Tag: ಹೈಕೋರ್ಟ್

  • ಎಚ್‍ಡಿಕೆಗೆ ಬಿಗ್ ರಿಲೀಫ್: ಏನಿದು ಜಂತಕಲ್ ಮೈನಿಂಗ್ ಕೇಸ್? ಕೋರ್ಟ್ ನಲ್ಲಿ ಇಂದು ಏನಾಯ್ತು?

    ಎಚ್‍ಡಿಕೆಗೆ ಬಿಗ್ ರಿಲೀಫ್: ಏನಿದು ಜಂತಕಲ್ ಮೈನಿಂಗ್ ಕೇಸ್? ಕೋರ್ಟ್ ನಲ್ಲಿ ಇಂದು ಏನಾಯ್ತು?

    ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಐಎಎಸ್ ಅಧಿಕಾರಿಗಳಿಗೆ ನಡುಕ ಹುಟ್ಟಿಸಿರುವ ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.

    ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ಮುಗಿಯುವ ತನಕ ಹೆಚ್‍ಡಿ ಕುಮಾರಸ್ವಾಮಿಗೆ, ಸಿಟಿ ಸಿವಿಲ್ ಕೋರ್ಟ್ 7 ದಿನಗಳ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಈ ಮೊದಲೇ 3 ಕಡೆ ಜಾಮೀನು ಪಡೆದಿದ್ದ ಹೆಚ್‍ಡಿಕೆ ಇವತ್ತಿನ ಜಾಮೀನಿಂದ ಸ್ವಲ್ಪ ನಿರಾಳರಾಗಿದ್ದಾರೆ.

    5 ಲಕ್ಷ ರೂ. ಬಾಂಡ್ ಶ್ಯೂರಿಟಿ ಇಡಬೇಕು. ದೇಶ ಬಿಟ್ಟು ಹೋಗಬಾರದು, ಸಾಕ್ಷ್ಯ ನಾಶ ಮಾಡಬಾರದು. ತನಿಖಾಧಿಕಾರಿ ತನಿಖೆಗೆ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಎಚ್‍ಡಿಕೆಗೆ ಷರತ್ತು ವಿಧಿಸಿದೆ.

    ಬಡೇರಿಯಾ ಕೇಸ್‍ನಲ್ಲಿ ಕುಮಾರಸ್ವಾಮಿಯವರನ್ನು ಎಸ್‍ಐಟಿ ಸಾಕ್ಷಿಯನ್ನಾಗಿ ಕರೆದಿತ್ತು. ಆದ್ರೆ, ತಮ್ಮನ್ನು ಸಾಕ್ಷಿಯಾಗಿ ಕರೆದು ಬೇರೊಂದು ಪ್ರಕರಣದಲ್ಲಿ ಬಂಧಿಸುತ್ತಾರೆ ಎನ್ನುವ ಭಯದಿಂದ ಎಚ್‍ಡಿಕೆ ಜಾಮೀನು ಪಡೆದಿದ್ದಾರೆ.

    ಕುಮಾರಸ್ವಾಮಿ ಪರ ವಕೀಲರು ಇವತ್ತು ಮತ್ತೆ ಕೋರ್ಟ್‍ಗೆ ಹಾಜರಾಗಿ ನಮ್ಮ ಅರ್ಜಿಯನ್ನು ಮೊದಲು ಪರಿಗಣಿಸಿ ಅಂತ ಕೇಳಿದ್ರು. ಆದ್ರೆ ನ್ಯಾಯಾಧೀಶರು ಸರತಿ ಪ್ರಕಾರವೇ ಕರೆಯುತ್ತೇನೆ ಎಂದರು. ಆದರೆ ಪಟ್ಟು ಬಿಡದ ವಕೀಲರು ಕೆಲ ಗಂಟೆಗಳ ನಂತರ ಮತ್ತೆ ಎದ್ದು ತಮ್ಮ ಅರ್ಜಿಯನ್ನು ಪರಿಗಣಿಸಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಿ ಅಂತ ವಾದ ಮಾಡಲು ಶುರು ಮಾಡಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಎಸ್‍ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡದೇ ಜಾಮೀನು ನೀಡುವಂತಿಲ್ಲ ಅಂತ ವಾದ ಮಂಡನೆ ಮಾಡಿದ್ರು.

    ಬೇಲ್ ಸಿಕ್ಕ ಬಳಿಕ ದೇವದುರ್ಗದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತಾಡಿದ ಕುಮಾರಸ್ವಾಮಿ, ಒಂದು ದಿನವಾದ್ರೂ ನನ್ನನ್ನ ಬಂಧಿಸಿ ನಾಡಿನ ಜನತೆಯ ಮುಂದೆ ನನ್ನ ಮೇಲೆ ಅನುಮಾನ ಮಾಡಬೇಕು ಅನ್ನೋದು ಸರ್ಕಾರದ ಉದ್ದೇಶ, ಆದ್ರೆ ಇದೆಲ್ಲಾ ಸಾಧ್ಯವಿಲ್ಲ. ನ್ಯಾಯಕ್ಕೆ ಜಯವಿದೆ ಅಂತ ಹೇಳಿದ್ರು.

    ಎಚ್‍ಡಿಕೆ ಪರ ವಕೀಲರ ವಾದ ಏನಿತ್ತು..?
    ಈಗಾಗಲೇ ಈ ಪ್ರಕರಣದಲ್ಲಿ ಬೇರೆ ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗಾಗಿ ಎಸ್‍ಐಟಿ ನನ್ನ ಕಕ್ಷಿದಾರರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ. ನಾವು ತನಿಖೆಗೆ ಸಹಕರಿಸುತ್ತೇವೆ, ನಮಗೆ ಜಾಮೀನು ನೀಡಿ.

    ಎಸ್‍ಐಟಿ ಪರ ವಕೀಲರ ವಾದ ಏನು?
    ಇನ್ನು ವಿಚಾರಣೆಯೇ ಆರಂಭವಾಗಿಲ್ಲ. ಈ ಸಂದರ್ಭದಲ್ಲಿ ಜಾಮೀನು ನೀಡಿದ್ರೆ ಸಾಕ್ಷ್ಯ ನಾಶವಾಗುತ್ತದೆ. ನಾವು ಆರೋಪಿಯಿಂದ ಮಾಹಿತಿ ಪಡೆದುಕೊಳ್ಳಬೇಕಿದೆ. ಜಾಮೀನು ನೀಡಿದ್ರೆ ಆರೋಪಿ ವಿಚಾರಣೆಗೆ ಸಹಕರಿಸುವುದಿಲ್ಲ. ಆರೋಪಿ ಸಮಾಜದಲ್ಲಿ ತುಂಬ ಪ್ರಭಾವಿ ವ್ಯಕ್ತಿಯಾಗಿದ್ದಾರೆ

    ಕೃಷ್ಣ ವಿರುದ್ಧ ತನಿಖೆ ನಡೆಯಲ್ಲ:
    ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ. ಯಾಕಂದ್ರೆ ಈಗಾಗಲೇ ಸುಪ್ರೀಂ ಕೋರ್ಟ್ ಕೃಷ್ಣ ಅವರ ವಿರುದ್ಧ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೂ ಮತ್ತೊಮ್ಮೆ ಎಫ್‍ಐಆರ್ ದಾಖಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಎಸ್.ಎಂ. ಕೃಷ್ಣ ಅವರ ಯಾವುದೇ ಪ್ರಕರಣವನ್ನು ವಿಚಾರಣೆ ಮಾಡಲ್ಲ ಎಂದು ಎಸ್‍ಐಟಿ ಎಸ್ಪಿ ಮಂಜುನಾಥ್ ಅಣ್ಣಗೇರಿ ಪತ್ರ ಬರೆದಿದ್ದಾರೆ.

    ಏನಿದು ಜಂತಕಲ್ ಮೈನಿಂಗ್ ಕೇಸ್?
    ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

    ಎಚ್‍ಡಿಕೆಯ ಮೇಲಿರುವ ಆರೋಪ ಏನು?
    ಹಿಂದೆ ಕಂಪೆನಿಯು ಸಂಗ್ರಹಿಸಿದ್ದ ಅದಿರು ಸಾಗಣೆಕೆಯ ಲೈಸೆನ್ಸ್ ನವೀಕರಣಕ್ಕೆ ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ 3 ಬಾರಿ ಹೆಚ್‍ಡಿಕೆಯನ್ನು ಭೇಟಿ ಮಾಡಿದ್ದಾರೆ. ಇದಾದ ಬಳಿಕ ಗಂಗಾರಾಮ್ ಬಡೇರಿಯಾಗೆ ಲೈಸೆನ್ಸ್ ನವೀಕರಣಕ್ಕೆ ಎಚ್‍ಡಿಕೆ ಸೂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಎಸ್‍ಐಟಿಯಲ್ಲಿರುವ ಸಾಕ್ಷ್ಯಗಳು ಏನು?
    ಕೇಂದ್ರದ ಗಣಿ ಮತ್ತು ಪರಿಸರ ಸಚಿವಾಲಯ 2009ರ ಡಿ.1 ಮತ್ತು ಡಿ.24ರಂದು ಆದಿರು ಸಾಗಾಣಿಕೆಗೆ ಸಂಬಂಧಿಸಿದಂತೆ ಜಂತಕಲ್ ಮೈನಿಂಗ್ ಕಂಪೆನಿ ಅಥವಾ ಯಾವುದೇ ಇಲಾಖೆಯ ಜೊತೆ ಪತ್ರ ವ್ಯವಹಾರ ನಡೆಸಿಲ್ಲ ಎಂದು ಪತ್ರ ಬರೆದಿತ್ತು. ಈ ಅಂಶವನ್ನು ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು. ಈ ಪತ್ರದ ಸಾಕ್ಷ್ಯವನ್ನು ಇಟ್ಟುಕೊಂಡು ಎಸ್‍ಐಟಿ ಕೇಂದ್ರವೇ ಅನುಮತಿ ನೀಡದೇ ಇರುವಾಗ ಈ ಕಂಪೆನಿ ಆದಿರು ಸಾಗಾಟ ಮಾಡಲು ಅನುಮತಿ ಸಿಕ್ಕಿದ್ದು ಹೇಗೆ ಎಂದು ತನಿಖೆ ನಡೆಸಲು ಮುಂದಾಗಿದೆ.

    ನೋಟಿಸ್ ನೀಡಲು ಮುಂದಾಗಿದ್ದು ಯಾಕೆ?
    ಹೆಚ್‍ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಜಂತಕಲ್ ಮೈನಿಂಗ್‍ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಸಿಎಂ ಕಚೇರಿಯಿಂದ ಒತ್ತಡ ಬಂದಿತ್ತು ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಎಸ್‍ಐಟಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಬಡೇರಿಯಾ ಹೇಳಿಕೆ ಹಿನ್ನೆಲೆಯಲ್ಲಿ ಹೆಚ್‍ಡಿ ಕುಮಾರಸ್ವಾಮಿಗೆ ನೋಟಿಸ್ ನೀಡಲು ಎಸ್‍ಐಟಿ ಸಜ್ಜಾಗಿತ್ತು.

    ಎಫ್‍ಐಆರ್‍ನಲ್ಲಿ ಯಾರ ಹೆಸರಿದೆ?
    ಎಸ್‍ಐಟಿ ಹೊಸದಾಗಿ ದಾಖಲಿಸಿರೋ ಎಫ್‍ಐಆರ್‍ನಲ್ಲಿ 1. ಎಸ್.ಎಂ ಕೃಷ್ಣ, 2. ಎನ್ ಧರ್ಮಸಿಂಗ್, 3. ಹೆಚ್.ಡಿ. ಕುಮಾರಸ್ವಾಮಿ, 4. ಡಾ.ಬಸಪ್ಪ ರೆಡ್ಡಿ, 5. ಗಂಗಾರಮ್ ಬಡೇರಿಯಾ (ಐಎಎಸ್), 6. ವಿ.ಉಮೇಶ್ (ಐಎಎಸ್), 7. ಐ.ಆರ್. ಪೆರುಮಾಳ್ (ಐಎಎಸ್), 8. ಕೆ.ಎಸ್ ಮಂಜುನಾಥ್ (ಐಎಎಸ್), 9. ಡಿ.ಎಸ್. ಅಶ್ವಥ್ (ಐಎಎಸ್), 10. ಜೀಜಾ ಮಾಧವನ್ ಹರಿಸಿಂಗ್ (ಐಪಿಎಸ್), 11. ಮಹೇಂದ್ರ ಜೈನ್ (ಐಎಎಸ್), 12. ಕೆ. ಶ್ರೀನಿವಾಸ್, 13. ಎಂ ರಾಮಪ್ಪ ಹಾಗೂ 14. ಶಂಕರ ಲಿಂಗಯ್ಯ.

    ಮಗನಿಗೂ ಸಮನ್ಸ್: ಜಂತಕಲ್ ಮೈನಿಂಗ್ ಕೇಸಲ್ಲಿ ತಾವು ತಪ್ಪಿಸಿಕೊಳ್ಳೋದಕ್ಕೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಮಗನ ಹೆಸ್ರು ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ವಿನೋದ್ ಗೋಯಲ್ ಅವರನ್ನು ಬಡೇರಿಯಾ ಮಗ ಮೂರು ಬಾರಿ ಮುಖಾಮುಖಿಯಾಗಿ ಭೇಟಿಯಾಗಿದ್ದ. ಈತ ಕೇವಲ ಹತ್ತು ಲಕ್ಷ ಅಲ್ಲ. ಕೋಟ್ಯಾಂತರ ರೂಪಾಯಿ ಹಣ ಪಡೆದುಕೊಂಡಿದ್ದ. ಶೋಕಿಲಾಲಾ ಮಗನ ಆಸೆ ತೀರಿಸಲು ತನ್ನ ಅಕ್ರಮ ವ್ಯವಹಾರಕ್ಕೆ ಮಗನನ್ನ ಬಡೇರಿಯಾ ಮುಂದೆ ಬಿಟ್ಟಿದ್ದಾಗಿ ಮಾಹಿತಿ ಸಿಕ್ಕಿದೆ. ಗಂಗಾರಾಮ್ ಬಡೇರಿಯಾ ಹೇಳಿಕೆ ಆಧರಿಸಿ ಇಂದು ಮಗನಿಗೂ ಎಸ್‍ಐಟಿ ಸಮನ್ಸ್ ನೀಡಿದ್ದು, 3 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    ಸುಪ್ರೀಂ ಸೂಚನೆ ಮೇರೆಗೆ ತನಿಖೆ: ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ, ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‍ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು.

  • ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ

    ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ

    ಬೆಂಗಳೂರು: ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನೀವು ರಾಜ್ಯ ಸರ್ಕಾರ ನಿಗದಿ ಪಡಿಸಿದ ಗರಿಷ್ಠ 200 ರೂ.ಗಳ ಬದಲಾಗಿ ಮಲ್ಟಿಪ್ಲೆಕ್ಸ್ ಗಳು ವಿಧಿಸಿದ ದರದಲ್ಲಿ ಸಿನಿಮಾ ನೋಡಬೇಕು.

    ಹೌದು. ರಾಜ್ಯ ಸರ್ಕಾರ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ(ತರಿಗೆ ಹೊರತಾಗಿ) ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ್ದ ಆದೇಶ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಅನ್ವಯವಾಗದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.

    ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಫ್‍ಐಸಿಸಿಐ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಐನಾಕ್ಸ್ ಲೀಷರ್ ಲಿಮಿಟೆಡ್‍ನ ನಿರ್ದೇಶಕ ದೀಪಕ್ ಅಶೆರ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಇಂದು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ರಜಾಕಾಲದ ನ್ಯಾಯಪೀಠದಲ್ಲಿ ಗುರುವಾರ ನಡೆಯಿತು.

    ಮಲ್ಟಿಪ್ಲೆಕ್ಸ್ ಗಳ  ವಾದ ಏನು?
    ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದಿಸಿ, ಮಲ್ಟಿಪ್ಲೆಕ್ಸ್‍ಗಳಲ್ಲಿ ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಮಾಡಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಏಕರೂಪದ ದರವನ್ನು ನಿಗದಿ ಪಡಿಸುವುದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಭಾರೀ ನಷ್ವವಾಗುತ್ತದೆ. ಅಷ್ಟೇ ಅಲ್ಲದೇ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ-1964ರ ಸೆಕ್ಷನ್ 12ರ ಅನುಸಾರ ಗರಿಷ್ಠ ಮಿತಿಯನ್ನು ನಿಗದಿ ಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಎಲ್ಲ ಕಾರಣದಿಂದ ಸರ್ಕಾರದ ಆದೇಶ ರದ್ದುಪಡಿಸಬೇಕೆಂದು ಮನವಿ ಮಾಡಿದರು.

    ಸರ್ಕಾರದ ವಾದ ಏನಿತ್ತು?
    ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಸರ್ಕಾರದ ಪರ ವಾದಿಸಿ, ಗರಿಷ್ಠ ದರವನ್ನು ನಿಗದಿ ಪಡಿಸುವ ಮುನ್ನ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಜೊತೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಅವರು 200 ರೂ. ಗರಿಷ್ಠ ದರ ನಿಗದಿಪಡಿಸಲು ಒಪ್ಪಿಗೆ ಸೂಚಿಸಿದ್ದರು. ಈ ರೀತಿಯ ಆದೇಶ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ದರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದು, ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಏಕರೂಪದ ಪ್ರವೇಶ ದರ ನಿಗದಿ ಪಡಿಸಿದ್ದೇವೆ ಎಂದು ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟರು.

    ಮಲ್ಟಿಪ್ಲೆಕ್ಸ್ ಗಳ ಆಕ್ಷೇಪ ಏನು?
    ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಏಕರೂಪದ ದರ ನಿಗದಿ ಪಡಿಸಲು ಕರೆಯಲಾದ ಸಭೆಯಲ್ಲಿ ಒಪ್ಪಿಗೆ ನೀಡುವಾಗ ವಾರಾಂತ್ಯ ಹಾಗೂ ಸರ್ಕಾರಿ ರಜೆಗಳಂದು ವಿನಾಯಿತಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಆದೇಶ ಪ್ರಕಟವಾಗುವಾಗ ನಮ್ಮ ಮನವಿಯನ್ನು ಪುರಸ್ಕರಿಸದೇ ರಾಜ್ಯದ ಎಲ್ಲ ಭಾಗಗಳಲ್ಲೂ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ ಟಿಕೆಟ್ ದರ ಕಡಿಮೆ ಇತ್ತು. ಆದರೆ ಈಗ ಈ ಆದೇಶದಿಂದ ಎಲ್ಲ ದಿನಗಳಲ್ಲಿ ಒಂದೇ ದರ ನಿಗದಿ ಪಡಿಸಿದ ಕಾರಣ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಹೊರಯಾಗುತ್ತಿದೆ ಎಂದು ವಾದಿಸಿದರು.

    ವಾದ ಪ್ರತಿವಾದ ಅಲಿಸಿದ ಪೀಠ, ಅರ್ಜಿಯ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅಷ್ಟೇ ಅಲ್ಲದೇ ಈ ಅರ್ಜಿಯ ಇತ್ಯರ್ಥವಾಗುವರೆಗೆ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ತಿಳಿಸಿ ಮಧ್ಯಂತರ ಆದೇಶ ನೀಡಿತು.

    ಸರ್ಕಾರದ ಆದೇಶದಲ್ಲಿ ಏನಿದೆ?
    ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ ತೆರಿಗೆ ಹೊರತು ಪಡಿಸಿ 200 ರೂ. ಫಿಕ್ಸ್ ಆಗಿದ್ದು,  ಮೇ 2ರಂದು ಅಧಿಕೃತ ಆದೇಶ ಜಾರಿಯಾಗಿತ್ತು. ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗುವಂತೆ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿತ್ತು. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ. ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.

    ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

  • ದೇಶದ ಮೊದಲ ಮಂಗಳಮುಖಿ ಎಸ್‍ಐ ಪ್ರೀತಿಕಾ

    ದೇಶದ ಮೊದಲ ಮಂಗಳಮುಖಿ ಎಸ್‍ಐ ಪ್ರೀತಿಕಾ

    ಚೆನ್ನೈ: ಉದ್ಯೋಗಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಮಂಗಳಮುಖಿ ಪ್ರೀತಿಕಾ ಯಾಶಿನಿ ಈಗ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕವಾಗುವ ಮೂಲಕ ದೇಶದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪ್ರೀತಿಕಾ ಪಾತ್ರರಾಗಿದ್ದಾರೆ.

    ಚೆನ್ನೈ ಸಮೀಪದ ವಂಡಲೂರಿನಲ್ಲಿ 1028 ಮಂದಿ ಅಭ್ಯರ್ಥಿಗಳ ಜೊತೆ ಪ್ರೀತಿಕಾ 1 ವರ್ಷ ತರಬೇತಿಯನ್ನು ಪಡೆದು ಈಗ ಉದ್ಯೋಗಕ್ಕೆ ಸೇರಿದ್ದಾರೆ. ಮೊದಲ ದಿನ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೆ, ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಹಕಾರ ನೀಡಿದರು ಎಂದು ಪ್ರೀತಿಕಾ ಹೇಳಿದ್ದಾರೆ.

    ಸಬ್ ಇನ್ಸ್ ಪೆಕ್ಟರ್ ಉದ್ಯೋಗ ಕೊನೆಗೂ ಸಿಕ್ಕಿದೆ. ಮುಂದೆ ಯುಪಿಎಸ್‍ಸಿ ಪರೀಕ್ಷೆ ಬರೆದು ಐಪಿಎಸ್ ಆಗಿ ಆಯ್ಕೆಯಾಗಬೇಕೆಂಬ ಕನಸು ಇದೆ ಎಂದು ಪ್ರೀತಿಕಾ ತಿಳಿಸಿದ್ದಾರೆ.

    ಗಂಡು ಮಗುವಾಗಿ ಹುಟ್ಟಿ ಬೆಳೆದ ಪ್ರದೀಪ್ ಕುಮಾರ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಓದಿದ್ದರು. ನಂತರ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮೂಲಕ ಪ್ರೀತಿಕಾ ಆಗಿ ಬದಲಾದರು. ಮಗ ಲಿಂಗಪರಿವರ್ತನೆಯಾಗಿದ್ದನ್ನು ನೋಡಿ ಪೋಷಕರು ಶಾಕ್ ಆಗಿದ್ದರು. ತಂದೆ ತಾಯಿ ಮಗನಾಗಿ ಬದಲಾಗಲು ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರೀತಿಕಾ ತನ್ನ ಹೆತ್ತವರನ್ನೂ ತೊರೆದು ಬಂದಿದ್ದರು. ಮಂಗಳಮುಖಿಯರ ಜೊತೆ ಸೇರಿಕೊಂಡಿದ್ದ ಇವರು ಆರಂಭದಲ್ಲಿ ಮಹಿಳೆಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಉದ್ಯೋಗ ಮಾಡಿಕೊಂಡಿದ್ದರು.

    ಏನಾಗಿತ್ತು?
    2015ರಲ್ಲಿ ಪ್ರೀತಿಕಾ ಪೊಲೀಸ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹೆಣ್ಣು ಅಥವಾ ಗಂಡು ವಿಭಾಗಕ್ಕೆ ಸೇರದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪ್ರೀತಿಕಾ ಮದ್ರಾಸ್ ಹೈಕೋರ್ಟ್ ಮೆಟ್ಟಲು ಹತ್ತಿದರು. ಮದ್ರಾಸ್ ಹೈಕೋರ್ಟ್ ಮುಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ಹೇಳಿ ತಮಿಳುನಾಡು ಸರ್ಕಾರಕ್ಕೆ ಆದೇಶ ನೀಡಿತ್ತು. ದೈಹಿಕ ಪರೀಕ್ಷೆಯಲ್ಲಿ ನೂರು ಮೀಟರ್ ಓಟವನ್ನು ಪೂರ್ಣಗೊಳಿಸಬೇಕಾಗಿದ್ದ ನಿಗದಿತ ಅವಧಿಗಿಂತಲೂ 1.1 ಸೆಕೆಂಡ್ ಹಿಂದೆ ಇದ್ದ ಕಾರಣ ಅನರ್ಹರಾಗಿದ್ದರು. ಈ ಸಮಯದಲ್ಲೂ ಕೋರ್ಟ್ ಪ್ರೀತಿಕಾ ಪರವಾಗಿ ಆದೇಶ ನೀಡಿತ್ತು.

    ಈ ಆದೇಶದ ಪ್ರಕಾರ 2016 ಫೆ. 15ರಂದು ಸಿಟಿ ಪೊಲೀಸ್ ಕಮಿಷನರ್ ಸ್ಮಿತ್ ಸರನ್ ಪ್ರೀತಿಕಾ ಸೇರಿದಂತೆ 22 ಮಂಗಳಮುಖಿಯರಿಗೆ ಎಸ್ ಐ ಹುದ್ದೆಗೆ ನೇಮಕವಾಗುವಂತೆ ಸೂಚನೆ ನೀಡಿದ್ದರು.

  • ನೆರೆಮನೆಯಾತ ಮಾಡಿದ್ದಕ್ಕೆ, ನನಗೂ ಗೃಹಪ್ರವೇಶದಂದು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆಗೆ ಅನುಮತಿ ನೀಡಿ

    – ವರ್ತೂರು ವ್ಯಕ್ತಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ

    ಬೆಂಗಳೂರು: ಕೊಲೆ, ಮಾನನಷ್ಟ, ಜಮೀನು ವಿವಾದ ಇತ್ಯಾದಿ ವಿಚಾರಗಳಿಗೆ ಸಂಬಂಧ ಪಟ್ಟ ಕೇಸ್‍ಗಳು ನ್ಯಾಯಾಲಯಕ್ಕೆ ಬರುವುದು ಸಾಮಾನ್ಯ. ಆದರೆ ಮನೆಯ ಗೃಹ ಪ್ರವೇಶದಂದು ಹೆಲಿಕಾಪ್ಟರ್‍ನಿಂದ ಪುಷ್ಪಾರ್ಚನೆ ನಡೆಸಲು ನಾನು ಮುಂದಾಗಿದ್ದು, ಅನುಮತಿ ನೀಡಬೇಕು ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಮುನಿರಾಜು ಎಂಬವರು ವರ್ತೂರಿನಲ್ಲಿ ಮನೆ ಕಟ್ಟಿಸಿದ್ದು, ಮನೆಯ ಗೃಹಪ್ರವೇಶ ಸಮಾರಂಭ ಫೆ.9ರಂದು ನಡೆಯಲಿದೆ. ಈ ಗೃಹಪ್ರವೇಶ ಸಮಾರಂಭಕ್ಕೆ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಪೊಲೀಸರಲ್ಲಿ ಅನುಮತಿ ಕೇಳಿದ್ದಾರೆ. ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ ನೀಡದ್ದಕ್ಕೆ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

    ಇಂದು ಅರ್ಜಿ ವಿಚಾರಣೆ ವೇಳೆ ಮುನೀರಾಜು ಪರ ವಕೀಲರು, ಪಕ್ಕದ ಮನೆಯ ನಿವಾಸಿಯೊಬ್ಬರು ಗೃಹಪ್ರವೇಶ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಿದ್ದಾರೆ. ಹೀಗಾಗಿ ಮುನಿರಾಜು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪುಷ್ಪಾರ್ಚನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಆದ್ರೆ ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಅರ್ಜಿದಾರನನ್ನು, ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ನಡೆಸಲು ಹೈಕೋರ್ಟಿಗೆ ಬರಬೇಕೇ? ಪಕ್ಕದ ಮನೆಯವನು ಮಾಡುತ್ತಾನೆ ಎಂದು ನೀವು ಆತನನ್ನು ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಷ್ಟೇ ಅಲ್ಲದೇ ಈ ರೀತಿ ಹಣ ಪೋಲು ಮಾಡುವ ಬದಲು ಬಡವರಿಗೆ ನೆರವಾಗಬಹುದಲ್ಲವೇ? ಮುಂಬೈ ಶ್ರೀಮಂತರೊಬ್ಬರು ಮಗಳ ಅದ್ಧೂರಿ ಮದುವೆ ಬದಲು ಮನೆಯನ್ನು ಹಂಚಿದ್ದಾರೆ. ಬಡವರಿಗಾಗಿ ನಾರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ನೀವು ಯಾಕೆ ಆ ರೀತಿ ಮಾಡಬಾರದು. ಒಣ ಆಡಂಬರ ಯಾಕೆ ಬೇಕು ಎಂದು ಪ್ರಶ್ನಿಸಿದರು.

    ನ್ಯಾಯಾಧೀಶರು ಉದಾಹರಣೆಯೊಂದಿಗೆ ಸಲಹೆ ನೀಡಿದರೂ ಅರ್ಜಿದಾರರಾದ ಮುನಿರಾಜು ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಹೀಗಾಗಿ ನ್ಯಾಯಾಧೀಶರು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಅನುಮತಿ ನೀಡಲು ಕಾನೂನು ಬದ್ಧ ಹಕ್ಕು ಇದೆಯೇ? ಇದರ ಬಗ್ಗೆ ನಿಲುವು ಏನು ಎಂದು ಸರ್ಕಾರಿ ವಕೀಲರಿಗೆ ಪ್ರಶ್ನಿಸಿ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.