Tag: ಹೈ ಕೋರ್ಟ್

  • ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಫೆಬ್ರವರಿ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.

    ನಿತ್ಯಾನಂದ ಆಧ್ಯಾತ್ಮದ ಹೆಸರಿನಲ್ಲಿ ಚಾತುರ್ಮಾಸ ಅಂತ ಊರು ಬಿಟ್ಟಿದ್ದಾನೆ. ಹೀಗೆ ಊರು ಬಿಟ್ಟವನಿಗೆ ಪೊಲೀಸರು ರಕ್ಷಣೆಯನ್ನು ನೀಡುವ ಹಾಗಿಲ್ಲ. ಹೀಗಿರುವಾಗ ಕಾನೂನಿನ ರಕ್ಷಣೆಯನ್ನು ಕೊಡಬಾರದು, ಕೂಡಲೇ ನಿತ್ಯಾನಂದನ ಜಾಮೀನು ವಜಾಗೊಳಿಸುವಂತೆ ಲೆನಿನ್ ಪರ ವಕೀಲರು ಇಂದು ಹೈ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಇಲ್ಲದೇ ಇರುವ ಕಾರಣ ಆತನ ಪ್ರಕರಣಕ್ಕೇನು ತೊಂದರೆ ಆಗಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಅದರ ಪಾಡಿಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೋಷಾರೋಪ ಪಟ್ಟಿಯೂ ತಯಾರಾಗಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಿತ್ಯಾನಂದನ ಅವಶ್ಯಕತೆಯಿಲ್ಲ. ಪದೇ ಪದೇ ಕೋರ್ಟಿನಲ್ಲಿ ಆತ ಇರೋದು ಬೇಕಾಗಿಲ್ಲ ಎಂದು ನಿತ್ಯಾನಂದ ಪರ ವಕೀಲರು ವಾದ ಮಂಡಿಸಿದರು.

    ಆದರೆ ನಿತ್ಯಾನಂದನ ಪಾಸ್‍ಪೋರ್ಟ್ ಕಾಲಾವಧಿ ಮುಕ್ತಾಯ ಆಗಿದ್ದರೂ ಕೂಡ ಆತ ದೇಶ ಬಿಟ್ಟು ಹೋಗಿದ್ದಾನೆ. ಪೊಲೀಸರು ಆ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಪಾಸ್‍ಪೋಟ್ ಇಲ್ಲದೇ ದೇಶ ಬಿಟ್ಟು ಹೋಗಿರೋದು ದೇಶದ್ರೋಹ. ಅತ್ಯಾಚಾರಿ ಓರ್ವ ದೇಶ ಬಿಟ್ಟಿರೋದೇ ಅಪರಾಧ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದು ಮಾಡುವಂತೆ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 5ಕ್ಕೆ ಈ ಸಂಬಂಧ ಆದೇಶ ಕಾಯ್ದಿರಿಸಿದೆ.

  • ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ಸಮನ್ಸ್ ನೀಡಿದೆ.

    ನಿತ್ಯಾನಂದ ಸ್ವಾಮಿ ಜಾಮೀನು ರದ್ದತಿ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದೆ.

    ಅರ್ಜಿ ವಿಚಾರಣೆ ವೇಳೆ ನಿತ್ಯಾನಂದನಿಗೆ ಎಷ್ಟು ಬಾರಿ ಸಮನ್ಸ್ ನೀಡಲಾಗಿದೆ. ಎಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾನೆ ಎಂಬ ಪ್ರಶ್ನೆ ಹಾಕಿತ್ತು. ಇದಕ್ಕೆ ಉತ್ತರಿಸಿದ ಲೆನಿನ್ ಪರ ವಕೀಲರು, ನಿತ್ಯಾನಂದನಿಗೆ 45 ಬಾರಿ ಸಮನ್ಸ್ ನೀಡಲಾಗಿದೆ 45 ಬಾರಿ ವಿಚಾರಣೆಗೆ ನಿತ್ಯಾನಂದ ಗೈರು ಹಾಜರಾಗಿದ್ದಾರೆ. ನಿತ್ಯಾನಂದ ಭಾರತದಿಂದ ಪರಾರಿಯಾಗಿ ಒಂದೂವರೆ ವರ್ಷ ಕಳೆದಿದೆ ಎಂದು ಮಾಹಿತಿ ನೀಡಿದರು.

    ನಿತ್ಯಾನಂದನಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನಿತ್ಯಾನಂದನ ಪ್ರಕರಣ ಬಗ್ಗೆ ಉತ್ತರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದೂರುದಾರ ಲೆನಿನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

  • ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಬಳ್ಳಾರಿ: ಜನ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕಾಗಿ ತಮ್ಮ ಜಾತಿ ಪ್ರಮಾಣ ಪತ್ರವನ್ನೇ ಬದಲಿಸಿ, ಕಳೆದ ನಾಲ್ಕು ವರ್ಷಗಳಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಅಧ್ಯಕ್ಷೆಯಾಗಿ ಅಧಿಕಾರ ಅನುಭವಿಸಿದ್ದರೂ ಆ ಸ್ಥಾನವನ್ನು ಮಹಿಳೆಯೊಬ್ಬರು ಬಿಟ್ಟು ಕೊಡುತ್ತಿಲ್ಲ. ಜೊತೆಗೆ ಹೈಕೋರ್ಟ್ ಆದೇಶ ಮಾಡಿದ್ದರೂ ಕ್ಯಾರೇ ಎನ್ನುತ್ತಿಲ್ಲ.

    ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಆದರೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾತ್ರ ತಮಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ನ್ಯಾಯಾಲಯದ ಆದೇಶ ಪಾಲಿಸದೆ ದರ್ಪ ತೋರುತ್ತಿದ್ದಾರೆ. ಈ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಪ್ರವರ್ಗ 2ಎ ಗೆ ಮೀಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷೆ ಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಎನ್ನುವುದು ಗ್ರಾಮದ ಎಲ್ಲರಿಗೂ ಗೊತ್ತಿದ್ದರೂ ಏನು ಮಾಡದ ಪರಿಸ್ಥಿತಿ ಇತ್ತು. ಆದರೆ ಪ್ರವರ್ಗ 2ಎ ಗೆ ಸೇರಿದ ಮತ್ತೊಬ್ಬ ಗ್ರಾಮ ಪಂಚಾಯ್ತಿ ಸದಸ್ಯೆ ರೇಖಾ ಸೊನ್ನದ ಅವರು ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಧಾರವಾಡ ಹೈಕೋರ್ಟ್ ಬೆಂಚ್ ರೇಖಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಯರಳ್ಳಿ ರತ್ನಮ್ಮಾ ಅವರು ಸಲ್ಲಿಸಿದ್ದ ನಕಲಿ ಜಾತಿ ಪ್ರಮಾಣ ಪತ್ರವನ್ನು ನಕಲಿ, ಕೂಡಲೇ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತ್ತು.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳು ಕಳೆದರೂ ಈ ಆದೇಶವನ್ನು ಯಾರು ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಕೂಡ ಅಧ್ಯಕ್ಷೆ ಸ್ಥಾನವನ್ನು ಬಿಟ್ಟು ಕೊಡಲು ತಯಾರಿಲ್ಲ. ಇತ್ತ ಹೂವಿನಹಡಗಲಿ ತಾಲೂಕಿನ ಮಾನ್ಯ ತಹಶೀಲ್ದಾರರು ಸಹ ಹೈಕೋರ್ಟ್ ಆದೇಶ ಪಾಲಿಸದೆ ತಮಗೂ ಆದೇಶಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳೇ ಕಳೆದಿವೆ. ಜೊತೆಗೆ ಇನ್ನು ಎರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ನಿಗದಿ ಆಗಲಿದೆ. ಆದರೆ ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲಿ ಎಂಬುದು ರೇಖಾ ಅವರ ವಾದವಾಗಿದ್ದು, ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

  • 9 ತಿಂಗಳ ಮಗುವಿನ ರೇಪ್‍ಗೈದು ಕೊಲೆ – ಕೊನೆಯ ಉಸಿರು ಇರೋವರೆಗೂ ಬಿಡುಗಡೆ ಮಾಡುವಂತಿಲ್ಲ

    9 ತಿಂಗಳ ಮಗುವಿನ ರೇಪ್‍ಗೈದು ಕೊಲೆ – ಕೊನೆಯ ಉಸಿರು ಇರೋವರೆಗೂ ಬಿಡುಗಡೆ ಮಾಡುವಂತಿಲ್ಲ

    ಹೈದರಾಬಾದ್: 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಅವನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡದಂತೆ ಸೂಚಿಸಿದೆ.

    ಪೋಲೆಪಾಕಾ ಪ್ರವೀಣ್ ಅಲಿಯಾಸ್ ಪವನ್(25) ಶಿಕ್ಷೆಗೆ ಗುರಿಯಾದ ಅಪರಾಧಿ. ಜೂನ್‍ನಲ್ಲಿ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ವಿಶೇಷ ಪೊಕ್ಸೊ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್ ಮೆಟ್ಟಿಲೇರಿದ್ದ. ಹೈ ಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ. ಈ ವೇಳೆ ಈತನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡಕೂಡದು ಎಂದು ಕೋರ್ಟ್ ಆದೇಶಿಸಿದೆ.

    ಅಪರಾಧಿ ಪೋಲೆಪಾಕಾ ಪ್ರವೀಣ್ ಅನಕ್ಷರಸ್ಥ, ಬಡವನಾಗಿದ್ದಾನೆ. ಈ ಹಿಂದೆ ಈ ರೀತಿಯ ಯಾವುದೇ ಘೋರ ಅಪರಾಧವನ್ನು ಮಾಡದ ಪರಿಣಾಮ ಕೋರ್ಟ್ ಶಿಕ್ಷೆಯನ್ನು ಜಿವಾವಧಿಗೆ ಇಳಿಸಿದೆ. ಇದನ್ನೂ ಓದಿ: ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಎ.ಅಭಿಷೇಕ್ ರೆಡ್ಡಿ ಅವರನ್ನೊಳಗೊಂಡ ಹೈ ಕೋರ್ಟಿನ ವಿಭಾಗೀಯ ಪೀಠವು ಅಪರಾಧಿಯ ನಡತೆ ಸುಧಾರಣೆಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪ್ರವೀಣ್‍ನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಇದೇ ವೇಳೆ ತಿಳಿಸಿದೆ. ಆಗಸ್ಟ್ 8ರಂದು ವಾರಂಗಲ್ ನ್ಯಾಯಾಲಯವು ಘಟನೆ ನಡೆದು 48 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಮರಣದಂಡನೆ ವಿಧಿಸಿತ್ತು.

    ಏನಿದು ಪ್ರಕರಣ?
    ಜೂನ್ 18ರಂದು ಹನಮಕೊಂಡದ ಕುಮಾರ್‍ಪಲ್ಲಿಯಲ್ಲಿನ ಮನೆಯ ಮೇಲೆ 9 ತಿಂಗಳ ಕಂದಮ್ಮ ಪೋಷಕರೊಂದಿಗೆ ಟೆರಸ್ ಮೇಲೆ ಮಲಗಿದ್ದಾಗ ಪ್ರವೀಣ್ ಅಪಹರಿಸಿದ್ದ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮಗುವಿನ ಕುಟುಂಬದವರು ಕೆಲವೇ ಗಂಟೆಗಳಲ್ಲಿ ಆತನನ್ನು ಹಿಡಿದ್ದರು. ಆದರೆ ಅಷ್ಟೊತ್ತಿಗಾಗಲೇ ನೀಚ ಮಗುವನ್ನು ಸಾಯಿಸಿಯೇ ಬಿಟ್ಟಿದ್ದ. ನಂತರ ಬಾಲಕಿಯ ಕುಟುಂಬಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಮೂಲಕ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು.

  • ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ನವದೆಹಲಿ: ಅಗತ್ಯವಿದ್ದಲ್ಲಿ ಜಮ್ಮು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಕಾಶ್ಮೀರ ಟೈಮ್ಸ್ ಸಂಪಾದಕಿ ಅನುರಾಧಾ ಭಸಿನ್, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

    ವಾದ ಮಂಡಿಸುವ ವೇಳೆ ಇದು ಹೈಕೋರ್ಟ್ ಮಟ್ಟದಲ್ಲಿಯೇ ಬಗೆಹರಿಯುವ ವಿಚಾರ ಎಂದು ನ್ಯಾಯಮೂರ್ತಿ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುರಾಧಾ ಭಸಿನ್ ಪರ ವಕೀಲೆ ವೃಂದಾ ಗ್ರೋವರ್ ಬೇಗನ್, ಕಾಶ್ಮೀರದ ಕಣಿವೆಯಲ್ಲಿ ಅಂತರ್ಜಾಲ, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಾರ್ವಜನಿಕರು ಹೈ ಕೋರ್ಟ್‍ಗೆ ಹೋಗುವುದು ಸಹ ಕಷ್ಟಕರವಾಗಿದೆ ಎಂದು ತಿಳಿಸಿದರು.

    ನಂತರ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಪರ ವಕೀಲರು ವಾದ ಮಂಡಿಸಿ, 18 ವರ್ಷದೊಳಗಿನ ಮಕ್ಕಳು ಹಾಗೂ ಯುವಕರನ್ನು ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು. ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರತಿಕ್ರಿಯಿಸಿ, ಅರ್ಜಿದಾರರು ಹೈ ಕೋರ್ಟ್ ಮೊರೆಯೇ ಹೋಗಬೇಕು ಎಂದು ತಿಳಿಸಿದರು.

    ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಪರ ವಕೀಲರು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿರುವುದರಿಂದ ಹೈ ಕೋರ್ಟ್ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ತಕ್ಷಣ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಜಮ್ಮು ಕಾಶ್ಮೀರದ ಹೈಕೋರ್ಟ್ ಪ್ರವೇಶಿಸಲು ಸಹ ತೊಂದರೆಗಳಿವೆ ಎಂಬ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಆರೋಪಗಳು ನಿಜವೇ ಎಂದು ಪರಿಶೀಲಿಸಿದರು. ಅಲ್ಲದೆ, ಜಮ್ಮು ಕಾಶ್ಮೀರ ಹೈ ಕೋರ್ಟ್‍ಗೆ ಹೋಗುವುದು ಏಕೆ ಕಷ್ಟ? ಯಾರಾದರೂ ದಾರಿಯಲ್ಲಿ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು. ಮುಂದುವರಿದು, ಈ ಕುರಿತು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ವಿವರ ಪಡೆಯುತ್ತೇವೆ. ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರದ ಹೈ ಕೋರ್ಟ್‍ಗೆ ಹೋಗುತ್ತೇನೆ. ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

  • ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಫೋನಿನಿಂದ ಕಿರಿಕಿರಿ ಆಗುತ್ತಿರುವ ವಿಚಾರವಾಗಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

    ವಕೀಲ ರಮೇಶ್ ನಾಯ್ಕ್ ಎಲ್ ಅವರು ಪಿಐಎಲ್ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

    ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಾದ ರೈಲು, ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಸ್ಮಾರ್ಟ್‍ಫೋನ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲ ಪ್ರಯಾಣಿಕರು ಸ್ಮಾರ್ಟ್ ಫೋನ್ ಗಳಲ್ಲಿ ಓಪನ್ ಸ್ಪೀಕರ್ ಇಟ್ಟು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಹಾಡು ಕೇಳುವುದು, ವಿಡಿಯೋಗಳನ್ನು ಪ್ಲೇ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಿಯಮ ರೂಪಿಸುವಂತೆ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಕರಿಗೆ ಆಸನ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕದಂತೆ ಈ ಸಮಸ್ಯೆ ನಿವಾರಿಸಲು ಬಸ್ ಹಾಗೂ ರೈಲಿನಲ್ಲಿ ಫಲಕವನ್ನು ಹಾಕಲು ಆದೇಶಿಸಬೇಕೆಂದು ರಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.

    ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಭಾರತೀಯ ರೈಲ್ವೇ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

  • ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಕೋಲ್ಕತ್ತಾ: ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ ಹೊಂದಿದ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಅಗತ್ಯವಿಲ್ಲ ಎಂದು ಕೋಲ್ಕತಾ ಹೈ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

    ವಿಚ್ಛೇದನ ಕೋರಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯಿಂದ ಜೀವನ ನಿರ್ವಹಣೆಗೆ ಜೀವನಾಂಶವನ್ನು ಕೋರಿ ಪತಿಯ ಸಂಪಾದನೆ ಮಾಹಿತಿ ನೀಡಿದ್ದರು. ಅಲ್ಲದೇ ಇದೇ ವೇಳೆ ತಮ್ಮ ವೇತನ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾ. ಬಿಸ್ವಾಜಿತ್ ಬಸು ಅವರು, ಮಹಿಳೆಯ ವೇತನ 74 ಸಾವಿರಕ್ಕಿಂತ ಕಡಿಮೆ ಇಲ್ಲ. ಇದು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಅವರ ಜೀವನ ನಿರ್ವಹಣೆಗೆ ಕೇಳಿರುವ 50 ಸಾವಿರ ರೂ. ಗಳನ್ನು ಗಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಮಹಿಳೆಗೆ ಜೀವನಾಂಶ ಪಡೆಯಲು ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಕೆಳ ನ್ಯಾಯಾಲಯದಲ್ಲಿ ಮಧ್ಯಂತರ ಜೀವನಾಂಶ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನ ತಿರಸ್ಕರಿಸಿತ್ತು. ಇದಕ್ಕೂ ಮುನ್ನ 2016 ಮಾರ್ಚ್ ರಂದು ನಲ್ಲಿ ಟ್ರಯಲ್ ಕೋರ್ಟ್ ಮಹಿಳೆಗೆ  ದಾವೆ ವೆಚ್ಚವಾಗಿ 30 ಸಾವಿರ ರೂ. ಗಳನ್ನು ನೀಡುವಂತೆ ಪತಿಗೆ ಆದೇಶ ನೀಡಿತ್ತು.

    ಹೈ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪತಿ ವಾರ್ಷಿಕ 83 ಲಕ್ಷ ಆದಾಯವನ್ನು ಪಡೆಯುತ್ತಿದ್ದು, ಪತಿಯ ಆದಾಯಕ್ಕನುಗುಣವಾಗಿ ಜೀವನಾಂಶ ನೀಡಬೇಕು. ನನ್ನ ಆದಾಯವು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾದ ಪತಿಯಿಂದ ಪ್ರತಿ ತಿಂಗಳು 50 ಸಾವಿರ ಜೀವನಾಂಶ ಕೊಡಿಸಬೇಕು. ಇದರಲ್ಲಿ ಮನೆ ನಿರ್ವಹಣೆಗೆ 10 ಸಾವಿರ ರೂ., ಪಾಕೆಟ್ ಮನಿ 4 ಸಾವಿರ ರೂ., 22 ಸಾವಿರ ರೂ. ಸರಕು, ಬಟ್ಟೆ ದಿನ ನಿತ್ಯದ ಖರ್ಚಿಗೆ ಮತ್ತು 14 ಸಾವಿರ ರೂ. ಕಾನೂನು ಹೋರಾಟದ ವೆಚ್ಚವನ್ನು ನೀಡಬೇಕೆಂದು ಕೋರಿದ್ದರು.

    ಇದೇ ವೇಳೆ ಕೋರ್ಟಿಗೆ ಮಹಿಳೆ ತನ್ನ ವೇತನದ ಲೆಕ್ಕಪತ್ರಗಳನ್ನು ಸಲ್ಲಿಕೆ ಮಾಡಿದ್ರು. ಡಿ.2018, ಜ.2019 ಮತ್ತು ಮಾ.2019 ರಲ್ಲಿ ಮಹಿಳೆಯ ವೇತನ 74,624 ರಷ್ಟಿತ್ತು. ಕಳೆದ ತಿಂಗಳು 81,219 ವೇತನ ಪಡೆಯುತ್ತಿದ್ದಾರೆ ಎಂದು ದೃಢಪಟ್ಟಿತ್ತು. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಮಹಿಳೆಯ ಅವಶ್ಯಕತೆಗಳಿಗೆ 50 ಸಾವಿರ ಸಾಕಾಗುತ್ತದೆ ಎಂದು ತಿಳಿಸಿದೆ.

  • ಹೈ ಕೋರ್ಟ್ ಮೆಟ್ಟಿಲೇರಿದ ಐಎಂಎ ಬಹುಕೋಟಿ ವಂಚನೆ ಪ್ರಕರಣ

    ಹೈ ಕೋರ್ಟ್ ಮೆಟ್ಟಿಲೇರಿದ ಐಎಂಎ ಬಹುಕೋಟಿ ವಂಚನೆ ಪ್ರಕರಣ

    ಬೆಂಗಳೂರು: ಐಎಂಎ ಬಹುಕೋಟಿ ಹಗರಣದ ಕುರಿತು ಇಂದು ಎಸ್‍ಐಟಿ ಪೊಲೀಸರು ತನಿಖೆ ಆರಂಭಿಸಿದ್ದು, ಇತ್ತ ಹಗರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ತಾಹೀರ್ ಎಂಬವರು ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಮೊಹಮ್ಮದ್ ತಹೀರ್ ಅವರು ಮನ್ಸೂರ್ ಹಾಗೂ ಸರ್ಕಾರ, ಉತ್ತರ ವಿಭಾಗದ ಎಸಿ ಅವರನ್ನು ಪಾರ್ಟಿ ಮಾಡಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಸರ್ಕಾರ ಮನ್ಸೂರ್ ಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸೀಜ್ ಮಾಡುತ್ತಿದೆ. ಈ ವೇಳೆ ಸಾಕಷ್ಟು ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗುತ್ತದೆ. ಈ ಸಂದರ್ಭದವನ್ನು ಕೆಲ ಸ್ವಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಸೀಜ್ ಮಾಡುವ ವಸ್ತುಗಳನ್ನು ಸಾಗಿಸುವ ಮಾರ್ಗದಲ್ಲೇ ನಾಪತ್ತೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    ಮನ್ಸೂರ್ ಅವರ ಆಸ್ತಿಗಳನ್ನು ಜಪ್ತಿ ಮಾಡುವ ವೇಳೆ ಎಲ್ಲಾ ವಸ್ತುಗಳನ್ನು ಕ್ಯಾಮೆರಾ ಕಣ್ಗಾವಲಿನಲ್ಲಿ ಸೀಜ್ ಮಾಡಬೇಕು. ಅಲ್ಲದೇ ಸೀಜ್ ಮಾಡುವ ಪ್ರತಿಯೊಂದು ವಸ್ತುವಿನ ಬಗ್ಗೆ ಕೆಪಿಐಡಿಎಫ್‍ಇ 2004 ರಂತೆ ವಿವರ ದಾಖಲಿಸಬೇಕು ಎಂದು ಉತ್ತರ ವಿಭಾಗದ ಎಸಿ ಹಾಗೂ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ತಾಹೀರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

    ಇತ್ತ ಇಂದು ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿರುವ ಎಸ್‍ಐಟಿ ತಂಡ ಶಾಂತಿನಗರದಲ್ಲಿ ಇರುವ ಐಎಂಎ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದೆ. ಇತ್ತ ಮನ್ಸೂರ್ ಕಾರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮನ್ಸೂರ್ ವಿದೇಶಕ್ಕೆ ತೆರಳಿರುವ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಿದ್ದಾರೆ.

  • ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ಬೆಂಗಳೂರು: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಇಂದು ತೆರವುಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

    ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ತೇಜಸ್ವಿ ಸೂರ್ಯ ಅವರಿಗೆ ಹಿನ್ನಡೆಯಾಗಿದ್ದು, ಸುದ್ದಿ ಪ್ರಕಟ ಮಾಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

    ತೇಜಸ್ವಿ ಅವರ ಬಗ್ಗೆ ಸರಿ ಎನಿಸಿದ ಸುದ್ದಿಯನ್ನ ಪ್ರಸಾರ ಮಾಡಲು ಮಾಧ್ಯಮಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಮಾಧ್ಯಮಗಳ ವರದಿಗಳು ಅವರಿಗೆ ಅವಹೇಳನಕಾರಿ ಎಂದು ಅನಿಸಿದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದೆ.

    ನಮ್ಮ ಸಂವಿಧಾನದಲ್ಲಿ 19 (1)ಎ ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಪ್ರತಿಯೊಬ್ಬ ಮತದಾರನಿಗೂ ತನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಮಾನಹಾನಿ ಹೇಳಿಕೆ ಅಥವಾ ದೃಶ್ಯ ಬಿತ್ತರಗೊಳ್ಳುತ್ತದೆ ಅಂಶವನ್ನು ಪ್ರಕ್ರಿಯೆ ನಡೆದ ಮೇಲೆ ನಿರ್ಧರಿಸಲು ಸಾಧ್ಯ. ಹೀಗಾಗಿ ಯಾವುದೇ ವ್ಯಕ್ತಿ ತನಗೆ ಮಾನಹಾನಿ ಆಗಿದ್ದರೆ ಸೂಕ್ತ ವೇದಿಕೆಗಳಲ್ಲಿ ಪ್ರಶ್ನೆ ಮಾಡಬಹುದು. ಈ ಕಾರಣಗಳಿಂದ ಪತ್ರಿಕೆ, ಟಿವಿ, ಫೇಸ್‍ಬುಕ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸುದ್ದಿ ಪ್ರಕಟಿಸುವುದಕ್ಕೆ ನಗರದ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಏನಿದು ಪ್ರಕರಣ: ಲೋಕಸಭಾ ಸ್ಪರ್ಧಿ ಆಗಿರುವ ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿ, ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ತೇಜಸ್ವಿಯವರು ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ನಗರದ ಸಿವಿಲ್ ನ್ಯಾಯಾಲಯ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿತ್ತು.

  • ಸ್ಫೋಟಕ ಬಳಸಿ ನೀರವ್ ಮೋದಿಯ 100 ಕೋಟಿ ಮೌಲ್ಯದ ಬಂಗಲೆ ಧ್ವಂಸ- ವಿಡಿಯೋ ನೋಡಿ

    ಸ್ಫೋಟಕ ಬಳಸಿ ನೀರವ್ ಮೋದಿಯ 100 ಕೋಟಿ ಮೌಲ್ಯದ ಬಂಗಲೆ ಧ್ವಂಸ- ವಿಡಿಯೋ ನೋಡಿ

    ನವದೆಹಲಿ: ಮಹಾರಾಷ್ಟ್ರದ ಅಲಿಬಾಗ್ ಕಡಲ ತೀರಕ್ಕೆ ಮುಖ ಮಾಡಿದಂತೆ ನೀರವ್ ಮೋದಿ ಒಡೆತನದಲ್ಲಿ ನಿರ್ಮಿಸಲಾಗಿದ್ದ ಸುಮಾರು 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದೆ.

    ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಳೆದ 6 ದಿನಗಳಿಂದ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಅಡಿಯಲ್ಲಿ ಸ್ಫೋಟಕಗಳನ್ನು ಇರಿಸಿ ಧ್ವಂಸಗೊಳಿಸಲಾಗಿದೆ. ಯಂತ್ರಗಳನ್ನು ಬಳಸಿ ಬಂಗಲೆಯನ್ನ ಧ್ವಂಸ ಮಾಡಲು ಪ್ರತ್ನಿಸಿದ್ದರೂ, ವಿಫಲವಾದ ಕಾರಣದಿಂದ ಸ್ಫೋಟಕಗಳ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಸುಮಾರು 33,000 ಅಡಿಯಲ್ಲಿ ‘ರೂಪಾನ್ಯ’ ಎಂಬ ಹೆಸರಿನೊಂದಿಗೆ ಮನೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಈ ವೇಳೆ ಕರವಾಳಿ ಪ್ರದೇಶದ ಪರಿಸರದ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿತ್ತು.

    ಈ ಬಗ್ಗೆ ಶಂಬುರಾಜೆ ಯುವ ಕ್ರಾಂತಿ ಎಂಬ ಎನ್‍ಜಿಒ 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪರಿಸರ ವಲಯದ ನಿಯಮಗಳನ್ನು ಮೀರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೂಡಲೇ ಅಂತಹ 58 ಬಂಗಲೆಗಳನ್ನು ತೆರವುಗೊಳಿಸುವಂತೆ ಬಾಂಬೆ ಹೈ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ನಿಯಮ ಮೀರಿ ನಿರ್ಮಾಣ ಮಾಡಲಾಗಿದ್ದ ಆ ಪ್ರದೇಶದ ಒಟ್ಟು 58 ಮನೆ, ರೆಸಾರ್ಟ್ ಗಳನ್ನು ತೆರವುಗೊಳಿಸುವ ಕಾರ್ಯಮಾಡಲಾಗುತ್ತಿದೆ. ಇದರಲ್ಲಿ ನೀರವ್ ಮೋದಿಯ ಬಂಗಲೆಯೂ ಸೇರಿದೆ.

    ಅಂದಹಾಗೇ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಎಲ್ಲವನ್ನ ಕಲ್ಪಿಸಲಾಗಿತ್ತು. ಅಲ್ಲದೇ ಬಂಗಲೆಯ ಸನಿಹದಲ್ಲೇ ಬೃಹತ್ ಐಶಾರಾಮಿ ಈಜುಕೊಳ ಸೇರಿದಂತೆ, ಮನೆಯ ಸುತ್ತ ಉಕ್ಕಿನ ಕಾಂಪೌಂಡ್ ನಿರ್ಮಾಣ ಮಾಡಿ ಬಹೃತ್ ಗೇಟ್‍ಗಳನ್ನು ಅಳವಡಿಸಲಾಗುತ್ತು.

    https://twitter.com/SanjayBragta/status/1103931152132300800

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv