Tag: ಹೊಸ ನಿಯಮ

  • ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ದುಬೈ: ಟಿ20 ಪಂದ್ಯದ ವೇಳೆ ನಿಗದಿತ ಸಮಯದ ಒಳಗಡೆ ಓವರ್‌ಗಳನ್ನು ಮುಗಿಸದ ತಂಡಕ್ಕೆ ದಂಡದ ಜೊತೆಗೆ ಪಂದ್ಯ ನಡೆಯುವಾಗಲೇ ಮೈದಾನದಲ್ಲೇ ಶಿಕ್ಷೆಯನ್ನು ವಿಧಿಸಲು ಐಸಿಸಿ ನಿರ್ಧರಿಸಿದೆ.

    ಈ ಹಿಂದೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ತಂಡಗಳಿಗೆ ಪಂದ್ಯ ಮುಗಿದ ಮೇಲೆ ದಂಡ ಹಾಕುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಈಗ ಆ ನಿಯಮಗಳೊಂದಿಗೆ ಪಂದ್ಯದ ವೇಳೆಯೂ ಶಿಕ್ಷೆ ನೀಡಲು ಐಸಿಸಿ ನಿರ್ಧರಿಸಿದೆ. ಈ ಎಲ್ಲಾ ಹೊಸ ನಿಯಮಗಳು ಈ ತಿಂಗಳಿನಿಂದಲೇ ಜಾರಿಗೆ ಬರಲಿವೆ.

    ಹೊಸ ನಿಯಮದಲ್ಲಿ ಏನಿದೆ?: ಐಸಿಸಿ ನಿಯಮದ ಪ್ರಕಾರ ಒಂದು ಇನ್ನಿಂಗ್ಸ್ ಗರಿಷ್ಠ 85 ನಿಮಿಷದಲ್ಲಿ(2:30 ನಿಮಿಷದ ಎರಡು ಪಾನಿಯ ವಿರಾಮ ಸೇರಿದರೆ 90 ನಿಮಿಷ) ಮುಗಿಯಬೇಕು. ಹೀಗಾಗಿ‌ ಒಂದು ಓವರ್ ಅನ್ನು 4‌ ನಿಮಿಷ 25 ಸೆಕೆಂಡ್ ನಲ್ಲಿ‌ ಮುಗಿಸಬೇಕಾಗುತ್ತದೆ‌.

    ಸದ್ಯ ಐಸಿಸಿಯ ಹೊಸ ನಿಯಮ ಹೇಳುವ ಪ್ರಕಾರ ಬೌಲಿಂಗ್ ತಂಡವೊಂದು ಇನಿಂಗ್ಸ್ ಕೊನೆಯ ಓವರಿನ ಮೊದಲ ಎಸೆತ ಎಸೆಯುವಾಗ ನಿಗದಿತ ಅವಧಿಯಲ್ಲಿ ಇನಿಂಗ್ಸ್ ಮುಗಿಸುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಹೀಗಿರದಿದ್ದಲ್ಲಿ, ಇನಿಂಗ್ಸ್ ಓವರ್‌ಗಳನ್ನು ಎಸೆಯುವಾಗ 30 ಯಾರ್ಡ್ ಹೊರಗಡೆ 5 ಕ್ಷೇತ್ರ ರಕ್ಷಕರ ಬದಲಿಗೆ ಕೇವಲ ನಾಲ್ಕು ಕ್ಷೇತ್ರ ರಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಉದಾಹರಣೆಗೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಇನ್ನಿಂಗ್ಸ್ ಮುಗಿಯಬೇಕು ಎಂದಿರುತ್ತದೆ. ಬೌಲಿಂಗ್ ಮಾಡುವ ತಂಡವೊಂದು 81:35 ನಿಮಿಷ ಒಳಗಡೆ 19ನೇ ಓವರ್ ಪೂರ್ಣ ಮಾಡಿರಬೇಕು. ಒಂದು ವೇಳೆ ಆ ಹೊತ್ತಿಗೆ ಇನ್ನೂ 18ನೇ ಓವರ್ ಚಾಲ್ತಿಯಲ್ಲಿದ್ದರೆ, ಅಂಪೈರ್ ಗಳಿಗೆ 30 ಯಾರ್ಡ್ ಹೊರಗಡೆ ಕ್ಷೇತ್ರ ರಕ್ಷಕರನ್ನು ಕಡಿಮೆ ಮಾಡುವ ಅಧಿಕಾರವಿರುತ್ತದೆ.

    ಹಿಂದಿನ ನಿಯಮ ಹೇಗಿತ್ತು?: ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದಿದ್ದಲ್ಲಿ ತಂಡದ ನಾಯಕ ಮತ್ತು ಆಟಗಾರರಿಗೆ ಆರ್ಥಿಕ ದಂಡ ವಿಧಿಸಲಾಗುತ್ತಿತ್ತು. ಈ ನಿಯಮಗಳು ಮುಂದೆನೂ ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಹೊಸ ಶಿಕ್ಷೆಯೂ ಸೇರ್ಪಡೆಯಾಗುತ್ತದೆ.

    ಇತರೆ ಬದಲಾವಣೆ: ದ್ವಿಪಕ್ಷೀಯ ಸರಣಿಯಲ್ಲಿ ಐಪಿಎಲ್ ಮಾದರಿಯಲ್ಲಿ ಇನಿಂಗ್ಸ್ ನಡುವೆ 2:30 ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಲು ಅನುಮತಿಯಿದೆ. ಆದರೆ ಎರಡು ಕ್ರಿಕೆಟ್ ಮಂಡಳಿಗಳು ಸರಣಿ ಆರಂಭದಲ್ಲೇ ಒಪ್ಪಿಗೆ ಮಾಡಿಕೊಂಡರೆ ಮಾತ್ರ ಸಾಧ್ಯ. ಇದರಿಂದ ಪ್ರಸಾರಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಹೀರಾತು ಪ್ರಸಾರ ಮಾಡಬಹುದಾಗಿದೆ.

    ಬೌಲರ್‌ಗಳು ಸ್ಟಂಪ್ ಔಟ್‍ಗೆ ಮನವಿ ಸಲ್ಲಿಸುವ ವೇಳೆ ಚೆಂಡಿನ ಶೇ.50ರಷ್ಟು ಭಾಗ ಬೇಲ್ಸ್ ಗಳನ್ನು ಆವರಿಸಿಕೊಂಡಿರಬೇಕು. ಈ ಹಿಂದೆ ಬೇಲ್ಸ್ ಗೆ ಚೆಂಡು ತಾಕುವಂತಿದ್ದರೆ ಮಾತ್ರ ಸಾಕಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಹಿಂದಿನ ಆವೃತ್ತಿಯಲ್ಲಿ ಪ್ರತಿ ಸರಣಿಗೆ ಒಟ್ಟಾರೆ ಫಲಿತಾಂಶಗಳ ಲೆಕ್ಕಾಚಾರದಲ್ಲಿ ನೀಡಲಾಗುತ್ತಿತ್ತು. ಇದೀಗ ಪ್ರತಿ ಪಂದ್ಯಗಳ ಫಲಿತಾಂಶವನ್ನು ನೋಡಿಕೊಂಡು ಅಂಕ ನೀಡಲಾಗುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ 8,449, ಬೆಂಗಳೂರಿನಲ್ಲಿ 6,812 ಪಾಸಿಟವ್ – 4 ಸಾವು

    ಜನವರಿ 16ರಂದು ಜಮೈಕಾದ ಸಬಿನಾ ಪಾರ್ಕ್‍ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಟಿ-20 ಪಂದ್ಯದಿಂದಲೇ ಈ ಹೊಸ ನಿಯಮಗಳು ಅನ್ವಯಿಸಲಿದೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

     

  • ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ

    ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ

    – ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು.!
    – ನಿಯಂತ್ರಿತ ವಲಯದಲ್ಲಿ ಸೀಲ್‍ಡೌನ್ ರೂಲ್ಸ್

    ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು ಮಾಡಿ ರಾಜ್ಯ ಸರ್ಕಾರ ನಿಯಮಗಳ ಆದೇಶ ಹೊರಡಿಸಿದೆ.

    ಕೊರೊನಾ ಹಾಟ್‍ಸ್ಪಾಟ್‍ನಲ್ಲಿ ಲಾಕ್‍ಡೌನ್ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು ಹಾಟ್‍ಸ್ಪಾಟ್ ಝೋನ್‍ನಲ್ಲಿಯೇ ಮೂರು ವಲಯಗಳನ್ನು ಮಾಡಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹಾಗೂ ವಲಯ ಎಂದು ವಿಂಗಡಿಸಲಾಗಿದ್ದು, ಈ ಮೂಲಕ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.

    ನಿಯಂತ್ರಿಯ ವಲಯ:
    28 ದಿನಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದರೂ ಅಂತಹ ಪ್ರದೇಶವನ್ನು ನಿಯಂತ್ರಿಯ ವಲಯ ಎಂದು ಗುರುತಿಸಲಾಗುತ್ತದೆ. ಪಾಸಿಟಿವ್ ಇರುವ ವ್ಯಕ್ತಿಯ ನಿವಾಸದ ಮುಂದೆ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಅಪಾರ್ಟ್‍ಮೆಂಟ್, ಸಂಕೀರ್ಣದಲ್ಲಿ ಒಬ್ಬರಿಗೆ ಕಂಡು ಬಂದ್ರೆ ಇಡೀ ಬ್ಲಾಕ್‍ಗೆ ಗೃಹಬಂಧನ ಹಾಕಲಾಗುತ್ತದೆ. ಪಾಸಿಟಿವ್ ವ್ಯಕ್ತಿಯ ಮನೆ, ಅಪಾರ್ಟ್‍ಮೆಂಟ್ ರಸ್ತೆಯ ನೂರು ಮೀಟರ್‍ಗೆ ದಿಗ್ಭಂದನ ಹೇರಲಾಗುತ್ತದೆ. ಸ್ಲಂ ಆದ್ರೆ ಇಡೀ ಸ್ಲಂಗೆ ಗೃಹಬಂಧನ ಹಾಕಲಾಗುವುದು. ಹಳ್ಳಿಯಲ್ಲಿ ಕೊರೊನಾ ಸೋಂಕು ಕಂಡು ಬಂದ್ರೆ ಸೋಂಕಿತನ ವಾಸ ವ್ಯಾಪ್ತಿಯು ಕಂಪ್ಲೀಟ್ ಸೀಲ್‍ಡೌನ್ ಆಗಲಿದೆ.

    ಬಫರ್ ಝೋನ್:
    27 ದಿನಗಳಲ್ಲಿ ಹೊಸ ಪ್ರಕರಣ ವರದಿಯಾಗದೇ ಇದ್ದರೆ ಅಥವಾ ಈ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕ ವ್ಯಕ್ತಿಗಳು ಇದ್ದರೆ ಇದನ್ನು ಬಫರ್ ಝೋನ್ ಆಗಿ ಮಾರ್ಪಾಡು ಮಾಡಲಾಗುತ್ತದೆ. ನಗರ ಪ್ರದೇಶದ ಐದು ಕಿ.ಮೀ ವ್ಯಾಪ್ತಿ, ಗ್ರಾಮೀಣ ಭಾಗದ ಏಳು ಕಿ.ಮೀ ವ್ಯಾಪ್ತಿಗೆ ಕಣ್ಗಾವಲು ಇಡಲಾಗುತ್ತದೆ. ಈ ವ್ಯಾಪ್ತಿಯ ಪ್ರತಿ ಮನೆ ಮನೆಗೂ ತಪಾಸಣೆ ನಡೆಸಲಾಗುತ್ತದೆ.

    ವಲಯ: ಗುಂಪು ಗುಂಪಾಗಿ ಪ್ರಕರಣ ಕಂಡುಬಂದರೆ ಅದನ್ನು ವಲಯ ಅಂತ ವಿಭಾಗಿಸಿ ಕಣ್ಗಾವಲು ಇಡಲಾಗುತ್ತದೆ.

    ಬೆಂಗ್ಳೂರಿನಲ್ಲಿ ಸೀಲ್‍ಡೌನ್ ರೂಲ್ಸ್:
    ಕೊರೊನಾ ಸೋಂಕಿತರ ಸಂಖ್ಯೆ ರೆಡ್ ಝೋನ್‍ನಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಬೆಂಗಳೂರಿಗರ ಮೇಲೆ ಮೂರು ಕಣ್ಣು ಕಾಯಲಿದೆ. ಬಿಬಿಎಂಪಿಯಿಂದ ಬಿಕ್ಕಟ್ಟು ನಿರ್ವಹಣಾ ಟೀಂ, ಖಡಕ್ ಪೊಲೀಸರಿಂದ ಲಾಕ್‍ಡೌನ್ ಉಲ್ಲಂಘಿಸಿದರೆ ಮಾರಿ ಹಬ್ಬ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಹೈ ಅಲರ್ಟ್ ಆಗಲಿದ್ದಾರೆ. ಈ ಮೂಲಕ ಮೂರು ಟೀಂ ರಚಿಸಿ ಬೆಂಗಳೂರಿನ ಹಾಟ್‍ಸ್ಪಾಟ್ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ.

    ಬೆಂಗ್ಳೂರು ಹಾಟ್‍ಸ್ಪಾಟ್ ಸೀಲ್‍ಡೌನ್ ಹೇಗಿರುತ್ತೆ?
    ಬೆಂಗಳೂರಿಗರು ಊಹಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ದೇಶದಲ್ಲಿ ಎಲ್ಲೂ ಇರದ ಟಫ್ ರೂಲ್ಸ್ ಬೆಂಗಳೂರಲ್ಲಿ ಜಾರಿಗೆ ಬರಲಿದೆ. ನಿಯಂತ್ರಿತ ವಲಯದಲ್ಲಿ ಒಂದು ಪ್ರವೇಶ ದ್ವಾರ ಒಂದು ಎಕ್ಸಿಟ್ ಅಷ್ಟೇ ಇರಲಿದೆ. ಪ್ರತಿಯೊಂದು ಖಾಕಿ ಕಣ್ಣಲ್ಲಿ ರಿಜಿಸ್ಟಾರ್ ನೀಡಲಾಗುತ್ತದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ದಿನಸಿ, ಸಿಲಿಂಡರ್, ಔಷಧಿಗೆ ಮಾತ್ರ ಮನೆಯಿಂದ ಹೊರಗೆ ಬರಬಹುದು. ಬೇರೆ ವಾರ್ಡ್‍ನ ಖಾಸಗಿ ವಾಹನಕ್ಕೆ ಮತ್ತೊಂದು ವಾರ್ಡ್‍ನಲ್ಲಿ ಎಂಟ್ರಿ ಇರುವುದಿಲ್ಲ.

    ಪೊಲೀಸ್ ಪಾತ್ರ:
    ರಾಜ್ಯ ಸರ್ಕಾರವು ಬೆಂಗಳೂರನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಿದ್ದು, ಪೊಲೀಸ್ ನಾಕಾಬಂದಿ ಹಾಕಲಿದೆ. ಎಲ್ಲಾ ಪ್ರವೇಶ ದ್ವಾರಗಳಲ್ಲೂ ಶಾಶ್ವತವಾಗಿ ತಡೆಗೊಡೆ ಹಾಕಿ, ಪೊಲೀಸ್ ನಾಕಾಬಂದಿ ರೂಪಿಸಲಾಗುತ್ತದೆ. ಯಾವುದೇ ವ್ಯಕ್ತಿ ಯಾವುದೇ ಉದ್ದೇಶದಿಂದ ಮನೆಯಿಂದ ಹೊರಬರುವಂತಿಲ್ಲ. ನಿಯಂತ್ರಿತ ವಲಯದಲ್ಲಿ ಒಂದೇ ಒಂದು ನಿರ್ಗಮನ, ಪ್ರವೇಶದ್ವಾರ ಇಲಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರಿಂದ ಎಮರ್ಜೆನ್ಸಿ ಪಾಸ್ ನೀಡಲಾಗುತ್ತದೆ. ಸೀಲ್‍ಡೌನ್ ಏರಿಯಾದಲ್ಲಿ ಡ್ರೋಣ್ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ.

    ಆರೋಗ್ಯ ಇಲಾಖೆ:
    ಆರೋಗ್ಯ ಇಲಾಖೆ ಔಟ್-ಪೋಸ್ಟ್ ಆರಂಭಿಸಬೇಕು. ದಿನಕ್ಕೆ ಎರಡು ಬಾರಿ ಜನಸಂಪರ್ಕಗಳ ಪತ್ತೆ ಕಾರ್ಯ ನಡೆಸಬೇಕು. ಜನ ಸಂಪರ್ಕ ನಿಗಾ ಮತ್ತು ಪತ್ತೆ ಕಾರ್ಯವನ್ನ ಶಿಷ್ಟಾಚಾರದ ನಿಯಮದ ಪ್ರಕಾರ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

    ನಗರಸಭೆ ಅಧಿಕಾರಿಗಳು:
    ಸೀಲ್‍ಡೌನ್ ಪ್ರದೇಶದಲ್ಲಿ ಪ್ರತಿನಿತ್ಯ ಸೋಂಕು ನಿವಾರಣೆ ಸ್ಟ್ರೇ ಮಾಡಬೇಕು. ನಗರಸಭೆ ಅಧಿಕಾರಿಗಳು ಸಿಂಪಡಣೆ ಮಾಡಬೇಕು. ಸೀಲ್‍ಡೌನ್ ಏರಿಯಾದಲ್ಲಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರಬರಾಜು ಮಾಡಬೇಕು. ದಿನಸಿ ಪದಾರ್ಥ, ಮಾಂಸ, ಹಾಲು, ಎಲ್‍ಪಿಜಿ, ಅನಿಲ ಮತ್ತು ಔಷಧಿ ಮನೆ ಮನೆಗೆ ಸರಬರಾಜು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

  • ಹೊಸ ವಾಹನ ಖರೀದಿಸಬೇಕೆಂದರೆ ವಾಹನ ನಿಲುಗಡೆ ದೃಢೀಕರಣ ಪತ್ರ ಕಡ್ಡಾಯ

    ಹೊಸ ವಾಹನ ಖರೀದಿಸಬೇಕೆಂದರೆ ವಾಹನ ನಿಲುಗಡೆ ದೃಢೀಕರಣ ಪತ್ರ ಕಡ್ಡಾಯ

    ಬೆಂಗಳೂರು: ನಗರದಲ್ಲಿ ಹೊಸದಾಗಿ ವಾಹನ ಖರೀದಿಸಬೇಕು ಅಂದ್ರೆ ನಿಮ್ಮ ಮನೆ ಮುಂದೆ ವಾಹನ ನಿಲುಗಡೆಗೆ ಜಾಗ ಇರಲೇಬೇಕು. ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಹೀಗಂತ ಬೆಂಗಳೂರು ಮೆಟ್ರೋ ರೈಲು ನಿಗಮ, ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ಸಮಗ್ರ ಸಂಚಾರ ಯೋಜನೆಯ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.

    ಈಗಾಗಲೇ ವಾಹನ ಇರುವವರಿಗೆ ಜಾಗದ ಲಭ್ಯತೆಗೆ ಸಂಬಂಧಿಸಿದಂತೆ ದೃಢೀಕರಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯಲ್ಲಿ ಸಲ್ಲಿಸದಿದ್ದರೆ ದಂಡ ಪ್ರಯೋಗ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ಚರ್ಚೆಯಾಗಿದೆ. ಹೊಸ ವಾಹನಗಳ ನೊಂದಣಿಗೂ ಮುನ್ನ ಆ ವಾಹನ ನಿಲುಗಡೆಗೆ ಜಾಗದ ಲಭ್ಯತೆ ಬಗ್ಗೆ ಮಾಲೀಕರು ದೃಢೀಕರಿಸಬೇಕು. ಪ್ರಸ್ತುತ ಇರುವ ವಾಹನಗಳಿಗೆ ಈ ದೃಢೀಕರಣಕ್ಕೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದ್ದು, ಇದಕ್ಕೆ ಕೆಲ ವಾಹನದ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕಲ್ಯಾಣ ಮಂಟಪಗಳು, ದೊಡ್ಡ ರೆಸ್ಟೋರೆಂಟ್ ಗಳು, ಹೊಟೇಲ್, ಚಿತ್ರ ಮಂದಿರಗಳು ಸೇರಿದಂತೆ ಲೋಡ್ ಪಾರ್ಕಿಂಗ್ ಸೌಲಭ್ಯ ಹೊಂದಿರುವ ಬಗ್ಗೆಯೂ ದೃಢೀಕರಿಸಿಕೊಳ್ಳಬೇಕು ಎಂದು ಸಾರಿಗೆ ತಜ್ಞರು ಶಿಫಾರಸು ಮಾಡಿದ್ದಾರೆ. ಮೋಟಾರು ವಾಹನ ಕಾಯ್ದೆ ಮತ್ತು ಮಹಾನಗರ ಪಾಲಿಕೆ ಬೈಲಾ ಮೂಲಕ ಈ ನಿಯಮವನ್ನ ರೂಪಿಸಬೇಕು. ಕಟ್ಟಡ ನಿರ್ಮಿಸುವಾಗಲೂ ಈ ಬಗ್ಗೆ ಮಾಹಿತಿ ಇರಬೇಕು ಎಂದು ಚರ್ಚೆ ಮಾಡಲಾಗಿದೆ. ಇನ್ನೂ ಈ ಪ್ರಸ್ತಾವನೆ ಪಾಲಿಕೆಯ ಅಂಗಳಕ್ಕೆ ಬಂದಿಲ್ಲ. ಸದ್ಯದಲ್ಲಿಯೇ ಚರ್ಚೆಯ ಮುನ್ನಲೆಗೆ ಬಂದರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆಗಳಿವೆ.

  • ಇಂಡೋ-ವಿಂಡೀಸ್ ಸರಣಿಗೆ ನೋಬಾಲ್ ಗಮನಿಸಲಿದ್ದಾರೆ ಥರ್ಡ್ ಅಂಪೈರ್

    ಇಂಡೋ-ವಿಂಡೀಸ್ ಸರಣಿಗೆ ನೋಬಾಲ್ ಗಮನಿಸಲಿದ್ದಾರೆ ಥರ್ಡ್ ಅಂಪೈರ್

    ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ-20 ಮತ್ತು ಏಕದಿನ ಸರಣಿಗೆ ಮೂರನೇ ಅಂಪೈರ್ ನೋಬಾಲ್ ಗುರುತಿಸಲಿದ್ದಾರೆ.

    ಈ ಹಿಂದಿನಿಂದಲೂ ಕ್ರಿಕೆಟ್ ಪಂದ್ಯಗಳಲ್ಲಿ ನೋಬಾಲ್ ವಿಚಾರದಲ್ಲಿ ಗೊಂದಲಗಳು ಆಗುತ್ತಿವೆ. ಈ ಗೊಂದಲಗಳಿಗೆ ತೆರೆಎಳೆಯಲು ಐಸಿಸಿ ಪ್ರಯತ್ನ ಮಾಡುತ್ತಿದ್ದು, ಇನ್ನು ಮುಂದೆ ನೋಬಾಲ್ ಮಾಡಿದರೆ ಅದನ್ನು ಮೈದಾನದಲ್ಲಿರುವ ಆಂಪೈರ್ ಹೇಳುವುದಿಲ್ಲ. ಬದಲಾಗಿ ಅ ಪಂದ್ಯದಲ್ಲಿ ಮೂರನೇ ಆಂಪೈರ್ ಆಗಿ ಕಾರ್ಯನಿರ್ವಹಿಸುವವರು ನೋಬಾಲ್ ಎಂದು ತೀರ್ಮಾನ ಮಾಡಬೇಕು ಎಂದು ಐಸಿಸಿ ಹೇಳಿದೆ.

    ನಾಳೆಯಿಂದ ಹೈದರಾಬಾದ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ-20 ಪಂದ್ಯವನ್ನು ಆಡಲಿದ್ದು, ನಂತರ ಡಿಸೆಂಬರ್ 15 ರಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಪಂದ್ಯಗಳಲ್ಲಿ ಈ ಹೊಸ ನಿಯಮವನ್ನು ಪ್ರಯೋಗ ಮಾಡಿ ನೋಡಲು ಐಸಿಸಿ ತೀರ್ಮಾನ ಮಾಡಿದ್ದು ಈ ಪಂದ್ಯಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ಮಾಡಿದರೆ ಅದನ್ನು ಆನ್‍ಫೀಲ್ಡ್ ಆಂಪೈರ್ ಬದಲಿಗೆ ಮೂರನೇ ಆಂಪೈರ್ ನೀಡಲಿದ್ದಾರೆ.

    ಪಂದ್ಯಗಳಲ್ಲಿ ಬೌಲರ್ ನೋಬಾಲ್ ಎಸೆದರೆ ಅದನ್ನು ಮೂರನೇ ಆಂಪೈರ್ ನೋಡಿ ನಂತರ ಅವರ ಸಹಾಯದಿಂದ ಆನ್‍ಫೀಲ್ಡ್ ಆಂಪೈರ್ ನೋಬಾಲ್ ಎಂದು ಘೋಷಣೆ ಮಾಡಬೇಕು. ಮೂರನೇ ಆಂಪೈರ್ ನೋಬಾಲ್ ಎಂದು ಹೇಳದೆ ಇದ್ದರೆ ಆನ್‍ಫೀಲ್ಡ್ ಆಂಪೈರ್ ಅ ಎಸೆತವನ್ನು ನೋಬಾಲ್ ಎಂದು ಹೇಳುವಂತಿಲ್ಲ ಎಂದು ಇಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಒಂದು ವೇಳೆ ಮೂರನೇ ಆಂಪೈರ್ ಕಡೆಯಿಂದ ನೋಬಾಲ್ ನಿರ್ಧಾರ ತಡವಾಗಿ ಬಂದರೆ ಈ ಬಾಲ್ ಅಲ್ಲಿ ಬ್ಯಾಟ್ಸ್ ಮ್ಯಾನ್ ಔಟ್ ಆಗಿದ್ದರೆ ಆ ತೀರ್ಮಾವನ್ನು ಮೈದಾನದ ಆಂಪೈರ್ ವಾಪಸ್ ಪಡೆದು ಅದನ್ನು ನೋಬಾಲ್ ಎಂದು ಘೋಷಣೆ ಮಾಡಬಹುದು. ಇದನ್ನು ಬಿಟ್ಟರೆ ಉಳಿದ ಎಲ್ಲಾ ನಿಯಮಗಳ ಜವಾಬ್ದಾರಿಯನ್ನು ಆನ್‍ಫೀಲ್ಡ್ ಆಂಪೈರ್ ಎಂದಿನಂತೆ ನಿರ್ವಹಿಸುತ್ತಾರೆ ಎಂದು ಐಸಿಸಿ ತಿಳಿಸಿದೆ.

    ಈ ನಿಯಮವನ್ನು 2016 ರಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಏಕದಿನ ಸರಣಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈಗ ಕ್ರಿಕೆಟ್ ಸಮಿತಿಯೊಂದು ಈ ನಿಯಮವನ್ನು ಬಳಸುವುದು ಸೂಕ್ತ ಎಂದು ಶಿಫಾರಸು ಮಾಡಿದ ಕಾರಣ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ತೀರ್ಮಾನವನ್ನು ಮೂರನೇ ಆಂಪೈರ್ ತೆಗೆದುಕೊಳ್ಳಬೇಕು ಎಂದು ಐಸಿಸಿ ಹೊಸ ನಿಯಮ ಮಾಡಿತ್ತು. ಈ ನಿಯಮವನ್ನು ಇಂಡೋ-ವಿಂಡೀಸ್ ಸರಣಿಯಲ್ಲಿ ಮತ್ತೆ ಪ್ರಯೋಗ ಮಾಡಲು ಐಸಿಸಿ ತೀರ್ಮಾನಿಸಿದೆ.

    ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಅಲ್ಲದೇ ನೋಬಾಲ್ ಗಮನಿಸಲೆಂದೇ ಅಂಪೈರ್ ಇರಲಿದ್ದಾರೆ. ಈ ಸಂಬಂಧ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಕಲ್ಪನೆ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಈ ವಿಚಾರದ ಬಗ್ಗೆ ಮೊದಲ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನೋಬಾಲ್ ಗಮನಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈ ಅಂಪೈರ್ ಮೂರು ಅಥವಾ ನಾಲ್ಕನೇಯ ಅಂಪೈರ್ ಅಲ್ಲ ಎಂದು ಅಧಿಕಾರಿ ಈ ಹಿಂದೆ ತಿಳಿಸಿದ್ದರು.

    ಕಳೆದ ವರ್ಷದ ಐಪಿಎಲ್‍ನಲ್ಲಿ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ 17 ರನ್ ಬೇಕಿತ್ತು. ಕ್ರೀಸಿನಲ್ಲಿ ಎಬಿಡಿ ವಿಲಿಯರ್ಸ್ 68 (39 ಎಸೆತ) ರನ್ ಗಳಿಸಿದ್ದರೆ ಶಿವಂ ದುಬೆ 1 ರನ್ ಗಳಿಸಿದ್ದರು. ಮಾಲಿಂಗ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನು ದುಬೆ ಸಿಕ್ಸರ್‍ಗೆ ಅಟ್ಟಿದ್ದರು. ಒಟ್ಟು ಐದು ಎಸೆತಗಳಲ್ಲಿ 10 ರನ್ ಬಂದಿತ್ತು. ಕೊನೆಯ ಎಸೆತದಲ್ಲಿ ಜಯಗಳಿಸಲು 7 ರನ್ ಬೇಕಿತ್ತು. ಮಾಲಿಂಗ ಎಸೆದ ಕೊನೆಯ ಎಸೆತದಲ್ಲಿ ದುಬೆ ಬಲವಾಗಿ ಹೊಡೆದರೂ ಬಾಲ್ ಬ್ಯಾಟಿಗೆ ತಾಗದ ಕಾರಣ ಯಾವುದೇ ರನ್ ಬಂದಿರಲಿಲ್ಲ. ಆದರೆ ಟಿವಿ ರಿಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮುಂದಿನ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆದರೆ ಅಂಪೈರ್ ರವಿ ನೋಬಾಲ್ ನೀಡದ ಪರಿಣಾಮ ಮುಂಬೈ ತಂಡ 6 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

    ಈ ಪಂದ್ಯದ ಬಳಿಕ ಕೊಹ್ಲಿ ಮಾತನಾಡಿ, ನಾವು ಐಪಿಎಲ್ ಪಂದ್ಯ ಆಡುತ್ತಿದ್ದೇವೆ ಹೊರತು ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಅಂಪೈರ್ ಗಳು ಕಣ್ಣನ್ನು ತೆರೆದು ಗಮನಿಸುತ್ತಿರಬೇಕು. ಅಂಪೈರ್ ನೋಬಾಲ್ ನೀಡುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ನೋಬಾಲ್ ಮತ್ತು ಫ್ರೀ ಹಿಟ್ ನೀಡಿದ್ದರೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಅಂಪೈರ್ ನಿರ್ಲಕ್ಷ್ಯದಿಂದ ಎಲ್ಲ ಹಾಳಾಯಿತು. ಅಂಪೈರ್ ಗಳು ಮೈದಾನದಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.

    ಮೈದಾನ ಪ್ರವೇಶಿಸಿದ್ದ ಧೋನಿ:
    ರಾಜಸ್ಥಾನ ಮತ್ತು ಚೆನ್ನೈ ತಂಡದ ವೇಳೆಯೂ ಅಂಪೈರ್ ನೋಬಾಲ್ ನೀಡಿರಲಿಲ್ಲ. ಈ ವೇಳೆ ನಾಯಕ ಧೋನಿ ಮೈದಾನ ಪ್ರವೇಶಿಸಿ ಅಂಪೈರ್ ಜೊತೆ ಜಗಳವಾಡಿದ್ದರು. ಅಂಪೈರ್ ಎಡವಟ್ಟುಗಳಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಆಗದಂತೆ ತಡೆಯಲು ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.

  • ಸವಾರರೇ ಎಚ್ಚರ.. ವಾಹನ ದಾಖಲೆ ಇಟ್ಕೊಂಡು ಸಂಚರಿಸಿ -ಸೆ. 1ರಿಂದ ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡ

    ಸವಾರರೇ ಎಚ್ಚರ.. ವಾಹನ ದಾಖಲೆ ಇಟ್ಕೊಂಡು ಸಂಚರಿಸಿ -ಸೆ. 1ರಿಂದ ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡ

    ಬೆಂಗಳೂರು: ವಾಹನ ಸವಾರರು ಇನ್ಮುಂದೆ ಸಂಚಾರ ನಿಯಮವನ್ನು ಬ್ರೇಕ್ ಮಾಡಿದರೆ ಭಾರೀ ದಂಡ ಬೀಳುತ್ತದೆ. ಯಾಕಂದರೆ ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

    2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ. ಹೊಸ ಕಾನೂನಿನ ಪ್ರಕಾರ, ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ ವಿಧಿಸಲು ಅವಕಾಶ ಇದೆ. ಇದರಲ್ಲಿ ಮುಖ್ಯವಾಗಿ ದಂಡದ ಜೊತೆಗೆ ಪರವಾನಗಿ, ನೋಂದಣಿ, ರಾಷ್ಟ್ರೀಯ ಸಾರಿಗೆ ನೀತಿಗೆ ಸಂಬಂಧಿಸಿದ ನಿಯಮಗಳು ಮಾತ್ರ ಇರುತ್ತದೆ.

    ಆದ್ದರಿಂದ ವಾಹನ ದಾಖಲೆ ಇಲ್ಲದಿದ್ದರೆ ಸರಿ ಮಾಡಿಸಿ. ಡಿಎಲ್ ಮತ್ತು ಇನ್ಶೂರೆನ್ಸ್ ಇಲ್ಲ ಅಂದರೆ ಮಾಡಿಸಿಕೊಳ್ಳಿ. ಸೆಪ್ಟೆಂಬರ್ 1ರಿಂದ ರೂಲ್ಸ್ ಬ್ರೇಕ್ ಮಾಡಿದರೆ ದುಬಾರಿ ದಂಡ ಬೀಳುತ್ತದೆ.

    ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಭಾರೀ ದಂಡ ವಿಧಿಸುವಂತಹ ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು. 2017ರಲ್ಲೇ ಪರಿಚಯವಾಗಿದ್ದ ಈ ಮಸೂದೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಮತ್ತೆ ಮಂಡಿಸಿದ್ದರು. ಈ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಂದಿತ್ತು.

    2017ರಲ್ಲೇ ಪರಿಚಯಿಸಲಾಗಿದ್ದ ಈ ಮಸೂದೆ ಲೋಕಸಭೆಯಲ್ಲಿ ಜುಲೈ 23ರಂದೇ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು.

    ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್‍ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದರ ಜೊತೆಗೆ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಿದೆ.

  • ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪುವ ಸವಾರರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು “ನೋ ಹೆಲ್ಮೆಟ್ ನೋ ಪೆಟ್ರೋಲ್” ಎಂಬ ಬೆಂಗಳೂರು ಸಂಚಾರಿ ಪೊಲೀಸರ ಹೊಸ ನಿಯಮಕ್ಕೆ ದ್ವಿಚಕ್ರ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ನಿಯಮ ಒಳ್ಳೆಯದು. ಆದರೆ ಮೊದಲು ಪೊಲೀಸರು ಅವರು ಕೆಲಸವನ್ನು ಅವರು ಸರಿಯಾಗಿ ಮಾಡಲಿ. ಬಂಕ್ ಪಕ್ಕದಲ್ಲಿ ಮನೆ ಇದ್ದರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಹೊಸ ನಿಯಮ ನಾಳೆಯಿಂದ ಜಾರಿಯಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರವಾಗಿ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಸಂಚಾರಿ ಪೊಲೀಸರು ಇನ್ನೂ ಚರ್ಚಿಸಿಲ್ಲ ಎನ್ನಲಾಗಿದೆ. ಅದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರು ಈ ಹೊಸ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಾಲೀಕರು ಸೂಚನೆ ನೀಡದೇ ಇರುವ ಕಾರಣ ನಗರದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಇಲ್ಲದಿದ್ದರೂ ಪೆಟ್ರೋಲ್ ಹಾಕುವ ಸಾಧ್ಯತೆ ಹೆಚ್ಚಿದೆ.

    ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್ ಹೊಸ ನಿಯಮ ಜಾರಿ ಸಂಬಂಧ ಸಹಕಾರ ಕೋರಿ ಇಂಧನ ಕಂಪನಿಗಳ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರ ಕಡೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

    ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ.