Tag: ಹೈವೇ

  • ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ಬಾಗಲಕೋಟೆ: ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್ ಬಿ ತಿಮ್ಮಾಪುರ (R B Timmapur) ಬೆಂಬಲಿಗನೊಬ್ಬ ಧಾರವಾಡ-ವಿಜಯಪುರ (Dharwad V ijayapura) ಹೆದ್ದಾರಿಯಲ್ಲಿ ಡಿವೈಡರ್ ಒಡೆಸಿ ದರ್ಪ ತೋರಿರುವ ಘಟನೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ನಡೆದಿದೆ.

    ಕಾಂಗ್ರೆಸ್ (Congress) ಮುಖಂಡ ಕೃಷ್ಣಾ ಪರೆಡ್ಡಿ ಯಂತ್ರ ತರಿಸಿ ಮುಂದೆ ನಿಂತು ಡಿವೈಡರ್ ತೆರವುಗೊಳಿಸಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.  ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಕೃಷ್ಣಾ ಪರೆಡ್ಡಿ ತನ್ನ ಗೊಬ್ಬರದ ಅಂಗಡಿಗೆ ಡಿವೈಡರ್ ತೊಂದರೆಯಾಗುತ್ತದೆಂದು ಒಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಡಿವೈಡರ್ ತೆರವು ಖಂಡಿಸಿ ದಿಢೀರ್‌ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕರ ಆಸ್ತಿಯಾದ ರಸ್ತೆ ವಿಭಜಕವನ್ನು ಹೇಗೆ ಒಡೆದು ಹಾಕುತ್ತಾರೆ? ಎಲ್ಲಾ ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಮುದ್ದಾಪುರ ಗ್ರಾಮಸ್ಥರು ದೂರಿದರು.

  • ಕಾರವಾರದಲ್ಲಿ ಅಬ್ಬರದ ಮಳೆಗೆ ಕುಸಿದ ಗುಡ್ಡ

    ಕಾರವಾರದಲ್ಲಿ ಅಬ್ಬರದ ಮಳೆಗೆ ಕುಸಿದ ಗುಡ್ಡ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ಕಳೆದ ಎರಡು ದಿನದಿಂದ ಸುರಿದ ಅಬ್ಬರದ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಗಿದ್ದು, ಹೆದ್ದಾರಿಯ ಒಂದು ಭಾಗದ ಸಂಚಾರವನ್ನು ಬಂದ್ ಮಾಡಲಾಗಿದೆ.

    ಕಾರವಾರ ನಗರದ ಟನಲ್ ಭಾಗ, ಬಿಣಗಾದ ಹೆದ್ದಾರಿ ಭಾಗದ ಮೂರು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗೋವಾ-ಕಾರವಾರ-ಮಂಗಳೂರು ಹೆದ್ದಾರಿ 66 ಒಂದು ಭಾಗದ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ಐಪಿಎಲ್ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಅತಿಥಿ

    ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿಯ 19 ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಎಚ್ಚರಿಕೆಯಿಂದ ಸಂಚರಿಸಲು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

  • ಕೊಡಗಿಗೆ ಮಂತ್ರಿ ಸ್ಥಾನ ಬೇಕೇಬೇಕು- ಪ್ರತಾಪ್ ಸಿಂಹ ಆಗ್ರಹ

    ಕೊಡಗಿಗೆ ಮಂತ್ರಿ ಸ್ಥಾನ ಬೇಕೇಬೇಕು- ಪ್ರತಾಪ್ ಸಿಂಹ ಆಗ್ರಹ

    ಮಡಿಕೇರಿ: ಕೊಡಗಿಗೆ ಮಂತ್ರಿ ಸ್ಥಾನ ಬೇಕೇ ಬೇಕು, ವಿಧಾನಸಭಾಧ್ಯಕ್ಷರಾಗಿದ್ದ ಸಂದರ್ಭ ಕೆ.ಜಿ.ಬೋಪಯ್ಯ ಸರ್ಕಾರವನ್ನೇ ರಕ್ಷಿಸಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಕೂಡ ಮಂತ್ರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಡಗು ಸಣ್ಣ ಜಿಲ್ಲೆಯಾಗಿದ್ದರೂ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಕೊಡಗಿಗೆ ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಸ್ತೆ ಬಳಿ ಮಳೆಗಾಲದಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿರುವುದು ಮತ್ತು ಎರಡನೇ ಮೊಣ್ಣಂಗೇರಿ ಬಳಿ ಹೆದ್ದಾರಿಯಲ್ಲಿಯೇ ಬಿರುಕು ಬಿಟ್ಟಿರುವ ಸ್ಥಳವನ್ನು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಸವರಾಜ ಬೊಮ್ಮಾಯಿ ಚಿಕ್ಕಂದಿನಿಂದಲೂ ರಾಜಕೀಯದ ಬೆಸುಗೆ ಹೊಂದಿದವರು. ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಹೇಗೆ ಅಧಿಕಾರ ನಿಭಾಯಿಸಿದರು ಎಂಬುದೂ ಬಸವರಾಜ ಅವರಿಗೆ ತಿಳಿದಿದೆ. ಶಾಂತಿಯುತವಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

    ಮಂಗಳೂರು ಹೆದ್ದಾರಿಯಲ್ಲಿ ಬಿರುಕು
    ಮೂರು ವರ್ಷಗಳಿಂದ ಕೊಡಗಿನಲ್ಲಿ ಸತತವಾಗಿ ಮಹಾಮಳೆ ಆಗುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಸಂಪಾಜೆಯವರೆಗೆ 18 ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಹೀಗಿದ್ದರೂ ಮತ್ತೆ ಸಣ್ಣ ಪ್ರಮಾಣದ ಭೂಕುಸಿತ ಕಂಡುಬಂದ. ಹಿನ್ನಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸಲಹೆಯಂತೆ ಸಂಪಾಜೆಯವರೆಗೆ ಹೆಚ್ಚುವರಿಯಾಗಿ 22 ಕಡೆ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

    ಎರಡನೇ ಮೊಣ್ಣಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆ ಮಧ್ಯೆಯೇ ಬಿರುಕು ಬಂದಿರುವುದಕ್ಕೆ ಜಲಸ್ಫೋಟ ಕಾರಣವಾಗಿರಬಹುದೇ ಎಂದು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರಿಂದ ಮಣ್ಣು ಪರೀಕ್ಷೆ ಮತ್ತು ಸ್ಥಳ ಪರಿಶೀಲನೆ ಕೈಗೊಂಡು ನೈಜವಾದ ಕಾರಣ ಕಂಡುಕೊಳ್ಳಲಾಗುತ್ತದೆ. ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಒತ್ತಡ ಹೆಚ್ಚಾಗಿರುವುದೂ ರಸ್ತೆ ಬಿರುಕು ಹಾಗೂ ಭೂಕುಸಿತಕ್ಕೆ ಕಾರಣ. ಆದರೆ ಪರಿಣಿತರ ತಂಡದ ಪರಿಶೀಲನೆ ನಂತರ ಇದು ಗೊತ್ತಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

    ಸೈನಿಕನ ಕುಟುಂಬಕ್ಕೆ ಸೂಕ್ತ ರಕ್ಷಣೆ
    ಮಡಿಕೇರಿ ಸಮೀಪದ ಬೋಯಿಕೇರಿ ಬಳಿ ಸೈನಿಕ ಅಶೋಕ್ ಮೇಲೆ ದುಷ್ಕರ್ಮಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಮಾತ್ರ ಬಂಧಿಸಲಾಗಿದೆ. ಆದರೆ ಸೈನಿಕರ ಮೇಲಿನ ಹಲ್ಲೆಕೋರರು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಘಟನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಬಂಧಿಸಲೇಬೇಕು ಎಂದು ಹೇಳಿದ್ದಾರೆ.

    ಅಂಬುಲೆನ್ಸ್ ಚಾಲಕ ಮಾಡಿರುವ ವೀಡಿಯೋ ಪರಿಶೀಲಿಸಿ, ಪೊಲೀಸರು ಸೂಕ್ತ ತನಿಖೆ ಕೈಗೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಶಾಸಕ ಬೋಪಯ್ಯ ಕೂಡ ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ. ಕೊಡಗಿನಲ್ಲಿ ಘಟನೆ ಸಂಬಂಧಿತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಗಸ್ಟ್ 20ರ ನಂತರ ಸೈನಿಕ ಕರ್ತವ್ಯಕ್ಕೆ ತೆರಳಿದ ಬಳಿಕ ಕುಟುಂಬದ ರಕ್ಷಣೆ ಬಗ್ಗೆ ಆತಂಕ ಇದೆ. ಖಂಡಿತವಾಗಿಯೂ ಸರ್ಕಾರ ಸೈನಿಕರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲಿದೆ ಎಂದು ಪ್ರತಾಪ್ ಸಿಂಹ ಭರವಸೆ ನೀಡಿದರು.

  • ಕೊಡಗು, ಮೈಸೂರು ನಡುವೆ 8 ಪಥದ ರಸ್ತೆ – ಶೀಘ್ರವೇ ಕಾಮಗಾರಿ ಆರಂಭ

    ಕೊಡಗು, ಮೈಸೂರು ನಡುವೆ 8 ಪಥದ ರಸ್ತೆ – ಶೀಘ್ರವೇ ಕಾಮಗಾರಿ ಆರಂಭ

    – 3,120 ಕೋಟಿ ರೂ. ವೆಚ್ಚದ ಕಾಮಗಾರಿ
    – ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರತಾಪ್ ಸಿಂಹ

    ಮೈಸೂರು: ಮೈಸೂರು-ಬೆಂಗಳೂರು ನಡುವೆ 10 ಪಥದ ರಸ್ತೆ ಮಾಡುತ್ತಿದ್ದೇವೆ. ಅದೇ ರೀತಿ ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿಯನ್ನು 8 ಪಥದ ರಸ್ತೆ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಅವರು ಮೈಸೂರು-ಬೆಂಗಳೂರು ಹಾಗೂ ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಮೈಸೂರು-ಬೆಂಗಳೂರು ನಡುವೆ 10 ಪಥದ ರಸ್ತೆ ಮಾಡುತ್ತಿದ್ದೇವೆ. ಈ ಯೋಜನೆಯ ಒಟ್ಟು ಮೊತ್ತ 7,400 ಕೋಟಿ ರೂ. ಆಗಿದೆ. 6 ಪಥದ ರಸ್ತೆ ಎಕ್ಸ್‍ಪ್ರೆಸ್ ಹೈವೇ ಆಗಲಿದ್ದು, ಉಳಿದ ಎರಡು ಪಥ ರಸ್ತೆ ಸರ್ವಿಸ್ ರಸ್ತೆ ಆಗಲಿದೆ ಎಂದು ತಿಳಿಸಿದರು.

    ರಸ್ತೆ ಅಗಲೀಕರಣದಿಂದಾಗಿ ಮೈಸೂರು-ಬೆಂಗಳೂರು ನಡುವೆ ಇರುವ 3 ಗಂಟೆ ಪ್ರಯಾಣ ಅವಧಿ 1.5 ಗಂಟೆಗೆ ಇಳಿಯಲಿದೆ. ಜೊತೆಗೆ ಮೈಸೂರು ಬೆಂಗಳೂರು ನಡುವೆ 118 ಕಿಲೋ ಮೀಟರ್ ಮಾತ್ರ ಪ್ರಯಾಣ ಇರಲಿದೆ ಎಂದು ವಿವರಿಸಿದರು.

    ಇದೇ ರೀತಿ ಮೈಸೂರು-ಕೊಡಗು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಲಿದೆ. ಇಲ್ಲಿಯೂ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದ್ದು, 93 ಕಿಲೋಮೀಟರ್ ರಸ್ತೆಯನ್ನು 84 ಕಿ.ಮೀ.ಗೆ ಇಳಿಸಲಾಗುವುದು. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮೈಸೂರು-ಕೊಡಗು ಯೋಜನೆ ಮೊತ್ತ 3,120 ಕೋಟಿ ರೂ. ಆಗಿದೆ. ಅಲ್ಲದೆ ಈ ರಾಷ್ಟ್ರೀಯ ಹೆದ್ದಾರಿ ಮೈಸೂರು ನಗರದೊಳಗೆ ಹಾದು ಹೋಗುವುದಿಲ್ಲ. ಹೀಗಾಗಿ ಸಮಯ ಹಾಗೂ ಪ್ರಯಾಣದ ದೂರ ಕಡಿಮೆಯಾಗಲಿದೆ ಎಂದು ಹೇಳಿದರು.

    ಈ ಎರಡು ರಸ್ತೆಗಳಿಂದ ಮೈಸೂರು ಹಾಗೂ ಕೊಡಗು ಎರಡೂ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ. ಈ ಎರಡು ಯೋಜನೆಗಳು 2021ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತವೆ. ಅಲ್ಲದೆ ಈ ಯೋಜನೆಗಳು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾಗಿದ್ದು, ಕಾಮಗಾರಿ ಅಷ್ಟೇ ವೇಗದಿಂದ ನಡೆಯಲಿದೆ ಎಂದರು.

  • ಬೆಂಗಳೂರು ಸೇರಿ ಹಲವೆಡೆ ಇಂದು ಹೈವೇ ಬಂದ್ – ರಾಜ್ಯಾದ್ಯಂತ ರಸ್ತೆಗಿಳಿಯಲಿದ್ದಾರೆ ರೈತರು

    ಬೆಂಗಳೂರು ಸೇರಿ ಹಲವೆಡೆ ಇಂದು ಹೈವೇ ಬಂದ್ – ರಾಜ್ಯಾದ್ಯಂತ ರಸ್ತೆಗಿಳಿಯಲಿದ್ದಾರೆ ರೈತರು

    ಬೆಂಗಳೂರು: ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ರೈತರು ಇಂದು ಬೆಳಗ್ಗೆಯಿಂದಲೇ ಪ್ರತಿಭಟನೆಗೆ ಇಳಿಯಲಿದ್ದಾರೆ.

    2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ತೃಪ್ತಿದಾಯಕ ಬೆಲೆ ನೀಡಬೇಕು. ಇಂತಿಷ್ಟು ದಿನದೊಳಗೆ ಪಾವತಿಸಬೇಕು. ಹಾಗೂ ರೈತರಿಗೆ ತೃಪ್ತಿದಾಯಕವಲ್ಲದಿದ್ದರೆ ಕೋರ್ಟ್‍ಗೆ ಹೋಗಬಹುದಾಗಿತ್ತು. ಆದ್ರೆ ಈ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕುಮಾರಸ್ವಾಮಿ ಸರ್ಕಾರ, ರೈತರಿಗೆ ದ್ರೋಹ ಬಗೆದು ಉದ್ಯಮಿಗಳ ಪರ ನಿಂತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

    ಕಾಂಗ್ರೆಸ್‍ನ ಅವಧಿಯ ಈ ಯೋಜನೆ ಕೈಬಿಡಲು ಕಾಂಗ್ರೆಸ್‍ನವರು ಹೇಗೆ ಒಪ್ಪಿದ್ದಾರೆ ಎನ್ನುವುದು ರೈತರ ಮೊದಲ ಪ್ರಶ್ನೆಯಾಗಿದೆ.

    ಎಲ್ಲೆಲ್ಲಿ ಪ್ರತಿಭಟನೆ?
    ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಬೊಮ್ಮಸಂದ್ರದ ಸಮೀಪದ ರಾಷ್ಟ್ರೀಯ ಹೆದ್ದಾರಿ, ದೇವನಹಳ್ಳಿ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ರಾಷ್ಟ್ರೀಯ ಹೆದ್ದಾರಿ, ಮೈಸೂರು, ಮಂಡ್ಯ, ರಾಮನಗರ ಭಾಗದ ರಾಷ್ಟ್ರೀಯ ಹೆದ್ದಾರಿ, ಬಳ್ಳಾರಿ, ಹಾವೇರಿ, ಬೆಳಗಾವಿ ಭಾಗದ ರಾಷ್ಟ್ರೀಯ ಹೆದ್ದಾರಿ, ದಾವಣಗೆರೆ, ಸುತ್ತಮುತ್ತ ಇರುವ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗುವ ಸಾಧ್ಯತೆಯಿದೆ.

    ಅನ್ನದಾತರ ಬೇಡಿಕೆಗಳು ಏನು?
    ಭೂಸ್ವಾಧೀನ ಕಾಯಿದೆ ಜಾರಿಗೆ ರೈತರ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಭೂಸ್ವಾಧೀನವು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಾಲ್ಕು ಪಟ್ಟು ಬೆಲೆ ನೀಡಬೇಕು. ನಗರ ಪ್ರದೇಶವಾಗಿದ್ದರೆ ಎರಡು ಪಟ್ಟು ಬೆಲೆ ನೀಡಬೇಕು. ಉದ್ದೇಶಿತ ಯೋಜನೆಗೆ 3 ವರ್ಷಗಳಲ್ಲಿ ಭೂಮಿ ಬಳಸಬೇಕು. ಇಲ್ಲದಿದ್ದರೆ 5 ವರ್ಷಗಳಲ್ಲಿ ರೈತನಿಗೆ ಭೂಮಿ ವಾಪಸ್ ಕೊಡಬೇಕು. ರಾ.ಹೆ. 4ರ ಹಳ್ಳಿಗಳಿಗೆ ಓವರ್ ಬ್ರಿಡ್ಜ್, ಯೂ ಟರ್ನ್, ಸರ್ವಿಸ್ ರಸ್ತೆ ಕಲ್ಪಿಸಬೇಕು. ಸಾಲ ಮನ್ನಾದ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ, ಈ ಬಗ್ಗೆ ವಿವರ ನೀಡಬೇಕು. ಬರ ಪರಿಹಾರ, ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು.

  • ಹೈವೇ ದಾಟಿದ 3 ಮೀ. ಉದ್ದದ ಅನಕೊಂಡ!- ವಿಡಿಯೋ ನೋಡಿ

    ಹೈವೇ ದಾಟಿದ 3 ಮೀ. ಉದ್ದದ ಅನಕೊಂಡ!- ವಿಡಿಯೋ ನೋಡಿ

    ರಿಯೋ ಡಿ ಜನೈರೋ: 3 ಮೀ. ಉದ್ದದ ಅನಕೊಂಡ ಹೈವೇ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೌದು. ಹೆದ್ದಾರಿ ದಾಟುತ್ತಿದ್ದಾಗ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅನಕೊಂಡ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಯಾವಾಗಲೂ ಬ್ಯುಸಿಯಾಗಿ ಓಡಾಡುವ ವಾಹನಗಳ ದಟ್ಟಣೆಯಿರುವ ಬ್ರೆಜಿಲ್‍ನ ಪೊರ್ಟೊ ವೆಲೊ ನಗರದಲ್ಲಿ ಅನಕೊಂಡ ಕಾಣಿಸಿಕೊಂಡಿತ್ತು. ರಸ್ತೆ ದಾಟಲು ಒದ್ದಾಡುತ್ತಿದ್ದ ಬರೋಬ್ಬರಿ 3 ಮೀಟರ್ ಉದ್ದದ, 30 ಕೆಜಿ ತೂಕದ ಬೃಹತ್ ಅನಕೊಂಡವನ್ನು ಕಂಡು ಜನರು ದಂಗಾಗಿದ್ದರು. ಆದ್ರೆ ಹಾವನ್ನು ನೋಡಿ ಭಯಪಡದೇ ರಸ್ತೆ ದಾಟಲು ಒದ್ದಾಡುತ್ತಿದ್ದ ಹಾವಿಗೆ ತಮ್ಮ ವಾಹನಗಳನ್ನು ನಿಲ್ಲಿಸಿ, ಆ ಹಾವು ರಸ್ತೆ ದಾಟುವವರೆಗೂ ಕಾದು ನಂತರ ವಾಹನಗಳನ್ನು ಚಲಾಯಿಸಿದ್ದಾರೆ.

    https://twitter.com/brunzilla/status/1121828711651659777

    ವಾಹನ ಸವಾರರು ವಾಹನ ನಿಲ್ಲಿಸಿ ಅನಕೊಂಡ ರಸ್ತೆ ದಾಟುತ್ತಿರುವುದನ್ನು ನೋಡುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

  • ಡಿಸಿಎಂ ಪರಮೇಶ್ವರ್ ಮತ್ತೆ ಟ್ರಾಫಿಕ್ ದರ್ಬಾರ್

    ಡಿಸಿಎಂ ಪರಮೇಶ್ವರ್ ಮತ್ತೆ ಟ್ರಾಫಿಕ್ ದರ್ಬಾರ್

    – ಹೈವೇಯ ಎರಡು ರಸ್ತೆಯ ವಾಹನ ನಿಲ್ಲಿಸಿ ಒನ್‍ವೇ ನಲ್ಲಿ ಸಂಚಾರ

    ಬೆಂಗಳೂರು: ಡಿಸಿಎಂ ಪರಮೇಶ್ವರ್ ಮತ್ತೆ ಟ್ರಾಫಿಕ್ ದರ್ಬಾರ್ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೈವೇಯಲ್ಲಿ ಡಿಸಿಎಂ ಪರಮೇಶ್ವರ್ ಒನ್ ವೇ ದರ್ಬಾರ್ ನಡೆಸಿದ್ದಾರೆ.

    ರಾಮನಗರ ತಾಲೂಕಿನ ರಾಮನಹಳ್ಳಿ ಬಳಿ ಬೆಳಗ್ಗೆ 8 ಗಂಟೆಗೆ ಹೈವೇಯ ಎರಡು ರಸ್ತೆಯ ವಾಹನ ನಿಲ್ಲಿಸಿ ಡಿಸಿಎಂ ಪರಮೇಶ್ವರ್ ಒನ್ ವೇ ನಲ್ಲಿ 2 ಕಿ.ಮೀ. ಸಂಚರಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಹೈವೇಯ ಎರಡು ಬದಿಯಲ್ಲಿ 5 ನಿಮಿಷಕ್ಕೂ ಹೆಚ್ಚು ಕಾಲ ಪೊಲೀಸರು ವಾಹನ ತಡೆದು ನಿಲ್ಲಿಸಿದ್ದರು. ಇದನ್ನೂ ಓದಿ: ಡಿಸಿಎಂ ಪರಮೇಶ್ವರ್ ದಾದಾಗಿರಿ – ಮಳೆಯ ನಡುವೆಯೂ ಝಿರೋ ಟ್ರಾಫಿಕ್‍ನಲ್ಲಿ ಸಂಚಾರ!

    ಮಾಮೂಲಿ ರಸ್ತೆಯಲ್ಲಿ ವಾಹನ ದಟ್ಟಣೆ ಎಂಬ ಕಾರಣಕ್ಕೆ ರಾಮನಹಳ್ಳಿ ಬಳಿ 5 ನಿಮಿಷ ಕಾಲ ಪೊಲೀಸರು ಎರಡು ಬದಿಯ ರಸ್ತೆ ಸಂಚಾರ ತಡೆದಿದ್ದರು. ಆಗ ಡಿಸಿಎಂ ಪರಮೇಶ್ವರ್ ಒನ್ ವೇನಲ್ಲಿ 2 ಕಿ.ಮೀ ಬಂದು ಬೆಂಗಳೂರಿನತ್ತ ಸಂಚರಿಸಿದರು. ಇದನ್ನೂ ಓದಿ: ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ

    ಈ ಹಿಂದೆ ಮೂರು ಬಾರಿ ಬೆಂಗಳೂರಿನಲ್ಲಿ ಪರಮೇಶ್ವರ್ ಅವರು ಜನರಿಗೆ ಸಮಸ್ಯೆ ನೀಡಿ ಝೀರೋ ಟ್ರಾಫಿಕ್ ಬಳಸಿ ಸಂಚರಿಸಿದ್ದರು. ಆಗ ಝೀರೋ ಟ್ರಾಫಿಕ್ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಗಣ್ಯವ್ಯಕ್ತಿ, ರಾಜ್ಯಪಾಲರು ಹಾಗೂ ಗೃಹ ಸಚಿವರಿಗೂ ಸಹ ಝೀರೋ ಟ್ರಾಫಿಕ್ ಅವಕಾಶ ನೀಡಲಾಗಿದೆ. ಹೀಗಾಗಿ ಇದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. ಝೀರೋ ಟ್ರಾಫಿಕ್ ಅಗತ್ಯ ಇದೆ ಎನ್ನುವುದರಿಂದ ಅವಕಾಶ ನೀಡಲಾಗಿದೆ. ಈ ಹಿಂದಿನ ಗೃಹ ಸಚಿವರು ಬೇಡ ಎಂದಿದ್ದರು. ಹಾಗಂತ ನಾನು ಸಹ ಬೇಡ ಎನ್ನಬೇಕಿಲ್ಲ. ನನಗೆ ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಾನು ಝೀರೋ ಟ್ರಾಫಿಕ್ ತೆಗೆದುಕೊಳ್ಳುವುದು ಮಾಧ್ಯಮಗಳಿಗೆ ಹೊಟ್ಟೆ ಉರಿ ಎನ್ನುವ ಮೂಲಕ ತಮ್ಮ ಅಧಿಕಾರದ ದರ್ಪ ತೋರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ವಾರಣಾಸಿ: ವಾರಣಾಸಿಯಿಂದ 26 ಕಿ.ಮಿ ದೂರದಲ್ಲಿರುವ ಬಾಬತ್‍ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ತನ್ನ ರನ್‍ವೇ ಕೆಳಗಡೆ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ.

    ಈ ಮೂಲಕ ರನ್‍ವೇ ಕೆಳಗೆ ಅಂಡರ್ ಪಾಸ್ ಹೈವೇ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಈ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಅಂಡರ್‍ಪಾಸ್ ರಸ್ತೆ ನಿರ್ಮಾಣವು ವಿಮಾನಗಳ ರನ್‍ವೇಯನ್ನು, ವಿಮಾನಗಳ ನಿಲ್ದಾಣ ಪಥ ಹಾಗು ಹೆದ್ದಾರಿಯನ್ನು ನಾಲ್ಕು ರಸ್ತೆಗಳಾಗಿ ಪರಿವರ್ತಿಸುತ್ತದೆ.

    ಅಂಡರ್‍ಪಾಸ್ ರಸ್ತೆಗಳ ನಿರ್ಮಾಣ ಹಾಗೂ ವಿಮಾನಗಳ ರನ್‍ವೇ ವಿಸ್ತರಣೆ ಕಾರ್ಯ ವಾರಣಾಸಿ-ಲಖ್ನೋ ರಾಷ್ಟ್ರೀಯ ಹೆದ್ದಾರಿ 56 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದೆ. ಈಗಿರುವ ರನ್‍ವೇ 2750 ಮೀ. ಗಳಾಗಿದ್ದು ಸರಕು ಸಾಗಾಣಿಕೆ ಹಾಗೂ ಬೋಯಿಂಗ್ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ 4075ಮೀ ಗೆ ವಿಸ್ತರಿಸಬೇಕೆಂದು ಪ್ರಸ್ತಾಪಿಸಿದೆ. ಅದರಂತೆಯೇ ಈ ರನ್‍ವೇ ಹಾಗೂ ಅಂಡರ್‍ಪಾಸ್ ಕಾಮಗಾರಿಗಳೆರೆಡೂ ಏಕಕಾಲಕ್ಕೆ ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರಕ್ರಿಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕುರಿತಂತೆ ಇರುವ ದೀರ್ಘಾವಧಿ ಸಮಸ್ಯೆಗಳು ಪರಿಹಾರವಾಗಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಇರುವ ಹೆದ್ದಾರಿಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್.ಬಿ ಸಿಂಗ್ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 56 ನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ 2013 ರಲ್ಲಿ ಅನುಮತಿ ನೀಡಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೆದ್ದಾರಿ ಪ್ರಾಧಿಕಾರವೂ ವಾರಣಾಸಿ- ಸುಲ್ತಾನ್‍ಪುರ ಗಳಲ್ಲಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಪೂರ್ಣಗೊಳಿಸಲಾಗಲಿಲ್ಲ.  2014ರಲ್ಲಿ ಕೇಂದ್ರದಲ್ಲಾದ ಸಿಬ್ಬಂದಿ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆಗಳಿಂದಾಗಿ ಕಾಮಗಾರಿ ಭರದಿಂದ ಸಾಗಿದೆ.

    2014ರ ಮಾರ್ಚ್ 27 ರಂದು ನಾಗರಿಕ ವಿಮಾನಯಾನ ನಿರ್ದೇಶಕರು ಉತ್ತರ ಪ್ರದೇಶ ಸರಕಾರಕ್ಕೆ ಈ ಕುರಿತು ಪತ್ರವೊಂದನ್ನು ಕಳುಹಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. 2017 ರಲ್ಲಿ ಪ್ರಾಧಿಕಾರವು ಕಾಮಗಾರಿಗೆ ಅಗತ್ಯ ಭೂಮಿಯನ್ನು ಗುರುತಿಸಿದ ನಂತರ ಈಗ ಕಾಮಗಾರಿ ವೇಗವನ್ನು ಪಡೆದಿದೆ.

  • ಪವರ್ ಸ್ಟಾರ್ ಫುಟ್‍ಪಾತ್‍ ನಲ್ಲಿ ನಿಂತು ತಿಂಡಿ ತಿಂದಿದ್ದರ ಹಿಂದಿನ ಸ್ಟೋರಿ ಓದಿ

    ಪವರ್ ಸ್ಟಾರ್ ಫುಟ್‍ಪಾತ್‍ ನಲ್ಲಿ ನಿಂತು ತಿಂಡಿ ತಿಂದಿದ್ದರ ಹಿಂದಿನ ಸ್ಟೋರಿ ಓದಿ

    ಬೆಂಗಳೂರು: ದೊಡ್ಮನೆ ಮಕ್ಕಳಿಗೆ ಯಾವತ್ತೂ ದೊಡ್ಡ ಮನಸೇ ಇರುತ್ತದೆ. ಅಣ್ಣಾವ್ರ ಕುಡಿಗಳಾದರೂ ಅದನ್ನು ತೋರಿಸಿದವರಲ್ಲ. ಆ ಹೆಸರನ್ನು ಇಟ್ಟುಕೊಂಡು ಮೆರೆದವರಲ್ಲ. ಅದಕ್ಕೆ ಇಂದಿಗೂ ಕನ್ನಡಿಗರು ದೊಡ್ಮನೆಗೆ ಅದೇ ಪ್ರೀತಿ, ಗೌರವ ತೋರಿಸುತ್ತಾರೆ. ಅದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪುನೀತ್ ರಾಜ್‍ಕುಮಾರ್ ಅಂಥದ್ದೊಂದು ಘಟನೆಗೆ ಕಾರಣರಾಗಿ ಅಚ್ಚರಿ ಮೂಡಿಸಿದ್ದಾರೆ.

    ಇದು ರಾಜಕುಮಾರನ ಇನ್ನೊಂದು ಮುಖ. ಇದು ನಡೆದಿದ್ದು ಹೊಸಪೇಟೆಯ ಹೈವೇ ರೋಡಿನಲ್ಲಿ. ಟಗರು ಸಿನಿಮಾ ಆಡಿಯೋ ರಿಲೀಸ್ ಸಮಾರಂಭಕ್ಕಾಗಿ ಪುನೀತ್ ಹೊಸಪೇಟೆಗೆ ಹೋಗಿದ್ದರು. ಆದರೆ ಅದೇ ದಿನ ರಾತ್ರಿ ಲೇಟಾಗಿದ್ದರಿಂದ ಅಲ್ಲಿಂದ ಬೆಂಗಳೂರಿಗೆ ಮರಳಲು ಆಗಲಿಲ್ಲ. ಬೆಳಗ್ಗೆ ಬೇಗ ಎದ್ದು ಅಲ್ಲಿಂದ ಹೊರಟಿದ್ದಾರೆ. ಜೊತೆಗೆ ನಿರ್ಮಾಪಕ ರಾಜಕುಮಾರ್ ಮತ್ತು ಸ್ಥಿರ ಚಿತ್ರ ಛಾಯಾಗ್ರಾಹಕ ಚಂದನ್ ಕೂಡ ಇದ್ದರು.

    ಹೋಟೆಲ್‍ ನಲ್ಲಿ ತಿಂಡಿ ತಿನ್ನುತ್ತಾ ಕುಳಿತರೆ ತಡವಾಗುತ್ತದೆಂದು ದಾರಿಯಲ್ಲಿ ಎಲ್ಲಾದರೂ ತಿಂಡಿ ಮುಗಿಸಿದರಾಯಿತೆಂದು ಕಾರು ಏರಿದ್ದಾರೆ. ಹೊಸಪೇಟೆ ದಾಟಿ ಹೈವೇಗೆ ಬರುತ್ತಿದ್ದಂತೆಯೇ ಕಣ್ಣಿಗೆ ಬಿದ್ದಿದೆ ಆ ಮೊಬೈಲ್ ಕ್ಯಾಂಟೀನ್. ಹೋಟೆಲ್ ನಲ್ಲಿ ತಿಂದರೂ, ರೋಡಿನ ಪಕ್ಕ ನಿಂತು ತಿಂದರೂ ಅದು ಅನ್ನವೇ ಎನ್ನುವುದು ಅಣ್ಣಾವ್ರು ಹೇಳುತ್ತಿದ್ದ ತೂಕದ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಪುನೀತ್ ಕೂಡ ಮೊಬೈಲ್ ಕ್ಯಾಂಟೀನ್ ಮುಂದೆ ಗಾಡಿ ನಿಲ್ಲಿಸಿ ಇಡ್ಲಿ, ವಡೆ ಇತ್ಯಾದಿ ತಿಂಡಿಗಳನ್ನು ತಿಂದರು.

    ಖುದ್ದು ಅಪ್ಪು ಅಂಥದ್ದೊಂದು ಜಾಗದಲ್ಲಿ ಬಂದು ನಿಂತರೆ ಯಾರಿಗೆ ತಾನೇ ಶಾಕ್ ಆಗುವುದಿಲ್ಲ ಹೇಳಿ? ಕ್ಯಾಂಟೀನ್ ಮಾಲೀಕನಿಗೂ ಅದೇ ಆಗಿದೆ. ಓಡಾಡುತ್ತಿದ್ದ ಜನರೂ ಕುತೂಹಲದಿಂದ ಪುನೀತ್ ಅವರನ್ನು ಮಾತನಾಡಿಸಿ ಖುಷಿ ಪಟ್ಟಿದ್ದಾರೆ. ಈ ರೀತಿ ಅಪ್ಪ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಅಂಜನಿಪುತ್ರ.

     

     

     

  • ಹೈವೇಯಲ್ಲಿ ಹೋಗೋ ವಾಹನ ಸವಾರರೇ ಹುಷಾರ್: ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಕಾದಿದೆ ಆಪತ್ತು!

    ಹೈವೇಯಲ್ಲಿ ಹೋಗೋ ವಾಹನ ಸವಾರರೇ ಹುಷಾರ್: ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಕಾದಿದೆ ಆಪತ್ತು!

    ಬೆಂಗಳೂರು: ಹೈವೇಯಲ್ಲಿ ಓಡಾಡುವ ವಾಹನಸವಾರರೇ ಇನ್ಮುಂದೆ ಹುಷಾರಾಗಿರಬೇಕು. ಯಾಕಂದ್ರೆ ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಆಪತ್ತು ನಿಮಗೆ ಕಟ್ಟಿಟ್ಟು ಬುತ್ತಿ.

    ಏನಿದು ವಿಚಿತ್ರ ಸ್ಟೋರಿ ಅಂತಾ ಯೋಚನೆ ಮಾಡ್ತಿದ್ದೀರಾ. ಹೌದು. ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಇಂತಹ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರ- ಬೇಗೂರು ಮುಖ್ಯ ರಸ್ತೆಯ ನಡುವೆ ಯುವತಿಯೊಬ್ಬಳು ನಿಂತಿರುತ್ತಾಳೆ. ನೈಸ್ ರಸ್ತೆ ಕಿರಿದಾಗಿದ್ದರಿಂದ ವಾಹನ ನಿಧಾನವಾಗಿ ಚಲಿಸುತ್ತಿರುತ್ತವೆ. ಇದನ್ನೇ ಬಂಡವಾಳವನ್ನಾಗಿಸಿ ವಾಹನಗಳ ಲೈಟ್ ಬೆಳಕಿನಲ್ಲಿ ಮೈಮಾಟ ಪ್ರದರ್ಶಿಸಿಸುತ್ತಿರುವ ಯುವತಿಯೊಬ್ಬಳನ್ನು ಕಂಡು ನೀವೇನಾದ್ರೂ ವಾಹನ ನಿಲ್ಲಿಸಿದ್ದೀರಿ ಅಂದ್ರೆ ನಿಮ್ಮ ಕಥೆ ಮುಗಿಯಿತ್ತು ಅಂತಾನೇ ಅರ್ಥ. ಯಾಕಂದ್ರೆ ಯುವತಿ ನಿಮ್ಮೊಂದಿಗೆ ಆ ಕೂಡಲೇ ವ್ಯವಹಾರ ಕುದುರಿಸಿ ಕತ್ತಲ ದಾರಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲದೇ ಕತ್ತಲಲ್ಲಿ ಕುಳಿತಿದ್ದ ಆಕೆಯ ಕಡೆಯ ಹುಡುಗರಿಂದ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕುತ್ತಾಳೆ. ಬಳಿಕ ಎಲ್ಲರೂ ಸೇರಿ ಚಾಲಕರನ್ನು ಬೆದರಿಸಿ ಹಣ ಲೂಟಿ ಮಾಡುತ್ತಾರೆ.

    ಘಟನೆಯ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಪೊಲೀಸರು ತಡರಾತ್ರಿ ದಾಳಿ ನಡೆಸಿ ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೋನಿಷಾ, ಮುತ್ತು, ಪುನೀತ್, ತುಳಸಿರಾಮ್, ಅರುಣ್ ಯಶುರಾಜ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ವಿಘ್ನೇಶ್, ಸ್ಟೀಫನ್, ಬಬ್ಲೂ, ಅಲೆಕ್ಸ್ ಹಾಗೂ ಅಮರ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.