂಟ್ರಿ ಕೊಡೋ ರೋಡ್‍ಗಳ ಕಡೆ ಹೆಚ್ಚು ನಿಹಾ ವಹಿಸಿದ್ದರು. ಗಲಾಟೆ ಮಾಡುವವರನ್ನ ವಶಕ್ಕೆ ಪಡೆಯಲು ಬಿಎಂಟಿಸಿ ಮತ್ತು ಟಿಟಿ ವೆಹಿಕಲ್ ಕರೆಸಿಕೊಂಡಿದ್ದಾರೆ.

    ಇಂದಿರಾನಗರದಲ್ಲೂ ನ್ಯೂ ಇಯರ್ ಸಂಭ್ರಮ ಕಳೆಗುಂದಿದೆ. ಇಂದಿರಾನಗರ ಸುತ್ತಮುತ್ತ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಂಭ್ರಮ ಇರಲಿಲ್ಲ. 80 ಅಡಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಿದರು. ಯುವತಿಯರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಸೇಫ್ಟಿ ಐಲ್ಯಾಂಡ್ ಅನ್ನು ಪೊಲೀಸರೇ ನಿರ್ಮಿಸಿದ್ದಾರೆ. ನೈಟ್ ಕರ್ಫ್ಯೂಗೆ ಸಮಯ ಸಮೀಪಿಸುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಂತ ಹಂತವಾಗಿ ಶಾಪ್‍ಗಳು, ಮಳಿಗೆಗಳ ಮಾಲೀಕರು ಬಾಗಿಲು ಹಾಕಿದರು. 10 ಗಂಟೆಯೊಳಗೆ ಮನೆ ಸೇರಿಕೊಳ್ಳಲು ಹೊರಡಿದರು.

    ಇತ್ತ ಹುಬ್ಬಳ್ಳಿಯಲ್ಲಿ ರಾತ್ರಿ 8ಗಂಟೆ ಹೊತ್ತಿಗೆ ಪಬ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಯುವಕ ಯುವತಿಯರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ರು. ರ್ಯಾಪರ್ ಚಂದನ್‍ ಶೆಟ್ಟಿ ಪತ್ನಿ ನಿವೇದಿತಾ ಜೊತೆ ಉಡುಪಿಯ ಮಲ್ಪೆಯಲ್ಲಿ ಕಾಣಿಸಿಕೊಂಡಿದ್ರು. ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೂರಾರು ಜನ ಮೀನಿನ ಖಾದ್ಯವನ್ನು ಸವಿಯುತ್ತ ಬೀಚ್ ಬದಿಯಲ್ಲಿ ಫ್ಯಾಮಿಲಿ ಸಮೇತ ಎಂಜಾಯ್ ಮಾಡುತ್ತಾ ಹೊಸವರ್ಷವನ್ನು ಆಚರಿಸಿದ್ರು. ಬೀಚ್ ರೆಸ್ಟೋರೆಂಟ್ ಫ್ರೆಶ್ ಫಿಶ್ ಫ್ರೈ ಹೋಟೆಲ್ ಗಳಲ್ಲಿ ಜನ ತಮ್ಮ ಇಷ್ಟದ ಆಹಾರವನ್ನು ಸೇವಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡ್ರು.

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಆದ್ರೆ ಕಾರವಾರದ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನಲೆಯಲ್ಲಿ ಎಂಟುಗಂಟೆ ಕಳೆದರೂ ಅಂಗಡಿಮುಂಗಟ್ಟುಗಳು ಬಂದ್ ಆಗದೇ ತೆರೆದಿದ್ದು ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ನಿರತರಾದರು. ಬೆಳಗಾವಿಯ ಪಂಚತಾರಾ ಹೋಟೆಲ್‍ಗಳು ಖಾಲಿ ಖಾಲಿ ಆಗಿವೆ. ಸರ್ಕಾರದ ಮಾರ್ಗ ಸೂಚಿಯಂತೆ ರಾತ್ರಿ 10 ಗಂಟೆಗೆ ಹೊಟೇಲ್‍ಗಳು ಬಂದ್ ಆಗಿವೆ.

  • ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!

    ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!

    ಡಿಸ್ಪುರ್: ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ನೀಡುವ ಹಾಗೂ ಕಫ್ರ್ಯೂ ನಿಯಮಗಳ ಬಗ್ಗೆ ಕೇಳಿಬರುತ್ತಿದೆ. ಆದರೆ ಅಸ್ಸಾಂನ ಬಿಸ್ವಂತ್ ಜಿಲ್ಲೆಯಲ್ಲಿ ಮಾತ್ರ ಹೊಸ ವರ್ಷಾಚರಣೆಗೆ ಉತ್ತೇಜನ ನೀಡುತ್ತಿದ್ದು, ಕುಡುಕರಿಗೆ ಹೊಸದೊಂದು ಸೌಲಭ್ಯವನ್ನೂ ಒದಗಿಸುತ್ತಿದೆ.

    ಡ್ರಂಕ್ ಆಂಡ್ ಡ್ರೈವ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ಅಸ್ಸಾಂನ ಬಿಸ್ವಂತ್ ಜಿಲ್ಲಾಡಳಿತ ಎರಡು ಸಹಾಯವಾಣಿಯನ್ನು ಸ್ಥಾಪಿಸಿದೆ. ಹೊಸವರ್ಷದಲ್ಲಿ ಮದ್ಯಪಾನ ಮಾಡಿದವರನ್ನು ಮನೆಗೆ ಬಿಡಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ. ಹೊಸ ವರ್ಷದ ಕಾರ್ಯಕ್ರಮದಿಂದ ಕುಡುಕರನ್ನು ಅವರ ಮನೆಗಳಿಗೆ ಬಿಡಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ತಡೆಗೆ ಮತ್ತಷ್ಟು ಟಫ್ ರೂಲ್ಸ್ – ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ 50:50 ರೂಲ್ಸ್ ಜಾರಿ

    ಅತಿಯಾದ ಮದ್ಯ ಸೇವನೆಯಿಂದ ಅಪಘಾತ ಸಂಭವಿಸಬಹುದು ಎಂದು ಭಾವಿಸುವ ಜನರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಡ್ರಾಪ್ ಹೋಮ್ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾಹನಗಳನ್ನು ನಿಯೋಜಿಸಲಾಗಿದೆ. ಡಿಸೆಂಬರ್ 31ರಂದು ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಬಿಸ್ವಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಲೀನಾ ಡೋಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷವನ್ನು ಆಚರಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆಚರಣೆಯ ಸಮಯದಲ್ಲಿ ಯಾರಾದರೂ ಕುಡಿದು ಮನೆಗೆ ಹಿಂದಿರುಗಲು ಸಾಧ್ಯವಾಗದಿದ್ದರೆ ಅಂತಹವರಿಗೆ ಜಿಲ್ಲಾಡಳಿತ ನೆರವಿನೊಂದಿಗೆ ಪೊಲೀಸ್ ಇಲಾಖೆ ವಾಹನ ವ್ಯವಸ್ಥೆ ಮಾಡಿದೆ ಎಂದರು. ಇದನ್ನೂ ಓದಿ: ಜನಸಂಪರ್ಕ ಬೆಳೆಸಿಕೊಳ್ಳಿ – ಜಿ.ಪಂ. ಸಿಇಓಗಳಿಗೆ ಬೊಮ್ಮಾಯಿ ಸಲಹೆ

    ಈ ಉದ್ದೇಶಕ್ಕಾಗಿ ಸ್ಥಾಪಿಸಲಾದ ಎರಡು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇವೆ ಅಸ್ಸಾಂನ ಬಿಸ್ವಂತ್ ಜಿಲ್ಲೆಗೆ ಮಾತ್ರ ಅನ್ವಯವಾಗುತ್ತದೆ.

  • ಓಮಿಕ್ರಾನ್ ಆತಂಕ – ಬಂಡೀಪುರದಲ್ಲಿ ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್!

    ಓಮಿಕ್ರಾನ್ ಆತಂಕ – ಬಂಡೀಪುರದಲ್ಲಿ ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್!

    ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಭೀತಿ ಹೆಚ್ಚಾಗಿದೆ. ಪರಿಣಾಮವಾಗಿ ಈ ವರ್ಷ ಬಂಡೀಪುರ ಅರಣ್ಯ ಧಾಮದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ.

    ಡಿಸೆಂಬರ್ 31 ಹಾಗೂ ಜನವರಿ 1ರಂದು ಬಂಡೀಪುರದಲ್ಲಿ ಹೊಸವರ್ಷಾಚರಣೆಯನ್ನು ಪ್ರತಿ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಸದ್ಯ ಕೊರೊನಾ ಸೋಂಕಿನ ಭೀತಿ ಹೆಚ್ಚಿರುವುದರಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ. ಇದನ್ನೂ ಓದಿ: 5 ದಿನಗಳ ಕಾಲ ದುಬೈ ಪ್ರವಾಸ ಹೊರಟ ಬಿಎಸ್‍ವೈ

    ಡಿಸೆಂಬರ್ 31 ಹಾಗೂ ಜನವರಿ 1 ರಂದು ಅರಣ್ಯ ಇಲಾಖೆಯ ಡಾರ್ಮೆಟರಿಗಳು, ಕಾಟೇಜ್ ಹಾಗೂ ಗೆಸ್ಟ್ ಹೌಸ್‌ಗಳಲ್ಲಿ ವಾಸ್ತವ್ಯ ನಿರ್ಬಂಧಿಸಿದ್ದು, ಆನ್‌ಲೈನ್ ಬುಕಿಂಗ್ ಕೂಡಾ ಬ್ಲಾಕ್ ಮಾಡಲಾಗಿದೆ.

    ಹೊಸ ವರ್ಷದ ಸಲುವಾಗಿ ಬಂಡೀಪುರದಲ್ಲಿ ಕೇವಲ ಮೋಜು-ಮಸ್ತಿಗಷ್ಟೇ ಬ್ರೇಕ್ ಹಾಕಲಾಗಿದೆ. ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಆದರೆ ವಾಸ್ತವ್ಯ ಹೂಡುವಂತಿಲ್ಲ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ನಟೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

  • ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ಕೋಲಾರ: ಕೊರೊನಾ ಹಾಗೂ ಸರ್ಕಾರದ ನಿಷೇಧಾಜ್ಞೆಯಿಂದ ಅಬಕಾರಿ ಇಲಾಖೆಗೆ ಹೊಸ ವರ್ಷದಂದು ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಷೇಧಾಜ್ಞೆಯಿಂದಾಗಿ ಹೊಸ ವರ್ಷದಂದು ಅಬಕಾರಿ ಇಲಾಖೆಗೆ ಕೇವಲ 161 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಬಾರಿ ಹೊಸ ವರ್ಷಕ್ಕೆ 200 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಹಲವು ಗೊಂದಲಗಳಿಂದ ಸುಮಾರು 40 ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಅವರು ಹೇಳಿದರು.

    ಈ ನಷ್ಟಕ್ಕೆ ಸರ್ಕಾರದ ನಿಷೇಧಾಜ್ಞೆ ಜಾರಿ ಮಾಡದ್ದೇ ಕಾರಣ. ಜಿಲ್ಲೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ, ಹಾಗಾಗಿ ಜಿಲ್ಲೆಯ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನು ಕರೆದು ವಿಚಾರ ಮಾಡುವೆ. ಅಲ್ಲದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದು ಹಾಗೂ ರಿಂಗ್ ರಸ್ತೆ ಮಾಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

  • ತೋಳದ ಮುಖವಾಡ ಧರಿಸಿ ಬಿದಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್!

    ತೋಳದ ಮುಖವಾಡ ಧರಿಸಿ ಬಿದಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್!

    – ಹೊಸ ವರ್ಷದಂದು ಭಯ ಹುಟ್ಟಿಸಲು ಹೋಗಿ ಸಿಕ್ಕಿಬಿದ್ದ

    ಇಸ್ಲಾಮಾಬಾದ್: ಹೊಸ ವರ್ಷಾಚರಣೆಯ ವೇಳೆ ತೋಳದ ಮಾಸ್ಕ್ ಧರಿಸಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಪಾಕಿಸ್ತಾನ ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ವ್ಯಕ್ತಿಯೊಬ್ಬ ಹೊಸ ವರ್ಷಾಚರಣೆಯಂದು ರಾತ್ರಿ ತೋಳದ ಮುಖದ ರೀತಿಯ ಮುಖವಾಡ ಧರಿಸಿದ್ದನು. ಅಲ್ಲದೇ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡಿದ್ದಾನೆ. ಈತ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವ ಜನರಿಗೆ ಭಯ ಹುಟ್ಟಿಸಲೆಂದೇ ಈ ರೀತಿಯ ಮುಖವಾಡ ಧರಿಸಿದ್ದನು ಎಂದು ಆತನನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಈ ಮುಖವಾಡ ನೋಡಲು ತುಂಬಾ ಭಯವಾಗುತ್ತಿದೆ. ಈ ತೋಳದ ಮಾಸ್ಕ್ ನೋಡಿ ಕೊರೊನಾ ಹತ್ತಿರವೂ ಸುಳಿಯುವುದಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ಚರ್ಚೆ ಮಾಡುತ್ತಿದ್ದಾರೆ.

  • ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರು: ಕೊರೊನಾ ವೈರಸ್ ಈ ಬಾರಿಯ ಹೊಸ ವರ್ಷಾಚರಣೆರಗೆ ಬ್ರೇಕ್ ಹಾಕಿದೆ. ಬಾರ್, ಪಬ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಜನ ಮದ್ಯ ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದಿದ್ದಾರೆ.

    ಹೌದು. ಚಿಕ್ಕ ಪೇಟೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಹಾಗೂ ಸರಿಯಾಗಿ ಮಾಸ್ಕ್ ಹಾಕದೇ ಜನ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಫೀಲ್ಡ್ ಗೆ ಇಳಿದಿದ್ದಾರೆ. ಪಾರ್ಟಿ ಮಾಡಲು ಜನ ಮದ್ಯ ಖರೀದಿಸುವಲ್ಲಿ ನಿರತರಾಗಿದ್ದಾರೆ. ಕೊರೊನಾ ನಿಯಮಕ್ಕೆ ಬ್ರೇಕ್ ಹಾಕಿ ಜನ ಮದ್ಯ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಮದ್ಯದಂಗಡಿಗಳ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ನಿಷೇಧಾಜ್ಞೆ ಬೆನ್ನಲ್ಲೇ ಸಾಕಷ್ಟು ಮದ್ಯ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಾಗಿದ್ದು, ನಾಳೆ ಬೆಳಗ್ಗೆವರೆಗೆ ಮುಂದುವರಿಯಲಿದೆ. ಈ ಹಿಂದೆ ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲು ನಿರ್ಧರಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಬೆಂಗಳೂರಿನಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ದೃಷ್ಟಿಯಿಂದ ಇಂದು ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

  • ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

    ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

    – ಕುಡಿದು ವಾಹನ ಚಲಿಸುವವರಿಗೆ ರಕ್ತ ತಪಾಸಣೆ
    – ನಗರದ ಸುತ್ತ ನಾಕಾಬಂದಿ, ಹೊರಗೆ ತೆರಳದಂತೆ ಕ್ರಮ

    ಬೆಂಗಳೂರು: ರಾತ್ರಿ ಕರ್ಫ್ಯೂ ವಿವಾದದ ಬಳಿಕ ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದು, ಹೊಸ ವರ್ಷದ ಅಂಗವಾಗಿ ಅನಗತ್ಯ ತಿರುಗಾಟಕ್ಕೆ ಬ್ರೇಕ್ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಡಿ.31ರ ರಾತ್ರಿ 8 ಗಂಟೆಯಿಂದಲೇ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗುತ್ತಿದೆ.

    ಹೊಸ ವರ್ಷದ ಆಚರಣೆ ಅಂಗವಾಗಿ ವಿವಿಧ ಕ್ರಮ ಕೈಗೊಂಡಿರುವ ಕುರಿತು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಹೊಸ ವರ್ಷಕ್ಕೆ ಸಂಚಾರಿ ನಿಯಮ ಹಾಗೂ ಮಾರ್ಗಸೂಚಿಗಳ ಕುರಿತು ವಿವರಿಸಿದ್ದಾರೆ. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ವಿಶೇಷ ಬಂದೋಬಸ್ತ್ ಗೆ ತೀರ್ಮಾನಿಸಲಾಗಿದೆ. ಕಳೆದ ವರ್ಷ ಕೇಂದ್ರ, ವಾಣಿಜ್ಯ ವಲಯಗಳಲ್ಲಿ ಜನಸಂದಣಿಗೆ ಅವಕಾಶ ಇರುತ್ತಿತ್ತು. ಈ ಬಾರಿ ಎಲ್ಲಿಯೂ ಹೊರಗಡೆ ಹಾಗೂ ರಸ್ತೆಯ ಮೇಲೆ ಆಚರಣೆಗೆ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆಯಲ್ಲಿ ನಾಳೆ ರಾತ್ರಿ ಎಂಟು ಗಂಟೆಯಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾತ್ರಿ ಎಂಟು ಗಂಟೆಯ ಬಳಿಕ ಈ ರಸ್ತೆಯಲ್ಲಿ ವಾಹನಗಳಿಗೆ ಅವಕಾಶವಿಲ್ಲ. ಹೋಟೆಲ್‍ಗಳು ನೀಡಿರುವ ಪಾಸ್, ಟಿಕೆಟ್ ಇದ್ದರೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಮೇಲ್ಸೇತುವೆಗಳಲ್ಲಿ ಡ್ರ್ಯಾಗ್ ರೇಸ್, ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 10 ಗಂಟೆಯ ನಂತರ ಎಲ್ಲ ಫ್ಲೈ ಓವರ್‍ಗಳನ್ನು ಬಂದ್ ಮಾಡಲಾಗುವುದು. ವಿಮಾನ ನಿಲ್ದಾಣ ರಸ್ತೆಯ ಎಲಿವೆಟೆಡ್ ಫ್ಲೈ ಓವರ್ ಸಹ ಬಂದ್ ಮಾಡಲಾಗುವುದು. ಮಾತ್ರವಲ್ಲದೆ ಹಲವಾರು ಮಾರ್ಗ ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದರು.

    15 ಕಡೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಇಂದಿರಾನಗರ 100 ಫೀಟ್ ಸೇರಿದಂತೆ 15 ಕಡೆ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. 668 ಕಡೆಗಳ ರಸ್ತೆಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ನೈಸ್ ರಸ್ತೆಯ ಮೇಲೂ ನಿಗಾ ವಹಿಸಲಾಗಿದೆ. 2,600 ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ನಗರದ ಹೊರಗಡೆ ತೆರಳುವ ಎಲ್ಲ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗುವುದು. ಎರಡ್ಮೂರು ಬಾರಿ ಓಡಾಡಿದರೆ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

    191 ಚೆಕ್ ಪಾಯಿಂಟ್ ಗಳಲ್ಲಿ ಪೊಲೀಸಲು ವಾಹನ ತಪಾಸಣೆ ಮಾಡಲಿದ್ದಾರೆ. ಮದ್ಯ ಸೇವನೆ ಮಾಡಿ ತೆರಳುವವರ ಮೇಲೆ ನಿಗಾ ವಹಿಸಲಾಗುತ್ತದೆ. ಈ ಬಗ್ಗೆ ಹೋಟೆಲ್ ಗಳ ಮಾಲೀಕರ ಜೊತೆ ಮಾತುಕತೆ ನಡೆಸಲಾಗಿದೆ. ಯಾರಾದರೂ ಚಾಲಕರು ಮದ್ಯ ಸೇವನೆ ಮಾಡಿದರೆ ಮೊದಲಿಗೆ ಅವರಿಗೆ ತಿಳಿಸಲಾಗುತ್ತೆ. ಪಬ್ ಬಾರ್ ನವರು ಬೇರೆ ವ್ಯವಸ್ಥೆ ಮಾಡೋದಕ್ಕೆ ತಯಾರಿದ್ದಾರೆ. ಇದನ್ನು ಹೊರತುಪಡಿಸಿ ಓಲಾ ಉಬರ್ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದರು.

    191 ಕಡೆ ಪೊಲೀಸ್ ಪಿಕ್ ಅಪ್ ಪಾಯಿಂಟ್ ಮಾಡಲಾಗಿದೆ. ಕುಡಿದವರನ್ನು ಪಿಕ್ ಮಾಡಿಕೊಂಡು ರಕ್ತ ಪರೀಕ್ಷೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಇರುವುದರಿಂದ ಡಿಡಿ ಚೆಕ್ ಮಾಡುವುದಿಲ್ಲ. ಆದರೆ ಕುಡಿದು ವಾಹನ ಚಾಲನೆ ಮಾಡಿದರೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಚಾಲನಾ ಪರವಾನಗಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಸಿಆರ್‍ಪಿಸಿ ಅಡಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ಟ್ವೀಟ್ ಮಾಡಿದ್ದು, ಚಾಲ್ತಿಯಲ್ಲಿರುವ ಕೊರೊನಾ ರೋಗದ ನಡುವೆ ರೊಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 31 ಸಂಜೆ 6 ರಿಂದ ಜನವರಿ 1 ಬೆಳಗ್ಗೆ 6 ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಾದ ಮುಖ್ಯ ರಸ್ತೆ, ಪಾರ್ಕ್, ಪ್ಲೇಗ್ರೌಂಡ್‍ಗಳಲ್ಲಿ ಯಾವುದೇ ರೀತಿಯ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಚರ್ಚ್‍ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರಗಳನ್ನು ಸಂಚಾರ ನಿಷೇಧಿತ ವಲಯವೆಂದು ಪರಿಗಣಿಸಲಾಗಿದೆ. ಅದೇ ರೀತಿ ಅನವಶ್ಯಕ ಸಂಚಾರ, ಬೈಕ್ ಸುತ್ತಾಟ, ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ನಗರದ ಎಲ್ಲಾ ಫ್ಲೈಓವರ್‍ಗಳನ್ನು ಮುಚ್ಚಲಾಗಿರುತ್ತದೆ ಮತ್ತು ಕೆಲವೆಡೆ ಸಂಚಾರ ನಿಯಂತ್ರಣ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಮನೆಗಳಲ್ಲಿ, ಪ್ರೈವೇಟ್ ಕ್ಲಬ್, ರೆಸಿಡೆನ್ಯಿಯಲ್ ಕಾಂಪ್ಲೆಕ್ಸ್‍ಗಳಲ್ಲಿ ಸದಸ್ಯರು ಮಾತ್ರ ಆಚರಿಸಲು ಅವಕಾಶವಿದೆ. ಮುಂಚಿತವಾಗಿ ಬುಕ್ಕಿಂಗ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟಾರೆಂಟ್‍ಗಳಿಗೆ ಪ್ರವೇಶವಿರುತ್ತದೆ ಎಂದಿದ್ದಾರೆ. ಈ ಆದೇಶಗಳನ್ನು ಉಲ್ಲಂಘಿಸಿದರೆ ದಂಡದ ಜೊತೆಗೆ, ಐಪಿಸಿ ಸೆಕ್ಷನ್ 188 ಹಾಗೂ ಎನ್‍ಡಿಎಮ್‍ಎ ಕಾಯ್ದೆಯಡಿ ಪ್ರಕರಣ ದಾಖಲಿಸುದಾಗಿ ಎಚ್ಚರಿಕೆ ನೀಡಿದ್ದಾರೆ.