Tag: ಹೆಸ್ಕಾಂ

  • ವಿದ್ಯುತ್ ಕಂಬದಲ್ಲೇ ಮೃತಪಟ್ಟು ನೇತಾಡಿತು  ಹೆಸ್ಕಾಂ ಸಿಬ್ಬಂದಿಯ ಮೃತದೇಹ!

    ವಿದ್ಯುತ್ ಕಂಬದಲ್ಲೇ ಮೃತಪಟ್ಟು ನೇತಾಡಿತು ಹೆಸ್ಕಾಂ ಸಿಬ್ಬಂದಿಯ ಮೃತದೇಹ!

    ಗದಗ: ವಿದ್ಯುತ್ ಅವಘಡದಿಂದ ಹೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಸೊರಟೂರು ಬಳಿ ನಡೆದಿದೆ.

    ಚನ್ನಯ್ಯ ವೀರಯ್ಯ ಸೊಪ್ಪಿನ ಮಠ(22) ಮೃತ ಯುವಕ. ಚನ್ನಯ್ಯ ಶಿರಹಟ್ಟಿ ಹೆಸ್ಕಾಂ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯುತ್ ಲೈನ್ ದುರಸ್ತಿ ವೇಳೆ ಈ ಘಟನೆ ಸಂಭವಿಸಿದೆ. ಲೈನ್ ದುರಸ್ತಿ ವೇಳೆ ಹೈ ಟೆನ್ಷನ್ ತಂತಿ ತಗುಲಿ ಚನ್ನಯ್ಯ ಮೃತಪಟ್ಟಿದ್ದಾರೆ. ಪರಿಣಾಮ ಚನ್ನಯ್ಯ ಮೃತ ದೇಹ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದೆ.

    ಸಹೋದ್ಯೋಗಿಗಳೊಂದಿಗೆ ಕಳುಹಿಸದೇ ಒಬ್ಬನನ್ನೇ ಕೆಲಸಕ್ಕೆ ಕಳುಹಿಸಿದ್ದರಿಂದ ಈ ದುರಂತ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪವರ್ ಕಟ್ ಭಾಗ್ಯ: ಕತ್ತಲೆಯಲ್ಲಿ ಮುಳುಗಿದ ಗದಗ ಜಿಲ್ಲಾಸ್ಪತ್ರೆ

    ಪವರ್ ಕಟ್ ಭಾಗ್ಯ: ಕತ್ತಲೆಯಲ್ಲಿ ಮುಳುಗಿದ ಗದಗ ಜಿಲ್ಲಾಸ್ಪತ್ರೆ

    ಗದಗ: ಜಿಲ್ಲೆಯ ಪ್ರಮುಖ ಕೇಂದ್ರ ಸ್ಥಾನದಲ್ಲಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಇಂದು ಮೂರು ಗಂಟೆಗಳ ಕಾಲ ಪವರ್ ಕಟ್ ಆಗಿದ್ದರಿಂದ ರೋಗಿಗಳು ನರಳಾಡಿದ್ದಾರೆ. ಕಳೆದೆರೆಡು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಪವರ್ ಕಟ್ ಸಮಸ್ಯೆ ಉಂಟಾಗುತ್ತಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಪರಿಹಾರ ಕ್ರಮವನ್ನು ಕೈಗೊಂಡಿಲ್ಲ.

    ಆಸ್ಪತ್ರೆಯ ಎಲ್ಲಾ ವಾರ್ಡ್‍ಗಳಲ್ಲಿರುವ ರೋಗಿಗಳು ಕತ್ತಲಲ್ಲೇ ಪರದಾಡುತ್ತಾ ಚಿಕಿತ್ಸೆಗಾಗಿ ಕಾದುಕುಳಿತ್ತಿದ್ದಾರೆ. ಸೋಮವಾರವೂ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ರಿಂದ 1 ಗಂಟೆ ವರೆಗೆ ಸತತವಾಗಿ ಮೂರು ಗಂಟೆಗಳ ಕಾಲ ಪವರ್ ಕಟ್ ಮಾಡಲಾಗಿದೆ.

    ಹುಬ್ಬಳ್ಳಿ ಯಿಂದ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ಹೆಸ್ಕಾಂ ನಿಂದ ಪವರ್ ಕಟ್ ಮಾಡಲಾಗಿದೆ. ಎರಡು ದಿನಗಳಿಂದ ವಿದ್ಯುತ್ ಕೈಕೊಡುತ್ತಿದ್ದರೂ ಜಿಲ್ಲಾ ಆಸ್ಪತ್ರೆಯ ಆಡಳಿತ ಮಂಡಳಿ ಪರ್ಯಾಯವಾಗಿ ಯಾವ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ.

    ದಿನನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುವ ಈ ಆಸ್ಪತ್ರೆಯಲ್ಲಿ ಇದ್ದ ಮೂರು ಜನರೇಟರ್ ಕೈಕೊಟ್ಟಿದ್ದು ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿರುವ 60, 70 ಮತ್ತು 120 ಕೆವಿ ಜನರೇಟರ್‍ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. 120 ಕೆವಿ ಜನರೇಟರ್ ಇತ್ತೀಚೆಗೆ ಖರೀದಿಸಿದ್ದರೂ ಅದು ಏಕಾಏಕಿ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಾಣಂತಿಯರ ವಾರ್ಡ್, ನವಜಾತು ಶಿಶು ಕೇಂದ್ರ, ಐಸಿಯು ವಾರ್ಡ್‍ಗಲ್ಲಿನ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಇದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

    ಜಿಲ್ಲೆಯ ಹಲವು ಪ್ರದೇಶಗಳಿಂದ ಪ್ರತಿನಿತ್ಯ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅಲ್ಲದೇ ರಕ್ತ ತಪಾಸಣೆಗಾಗಿ ಬೆಳಗ್ಗೆಯಿಂದಲೇ ನೂರಾರು ಜನರು ಸಾಲು ಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂರುತ್ತದೆ. ಬಡ ಜನರು ಆನಾರೋಗ್ಯ ಸಮಸ್ಯೆಯಿಂದ ಜೀವ ರಕ್ಷಣೆಗೆ ಆಸ್ಪತ್ರೆ ಬಂದರೆ ಆಸ್ಪತೆಯಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆಸ್ಪತ್ರೆಯ ಸಿಬ್ಬಂದಿಯು ಮಾನವೀಯತೆ ದೃಷ್ಟಿಯಿಂದಲೂ ರೋಗಿಗಳನ್ನು ಸಮಸ್ಯೆ ಬಗ್ಗೆ ಕೇಳುವುದಕ್ಕೆ ಹೋಗಿಲ್ಲ. ಜಿಲ್ಲಾ ಆಸ್ಪತ್ರೆಯ ಆಡಳಿತ ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶಗೊಂಡ ರೋಗಿಗಳು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು, ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.

    https://www.youtube.com/watch?v=dOiemSbAkj0

  • ವಿದ್ಯುತ್ ಕಂಬಕ್ಕೆ ಶಾಲಾ ವಾಹನ ಡಿಕ್ಕಿ, ತಪ್ಪಿತು ಭಾರೀ ಅನಾಹುತ

    ವಿದ್ಯುತ್ ಕಂಬಕ್ಕೆ ಶಾಲಾ ವಾಹನ ಡಿಕ್ಕಿ, ತಪ್ಪಿತು ಭಾರೀ ಅನಾಹುತ

    ವಿಜಯಪುರ: ಖಾಸಗಿ ಶಾಲಾ ವಾಹನವೊಂದು ರಸ್ತೆಯ ಇಳಿಜಾರಿನಿಂದ ತನ್ನಿಂತಾನೆ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಗರದಲ್ಲಿ ನಡೆದಿದೆ.

    ಆದರ್ಶನಗರ ಸೇವಾಲಾಲ್ ಹಾಗೂ ದುರ್ಗಾ ದೇವಸ್ಥಾನದ ಬಳಿ ಶಾಲಾ ಬಸ್ ನ್ನು ನಿಲ್ಲಿಸಲಾಗಿತ್ತು. ಈ ವೇಳೆ ಬಸ್ ತನ್ನಿಂದ ತಾನೇ ಮುಂದಕ್ಕೆ ಚಲಿಸಿ, ವಿದ್ಯುತ್ ಪ್ರವಹಿಸುತ್ತಿರುವ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ ಯಾರು ಇಲ್ಲದೇ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗಿದ್ದರಿಂದ, ಕಂಬ ಅರ್ಧ ಕಟ್ ಆಗಿ ಬಸ್ ಮೇಲೆಯೇ ಬಿದ್ದಿದೆ. ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವ ಅಧಿಕಾರಿಗಳು ಆಗಮಿಸದೇ ನಿರ್ಲಕ್ಷ್ಯವಹಿಸಿ ತಡವಾಗಿ ಬಂದಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿನ ಭಾಷಲ್ ಮಿಶನ್ ಶಾಲೆಯ ಬಳಿ ನಡೆದಿದೆ.

    ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಮೂಲದ ಶಂಕರಗೌಡ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಶಂಕರಗೌಡ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ ವಿದ್ಯುತ್ ಸಮಸ್ಯೆ ಆಗಿದ್ದ ಕಾರಣ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಕಂಬದಲ್ಲೇ ಸಾವನಪ್ಪಿದ್ದಾರೆ.

    ನಂತರ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ನಿಲ್ಲಿಸಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಶಂಕರ್ ಕಳೆದ ಹಲವು ವರ್ಷಗಳಿಂದ ಕಾಂಟ್ರಾಕ್ಟರ್ ಬಳಿ ಕೆಲಸ ಮಾಡಿಕೊಂಡಿದ್ದರು. ಮುಂಜಾಗ್ರತಾ ಕ್ರಮವಿಲ್ಲದೇ ಕಾಂಟ್ರಾಕ್ಟರ್ ತಾಜುದ್ದೀನ್ ಯುವಕನನ್ನ ಕಂಬ ಏರಿಸಿದ್ದಾರೆಂದು ಆಕ್ರೋಶಗೊಂಡ ಸ್ಥಳೀಯರು ತಾಜುದ್ದೀನ್‍ಗೆ ಥಳಿಸಿದ್ರು. ಪೊಲೀಸರ ನಡುವೆಯೇ ಎಳೆದಾಡಿಕೊಂಡು ಕಾಂಟ್ರಾಕ್ಟರ್ ಮೇಲೆ ಹಲ್ಲೆ ಮಾಡಿದ್ರು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ರು.

  • ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಹುಬ್ಬಳ್ಳಿ: ವಿದ್ಯುತ್ ಕಂಬ ಏರಿ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮನ್ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    21 ವರ್ಷದ ಅಲ್ತಾಫ್ ಅಂಗಡಿ ಮೃತ ಲೈನ್ ಮೆನ್. ಅಲ್ತಾಫ್ ಕಳೆದ ಮೂರು ತಿಂಗಳಿನಿಂದ ಹೆಸ್ಕಾಂನಲ್ಲಿ ಗುಡುಗೇರಿ ವಿಭಾಗದ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ರಟ್ಟಿಗೇರಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದರಿಂದ ವಿದ್ಯುತ್ ಸಂಪರ್ಕ ದುರಸ್ಥಿ ಮಾಡಲು ಅಲ್ತಾಫ್ ಬಂದಿದ್ದರು.

    ಈ ವೇಳೆ ಕಂಬವನ್ನ ಏರಿ ರಿಪೇರಿ ಮಾಡುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಅಲ್ತಾಫ್ ಸಾವನ್ನಪ್ಪಿದ್ದಾರೆ. 4 ಗಂಟೆಗಳ ಕಾಲ ಅಲ್ತಾಫ್ ಮೃತ ದೇಹ ಕಂಬದಲ್ಲಿಯೇ ನೇತಾಡುತ್ತಿತ್ತು. ವಿಷಯ ತಿಳಿಸಿದ್ರೂ ತಡವಾಗಿ ಬಂದ ಹೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಶವವನ್ನು ತೆರವುಗೊಳಿಸಿದರು. ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜೋತುಬಿದ್ದಿವೆ ಹೈಟೆನ್ಶನ್ ತಂತಿಗಳು, ಕರೆಂಟ್ ವಯರ್‍ಗೆ ಕಟ್ಟಿಗೆಗಳೇ ಆಧಾರ

    ಜೋತುಬಿದ್ದಿವೆ ಹೈಟೆನ್ಶನ್ ತಂತಿಗಳು, ಕರೆಂಟ್ ವಯರ್‍ಗೆ ಕಟ್ಟಿಗೆಗಳೇ ಆಧಾರ

    ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರದ ತುಂಡಿನ ಮೇಲೆ ಹೈ ಟೆನ್ಶನ್ ಕೇಬಲ್ ಅಳವಡಿಕೆ ಮಾಡಿದ್ದು ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವಂತಾಗಿದೆ.

    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂದರೆ ಮಳೆಗಾಲದಲ್ಲಿ ಕಟ್ಟಿಗೆಗೆ ಆಧಾರವಾಗಿ ಅಳವಡಿಸಿರುವ ವಿದ್ಯುತ್ ತಂತಿಗಳು ಗಾಳಿಗೆ ಯಾರ ಮೇಲಾದರೂ ಬಿದ್ದರೆ ಪ್ರಾಣ ಪಕ್ಷಿಯೇ ಹಾರಿ ಹೋಗುತ್ತೆ ಎಂಬ ಅರಿವು ಇಲ್ಲದಂತಾಗಿದೆ. ಕಳೆದ ಹಲವು ತಿಂಗಳಿನಿಂದ ಕರೋಶಿ ಗ್ರಾಮದ ಅನೇಕ ಕಡೆಗಳಲ್ಲಿ ಹೀಗೆ ವಿದ್ಯುತ್ ತಂತಿಗಳನ್ನು ಕಟ್ಟಿಗೆಗೆ ಆಧಾರವಾಗಿ ನಿಲ್ಲಿಸಿದ್ದಾರೆ. ಅದರಲ್ಲೂ ರಸ್ತೆ ಬದಿಯಲ್ಲಿಯೂ ವಿದ್ಯುತ್ ಕಂಬಗಳನ್ನು ಅಳವಡಿಸದೇ ಮರದ ತುಂಡುಗಳ ಮೇಲೆ ತಂತಿಗಳನ್ನು ಹರಿಸಲಾಗಿದೆ. ಒಂದು ವೇಳೆ ಈ ತಂತಿಗಳು ಮಳೆಗಾಳಿಗೆ ಹರಿದು ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಅಧಿಕಾರಿಗಳದ್ದೇ ನೇರ ಹೊಣೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಹುತೇಕ ಹಳ್ಳಿಗಳಲ್ಲಿ ಇಂಥ ಪರಿಸ್ಥಿತಿ ತುಂಬಾ ಇದೆ. ಹೈ ಟೆನ್ಶನ್ ತಂತಿಗಳನ್ನ ಅಳವಡಿಸಲು ವಿದ್ಯುತ್ ಕಂಬಗಳನ್ನು ಬಳಸದೇ ಹೀಗೆ ಕಟ್ಟಿಗೆ ಮೇಲೆಯೇ ವಿದ್ಯುತ್ ತಂತಿಗಳನ್ನು ಜೋತು ಬಿಟ್ಟಿದ್ದಾರೆ. ಇನ್ನೂ ಕೆಲವು ಕಡೆಗಳಂತೂ ವಿದ್ಯುತ್ ತಂತಿಗಳ ಮೇಲೆ ಕಲ್ಲುಗಳನ್ನು ಹಗ್ಗಗಳಿಗೆ ಕಟ್ಟಿ ತಂತಿಗಳು ಒಂದಕ್ಕೊಂದು ಕೂಡದಂತೆ ಅವೈಜ್ಞಾನಿಕ ರೀತಿಯನ್ನು ಹೆಸ್ಕಾಂ ಅಧಿಕಾರಿಗಳು ಅನುಸರಿಸಿದ್ದಾರೆ. ಕರೋಶಿ ಗ್ರಾಮದಲ್ಲಿರುವ ವಿದ್ಯುತ್ ಕಂಬಗಳ ಪರಿಸ್ಥಿತಿಯಂತೂ ಹೇಳತಿರದಂತಿದೆ. ಇಂದು ಬೀಳುತ್ತವೆ, ನಾಳೆ ಬೀಳುತ್ತವೆ ಎಂಬ ಭಯದಲ್ಲಿ ಜನರು ಕಾಲ ಕಳೆಯುವಂತ ಪರಿಸ್ಥಿತಿ ಇದೆ.

    ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದು ಮೂವರು ಪ್ರಾಣ ಕಳೆದುಕೊಂಡಿರುವ ಉದಾಹರಣೆ ಕಣ್ಣು ಮುಂದೆ ಇದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಎಂಜಿನಿಯರ್ ಶ್ರೀಕಾಂತ್, ಈಗಾಗಲೇ ಸೆಕ್ಷನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇನ್ನೊಂದು ವಾರದೊಳಗೆ ಸರಿ ಮಾಡಿಸುತ್ತೇವೆಂದು ಭರವಸೆ ನೀಡಿದ್ದಾರೆ.

     

  • ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಧಾರವಾಡ: ವಿದ್ಯುತ್ ತಂತಿ ತಗುಲಿ ರೈತರಿಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕಬ್ಬು ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕ್ಯಾರಕೊಪ್ಪ (52) ಹಾಗೂ ಚನ್ನಬಸಪ್ಪ ಧೂಳಿಕೊಪ್ಪ (45) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ದುರ್ದೈವಿಗಳು.

    ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಗ್ಗೆ ರೈತರು ಹೆಸ್ಕಾಂಗೆ ದೂರನ್ನ ನೀಡಿದ್ದರು. ದೂರು ನೀಡಿದ್ದರೂ ಸಿಬ್ಬಂದಿ ದುರಸ್ತಿ ಮಾಡಿರಲಿಲ್ಲ.

    ಘಟನೆ ನಡೆದ ನಂತರ ಆಕ್ರೋಶಿತ ರೈತರು ಕಲಘಟಗಿಯ ಹೆಸ್ಕಾಂ ಕಚೇರಿಗೆ ನುಗ್ಗಿ ಕಿಟಕಿ ಹಾಗೂ ಕುರ್ಚಿಗಳನ್ನ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಕೂಡಾ ನಡೆಸಲಾಗಿದೆ.

    ಇದೇ ವೇಳೆ ಸಾವನ್ನಪ್ಪಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.