Tag: ಹೈಟೆನ್ಷನ್ ವೈರ್

  • ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಜೈಪುರ: ಉತ್ತರ ಪ್ರದೇಶದ (Uttar Pradesh) ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲ್ಭಾಗವು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಸುಮಾರು 12 ಮಂದಿಗೆ ಗಂಭೀರ ಸುಟ್ಟು ಗಾಯಗಳಾಗಿವೆ.

    ಜೈಪುರ (Jaipur) ಗ್ರಾಮೀಣ ಜಿಲ್ಲೆಯ ಶಹಪುರ ಉಪವಿಭಾಗದ ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಟೋಡಿ ಗ್ರಾಮದ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ಲೈನ್ ತಗುಲಿದೆ. ಇದನ್ನೂ ಓದಿ: ಕೀನ್ಯಾ | 12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ – ಎಲ್ಲರೂ ಸಾವನ್ನಪ್ಪಿರುವ ಶಂಕೆ

    ಮನೋಹರಪುರದ ಹಳ್ಳಿಯೊಂದರ ಬಳಿಯ ರಸ್ತೆಯಿಂದ ಬಸ್ ಹಾದು ಹೋಗುವಾಗ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

    ಬಸ್‌ನ ಮೇಲ್ಭಾಗವು ಹೈಟೆನ್ಷನ್ ಲೈನ್‌ಗೆ ತಗುಲುತ್ತಿದ್ದಂತೆ, ಜೋರಾದ ಸ್ಫೋಟ ಸದ್ದು ಕೇಳಿತ್ತು. ಕಾರ್ಮಿಕರ ಕಿರುಚಾಟ ಸದ್ದು ಕೇಳಿ ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮನೋಹರ್‌ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ತಕ್ಷಣವೇ ಶಹಪುರ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.

  • ವಿದ್ಯುತ್ ಸ್ಪರ್ಶ – ಹೊತ್ತಿ ಉರಿದ ಲಾರಿ

    ವಿದ್ಯುತ್ ಸ್ಪರ್ಶ – ಹೊತ್ತಿ ಉರಿದ ಲಾರಿ

    ತುಮಕೂರು: ವಿದ್ಯುತ್ ಹೈ ಟೆನ್ಷನ್ ವೈರ್ ತಗುಲಿದ ಪರಿಣಾಮ ಟಿಪ್ಪರ್ ಲಾರಿಯೊಂದು ಹೊತ್ತಿ ಉರಿದ ಘಟನೆ ಶಿರಾ ನಗರದಲ್ಲಿ ನಡೆದಿದೆ.

    ನಗರದ ಮಹಾಲಿಂಗಪ್ಪ ಎನ್ನುವವರಿಗೆ ಸೇರಿದ ಜೈನ್ ಡಾಬಾ ಬಳಿ ಇರುವ ಜಮೀನಿಗೆ ಟಿಪ್ಪರ್ ಮೂಲಕ ಮಣ್ಣು ಸಾಗಿಸಲಾಗುತಿತ್ತು. ಈ ವೇಳೆ ಜಮೀನು ಮೂಲಕ ಹಾದು ಹೋದ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಏಕಾಏಕಿ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ಹತ್ತಿಕೊಳ್ಳುತಿದ್ದಂತೆ ಚಾಲಕ ಟಿಪ್ಪರ್ ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಡೀಸೆಲ್ ಟ್ಯಾಂಕ್‍ಗೆ ಬೆಂಕಿ ತಗುಲಿಲ್ಲ. ಡೀಸೆಲ್ ಟ್ಯಾಂಕ್ ಗೆ ಬೆಂಕಿ ತಲುಗುಲಿದರೆ ಟಿಪ್ಪರ್ ಲಾರಿ ಸಂಪೂರ್ಣ ಭಸ್ಮವಾಗುವ ಸಾಧ್ಯತೆ ಇತ್ತು. ಅಲ್ಲದೇ ಅಕ್ಕಪಕ್ಕ ಬೆಂಕಿ ವ್ಯಾಪಿಸಿ ದುರಂತ ಸಂಭವಿಸುತಿತ್ತು. ಲಾರಿ ಭಾಗಶಃ ಸುಟ್ಟು ಕರಕಲಾಗಿರುವುದರಿಂದ ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

  • ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಲಕ್ನೋ: ಶಾಲಾ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು, ಸುಮಾರು 55 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರದಂದು ಬಲರಾಂಪುರ ಜಿಲ್ಲೆಯ ಉಟ್ರೌಲಾದ ವಿಷ್ಣುಪುರ ಸರ್ಕಾರಿ ಪ್ರಾಥಮಿಕ ಕಟ್ಟಡದ ಛಾವಣಿಯ ಮೇಲೆ 11,000 ಕೆವಿಗೂ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು ಎನ್ನಲಾಗಿದ್ದು, 55 ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಸದ್ಯ ಗಾಯಗೊಂಡ ಮಕ್ಕಳಲ್ಲಿ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರನ್ನು ಬಲರಾಂಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    ಹೈಟೆನ್ಷನ್ ವೈರ್ ಶಾಲಾ ಕಟ್ಟಡದ ಮೇಲೆ ಬಿದ್ದ ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿಲ್ಲ. ಈ ಬಗ್ಗೆ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿದ್ದು, ಸಿಟ್ಟಿಗೆದ್ದು ಶಾಲಾ ಸಿಬ್ಬಂದಿ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೆ, ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣ ಕರುಣೇಶ್ ಅವರು ಓರ್ವ ಗುತ್ತಿಗೆದಾರರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್ ವಿರುದ್ಧವೂ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಗಾಯಗೊಂಡಿರುವ ಶಾಲಾ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

    ಈ ಅವಘಡ ಸಂಭವಿಸಿದ್ದು ಹೇಗೆ? ಕಾರಣವೇನು ಎನ್ನುವ ಬಗ್ಗೆ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಿ ಎಂದು ಮಧ್ಯಾಂಚಲ್ ವಿದ್ಯುತ್ ವಿತರಣಾ ನಿಗಮದ ಯೋಜನಾ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಅಲ್ಲದೇ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆಯನ್ನೂ ಕೂಡ ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನಿಗವಹಿಸಿ, ಜೊತೆಗೆ ಹೈಟೆನ್ಷನ್ ತಂತಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿ ಎಂದು ಸಿಎಂ ಉತ್ತರ ಪ್ರದೇಶ ವಿದ್ಯುತ್ ನಿಗಮದ ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.