Tag: ಹೇಮಾವತಿ ನದಿ

  • ಅರೆಮಲೆನಾಡು ಹಾಸನ ಜಿಲ್ಲೆಯಲ್ಲೂ ಮೂಡಿದ ಬರ: 1 ಸಾವಿರ ಅಡಿ ಕೊರೆದರೂ ನೀರಿಲ್ಲ

    ಅರೆಮಲೆನಾಡು ಹಾಸನ ಜಿಲ್ಲೆಯಲ್ಲೂ ಮೂಡಿದ ಬರ: 1 ಸಾವಿರ ಅಡಿ ಕೊರೆದರೂ ನೀರಿಲ್ಲ

    ಹಾಸನ: ಅರೆಮಲೆನಾಡು ಎಂದು ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿದೆ. ಕಳೆದೆರೆಡು ವರ್ಷಗಳಿಂದ ಮಳೆರಾಯ ಮುನಿಸಿಕೊಂಡಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಗಳಂತೆ ಹಾಸನದಲ್ಲಿ ಈ ಬಾರಿ ಬರ ಕಾಣಿಸಿಕೊಂಡಿದೆ. ಮಳೆ ಇಲ್ಲದೆ ಕುಡಿವ ನೀರಿಗೆ ಹಾಹಾಕಾರ, ಮೇವಿನ ಕೊರತೆ ಒಂದೆಡೆಯಾದ್ರೆ ಕೋಟ್ಯಾಂತರ ಪ್ರಮಾಣದ ಬೆಳೆ ನಷ್ಟ ಒಂದು ಕಡೆಯಾಗಿದೆ.

    ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಅಂದಾಜು 115 ಕೋಟಿ ರೂ. ಬೆಳೆನಷ್ಟ ಸಂಭವಿಸಿದೆ. ಇದಕ್ಕೆ ಇನ್ಬುಟ್ ಸಬ್ಸಿಡಿ ರೂಪದಲ್ಲಿ 115 ಕೋಟಿ ಪರಿಹಾರ ಕೊಡಬೇಕಿದ್ದು, ಇಷ್ಟು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ಹಲವು ದಿನಗಳು ಕಳೆದಿದ್ದರೂ, ಪರಿಹಾರ ಹಣವನ್ನು ಸರ್ಕಾರ ಈವರೆಗೂ ಬಿಡುಗಡೆ ಮಾಡಿಲ್ಲ. ಜಿಲ್ಲೆಯ ವಾರ್ಷಿಕ ಬಿತ್ತನೆ ಪ್ರದೇಶ 2.54 ಲಕ್ಷ ಹೆಕ್ಟೇರ್. ಪ್ರಸಕ್ತ ವರ್ಷ 2.6 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಮಳೆಯಿಲ್ಲದೇ 1.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.33 ಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ಹಾಳಾಗಿದೆ.

    ಬರಿದಾದ ಕೆರೆಯ ಒಡಲು: 2016-17 ನೇ ಸಾಲಿನಲ್ಲಿ ಒಟ್ಟು 43 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ ಸರಕಾರದ 5 ಲಕ್ಷ ಪರಿಹಾರ ಸಿಕ್ಕಿರುವುದು 33 ರೈತರಿಗೆ ಮಾತ್ರ. ಸಾಲದಿಂದಲೇ ಸಾವಿಗೆ ಶರಣಾಗಿದ್ದರೂ ಪರಿಹಾರ ಸಿಗದ ರೈತ ಕುಟುಂಬಗಳು ಅಂಗಲಾಚುವ ಪರಿಸ್ಥಿತಿ ಇದೆ. ಇದು ಬೆಳೆನಷ್ಟ ಮತ್ತು ಅನ್ನದಾತನ ಸ್ಥಿತಿಯಾದರೆ ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವುದರಿಂದ ಸಣ್ಣ ಹಾಗೂ ದೊಡ್ಡ ಕೆರೆ ಸೇರಿ 3200 ಕ್ಕೂ ಹೆಚ್ಚು ಕೆರೆಗಳ ಪೈಕಿ ಬಹುತೇಕ ಕೆರೆಗಳ ಒಡಲು ಬರಿದಾಗಿವೆ.

    ಜಿಲ್ಲಾ ಮಟ್ಟದ ಸರ್ವೇ ಪ್ರಕಾರ, ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ 1074 ಮಿಲಿ ಮೀಟರ್. ಆದರೆ ಮುಂಗಾರು ಆರಂಭದಿಂದ ಡಿಸೆಂಬರ್ ಕೊನೆವರೆಗೆ ಬಿದ್ದಿರುವುದು ಕೇವಲ 778 ಮಿಮೀ ಮಳೆ ಮಾತ್ರ. ಶೇ.28 ರಷ್ಟು ಮಳೆ ಕೊರತೆಯಾಗಿದ್ದು, ತೇವಾಂಶ ಕೊರತೆಯಾಗಿ ಜಿಲ್ಲೆಯಲ್ಲಿ ಶೇ.75 ರಷ್ಟು ಬೆಳೆ ಹಾಳಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ಒಟ್ಟು 8 ತಾಲೂಕುಗಳಾದ ಹಾಸನ, ಹೊಳೆನರಸೀಪುರ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ ಮತ್ತು ಸಕಲೇಶಪುರ ತಾಲೂಕು ಪೈಕಿ ಸಕಲೇಶಪುರ ಹೊರತುಪಡಿಸಿ 7 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.

    ಕುಸಿದ ಅಂತರ್ಜಲ ಮಟ್ಟ: ಮಳೆಯಿಲ್ಲದೇ ಹೆಚ್ಚು ಕಡೆ ಅಂತರ್ಜಲ ಬತ್ತಿ ಹೋಗಿರುವುದರಿಂದ ಜಿಲ್ಲಾದ್ಯಂತ ಕುಡಿಯುವ ನೀರಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳ ಪರಿಸ್ಥಿತಿ ಹೇಳ ತೀರದ್ದಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಮನೆ ಕೆಲಸ ಬಿಟ್ಟು ಬಿಂದಿಗೆ ನೀರು ಹಿಡಿದುಕೊಳ್ಳಲು ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಈಗಲೂ ಇದೆ. ಒಂದು ಬಿಂದಿಗೆ ನೀರು ಪಡೆಯಲು ಗ್ರಾಮಸ್ಥರು, ಮಹಿಳೆಯರು ರಾತ್ರಿ ವೇಳೆಯೂ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಹಾಸನ, ಅರಸೀಕೆರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಕ್ಷರಶಃ ಬಿಗಡಾಯಿಸಿದೆ. ಮಳೆಯಿಲ್ಲದೇ ಅಂತರ್ಜಲ ಬತ್ತಿ ಹೋಗಿ 1 ಸಾವಿರ ಅಡಿ ಬೋರ್ ವೆಲ್ ಕೊರೆದರೂ ನೀರು ಬರುತ್ತಿಲ್ಲ.ಬಂದರೂ ಅದರಲ್ಲಿ ಫ್ಲೋರೈಡ್ ಅಂಶ ಮೊದಲೇ ಸಂಕಷ್ಟದಲ್ಲಿರುವ ಜೀವಕೆ ವಿಷ ಉಣಿಸುತ್ತಿದೆ.

    ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಿದ್ದ ಜನಪ್ರತಿನಿಧಿಗಳು ಅವರತ್ತ ಇವರು, ಇವರತ್ತ ಅವರು ಬೊಟ್ಟು ಮಾಡಿಕೊಂಡು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಅತ್ತ ರೈತ ಜಾನುವಾರುಗಳಿಗೆ ಕುಡಿಯಲು ನೀರು ಜೊತೆಗೆ ಮೇವಿಲ್ಲದೇ ಪರಿತಪಿಸುತ್ತಿದ್ದಾನೆ. ಮೂಕ ದನಕರುಗಳ ಮೇವಿನ ಸ್ಥಿತಿ ಎಲ್ಲಿಗೆ ಬಂದಿದೆ ಎಂದ್ರೆ ಹಿಂದೆಲ್ಲಾ ಮೆಕ್ಕೆಜೋಳದ ಕಡ್ಡಿ ನಿರುಪಯುಕ್ತ ಎನಿಸಿತ್ತು. ಜೋಳ ಬಿಡಿಸಿದ ನಂತರ ರಾಶಿ ರಾಶಿ ಜೋಳದ ಕಡ್ಡಿಗೆ ಬೆಂಕಿ ಹಚ್ಚಲಾಗುತ್ತಿತ್ತು. ಆದರೀಗ ಆ ಒಣ ಕಡ್ಡಿಯೇ ಜಾನುವಾರುಗಳ ಹೊಟ್ಟೆ ತುಂಬಿಸಬೇಕಿದೆ. ಜಾನುವಾರುಗಳು ಮತ್ತು ರೈತನ ಪರಿಸ್ಥಿತಿ ಹೀಗಿದ್ದರೂ, ಜವಾಬ್ದಾರಿ ಸ್ಥಾನದಲ್ಲಿರುವವರು ಒಮ್ಮೆಯೂ ಇತ್ತ ಮುಖ ಮಾಡಿಲ್ಲ. ಕಲ್ಪವೃಕ್ಷ ತೆಂಗಿನ ಮರಗಳು ಎಳನೀರು ಕೊಡುವ ಬದಲು ಅವುಗಳು ತಮ್ಮ ಜೀವ ಉಳಿಸಿಕೊಳ್ಳಲು ನೀರು ಬೇಡುತ್ತಿವೆ.

    ಪಾಳು ಬಿದ್ದ ಗದ್ದೆಗಳು: ಇತ್ತೀಚೆಗೆ ಕೇಂದ್ರ ಬರ ಅಧ್ಯಯನ ತಂಡವೂ ಸೇರಿದಂತೆ ಒಟ್ಟು 3 ತಜ್ಞರ ತಂಡಗಳು ಜಿಲ್ಲೆಯ ಕೆಲಭಾಗಗಳಲ್ಲಿ ಪ್ರವಾಸ ಮಾಡಿ ಮಳೆ-ಬೆಳೆಯ ಪರಿಸ್ಥಿತಿ ಅವಲೋಕಿಸಿದೆ. ಜಿಲ್ಲೆಯ ಜೀವನದಿ ಹೇಮಾವತಿ ಕಳೆದ 3 ದಶಕಗಳಿಂದ ಕೇವಲ ಹಾಸನಕ್ಕೆ ಮಾತ್ರವಲ್ಲದೇ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೂ ಕುಡಿಯಲು ಮತ್ತು ಕೃಷಿಗೆ ನೀರುಣಿಸುತ್ತಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶ ಆರೂವರೆ ಲಕ್ಷ ಹೆಕ್ಟೇರ್ ಇದೆ. ಆದ್ರೆ ಕಳೆದ 2 ವರ್ಷಗಳಿಂದ ಒಮ್ಮೆಯೂ ಹೇಮಾವತಿ ಜಲಾಶಯ ಭರ್ತಿಯಾಗದೇ ಇರುವುದರಿಂದ ನೀರಾವರಿ ಬೆಳೆಗೆ ನೀರಿಲ್ಲದೇ ಲಕ್ಷಾಂತರ ರೈತರ ಅನ್ನದ ಆಸೆಗೆ ಕಲ್ಲು ಬಿದ್ದಿದೆ. ಭತ್ತ ಬೆಳೆಯಬೇಕಿದ್ದ ಗದ್ದೆಗಳು ಪಾಳು ಬಿದ್ದಿವೆ.

    ಹೇಮಾವತಿ ಡ್ಯಾಂನ ನೀರಿನ ಸಂಗ್ರಹ ಕಡಿಮೆಯಾಗಿದೆ. 37 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿಂದು 3.57 ಟಿಎಂಸಿ ನೀರಿದೆ. ಇದರಲ್ಲಿ ಬಳಕೆಗೆ ನೀರು ಲಭ್ಯವಿಲ್ಲ. ಆದರೆ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ನದಿಯ ಒಳಹರಿವು ಮಾತ್ರ ಶೂನ್ಯವಾಗಿದೆ. ಇದನ್ನು ನಂಬಿರುವ ಮಂದಿಗೆ ಮುಂದಿನ ದಿನಗಳು ಕಡುಕಷ್ಟವಾಗುವುದು ಖಚಿತ.

     

  • ವೀಡಿಯೋ: ನದಿ ಮಧ್ಯಭಾಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಮಂಡ್ಯದ ಯುವಕ

    ವೀಡಿಯೋ: ನದಿ ಮಧ್ಯಭಾಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಮಂಡ್ಯದ ಯುವಕ

    ಮಂಡ್ಯ: ನದಿಯ ಮಧ್ಯಭಾಗದಲ್ಲಿ ಸಿಲುಕಿದ್ದ 7 ಜನರನ್ನ ಯುವಕನೊಬ್ಬ ರಕ್ಷಿಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.

    ಬಟ್ಟೆ ತೊಳೆಯಲು ಹೋಗಿ ನದಿ ಮಧ್ಯೆ ಪ್ರಾಣಾಪಾಯದಲ್ಲಿ ಸಿಲುಕಿದ್ದ ಏಳು ಜನರು ಪ್ರಾಣ ಭಯದಿಂದ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ 30 ವರ್ಷದ ರವಿ ಎಂಬ ಯುವಕ ಟ್ಯೂಬ್ ಸಹಾಯದಿಂದ ನದಿಗೆ ಇಳಿದು ಒಬ್ಬೊಬ್ಬರನ್ನೇ ರಕ್ಷಿಸಲು ಮುಂದಾಗಿದ್ದು, 4 ಜನರನ್ನು ರಕ್ಷಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಉಳಿದವರನ್ನೂ ರಕ್ಷಿಸಿದ್ದಾರೆ.

    ನಡೆದಿದ್ದೇನು?: ಇಂದು ಬೆಳಗ್ಗೆ ಗ್ರಾಮದ ಸಮೀಪದ ಹರಿಯುವ ಹೇಮಾವತಿ ನದಿಯಲ್ಲಿ ಮಹದೇವಮ್ಮ, ಚಲುವನಾಯಕ, ಕೋಮಲ, ಶೋಭಾ, ಚಂದ್ರೇಶ್, ರಾಜಮಣಿ, ಲಕ್ಷ್ಮಣ್ ನಾಯಕ್ ಎಂಬ ಏಳು ಜನ ಬಟ್ಟೆ ತೊಳೆಯಲು ಹೋಗಿದ್ದಾರೆ. ಶುಕ್ರವಾರ ಸಂಜೆಯಿಂದ ನದಿಗೆ ಏಕಾಏಕಿ ನೀರು ಬಿಟ್ಟಿದ್ದರಿಂದ ಇಂದು ಬೆಳಗ್ಗೆ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಬಟ್ಟೆ ತೊಳೆಯಲು ಹೋದ ಏಳು ಜನರೂ ನದಿ ಮಧ್ಯೆ ಸಿಲಿಕಿಕೊಂಡು ವಾಪಸ್ ದಂಡೆಗೆ ಬರಲಾಗದೇ ಭಯಭೀತರಾಗಿದ್ದರು. ನದಿ ನೀರು ಹೆಚ್ಚಾದಂತೆಲ್ಲ ಬಂಡೆ ಮೇಲೆ ಹತ್ತಿ ಕುಳಿತ ಏಳು ಮಂದಿ ಪ್ರಾಣ ಭಯದಿಂದ ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದ್ರು.

    ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ರವಿ ನದಿಗೆ ಇಳಿದು ರಕ್ಷಣೆ ಮಾಡಲು ಮುಂದಾಗಿದ್ದರು. ರವಿ ನಾಲ್ಕು ಜನರನ್ನು ರಕ್ಷಿಸುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಮತ್ತು ಬೋಟ್ ಬಳಸಿ ಇನ್ನುಳಿದವರನ್ನೂ ರಕ್ಷಿಸಿದ್ದಾರೆ. ಯುವಕನ ಕೆಲಸವನ್ನ ಅಗ್ನಿಶಾಮಕ ಸಿಬ್ಬಂದಿ ಮತ್ತು ಸುತ್ತಮುತ್ತಲ ಗ್ರಾಮದ ಜನ ಶ್ಲಾಘಿಸಿದ್ದಾರೆ.

    https://www.youtube.com/watch?v=ltRgJt9xjcw