Tag: ಹೇಮಾವತಿ ನದಿ

  • ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆ

    ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆ

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆಯಾಗಿವೆ.

    ಯುವತಿಯನ್ನು ವಿಕೃತವಾಗಿ ಕೊಲೆಗೈದಿರುವ ದುಷ್ಕರ್ಮಿಗಳು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿದ್ದಾರೆ. ಬಂಡಿಹೊಳೆ ಗ್ರಾಮದ ಹೇಮಾವತಿ ದಡದಲ್ಲಿರುವ ವಿದ್ಯುತ್ ಸ್ಥಾವರ ಘಟಕದ ಸಮೀಪ ಯುವತಿ ರುಂಡ ಮತ್ತು ದೇಹದ ಅಂಗಾಂಗಗಳು ಪತ್ತೆಯಾಗಿವೆ. ಎರಡು ದಿನಗಳ ಹಿಂದೆ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: 18 ವರ್ಷದ ಯುವತಿಯ ಕತ್ತು ಕೊಯ್ದು ಕೊಲೆ- ಅತ್ಯಾಚಾರದ ಶಂಕೆ

    ಸ್ಥಳೀಯರಿಗೆ ಮೃತದೇಹ ಒಂದು ಭಾಗ ಮಾತ್ರ ಕಾಣಿಸಿತ್ತು. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಿಸಿದಾಗ ಉಳಿದ ಅಂಗಾಂಗಗಳು ಸಿಕ್ಕಿವೆ. ಘಟನೆಯಿಂದಾಗಿ ಬಂಡಿಹೊಳೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಮಾಡಿ, ನಾಲಿಗೆ ಕತ್ತರಿಸಿ ಚಿತ್ರಹಿಂಸೆ – ಚಿಕಿತ್ಸೆ ಫಲಿಸದೆ 20ರ ಯುವತಿ ಸಾವು

  • ಯಗಚಿ ಜಲಾಶಯ ಭರ್ತಿ- ದೇವಾಲಯದ ಮೆಟ್ಟಿಲವರೆಗೂ ಹೇಮಾವತಿ ನದಿ ನೀರು

    ಯಗಚಿ ಜಲಾಶಯ ಭರ್ತಿ- ದೇವಾಲಯದ ಮೆಟ್ಟಿಲವರೆಗೂ ಹೇಮಾವತಿ ನದಿ ನೀರು

    ಹಾಸನ: ಕರ್ನಾಟಕದಲ್ಲಿ ಭಾರೀ ಮಳೆ ಆಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತ ಹೇಮಾವತಿ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

    ಹೇಮಾವತಿ ನದಿಯಲ್ಲಿ ಇಂದಿನ ಒಳಹರಿವು 36,849 ಕ್ಯೂಸೆಕ್‍ಗೆ ಏರಿಕೆ ಆಗಿದೆ. ಬುಧವಾರ ಬೆಳಗ್ಗೆ 24,185 ಕ್ಯೂಸೆಕ್‍ನಷ್ಟಿದ್ದ ಒಳಹರಿವು ಕಳೆದ 48 ಗಂಟೆಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಆಗಿದೆ.

    ಹೇಮಾವತಿ ಅಣೆಕಟ್ಟೆಯ ಗರಿಷ್ಟ ಮಟ್ಟ 2922.00 ಅಡಿಯಾಗಿದ್ದು, ಇಂದಿನ ಮಟ್ಟ 2906.29 ಅಡಿ ಆಗಿದೆ. ಒಳ ಹರಿವು 36,849 ಕ್ಯೂಸೆಕ್‍ನಷ್ಟಿದ್ದು, ಹೊರ ಹರಿವು 1,400 ಕ್ಯೂಸೆಕ್ ಆಗಿದೆ. ಅಣೆಕಟ್ಟೆಯ ಗರಿಷ್ಟ ಸಂಗ್ರಹ ಮಟ್ಟ 37.103 ಟಿಎಂಸಿ ಆಗಿದ್ದು, ಇಂದಿನ ಸಂಗ್ರಹ ಮಟ್ಟ 23.97 ಟಿಎಂಸಿ ಆಗಿದೆ.

    ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಮುಂಜಾಗ್ರತೆಯಿಂದ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್ ಮೂಲಕ 1,500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ.

    ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 1,700ಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 964.60 ಅಡಿಯಾಗಿದ್ದು, ಜಲಾಶಯದ ಇಂದಿನ ಮಟ್ಟ 964.40 ಅಡಿಯಾಗಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

    ಹೇಮಾವತಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹಾಸನ ಜಿಲ್ಲೆಯ ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲವರೆಗೂ ನೀರು ಬಂದಿದೆ. ಬೆಂಗಳೂರು- ಮಂಗಳೂರು ಹೆದ್ದಾರಿ ಪಕ್ಕದಲ್ಲೇ ಈ ದೇವಾಲಯ ಇದೆ. ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಮೆಟ್ಟಿಲವರೆಗೂ ಹೇಮಾವತಿ ನದಿ ನೀರು ಆವರಿಸಿದೆ.

  • ಕೊಚ್ಚಿ ಹೋದ ಸೇತುವೆ, ಮೈದುಂಬಿ ಹರಿಯೋ ನದಿಯ ಒಡಲೇ ದಾರಿ!

    ಕೊಚ್ಚಿ ಹೋದ ಸೇತುವೆ, ಮೈದುಂಬಿ ಹರಿಯೋ ನದಿಯ ಒಡಲೇ ದಾರಿ!

    ಚಿಕ್ಕಮಗಳೂರು: ಓಡಾಡೋದಕ್ಕೆ ರಸ್ತೆ ಇಲ್ಲದೆ ಮೈದುಂಬಿ ಹರಿಯೋ ಹೇಮಾವತಿ ನದಿಯೊಳಗೆ ಸ್ಥಳೀಯರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನದಿ ದಾಟುವಂತಹಾ ದುಸ್ಸಾಹಸಕ್ಕೆ ಕೈಹಾಕತ್ತಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದ್ದ ಸೇತುವೆ ಕಳೆದ ಮಲೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

    ಸೇತುವೆ ಕೊಚ್ಚಿ ಹೋಗಿದ್ದ ವೇಳೆ ಶಾಸಕರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಜನನಾಯಕರು ಭರವಸೆ ಭರವಸೆಯಾಗೇ ಉಳಿದಿದೆ. ಸೇತುವೆಗೆ ತೀವ್ರ ಹಾನಿಯಾಗಿದ್ದರಿಂದ ಸ್ಥಳೀಯರೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಸುಂಕಸಾಲೆ, ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬಂಕೇನಹಳ್ಳಿಯಲ್ಲಿ ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ.

    ಸೇತುವೆ ಕೂಡ ಕೊಚ್ಚಿ ಹೋಗಿದ್ದರಿಂದ ಈ ಭಾಗದ ಸುಮಾರು ನಾಲ್ಕೈದು ಹಳ್ಳಿಯ ಜನ ಬೇರೆ ದಾರಿ ಇಲ್ಲದೆ ಕಂಗಾಲಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಪಟ್ಟಣಕ್ಕೆ ಬರಬೇಕಾದರೆ ಗ್ರಾಮಸ್ಥರು ನೀರಿಗೆ ಇಳಿದು ನಡೆದೇ ದಡ ಸೇರಬೇಕಾಗಿದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ನೀರಿನ ಪ್ರಮಾಣ ಕೂಡ ಏರುತ್ತಲೇ ಇದೆ. ಸ್ಥಳೀಯರು ಅಗತ್ಯ ಹಾಗೂ ಅನಿವಾರ್ಯದ ಕೆಲಸಕ್ಕಾಗಿ ಜೀವದ ಹಂಗು ತೊರೆದು ಮಂಡಿ-ತೊಡೆ ಮಟ್ಟದ ನೀರಿಗಿಳಿದು ಅದರಲ್ಲಿ ಒಬ್ಬೊರ ಕೈ ಮತ್ತೊಬ್ಬರು ಹಿಡಿದು ನದಿ ದಾಟುತ್ತಿದ್ದಾರೆ.

    ಜನಪ್ರತಿನಿಧಿಗಳು ಕೂಡಲೇ ನೆರವಿಗೆ ಬರಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ನಿರ್ಮಾಣ ಅಸಾಧ್ಯ ಹಾಗಾಗಿ, ಇಲ್ಲಿ ಅನಾಹುತವೊಂದು ಸಂಭವಿಸೋ ಮುನ್ನ ಜನಪ್ರತಿನಿಗಳು ಎಚ್ಚೆತ್ತುಕೊಂಡು ಸ್ಥಳೀಯರಿಗೆ ಓಡಾಡಲು ಬೇರೆ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

    &nbsp

  • ಮೊನ್ನೆಯಷ್ಟೇ ಬರ್ತ್‍ಡೇ ಆಚರಿಸಿಕೊಂಡಿದ್ದ ಯುವಕ ಈಜಲು ಹೋಗಿ ಸಾವು

    ಮೊನ್ನೆಯಷ್ಟೇ ಬರ್ತ್‍ಡೇ ಆಚರಿಸಿಕೊಂಡಿದ್ದ ಯುವಕ ಈಜಲು ಹೋಗಿ ಸಾವು

    ಚಿಕ್ಕಮಗಳೂರು: ಹೇಮಾವತಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿಯ ಹಾಲೂಕು ಕೂಡಿಗೆ ಬಳಿ ನಡೆದಿದೆ.

    ಮೃತ ಯುವಕ 27 ವರ್ಷದ ಗವಿರಾಜ್, ಅಂಡುಗುಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ಗ್ರಾಮದ ಬಳಿ ಹಾದು ಹೋಗಿರೋ ಹೇಮಾವತಿ ನದಿಯಲ್ಲಿ ಈಜಲು ಹೋಗಿದ್ದರು. ಆದರೆ ಯಾರಿಗೂ ಈಜು ಬರುತ್ತಿರಲಿಲ್ಲ. ಈ ವೇಳೆ ಗವಿರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಸ್ನೇಹಿತರು ಆತನನ್ನು ನೀರಿನಿಂದ ಎಳೆದುಕೊಳ್ಳಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

    ಮೃತ ಗವಿರಾಜ್ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮೃತನ ಮೃತದೇಹಕ್ಕಾಗಿ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದು, ಐದು ಗಂಟೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೃತ ಗವಿರಾಜ್ ಮಧ್ಯಾಹ್ನ ಮನೆಗೆ ಮಟನ್ ತೆಗೆದುಕೊಂಡು ಹೋಗಿ ಕೊಟ್ಟಿದ್ದ. ಅಲ್ಲದೇ ಸ್ನೇಹಿತರ ಜೊತೆ ಈಜಲು ಹೋಗುವ ಮುನ್ನ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಗೋಣಿಬೀಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇನ್ನು ತಾಲೂಕಿನ ಬಾಳೂರು ಬಳಿ ಟ್ರ್ಯಾಕ್ಟರ್ ಪಲ್ಪಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಟರ್ ಸಪ್ಲೈ ಟ್ಯಾಂಕರ್ ಬಾಳೂರಿನಿಂದ ಕೊಟ್ಟಿಗೆಹಾರದ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಳೆ ಇದ್ದ ಕಾರಣ ಟ್ರ್ಯಾಕ್ಟರ್ ಬ್ರೇಕ್ ಹಿಡಿದಿಲ್ಲ. ಹೀಗಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆದರೆ, ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಸೇತುವೆಯಿಂದ ಜಿಗಿತ – ಹೇಮಾವತಿಯಲ್ಲಿ ಕೊಚ್ಚಿ ಹೋದ ಮೂವರು ಯುವಕರು

    ಸೇತುವೆಯಿಂದ ಜಿಗಿತ – ಹೇಮಾವತಿಯಲ್ಲಿ ಕೊಚ್ಚಿ ಹೋದ ಮೂವರು ಯುವಕರು

    ಹಾಸನ: ಸೇತುವೆ ಮೇಲಿನಿಂದ ಜಂಪ್ ಮಾಡಿ ಹೇಮಾವತಿ ನದಿ ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೊಚ್ಚಿ ಹೋದ ಯುವಕರನ್ನು ರತನ್ (22), ಭೀಮರಾಜ್ (27) ಮತ್ತು ಮನು (27) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಹಬ್ಬದ ನಿಮಿತ್ತ ಸ್ನಾನಕ್ಕೆ ಎಂದು ನದಿಯ ಬಳಿ ಹೋಗಿದ್ದ ಮೂವರು ಗೆಳೆಯರು ನಂತರ ಮೋಜಿಗಾಗಿ ಸೇತುವೆ ಮೇಲಿನಿಂದ ಹಾರಿದ್ದಾರೆ.

    ಮೊದಲು ರತನ್ ಜಂಪ್ ಮಾಡಿದ್ದು, ನಂತರ ಆತನನ್ನು ಹಿಂಬಾಲಿಸಿ ಭೀಮರಾಜ್ ಮತ್ತು ಮನು ಹೋಗಿದ್ದಾರೆ. ನದಿಯ ನೀರು ರಭಸದಿಂದ ಹರಿಯುತ್ತಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

  • ಸಕ್ಕರೆ ನಾಡಿಗೂ ತಟ್ಟಿದ ಪ್ರವಾಹ ಭೀತಿ

    ಸಕ್ಕರೆ ನಾಡಿಗೂ ತಟ್ಟಿದ ಪ್ರವಾಹ ಭೀತಿ

    ಮಂಡ್ಯ: ಕ್ಷಣ ಕ್ಷಣಕ್ಕೂ ಕೆಆರ್‌ಎಸ್‌ ಡ್ಯಾಂ ಒಳ ಹರಿವು ಹೆಚ್ಚುತ್ತಿದ್ದು, ಸಕ್ಕರೆ ನಾಡಿಗೂ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣರಾಜಪೇಟೆ ತಾಲೂಕಿನ ಹೇಮಗಿರಿಯ ಬಂಡಿಹೊಳೆ ಬಳಿ ತ್ರಿಶೂಲ್ ಜಲ ವಿದ್ಯುತ್ ಘಟಕದೊಳಕ್ಕೆ ಹೇಮಾವತಿ ನೀರು ನುಗ್ಗಿದೆ.

    ಬಂಡಿಹೊಳೆಯ ತ್ರಿಶೂಲ್ ಜಲವಿದ್ಯುತ್ ಘಟಕದೊಳಕ್ಕೆ ನೀರು ನುಗ್ಗಿ ಎರಡು ಟರ್ಬೈನ್‍ಗಳು ಮುಳುಗಡೆಯಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹೇಮಗಿರಿ ಬಳಿ ತೆಪ್ಪೋತ್ಸವ ನಡೆಯುವ ಬೆಟ್ಟದಲ್ಲಿ ಪಾದದವರೆಗೂ ಪ್ರವಾಹದ ನೀರು ಬಂದಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ತೆಂಗು, ಬಾಳೆ, ಅಡಿಕೆ, ಕಬ್ಬು ಮುಳುಗಡೆಯಾಗಿದೆ.

    ಇಂದು ಮಧ್ಯಾಹ್ನದ ನಂತರ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ನದಿಯ ನೀರಿಗೆ ಇಳಿಯದಂತೆ ತಾಲೂಕು ಆಡಳಿತದ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ನದಿ ದಡದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

    ಇತ್ತ ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದ್ದು, ಶುಕ್ರವಾರ ಬೆಳಗ್ಗೆ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 20.915 ಟಿಎಂಸಿ ನೀರು ಸಂಗ್ರಹವಾಗಿತ್ತು. ಇಂದು ಬೆಳಗ್ಗೆ ವೇಳೆಗೆ ಕೆಆರ್‌ಎಸ್‌ನಲ್ಲಿ 30.261 ಟಿಎಂಸಿ ನೀರು ಸಂಗ್ರಹವಾಗಿದೆ.

    ಗೊರೂರು ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಆರ್ ಪೇಟೆ ತಾಲೂಕಿನ ಬಂಡಿ ಹೊಳೆ ಸಮೀಪದ ಹೇಮಗಿರಿ ಫಾಲ್ಸ್ ನಲ್ಲಿ ಹೇಮಾವತಿ ನದಿಯು ಉಕ್ಕಿ ಹರಿಯುತ್ತಿದೆ. ಹಾಸನ ಜಿಲ್ಲೆಯ ಗೊರೂರು ಬಳಿಯ ಹೇಮಾವತಿ ಡ್ಯಾಂನಲ್ಲಿ ನೀರಿನ ಮಟ್ಟ ಅಧಿಕವಾಗಿರುವುದರಿಂದ ಹೇಮಾವತಿ ನದಿಪಾತ್ರದ ಜನರಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಕೆ.ಆರ್.ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿ ವ್ಯಾಪ್ತಿಯ ನೂರಾರು ಎಕರೆ ತೋಟಕ್ಕೆ ನೀರು ನುಗ್ಗಿದೆ. ನೂರಾರು ಎಕರೆ ತೆಂಗು, ಅಡಕೆ ತೋಟ ಜಲಾವೃತವಾಗಿದ್ದು, ಈಗಾಗಲೇ 8-10 ಮನೆಗಳು ಜಖಂ ಆಗಿವೆ. ಅಷ್ಟೇ ಅಲ್ಲದೇ ಅಂಕನಾಥೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ.

  • ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ

    ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ

    ತುಮಕೂರು: ಹೇಮಾವತಿ ನಾಲೆಗೆ ಡೈನಾಮೈಟ್ ಇಡುತ್ತೇನೆ. ತಾಕತ್ತಿದ್ದರೆ ತಡೆಯಿರಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೇಮಾವತಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, ಅರಸೀಕೆರೆ ತಾಲೂಕಿನಲ್ಲಿ ಒಂದಿಂಚು ಮಳೆಯಾಗಿಲ್ಲ. ನಮ್ಮ ತಾಲೂಕಿನ ಕೆರೆಗಳು ತುಂಬುತ್ತಿಲ್ಲ. ಇದಕ್ಕೆ ಲಿಫ್ಟ್ ಇರಿಗೇಷನ್ ಯಾಕೆ ಬೇಕು. ಹೀಗೆ ಆದರೆ ನಾಲೆಗೆ ಡೈನಾಮೈಟ್ ಇಡ್ತೀನಿ. ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ. ಅದೇನಾಗುತ್ತೋ ನೋಡೇ ಬಿಡೋಣ. ಕೇಸ್ ಆಗುತ್ತಾ ಆಗಲಿ, ಡೈನಾಮೈಟ್ ಇಟ್ಟೇ ಇಡ್ತೀನಿ ಎಂದು ತಿಪಟೂರು ಮೂಲಕ ಅರಸೀಕೆರೆಗೆ ಹರಿಯಬೇಕಾದ ನೀರು ಸಮರ್ಪಕವಾಗಿ ಹರಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಭೆ ನಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಂತರ ಕೆಲವು ಕಡೆ ನೀರು ಬಿಡದೇ ಹೊಡೆದಾಡುತ್ತಿದ್ದಾರೆ. ನಮಗೆ ನೀರು ಕೊಡುತ್ತಿಲ್ಲ ಇದರಿಂದ ಜನರು ರೊಚ್ಚಿಗೆದ್ದಿದ್ದಾರೆ. ತಿಪಟೂರು ಭಾಗದಲ್ಲಿ ಆರು ಕೆರೆ ನೀರು ಹೋಗಬೇಕು. ತಿಪಟೂರು ಜಾಗದ ನಾಲ್ಕು-ಐದು ಹಳ್ಳಿಯವರು ನೀರು ನೀಡುತ್ತಿದ್ದಂತೆ ಪೈಪನ್ನು ಒಡೆದುಹಾಕುತ್ತಾರೆ. ಮೂರು ನಾಲ್ಕು ವರ್ಷಗಳಿಂದ ಇದೇ ರೀತಿಯ ಕೆಲಸಗಳು ನಡೆಯುತ್ತಿವೆ. ಈ ಬಾರಿ ಅತಿ ಹೆಚ್ಚಾಗಿ ಮಾಡುತ್ತಿದ್ದಾರೆ. ಅದರಿಂದ ನಾವು ರಕ್ಷಣೆ ಕೊಡಿ ಎಂದು ಕೇಳಿ ಆಗಿದೆ. ಜನರು ರೊಚ್ಚಿಗೆದ್ದು ನಾವೇ ತಡೆಹಿಡಿಯುತ್ತವೆ ಎಂದು ಬರುತ್ತಾರೆ. ಆದರೂ ನಾವು ಶಾಂತಿಯಿಂದ ಇದ್ದೇವೆ. ಹೀಗಾಗಿ ನಾನು ಸಭೆಯಲ್ಲಿ ಆಕ್ರೋಶದ ಮಾತನ್ನು ಆಡಿದ್ದೇನೆ ಎಂದು ತಿಳಿಸಿದರು.

    ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಎಸ್.ಆರ್ ಶ್ರೀನಿವಾಸ್, ಸಿಎಎಸ್ ಪುಟ್ಟರಾಜು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ತುಮಕೂರು: ಹೇಮಾವತಿ ನೀರಿಗಾಗಿ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

    ಜಯರಾಂ ಅವರು ತನ್ನ ಕ್ಷೇತ್ರದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ತುರುವೇಕೆರೆ ತಾಲೂಕಿನ ಅಡವನಹಳ್ಳಿ ಹೇಮಾವತಿ ನಾಲೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಡಿಸಿಎಂ ಡಾ ಜಿ.ಪರಮೇಶ್ವರ್ ಹೇಮಾವತಿ ನೀರು ಹರಿಸಲು ತಾರತಮ್ಯ ಮಾಡಿದ್ದು, ತನ್ನ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು.

    ಒಂಭತ್ತು ಕ್ಷೇತ್ರವನ್ನು ಬರಗಾಲ ಎಂದು ಘೋಷಿಸಿದ್ದಾರೆ. ಆದರೆ ನಮ್ಮ ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ತಾನು ಬಿಜೆಪಿ ಶಾಸಕ ಎಂದು ತನ್ನ ಕ್ಷೇತ್ರ ಕಡೆಗಣಿಸಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸಮುದ್ರದ ಪಕ್ಕದಲ್ಲಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಅಂತಹ ಪರಿಸ್ಥಿತಿ ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ತುರುವೇಕೆರೆ ತಾಲೂಕಿನ ಮೂಲಕ ಅನೇಕ ತಾಲೂಕಿಗೆ ನೀರು ಹರಿಯುತ್ತಿದೆ. ಆದರೆ ನನ್ನ ತಾಲೂಕಿಗೆ ನೀರು ಬರುತ್ತಿಲ್ಲ. ಇಂದು ಇಲ್ಲಿಗೆ ಬಂದಿರುವ ಜನರು ಊಟ ಮಾಡದೇ ಬಂದಿದ್ದಾರೆ. ಅವರ ಕಷ್ಟ ನಮಗೆ ಗೊತ್ತು ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿ ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಶಾಸಕರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೇಮಾವತಿ ಜಲಾಶಯ ಭರ್ತಿ- ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ

    ಹೇಮಾವತಿ ಜಲಾಶಯ ಭರ್ತಿ- ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ

    ಹಾಸನ: ಅನೇಕ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ ನೆರವೇರಿದೆ.

    ಸತತ ನಾಲ್ಕು ವರ್ಷಗಳಿಂದ ಗೊರೂರಿನಲ್ಲಿರುವ ಹೇಮಾವತಿ ನದಿ ತುಂಬಿರಲಿಲ್ಲ. ಆದರೆ ಮಳೆಯಿಂದಾಗಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ದಂಪತಿ ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ

    ಹೇಮಾವತಿ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹೇಮಾವತಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನಾಲ್ಕು ವರ್ಷಗಳ ನಂತರ ಜಲಾಶಯದಿಂದ ನೀರು ಹರಿಯುತ್ತಿದ್ದು, ಜಲಧಾರೆ ನೋಡಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಈಗ ನೀರಿನ ಮಟ್ಟ 2,919.37 ಅಡಿ ಇದೆ. ಜಲಾಶಯದಲ್ಲಿ 24,743 ಕ್ಯೂಸೆಕ್ ಒಳಹರಿವು ಇದೆ.

  • ಹೇಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ

    ಹೇಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ

    ಚಿಕ್ಕಮಗಳೂರು: ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಾಣ ಹೋಮ ನಡೆದಿದೆ.

    ಮೀನು ಹಿಡಿಯಲು ಕಿಡಿಗೇಡಿಗಳು ನೀರಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದ್ರಿಂದ ಮಲೆನಾಡಿನ ಜೀವನದಿಯಾಗಿರುವ ಹೇಮಾವತಿ ನದಿ ಕಲುಷಿತಗೊಂಡಿದೆ. ಹೇಮಾವತಿ ನದಿ ಇಲ್ಲಿನ ಜಾವಳಿಯಲ್ಲಿ ಹುಟ್ಟಿ ಮೂಡಿಗೆರೆ ಮೂಲಕ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಡ್ಯಾಂಗೆ ನೀರು ಸೇರುತ್ತದೆ.

    ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.