Tag: ಹೈದರಾಬಾದ್ ಕರ್ನಾಟಕ

  • ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ- ಕಾರಜೋಳ

    ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ- ಕಾರಜೋಳ

    ರಾಯಚೂರು: ರಾಯಚೂರು: ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ.ಗಳ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಕುರಿತು ಸರ್ವೆ ಬಹುತೇಕ ಮುಗಿದಿದೆ, ಕೆಲ ಜಿಲ್ಲೆಗಳ ವರದಿ ಬರಬೇಕಿದೆ. ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ನಿಯಮಗಳ ಪ್ರಕಾರ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ತಗ್ಗು ಪ್ರದೇಶದ ಜನರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಹಳೇ ಮನೆಗಳನ್ನು ಬಿಟ್ಟು ಬಂದಲ್ಲಿ ಹೊಸ ಮನೆ ಕಟ್ಟಿಕೊಡುತ್ತೇವೆ. ಇಲ್ಲದಿದ್ದರೆ ಮನೆ ರಿಪೇರಿಗೆ ಹಣ ಕೊಡುತ್ತೇವೆ. ಎನ್‍ಡಿಆರ್‍ಎಫ್ ನಿಂದ ಹಣ ಬರುವವರೆಗೆ ಕಾಯುವುದಿಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

    ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಭಾಗದ ಜಿಲ್ಲೆಗಳಲ್ಲಿ ಕೇವಲ ಶೇ.57ರಷ್ಟು ಹಣ ಮಾತ್ರ ಖರ್ಚಾಗಿದೆ. ಡಿಸೆಂಬರ್ ಒಳಗೆ ಶೇ.75ರಷ್ಟು ಅಭಿವೃದ್ಧಿ ಕಾರ್ಯ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ನೀಡುವ ಹಣ ರೈತರಿಗೆ ಸಾಲುವುದಿಲ್ಲ. ಹೀಗಾಗಿ ಹೆಚ್ಚು ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಒತ್ತಾಯ ಮಾಡಿದ್ದೇವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಹಿಂದಿ ಹೇರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡ 2,500 ವರ್ಷಗಳ ಹಳೆಯ ಭಾಷೆಯಾಗಿದ್ದು, ಬೇರೆ ಭಾಷಿಕರು ನಮ್ಮನ್ನ ಆಳಿದರೂ ಸಹ ಕನ್ನಡ ಗಟ್ಟಿಯಾಗಿ ನಿಂತಿದೆ. ಆಗಲೂ ಭಾಷೆ ನಶಿಸಿಹೋಗಿಲ್ಲ, ಹೋಗುವುದೂ ಇಲ್ಲ. ಕನ್ನಡ ಭಾಷೆ ತಾಯಿ ಸಮಾನ ಎಂದು ತಿಳಿಸಿದರು.

  • ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ಸಹ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕೈಗೊಂಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ.

    ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವರ್ಷಧಾರೆ ಯೋಜನೆಯಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಮೋಡ ಬಿತ್ತನೆಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಟೇಕ್ ಆಫ್ ಆಗಿದ್ದು, ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ಕೆಲವೆಡೆ ಮಳೆಯಾದರೂ ಸಹ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ಅಲ್ಲದೆ ಕೆಲ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿತ್ತು. ಹೀಗಾಗಿ ಮೋಡ ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಧಾರವಾಡ ಮತ್ತು ಗದಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆಯಿಂದಾದರೂ ಮಳೆ ಬರುತ್ತಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಮುಂಗಾರು ಮಳೆ ಕೈಕೊಟ್ಟಿದ್ದು, ಕೆಲವೆಡೆ ಮುಂಗಾರು ತಡವಾಗಿ ಆಗಮಿಸಿ ಬೆಳೆಯನ್ನು ನಾಶ ಪಡಿಸಿದೆ. ಹೀಗಾಗಿ ಮೋಡ ಬಿತ್ತನೆಯಿಂದ ಬೆಳೆಗಳಿಗೆ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಮಣ್ಣಿನಲ್ಲಿರುವ ತೇವಾಂಶ ಕುರಿತು ಉಪಗ್ರಹಗಳು ಕಳುಹಿಸುವ ಚಿತ್ರವನ್ನು ಆಧರಿಸಿ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹಳದಿ ಮತ್ತು ಕಿತ್ತಳೆ ಬಣ್ಣ ಚಿತ್ರಗಳು ಸಿಗುವ ಕಡೆಗಳಲ್ಲಿ ಮಳೆ ಕೊರತೆ ಇದೆ ಎಂದು ಪರಿಗಣಿಸಿ ಅಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ.

    ಮೋಡಗಳ ಕೆಳಗೆ ಸಂಚರಿಸುವ ವಿಮಾನ ತಾನು ಹೊತ್ತು ತಂದಿರುವ ಸೋಡಿಯಂ ಕ್ಲೋರೈಡ್ ಮತ್ತು ಪೊಟಾಷಿಯಂ ಕ್ಲೋರೈಡ್ ಮಿಶ್ರಿತ ಹೊಗೆಯನ್ನು ಮೋಡಗಳ ಮೇಲೆ ಚಿಮ್ಮಿಸುತ್ತದೆ. ಆ ಮೋಡ ಕರಗಿ ಮಳೆ ಬರುತ್ತದೆ. ಮೋಡ ಬಿತ್ತನೆಗಾಗಿ ಸರ್ಕಾರ 45 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

  • ಖರ್ಗೆ ಬೆಳೆದಿದ್ದಾರೆ ಆದ್ರೆ ಪ್ರದೇಶ ಮಾತ್ರ ಇನ್ನೂ ಹಿಂದುಳಿದಿದೆ: ಅಂಕಿಸಂಖ್ಯೆಯೊಂದಿಗೆ ಬಿಜೆಪಿ ತಿರುಗೇಟು

    ಖರ್ಗೆ ಬೆಳೆದಿದ್ದಾರೆ ಆದ್ರೆ ಪ್ರದೇಶ ಮಾತ್ರ ಇನ್ನೂ ಹಿಂದುಳಿದಿದೆ: ಅಂಕಿಸಂಖ್ಯೆಯೊಂದಿಗೆ ಬಿಜೆಪಿ ತಿರುಗೇಟು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ತಿರುಗೇಟು ನೀಡಿದೆ.

    ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಿದ ಅನುದಾನವೆಷ್ಟು? ಅದರಲ್ಲಿ ಬಳಕೆಯಾಗಿರೋ ಹಣವೆಷ್ಟು ಎಂಬ ಮಾಹಿತಿಯನ್ನ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    2013-14ರಲ್ಲಿ 150 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ ಒಂದು ರೂಪಾಯಿಯೂ ಖರ್ಚು ಮಾಡಿಲ್ಲ. ನಿಗದಿಪಡಿಸಲಾದ ಅನುದಾನದಲ್ಲಿ ಕೇವಲ 20% ಅನುದಾನ ಬಿಡುಗಡೆಯಾಗಿದೆ. ಹಾಗೇ 2014-15ರಲ್ಲಿ 600 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ 123.35 ರೂ. ಖರ್ಚಾಗಿದೆ. 40% ಯೋಜನೆಗಳು ಇನ್ನೂ ಅಪೂರ್ಣವಾಗಿದೆ.

    2015-16ರಲ್ಲಿ 1000 ಕೋಟಿ ರೂ. ನಿಗದಿಯಾಗಿದ್ದು 389 ಕೋಟಿ ರೂ. ಖರ್ಚು ಮಾಡಲಾಗಿದೆ. ಕೇವಲ 35% ಕೆಲಸ ಮಾತ್ರ ಮುಗಿದಿದೆ. 2016-17ರಲ್ಲಿ 1000 ಕೋಟಿ ನಿಗದಿಯಾಗಿದ್ದು, 622 ಕೋಟಿ ರೂ. ಖರ್ಚಾಗಿದೆ. 2727 ಯೋಜನೆಗಳಲ್ಲಿ 12 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಖರ್ಗೆ ಬೆಳೆದಿದ್ದಾರೆ ಆದ್ರೆ ಪ್ರದೇಶ ಮಾತ್ರ ಇನ್ನೂ ಹಿಂದುಳಿದಿದೆ ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ: ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನ ನೀಡಿದ್ದು ಅದನ್ನ ಅಭಿವೃದ್ಧಿಪಡಿಸಲು, ಹಿಂದಕ್ಕೆಳೆಯುವ ಸಲುವಾಗಿ ಅಲ್ಲ. ಅನುದಾನಗಳಿಂದ ಕಾಂಗ್ರೆಸ್ ನಾಯಕರು ಮಾತ್ರ ಲಾಭ ಪಡೆದಿದ್ದಾರೆ. ರಾಹುಲ್ ಗಾಂಧಿ ಸುಮ್ಮನೆ ಏನೇನೋ ಮಾತನಾಡೋ ಬದಲು ಇದಕ್ಕೆ ಉತ್ತರಿಸಲಿ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ದೇಶಕ್ಕೆ ಏನು ಮಾಡದೇ ಹೋಗಿದ್ರೆ ಇಷ್ಟು ಪ್ರಗತಿ ಆಗ್ತಿತ್ತಾ: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

  • ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಕಲಬುರಗಿ: ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಂದೇ ಕಳಂಕ ಸೇರಿಕೊಳ್ತಿದೆ. ಆಹಾರ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಇದೀಗ ಹೈ.ಕ. ಅಭಿವೃದ್ಧಿ ಹೆಸರಲ್ಲಿ ಹೈಕಮಾಂಡ್ ಓಲೈಕೆಗೆ ಹಣ ಪೋಲು ಮಾಡಿರುವ ಬಗ್ಗೆ ಗೊತ್ತಾಗಿದೆ.

    ಹೈದರಾಬಾದ್ ಕರ್ನಾಟಕ ರೀಜನಲ್ ಡೆವಲಪ್‍ಮೆಂಟ್ ಬೋರ್ಡ್ ಇರೋದು ಹೈ-ಕ ಪ್ರದೇಶದ ಅಭಿವೃದ್ಧಿಗಾಗಿಯೇ ಅಂತಾ ಜನರು ನಂಬಿದ್ರು. ಆದ್ರೆ ಮಂಡಳಿಗೆ ಬರುವ ಹಣ ರಾಜಕೀಯ ಪ್ರಚಾರಕ್ಕೆ ಪೋಲಾಗ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

    2014-15ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಲಬುರಗಿಗೆ ಆಗಮಿಸಿದ್ರು. ಈ ವೇಳೆ ಬೃಹತ್ ಸಮಾವೇಶ ನಡೆಸಲಾಯ್ತು. ಈ ಸಮಾವೇಶಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

    ಅಲ್ಲದೆ ಮಂಡಳಿ ಅಧ್ಯಕ್ಷರ ಕಾರು ಅಪಘಾತವಾದ್ರೆ ಎಫ್‍ಐಆರ್ ಮಾಡಿಸಿ, ವಿಮಾ ಕಂಪನಿಯಿಂದ ಹಣವನ್ನು ಪಡೀಬೇಕು. ಆದ್ರೆ ಹಿಂದಿನ ಅಧ್ಯಕ್ಷ ಖಮರುಲ್ ಇಸ್ಲಾಂ ಅವರು ನಿಯಮವನ್ನು ಗಾಳಿಗೆ ತೂರಿ ಮಂಡಳಿಯಿಂದ 2 ಲಕ್ಷದ 26 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಅನ್ನೋದು 2014-15ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ.