Tag: ಹೊಳೆನರಸೀಪುರ

  • ಸೈಟ್ ವಿಚಾರಕ್ಕೆ ಗ್ರಾಮಪಂಚಾಯ್ತಿ ಸಿಬ್ಬಂದಿಯಿಂದ ಮಹಿಳೆಗೆ ಚಾಕು ಇರಿತ

    ಸೈಟ್ ವಿಚಾರಕ್ಕೆ ಗ್ರಾಮಪಂಚಾಯ್ತಿ ಸಿಬ್ಬಂದಿಯಿಂದ ಮಹಿಳೆಗೆ ಚಾಕು ಇರಿತ

    ಹಾಸನ: ನಿವೇಶನದ (Site) ವಿಚಾರಕ್ಕೆ ಮಹಿಳೆ ಮೇಲೆ ಗ್ರಾಮ ಪಂಚಾಯ್ತಿ (Gram Panchayat) ಕಂಪ್ಯೂಟರ್ ಆಪರೇಟರೊಬ್ಬ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹೊಳೆನರಸೀಪುರದ (Holenarasipura) ಕೋಡಿಹಳ್ಳಿಯಲ್ಲಿ ನಡೆದಿದೆ.

    ಚಾಕು ಇರಿತದಿಂದ ಗಾಯಗೊಂಡ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಅದೇ ಗ್ರಾಮದ ಮಲ್ಲೇಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದಾಗ ಆಗಾಗ ಬರುತ್ತಿದ್ದ ಯುವಕ- ಅನೈತಿಕ ಸಂಬಂಧ ಶಂಕೆಗೆ ಬಲಿ

    ಗ್ರಾಮದ ಬೋರೇಗೌಡ ಮತ್ತು ಮಲ್ಲೇಶ್ ಎಂಬವರ ನಡುವೆ ನಿವೇಶನ ವಿಚಾರಕ್ಕೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಲ್ಲದೆ ಆರು ತಿಂಗಳ ಹಿಂದೆ ಬೋರೇಗೌಡ ನ್ಯಾಯಾಲಯದ (Court) ಮೆಟ್ಟಿಲೇರಿದ್ದರು. ಬೋರೇಗೌಡರ ಪರವಾಗಿ ನ್ಯಾಯಾಲಯದಲ್ಲಿ ತೀರ್ಪು ಸಹ ಬಂದಿತ್ತು.

    ಶನಿವಾರ ಅಡಿಪಾಯ ತೆಗೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದಿದ್ದ ಮಲ್ಲೇಶ್ ಹಾಗೂ ಆತನ ಸ್ನೇಹಿತರು ಜಗಳ ಶುರು ಮಾಡಿದ್ದಾರೆ. ಅಲ್ಲದೆ ಏಕಾಏಕಿ ಬೋರೇಗೌಡನ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪತಿ ರಕ್ಷಣೆಗೆ ಪತ್ನಿ ಗೀತಾ ಅಡ್ಡ ಬಂದಿದ್ದಾರೆ. ಈ ವೇಳೆ ಆರೋಪಿ ಚಾಕುವಿನಿಂದ ಮಹಿಳೆಯ ಮುಖಕ್ಕೆ ಇರಿದಿದ್ದಾನೆ.

    ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

  • ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು –  ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ

    ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ

    ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಜೆಡಿಎಸ್, ಎರಡು ಬಿಜೆಪಿ (BJP) ಹಾಗೂ ಒಬ್ಬರು ಕಾಂಗ್ರೆಸ್ (Congress) ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

    ಶ್ರವಣಬೆಳಗೊಳ (Shravanabelagola) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಸಿ.ಎನ್.ಬಾಲಕೃಷ್ಣ 85,668 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ 79,023 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಈ ಮೂಲಕ ಬಾಲಕೃಷ್ಣ 6,645 ಮತಗಳ ಅಂತರದಲ್ಲಿ ವಿಜೇತರಾಗಿದ್ದಾರೆ. ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ 5ಕ್ಕೆ 5 ಗೆಲುವು

    ಅರಸೀಕೆರೆ (Arsikere) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ಅವರು 97,099 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ 77,006 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಈ ಮೂಲಕ 20,093 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ಗೆಲುವು ಸಾಧಿಸಿದ್ದಾರೆ.

    ಬೇಲೂರು (Belur) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್ ಅವರು 63,571 ಮತಗಳನ್ನು ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವರಾಂ ಅವರು 55,835 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಹೆಚ್.ಕೆ.ಸುರೇಶ್ ಅವರು 7,736 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

    ಹಾಸನ (Hassan) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರು 85,176 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು 77,322 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸ್ವರೂಪ್ ಅವರು 7,854 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಹೊಳೆನರಸೀಪುರ (Holenarasipur) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ರೇವಣ್ಣ 86,401 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಅವರು 83747 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಹೆಚ್.ಡಿ.ರೇವಣ್ಣ ಅವರು 2,654 ಮತಗಳನ್ನು ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಅರಕಲಗೂಡು (Arakalgud) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಅವರು 73,605 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಅವರು 54,160 ಮತಗಳನ್ನು ಪಡೆದು ಪೈಪೋಟಿ ನೀಡಿದ್ದಾರೆ. ಈ ಮೂಲಕ ಎ.ಮಂಜು ಅವರು 19,445 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

    ಸಕಲೇಶಪುರ (Sakaleshpur) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರು 58,604 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ಕುಮಾರಸ್ವಾಮಿ 56,548 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಿಮೆಂಟ್ ಮಂಜು ಅವರು 2056 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಅಖಾಡದಲ್ಲಿ ಅಪ್ಪ-ಮಕ್ಕಳು : ಗೆದ್ದೋರು ಯಾರು? ಸೋತವರು ಯಾರು?

  • ‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

    ‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

    ಹಾಸನ: ಹೇಮಾವತಿ ನದಿಯ ದಂಡೆಯಲ್ಲಿರುವ ಕ್ಷೇತ್ರ ಹೊಳೆನರಸೀಪುರ (Holenarasipura). ಈ ಕ್ಷೇತ್ರದ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ದೊಡ್ಡ ಗೌಡರ ಕುಟುಂಬ ಹಾಗೂ ಹೆಚ್‌.ಡಿ.ರೇವಣ್ಣ (H.D.Revanna). ಈ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣವೇ ಮುಖ್ಯ ವಿಷಯ ಆಗಿದೆ. 2023ರ ವಿಧಾನಸಭಾ ಚುನಾವಣೆಗೆ ರಣಕಣ ಸಿದ್ಧವಾಗಿದ್ದು, ಹೊಳೆನರಸೀಪುರ ಕ್ಷೇತ್ರದ ಚುನಾವಣೆಯೂ ಕುತೂಹಲ ಮೂಡಿಸಿದೆ.

    ಕಣದಲ್ಲಿ ಯಾರಿದ್ದಾರೆ?
    ದೇವೇಗೌಡರ ಪ್ರಾಬಲ್ಯವಿರುವ ಇಲ್ಲಿ 9 ಬಾರಿ ಜೆಡಿಎಸ್ ಗೆದ್ದಿದೆ (ಹಿಂದಿನ ಜನತಾ ಪಕ್ಷ ಸೇರಿ) ನಾಲ್ಕು ಬಾರಿ ಕಾಂಗ್ರೆಸ್, ಮೂರು ಬಾರಿ ಪಕ್ಷೇತರರು ಗೆದ್ದಿದ್ದಾರೆ. ಸತತ ಗೆಲುವಿನೊಂದಿಗೆ ಕ್ಷೇತ್ರವನ್ನು ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಹೆಚ್‌.ಡಿ.ರೇವಣ್ಣ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ ಶ್ರೇಯಸ್‌ ಪಟೇಲ್‌ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ದೇವರಾಜೇಗೌಡ ಅಖಾಡದಲ್ಲಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್

    ಅಭ್ಯರ್ಥಿಗಳ ಪ್ಲಸ್‌, ಮೈನಸ್?
    ಹೆಚ್.ಡಿ.ರೇವಣ್ಣ: ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಮಾಡಿದ್ದಾರೆ ಎಂಬ ವಿಷಯದ ಜೊತೆಗೆ ಬಿಗಿ ಹಿಡಿತ ರೇವಣ್ಣ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಪಾಯಿಂಟ್‌ ಅಂದ್ರೆ, ಕೆಲವರಷ್ಟನ್ನೇ ಹೊರತುಪಡಿಸಿ ಎಲ್ಲರನ್ನೂ ಸಮಾನವಾಗಿ ಕಾಣುವುದಿಲ್ಲ ಅನ್ನೋದು.

    ಶ್ರೇಯಸ್ ಪಟೇಲ್ ಮಾಜಿ ಪ್ರಧಾನಿ ದೇವೇಗೌಡರ ಕಟು ರಾಜಕೀಯ ವೈರಿ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಎಂಬ ಹೆಸರು ಇವರಿಗಿದೆ. ತಾಯಿ ಅನುಪಮಾ ಎರಡು ಬಾರಿ ಸೋತಿದ್ದರು. ಯುವ ಮುಖ ಮತ್ತು ಎಲ್ಲರೊಂದಿಗೂ ಬೆರೆಯವ ಗುಣ ಇರುವುದು ಶ್ರೇಯಸ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್ ಏನೆಂದರೆ, ಸಂಘಟನೆ ಕೊರತೆ, ಆರ್ಥಿಕ ಸಂಪನ್ಮೂಲ, ದೇವೇಗೌಡರ ಕುಟುಂಬ ರಾಜಕಾರಣ ಅಸ್ತ್ರವೊಂದನ್ನೇ ಮುಂದಿಟ್ಟು ಚುನಾವಣೆಗೆ ಹೋಗುತ್ತಿರುವುದಾಗಿದೆ. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ

    ದೇವರಾಜೇಗೌಡ: ವಕೀಲರು, ಸಂಸದ ಪ್ರಜ್ವಲ್ ರೇವಣ್ಣ ಅವರ ಸುಳ್ಳು ಅಫಿಡವಿಟ್ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಪಾಯಿಂಟ್‌ ಹೇಳೋದಾದರೆ, ಕ್ಷೇತ್ರದವರೇ ಆದರೂ ಹೊಸ ಮುಖ. ಸಂಘಟನೆ ಕೊರತೆ, ಮಾತಿನ ಮೇಲೆ ಹಿಡಿತ ಇಲ್ಲದೇ ಇರುವುದು.

    ಜಾತಿ ಲೆಕ್ಕಾಚಾರ ಏನು?
    ಈ ಕೇತ್ರದಲ್ಲಿ 93 ಸಾವಿರ ಮತದಾರರಿರುವ ಒಕ್ಕಲಿಗರೇ ನಿರ್ಣಾಯಕ ಆಗಲಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ 24 ಸಾವಿರ, ಕುರುಬ 21 ಸಾವಿರ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ 13 ಸಾವಿರ ಹೊರತು ಪಡಿಸಿ, ಉಳಿದ ಸಮುದಾಯಗಳ ಮತದಾರರು 10 ಸಾವಿರದಿಂದ 1 ಸಾವಿರ ಒಳಗಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 1,10,945 ಪುರುಷರು, 1,08,045 ಮಹಿಳೆಯರು ಹಾಗೂ ಇತರೆ 8 ಸೇರಿ ಒಟ್ಟು 2,18,969 ಮತದಾರರಿದ್ದಾರೆ. ಇದನ್ನೂ ಓದಿ: ಪ್ರೀತಂ ಗೌಡ ಹೇಳಿಕೆ ಖಂಡನೀಯ – ಸ್ವಪಕ್ಷದ ಶಾಸಕನ ವಿರುದ್ಧ ಅಶ್ವಥ್‌ ನಾರಾಯಣ್‌ ಗರಂ

  • ರೇವಣ್ಣ ಹೊಳೆನರಸೀಪುರದ ಮಹಾರಾಜ – ಶಾಸಕ ಪುಟ್ಟರಾಜು

    ರೇವಣ್ಣ ಹೊಳೆನರಸೀಪುರದ ಮಹಾರಾಜ – ಶಾಸಕ ಪುಟ್ಟರಾಜು

    ಮಂಡ್ಯ: ಹೆಚ್.ಡಿ.ರೇವಣ್ಣ (H.D.Revanna) ಹೊಳೆನರಸೀಪುರದ ಮಹಾರಾಜ. ಅವರು ಕೆ.ಆರ್.ಪೇಟೆ (K.R. Pet) ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ರೇವಣ್ಣ ಹೊಳೆನರಸೀಪುರದಲ್ಲೇ (Holenarasipura) ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಪುಟ್ಟರಾಜು (C.S.Puttaraju) ಹೇಳಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಹೆಚ್.ಡಿ.ರೇವಣ್ಣ ಕೆ.ಆರ್.ಪೇಟೆಗೆ ಬರುವ ಪ್ರಶ್ನೆನೇ ಇಲ್ಲ. ಅವರು ಹೊಳೆನರಸೀಪುರದ ಮಹಾರಾಜ. ಅಲ್ಲಿಯೇ ನಿಂತು ಹೆಚ್ಚು ಲೀಡ್‌ನಲ್ಲಿ ಗೆಲ್ಲುತ್ತಾರೆ. ಭವಾನಿ ರೇವಣ್ಣ ಅವರು ಹಾಸನಕ್ಕೆ ಆಕಾಂಕ್ಷಿತರಾಗಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಣ್ಣ, ರೇವಣ್ಣ ಅವರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಚಿಕನ್‌, ಗೀರೈಸ್‌ ತಿಂದು ಫುಡ್‌ ಪಾಯಿಸನ್‌ – ನರ್ಸಿಂಗ್‌ ಕಾಲೇಜಿನ 137 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

    ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣದ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕಾರಣದಲ್ಲಿ ಇಲ್ವಾ? ಯಡಿಯೂರಪ್ಪ ಅವರ ಮಗನಿಗೆ ಸೀಟ್‌ಗಾಗಿ ಹುನ್ನಾರ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಮಗನಿಗೆ ಸೀಟ್ ಕೊಟ್ವಿಲ್ವಾ ಎಂದು ಪ್ರಶ್ನಿಸಿದ್ದಾರೆ.

    ಯಾವ ಪಾರ್ಟಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ದೇವೇಗೌಡರ ನೇತೃತ್ವದಲ್ಲಿ ಅವರ ಕುಟುಂಬದ ಸದಸ್ಯರು ರಾಜ್ಯದಲ್ಲಿ ಕೆಲಸ ಮಾಡಿದ್ದಕ್ಕೆ ಪ್ರಾದೇಶಿಕ ಪಕ್ಷ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಚ್.ಡಿ.ರೇವಣ್ಣ ಶಾಸಕರಾಗಿರುವ ಕ್ಷೇತ್ರದಲ್ಲಿ ಯಾರಿಗೂ ವೈಯಕ್ತಿಕ ಸ್ವಾತಂತ್ರ್ಯ ಇಲ್ಲ: ಮಂಜೇಗೌಡ

    ಹೆಚ್.ಡಿ.ರೇವಣ್ಣ ಶಾಸಕರಾಗಿರುವ ಕ್ಷೇತ್ರದಲ್ಲಿ ಯಾರಿಗೂ ವೈಯಕ್ತಿಕ ಸ್ವಾತಂತ್ರ್ಯ ಇಲ್ಲ: ಮಂಜೇಗೌಡ

    -ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ

    ಹಾಸನ: ಜಿಲ್ಲೆಯ ಜನ ಜೆಡಿಎಸ್‍ನಿಂದ ಸ್ವಾತಂತ್ರ್ಯ ಪಡೆಯಬೇಕಿದ್ದು, ಅದರಲ್ಲೂ ಹೊಳೆನರಸೀಪುರ ಕ್ಷೇತ್ರದ ಜನರಿಗೆ ಹೆಚ್.ಡಿ ರೇವಣ್ಣ ಶಾಸಕರಾದ ಬಳಿಕ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಕಿಡಿಕಾರಿದ್ದಾರೆ.

    ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ, ಹೆಚ್‍ಡಿಕೆ ಹೇಳಿಕೆ ವಿರೋಧಿಸಿ, ನಾನು ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದರಿಂದ ಇದನ್ನು ಹೇಳುತ್ತಿದ್ದೇನೆ. ಅಲ್ಲಿಯ ಜನ ಹೆದರಿಕೊಂಡಿರೋದು ನಿಜ. ಈ ಹಿಂದೆ ಆ ಕ್ಷೇತ್ರದ ಸಚಿವರಾಗಿದ್ದ ಎಂಬಿ.ಪಾಟೀಲ್ ಬಳಿ ಹೋಗಿದ್ದೇವು. ರೇವಣ್ಣ ವಿರುದ್ಧ ಯಾರು ಮಾತನಾಡುತ್ತಾರೆ ಅವರ ಮೇಲೆ ರೌಡಿಶೀಟರ್ ಕೇಸ್ ಹಾಕಿಸುತ್ತಿದ್ದಾರೆ ಅದನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದೇವು. ಆಗ ಎಂಬಿ.ಪಾಟೀಲ್ ಎಸ್‍ಪಿಗೆ ಫೋನ್ ಮಾಡಿ ಆ ರೀತಿ ಮಾಡಬೇಡಿ ಎಂದಿದ್ದರು ಆದರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ – ಎಚ್‌ಡಿಕೆಯ ದ್ವಿಪತ್ನಿತ್ನ ವಿಚಾರ ಪ್ರಸ್ತಾಪಿಸಿ ಕಾಲೆಳೆದ ಬಿಜೆಪಿ

    Revanna
    ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ. ಇದನ್ನು ನಾನು ಅಭ್ಯರ್ಥಿಯಾಗಿದ್ದಾಗ ಅನುಭವಿಸಿದ್ದೇನೆ. ಸುಮಾರು 70 ಹಳ್ಳಿಗಳಲ್ಲಿ ಯಾವ ಪೊಲೀಸರು ಬರಲ್ಲ. ಈ ಬಗ್ಗೆ ಯಾವ ಎಲೆಕ್ಷನ್ ಕಮಿಟಿಗೆ ದೂರು ಕೊಟ್ಟರೂ ಏನು ಆಗಲ್ಲ. ಜೆಡಿಎಸ್ ಪಕ್ಷದವರು ಜನ ಯಾರಿಗೆ ವೋಟ್ ಹಾಕ್ತಾರೆ ಎಂದು ಬೂತ್ ಬಳಿ ನಿಂತು ನೋಡುತ್ತಾರೆ. ಹೀಗಾಗಿ ಜನ ತಮಗೆ ಬೇಕಾದವರಿಗೆ ವೋಟ್ ಹಾಕಲು ಹೆದರುತ್ತಾರೆ. ಈ ಪರಿಸ್ಥಿರಿ ಸರಿಯಾಗಬೇಕಾದರೆ ನಮ್ಮ ಕಾಂಗ್ರೆಸ್ ರಾಜ್ಯ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಾಗೂರು ಮಂಜೇಗೌಡ ಸೋಲನುಭವಿಸಿದ್ದರು. ಆ ಬಳಿಕ ಇದೀಗ ರೇವಣ್ಣ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

     

  • ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    – ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ

    ಹಾಸನ: ಒಂಟಿ ಮನೆಯೊಂದರಲ್ಲಿ ನಡೆಯುತ್ತಿದ್ದ ಹುಕ್ಕಾಬಾರ್ ಪಾರ್ಟಿ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು, ಏಳು ಮಂದಿ ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ, ಚನ್ನರಾಯಪಟ್ಟಣ ತಾಲೂಕು ಮೂಲದ ಎಚ್.ವಿ.ಸುಹಾಸ್ ನೇತೃತ್ವದಲ್ಲಿ ಹುಕ್ಕಾಬಾರ್ ನಡೆಯುತ್ತಿತ್ತು. ಸುಹಾಸ್ ಸೇರಿ ಆರು ಜನರ ಬಂಧನವಾಗಿದೆ. ಒಂಟಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಹುಕ್ಕಾಬಾರ್ ನಡೆಸುತ್ತಿದ್ದ ಸುಹಾಸ್ ತನ್ನದೇ ಗ್ರಾಹಕರನ್ನು ಹೊಂದಿದ್ದ ಎನ್ನಲಾಗಿದೆ.

    ಗ್ರಾಮೀಣ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬರುವುದಿಲ್ಲ ಎಂದು ಭಾವಿಸಿ ಪಾರ್ಟಿ ಮಾಡಿದ್ದಾರೆ. ಆದರೆ ಖಚಿತ ಮಾಹಿತಿ ಆಧರಿಸಿ ರಾತ್ರಿ ಮನೆ ಮೇಲೆ ದಾಳಿ ಮಾಡಿದ ಹೊಳೆನರಸೀಪುರ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ಸಿಪಿಐ ಆರ್.ಪಿ. ಅಶೋಕ್, ಪಿಎಸ್‍ಐ ಮೋಹನ್ ಕೃಷ್ಣ ತಂಡ ಕಾರ್ಯಾಚರಣೆ ನಡೆಸಿ ಹುಕ್ಕಾಬಾರ್ ಬಂದ್ ಮಾಡಿಸಿದೆ.

  • ಎದೆ, ಮರ್ಮಾಂಗಕ್ಕೆ ಹೊಡೆದು ಮಾಜಿ ಸೈನಿಕನ ಕೊಲೆ?

    ಎದೆ, ಮರ್ಮಾಂಗಕ್ಕೆ ಹೊಡೆದು ಮಾಜಿ ಸೈನಿಕನ ಕೊಲೆ?

    ಹಾಸನ: ಸಹೋದರನೇ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ.

    ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, 58 ವರ್ಷದ ಪುಟ್ಟಸ್ವಾಮಯ್ಯ ಮೃತ ದುರ್ದೈವಿಯಾಗಿದ್ದಾರೆ. ಪುಟ್ಟಸ್ವಾಮಯ್ಯ ಮಾಜಿ ಸೈನಿಕನಾಗಿದ್ದು, ಪುಟ್ಟಸ್ವಾಮಯ್ಯ ಅವರ ಸಹೋದರ ನರಸಿಂಹಯ್ಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಜಮೀನಿನ ವಿಷ್ಯವಾಗಿ ಪಂಚಾಯಿತಿ ನಡೆಸುವಾಗ ನರಸಿಂಹಯ್ಯ ಮತ್ತು ಅವರ ಕಡೆಯವರು ಎದೆಗೆ, ಮರ್ಮಾಂಗಕ್ಕೆ ಗುದ್ದಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಘಟನೆ ಸಂಬಂಧ ಮೃತ ಪುಟ್ಟಸ್ವಾಮಯ್ಯ ಅವರ ಮಕ್ಕಳು, ಹೊಳೆನರಸೀಪುರ ಸಿಟಿ ಪೊಲೀಸ್ ಠಾಣೆಯಲ್ಲಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.

  • ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

    ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

    ಹಾಸನ: ಹೇಮಾವತಿ ಅಣೆಕಟ್ಟೆ ತುಂಬುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಬಲದಂಡೆ ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲು ಆಗಮಿಸಿದ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ, ಬಲದಂಡೆ ನಾಲೆಗೆ ನೀರು ಹರಿಸುವುದು ಸೇರಿದಂತೆ ಹಲವು ವಿಷ್ಯಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಹಾಸನದಲ್ಲಿ ಪದೇ ಪದೇ ಚಾಕುಬಿರಿತದಂತ ಪ್ರಕರಣ ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್‍ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದರು.

    ನಿಮ್ಮ ಜೊತೆ ಸರ್ಕಾರ ಇರಲಿದೆ. ನಿರ್ಭಯವಾಗಿ ಕೆಲಸ ಮಾಡಿ. ರಾಜಕಾರಣಿಗಳು ಯಾರೂ ಒತ್ತಡ ಹಾಕುವ ಪ್ರಶ್ನೆ ಇಲ್ಲ. ಕಾನೂನು ಪ್ರಕಾರ ಏನು ಕೆಲಸ ಮಾಡಬೇಕೋ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಪಿಎಸ್‍ಐ ಆತ್ಮಹತ್ಯೆ ಪ್ರಕರಣ ಎಸ್‍ಪಿ ನೇತೃತ್ವದಲ್ಲಿ ತನಿಖೆಯಾಗುತ್ತಿದ್ದು, ತನಿಖೆ ನಂತರ ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

    ಬಿಜೆಪಿ ಕಾರ್ಯಕರ್ತರ ಜೊತೆ ಸಚಿವ ಚರ್ಚೆ:
    ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುವ ಮುನ್ನ ಸಚಿವ ಗೋಪಾಲಯ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇವಣ್ಣ ಸ್ವಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸಲು ಚರ್ಚೆ ನಡೆಸಲಾಯ್ತು ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಚಿವ ಗೋಪಾಲಯ್ಯ, ಮುಂದಿನ ವಾರ ಹೊಳೆನರಸೀಪುರದಲ್ಲಿ ಸಭೆ ಮಾಡಬೇಕು ಅಂತಿದ್ದಾರೆ. ಆಗಲೂ ಬರುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

    ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವನಾಗಿ ಬಂದಿದೇನೆ. ಅದರ ಜೊತೆಯಲ್ಲೇ ನಾನು ಎಲ್ಲಿಗೆ ಹೋದರೂ ಪಕ್ಷದ ಕಚೇರಿಗೆ ಹೋಗಿ ಅಲ್ಲಿಯ ಮುಖಂಡರ ಜೊತೆ ಭೇಟಿ ಮಾಡುತ್ತೇನೆ. ಅದೇ ರೀತಿ ಇಲ್ಲಿಯೂ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದೇನೆ. ಮುಂದಿನವಾರ ಹೊಳೆನರಸೀಪುರ, ಅರಕಲಗೂಡಿನಲ್ಲಿ ಪದಾದಿಕಾರಿಗಳ ಜೊತೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದ್ರು.

  • ಕೊರೊನಾ ನಿವಾರಣೆಗೆ ಹೊಳೆನರಸೀಪುರದ ಕೋಟೆ ಮಾರಮ್ಮನ ಮೊರೆ ಹೋದ ಭಕ್ತರು

    ಕೊರೊನಾ ನಿವಾರಣೆಗೆ ಹೊಳೆನರಸೀಪುರದ ಕೋಟೆ ಮಾರಮ್ಮನ ಮೊರೆ ಹೋದ ಭಕ್ತರು

    ಹಾಸನ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ದೇವರ ಮೊರೆಹೋಗಿ, ಲಲಿತ ಸಹಸ್ರನಾಮ ಹೋಮವನ್ನು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಳೆನರಸೀಪುರದ ಕೋಟೆ ಮಾರಮ್ಮ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

    ಕೋಟೆ ಮಾರಮ್ಮ ದೇವಾಲಯಕ್ಕೆ 400 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಹಿಂದೆ ದಡಾರ, ಪ್ಲೇಗ್ ಸೇರಿದಂತೆ ಹಲವು ಸಾಂಕ್ರಾಮಿಕ ರೋಗ ಹರಡಿದಾಗ ಈ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತಂತೆ. ಈ ನಂಬಿಕೆ ನೂರಾರು ವರ್ಷಗಳಿಂದ ನಡೆದು ಬಂದಿದ್ದು, ದೇವರಿಗೆ ಪೂಜೆ ಸಲ್ಲಿಸಿದಾಗಲೆಲ್ಲಾ ಒಳಿತಾಗಿದೆ ಎಂದು ಇಲ್ಲಿಯ ಜನ ನಂಬುತ್ತಾರೆ. ಈಗ ಎಲ್ಲೆಡೆ ಕೊರೊನಾ ಸೋಂಕು ಮಹಾಮಾರಿಯಾಗಿ ಕಾಡುತ್ತಿದೆ. ಈ ಹಿನ್ನೆಲೆ ಪೂರ್ವಜರಂತೆ ಭಕ್ತರು ಕೋಟೆ ಮಾರಮ್ಮ ದೇವರ ಮೊರೆ ಹೋಗುತ್ತಿದ್ದಾರೆ. ಕೊರೊನಾ ನಿವಾರಣೆಗೆ ಪೂಜೆ ಸಲ್ಲಿಸುತ್ತಿದ್ದಾರೆ.

    ಈಗಾಗಲೇ ರಾಜ್ಯಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ 11 ಮಂದಿಗೆ ತಗುಲಿದ್ದು, ಈಗಾಗಲೇ ಕಲಬುರಗಿಯಲ್ಲಿ ಓರ್ವ ವೃದ್ಧರನ್ನು ಬಲಿ ಪಡೆದಿದೆ. ಇತ್ತ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, 39 ಮಂದಿಗೆ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಈವರೆಗೆ ವಿಶ್ವದಾದ್ಯಂತ ಬರೋಬ್ಬರಿ 7,171 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 1,82,605 ಮಂದಿಗೆ ಕೊರೊನಾ ತಗುಲಿದೆ ಎಂದು ವರದಿಯಾಗಿದೆ.

  • ಜನಸಾಮಾನ್ಯರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಜನಸಾಮಾನ್ಯರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಜನಸಾಮಾನ್ಯರೊಂದಿಗೆ ಬೆರೆತು ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರನ್ನು ಸಂತೋಷ ಪಡಿಸಿದ್ದಾರೆ.

    ಸಾಮಾನ್ಯ ಜನರೊಂದಿಗೆ ಬೆರೆಯುವ ಮೂಲಕ ಸರ್ಕಾರಿ ಅಧಿಕಾರಿಗಳು ಕೂಡ ಸಾಮಾನ್ಯರಲ್ಲಿ ಬೆರೆಯಬೇಕು ಎನ್ನುವುದನ್ನು ತಹಶೀಲ್ದಾರ್ ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ. ಹೊಳೆನರಸೀಪುರ ದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರು. ಕನಕದಾಸರ ಭಾವಚಿತ್ರದ ಜೊತೆ ಪಟ್ಟಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ಬ್ಯಾಂಡ್ ಸೆಟ್‍ನೊಂದಿಗೆ ಮೆರವಣಿಗೆ ಸಾಗಿತ್ತು. ಯುವಕರ ತಂಡಗಳು ಡ್ಯಾನ್ಸ್ ಮಾಡುತ್ತಾ ಅದ್ಧೂರಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ರನ್ನು ಯುವಕರು ನೃತ್ಯಕ್ಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಶ್ರೀನಿವಾಸ್ ಎಲ್ಲರೊಂದಿಗೆ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ.