Tag: ಹೊಳೆನರಸೀಪುರ

  • ಶಿಥಿಲಗೊಂಡ ಕಟ್ಟಡ- 10 ವರ್ಷವಾದ್ರೂ ರೇವಣ್ಣ ಕ್ಷೇತ್ರದ ಶಾಲೆಗಿಲ್ಲ ಕಟ್ಟಡ

    ಶಿಥಿಲಗೊಂಡ ಕಟ್ಟಡ- 10 ವರ್ಷವಾದ್ರೂ ರೇವಣ್ಣ ಕ್ಷೇತ್ರದ ಶಾಲೆಗಿಲ್ಲ ಕಟ್ಟಡ

    -ಶಾಲೆಯ ಮುಂಭಾಗವೇ ಮಕ್ಕಳಿಗೆ ಪಾಠ

    ಹಾಸನ: ಮಾಜಿ ಸಚಿವ, ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಬಿಂಬಿತರಾಗಿದ್ದ ಹೆಚ್.ಡಿ.ರೇವಣ್ಣ ಅವರ ಹೊಳೆನರಸೀಪುರ ಕ್ಷೇತ್ರದ ಉಣ್ಣೆನಹಳ್ಳಿಯ ಗ್ರಾಮದ ಮಕ್ಕಳಿಗೆ ಶಾಲಾ ಕಟ್ಟಡವೇ ಇಲ್ಲ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮುಂಭಾಗದಲ್ಲಿಯೇ ಮಕ್ಕಳು ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದಿದೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಇದೀಗ ಪುತ್ರ ರೇವಣ್ಣ ಪ್ರತಿನಿಧಿಸುತ್ತಿದ್ದಾರೆ. ಆದ್ರೂ ಉಣ್ಣೆನಹಳ್ಳಿಯ ಗ್ರಾಮಕ್ಕೆ ಶಾಲಾ ಕಟ್ಟಡ ಮಾತ್ರ ಅಭಿವೃದ್ಧಿಗೊಂಡಿಲ್ಲ. ಶಾಲಾ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಸಂಘದ ಕಚೇರಿಯನ್ನು ಮಕ್ಕಳಿಗೆ ನೀಡಿದ್ದರು. ಈಗ ಸಂಘದ ಸದಸ್ಯರು ಕಚೇರಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಇತ್ತ ಗ್ರಾಮಸ್ಥರು ಸಹ ಕಟ್ಟಡ ಬೀಳುವ ಹಂತದಲ್ಲಿ ಇರೋದರಿಂದ ಮುಂಜಾಗ್ರತ ಕ್ರಮವಾಗಿ ಶಾಲೆಗೆ ಬೀಗ ಹಾಕಿದ್ದಾರೆ. ಹೀಗಾಗಿ ಶಾಲೆಯ ಮುಂಭಾಗವೇ ಮಕ್ಕಳು ಪಾಠ ಕೇಳುವಂತಾಗಿದೆ.

    ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಒಟ್ಟು 20 ಮಕ್ಕಳಿದ್ದಾರೆ. ಕೊಠಡಿ ಇಲ್ಲದೇ ಬಯಲಿನಲ್ಲಿಯೇ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದಲೂ ಮಕ್ಕಳು ಬಯಲಿನಲ್ಲಿ ಶಾಲೆಯ ಕಟ್ಟಡದ ಮುಂಭಾಗದಲ್ಲಿ ಪಾಠ ಕೇಳುವಂತಾಗಿದೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

    ದೇವೇಗೌಡರು, ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಎಲ್ಲರೂ ಅಧಿಕಾರದಲ್ಲಿದ್ದರೂ ನಮ್ಮ ಶಾಲೆಗೆ ಕಟ್ಟಡವಿಲ್ಲ ಎಂಬುವುದು ದುರಂತ. ನಮ್ಮ ಗ್ರಾಮಕ್ಕೆ ಕಳೆದ 10 ವರ್ಷಗಳಿಂದಲೂ ಶಾಲೆಗೆ ಕಟ್ಟಡವಿಲ್ಲ. ಮಕ್ಕಳಿಗೆ ಆಡಲು ಸೂಕ್ತ ಮೈದಾನ ಇಲ್ಲದಂತಾಗಿದೆ. ಒಂದು ವೇಳೆ ಮಳೆ ಬಂದರು ಕಟ್ಟಡ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಹಾಸನ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಬಳಿ ನಡೆದಿದೆ.

    ಅಪಘಾತದಲ್ಲಿ ಸಿಗರನಹಳ್ಳಿ ನಿವಾಸಿಗಳಾದ 23 ವರ್ಷದ ಉಮೇಶ್ ಮತ್ತು 22 ವರ್ಷದ ಹರೀಶ್ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಹಾಸನದಿಂದ ತಮ್ಮ ಗ್ರಾಮಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ.

    ಡಿಕ್ಕಿಯಾದ ಕಾರು ಇದೇ ತಾಲೂಕಿನ ಹರದನಹಳ್ಳಿಯ ಗ್ರಾಮದ ಅನಿಲ್ ಎಂಬವರಿಗೆ ಸೇರಿದ್ದಾಗಿದೆ. ಈ ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಿಷಯ ತಿಳಿಯುತ್ತಿದ್ದ ಹಾಗೇ ಕಾರು ಮಾಲೀಕ ಅನಿಲ್ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನ ಬಿಜೆಪಿ ಚುನಾವಣಾ ಏಜೆಂಟ್ ವಿರುದ್ಧ ಎಫ್‍ಐಆರ್

    ಹಾಸನ ಬಿಜೆಪಿ ಚುನಾವಣಾ ಏಜೆಂಟ್ ವಿರುದ್ಧ ಎಫ್‍ಐಆರ್

    ಹಾಸನ: ಜಿಲ್ಲೆಯ ಹೊಳೆನರಸೀಪುರ ಪಡವಲಹಿಪ್ಪೆ ಗ್ರಾಮದಲ್ಲಿ ಅಕ್ರಮ ಮತದಾನ ನಡೆಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಈಗ ಹಿನ್ನಡೆಯಾಗಿದೆ.

    ಅಕ್ರಮ ಮತದಾನ ಕುರಿತು ಆಯೋಗಕ್ಕೆ ದೂರು ನೀಡಿದ್ದ ಮಾಯಣ್ಣ ಎಂಬವರ ಮೇಲೆ ಕೂಡ ಈಗ ಆಯೋಗ ಎಫ್‍ಐಆರ್ ಮಾಡಿದೆ. ಏ.18 ರಂದು ಪಡವಲಹಿಪ್ಪೆಯ ಮತಗಟ್ಟೆ ನಂಬರ್ 277ರಲ್ಲಿ ಮಾಜಿ ಪ್ರದಾನಿ ದೇವೇಗೌಡರು, ಸಚಿವ ಹೆಚ್.ಡಿ.ರೇವಣ್ಣ, ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರೆಲ್ಲ ಮತದಾನ ಮಾಡಿದ್ದರು. ಇವರ ಮತದಾನ ಮಾಡಿದ ನಂತರ ಭೂತ್‍ನಲ್ಲಿ ಅಕ್ರಮವಾಗಿ ಮತದಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯ ತಾಲೂಕು ಕಾರ್ಯಕರ್ತರಾದ ಮಾಯಣ್ಣ ಮತ್ತು ರಾಜು ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

    ದೂರು ಸ್ವೀಕರಿಸಿದ ಬಳಿಕ ಅಲ್ಲಿಯ ಸಿಸಿಟಿವಿಯ ದೃಶ್ಯಾವಳಿಗಳನ್ನು ಸಹ ಆಯೋಗ ಪರಿಶೀಲನೆ ಮಾಡಿತ್ತು. ಈ ಸಂದರ್ಭದಲ್ಲಿ ಮೂವರು ಮತಗಟ್ಟೆ ಅಧಿಕಾರಿಗಳನ್ನು ಸಹ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಅಮಾನತು ಮಾಡಿ ಆದೇಶಿಸಿದ್ದರು. ಇದೀಗ ಆಯೋಗಕ್ಕೆ ತಪ್ಪು ಮಾಹಿತಿ ಹಾಗೂ ಸಾರ್ವಜನಿಕೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದಡಿಯಲ್ಲಿ ಬಿಜೆಪಿ ಕಾರ್ಯಕರ್ತ ಮಾಯಣ್ಣ ವಿರುದ್ಧವು ಆಯೋಗ ಎಫ್‍ಐಆರ್ ದಾಖಲಿಸಿದೆ.

    ಇತ್ತ ತಮ್ಮ ವಿರುದ್ಧ ದೂರು ನೀಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ರೇವಣ್ಣ ಅವರು, ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಯಾವುದೇ ಕಳ್ಳ ಮತದಾನವನ್ನು ನಾನು ಹಾಕಿಸಿಲ್ಲ. ಅವತ್ತು ನಾನು ಮಾಧ್ಯಮಗಳ ಜೊತೆಯೇ ಇದ್ದೆ, ನಮ್ಮ ಕಾರ್ಯಕರ್ತ ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಆದರೆ ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಆಯೋಗದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚುನಾವಣೆ ನಡೆದ ದಿನವೇ ದೂರು ನೀಡುವ ಅವಕಾಶ ಇತ್ತು, ಅಂದು ದೂರು ಏಕೆ ನೀಡಲಿಲ್ಲ. ನಾನು ಕಳ್ಳ ಮತದಾನ ಮಾಡಿಸಿರುವ ವಿಡಿಯೋ ಇದ್ದರೆ ಕೊಡಲಿ. ಇದಕ್ಕೆ ಯಾವುದೇ ತನಿಖೆ ನಡೆಸಿದರು ಸಿದ್ಧ ಎಂದು ಸ್ಪಷ್ಟಪಡಿಸಿದರು.

  • ಹೊಳೆನರಸೀಪುರಕ್ಕೆ ಅನುದಾನದ ಹೊಳೆ – ರೇವಣ್ಣಗಾಗಿ ಉಳಿದ ಯೋಜನೆಗಳಿಗೆ ಕತ್ತರಿ!

    ಹೊಳೆನರಸೀಪುರಕ್ಕೆ ಅನುದಾನದ ಹೊಳೆ – ರೇವಣ್ಣಗಾಗಿ ಉಳಿದ ಯೋಜನೆಗಳಿಗೆ ಕತ್ತರಿ!

    ಬೆಂಗಳೂರು/ಹಾಸನ: ತಮ್ಮ ಕ್ಷೇತ್ರಕ್ಕೆ ಹಣದ ಹೊಳೆಯನ್ನೇ ಹರಿಸಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ಇರೋದು ಒಂದೇ ಕ್ಷೇತ್ರ, ಅದು ಹೊಳೆನರಸೀಪುರ ಎಂಬಂತಾಗಿದೆ.

    ಹೌದು. ಲೋಕೋಪಯೋಗಿ ಸಚಿವ ರೇವಣ್ಣ ಅವರು ಹೊಳೆನರಸೀಪುರದಲ್ಲಿ ವಾಣಿಜ್ಯ ಸಂಕೀರ್ಣ, ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಪಂಪ್ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ಮಾಡಿದ್ದಾರೆ. ಹೀಗಾಗಿ ಇದೀಗ ರೇವಣ್ಣ ಕ್ಷೇತ್ರ ಮಾತ್ರ ಉದ್ಧಾರ ಆದ್ರೆ ಸಾಕಾ..? ಬೇರೆ ಕ್ಷೇತ್ರಗಳಿಗೆ ಹೀಗೆನೇ ಅನುದಾನ ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

    ರೇವಣ್ಣ ಅವರ ಈ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳು, ಸಾಲಮನ್ನಾ, 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಹಿನ್ನೆಲೆಯಲ್ಲಿ ಹಣ ಹೊಂದಿಸಲು ತೊಂದರೆ ಆಗುತ್ತದೆ ಅಂತ ಹೇಳಿದ್ದಾರೆ. ಆದ್ರೆ ಅಧಿಕಾರಿಗಳ ಸಲಹೆಯನ್ನೂ ಮೀರಿ ರೇವಣ್ಣ ಕ್ಷೇತ್ರಕ್ಕೆ ಅನುದಾನ ಕೊಡುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯಾವುದೇ ಇಲಾಖೆಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅಧಿಕಾರಿಗಳು ಸಾಧಕ-ಬಾದಕಗಳನ್ನು ಚಿಂತಿಸಿ ನಂತರ ಹಣ ಬಿಡುಗಡೆಗೆ ಅನುಮತಿ ನೀಡುತ್ತಾರೆ. ಈ ಮಧ್ಯೆ ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವಂತಹ ಯೋಜನೆಗಳನ್ನು ಕ್ಲೀಯರ್ ಮಾಡಿಸಿಕೊಳ್ಳಲು ರೇವಣ್ಣ ಅವರು ಮುಂದಾಗುತ್ತಿದ್ದಾರೆ. ಹೀಗಾಗಿ ಪ್ರತೀ ಯೋಜನೆಗಳಿಗೆ ಹೊಳೆನರಸೀಪುರಕ್ಕೆ ಹಣ ಬಿಡುಗಡೆ ಮಾಡಿದ್ರೆ ಬೇರೆ ಬೇರೆ ಕ್ಷೇತ್ರದವರು ಕೇಳಿದ್ರೆ ಹೇಗೆ?. ಈಗಾಗಲೇ ಕ್ಷೇತ್ರದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಮಾಡಲು ಹಲವು ಯೋಜನೆಗಳಿಗೆ ಕತ್ತರಿ ಹಾಕುತ್ತಿದ್ದೇವೆ. ಈ ಮಧ್ಯೆ ರೇವಣ್ಣ ಅವರು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡಲೇಬೇಕು ಅಂತ ಪಟ್ಟು ಹಿಡಿಯುತ್ತಿದ್ದಾರೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ ರೇವಣ್ಣ!

    ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ ರೇವಣ್ಣ!

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಾಸ್ತು ನಂಬಿಕೆ ಅತಿಯಾಗಿ ಮುಂದುವರಿದಿದ್ದು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಆದರೆ ಅರ್ಚಕರು ಸಿಎಂ ಕುಮಾರಸ್ವಾಮಿ ದಂಪತಿಗೆ ಹೇಳಿದ್ದ ಪ್ರದಕ್ಷಿಣೆ ದಿಕ್ಕನ್ನು ಸಚಿವ ರೇವಣ್ಣ ವಾಸ್ತು ಪ್ರಕಾರ ದಿಕ್ಕು ಬದಲಾಗಬೇಕು ಎಂದು ಹೇಳಿದ್ದರು. ಬಳಿಕ ರೇವಣ್ಣ ಹೇಳಿದಂತೆಯೇ ಕುಮಾರಸ್ವಾಮಿ ದಂಪತಿ ಪ್ರದಕ್ಷಿಣೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಪೂಜೆ ಹೇಗೆ ಮಾಡಬೇಕು ಅಂತಾ ಅರ್ಚಕರಿಗೂ ಪೂಜೆ ಪಾಠ ಮಾಡಿದ್ದಾರೆ.

    ಈ ಮಧ್ಯೆ, ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಇತ್ತ ಕುಮಾರಸ್ವಾಮಿಯವರು ಅಗತ್ಯಬಿದ್ದರೆ ಪ್ರಜ್ವಲ್ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

    https://youtu.be/tsooli2UbGo

    ಈ ಹಿಂದೆಯೂ ಹಾಸನದ ಜಿಲ್ಲಾಸ್ಪತ್ರೆ ಸಮೀಪದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಶಂಕು ಸ್ಥಾಪನೆಗೆ ಸಚಿವ ರೇವಣ್ಣ ಆಗಮಿಸಿದ್ದರು. ಈ ವೇಳೆ ಪ್ರಾರಂಭವಾಗಿದ್ದ ಪೂಜೆ ತಡೆದು, ದಿಕ್ಕು ಬದಲಿಸುವಂತೆ ಅರ್ಚಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಸ್ತು ಪ್ರಕಾರ ನೀವು ಪೂಜೆ ಮಾಡುತ್ತಿಲ್ಲ ಎಂದು, ತಾವೇ ಮುಂದೆ ನಿಂತು ಪೂಜೆ ಮಾಡಿಸಲು ಮುಂದಾದ ಸಚಿವರು, “ರೀ ನೀರು ಮೊದಲು ಹಾಕಿ, ನೀವು ನಮ್ಮ ತಲೆ ಬಿಸಿ ಮಾಡಬೇಡಿ” ಎಂದು ಅರ್ಚಕ ರವಿ ಅವರ ವಿರುದ್ಧ ರೇಗಾಡಿದ್ದರು.

  • ಹೊಳೆನರಸೀಪುರ ಕಾಂಗ್ರೆಸ್‍ನಲ್ಲಿ ಬಂಡಾಯ-  ಸಿಎಂಗೇ ಸೆಡ್ಡು ಹೊಡೆದ್ರಾ ಅನುಪಮಾ?

    ಹೊಳೆನರಸೀಪುರ ಕಾಂಗ್ರೆಸ್‍ನಲ್ಲಿ ಬಂಡಾಯ- ಸಿಎಂಗೇ ಸೆಡ್ಡು ಹೊಡೆದ್ರಾ ಅನುಪಮಾ?

    ಹಾಸನ: ಜಿಲ್ಲೆಯ ಹೊಳೇನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಗೊಂದಲ ಮುಗಿದಂತೆ ಕಾಣುತ್ತಿಲ್ಲ. ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಮಹೇಶ್, ಕಾಂಗ್ರೆಸ್ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ವಿರುದ್ಧ ಬಂಡಾಯ ಸಾರಿದ್ದಾರೆ.

    ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಸಿಎಂಗೆ ಶಾಕ್ ಆಗಿದೆ. ಹೊಳೆನರಸೀಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೋ ಅನುಪಮಾ ಅವರು ಇದೀಗ ಮುಖ್ಯಮಂತ್ರಿಯವರಿಗೇ ಸೆಡ್ಡು ಹೊಡೆದಿದ್ದಾರೆ.

    ಅನುಪಮಾ ಮಹೇಶ್ ಕೂಡ ಇದೇ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದು, ಮನವಿ ಕೂಡ ಸಲ್ಲಿಸಿದ್ದಾರೆ. ಕಳೆದ 10 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ನಾನು ತೊಡಗಿಸಿಕೊಂಡಿದ್ದೆನೆ. 65 ಸಾವಿರ ಮತದಾರರು ನನ್ನ ಪರ ಮತ ಚಲಾಯಿಸಿದ್ದಾರೆ. ಮುಂದಿನ ನನ್ನ ನಿಲುವು ಕುರಿತು ಕಾರ್ಯಕರ್ತರು ಹೇಳಿದಂತೆ ನಾನು ಕೇಳುತ್ತೇನೆ. ಇದೇ ಕ್ಷೇತ್ರದ ಯಾರಿಗಾದ್ರೂ ಟಿಕೇಟ್ ನೀಡಲಿ ನಾನು ಕೂಡ ಪಕ್ಷಕ್ಕಾಗಿ ದುಡಿಯುತ್ತೇನೆ. ಆದ್ರೆ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ರೆ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು ಹೇಳಿಕೆ ನೀಡುವ ಮೂಲಕ ಬಂಡಾಯದ ಸೂಚನೆ ನೀಡಿದ್ದಾರೆ.

    ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಬಾಗೂರು ಮಂಜೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭ್ಯರ್ಥಿಯಾಗಿದ್ದು, ಇತ್ತೀಚೆಗೆ ವೈರಲ್ ಆಗಿದ್ದ ಮೊಬೈಲ್ ಸಂಭಾಷಣೆಯಲ್ಲಿ ಸಿಎಂ ಅವರು ಸ್ವತಃ ಹೊಳೇನರಸೀಪುರಕ್ಕೆ ಹೋಗುವಂತೆ ಹೇಳಿದ್ದರು.

  • ರಥೋತ್ಸವದಲ್ಲಿ ಸಿಲುಕಿದ ದೇವೇಗೌಡ್ರು – ಓಡಿಬಂದು ತಂದೆಯನ್ನು ಹೊರತಂದ ರೇವಣ್ಣ

    ರಥೋತ್ಸವದಲ್ಲಿ ಸಿಲುಕಿದ ದೇವೇಗೌಡ್ರು – ಓಡಿಬಂದು ತಂದೆಯನ್ನು ಹೊರತಂದ ರೇವಣ್ಣ

    ಹಾಸನ: ಹೊಳೆನರಸೀಪುರದಲ್ಲಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.

    ಹೆಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ ಹಾಗೂ ಶಾಸಕ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರ ಸೂರಜ್ ಉತ್ಸವ ಮೂರ್ತಿಗೆ ರಥದ ಮೇಲೆ ಪೂಜೆ ಸಲ್ಲಿಸಿದರು.

    ರಥ ಎಳೆಯುವ ಸಂದರ್ಭದಲ್ಲಿ ದೇವೇಗೌಡರು ಚಾಲನೆ ನೀಡಿದ ನಂತರ ಭಕ್ತರು ಏಕಾಏಕಿ ರಥವನ್ನು ಎಳೆದರು. ಹೀಗಾಗಿ ಭಕ್ತರ ನೂಕುನುಗ್ಗಲು ಉಂಟಾಗಿ 85 ವರ್ಷದ ದೇವೇಗೌಡರು ಮತ್ತು ಚನ್ನಮ್ಮ ಜನಸಂದಣಿಯಲ್ಲಿ ಸಿಲುಕಿಕೊಂಡಿದ್ರು.

    ಆಗ ಅಲ್ಲೇ ಇದ್ದ ಹಿರಿಯ ಮಗ ರೇವಣ್ಣ ಓಡಿಬಂದು ದೇವೇಗೌಡರ ಅಂಗರಕ್ಷಕರ ಸಹಾಯದಿಂದ ತಮ್ಮ ತಂದೆ-ತಾಯಿಯನ್ನು ನೂಕುನುಗ್ಗಲಿಂದ ಬಚಾವ್ ಮಾಡಿದ್ರು.

    ಆದ್ರೆ ನನಗೆ ಏನೂ ಆಗಿಲ್ಲ ಅಂತ ಗೊರೂರಲ್ಲಿ ದೇವೇಗೌಡರು ಸ್ಪಷ್ಟಪಡಿಸಿದ್ರು.

  • ವರನದ್ದು ಯಾವುದೇ ತಪ್ಪಿಲ್ಲ, ಹೊಳೆನರಸೀಪುರ ಮದ್ವೆ ರದ್ದಾಗಲು ಮಗಳೇ ಕಾರಣ: ಪೋಷಕರು

    ವರನದ್ದು ಯಾವುದೇ ತಪ್ಪಿಲ್ಲ, ಹೊಳೆನರಸೀಪುರ ಮದ್ವೆ ರದ್ದಾಗಲು ಮಗಳೇ ಕಾರಣ: ಪೋಷಕರು

    ಬೆಂಗಳೂರು: ಸತತ ಏಳು ವರ್ಷಗಳಿಂದ ಪ್ರೀತಿಸಿದ ಯುವಕನೊಬ್ಬ ಕೈ ಕೊಟ್ಟ ಹಿನ್ನೆಲೆಯಲ್ಲಿ ಭಾನುವಾರ ಹೊಳೆನರಸೀಪುರ ಪಟ್ಟಣದಲ್ಲಿ ನಡೆಯಬೇಕಿದ್ದ ಮದುವೆಯೊಂದು ಮುರಿದುಬಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಈ ಪ್ರಕರಣದಲ್ಲಿ ಸಂದೇಶ್‍ನದ್ದು ಯಾವುದೇ ತಪ್ಪಿಲ್ಲ. ತಪ್ಪು ಎಲ್ಲ ಮಗಳಾದ ಭುವನಳದ್ದೇ ಎಂದು ಆಕೆಯ ಪೋಷಕರಾದ ವೆಂಕಟೇಶ್ ಮತ್ತು ಶೀಲಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನಿಶ್ಚಿತಾರ್ಥ ನಡೆದ ಬಳಿಕ ಆಕೆ 50 ಲಕ್ಷ ರೂ. ಹಣ ಬೇಕು. ಅರ್ಧ ಕೆಜಿ ಚಿನ್ನ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆ ಶಾಕ್ ಆಗಿ ಸಂದೇಶ್ ಮದುವೆಯಾಗಲು ಹಿಂದೇಟು ಹಾಕಿದ್ದಾನೆ. ನಿಶ್ಚಿತಾರ್ಥಕ್ಕೂ ಮೊದಲು ಯಾವುದೇ ಬೇಡಿಕೆ ಇಟ್ಟಿಲ್ಲ. ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಈಗ ದಿಢೀರ್ ಬೇಡಿಕೆ ಇಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆ ಈಗ ಆತನ ಮೇಲೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ಹಾಕಿದ್ದಾಳೆ ಎಂದು ಭುವನಳ ತಾಯಿ ಶೀಲಾ ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಸಂದೇಶ್ ಅವರು ಕೆಲಸ ಮಾಡುತ್ತಿದ್ದ ಕಂಪೆನಿಯ ಸಹೋದ್ಯೋಗಿ ಸೃಷ್ಟಿ ಮಾತನಾಡಿ, ಕಳೆದ 15 ದಿನಗಳಿಂದ ಸಂದೇಶ ಆಫೀಸಿಗೆ ಬರುತ್ತಿಲ್ಲ. ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ವಿಚಾರ ಎಲ್ಲ ಸಹೋದ್ಯೋಗಿಗಳಿಗೆ ತಿಳಿಯಿತು. ಮದುವೆಗೆ ಒಪ್ಪಿಗೆ ನೀಡದ್ದಕ್ಕೆ ನಮ್ಮ ಕಚೇರಿಯ ಆಫೀಸಿನ ಗೋಡೆಗೆ ಭುವನಾ ಸಂದೇಶ್‍ಗೆ ಮುತ್ತು ನೀಡುತ್ತಿರುವ ಫೋಟೋವನ್ನು ಅಂಟಿಸಿ ಹೋಗಿದ್ದಾಳೆ. ನಮ್ಮ ಕಚೇರಿ ಅಲ್ಲದೇ ಹೊಳೆ ನರಸೀಪುರ ಪಟ್ಟಣದಲ್ಲಿರುವ ಅಂಗಡಿಗಳ ಮುಂದೆ ಫೋಟೋವನ್ನು ಪ್ರಕಟಿಸಿದ್ದಾಳೆ ಎಂದು ತಿಳಿಸಿದರು.

     

    ಸಂದೇಶ್ ಈಗಾಗಲೇ 20 ಲಕ್ಷ ರೂ. ಮೌಲ್ಯದ ನೆಕ್ಲೇಸ್ ನೀಡಿದ್ದು, ಚಿನ್ನವನ್ನು ಕೊಟ್ಟಿದ್ದಾರೆ. ಭುವನ ಮದುವೆಯ ಸಂದರ್ಭದಲ್ಲಿ ಕಾರನ್ನು ಗಿಫ್ಟ್ ನೀಡಬೇಕೆಂದು ಹಠ ಹಿಡಿದ ಹಿನ್ನೆಲೆಯಲ್ಲಿ 14 ಲಕ್ಷ ರೂ. ಮೌಲ್ಯದ ಕ್ರೇಟಾ ಕಾರನ್ನು ಬುಕ್ ಮಾಡಿದ್ದಾರೆ.ಅಷ್ಟೇ ಅಲ್ಲದೇ ಸಂದೇಶ್ ಭುವನಾಳಿಗಾಗಿ ಜೆಪಿ ನಗರದಲ್ಲಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು ಖರೀದಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ನನ್ನ ಎಲ್ಲ ಬೇಡಿಕೆ ಈಡರಿಸದೇ ಇದ್ದಲ್ಲಿ ಬೇರೆ ಹುಡುಗಿಯನ್ನು ಮದುವೆಯಾಗು. ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಭುವನ ಸಂದೇಶ್ ಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದಳು. ಮೆಸೇಜ್ ನೋಡಿ ಗಲಿಬಿಲಿಯಾಗಿ ಸಂದೇಶ್ ಭುವನಳ ಪೋಷಕರಿಗೆ ತಿಳಿಸಿ ನೋವನ್ನು ಹೇಳಿಕೊಂಡಿದ್ದಾರೆ. ಇದಾದ ಬಳಿಕ ಅವರೇ ಸಂದೇಶ್‍ಗೆ ಧೈರ್ಯ ತುಂಬಿದ್ದಾರೆ. ತನ್ನ ಮದುವೆಗೆ ಪೋಷಕರು ಸಹಕಾರ ನೀಡದ ಹಿನ್ನೆಲೆಯಲ್ಲಿ ಭುವನ ಬೆಂಗಳೂರಿನಲ್ಲಿ ಸಂದೇಶ್ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದು, ನವೆಂಬರ್ 25ರಂದು ಪ್ರಕರಣ ದಾಖಲಾಗಿದೆ. ಈ ಕೇಸ್ ಹಾಕಿದ ಬಳಿಕ ಭುವನ ಪೋಷಕರು ಈ ಪ್ರಕರಣವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂದೇಶ್ ಅವರಿಗೆ ಸಹಕಾರ ನೀಡುತ್ತಿದ್ದಾರೆ.

    ಭುವನ ಮಾಧ್ಯಮಗಳಿಗೆ ಹೇಳಿದ್ದು ಏನು?
    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಬೆಂಗಳೂರಿನಲ್ಲಿ ವಾಸವಾಗಿರುವ ಮೂಲತಃ ಹೊಳೆನರಸೀಪುರದ ಸಂದೇಶ್ ಶೆಟ್ಟಿ ಜೊತೆ ನನ್ನ ಮದುವೆ ನಡೆಯಬೇಕಿತ್ತು. ಏಳು ವರ್ಷಗಳ ಹಿಂದೆ ಬಸ್ ನಲ್ಲಿ ನನ್ನನ್ನು ಪರಿಚಯ ಮಾಡಿಕೊಂಡ ಸಂದೇಶ್ ನನ್ನನ್ನು ಪ್ರೀತಿಸುವ ನಾಟಕವಾಡಿದ್ದಾನೆ. ಅಲ್ಲದೇ ನನ್ನನ್ನು ಉಪಾಯದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪ್ರೀತಿಯ ವಿಚಾರ ಗೊತ್ತಾಗಿ ಸಂದೇಶ್ ಪೋಷಕರು ನನ್ನನ್ನು ಮದುವೆಯಾಗುವುದಕ್ಕೆ ವಿರೋಧಿಸಿದ್ದಾರೆ. ಹಲವು ದಿನಗಳಿಂದ ಸಂದೇಶ್ ಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಆತನ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಈ ಮಧ್ಯೆ ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಆಗಮಿಸಿದ ಸಂದೇಶ್ ಮತ್ತು ಪೋಷಕರು ಇಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ದಿನಾಂಕವನ್ನು ಗೊತ್ತುಪಡಿಸಿದ್ದರು. ಆದರೆ ಇಂದು ಏಕಾಏಕಿ ತನಗೆ ಮದುವೆ ಇಷ್ಟವಿಲ್ಲ ತಿಳಿಸಿರುವ ಸಂದೇಶ್ ನಾಪತ್ತೆಯಾಗಿದ್ದಾನೆ ಎಂದು ಭುವನ ಹಾಸನದಲ್ಲಿ ತಿಳಿಸಿದ್ದಳು.

  • ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನಿಂದನೆ ಖಂಡಿಸಿ ಇಂದು ಹೊಳೆನರಸೀಪುರ ಬಂದ್

    ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನಿಂದನೆ ಖಂಡಿಸಿ ಇಂದು ಹೊಳೆನರಸೀಪುರ ಬಂದ್

    ಹಾಸನ: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರನ್ನು ಅವಮಾನಿಸಿರೊದನ್ನು ವಿರೋಧಿಸಿ ಇಂದು ಹೊಳೇನರಸೀಪುರ ಬಂದ್ ಗೆ ಕರೆ ನೀಡಲಾಗಿದ್ದು, ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ತುರ್ತು ಸೇವೆಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂಜಾನೆಯಿಂದಲೇ ಪಟ್ಟಣದಲ್ಲಿ ಬಂದ್ ವಾತಾವರಣ ಕಂಡುಬಂದಿದೆ. ಜೆಡಿಎಸ್ ಪಕ್ಷ, ದೇವೇಗೌಡರ ಅಭಿಮಾನಿಗಳು, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

    ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ವಾಟ್ಸಪ್‍ಗಳಲ್ಲಿ ಮಾಜಿ ಪ್ರಧಾನಿಯನ್ನು ಅವಹೇಳನ ಮಾಡಿರೊದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಇದೀಗ ದೇವೇಗೌಡರ ಸ್ವಕ್ಷೇತ್ರ ಹೊಳೇನರಸೀಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ. 11ಗಂಟೆಗೆ ಪಟ್ಟಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.