Tag: ಹೆಲಿ ಟೂರಿಸಂ

  • ಸೇವ್ ಮೈಸೂರು ಕ್ಯಾಂಪೇನ್‍ಗೆ ದುನಿಯಾ ವಿಜಿ ಬೆಂಬಲ

    ಸೇವ್ ಮೈಸೂರು ಕ್ಯಾಂಪೇನ್‍ಗೆ ದುನಿಯಾ ವಿಜಿ ಬೆಂಬಲ

    ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಹೆಲಿ ಟೂರಿಸಂ’ ಯೋಜನೆಗೆ ಪ್ಲಾನ್ ಮಾಡಲಾಗುತ್ತಿದ್ದು, ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೇವ್ ಮೈಸೂರು ಕ್ಯಾಂಪೇನ್‍ಗೆ ನನ್ನ ಬೆಂಬಲ ಇದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ನಟ, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು.ನಾವುಗಳು ಮರ ಬೆಳೆಸಲು ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು. ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಸಮಯದಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ.

    ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು.ನಾವುಗಳು ಮರ ಬೆಳೆಸಲು…

    Posted by Duniya Vijay on Wednesday, April 14, 2021

    ಮರಗಳ ನಡುವೆ ಓಡಾಡಿ ಖುಷಿ ಪಟ್ಟಿದ್ದೇನೆ. ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರೋತ್ತೋ ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೂ ಅಷ್ಟೇ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೇನ್‍ಗೆ ನನ್ನ ಬೆಂಬಲ ಇದೆ. ಸರ್ಕಾರ ಈ ಯೋಜನೆ ಬಗ್ಗೆ ಮತ್ತೊಮ್ಮೆ ಯೋಚಿಸಲಿ ಎಂದು ಹೇಳಿದ್ದಾರೆ.

    ಈ ಹಿಂದೆ ಸಂಸದ ಪ್ರತಾಪ್ ಸಿಂಹ, ಪರಿಸರ ಪ್ರೇಮಿಗಳಿಂದ ಕೂಡ ಹೆಲಿ ಟೂರಿಸಂ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಈ ಯೋಜನೆ ವಿರುದ್ಧ ಒಂದು ಅಭಿಯಾನವೇ ಆರಂಭವಾಗಿದ್ದು, ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಬೆಂಬಲ ಸೂಚಿಸುತ್ತಿದ್ದಾರೆ.

  • ಮೈಸೂರಿನಲ್ಲಿ ಹೆಲಿಟೂರಿಸಂ ಯೋಜನೆಗೆ ಪರಿಸರ ಪ್ರೇಮಿಗಳಿಂದ ವಿರೋಧ

    ಮೈಸೂರಿನಲ್ಲಿ ಹೆಲಿಟೂರಿಸಂ ಯೋಜನೆಗೆ ಪರಿಸರ ಪ್ರೇಮಿಗಳಿಂದ ವಿರೋಧ

    ಮೈಸೂರು: ಸಾಂಸಕೃತಿಕ ನಗರಿ ಪ್ರವಾಸಿಗರ ಸ್ವರ್ಗ. ನಿತ್ಯವೂ ಸಾವಿರಾರು ಪ್ರವಾಸಿಗರು ಅರಮನೆ ನಗರಿಗೆ ಬಂದು ಹೋಗುತ್ತಾರೆ. ಈಗ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಹೆಲಿ ಟೂರಿಸಂ ಪ್ರಾರಂಭಿಸಲಾಗುತ್ತಿದೆ. ಆದರೆ ಈ ಹೆಲಿ ಟೂರಿಸಂ ವಿರುದ್ಧ ಪರಿಸರ ಪ್ರೇಮಿಗಳು ತಿರುಗಿಬಿದ್ದಿದ್ದಾರೆ.

    ಮೈಸೂರಿನಲ್ಲಿ ಹೆಲಿ ಟೂರಿಸಂ ಶುರು ಮಾಡ್ಬೇಕು ಅನ್ನೋದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೀಶ್ವರ್ ಅವರ ಕನಸಿನ ಯೋಜನೆ. ಈ ಮೂಲಕ ಮೈಸೂರಿನಿಂದ ಬೆಂಗಳೂರಿನವರೆಗೆ ಆಗಸದಿಂದಲೆ ಪ್ರವಾಸಿ ತಾಣಗಳನ್ನು ತೋರಿಸೋದು ಈ ಯೋಜನೆ ಉದ್ದೇಶವಾಗಿದೆ. ಇದಕ್ಕಾಗಿ ಈಗಾಗಲೇ ಹಲವು ಸುತ್ತಿನ ಸಭೆ, ಮಾತುಕತೆ ನಡೆದಿವೆ. ಲಲಿತ ಮಹಲ್ ಅರಮನೆ ಸಮೀಪದಲ್ಲಿರುವ ಖಾಲಿ ಜಾಗದಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಿ, ಅಲ್ಲಿಂದ ಟೂರಿಸಂ ಪ್ರಾರಂಭ ಮಾಡಲು ಡಿಪಿಆರ್ ಸಹ ಸಿದ್ಧಪಡಿಸಲಾಗಿದೆ. ಪ್ರಸ್ತಾವನೆ ಪ್ರಕಾರ ಹೆಲಿ ಪ್ಯಾಡ್ ನಿರ್ಮಾಣಕ್ಕಾಗಿ 4 ಎಕರೆ ಜಾಗ ಗುರುತಿಸಲಾಗಿದೆ.

    ಸದರಿ ಜಾಗದಲ್ಲಿರುವ ಸಾವಿರಾರು ಮರಗಳಿದ್ದು, ಅದರಲ್ಲಿ 170ಕ್ಕೂ ಹೆಚ್ಚು ಮರಗಳನ್ನು ಕಡಿಯೋದು ಅನಿವಾರ್ಯವಾಗಿದೆ. ಹೀಗಾಗಿ ನೂರಾರು ಮರಗಳ ಹನನಕ್ಕೆ ನಿರ್ಧರಿಸಲಾಗಿದ್ದು ಇದಕ್ಕಾಗಿ ಮರಗಳನ್ನು ಕಡಿಯಲು ಮರಗಳನ್ನು ಗುರುತು ಸಹ ಮಾಡಲಾಗಿದೆ. ಆದ್ರೆ ಉದ್ದೇಶಿತ ಲಲಿತ ಮಹಲ್ ಸಮೀಪದಲ್ಲೇ ರಾಜವಂಶಸ್ಥರಿಗೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್ ಇದೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೆಲಿಕಾಪ್ಟರ್ ಸೇವೆಗೆ ಅವಕಾಶ ಇದೆ. ಅಗತ್ಯವಿದ್ದರೆ ಸಿಎ ನಿವೇಶನ ಬಳಸಿಕೊಂಡು ಹೆಲಿ ಟೂರಿಸಂ ಶುರು ಮಾಡಿ. ಆದ್ರೆ ಮರಗಳ ಬುಡಕ್ಕೆ ಕೊಡಲಿ ಇಡಬೇಡಿ ಅನ್ನೋದು ಪರಿಸರಪ್ರಿಯರ ಆಗ್ರಹವಾಗಿದೆ.

    ಹೆಲಿ ಟೂರಿಸಂ ಪ್ರಾಥಮಿಕ ಪ್ರಸ್ತಾವದಲ್ಲಿ ಸುಮಾರು 20 ಎಕರೆ ಜಾಗ ಗುರುತಿಸಲಾಗಿತ್ತು. ಅಷ್ಟು ದೊಡ್ಡ ಜಾಗ ಬಳಸಿಕೊಂಡಿದ್ದರೆ 600ರಿಂದ 1000 ಮರಗಳನ್ನು ಧರೆಗೆ ಉರುಳಿಸಬೇಕಿತ್ತು. ಆಗ ಸಾರ್ವಜನಿಕರ ವಿರೋಧ ಎದುರಿಸಬೇಕಾಗುತ್ತೆ ಅಂತ 20 ಎಕರೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಿ 4 ಎಕರೆಗೆ ಇಳಿಸಲಾಗಿದೆ. ಈಗಲೂ 170ಕ್ಕೂ ಹೆಚ್ಚು ಮರಗಳನ್ನು ಕಡಿಯೋದು ಅನಿವಾರ್ಯವಾಗಿದೆ. ಅದಕ್ಕೂ ಪರಿಸರಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದ್ರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಲಲಿತ ಮಹಲ್ ಅರಮನೆ ಆವರಣದಲ್ಲಿ ಈಗಾಗಲೇ ಹೆಲಿಪ್ಯಾಡ್ ಇದೆ. ಆ ಜಾಗ ರಾಜವಂಶಸ್ಥರಿಗೆ ಸೇರಿದ್ದು, ಸರ್ಕಾರ ಮನಸ್ಸು ಮಾಡಿದ್ರೆ ಬಾಡಿಗೆಗೆ ಪಡೆದುಕೊಳ್ಳಬಹುದು. ಅದೇ ಜಾಗದಿಂದ ಹೆಲಿ ಟೂರಿಸಂ ನಡೆಸಬಹುದು. ಆದರೆ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುತ್ತಿರುವುದರ ಅಗತ್ಯವೇನಿದೆ ಎಂಬುದೇ ಪ್ರಶ್ನೆ.

  • ಹೆಲಿಕಾಪ್ಟರ್‌ ಏರಿ ಮಡಿಕೇರಿಯ ಸೌಂದರ್ಯವನ್ನು ಸವಿಯಿರಿ

    ಹೆಲಿಕಾಪ್ಟರ್‌ ಏರಿ ಮಡಿಕೇರಿಯ ಸೌಂದರ್ಯವನ್ನು ಸವಿಯಿರಿ

    ಮಡಿಕೇರಿ : ಮಂಜಿನನಗರಿ ಮಡಿಕೇರಿಯನ್ನು ಹೆಲಿಕಾಪ್ಟರ್‌‌ ಮೂಲಕ ಸುತ್ತಾಡಬೇಕು ಎಂದು ಕನಸು ಕಾಣುವ ಮಂದಿಗೆ ಗುಡ್‌ನ್ಯೂಸ್‌. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲವು ದಿನಗಳ ಮಟ್ಟಿಗೆ ಹೆಲಿಟೂರಿಸಂಗೆ ಅವಕಾಶ ನೀಡಲಾಗಿದೆ.

    ತುಂಬೆ ಏವಿಯೇಷನ್ ಸಂಸ್ಥೆ ಮಡಿಕೇರಿಯಲ್ಲಿ ಇಂದಿನಿಂದ ಜನವರಿ 1 ವರೆಗೆ ಹೆಲಿಕಾಪ್ಟರ್‌‌ ಮೂಲಕ ಮಡಿಕೇರಿ ವೀಕ್ಷಣೆ ಮಾಡಿಸಲಿದೆ. ಸಂಪೂರ್ಣ ಬೆಟ್ಟಗುಡ್ಡಗಳು, ಹಸಿರು ಕಾನನಗಳಿಂದಲೇ ತುಂಬಿರುವ ಮಡಿಕೇರಿಯ ಸೌಂದರ್ಯವನ್ನು ರಸ್ತೆಗಳ ಮೂಲಕವಷ್ಟೇ ಸವಿದಿದ್ದ ಪ್ರವಾಸಿಗರು ಇನ್ನು ಒಂದು ವಾರಗಳ ಕಾಲ ಆಕಾಶದಲ್ಲಿ ತೇಲಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

     

    ಮ್ಯಾನ್ಸ್ ಕಾಂಪೌಡ್ ಮೈದಾನದಿಂದ ಹಾರಾಟ ನಡೆಸುವ ಹೆಲಿಕಾಪ್ಟರ್‌‌ ಮಡಿಕೇರಿಯ ನಗರ ಸೇರಿದಂತೆ ಮಡಿಕೇರಿ ಹೊರವಲಯದಲ್ಲೂ ಹಾರಾಟ ನಡೆಸಲಿದೆ. ಆದರೆ ಆಕಾಶದಲ್ಲಿ ಹಾರಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಮೂರು ಸಾವಿರ ಭರಿಸಬೇಕು. ಎಂಟು ನಿಮಿಷಗಳ ಕಾಲ ನೀವು ಆಕಾಶದಲ್ಲಿ ಸುತ್ತಾಡಲು ಮೂರು ಸಾವಿರ ರೂಪಾಯಿ ಶುಲ್ಕ ಕಟ್ಟಬೇಕು.

    ಒಟ್ಟಿನಲ್ಲಿ ಕೋವಿಡ್ ನಿಂದ ಟೂರಿಸಂ ಕುಗ್ಗಿರುವ ಸಂದರ್ಭದಲ್ಲಿ ಪ್ರವಾಸಿಗರನ್ನು ಕೊಡಗಿಗೆ ಸೆಳೆದು ಕೊಡಗಿನ ಆರ್ಥಿಕತೆಯನ್ನು ವೃದ್ಧಿ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸೀಮಿತ ಅವಧಿಯ ಈ ಹೆಲಿಟೂರಿಸಂ ಅನುಕೂಲವಾಗುತ್ತಾ ಎನ್ನೋದನ್ನು ಕಾದು ನೋಡಬೇಕಾಗಿದೆ.

  • ಹುಬ್ಬಳ್ಳಿಯಲ್ಲಿ ಇನ್ಮುಂದೆ  ಬಾಡಿಗೆಗೆ ಸಿಗುತ್ತೆ ಹೆಲಿಕಾಪ್ಟರ್!

    ಹುಬ್ಬಳ್ಳಿಯಲ್ಲಿ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಹೆಲಿಕಾಪ್ಟರ್!

    ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಈಗಾಗಲೇ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗಿದೆ. ಈಗ ದೆಹಲಿಯ ಚಿಪನ್ಸ್ ಎವಿಯೇಷನ್ ಹಾಗೂ ಹುಬ್ಬಳ್ಳಿಯ ಬಾಹುಬಲಿ ಟೆಲಿಂ ಟೂರಿಸಂ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಸೇವೆ ಆರಂಭವಾಗುತ್ತಿದೆ.

    ಜನವರಿ ಅಂತ್ಯಕ್ಕೆ ಸೇವೆ ಆರಂಭಗೊಳ್ಳಲಿದ್ದು, ಜಾತ್ರೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಹೂ ಮಳೆಗೆರೆಯಲು, ವೈದ್ಯಕೀಯ ನೆರವಿಗೆ, ಮದುವೆ ಸಮಾರಂಭಗಳಿಗೆ, ಚುನಾವಣಾ ಪ್ರಚಾರಕ್ಕೇ ವಿವಿಧ ಉದ್ದೇಶಗಳಿಗೆ ಹೆಲಿಕಾಪ್ಟರ್ ಸೇವೆ ಬಾಡಿಗೆಗೆ ದೊರೆಯಲಿದೆ. ಒಂದು ಗಂಟೆಗೆ 1.10 ಲಕ್ಷ ಬಾಡಿಗೆ ನಿಗದಿ ಮಾಡಲಾಗಿದ್ದು, ಜೊತೆಗೆ ಶೇ.18 ಜಿಎಸ್‍ಟಿ ಸಹ ಭರಿಸಬೇಕಾಗಿದೆ.

    ಹುಬ್ಬಳ್ಳಿಯ ಅದರಗುಂಚಿಯ ಬಳಿಯ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸೇವೆ ದೊರೆಯಲಿದ್ದು, ಮಾಹಿತಿ ಹಾಗೂ ಬಾಡಿಗೆಗೆ 97406 68512 ಸಂಪರ್ಕಿಸಬಹುದಾಗಿದೆ ಎಂದು ಹೆಲಿ ಟೂರಿಸಂ ಮಾಲೀಕ ಬಾಹುಬಲಿ ಧರೆಪ್ಪನವರ ತಿಳಿಸಿದ್ದಾರೆ.