Tag: ಹೈ ಕೋರ್ಟ್

  • ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಶಿಲ್ಲಾಂಗ್: ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರ ಎಂದು ಕರೆದುಕೊಂಡಿದೆ. ಆದರೆ ಭಾರತ ಮಾತ್ರ ಜ್ಯಾತ್ಯಾತೀತ ರಾಷ್ಟ್ರ ಎಂದು ಕರೆದುಕೊಳ್ಳುತ್ತಿದೆ. ಆದರೆ ಭಾರತವನ್ನ ಹಿಂದೂ ರಾಷ್ಟ್ರ ಎಂದು ಕರೆಯಬೇಕೆಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.

    ರಾಣಾ ಎಂಬುವವರಿಗೆ ರಾಜ್ಯ ಸರ್ಕಾರ ನಿವಾಸ ಪ್ರಮಾಣ ಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾ. ಸೇನ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜಗತ್ತಿನ ಅಥವಾ ಭಾರತದಲ್ಲಿ ಪ್ರಳಯ ಸಂಭವಿಸಿದ ಹೊರತು ಯಾರು ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಡಿ. ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಉಳಿದಿರುವ ಹಿಂದೂ, ಸಿಖ್, ಜೈನ್, ಬೌದ್ದ, ಕ್ರೈಸ್ತ, ಪಾರ್ಸಿ ಸೇರಿದಂತೆ ವಿವಿಧ ಧರ್ಮದ ಜನರಿಗೆ ಅಲ್ಲಿ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅಲ್ಲದೇ ವಿಭಜನೆಯ ವೇಳೆ ಪಾಕಿಸ್ತಾನ ತೊರೆದು ಬಂದ ಹಿಂದೂಗಳಿಗೆ ಇಲ್ಲಿ ವಿದೇಶಿಯರಂತೆ ನೋಡಲಾಗುತ್ತಿದೆ. ಇದು ನನ್ನ ಪ್ರಕಾರ ನೈಸರ್ಗಿಕ ನ್ಯಾಯಾಂಗ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು,  ಸಿಖ್, ಬೌದ್ಧರು, ಪಾರ್ಸಿಗಳು ಯಾವುದೇ ದಾಖಲೆ ನೀಡದೇ ಇದ್ದರೂ ಅವರಿಗೆ ಭಾರತದ ಪೌರತ್ವ ನೀಡಬೇಕು ಎಂದು ನ್ಯಾ.ಸೇನ್ ಅವರು ಪ್ರಧಾನಿ ಮೋದಿಗೆ ಆದೇಶ ರೂಪದ ಮನವಿಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಆರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಭಾರತದ ಕಾನೂನು ಮತ್ತು ಸಂವಿಧಾನವನ್ನ ಗೌರವಿಸದ ಯಾರೇ ಆಗಲಿ ಅವರನ್ನು ಭಾರತದ ನಾಗರಿಕ ಎಂದು ಗುರುತಿಸಬಾರದು ಎಂದು ತಮ್ಮ 37 ಪುಟಗಳ ಆದೇಶಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಯಿಗಳನ್ನೇ ನಿಯಂತ್ರಿಸಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸ್ತೀರಾ: ಗುಜರಾತ್ ಹೈಕೋರ್ಟ್

    ನಾಯಿಗಳನ್ನೇ ನಿಯಂತ್ರಿಸಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸ್ತೀರಾ: ಗುಜರಾತ್ ಹೈಕೋರ್ಟ್

    ಗಾಂಧಿನಗರ: ಬೀದಿ ನಾಯಿಗಳನ್ನೇ ನಿಯಂತ್ರಣ ಮಾಡಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸುತ್ತೀರಾ ಎಂದು ಗುಜರಾತ್ ಹೈಕೋರ್ಟ್ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ)ವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

    ಅಹಮದಾಬಾದ್ ನಲ್ಲಿರುವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೀದಿ ನಾಯಿಗಳು ಸುಳಿಯದಂತೆ ಇಲ್ಲವೇ ಪ್ರತಿ ದಿನ ನಾಯಿ ಸಾಗಿಸುವ ವಾಹನ ಅಥವಾ ಅವುಗಳನ್ನು ಕೊಲ್ಲುವ ಅನುಮತಿಯನ್ನು ನಗರಸಭೆಗೆ ಸೂಚನೆ ನೀಡುವಂತೆ ಎಎಐ ಗುಜರಾತ್ ಹೈಕೋರ್ಟಿಗೆ ಮನವಿ ಮಾಡಿಕೊಂಡಿತ್ತು.

    ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಗುಜರಾತ್ ಹೈ ಕೋರ್ಟಿನ ನ್ಯಾಯಮೂರ್ತಿ ಅನಂತ್ ಡೇವ್ ಸೇರಿದ ದ್ವಿ-ಸದಸ್ಯ ಪೀಠ, ಎಎಐ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೇ ನಿಮಗೆ ಬೀದಿ ನಾಯಿಗಳನ್ನೇ ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ, ಒಂದು ವೇಳೆ ಭಯೋತ್ಪಾದಕರು ವಿಮಾನ ನಿಲ್ದಾಣಕ್ಕೆ ನುಗ್ಗಿದಾಗ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಬೀದಿ ನಾಯಿಗಳ ಹಾವಳಿಯಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದೆ ಎಂಬ ಕಾರಣಗಳನ್ನು ನೀಡಿದ್ದರ ಜೊತೆಗೆ, ನಾಯಿಗಳನ್ನು ಕೊಲ್ಲುವ ಬಗ್ಗೆಯೂ ಎಎಐ ಪ್ರಸ್ತಾಪ ಮಾಡಿತ್ತು. ಆದರೆ ಎಎಐ ಮನವಿಯನ್ನು ಗುಜರಾತ್ ಹೈ-ಕೋರ್ಟ್ ತಳ್ಳಿಹಾಕಿದೆ.

    ಏನಿದು ಪ್ರಕರಣ?
    ಬೀದಿ ನಾಯಿಗಳ ಹಾವಳಿಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗುತ್ತಿದೆ ಎಂದು ಆರೋಪಿಸಿ ಎಎಐ 2017ರ ಡಿಸೆಂಬರ್ ನಲ್ಲಿ ಹೈ-ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮನವಿಯಲ್ಲಿ ಪ್ರತಿ ದಿನ ಬೀದಿ ನಾಯಿ ಹೊತ್ತೊಯ್ಯುವ ವಾಹನವನ್ನು ಕಳಿಸಬೇಕು ಅಥವಾ ನಾವು ಕರೆ ಮಾಡಿದಾಗ ಕರೆಸಬೇಕು, ವಿಮಾನ ನಿಲ್ದಾಣದ 40 – 50 ಕಿ.ಮೀ ಸುತ್ತಮುತ್ತ ನಾಯಿಗಳು ಸುಳಿಯದಂತೆ ನಗರಸಭೆಗೆ ಸೂಚನೆ ನೀಡಬೇಕೆಂದು ತಿಳಿಸಿತ್ತು.

    ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಗೊಂಡಿದ್ದ ಹೈ-ಕೋರ್ಟ್ ಏಕಸದಸ್ಯ ಪೀಠ, 2017 ರಲ್ಲಿ ನಾಯಿ ಕಾರಣದಿಂದಾಗಿ ಕೇವಲ 3 ಬಾರಿ ವಿಮಾನ ವ್ಯತ್ಯಯಗೊಂಡಿರುವುದರಿಂದ ಪ್ರತಿ ದಿನ ನಗರಸಭೆಯ ವಾಹನಗಳನ್ನು ಕಳಿಸಿಕೊಡಲು ನಿರ್ದೇಶಿಸುವುದು ಸಾಧ್ಯವಿಲ್ಲವೆಂದು ಎಎಐ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮಗಳನ್ನು ಎಎಐ ತೆಗೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ಎಎಐ ಮತ್ತೊಮ್ಮೆ ದ್ವಿ-ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಇವತ್ತು ಕಡೇ ದಿನ

    ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಇವತ್ತು ಕಡೇ ದಿನ

    ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚೋಕ್ಕೆ ಹೈಕೋರ್ಟ್ ನೀಡಿದ ಸಮಯ ಇಂದು ಮುಗಿಯುತ್ತದೆ. ಹೈ ಕೋರ್ಟ್ ಚಾಟಿಯಿಂದ ಎಚ್ಚೆತ್ತಿರುವ ಬಿಬಿಎಂಪಿ ರಾತ್ರಿ ಹಗಲು, ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಡುತ್ತಿದೆ. ಮೂರು ದಿನದಿಂದ 24*7 ಕೆಲಸ ಮಾಡುತ್ತಿದ್ದರೂ ಬೆಂಗಳೂರು ಮಾತ್ರ ಗುಂಡಿ ಮುಕ್ತವಾಗೋ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

    ಸೋಮವಾರದೊಳಗೆ ಬೆಂಗಳೂರನ್ನು ಗುಂಡಿಮುಕ್ತ ನಗರವನ್ನಾಗಿ ಘೋಷಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ. ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ರಜೆ ದಿನಗಳಲ್ಲೂ ಪಾಥ್‍ವೋಲ್‍ಗಳನ್ನು ಹುಡುಕಿ ತಡಕಿ ಫಿಲ್ ಮಾಡುತ್ತಿದ್ದಾರೆ. ಹಾಗಿದ್ರೆ ಬೆಂಗಳೂರಿನ ಎಲ್ಲ ರಸ್ತೆಗಳು ಇಂದಿನಿಂದ ಗುಂಡಿಗಳು ಇಲ್ಲದೇ ನಳನಳಿಸುತ್ತಾ, ವಾಹನ ಸವಾರರ ಪರದಾಟಕ್ಕೆ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

     

    ಬೆಂಗಳೂರಿನಲ್ಲಿ ಆರಂಭವಾಗುವ ವರುಣ ಆರ್ಭಟಕ್ಕೆ ಗೊರಗುಂಟೆಪಾಳ್ಯ ಬಳಿ ಗುಂಡಿಗಳು ನೀರಿನಿಂದ ತುಂಬಿ ತುಳುಕ್ಕುತ್ತಿವೆ. ವೆಸ್ಟ್ ಆಫ್ ಕಾರ್ಡ್ ರೋಡ್, ಹೆಣ್ಣೂರು ಕ್ರಾಸ್ ರಸ್ತೆಯಲ್ಲಂತು ಇಡೀ ರಸ್ತೆಯೇ ಗುಂಡಿ ಮಯವಾಗಿದೆ. ಇವೆಲ್ಲವನ್ನು ಮುಚ್ಚುಸಿ ಕೋರ್ಟ್ ಗೆ ಉತ್ತರಿಸಬೇಕಿರೋ ಮೇಯರ್ ಮಾಧ್ಯಮಗಳ ಮುಂದೆ ಹಾರಿಕೆಯ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.

    ಒಟ್ಟಿನಲ್ಲಿ ನಗರದಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳನ್ನು ಮುಚ್ಚಿಸೋಕೆ ಬಿಬಿಎಂಪಿ ತರಾತುರಿಯಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಕೆಲಸ ಮೊದಲೇ ಮಾಡಿದ್ರೆ ಅಧಿಕಾರಿಗಳು ನಿದ್ದೆಗೆಟ್ಟು, ರಜಾ ದಿನಗಳಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಇವುಗಳ ನಡುವೆ ಕೋರ್ಟ್ ಗೆ ಇಂದು ಯಾವ ರೀತಿ ಬಿಬಿಎಂಪಿ ಉತ್ತರಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನ್ಯಾಷನಲ್ ಹೆರಾಲ್ಡ್ ಕೇಸ್- ರಾಹುಲ್, ಸೋನಿಯಾ ಅರ್ಜಿ ವಜಾ

    ನ್ಯಾಷನಲ್ ಹೆರಾಲ್ಡ್ ಕೇಸ್- ರಾಹುಲ್, ಸೋನಿಯಾ ಅರ್ಜಿ ವಜಾ

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸನ್ನು ಪ್ರಶ್ನಿಸಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

    ದುರುದ್ದೇಶ ಪೂರ್ವಕವಾಗಿ ಆದಾಯ ತೆರಿಗೆ ಇಲಾಖೆ ಯಂಗ್ ಇಂಡಿಯನ್ ಸಂಸ್ಥೆಗೆ ಸಂಬಂಧಿಸಿದಂತೆ 2011-12 ಸಾಲಿನ ಆದಾಯ ತೆರಿಗೆ ಮರು ಮೌಲ್ಯಮಾಪನ ಸಂಬಂಧ ನೋಟಿಸ್ ಜಾರಿ ಮಾಡಿದೆ ಎಂದು ಆರೋಪಿಸಿ ಸೋನಿಯಾ, ರಾಹುಲ್ ಗಾಂಧಿ, ಆಸ್ಕರ್ ಫೆರ್ನಾಂಡಿಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

    ಸೋಮವಾರ ನ್ಯಾ. ರವೀಂದ್ರ ಭಟ್, ನ್ಯಾ. ಎ.ಕೆ ಚಾವ್ಲಾ ನೇತೃತ್ವದ ದ್ವಿಸದಸ್ಯ ಪೀಠ, ಆದಾಯ ತೆರಿಗೆ ಇಲಾಖೆ ತೆರಿಗೆದಾರರ ಆದಾಯವನ್ನು ಮರು ಮೌಲ್ಯಮಾಪನ ಮಾಡಲು ಅಧಿಕಾರವಿದೆ. ಹೀಗಾಗಿ ಅರ್ಜಿದಾರರು ಆದಾಯ ತೆರಿಗೆ ಇಲಾಖೆಗೆ ಹೋಗಿ ಅಲ್ಲಿ ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಉತ್ತರಿಸಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

    ರಾಹುಲ್ ಗಾಂಧಿ 2010 ರಿಂದಲೇ ಯಂಗ್ ಇಂಡಿಯನ್ ನಿರ್ದೇಶಕರಾಗಿದ್ದರೂ 2011-12ರ ಆದಾಯ ಮೌಲ್ಯಮಾಪನ ವರ್ಷದಲ್ಲಿ ನಾನು ನಿರ್ದೇಶಕನಾಗಿಲ್ಲ ಎಂದು ಉಲ್ಲೇಖಿಸಿದ್ದರು. ಈ ಕಾರಣಕ್ಕಾಗಿ ಗಾಂಧಿ ಕುಟುಂಬಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಐಟಿ ಸ್ಪಷ್ಟಪಡಿಸಿತ್ತು. ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು, ನನ್ನ ಕಕ್ಷೀದಾರರು ಯಂಗ್ ಇಂಡಿಯನ್‍ದಿಂದ ಯಾವುದೇ ಹಣವನ್ನು ಪಡೆದಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ತೆರಿಗೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದ್ದರು. ಆಗಸ್ಟ್ 16 ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸಪ್ಟೆಂಬರ್ 10 ರಂದು ತೀರ್ಪು ನೀಡುವುದಾಗಿ ಹೇಳಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಧ್ಯಮಗಳು ವರದಿ ಮಾಡದಂತೆ ತಡೆ ನೀಡಲು ರಾಹುಲ್ ಗಾಂಧಿ ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ವಾದವನ್ನು ತಿರಸ್ಕರಿಸಿತ್ತು.

    ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
    2013ರಲ್ಲಿ ಜನವರಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಪಟಿಯಾಲಾ ಹೌಸ್ ಕೋರ್ಟ್‍ನಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಅವರ ಕಂಪೆನಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ಸೋನಿಯಾ ಗಾಂಧಿ ಸಂಬಂಧಿತ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದರು.

    ಸುಬ್ರಮಣಿಯನ್ ಸ್ವಾಮಿ ಆರೋಪವೇನು?
    ಅಸೋಸಿಯೇಟೆಡ್ ಜರ್ನಲ್ಸ್(ಎಜಿಎಲ್) ಸಂಸ್ಥೆಯನ್ನು ಜವಹಾರ್ ಲಾಲ್ ನೆಹರು ಅವರು 1937ರ ನವೆಂಬರ್ 20 ರಂದು ಸ್ಥಾಪಿಸಿದ್ದರು. 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರ ಸಹಕಾರದಿಂದ ಈ ಸಾರ್ವಜನಿಕ ಕಂಪೆನಿ ಸ್ಥಾಪನೆಯಾಗಿತ್ತು. ಎಜೆಎಲ್ ಸಂಸ್ಥೆಯ ಸ್ಥಾಪನೆ ಬಳಿಕ ಅಂದಿನ ಪ್ರಧಾನಿ ನೆಹರೂ ಅವರು, ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ನಗರದಲ್ಲಿ ಸರ್ಕಾರದ ವತಿಯಿಂದ ಜಮೀನು ಮಂಜೂರು ಮಾಡಿದ್ದರು. ಅಲ್ಲದೇ ಅವರ ಅವಧಿಯಲ್ಲಿ ಸಂಸ್ಥೆಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿತ್ತು. ಎಜೆ ಸಂಸ್ಥೆ ಅಂದು ಉರ್ದು ಆವೃತ್ತಿಯ ‘ಕ್ವಾಮಿ ಆವಾಜ್’ ಹಾಗೂ ಇಂಗ್ಲಿಷ್ ಆವೃತ್ತಿಯ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗಳನ್ನು ಪ್ರಕಟಿಸುತಿತ್ತು.

    ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷ ಸಂಗ್ರಹಿಸಿದ್ದ ನಿಧಿಯಿಂದ 90 ಕೋಟಿ ರೂ. ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿತ್ತು. 2011ರಲ್ಲಿ ಎಜೆಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಮೋತಿ ಲಾಲ್ ವೋರಾ ತಮ್ಮ ಸಂಸ್ಥೆ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಸ್ಥೆ ಹಾಗೂ ಅದರ ಆಸ್ತಿಗಳನ್ನು ರಾಹುಲ್ ಗಾಂಧಿ ಕುಟುಂಬ ಒಡೆತನದಲ್ಲಿದ್ದ ಯಂಗ್ ಇಂಡಿಯನ್ ಸಂಸ್ಥೆಗೆ ವರ್ಗಾಯಿಸಲು ಸಮ್ಮತಿಸಿದ್ದರು.

    ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಡೆತನದ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ್ದ `ಯಂಗ್ ಇಂಡಿಯನ್’ ಎಂಬ ಸಂಸ್ಥೆ ನಿಯಮ ಬಾಹಿರವಾಗಿ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯನ್ನು (ಎಜೆಎಲ್) ಖರೀದಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಯಂಗ್ ಇಂಡಿಯನ್ ಸಂಸ್ಥೆಯನ್ನು ಎಜೆಎಲ್ ಕಂಪೆನಿ ಖರೀದಿಸುವ ಮೂಲಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು.

    ಈ ಆರೋಪಕ್ಕೆ ಪೂರಕ ಅಂಶವನ್ನು ತಿಳಿಸಿದ್ದ ಸ್ವಾಮಿ, ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಸೋನಿಯಾ ಕುಟುಂಬ ಹೆಚ್ಚು ಶೇರು ಹೊಂದಿರುವುದನ್ನು ಬಹಿರಂಗ ಪಡಿಸಿದ್ದರು. ಅಲ್ಲದೇ ಎಜೆಎಲ್ ಸಂಸ್ಥೆ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಹೊಂದಿದ್ದ ಕೋಟಿ ಕೋಟಿ ಬೆಳೆಬಾಳುವ ಆಸ್ತಿಗಳೂ ಯಂಗ್ ಇಂಡಿಯನ್ ಸಂಸ್ಥೆಯ ಪಾಲಾಗಿದೆ ಎಂದು ದೂರಿದ್ದರು. ಸ್ವತಂತ್ರ್ಯ ಸೇನಾನಿಗಳ ದೇಣಿಗೆಯಿಂದ ಆರಂಭವಾದ ಎಜೆಎಲ್ ಸಂಸ್ಥೆಯನ್ನು ಸೋನಿಯಾ ಕುಟುಂಬದ ವಶಮಾಡಿಕೊಂಡಿತ್ತು. ಈ ಸಂಸ್ಥೆಯ ಸ್ವತ್ತುಗಳ ಮೌಲ್ಯ 5 ಸಾವಿರ ಕೋಟಿ ರೂ. ಕೂಡ ಅವರ ಕೈ ಸೇರಿತ್ತು. ಇವುಗಳನ್ನು ವಿವರವಾಗಿ ನೀಡಿದ್ದ ಸ್ವಾಮಿ, ಪಕ್ಷಕ್ಕೆ ಬಂದ ದೇಣಿಗೆಯ ಹಣವನ್ನು ಸಾಲ ನೀಡಿ ಭಾರೀ ಮೌಲ್ಯದ ಆಸ್ತಿ ಪಡೆದಿದ್ದಾರೆ. ಅಲ್ಲದೇ ಎಜೆಎಲ್ ಸಂಸ್ಥೆಯ ನ್ಯಾಷನಲ್ ಹೆರಾಲ್ಡ್‍ನ ಕಟ್ಟಡವನ್ನು ವಾಣಿಜ್ಯ ಬಳಕೆಗೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ನಿಯಮ ಏನು ಹೇಳುತ್ತೆ: 1961 ರ ಆದಾಯ ತೆರಿಗೆ ಕಾನೂನಿನ ನಿಯಮಗಳ ಅನ್ವಯ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅವಕಾಶ ನೀಡಲಾಗಿದೆ. ಆದರೆ ದೇಣಿಗೆ ಪಡೆದ ಹಣವನ್ನು ವಾಣಿಜ್ಯ ಕಾರಣಕ್ಕಾಗಿ 3ನೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಸಾಲ ನೀಡಲು ಅನುಮತಿ ಇಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದ ಸೋನಿಯಾ ಕಾನೂನು ಉಲ್ಲಂಘಿಸಿ ಸಾಲ ನೀಡಿದ್ದರು ಎನ್ನುವ ಆರೋಪವಿದೆ.

    ಯಾರ ಪಾಲು ಎಷ್ಟು?
    ಐಟಿ ಪ್ರಕಾರ, ಈ ಕಂಪನಿಯಲ್ಲಿ ಸೋನಿಯಾ ಗಾಂಧಿ ಶೇ.83.3ರಷ್ಟು, ರಾಹುಲ್ ಗಾಂಧಿ ಶೇ.15.5ರಷ್ಟು ಹಾಗೂ ಉಳಿಕೆ 1.2ರಷ್ಟು ಷೇರನ್ನು ಆಸ್ಕರ್ ಫರ್ನಾಂಡೀಸ್ ಹೊಂದಿದ್ದಾರೆ.. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಸುಮನ್ ದುಬೆ. ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಮತ್ತು ಯಂಗ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಪ್ರಕರಣದ ಆರೋಪಿಗಳಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಭೋಪಾಲ್: ಪತ್ನಿಗೆ ತನ್ನ ಗಂಡನಿಗೆ ಸಂಬಳ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

    ಪತಿಯಿಂದ ದೂರವಾಗಿರುವ ಪತ್ನಿ ಗಂಡನ ಸಂಬಳದ ಮಾಹಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈಗ ಹೈಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದುಗೊಳಿಸಿ ಪತ್ನಿ ಪರವಾಗಿ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಬಿಎಸ್‍ಎನ್‍ಎಲ್ ಉದ್ಯೋಗಿ ಪವನ್ ಜೈನ್ ನಿಂದ ಬೇರೆಯಾದ ಸುನಿತಾ ಜೈನ್ ಕುಟುಂಬ ನಿರ್ವಹಣೆಗೆ 7 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪಡೆಯುತ್ತಿದ್ದರು. ಪತಿಯ ಸಂಬಳ ತಿಂಗಳಿಗೆ 2 ಲಕ್ಷ ರೂ. ಇರುವ ಕಾರಣ ತನಗೆ ಇನ್ನು ಹೆಚ್ಚು ನಿರ್ವಹಣಾ ಭತ್ಯೆ ಸಿಗಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಪತಿಯ ಸಂಬಳದ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.

    ಈ ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಮಾಹಿತಿ ಕೋರಿ ಅರ್ಜಿ ಕೇಳಿದ್ದರು. ಮಾಹಿತಿ ಕೊಡಲು ಬಿಎಸ್‍ಎನ್‍ಎಲ್ ಸಂಸ್ಥೆ ನಿರಾಕರಿಸಿತು. ನಂತರ ಪತ್ನಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದರು. ಸುನಿತಾ ಜೈನ್ ಅರ್ಜಿಯನ್ನು ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ ಸಂಬಳದ ಮಾಹಿತಿಯನ್ನು ನೀಡುವಂತೆ ಬಿಎಸ್‍ಎನ್‍ಎಲ್ ಗೆ ಆದೇಶವನ್ನು ನೀಡಿತ್ತು. ಆಯೋಗದ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆಯೋಗದ ಆದೇಶವನ್ನು ರದ್ದು ಮಾಡಿತ್ತು.

    ಏಕಸದಸ್ಯ ಪೀಠದ ಆದೇಶವನ್ನು ಪತ್ನಿ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಸೇಥ್ ಹಾಗೂ ನಂದಿತಾ ದುಬೆ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ ಪತಿ ಸಂಬಳದ ಮಾಹಿತಿಯನ್ನು ಪತ್ನಿಗೆ ತಿಳಿಯುವ ಹಕ್ಕಿದೆ ಎಂದು ಹೇಳಿ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದರು.

  • ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಚೆನ್ನೈ: ಪಠ್ಯ ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳಾಗಲಿ, ತುಂಬಿದ ಕಂಟೈನರ್ ಗಳಾಗಲಿ ಅಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈ ಕೋರ್ಟ್ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದೆ.

    ಮಕ್ಕಳ ಕೈ ಚೀಲದ ಹೊರೆಯನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡದಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

    ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳ ಆದೇಶಗಳನ್ನು ಉಲ್ಲೇಖ ಮಾಡುತ್ತಾ ನ್ಯಾಯಮೂರ್ತಿ ಕಿರುಬಾಕರನ್ ಕೈ ಚೀಲದ ತೂಕ ಮಕ್ಕಳ ತೂಕದ 10% ಮೀರಿರಬಾರದು. ಈ ಸಂಬಂಧ “ಮಕ್ಕಳ ಶಾಲಾ ಬ್ಯಾಗ್ ನೀತಿ” ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

    ವಕೀಲ ಎಂ ಪುರುಷೋತ್ತಮನ್ ಅವರು ಎನ್‍ಸಿಇಆರ್ ಟಿ ಸಿದ್ಧಪಡಿಸಿದ ಪಠ್ಯ ಮತ್ತು ಎನ್‍ಸಿಇಆರ್ ಟಿ ಮುದ್ರಿಸಿದ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ಸಿಬಿಎಸ್‍ಇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.

    ಎನ್‍ಸಿಇಆರ್ ಟಿ ಪಠ್ಯ ಕ್ರಮ ಮತ್ತು ಬುಕ್ ಗಳನ್ನು ಕಡ್ಡಾಯ ಗೊಳಿಸುವಂತೆ ಕೇಂದ್ರಿಯ ಶಿಕ್ಷಣ ಮಂಡಳಿ (ಸಿಬಿಎಸ್‍ಇ) ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಕೋರ್ಟ್ ಸೂಚಿಸಿದೆ.

    1 ಮತ್ತು 2 ನೇ ತರಗತಿಗೆ ಭಾಷೆ ಮತ್ತು ಗಣಿತ ವಿಷಯಗಳು ಮಾತ್ರ ಇರಬೇಕು. ತರಗತಿ 3 ರಿಂದ 5 ನೇ ತರಗತಿ ವರೆಗೆ ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳನ್ನು ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ ಬೋಧಿಸಬೇಕು. ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

    ವೈದ್ಯರು ಹೇಳುವಂತೆ 5 ರಿಂದ 6 ವರ್ಷದ ಮಕ್ಕಳಿಗೆ ಕನಿಷ್ಠ 11 ಗಂಟೆ ನಿದ್ದೆ ಬೇಕು. ಬೆಳಗ್ಗೆ ಶಾಲೆಗೆ ಮುಂಚೆ ಹೋಗಿದ್ದರೆ ಬೇಗ ಮಲಗಬೇಕು. ಹೋಮ್ ವರ್ಕ್ ಮಕ್ಕಳ ನಿದ್ದೆಯ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಆದೇಶದಲ್ಲಿ ವೈದ್ಯಕೀಯ ತಜ್ಞರ ಹೇಳಿಕೆಗಳನ್ನು ಜಡ್ಜ್ ಉಲ್ಲೇಖಿಸಿದರು.

    1 ನೇ ತರಗತಿ ಪಠ್ಯ ಕ್ರಮದಲ್ಲಿ ವ್ಯಾಕರಣ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳು ಇರುವುದು ಆಶ್ಚರ್ಯ ಮತ್ತು ಅತಂಕ ತರಿಸುವಂತದ್ದು. 5 ವರ್ಷದ ಮಗು ಹೇಗೆ ಈ ವಿಷಯಗಳನ್ನು ಗ್ರಹಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‍ಇ ಶಾಲೆಗಳು ಅಪ್ರಸ್ತುತ ವಿಷಯಗಳನ್ನು ಬೋಧಿಸಿ ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಅಭಿಪ್ರಾಯಪಟ್ಟು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದರು.

     

  • ದೊಡ್ಮನೆ ಕುಡಿ ನಟನೆಯ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ಹೈಕೋರ್ಟ್ ಗೆ ದೂರು

    ದೊಡ್ಮನೆ ಕುಡಿ ನಟನೆಯ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ಹೈಕೋರ್ಟ್ ಗೆ ದೂರು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ದೊಡ್ಮನೆಯ ವಿನಯ್‍ರಾಜ್‍ಕುಮಾರ್ ನಟಿಸುತ್ತಿರುವ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ವಕೀಲ ಅಮೃತೇಶ್ ಹೈಕೋರ್ಟ್ ಗೆ ದೂರು ಸಲ್ಲಿಸಿದೆ.

    ಚಿತ್ರತಂಡ ಹೈಕೋರ್ಟ್ ಆವರಣದಲ್ಲಿ ನಾಯಕ ನಟ ವಿನಯ್‍ರಾಜ್‍ಕುಮಾರ್ ಅವರ ಫೋಟೋಶೂಟ್ ಮಾಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಪೊಲೀಸರು ಮಾತ್ರ ಇದೂವರೆಗೂ ಯಾವುದೇ ಕ್ರಮಕೈಗೊಳ್ಳದ ಕಾರಣ ವಕೀಲ ಅಮೃತೇಶ್ ಎಫ್‍ಐಆರ್ ದಾಖಲಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

    ಆಗಸ್ಟ್ 15ರಂದು ವಿನಯ್‍ರಾಜ್‍ಕುಮಾರ್ ಅವರ ಫೋಟೋಶೂಟ್ ಮಾಡಿಸಲಾಗಿತ್ತು. ಹೈಕೋರ್ಟ್ ಬಳಿಯಿರುವ ಗೃಂಥಾಲಯದ ಆವರಣದಲ್ಲಿ ಫೋಟೋಶೂಟ್ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ವಕೀಲರ ಸಂಘದ ಅಧ್ಯಕ್ಷರಿಂದ ಅನುಮತಿ ಪತ್ರವನ್ನು ಪಡೆಯಲಾಗಿದೆ. ನನ್ನ ಬಳಿ ವಕೀಲರ ಸಂಘ ನೀಡಿರುವ ಅನುಮತಿ ಪತ್ರವಿದೆ. ಇನ್ನೂ ದೂರು ಸಲ್ಲಿಸಿರುವ ವಕೀಲ ಅಮೃತೇಶ್ ಯಾರೆಂಬುದು ನನಗೆ ಗೊತ್ತಿಲ್ಲ. ಇದುವರೆಗೂ ನಾನು ಅವರನ್ನು ಒಮ್ಮೆಯೂ ಭೇಟಿಯೂ ಆಗಿಲ್ಲ. ಇಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ನನಗೆ ಈ ವಿಷಯ ಗೊತ್ತಾಗಿದೆ. ಅಂದು ನಡೆಸಿದ್ದ ಫೋಟೋಶೂಟ್ ನ್ನು ನಾವು ಆಗಸ್ಟ್ 22 ಮತ್ತು 23ರಂದು ಗಣೇಶ್ ಚತುರ್ಥಿ ಅಂಗವಾಗಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು ಅಂತಾ ಚಿತ್ರದ ನಿರ್ದೇಶಕ ಸುಧೀರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಸುಧೀರ್ ನಿರ್ದೇಶನದಲ್ಲಿ ಅನಂತು ವರ್ಸಸ್ ನುಸ್ರತ್ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಸುಪುತ್ರ ವಿನಯ್ ರಾಜ್‍ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿನಯ್‍ರಾಜ್‍ಕುಮಾರ್ ಗೆ ಜೊತೆಯಾಗಿ ಲತಾ ಹೆಗಡೆ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪರಿಚಿತರಾಗಿರುವ ನಟಿ ನಯನ ಕಾಣಿಸಿಕೊಂಡಿದ್ದಾರೆ. ನಯನಾ ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ಸಹದ್ಯೋಗಿ ಶಾಂತಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

    ‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

    ಬೆಂಗಳೂರು: ಹೊಸ ವರ್ಷ ಆಚರಣೆಗೆ ಬೆಂಗಳೂರು ಮಹಾನಗರದಲ್ಲಿ ಟೈಮ್ ಕ್ರಿಯೇಷನ್ ಮಾದಕ ಬೆಡಗಿ ಸನ್ನಿ ಲಿಯೋನ್ ರನ್ನು ಕರೆತರಲು ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಹೈ ಕೋರ್ಟ್ ಮೊರೆ ಹೋಗಿದೆ.

    ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಒಂದು ಕಡೆ ಕರ್ನಾಟಕ ರಕ್ಷಣಾ ವೇದಿಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ಸಹ ಸನ್ನಿ ನೈಟ್ಸ್ ಆಯೋಜನೆಗೆ ಯಾವುದೇ ಅನುಮತಿಯನ್ನು ನೀಡಿಲ್ಲ ಅಂತಾ ಸ್ಪಷ್ಟನೆಯನ್ನು ನೀಡಿದೆ.ಆದರೆ ಟೈಮ್ಸ್ ಕ್ರಿಯೇಷನ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಈಗ ನಗರದ ನಾಗವಾರದಲ್ಲಿರುವ ವೈಟ್ ಆರ್ಕಿಡ್ ಹೋಟೆಲ್ ನಲ್ಲಿ ಆಯೋಜನೆಗೊಂಡಿರುವ ಸನ್ನಿ ನೈಟ್ಸ್ ಗಾಗಿ ಟೈಮ್ ಕ್ರಿಯೇಷನ್ ಎಂಡಿ ಹರೀಶ್ ಎಂ.ಎಸ್. ಸೋಮವಾರ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು

    ಕಾರ್ಯಕ್ರಮದ ಆಯೋಜನಕ್ಕೆ ಅನುಮತಿಯನ್ನು ನೀಡವುದರ ಜೊತೆಗೆ ಪೊಲೀಸ್ ಭದ್ರತೆಯನ್ನು ಒದಗಿಸುವ ಮೂಲಕ ನಡೆಯುವ ಅಹಿತಕರ ಘಟನೆಗಳನ್ನು ನಡೆಯುವುದನ್ನು ತಡೆಯಬೇಕು. ಈ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಂಡಿದ್ದರು. ಈಗಾಗಲೇ ಕಾರ್ಯಕ್ರಮದ ತಯಾರಿಗಳು ಮುಗಿಯುವ ಹಂತದಲ್ಲಿವೆ. ಕಾರ್ಯಕ್ರಮದಿಂದ ಹಿಂದೆ ಸರಿಯುವ ಹಂತದಲ್ಲಿ ನಾವುಗಳಿಲ್ಲ ಎಂದು ಹೈ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

    ಹೊಸ ವರ್ಷಾಚರಣೆಗಾಗಿ ನಗರದಲ್ಲಿ ಆಯೋಜನೆ ಮಾಡಲಾಗ್ತಿರೋ ‘ಸನ್ನಿ ನೈಟ್ಸ್’ಗೆ ಅನುಮತಿ ನೀಡದೇ ಇರೋದ್ರಿಂದ ಕಾರ್ಯಕ್ರಮ ಮಾಡುವ ಹಾಗಿಲ್ಲ. ಮನೋರಂಜನೆ ಕಾಯ್ದೆಯಡಿ ಪರ್ಮಿಷನ್ ಪಡೆಯುವುದು ಅಗತ್ಯ. ಈ ದೃಷ್ಟಿಯಿಂದ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಅಂತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದರು.

    https://www.youtube.com/watch?v=hw9rGJ7u0KA

    https://www.youtube.com/watch?v=05Jkbnw4rXE

  • ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ನವದೆಹಲಿ: ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ತನಿಖೆ ಪೂರ್ಣಗೊಳ್ಳುವ ತನಕ ಜಾಮೀನು ನೀಡಲು ಸಾಧ್ಯವಿಲ್ಲ. ಆರು ತಿಂಗಳೊಳಗೆ ತನಿಖೆ ಪುರ್ಣಗೊಳ್ಳದಿದ್ರೆ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾ. ಎಸ್.ಎ. ಬೊಬ್ಡೆ, ನ್ಯಾ ನಾಗೇಶ್ವರ ರಾವ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವ ಕುರಿತು ಆರೋಪಿ ರಾಜೇಶ್ವರಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋಟ ಇವರ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಆರೋಪಿಗಳು ಸುಪ್ರೀಂ ಕೋರ್ಟ್ ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

    ಏನಿದು ಪ್ರಕರಣ?: ದುಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಉಡುಪಿಯ ಭಾಸ್ಕರ್ ಶೆಟ್ಟಿ(52) ಕಳೆದ ವರ್ಷ ಜುಲೈ 28ರಿಂದ ಕಾಣೆಯಾಗಿದ್ದರು. ಈ ಕುರಿತು ಜುಲೈ 29ರಂದು ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲಿಸರಿಗೆ ದೂರು ನೀಡಿದ್ದರು. ಆದ್ರೆ ಪತಿ ನಾಪತ್ತೆಯಾಗರೋ ಕುರಿತು ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಶೆಟ್ಟಿ ಯಾವುದೇ ದೂರು ನೀಡದಿರುವುದರಿಂದ ಅನುಮಾನಗೊಂಡ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಮಗ ಹಾಗೂ ಮಗನ ಸ್ನೇಹಿತ ನಿರಂಜನ್ ಕೊಲೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿತ್ತು.

    ಭಾಸ್ಕರ್ ಶೆಟ್ಟಿ ಅವರನ್ನು ಕೊಲೆಗೈದು ನಂದಳಿಕೆ ಎಂಬಲ್ಲಿ ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದರು.

    https://www.youtube.com/watch?v=K8JuJykqi_A

    https://www.youtube.com/watch?v=3WMLludJRRU

    https://www.youtube.com/watch?v=VUjoxc2emNs

    https://www.youtube.com/watch?v=kWyQttGrIRc

    https://www.youtube.com/watch?v=2IlEl29Jy7E

    https://www.youtube.com/watch?v=BIdqA1X-RUQ