Tag: ಹೈಡ್ರಾಕ್ಸಿಕ್ಲೋರೋಕ್ವಿನ್

  • ಮತ್ತೆ WHO ಎಡವಟ್ಟು – ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಗೆ ಅನುಮತಿ

    ಮತ್ತೆ WHO ಎಡವಟ್ಟು – ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಗೆ ಅನುಮತಿ

    ಜಿನಿವಾ: ಆರಂಭದಲ್ಲಿ ಚೀನಾ ಮಾತನ್ನು ನಂಬಿ ಕೋವಿಡ್ 19 ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ವಿಚಾರದಲ್ಲಿ ಎಡವಟ್ಟು ಮಾಡಿ ಮತ್ತೆ ವಿಜ್ಞಾನಿಗಳು ಮತ್ತು ವೈದ್ಯರ ಕೆಂಗಣ್ಣಿಗೆ ಗುರಿಯಾಗಿದೆ.

    ಕೋವಿಡ್ 19ಗೆ ಔಷಧಿ ಪತ್ತೆಯಾಗದ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್(ಎಚ್‍ಸಿಕ್ಯೂ) ಬಳಕೆ ಮಾಡಲಾಗುತ್ತಿತ್ತು. ಈ ಮಧ್ಯೆ ನಿಯತಕಾಲಿಕೆಯಯಲ್ಲಿ ಪ್ರಕಟವಾದ ಅಧ್ಯಯನದ ಆಧಾರದಲ್ಲಿ ಡಬ್ಲ್ಯೂಎಚ್‍ಒ ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ(ಕ್ಲಿನಿಕಲ್ ಟ್ರಯಲ್) ತಾತ್ಕಾಲಿಕ ತಡೆ ನೀಡಿತ್ತು. ಆದರೆ ಈಗ ಅಧ್ಯಯನದಲ್ಲಿ ತಪ್ಪುಗಳು ಇರುವುದು ಗಮನಕ್ಕೆ ಬರುತ್ತಿದ್ದಂತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಹೇಳಿದೆ.

    ತಡೆ ನೀಡಿದ್ದು ಯಾಕೆ?
    ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲು ಸಾವು ಸಂಭವಿಸಬಹುದು. ಈ ಮಾತ್ರೆಯಿಂದ ಕೋವಿಡ್ ರೋಗಿಗಳಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂಬ ಅಧ್ಯಯನ ವರದಿಯೊಂದು ಇತ್ತೀಚೆಗೆ `ದಿ ಲಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು. ಮೇ 22ರಂದು ಪ್ರಕಟವಾದ ಈ ಅಧ್ಯಯನವನ್ನು ಗಂಭೀರವಾಗಿ ಸ್ವೀಕರಿಸಿದ ಡಬ್ಲ್ಯೂಎಚ್‍ಒ ಮೇ 25ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಿತ್ತು.

    ಈ ಹಿಂದಿನ ವರದಿ ಏನಿತ್ತು?
    ಈ ಹಿಂದೆ ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ Sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿತ್ತು. ಕೋವಿಡ್19 ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿತ್ತು. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಮಾತ್ರೆಯನ್ನು ರಫ್ತು ಮಾಡಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

    ತಡೆ ನೀಡಿದ ಬಳಿಕ ಏನಾಯ್ತು?
    ಡಬ್ಲ್ಯೂಎಚ್‍ಒ ಎಚ್‍ಸಿಕ್ಯೂ ಪ್ರಯೋಗಕ್ಕೆ ತಡೆ ನೀಡಿದ ಬೆನ್ನಲ್ಲೇ ‘ದಿ ಲಾನೆಟ್ಸ್’ ನಲ್ಲಿ ಪ್ರಕಟವಾದ ಅಧ್ಯಯನದ ಬಗ್ಗೆ ಅನುಮಾನ ಎದ್ದಿತ್ತು. ಏಪ್ರಿಲ್ 14ರ ಸಮಯದಲ್ಲಿ 6 ಖಂಡಗಳ 671 ಆಸ್ಪತ್ರೆಗಳಲ್ಲಿರುವ 96 ಸಾವಿರ ರೋಗಿಗಳಿಗೆ ನೀಡಿದ ಚಿಕಿತ್ಸೆಯನ್ನು ಆಧಾರಿಸಿ ಅಧ್ಯಯನ ಮಾಡಿತ್ತು. ಈ ವರದಿಯಲ್ಲಿ ಏಪ್ರಿಲ್ 21ರ ವೇಳೆಗೆ ಎಚ್‍ಸಿಕ್ಯೂ ಸೇವಿಸಿದ್ದ 10,698 ರೋಗಿಗಳು ಮೃತಪಟ್ಟಿದ್ದಾರೆ ಎಂದು ಮೇ 22 ರಂದು ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಿತ್ತು.

    ಇಷ್ಟೊಂದು ಮಾಹಿತಿಗಳನ್ನು ಪಡೆದು ಕೇವಲ 5 ವಾರದಲ್ಲಿ ಸಂಶೋಧನಾ ವರದಿ ತಯಾರಿಸಲು ಸಾಧ್ಯವಿಲ್ಲ. ಯಾವ ಆಸ್ಪತ್ರೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ? ಈ ಬಗ್ಗೆ ಖಚಿತ ಮಾಹಿತಿಯನ್ನು ನೀಡಿ ಎಂದು ವಿಶ್ವದ ನೂರಕ್ಕೂ ಹೆಚ್ಚು ವಿಜ್ಞಾನಿಗಳು ‘ಲಾನ್ಸೆಟ್’ ನಿಯತಕಾಲಿಕೆಗೆ ಖಾರವಾದ ಪತ್ರ ಬರೆದು ಬರೆದು ಕೇಳಿಕೊಂಡಿದ್ದರು.

    ಯಾವುದೇ ವೈಜ್ಞಾನಿಕ ಅಧ್ಯಯನಗಳನ್ನು ಪ್ರಕಟಿಸಿದರೆ, ಆ ಅಧ್ಯಯನಕ್ಕೆ ಪರಿಗಣಿಸಿದ ಎಲ್ಲ ಅಂಶಗಳನ್ನು ಸಾರ್ವಜನಿಕವಾಗಿ ನೀಡಬೇಕಾಗುತ್ತದೆ. ಅದರಲ್ಲೂ ವಿಶ್ವದಲ್ಲಿ ತಲ್ಲಣ ಮೂಡಿಸಿದ ಕೋವಿಡ್ ಬಗ್ಗೆ ಅಧ್ಯಯನ ನಡೆಸಿದ ಡೇಟಾಗಳನ್ನು ನೋಡಲು ವಿಜ್ಞಾನಿಗಳು ಆಸಕ್ತಿಯಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಡೇಟಾಗಳನ್ನು ನೀಡದೇ ವರದಿಯನ್ನು ನಂಬುವುದು ಸರಿಯಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಆಸ್ಟ್ರೇಲಿಯಾದ 5 ಆಸ್ಪತ್ರೆಗಳ 600 ರೋಗಿಗಳ ಪೈಕಿ ಏಪ್ರಿಲ್ 21 ರಂದು 73 ರೋಗಿಗಳು ಮೃತಪಟ್ಟಿದ್ದರು ಎಂದು ಅಧ್ಯಯನ ಹೇಳಿತ್ತು. ಆದರೆ ವಿಶ್ವದೆಲ್ಲೆಡೆ ಕೋವಿಡ್ ಪ್ರಕರಣ ಮತ್ತು ಸಾವಿನ ಲೆಕ್ಕ ತಿಳಿಯಲು ಭೇಟಿ ನೀಡುವ ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾ ಪ್ರಕಾರ ಆಸ್ಟ್ರೇಲಿಯಾದಲ್ಲಿ ಏಪ್ರಿಲ್ 23ರ ವೇಳೆಗೆ ಕೇವಲ 67 ಮಂದಿ ಮೃತಪಟ್ಟಿದ್ದರು ಎಂದು ಹೇಳಿತ್ತು. ಈ ಕಾರಣಕ್ಕೆ ಅಧ್ಯಯನಕ್ಕೆ ಯಾವೆಲ್ಲ ಮಾನದಂಡವನ್ನು ಪರಿಗಣಿಸಲಾಗಿದೆ ಎಂಬ ಬಗ್ಗೆ ಗಂಭೀರವಾದ ಪ್ರಶ್ನೆಯನ್ನು ಎತ್ತಲಾಗಿತ್ತು.

    ತಪ್ಪು ಮಾಹಿತಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿಜ್ಞಾನಿಗಳು, ಉದ್ದೇಶಪೂರ್ವಕವಾಗಿ ಎಚ್‍ಸಿಕ್ಯೂ ಬಳಕೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಅಧ್ಯಯನ ಮಾಡಿರಬಹುದು ಅಥವಾ ತಪ್ಪು ಮಾಹಿತಿಗಳನ್ನು ಪಡೆದು ಈ ಅಧ್ಯಯನ ನಡೆಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಜ್ಞಾನಿಗಳಿಂದ ಆಕ್ಷೇಪಗಳು ಏಳುತ್ತಿದ್ದಂತೆ ಡಬ್ಲ್ಯೂಎಚ್‍ಒ ಈಗ ಎಚ್‍ಸಿಕ್ಯೂಬಳಕೆಗೆ ಅನುಮತಿ ನೀಡಿದೆ.

  • ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪ್ರಯೋಗಕ್ಕೆ ತಾತ್ಕಾಲಿಕ ಸ್ಥಗಿತ

    ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪ್ರಯೋಗಕ್ಕೆ ತಾತ್ಕಾಲಿಕ ಸ್ಥಗಿತ

    ಜಿನಿವಾ: ಕೊರೊನಾ ಜ್ವರಕ್ಕೆ ತಕ್ಷಣದ ಔಷಧಿ ಎಂದೇ ಪರಿಗಣಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಕೈಬಿಟ್ಟಿದೆ.

    ವೈದ್ಯಕೀಯ ಅಧ್ಯಯನಕ್ಕಾಗಿರುವ ಜಗತ್ತಿನ ಅತೀ ಶ್ರೇಷ್ಠ ನಿಯತಕಾಲಿಕೆ ಲ್ಯಾಸೆಟ್ ‘ಕೊರೊನಾ ಪೀಡಿತ ರೋಗಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಿದ್ರೆ ಸಾಯುವ ಸಾಧ್ಯತೆ ಹೆಚ್ಚಿದೆ’ ಎಂದು ಅಧ್ಯಯನ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ರೋಗಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಬಳಸುವ ಸಂಬಂಧ ಆರಂಭಿಸಿದ್ದ ಪ್ರಯೋಗಾರ್ಥ ಪರೀಕ್ಷೆಯನ್ನೇ ನಿಲ್ಲಿಸಿದೆ.

    ವರದಿ ಪ್ರಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಅಡ್ಡಪರಿಣಾಮಗಳು ಹೆಚ್ಚಿದ್ದು, ಹೃದಯಾಘಾತದ ಆತಂಕ ವ್ಯಕ್ತಪಡಿಸಿತ್ತು. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಅಮೆರಿಕ ಸೇರಿದಂತೆ ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿತ್ತು.

    ಈ ಹಿಂದೆ ಅಧ್ಯಯನ ಹೇಳಿದ್ದು ಏನು?
    ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿತ್ತು. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

    ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿತ್ತು.

  • ಚೀನಾದ ಹೊಸ ಸಂಶೋಧನಾ ವರದಿಯಿಂದ ಭಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಬಲ

    ಚೀನಾದ ಹೊಸ ಸಂಶೋಧನಾ ವರದಿಯಿಂದ ಭಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಬಲ

    ನವದೆಹಲಿ: ಹಲವು ಅನುಮಾನಗಳ ನಡುವೆ ಭಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಕೊರೊನಾದ ತವರು ಚೀನಾದ ಸಂಶೋಧನಾ ವರದಿಯಿಂದ ಬಲ ಬಂದಿದೆ.

    ಹೆಚ್‍ಸಿಕ್ಯೂ ಔಷಧಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿರುವ ಚೀನಾ, ಕೊರೊನಾ ಸಾವಿನ ಪ್ರಮಾಣ ನಿಯಂತ್ರಿಸುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದಿದೆ.

    ಚೀನಾ ಸರ್ಕಾರ, ನೇಚರ್ ಸೈನ್ಸ್ ಫೌಂಡೇಶನ್ ಮತ್ತು ಮಾ ಯುನ್ ಫೌಂಡೇಶನ್ ನೆರವಿನೊಂದಿಗೆ ‘ಸೈನ್ಸ್ ಚೀನಾ ಲೈಫ್ ಸೈನ್ಸಸ್ ಜರ್ನಲ್’ ನಡೆಸಿದ ಕ್ಲಿನಿಕಲ್ ಟ್ರಯಲ್‍ನಿಂದ ಈ ಮಾಹಿತಿ ಲಭ್ಯವಾಗಿದ್ದು, ಅಂತಿಮ ವರದಿ ಬಳಿಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಬಗ್ಗೆ ಇರುವ ಹಲವು ಅನುಮಾನಗಳಿಗೆ ತೆರೆ ಬೀಳಲಿದೆ.

    ವುಹಾನ್‍ನ ಟೋಂಗ್ಜಿ ಆಸ್ಪತ್ರೆಯಲ್ಲಿ 568 ಕೊರೊನಾ ರೋಗಿಗಳ ಮೇಲೆ ಫೆಬ್ರವರಿ 1 ಮತ್ತು ಏಪ್ರಿಲ್ 8ರ ಅವಧಿಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಬಳಿಕ ಪ್ರೀ ಪ್ರಿಂಟ್‍ನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಪುನರ್ ವಿಮರ್ಶೆ ಬಳಿಕ ಚೀನಾ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

    ‘ದಿ ಫೆಡರೇಶನ್ ಆಫ್ ಅಮೆರಿಕನ್ ಸೊಸೈಟೀಸ್ ಫಾರ್ ಎಕ್ಸ್‌ಪರಿಮೆಂಟಲ್ ಬಯಾಲಜಿ’ ಕಳೆದ ಸಂಚಿಕೆಯಲ್ಲಿ ಅಮೆರಿಕದ ಕೆಲವು ತಜ್ಞರು ಕೊರೊನಾ ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪರಿಣಾಮಕಾರಿಯಾಗಿಲ್ಲ, ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. ಹಲವು ಭಿನ್ನಾಭಿಪ್ರಾಯಗಳ ನಡುವೆ ಬ್ರೆಜಿಲ್, ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವಾರು ದೇಶಗಳು ಕೊರೊನಾ ಪ್ರಕರಣಗಳಿಗೆ ಎಚ್‍ಸಿಕ್ಯು ಬಳಕೆ ಮಾಡುತ್ತಿದ್ದು ಚೀನಾ ನೀಡುವ ವರದಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

  • ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ: ಏಮ್ಸ್ ನಿರ್ದೇಶಕ

    ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ: ಏಮ್ಸ್ ನಿರ್ದೇಶಕ

    ನವದೆಹಲಿ: ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ಪರಿಣಾಮಕಾರಿಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗ ಈ ವಿಚಾರದ ಕುರಿತು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಪ್ರತಿಕ್ರಿಯಿಸಿದ್ದಾರೆ.

    ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಕೆಲ ಲ್ಯಾಬ್‍ಗಳು ವರದಿ ನೀಡಿವೆ. ಈ ವರದಿಗೆ ನೀಡಿದ ಡೇಟಾಗಳು ಗಟ್ಟಿಯಾಗಿಲ್ಲ. ಚೀನಾ ಮತ್ತು ಫ್ರಾನ್ಸ್ ಅಧ್ಯಯನಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಗಳು ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿವೆ ಎಂದು ಹೇಳಿದ್ದಾರೆ.

    ಕೋವಿಡ್-19ಗೆ ಇಲ್ಲಿಯವರೆಗೆ ಯಾವುದೇ ಔಷಧಿ ಸಿಕ್ಕಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಇದನ್ನು ಸೇವಿಸುವುದರಿಂದ ಅಡ್ಡ ಪರಿಣಾಮ ಇದೆ. ಹೃದಯ ಬಡಿತಕ್ಕೆ ಇದರಿಂದ ತೊಂದರೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಾಕು ಪ್ರಾಣಿಗಳಿಂದ ಕೊರೊನಾ ಹರಡುತ್ತಾ ಎನ್ನುವ ಪ್ರಶ್ನೆಗೆ, ಇಲ್ಲಿಯವರೆಗೆ ಸಾಕು ಪ್ರಾಣಿಗಳಿಂದ ಮಾನವನಿಗೆ ಹರಡಿದ ಬಗ್ಗೆ ಯವುದೇ ಅಧಿಕೃತ ಡೇಟಾ ಇಲ್ಲ. ಮುಖ್ಯವಾಗಿ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ. ಸಾಕು ಪ್ರಾಣಿಗಳಿಂದ ಮನುಷ್ಯನಿಗೆ ಬರುವ ಸಾಧ್ಯತೆ ವಿರಳ ಎಂದು ತಿಳಿಸಿದರು.

    ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

    ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

    ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.

    ಅಧ್ಯಯನ ಹೇಳಿದ್ದು ಏನು?
    ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

    ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.

    ಅಮೆರಿಕ, ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿದೆ.