Tag: ಹೆಸರು

  • ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಅವರ ಹೆಸರನ್ನು ರೋಡ್, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಇಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ನಗರದ ಪ್ರಮುಖ ರಸ್ತೆ, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಪವರ್ ಸ್ಟಾರ್ ಹೆಸರಿಡಲು ಬೆಂಗಳೂರು ಮಹಾನನಗರ ಪಾಲಿಕೆ ವತಿಯಿಂದ ಅಭಿಪ್ರಾಯ ವ್ಯಕ್ತವಾಗಿದೆ. ಪುನೀತ್ ಅಭಿಮಾನಿಗಳ ಒತ್ತಾಸೆಯ ಬೆನ್ನಲ್ಲೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ನಗರದ ಮುಖ್ಯ ರಸ್ತೆಯೊಂದಕ್ಕೆ ಪುನೀತ್ ಹೆಸರಿಡಲು ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

    ಈಗಾಗಲೇ ರಾಜಾಜಿನಗರ ಮುಖ್ಯ ರಸ್ತೆಗೆ ಪುನೀತ್ ಹೆಸರಿಡಲಾಗಿದ್ದು, ಪಕ್ಕದ ವೆಸ್ಟ್ ಆಫ್ ಕಾರ್ಡ್ ರೋಡ್‍ಗೆ ಕೂಡ ಪುನೀತ್ ನಾಮಕರಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಮೊದಲು ಪುನೀತ್ ರಾಜ್‍ಕುಮಾರ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ, ನಂತರ ಸರ್ಕಾರದ ಮುಂದೆ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ನಗರದ ಪ್ರತಿಷ್ಠಿತ ಪಾರ್ಕ್, ಆಟದ ಮೈದಾನ, ಮೆಟ್ರೋ ಹಾಗೂ ಬಸ್ ನಿಲ್ದಾಣಕ್ಕೂ ಅಪ್ಪು ಹೆಸರಿಡಲು ಚಿಂತನೆ ನಡೆಸಲಾಗಿದೆ. ಆದರೆ ಈ ವಿಚಾರವಾಗಿ ಅಂತಿಮವಾಗಿ ಸರ್ಕಾರ ನಿರ್ಧರಿಸಬೇಕಾಗಿದೆ.

  • ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪಗಡೆಕಲ್ಲಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ನಾಗರೀಕರ ದಾಖಲೆಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿ, ಬೇರೆ ಗ್ರಾಮದ ಹೆಸರು ಬರುತ್ತಿದ್ದು, ಇದರಿಂದ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ 50 ಕುಟುಂಬಗಳಿದ್ದು, 250 ಮಂದಿ ಮತದಾರರಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿರುವ ಎಲ್ಲ ನಾಗರೀಕರ ಪಡಿತರ ಚೀಟಿ, ಮತದಾರರ ಚೀಟಿ, ಇ-ಸ್ವತ್ತು ಹಾಗೂ ಜಾತಿ, ಆದಾಯ ದೃಢೀಕರಣ ಪತ್ರ, ನರೇಗಾ ಜಾಬ್ ಕಾರ್ಡ್ ಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿದೆ. ಪಕ್ಕದ ಕನಗೋನಹಳ್ಳಿ ಗ್ರಾಮದ ಹೆಸರು ಬರುತ್ತಿದೆ ಎಂದರು. ಇದನ್ನೂ ಓದಿ: ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಬೇರೆ ಗ್ರಾಮದ ಹೆಸರು ಬರುತ್ತಿರುವುದರಿಂದ ರೈತರು, ವಿದ್ಯಾರ್ಥಿಗಳು, ಬಡವರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಶಾಲಾ ದಾಖಲಾತಿಗಳಲ್ಲಿ ಮಾತ್ರ ಪಗಡೆಕಲ್ಲಹಳ್ಳಿ ಎಂದು ತೋರಿಸಲಾಗಿದೆ. ಉಳಿದ ದಾಖಲಾತಿಗಳಲ್ಲಿ ಬೇರೆ ಗ್ರಾಮದ ಹೆಸರು ಬರುತ್ತಿದೆ ಎಂದು ಅಳಲು ತೋಡಿಕೊಂಡರು.

    ಈ ಬಗ್ಗೆ ಪಾಂಡವಪುರ ತಾಲೂಕು ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮ ತುಂಬಾ ಹಿಂದುಳಿದಿದ್ದು, ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ರಸ್ತೆಗಳು ಕಲ್ಲು, ಮಣ್ಣಿನಿಂದ ಕೂಡಿದ್ದು, ಓಡಾಡಲು ತೊಂದರೆಯಾಗಿದೆ. ಒಳಚರಂಡಿಗಳು ಆಗಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡು ಗ್ರಾಮದ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

  • ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

    ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಹೆಸರು ನಾಳೆ ರಿವೀಲ್ ಆಗಲಿದೆ.

    ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಈ ಕುರಿತಂತೆ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ವೀಡಿಯೋ ಆಗಿದ್ದು, ಇದರ ಜೊತೆಗೆ ಜ್ಯೂನಿಯರ್ ಚಿರುವಿನ ಹಲವಾರು ಹೆಸರುಗಳನ್ನು ಬಹಿರಂಗ ಪಡಿಸಿ. ಕೊನೆಗೆ ಸೆಪ್ಟೆಂಬರ್ 3 ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ನಟ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ವಿಧಿವಶರಾಗಿದ್ದರು. ಬಳಿಕ 5 ತಿಂಗಳಿಗೆ ಅರ್ಥಾತ್ 22 ಅಕ್ಟೋಬರ್ ನಲ್ಲಿ ಮೇಘನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

  • ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಪ್ರಸ್ತಾಪ – ಕಟೀಲ್ ಸ್ಪಂದನೆ

    ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಪ್ರಸ್ತಾಪ – ಕಟೀಲ್ ಸ್ಪಂದನೆ

    ಮಂಗಳೂರು: ಜಿಲ್ಲೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವಂತೆ ಬಿಲ್ಲವ ಮುಖಂಡರ ನಿಯೋಗವೊಂದು ಇಂದು ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿ ಮಾಡಿದೆ.

    ದಕ್ಷಿಣ ಕನ್ನಡದ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಪೀಠಾದಿ ಪತಿಗಳಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಮಾರ್ಗದರ್ಶನದಲ್ಲಿ ಕಂಕನಾಡಿ ಗರೋಡಿ ಕ್ಷೇತ್ರದ ಅದ್ಯಕ್ಷರಾದ ಶ್ರೀ ಜಿತ್ತರಂಜನ್ ರವರ ನೇತ್ರತ್ವದಲ್ಲಿ ಬಿಲ್ಲವ ಮುಖಂಡರ ನಿಯೋಗವು ನಳಿನ್ ಕುಮಾರ್ ಕಟೀಲ್ ಅವರನ್ನು ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಭೇಟಿ ಮಾಡಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿತು.

    ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್‍ರವರು ಮಂಗಳೂರು ಅಂತರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರನ್ನು ಇಡುವ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗಳು ನಡೆಯತ್ತಿದ್ದು, ಬೇರೆ ಹೆಸರುಗಳ ಬಗ್ಗೆಯು ಪ್ರಸ್ತಾಪ ಕೆಲವರು ಮಾಡಿದ್ದಾರೆ. ನಾನು ಕೋಟಿ ಚೆನ್ನಯ್ಯ ಬಗ್ಗೆ ಅಪಾರ ಭಕ್ತಿಯುಳ್ಳವನಾಗಿದ್ದು ಇದರ ಬಗ್ಗೆ ಸರ್ಕಾರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

    ಸರ್ಕಾರದ ಕಾನೂನು ನಿಯಾಮವಳಿಗಳ ಚೌಕಟ್ಟಿನಲ್ಲಿ ನಡೆಯಬೇಕಾಗಿರುವುದರಿಂದ ಜಿಲ್ಲೆಯ ಎಲ್ಲ ಜನರ ವಿಶ್ವಾಸಗಳಿಸುವುದರ ಜೊತೆಗೆ ನಿರ್ಣಯ ಕೈಗೊಳ್ಳಬೇಕಾಗಿದೆ. ಪೂಜ್ಯ ಕನ್ಯಾಡಿ ಶ್ರೀಗಳ ಮಾರ್ಗದರ್ಶನ ಮತ್ತು ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಳಗೊಂಡಂತೆ ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯಗಳೊಂದಿಗೆ ಕೋಟಿ-ಚೆನ್ನಯರ ಹೆಸರನ್ನು ಇಡುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು. ಈ ಬಗ್ಗೆ ಯಾವುದೇ ಗೊಂದಲ ಮಾಡದೆ ಎಲ್ಲಾ ಸಮುದಾಯಗಳು ಒಂದು ದಿಕ್ಕಿನಲ್ಲಿ ಹೋಗುವ ಅವಶ್ಯಕತೆ ಇದೆ ಎಂದು ಕಟೀಲ್ ತಿಳಿಸಿದರು.

  • ಎಫ್‍ಬಿ ಪ್ರೊಫೈಲ್ ಚೇಂಜ್ ಮಾಡಿದ ಮೇಘನಾ ರಾಜ್

    ಎಫ್‍ಬಿ ಪ್ರೊಫೈಲ್ ಚೇಂಜ್ ಮಾಡಿದ ಮೇಘನಾ ರಾಜ್

    – ಚಿರು ನೆನಪಲ್ಲಿ ಹೆಸರು ಬದಲಾವಣೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೆನಪಿನಲ್ಲಿಯೇ ಪತ್ನಿ ನಟಿ ಮೇಘನಾ ರಾಜ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದೀಗ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಪ್ರೊಫೈಲ್ ಫೋಟೋ ಕೂಡ ಚೇಂಜ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ – ಅಭಿಮಾನಿಗಳ ಬಗ್ಗೆ ಮೇಘನಾ ಮಾತು

    ನಟಿ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಇಷ್ಟು ದಿನ ಅವರ ಫೋಟೋ ಮಾತ್ರ ಇತ್ತು. ಆದರೆ ಈಗ ಪತಿಯ ನೆನಪಿನಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ. ನೂತನವಾಗಿ ಅಪ್‍ಡೇಟ್ ಮಾಡಿರುವ ಫೋಟೋದಲ್ಲಿ ಚಿರು ಮತ್ತು ಮೇಘನಾ ಕಾರಿನಲ್ಲಿ ಕುಳಿತಿದ್ದು, ಇಬ್ಬರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ಸಿಕ್ಕಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ಕ್ಯೂಟ್ ಆಗಿ ನಗುತ್ತಿರುವುದನ್ನು ಕಾಣಬಹುದಾಗಿದೆ.

     

    ಮೇಘನಾ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಮೇಘನಾ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂ ಖಾತೆಯಲ್ಲಿ ಇಷ್ಟು ದಿನ ಮೇಘನಾ ರಾಜ್ ಎಂದು ಮಾತ್ರ ಇತ್ತು. ಆದರೆ ಈಗ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಎಡಿಟ್ ಮಾಡಿದ್ದು, ಅದರಲ್ಲಿ ಸರ್ಜಾ ಕುಟುಂಬದ ಸರ್ ನೇಮ್ ಸೇರಿಸಿಕೊಂಡಿದ್ದಾರೆ. ಹೀಗಾಗಿ ಈಗ ‘ಮೇಘನಾ ರಾಜ್ ಸರ್ಜಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಮೇಘನಾ ತಮ್ಮ ಪತಿ ಚಿರಂಜೀವಿ ಸರ್ಜಾ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಶಾಶ್ವತವಾಗಿ ನೆನಪಿಸುವಂತೆ ಮಾಡಿಕೊಂಡಿದ್ದಾರೆ.

    ಚಿರು ಸಾವಿನ ನಂತರ ಮೇಘನಾ ರಾಜ್ ತಮ್ಮ ಭಾವನೆಗಳನ್ನು ಇನ್‍ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದರು. ಮೊದಲಿಗೆ ತನ್ನ ಪತಿಯ ಬಗ್ಗೆ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್ ಮಾಡಿ, ಕಷ್ಟದ ದಿನಗಳಲ್ಲಿ ತಮ್ಮ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು.

  • ರಶ್ಮಿಕಾ ಬದಲು ನನಗೆ ಯಾವ ಹೆಸ್ರು ಸೂಟ್ ಆಗುತ್ತೆ – ಅಭಿಮಾನಿಗಳಿಗೆ ಮಂದಣ್ಣ ಪ್ರಶ್ನೆ

    ರಶ್ಮಿಕಾ ಬದಲು ನನಗೆ ಯಾವ ಹೆಸ್ರು ಸೂಟ್ ಆಗುತ್ತೆ – ಅಭಿಮಾನಿಗಳಿಗೆ ಮಂದಣ್ಣ ಪ್ರಶ್ನೆ

    ಬೆಂಗಳೂರು: ಸ್ಯಾಂಡಲ್‍ವುಡ್, ಟಾಲಿವುಡ್‍ನಲ್ಲಿ ಸಾಕಷ್ಟು ಹೆಸರು ಗಳಿಸಿ, ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಕ್ವಾರಂಟೈನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಹೆಚ್ಚು ಹೊತ್ತು ಇಂಟರಾಕ್ಟ್ ಮಾಡುತ್ತಿದ್ದಾರೆ. ಸದ್ಯ ರಶ್ಮಿಕಾ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ. ರಶ್ಮಿಕಾ ಬಿಟ್ಟು ನನಗೆ ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಲಿಲ್ಲಿ ಪ್ರಶ್ನೆ ಮಾಡಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಅವರನ್ನ ಮನೆಯಲ್ಲಿ ಪ್ರೀತಿಯಿಂದ ಮೋನಿ ಎಂದು ಕರೆಯುತ್ತಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಈಗ ಟ್ವೀಟ್ ಮಾಡಿರುವ ರಶ್ಮಿಕಾ, ನನ್ನ ಹೆಸರನ್ನ ಬದಲಾಯಿಸಿ, ಬೇರೆ ಹೆಸರನ್ನು ಇಟ್ಟುಕೊಳ್ಳುವುದಾದರೆ ಯಾವ ಹೆಸರಿಟ್ಟುಕೊಳ್ಳಲಿ? ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಪ್ರಶ್ನೆ ಹಾಕಿದ್ದಾರೆ. ರಶ್ಮಿಕಾ ಪ್ರಶ್ನೆಗೆ ಅಭಿಮಾನಿಗಳು ಒಂದರ ಮೇಲೊಂದು ರೀ-ಟ್ವೀಟ್ ಮಾಡುತ್ತಾ ಅನೇಕ ಹೆಸರುಗಳನ್ನು ಹೇಳಿದ್ದಾರೆ.

    ಕೆಲವರು ನಿಮಗೆ ಸಾನ್ವಿ ಹೆಸರು ಸೂಟ್ ಆಗುತ್ತೆ ಅಂದ್ರೆ, ಇನ್ನು ಕೆಲವರು ಲಿಲ್ಲಿ, ತಳಪತಿ ಮಂದಣ್ಣ, ಗೀತಾ, ರೋಸ್ ಹೆಸರು ಸೂಪರ್ ಆಗಿರುತ್ತೆ ಎಂದು ರೀ-ಟ್ವೀಟ್ ಮಾಡಿದ್ದಾರೆ. ಆದರೆ ರಶ್ಮಿಕಾ ಅವರ ಕಟ್ಟಾ ಅಭಿಮಾನಿಗಳು ಮಾತ್ರ ಯಾವುದೂ ಬೇಡ, ಈಗ ಇರುವ ರಶ್ಮಿಕಾ ಹೆಸರೇ ಕ್ಯೂಟ್ ಆಗಿದೆ ಎಂದು ಸಲಹೆ ನೀಡಿದ್ದಾರೆ.

    https://twitter.com/RashmikaHearts/status/1263123588338483201

    ಈ ಹಿಂದೆ ರಶ್ಮಿಕಾ ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿ, ಇಡೀ ದಿನ ನಿಮಗಾಗಿ ಮೀಸಲಿಟ್ಟಿದ್ದೇನೆ. ನೀವು ಹೇಳಿದ ಬಣ್ಣದ ಡ್ರೆಸ್ ಹಾಕುತ್ತೇನೆ. ನೀವು ಹೇಳಿದ ತಿಂಡಿ ಇನ್ನುತ್ತೇನೆ. ನೀವು ಹೇಳಿದಂತೆಯೇ ನಡೆದುಕೊಳ್ತೇನೆ ಅಂತ ಪೋಸ್ಟ್ ಮಾಡಿದ್ದರು. ಆ ಟ್ವೀಟ್ ಕೂಡ ಸಖತ್ ವೈರಲ್ ಆಗಿತ್ತು, ಸಾವಿರಾರು ಅಭಿಮಾನಿಗಳು ರೀ-ಟ್ವೀಟ್ ಮಾಡಿ ಕೋರಿಕೆ ಹೇಳಿ ಖುಷಿಪಟ್ಟಿದ್ದರು. ಅಲ್ಲದೆ ಅಭಿಮಾನಿಗಳು ಹೇಳಿದಂತೆ ನಡೆದುಕೊಂಡು ಕೊಡಗಿನ ಕುವರಿ ಫ್ಯಾನ್ಸ್ ಮನ ಗೆದ್ದಿದ್ದರು.

    ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ರಶ್ಮಿಕಾ ಇದೀಗ ದಕ್ಷಿಣ ಭಾರತದಲ್ಲೇ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಟಾಲಿವುಡ್‍ನಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಈಗಲೂ ಬಹುತೇಕ ಸ್ಟಾರ್ ನಟರ ಮೊದಲ ಆಯ್ಕೆಯೇ ರಶ್ಮಿಕಾ ಮಂದಣ್ಣ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅರ್ಜುನ್ ಅಭಿನಯದ ಬಹುಭಾಷಾ ಚಿತ್ರ ‘ಪುಷ್ಪ’ಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಕನ್ನಡದ ‘ಪೊಗರು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ನಂತರ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.

    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್

    ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

  • ಶ್ರುತಿಯಿಂದ ಹರಿಪ್ರಿಯಾ – ಹೆಸರು ಬದಲಾಯಿಸಿದ ಕಥೆ ಬಿಚ್ಚಿಟ್ಟ ನಟಿ

    ಶ್ರುತಿಯಿಂದ ಹರಿಪ್ರಿಯಾ – ಹೆಸರು ಬದಲಾಯಿಸಿದ ಕಥೆ ಬಿಚ್ಚಿಟ್ಟ ನಟಿ

    – 12 ವರ್ಷಗಳ ಹಿಂದೆ ಹರಿಪ್ರಿಯಾ ಇರಲಿಲ್ಲ

    ಬೆಂಗಳೂರು: ಸಾಮಾನ್ಯವಾಗಿ ಅನೇಕ ನಟ-ನಟಿಯರು ಸಿನಿಮಾರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.

    ನಟಿ ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ. ಮೊದಲ ಸಿನಿಮಾದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಮೊದಲಿಗೆ ತುಳಿವಿನ ‘ಬಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಮಾಡುವಾಗ ಅವರ ಹೆಸರು ಶ್ರುತಿ ಎಂತಲೇ ಇತ್ತು. ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

    “ನಾನು ತುಳುವಿನ ‘ಬಡಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿತ್ತು. ಈ ವೇಳೆ ‘ಬಡಿ’ ಸಿನಿಮಾದ ಸಹನಿರ್ದೇಶಕ ಸುಧಾಕರ್ ಬನ್ನಾಜೆ, ನನಗೆ ಹೆಸರು ಬದಲಿಸಿಕೊಳ್ಳಲು ಸಲಹೆ ಕೊಟ್ಟಿದ್ದರು. ಈಗಾಗಲೇ ಕನ್ನಡ ಇಂಡಸ್ಟ್ರೀಯಲ್ಲಿ ಶ್ರುತಿ ಹೆಸರಿನ ನಾಯಕಿ ಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹೆಸರು ಬದಲಾಯಿಸುವಂತೆ ಹೇಳಿದರು. ಆಸ್ಟ್ರೋಲಜಿ ಬಗ್ಗೆಯೂ ತಿಳಿದಿದ್ದ ಅವರು ನನ್ನ ತಾಯಿ ಬಳಿ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿಡಲು ತಿಳಿಸಿದ್ದರು. ಅಮ್ಮ ಕೂಡ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿನ ಪಟ್ಟಿಯನ್ನೇ ತಯಾರಿಸಿದ್ದರು” ಎಂದು ಹೇಳಿದ್ದಾರೆ.

    ಬಹಳಷ್ಟು ಜನರಿಗೆ ತಮ್ಮ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ, ಯಾಕೆಂದರೆ ಮಗುವಿದ್ದಾಗಲೇ ಹೆಸರಿಡಲಾಗುತ್ತದೆ. ಆದರೆ ನಾನು ಕೊನೆಯದಾಗಿ ‘ಹರಿಪ್ರಿಯಾ’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡೆ. ಲಕ್ಷ್ಮೀ ಎಂದರೆ ದೇವರು ಹರಿಗೆ ತುಂಬ ಇಷ್ಟ ಎಂಬ ಕಾರಣಕ್ಕೆ ಇವರು ‘ಹರಿಪ್ರಿಯಾ’ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದೆ. 12 ವರ್ಷಗಳ ಹಿಂದೆ ಈ ಹರಿಪ್ರಿಯಾ ಇರಲಿಲ್ಲ. ಶ್ರುತಿ ಎನ್ನುವವಳು ಇದ್ದಳು, ಮುಂದೆಯೂ ಇರುತ್ತಾಳೆ. ಈಗ ಹರಿಪ್ರಿಯಾ ಎಂಬ ಹೆಸರನ್ನು ಸಾಕಷ್ಟು ಜನರು ಗುರುತಿಸಿದ್ದಾರೆ. ಅಲ್ಲದೇ ಹರಿಪ್ರಿಯಾ ಎಂದು ಕರೆಯೋದನ್ನು ಕೇಳಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ಹರಿಪ್ರಿಯಾ ಹೆಸರಿನ ಬಗ್ಗೆಯೂ ಒಂದು ಕೊರಗು ಸಹ ಇದೆ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆ ಹರಿಪ್ರಿಯಾ ಎಂಬ ಹೆಸರಿನಿಂದ ನನ್ನನ್ನು ಒಮ್ಮೆಯೂ ಕರೆದಿಲ್ಲ. ಅವರಿಗೆ ಮಗಳಿಗೆ ಈ ಹೆಸರಿದೆ ಎಂಬುದು ಸಹ ಗೊತ್ತಿಲ್ಲ. ಈಗಲು ಒಮ್ಮೆಯಾದರೂ ಅಪ್ಪ ನನ್ನನ್ನು ಹರಿಪ್ರಿಯಾ ಎಂದು ಕರೆದಿದ್ದರೆ ಎಂದು ಅನೇಕ ಬಾರಿ ಕಲ್ಪಿಸಿಕೊಳ್ಳುತ್ತೇನೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ತಂದೆ ಚಂದ್ರಸೇನಾ ಹರಿಪ್ರಿಯಾ ಅವರು ಚಿಕ್ಕವಯಸ್ಸಿನಲ್ಲಿದ್ದಾಲೇ ಮೃತಪಟ್ಟಿದ್ದಾರೆ.

    “ಹರಿಪ್ರಿಯಾ ಎಂದು ಹೆಸರು ಬದಲಾಯಿಸಿಕೊಂಡ ನಂತರ ಸಿನಿಮಾಗಳಲ್ಲಿ ನನ್ನ ಪಾತ್ರವನ್ನು ಪರಿಚಯಿಸುವಾಗ ಹರಿಪ್ರಿಯಾ ಎಂದೇ ಇರುತ್ತದೆ. ಇಲ್ಲಿಯವರೆಗೂ ನನ್ನ ತಾಯಿ, ಸಹೋದರ, ಸಂಬಂಧಿಕರು ನನ್ನನ್ನು ಶ್ರುತಿ ಎಂದೇ ಕರೆಯುತ್ತಾರೆ. ಒಂದು ವೇಳೆ ಹರಿಪ್ರಿಯಾ ಎಂದು ಕರೆದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಈ ಎರಡೂ ಹೆಸರುಗಳು ತುಂಬಾ ಇಷ್ಟ. ವೈಯಕ್ತಿಕ ಬದುಕಿನಲ್ಲಿ ನಾನು ಶ್ರುತಿಯಾದರೆ, ವೃತ್ತಿ ಜೀವನದಲ್ಲಿ ಹರಿಪ್ರಿಯಾ” ಎಂದು ಹೆಸರು ಬದಲಾಯಿಸಿಕೊಂಡ ಕಥೆ ಬಿಚ್ಚಿಟ್ಟಿದ್ದಾರೆ.

    https://www.instagram.com/p/B_4rPfIhxca/

  • ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ಲಂಡನ್: ಕಳೆದ ಬುಧವಾರ ಜನಿಸಿದ ತನ್ನ ಗಂಡು ಮಗುವಿಗೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ವೈದ್ಯರ ಹೆಸರನ್ನು ಇಟ್ಟಿದ್ದಾರೆ.

    ಇತ್ತೀಚೆಗೆ ಬೋರಿಸ್ ಜಾನ್ಸನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರಿಗೆ ಚಿಕತ್ಸೆ ನೀಡಿದ ಇಬ್ಬರು ವೈದ್ಯರ ಹೆಸರನ್ನು ತನ್ನ ಮಗುವಿಗೆ ಇಟ್ಟಿದ್ದಾರೆ. ಈ ಮೂಲಕ ತನ್ನ ಜೀವ ಉಳಿಸಿದ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.

    ಬುಧವಾರ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಸೈಮಂಡ್ಸ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವಾಗಿ ಶನಿವಾರ ತಮ್ಮ ಇನ್‍ಸ್ಟಗ್ರಾಮ್‍ನಲ್ಲಿ ಮಗು ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಕ್ಯಾರಿ ಸೈಮಂಡ್ಸ್, ನನ್ನ ಮಗುವಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಡಿಲಾಗಿದೆ. ವಿಲ್ಫ್ರೆಡ್ ಬೋರಿಸ್ ಅವರ ತಾತನ ಹೆಸರು, ಲಾರಿ ನನ್ನ ತಾತನ ಹೆಸರು, ನಿಕೋಲಸ್ ಎಂಬುದು ಕೊರೊನಾದಿಂದ ಬೋರಿಸ್ ಅನ್ನು ಗುಣಪಡಿಸಿದ ವೈದ್ಯರ ಹೆಸರು ಎಂದು ತಿಳಿಸಿದ್ದಾರೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೋರಿಸ್ ಜಾನ್ಸನ್ ಅವರಿಗೆ ವೈದ್ಯರಾದ ನಿಕೋಲಸ್ ಪ್ರೈಸ್ ಮತ್ತು ನಿಕೋಲಸ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಇವರಿಗೆ ಗೌರವ ಸೂಚಿಸಲು ಅವರ ಮಗನ ಹೆಸರಿನಲ್ಲಿ ನಿಕೋಲಸ್ ಎಂದು ಬಳಸಲಾಗಿದೆ. ಜೊತೆಗೆ ಕ್ಯಾರಿ ಸೈಮಂಡ್ಸ್ ತನ್ನ ಗಂಡನ ಪ್ರಾಣವನ್ನು ಉಳಿಸಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಗು ಹುಟ್ಟುವುದಕ್ಕಿಂತ ಒಂದು ವಾರದ ಹಿಂದೆಯಷ್ಟೇ ಬೋರಿಸ್ ಗುಣಮುಖರಾಗಿ ಆಸ್ಪತ್ರೆಗೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಈ ವಿಚಾರವಾಗಿ ಮಾತನಾಡಿರುವ ವೈದ್ಯರು, ಚಿಕಿತ್ಸೆ ನೀಡಿದಕ್ಕೆ, ನಮ್ಮ ಪ್ರಧಾನಿಗಳು ನಮಗೆ ಈ ರೀತಿಯ ಗೌರವ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ. ಅವರ ಕುಟುಂಬದ ಮುಂದಿನ ಜೀವನ ಚೆನ್ನಾಗಿರಲಿ. ನಾವು ಈ ಗೌರವವನ್ನು ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಅರ್ಪಣೆ ಮಾಡುತ್ತೇವೆ. ಜೊತೆಗೆ ಪ್ರಧಾನಿ ಬೋರಿಸ್ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ತಿಳಿಸಿದ್ದಾರೆ.

    ಮಾರ್ಚ್ 27ರಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು.

  • ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    – ಅಡಿಡಾಸ್ ಕಂಪನಿಯ ಶೂಗಳ ಮೇಲೆ ಹಿಮಾದಾಸ್ ಹೆಸರು
    – ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿದ ಹಿಮಾದಾಸ್

    ನವದೆಹಲಿ: ಕ್ರೀಡಾಪಟುಗಳಿಗಾಗೇ ವಿಶೇಷ ಬಗೆಯ ಶೂ ತಯಾರಿಸುವ ಅಡಿಡಾಸ್ ಕಂಪನಿ ಭಾರತದ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್-ನಿರ್ಮಿತ ಶೂ ಮೇಲೆ ಪ್ರಿಂಟ್ ಮಾಡಲು ತೀರ್ಮಾನ ಮಾಡಿದೆ.

    ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್ ಶೂ ಮೇಲೆ ಹಿಮಾದಾಸ್ ಹೆಸರನ್ನು ಪ್ರಿಂಟ್ ಮಾಡುವುದಾಗಿ ಅಡಿಡಾಸ್ ಭಾನುವಾರ ಹೇಳಿಕೊಂಡಿದೆ. ಇದಾದ ನಂತರ ತಮ್ಮ ಹಿಂದಿನ ದಿನಗಳನ್ನು ನೆನೆದುಕೊಂಡಿರುವ ಹಿಮಾದಾಸ್, ಒಂದು ಕಾಲದಲ್ಲಿ ನಾನು ಉಪಯೋಗಿಸುತ್ತಿದ್ದ ಮಮೂಲಿ ರನ್ನಿಂಗ್ ಶೂಗಳ ಮೇಲೆ ನಾನೇ ಅಡೀಡಸ್ ಎಂದು ಬರೆಯುತ್ತಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿಮಾದಾಸ್ ಮೊದಲು ನಾನು ಶಾಲಾ ದಿನಗಳಲ್ಲಿ ಓಡಲು ಆರಂಭಿಸಿದಾಗ ಬರಿಗಾಲಿನಲ್ಲಿ ಓಡುತ್ತಿದ್ದೆ. ಆದರೆ ಮೊದಲು ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋದಾಗ ನಮ್ಮ ತಂದೆ ಸ್ಪೈಕ್ ಶೂಗಳನ್ನು ತಂದುಕೊಟ್ಟರು. ಅದೂ ಯಾವುದೇ ಕಂಪನಿ ಆಥವಾ ಬ್ರ್ಯಾಂಡೆಡ್ ಶೂ ಆಗಿರಲಿಲ್ಲ. ಆದರೆ ಅದರ ಮೇಲೆ ನಾನು ನನ್ನ ಕೈಯಾರೆ ಅಡಿಡಾಸ್ ಎಂದು ಬರೆದುಕೊಂಡಿದ್ದೆ ಎಂದು ತನ್ನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಹಿಮಾದಾಸ್ ಅವರು ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜೊತೆ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಧಿ ಎಂಬುದು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ನನ್ನ ಶೂಗಳ ಮೇಲೆ ನಾನೇ ಅಡಿಡಾಸ್ ಎಂದು ಬರೆದುಕೊಳ್ಳುತ್ತಿದ್ದೆ. ಇಂದು ಅದೇ ಕಂಪನಿ ನನ್ನ ಹೆಸರನ್ನು ಅವರ ಬ್ರ್ಯಾಂಡೆಡ್ ಶೂ ಮೇಲೆ ಪ್ರಿಂಟ್ ಮಾಡುತ್ತಿದೆ ಎಂದು ಹಿಮಾದಾಸ್ ಹೇಳಿದ್ದಾರೆ.

    ಒಂದು ಕಾಲದಲ್ಲಿ ಶೂ ಇಲ್ಲದೇ ಬರಿಗಾಲಿನಲ್ಲಿ ಓಡುತ್ತಿದ್ದ ಹಿಮಾದಾಸ್ ಫಿನ್ಲೆಂಡ್‍ನಲ್ಲಿ ನಡೆದ 2018 ರ ವಿಶ್ವ ಅಂಡರ್ -20 ಚಾಂಪಿಯನ್‍ಶಿಪ್‍ನಲ್ಲಿ 400 ಮೀಟರ್ ಸ್ಪರ್ಧೆ ಯಲ್ಲಿ ಚಿನ್ನ ಗೆದ್ದರು. ನಂತರ ಅವರನ್ನು ಜರ್ಮನಿಯ ಉನ್ನತ ಬ್ರ್ಯಾಂಡ್ ಕಂಪನಿ ಅಡಿಡಾಸ್ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿತ್ತು. ಈಗ ತಮ್ಮ ಕಂಪನಿಯ ಕಸ್ಟಮ್-ನಿರ್ಮಿತ ಶೂಗಳ ಮೇಲೆ ಆಕೆಯ ಹೆಸರನ್ನು ಪ್ರಿಂಟ್ ಮಾಡಲು ಮುಂದಾಗಿದೆ.

    ಇದೇ ವೇಳೆ ಇಂಡೋನೇಷ್ಯಾದಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದ ನಂತರ ಜನರು ಹಿಂದೆಂದಿಗಿಂತಲೂ ಹೆಚ್ಚು ಅಥ್ಲೆಟಿಕ್ಸ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎಂದು ಹಿಮಾದಾಸ್ ಹೇಳಿದ್ದಾರೆ. ಹಿಮಾದಾಸ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಮತ್ತು ಮಿಶ್ರ 400 ಮೀಟರ್ ರಿಲೇ ರೇಸ್‍ಗಳಲ್ಲಿ ತಲಾ ಒಂದು ಚಿನ್ನದ ಪದಕವನ್ನು ಗೆದ್ದಿದ್ದರು.

    ನಾನು ಮುಂದೆ ನಡೆಯುವ ಟೋಕಿಯೋ ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದು ಅಭ್ಯಾಸ ನಡೆಸುತ್ತಿದ್ದೇನೆ. ಕೊರೊನಾ ಬಂದಿರುವುದಿರಂದ ನನಗೆ ಇದಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಸ್ಪರ್ಧೆಯಲ್ಲಿ ನಾವು ಓಡುವಾಗ ಅಭಿಮಾನಿಗಳು ನಮ್ಮ ಹೆಸರನ್ನು ಜೋರಾಗಿ ಕೂಗಿದರೆ ನಮಗೆ ಓಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಿಮಾ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್ ಅವರು ನನ್ನ ರೋಲ್ ಮಾಡೆಲ್ ಆಗಿದ್ದು, ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ದಾಸ್ ಹೇಳಿದ್ದಾರೆ.