Tag: ಹೊಲ

  • ಬರೋಬ್ಬರಿ 50 ಕೆಜಿ ತೂಕದ ಹೆಬ್ಬಾವು ರಕ್ಷಣೆ – ಕಾಡಿಗೆ ಬಿಟ್ಟ ಸ್ನೇಕ್ ರಾಘವೇಂದ್ರ

    ಬರೋಬ್ಬರಿ 50 ಕೆಜಿ ತೂಕದ ಹೆಬ್ಬಾವು ರಕ್ಷಣೆ – ಕಾಡಿಗೆ ಬಿಟ್ಟ ಸ್ನೇಕ್ ರಾಘವೇಂದ್ರ

    ಕೊಪ್ಪಳ: ಜಿಲ್ಲೆಯ ಗಂಗಾವತಿಯ ದೇವಘಾಟ್ ಬಳಿ ರೈತನ ಹೊಲದಲ್ಲಿ ಕಾಣಿಸಿಕೊಂಡ ಬರೋಬ್ಬರಿ 50 ಕೆಜಿ ತೂಕದ ಹೆಬ್ಬಾವೊಂದನ್ನು ಸ್ನೇಕ್ ಪುಟ್ಟು ಅಲಿಯಾಸ್ ಸಿರಿಗೇರಿ ರಾಘವೇಂದ್ರ ರಕ್ಷಣೆ ಮಾಡಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    Snake

    ಗಂಗಾವತಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಂ ಅಭಿಷೇಕ್ ಎಂಬವರ ಹೊಲದಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಸ್ಥಳೀಯರೊಬ್ಬರು ಹಾವಿನ ಚಿತ್ರ ಸೆರೆ ಹಿಡಿದು ಸಿರಿಗೇರಿ ರಾಘವೇಂದ್ರ ಅವರಿಗೆ ಕಳುಹಿಸಿದ್ದರು.  ಇದನ್ನೂ ಓದಿ: ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    Snake

    ಕೂಡಲೇ ಸ್ಥಳಕ್ಕೆ ತೆರಳಿದ ಸ್ನೇಕ್ ಪುಟ್ಟು, ರೋಚಕ ಕಾರ್ಯಾಚರಣೆ ನಡೆಸಿ ಭತ್ತದ ಗದ್ದೆಯಲ್ಲಿ ನುಸುಳಿಕೊಂಡು ಹೋಗುತ್ತಿದ್ದ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ ಮತ್ತು ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ಸಂರಕ್ಷಿತ ಪ್ರದೇಶಕ್ಕೆ ಹಾವನ್ನು ಬಿಟ್ಟು ಬರಲಾಯಿತು.

    Snake

    ಸ್ನೇಕ್ ಪುಟ್ಟು ಅವರು ಈವರೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ. ಯಾರಿಂದಲೂ ಹಣ ಪಡೆಯದೇ ಕೇವಲ ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಇವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.  ಇದನ್ನೂ ಓದಿ: ಪ್ರತಿ ವಲಯದಲ್ಲೂ ಸಂಶೋಧನೆ ಅಭಿವೃದ್ಧಿಗೆ ಆದ್ಯತೆ: ಬೊಮ್ಮಾಯಿ

  • ಜಮೀನಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಕೆ- ಶಾಕ್‍ನಿಂದ ಮಹಿಳೆ, ಹಸು ಸ್ಥಳದಲ್ಲೇ ಸಾವು

    ಜಮೀನಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಕೆ- ಶಾಕ್‍ನಿಂದ ಮಹಿಳೆ, ಹಸು ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ದನಕರುಗಳು ಬರಬಾರದು ಎಂದು ಜಮೀನಿಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಶಾಕ್‍ನಿಂದ ಮಹಿಳೆ ಹಾಗೂ ಹಸು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು 56 ವರ್ಷದ ಶಾರದಮ್ಮ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕಳೆ ಕೀಳುತ್ತಿದ್ದ ಮೃತ ಶಾರದಮ್ಮ ಹಸುವನ್ನ ಜಮೀನಿನ ಒಂದು ಭಾಗದ ಬದುವಿನಲ್ಲಿ ಕಟ್ಟಿಹಾಕಿದ್ದರು. ಮೇಯುತ್ತಾ ಹೊರಟ ಹಸು ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದೆ. ಹಸು ಬಿದ್ದಿರುವುದನ್ನ ಗಮನಿಸಿದ ಶಾರದಮ್ಮ ಹಸು ಕರೆಂಟ್ ಶಾಕ್‍ನಿಂದ ಸತ್ತಿದೆ ಎಂದು ತಿಳಿಯದೆ ಏಕೆ ಎಂದು ನೋಡಲು ಹೋದಾಗ ಆಕೆ ಕೂಡ ತಂತಿ ಬೇಲಿಯನ್ನ ಹಿಡಿದುಕೊಂಡು ವಿದ್ಯುತ್ ಶಾಕ್‍ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬೆಳಗ್ಗೆಯಿಂದ ತುಂತುರು ಮಳೆ ಬರುತ್ತಿದ್ದು ನೆಲ ಕೂಡ ಹಸಿ ಇತ್ತು. ವಿದ್ಯುತ್ ತಂತಿ ಮುಟ್ಟಿದ ಕೂಡಲೇ ಶಾಕ್ ನಿಂದ ಶಾರದಮ್ಮ ಹಾಗೂ ಹಸು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನ ಗಮನಿಸಿದ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು, ಕೂಡಲೇ ಓಡಿ ಬಂದು ವಿದ್ಯುತ್ ಸಂಪರ್ಕ ತೆಗೆದಿದ್ದಾರೆ. ವಿದ್ಯುತ್ ತಂತಿಯನ್ನು ಹಿಡಿದಿದ್ದ ಶಾರದಮ್ಮಗೆ ಕೋಲಿನಿಂದ ತಳ್ಳಿದ್ದಾರೆ. ಆದರೆ ಅಷ್ಟರಲ್ಲಿ ಶಾರದಮ್ಮ ಹಾಗೂ ಹಸು ಸಾವನ್ನಪ್ಪಿದ್ದರು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

    ಮೃತ ಶಾರದಮ್ಮಗೆ 20 ವರ್ಷದ ಮಗನಿದ್ದಾನೆ. ಕಳೆದ ಏಳು ವರ್ಷದ ಹಿಂದೆ ಶಾರದಮ್ಮ ಪತಿ ಕೂಡ ಅಪಘಾತದಿಂದ ಸಾವನ್ನಪ್ಪಿದ್ದರು. ಇಂದು ತಾಯಿ ಕೂಡ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನನ್ನ ಕಳೆದುಕೊಂಡ ಮಗ ಅನಾಥನಾಗಿದ್ದಾನೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    ಲಕ್ನೋ: ಮನೆ ಸಮೀಪ ಆಟವಾಡುತ್ತಿದ್ದ 7 ವರ್ಷದ ಮಗುವನ್ನು ಅಪಹರಿಸಿ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾಶಿನಗರ್ ನಲ್ಲಿ ನಡೆದಿದೆ. ಘಟನೆ ನಂತರ ಬಾಲಕಿ ರಕ್ತ ಸ್ರಾವದಿಂದ ಹೊಲದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

    ಬಾಲಕಿ ಶುಕ್ರವಾರ ಸಂಜೆ ಕುಟುಂಬದವರೊಂದಿಗೆ ಮನೆಯ ಹೊರಗಡೆ ಕುಳಿತಿದ್ದಳು. ನಂತರ ಊಟ ಮಾಡಲು ಬಾಲಕಿ ಕುಟುಂಬಸ್ಥರು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಬಾಲಕಿ ಹೊರಗೆ ಆಟವಾಡುತ್ತಿದ್ದಳು. ಊಟ ಮುಗಿದ ನಂತರ ಮಗಳು ಕಾಣದೇ ಇರುವುದನ್ನು ಕಂಡ ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆ ಸಮೀಪದಲ್ಲಿರುವ ಹೊಲದಲ್ಲಿ ಬಾಲಕಿ ರಕ್ತಸ್ರಾವದಿಂದ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಬಾಲಕಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಗೋರಖ್ಪುರ್ ವೈದ್ಯಕೀಯ ಕಾಲೇಜಿನ ಆಸ್ಪತೆಗೆ ದಾಖಲಿಸಿದ್ದಾರೆ.

    ಇದೀಗ ಪೊಲೀಸರು ಘಟನೆ ಕುರಿತಂತೆ ಶನಿವಾರ ದೂರು ದಾಖಲಿಸಿಕೊಂಡಿದ್ದು, ಆದಷ್ಟು ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಬಾಲಕಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

  • ಯುವತಿಯನ್ನು ಗ್ಯಾಂಗ್‍ರೇಪ್ ಮಾಡಿ ಗುಪ್ತಾಂಗಕ್ಕೆ ಬಾಟ್ಲಿ ತುಂಬಿದ ಕಾಮುಕರು!

    ಯುವತಿಯನ್ನು ಗ್ಯಾಂಗ್‍ರೇಪ್ ಮಾಡಿ ಗುಪ್ತಾಂಗಕ್ಕೆ ಬಾಟ್ಲಿ ತುಂಬಿದ ಕಾಮುಕರು!

    – ಕಾಮತೃಷೆ ತೀರಿಸಿಕೊಂಡ ಬಳಿಕ ಬೆದರಿಕೆ ಹಾಕಿ ಪರಾರಿ

    ಜೈಪುರ: ಕಾಮುಕರ ತಂಡವೊಮದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಗುಪ್ತಾಂಗಕ್ಕೆ ಬಾಟ್ಲಿ ತುಂಬಿ ವಿಕೃತಿ ಮೆರೆದ ವಿಲಕ್ಷಣ ಘಟನೆಯೊಂದು ರಾಜಸ್ಥಾನದ ನಾಗೌರ್ ನಲ್ಲಿ ನಡೆದಿದೆ.

    ಜನವರಿ19ರಂದು 25 ವರ್ಷದ ಹೊಲಕ್ಕೆ ಕೆಲಸ ಮಾಡಲೆಂದು ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಮೂವರು ಕಾಮುಕರು ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ್ದಾರೆ. ನಂತರ ಆಕೆಯ ಗುಪ್ತಾಂಗಕ್ಕೆ ಬಾಟ್ಲಿ ತುಂಬಿ ವಿಕೃತಿ ಮೆರೆದಿದ್ದಾರೆ. ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಕಾಮುಕರು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾರೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಇತ್ತ ಘಟನೆಯೊಂದ ನೊಂದ ಯುವತಿ ಮನೆಗೆ ತೆರಳಿ ತನ್ನ ಮೇಲಾದ ಘಟನೆಯನ್ನು ಕುಟುಂಬಸ್ಥರಿಗೆ ವಿವರಿಸಿದ್ದಾಳೆ. ಕೂಡಲೇ ಹೆತ್ತವರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪಂಚುರಾಮ್ ಜಾಟ್, ಕನರಾಮ್ ಜಾಟ್ ಮತ್ತು ಶ್ರವಣ್ ಗುರ್ಜರ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ಮಂಗಳೂರು: ಹೊಲದಲ್ಲಿ ನಿಧಿ ಇದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಅಧಿಕಾರಿಗಳು ಬಂದು ಹುಡುಕಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ನಡೆದಿದೆ.

    ಬೆಳ್ತಂಗಡಿಯ ನಡ ಗ್ರಾಮದ ಪುಣಿತ್ತಡಿ ಎಂಬಲ್ಲಿನ ನಿವಾಸಿ ಆನಂದ ಶೆಟ್ಟಿಗೆ ಸೇರಿದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಯಿಸಿದ್ದ ವೇಳೆ ಭೂಮಿ ಕುಸಿದಿದ್ದು ಸುಮಾರು 10 ಅಡಿಯಷ್ಟು ಆಳದ ಗುಂಡಿಯಾಗಿತ್ತು. ಹೀಗಾಗಿ ಭೂಮಿಯೊಳಗೆ ನಿಧಿ ಇರುವ ಶಂಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದ್ದು, ಜನ ಸೇರಲಾರಂಭಿಸಿದರು.

    ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಹಿಟಾಚಿ ಮೂಲಕ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಗುಂಡಿ ತೆಗೆದು ಪರಿಶೀಲಿಸಿದ ಬಳಿಕ ಏನೂ ಸಿಗದೆ ಗುಂಡಿಗೆ ಮಣ್ಣು ಮುಚ್ಚಿ ಬರಿಗೈಯಲ್ಲೇ ವಾಪಸ್ ಹೋಗಿದ್ದಾರೆ. ಜನರ ವದಂತಿಯಿಂದ ಕೆಲಕಾಲ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.

  • ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್

    ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್

    ಚಾಮರಾಜನಗರ: ಕೊರೊನಾ ಸೋಂಕಿತೆಯ ಸಂಪರ್ಕದಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಜಮೀನಿನ ಗುಡಿಸಲಿನಲ್ಲೇ ಕ್ವಾರಂಟೈನ್ ಆಗಿರುವ ಸಂಗತಿ ಚಾಮರಾಜನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರ ಹುಂಡಿಯ ಮಹಿಳೆಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಇವರ ತೋಟದ ಮನೆಗೆ ಗಾರೆ ಕೆಲಸಕ್ಕೆಂದು ಗ್ರಾಮದ ಇಬ್ಬರು ಕೂಲಿ ಕಾರ್ಮಿಕರು ಹೋಗಿದ್ದರು. ಇದೇ ವೇಳೆ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಕುಟುಂಬದಿಂದ ದೂರವಿರಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಇಬ್ಬರು ಗಾರೆ ಕೆಲಸಗಾರರು ಹೊಲದ ಕಾವಲಿಗೆ ಹಾಕಲಾಗಿರುವ ಗುಡಿಸಲಿನಲ್ಲೇ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಇವರಿಬ್ಬರು ಗಾರೆ ಕಾರ್ಮಿಕರು ಸೋಂಕಿತ ಮಹಿಳೆಯ ನೇರ ಸಂಪರ್ಕಕ್ಕೆ ಬಂದಿಲ್ಲ. ಆದರೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿಯ ಜೊತೆ ಇವರು ಬೆರೆತಿದ್ದರು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಕಾರ್ಮಿಕರು ತಮ್ಮ ಶೇಂಗಾ ಹೊಲದಲ್ಲಿ ಕಾವಲು ಕಾಯಲು ಹಾಕಿರುವ ಗುಡಿಸಲಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವರ ಸಂಬಂಧಿಕರು ದೂರದಿಂದಲೇ ಇವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

    ಸೋಂಕಿತ ಮಹಿಳೆಗೆ ಸೇರಿದ ಹೊಲಕ್ಕೆ ಕೃಷಿ ಕೆಲಸಕ್ಕೆಂದು ಹೋಗಿದ್ದ ಇತರ ಮೂವರು ಮಹಿಳೆಯರು ಸಹ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಈ ಮೂವರು ಮಹಿಳೆಯರು ಸಹ ಒಂದೇ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ನಮ್ಮ ಗ್ರಾಮದಲ್ಲಿ ಕ್ವಾರಂಟೈನ್‍ಗೆ ಒಳಗಾಗಿರುವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಅವರ ಸಂಬಂಧಿಕರು ಆತಂಕದಿಂದಲೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಸೋಂಕಿತ ಮಹಿಳೆಯ ಪತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯರಾಗಿದ್ದು, ಗ್ರಾಮಸ್ಥರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಗ್ರಾಮಸ್ಥರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಇಬ್ಬರು ಗಾರೆ ಕೆಲಸಗಾರರು ಹಾಗೂ ಮೂವರು ಮಹಿಳಾ ಕಾರ್ಮಿಕರು ಕ್ವಾರಂಟೈನ್ ಆಗಿದ್ದರೆ, ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಕೆಯ ಪತಿ ಯಾವುದೇ ಮುಂಜಾಗ್ರತೆ ವಹಿಸಿದೆ ಊರ ತುಂಬೆಲ್ಲ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • ಗ್ರಾಮದಲ್ಲಿ ಕೊರೊನಾ ಸೋಂಕಿತ- ಹಳ್ಳಿ ಬಿಟ್ಟು ಜಮೀನು ಸೇರಿದ ಜನ

    ಗ್ರಾಮದಲ್ಲಿ ಕೊರೊನಾ ಸೋಂಕಿತ- ಹಳ್ಳಿ ಬಿಟ್ಟು ಜಮೀನು ಸೇರಿದ ಜನ

    – ಹೊಲಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸ
    – ಕೊರೊನಾಗೆ ಸೆಡ್ಡು ಹೊಡೆದ ಗ್ರಾಮಸ್ಥರು

    ಯಾದಗಿರಿ: ರಾಜಕಾರಣಿಗಳು ಬೇಕಾಬಿಟ್ಟಿಯಾಗಿ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಲಸಿಕೆ ಸಂಶೋಧನೆಯಾಗಿಲ್ಲ. ಹೀಗಿರುವಾಗ ಸಾಮಾಜಿಕ ಅಂತರವೇ ಮಹಾಮಾರಿ ತಡೆಗೆ ಆಯುಧವಾಗಿದೆ. ಇದನ್ನರಿತ ಗ್ರಾಮಸ್ಥರು ಕೊರೊನಾ ಬಂದ ಹಿನ್ನೆಲೆ ಹಳ್ಳಿ ಬಿಟ್ಟು ಜಮೀನು ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ಕೊರೊನಾಗೆ ಸದ್ಯ ಔಷಧಿ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ವಿರುದ್ಧ ಹೋರಾಡಬಹುದಾಗಿದೆ. ಈ ಕುರಿತು ಸರ್ಕಾರ ಸಹ ಸಾರಿ ಸಾರಿ ಹೇಳುತ್ತಿದೆ. ಆದರೆ ಸುಕ್ಷಿತರೂ ಸೇರಿದಂತೆ ಹಲವರು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಚಂದಾಪುರತಾಂಡಾದ 40ಕ್ಕೂ ಅಧಿಕ ಕುಟುಂಬಗಳು ತಮ್ಮ ಗ್ರಾಮವನ್ನು ತೊರೆದು, ಕಳೆದ ಒಂದು ತಿಂಗಳಿನಿಂದ ಹೊಲಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ಕುಟುಂಬ ಸಮೇತರಾಗಿ ಅಲ್ಲೇ ವಾಸಿಸುತ್ತಿದ್ದಾರೆ.

    ಈ ತಾಂಡದ ವ್ಯಕ್ತಿಗೆ ಮೇ 17 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ಗ್ರಾಮದಲ್ಲಿ ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಉಂಟಾಗಿತ್ತು. ಸ್ಥಳೀಯ ಗ್ರಾ.ಪಂ.ಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿತ್ತು. ಇದರಿಂದ ಜಾಗೃತಗೊಂಡ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು, ಜೀವನ ಸಾಗಿಸುತ್ತಿವೆ.

    ಶೆಡ್ ನಲ್ಲಿಯೂ ಮಾಸ್ಕ್ ಧರಿಸುತ್ತಿರುವ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ. ಸದ್ಯ ಪಾಸಿಟಿವ್ ಬಂದಿದ್ದ ಈ ಗ್ರಾಮದ ವ್ಯಕ್ತಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಜಿಲ್ಲಾಡಳಿತ ಸಹ ತಮ್ಮ ಮನೆಗಳಿಗೆ ತೆರಳುವಂತೆ ಈ ಕುಟುಂಬಗಳಿಗೆ ಸೂಚನೆ ನೀಡಿದೆ. ಆದರೆ ಈ ಕುಟುಂಬಗಳು ಕೊರೊನಾ ಕಡಿಮೆಯಾಗುವವರಿಗೂ ಜಮೀನಲ್ಲಿಯೇ ವಾಸ ಮಾಡಲು ನಿರ್ಧರಿಸಿವೆ.

    ಸ್ಯಾಂಪಲ್ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಯಾದಗಿರಿ ಪ್ರಥಮ ಸ್ಥಾನ
    ಕೊರೊನಾ ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಯಲ್ಲಿ ಯಾದಗಿರಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಯಾದಗಿರಿ ಜಿಲ್ಲಾಡಳಿತ ಕೆಲವು ದಿಟ್ಟ ನಿರ್ಧಾರ ಕೈಗೊಂಡಿತ್ತು. ಇದರ ಪರಿಣಾಮ ಕಳೆದ 10 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಯಾದಗಿರಿಯಲ್ಲಿ ಅತಿ ಹೆಚ್ಚು ಕೊವಿಡ್ 19 ಟೆಸ್ಟ್ ಆಗಿದೆ. 10 ದಿನದ ಅವಧಿಯಲ್ಲಿ 7,297 ಜನರಿಂದ ಸ್ಯಾಂಪಲ್ ಸಂಗ್ರಹಣೆ ಮಾಡಲಾಗಿದೆ. ಈವರೆಗೆ ಬರೋಬ್ಬರಿ 21,100 ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ ನಡೆದಿದ್ದು, ಇದರಲ್ಲಿ 19,500 ನೆಗಟಿವ್ ಮತ್ತು 828 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಈ ವರೆಗೆ 18,000ಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿದ್ದು, ಇನ್ನೂ 150 ಜನರ ವರದಿ ಬಾಕಿಯಿದೆ.

    ಸೋಂಕು ಹರಡುವದನ್ನು ತಟೆಗಟ್ಟಲು ಜಿಲ್ಲೆಯಲ್ಲಿ ಫೋರ್ ಪ್ರಿನ್ಸಿಪಲ್ಸ್ ಆಫ್ ‘ಟಿ’ ಅಳವಡಿಕೆ ಮಾಡಲಾಗಿತ್ತು. ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ ಗೆ ಮಹತ್ವದ ಆಧ್ಯತೆ ನೀಡಲಾಗಿದೆ. ಪರಿಣಾಮ ಯಾದಗಿರಿ ಪ್ರಥಯ ಸ್ಥಾನ ಬಳಿಕ ಕಲಬುರಗಿ (4843) ಉಡುಪಿ(4219) ವಿಜಯಪುರ(3891) ಸ್ಥಾನ ಪಡೆದಿವೆ. ಅತಿ ಹೆಚ್ಚು ಟೆಸ್ಟಿಂಗ್ ನೊಂದಿಗೆ ಯಾದಗಿರಿ ಅಗ್ರಸ್ಥಾನದಲ್ಲಿದೆ.

  • ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ತು 2 ಮಡಿಕೆ ಚಿನ್ನ, ಬೆಳ್ಳಿ

    ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ತು 2 ಮಡಿಕೆ ಚಿನ್ನ, ಬೆಳ್ಳಿ

    ಹೈದರಾಬಾದ್: ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಎರಡು ಮಡಿಕೆ ಚಿನ್ನದ ಮತ್ತು ಬೆಳ್ಳಿ ಸರ ತುಂಬಿರುವ ನಿಧಿ ಸಿಕ್ಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಈ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸುಲ್ತಾನ್ ಪುರದ ರೈತ ಮೊಹಮ್ಮದ್ ಸಿದ್ದಿಕ್ಕಿಗೆ ಈ ಚಿನ್ನ ಬೆಳ್ಳಿ ತುಂಬಿದ ಪಾತ್ರೆ ಸಿಕ್ಕಿದೆ. ಸಿದ್ದಿಕ್ಕಿ ಎರಡು ವರ್ಷದ ಹಿಂದೆ ಈ ಜಮೀನನ್ನು ಖರೀದಿ ಮಾಡಿದ್ದರು. ಆದರೆ ಇಂದು ಉಳುಮೆ ಮಾಡುವಾಗ ಮಡಿಕೆ ಸಿಕ್ಕಿದ್ದು, ಅದರಲ್ಲಿ 25 ಬಗೆಯ ಚಿನ್ನದ ಸರಗಳು ಸಿಕ್ಕಿವೆ.

    ಮಾನ್ಸೂನ್ ಆರಂಭವಾದ ಕಾರಣ ರೈತರು ಉಳುಮೆ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ಸಿದ್ದಿಕ್ಕಿಗೆ ಮಡಿಕೆಗಳು ಸಿಕ್ಕಿವೆ ನಂತರ ಅವುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ಮತ್ತು ಬೆಳ್ಳಿಯ ಸರ ಇರುವುದು ಪತ್ತೆಯಾಗಿದೆ. ತಕ್ಷಣ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು ಸಿಕ್ಕ ಒಡೆವೆಗಳನ್ನು ಪರಿಶೀಲನೆ ಮಾಡಿ ಲ್ಯಾಬ್‍ಗೆ ಕಳುಹಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಕಂದಾಯ ಇಲಾಖೆ ಅಧಿಕಾರಿ ವಿದ್ಯಾಸಾಗರ್ ರೆಡ್ಡಿ, ಚಿನ್ನ ಬೆಳ್ಳಿ ಸಿಕ್ಕ ಈ ಜಾಗದ ಬಗ್ಗೆ ಪರಿಶೀಲನೆ ಮಾಡಿ ನೋಡಿದ್ದೇವೆ. ಆದರೆ ಈ ಜಾಗಕ್ಕೆ ಯಾವುದೇ ರೀತಿಯ ರಾಜಮನೆತನದ ಇತಿಹಾಸವಿಲ್ಲ. ಹೀಗಾಗಿ ನಾವು ಈ ವಿಚಾರವನ್ನು ಪುರಾತತ್ವ ಇಲಾಖೆಗೆ ತಿಳಿಸಿದ್ದೇವೆ. ಜೊತೆಗೆ ಸಿಕ್ಕ ಒಡವೆ ನಕಲಿಯೋ ಅಸಲಿಯೋ ಎಂದು ತಿಳಿಯಲು ಲ್ಯಾಬ್‍ಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಚೆನ್ನೈ: ಕೊರೊನಾ ಲಾಕ್‍ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಆದರೆ ತಮಿಳು ನಟಿಯೊಬ್ಬರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡೋದ್ರಲಿ ಬ್ಯುಸಿಯಾಗಿದ್ದಾರೆ.

    ತಮಿಳು ನಟಿ ಕೀರ್ತಿ ಪಾಂಡಿಯನ್ ಟ್ರ್ಯಾಕ್ಟರ್ ಓಡಿಸುತ್ತಾ ಹೊಲ ಉಳುಮೆ ಮಾಡುತ್ತಾ ತಮ್ಮ ಲಾಕ್‍ಡೌನ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಾ ಲಾಕ್‍ಡೌನ್ ಸಮಯ ಕಳೆಯುತ್ತಿರುವ ನಟಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೃಷಿಯನ್ನು ಪ್ರಾರಂಭಿಸಿದ್ದೇನೆ ಎಂದು ಕ್ಯಾಪ್ಷನ್ ಜೊತೆಗೆ ಕ್ವಾರಂಟೈನ್, ಫಾರ್‍ಮಿಂಗ್ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

    ಮಲಯಾಳಂನಿಂದ ತಮಿಳಿಗೆ ರಿಮೇಕ್ ಆಗುತ್ತಿರುವ ಹೆಲನ್ ಸಿನಿಮಾದಲ್ಲಿ ಕೀರ್ತಿ ಪಾಂಡಿಯನ್ ಸದ್ಯ ನಟಿಸುತ್ತಿದ್ದಾರೆ. ಕೀರ್ತಿ ತಂದೆ ಅರುಣ್ ಪಾಂಡಿಯನ್ ಕೂಡ ನಟರಾಗಿದ್ದು, ಸಾಕಷ್ಟು ತಮಿಳಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

    ಕೀರ್ತಿ ಅವರು ಪಕ್ಕಾ ಹಳ್ಳಿ ಹುಡುಗಿಯಂತೆ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಕೀರ್ತಿ ಅವರ ಹಳ್ಳಿ ಹುಡುಗಿ ಅವತಾರಕ್ಕೆ ಮನಸೋತಿದ್ದಾರೆ.

    https://www.instagram.com/p/B_FS5CTnDDg/

  • ಹೊಲದಲ್ಲಿ ಅವಿತು ಕುಳಿತ ಹುಲಿ- ಭಯಭೀತರಾದ ಗ್ರಾಮಸ್ಥರು

    ಹೊಲದಲ್ಲಿ ಅವಿತು ಕುಳಿತ ಹುಲಿ- ಭಯಭೀತರಾದ ಗ್ರಾಮಸ್ಥರು

    – ಅರಣ್ಯಾಧಿಕಾರಿಗಳಿಂದ ಬಿಗಿ ಭದ್ರತೆ

    ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಹತ್ತಿರ ಇರುವ ಹೊಲವೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಬೆಂಡಲಗಟ್ಟಿ ಗ್ರಾಮದ ವಿಶ್ವನಾಥ ವೈದ್ಯ ಎಂಬವರ ಗೋವಿನ ಜೋಳದಲ್ಲಿ ಹುಲಿ ಅವಿತುಕೊಂಡು ಕುಳಿತಿದ್ದು, ಹುಲಿ ಗ್ರಾಮದ ಒಳಗೆ ಹೋಗದಂತೆ ಸುತ್ತಲೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

    ದಾಂಡೇಲಿ ಕಾಳಿ ಅರಣ್ಯ ಪ್ರದೇಶದಿಂದ ಹುಲಿ ಬಂದಿರುವುದಾಗಿ ತಿಳಿದುಬಂದಿದ್ದು ಹುಲಿ ಗೋವಿನ ಜೋಳದ ಹೊಲದಲ್ಲಿ ಇರುವುದನ್ನ ಡ್ರೋಣ್ ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದು ಈಗಾಗಲೇ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

    ಹುಲಿ ಗ್ರಾಮಕ್ಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗೃತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಧಾರವಾಡ ವಲಯ ಸಂರಕ್ಷಣಾಧಿಕಾರಿ ಬಸವರಾಜ ಇಳಿಗೆರ್ ತಾಲೂಕಿನ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದಾರೆ.