Tag: ಹೆಮ್ಮಿಗೆಪುರ

  • ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

    ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

    – ಆಕ್ಷೇಪಣೆಗಳಿದ್ದರೆ 7 ದಿನದಲ್ಲಿ ಸಲ್ಲಿಸುವಂತೆ ಬಿಬಿಎಂಪಿ ಮನವಿ

    ಬೆಂಗಳೂರು: ಬೆಂಗಳೂರಿನ (Bengaluru) ಅತಿ ಎತ್ತರದ ಸ್ಕೈಡೆಕ್ (Skydeck) ನಿರ್ಮಾಣಕ್ಕೆ ಬಿಬಿಎಂಪಿ (BBMP) ಜಾಗ ಫೈನಲ್ ಮಾಡಿದೆ. ಹೆಮ್ಮಿಗೆಪುರದಲ್ಲಿ (Hemmigepura) ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

    ರಾಜ್ಯ ಸರ್ಕಾರ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬ್ರ‍್ಯಾಂಡ್ ಬೆಂಗಳೂರಿನಡಿ ಅತಿ ಎತ್ತರದ ಆಕಾಶ ಗೋಪುರ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಹೆಮ್ಮಿಗೆಪುರದಲ್ಲಿ ಜಾಗ ಕೂಡ ಫೈನಲ್ ಆಗಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡೋದಕ್ಕೆ ಆಕ್ಷೇಪಣೆ ಇದ್ದರೆ ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಪ್ರವಾಸೋದ್ಯಮ ಉತ್ತೇಜನದ ಜೊತೆಗೆ ಬೆಂಗಳೂರು ನಗರವನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕಾಗಿ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಗುರುತಿಸಲಾಗಿತ್ತು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೆಚ್‌ಎಎಲ್ ವಿಮಾನ ನಿಲ್ದಾಣ ಸುರಕ್ಷತೆ ದೃಷ್ಟಿಯಿಂದ ಒಪ್ಪಿಗೆ ಕೊಡಲಿಲ್ಲ. ಇದರ ಜೊತೆಗೆ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಬಂಧವಿದೆ. ಇದನ್ನೂ ಓದಿ: ಮಂಗಳೂರು| ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸಾವು

    ಸಾರ್ವಜನಿಕರು ಆಕ್ಷೇಪಣೆ ಜೊತೆಗೆ ಬೆಂಗಳೂರಿನ ನೈಋತ್ಯ ಮತ್ತು ಪಶ್ವಿಮ ಭಾಗದಲ್ಲಿ ಜಾಗ ಇದ್ದರೆ ಸಲಹೆ ಕೂಡ ಕೊಡಿ ಅಂತಾ ಕೇಳಿದೆ. ಸ್ಕೈಡೆಕ್ ನಿರ್ಮಾಣಕ್ಕೆ ಆಕ್ಷೇಪಣೆ ಜೊತೆಗೆ ಸಲಹೆ ಏನು ಬರಲಿವೆ ಎಂದು ಕಾದು ನೋಡಬೇಕಿದೆ.‌ ಇದನ್ನೂ ಓದಿ: Uttar Pradesh| ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ- ಇಬ್ಬರು ಮಕ್ಕಳು ಸಾವು

  • ಜುಲೈ ಅಂತ್ಯಕ್ಕೆ ಯಶವಂತಪುರ ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರ: ಸಚಿವ ಸೋಮಶೇಖರ್ ಭರವಸೆ

    ಜುಲೈ ಅಂತ್ಯಕ್ಕೆ ಯಶವಂತಪುರ ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರ: ಸಚಿವ ಸೋಮಶೇಖರ್ ಭರವಸೆ

    ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ಕಾರ್ಯಯೋಜನೆಯನ್ನು ರೂಪಿಸಿದ್ದು, ಜೂನ್ ಮಾಸಾಂತ್ಯದೊಳಗೆ ವ್ಯಾಕ್ಸಿನೇಶನ್ ಕಾರ್ಯವು ಒಂದು ಹಂತಕ್ಕೆ ಬರಲಿದೆ. ಜುಲೈ ಮಾಸಾಂತ್ಯದೊಳಗೆ ಯಶವಂತಪುರ ಕ್ಷೇತ್ರವು ಶೇಕಡಾ ನೂರು ವ್ಯಾಕ್ಸಿನೇಶನ್ ಪಡೆದ ಕ್ಷೇತ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಂದ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಾಕ್ಸಿನೇಶನ್‌ಗೆ ಸಂಬಂಧಪಟ್ಟಂತೆ ಗೊಂದಲಗಳು ಬಗೆಹರಿದಿವೆ. ಕೆಲವರು ವೃಥಾ ಆರೋಪಗಳನ್ನು ಮಾಡಿದರು, ಕೊರತೆ ಇದೆ ಎಂದೆಲ್ಲ ಹೇಳಿದರು. ಆದರೆ, ಎಲ್ಲವೂ ಸರಿ ಇದ್ದು, ನಾಳೆಯಿಂದಲೇ 1 ವಾರ್ಡ್ ಗೆ 1 ಸಾವಿರ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 18ರಿಂದ 45 ವರ್ಷದವರಿಗೂ ಲಸಿಕೆ ಲಭ್ಯವಾಗಲಿದೆ ಎಂದರು.

    ವ್ಯಾಕ್ಸಿನೇಶನ್ ಬಗ್ಗೆಯ ತಪ್ಪು ಕಲ್ಪನೆ ದೂರ ಮಾಡಿಕೊಳ್ಳಿ: ವ್ಯಾಕ್ಸಿನೇಶನ್ ಬಗ್ಗೆ ಅನೇಕ ಗೊಂದಲಗಳು, ತಪ್ಪು ಕಲ್ಪನೆಗಳು ಮೂಡಿದ್ದು, ಇದನ್ನು ಎಲ್ಲರೂ ದೂರ ಮಾಡಿಕೊಳ್ಳಬೇಕು. ಜ್ವರ ಬರಲಿದೆ, ತಲೆನೋವು ಬರಲಿದೆ ಹೀಗೆ ಏನೆಲ್ಲ ಹೇಳಲಾಗುತ್ತದೆ. ಆದರೆ, ಇದು ಎಲ್ಲರಿಗೂ ಆಗುವುದಿಲ್ಲ. ಒಂದು ವೇಳೆ ಜ್ವರ ಬಂದರೂ ಸಹ ಅದಕ್ಕೆ ವೈದ್ಯರು ಮಾತ್ರೆಯನ್ನು ಕೊಟ್ಟು ಕಳುಹಿಸುತ್ತಾರೆ. ಇಂದು ದೇಶದಲ್ಲಿ ಕೋಟ್ಯಂತರ ಜನ ವ್ಯಾಕ್ಸಿನೇಶನ್ ಪಡೆದಿದ್ದಾರೆ. ಹಾಗಾಗಿ ಭಯ ಬೇಡ. ಇನ್ನು ವ್ಯಾಕ್ಸಿನೇಶನ್ ಸಿಗದು ಎಂಬ ಭಯ, ಆತಂಕ ಯಾರಿಗೂ ಬೇಡ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು. ಇದನ್ನೂ ಓದಿ: ‘ನುಡಿದಂತೆ ನಡೆದವನ ಅಡಿಗೆನ್ನ ನಮನ’ ವಾಕ್ಯ ಸೋಮಶೇಖರ್​ಗೆ ಅನ್ವರ್ಥ: ಕಟೀಲ್

    ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ: ಕೊರೋನಾ ಎರಡನೇ ಅಲೆ ವಿಪರೀತವಾಗಿದೆ. ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಿವೆ. ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಸಹ ನಿಯಂತ್ರಣ ಕಷ್ಟವಾಗಿದೆ. ನನ್ನ ಕ್ಷೇತ್ರದಲ್ಲಿಯೇ ಸುಮಾರು ಏಳೂವರೆ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಧೈರ್ಯಗೆಡಬಾರದು ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ ಎಂದರು.

    ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಸೋಂಕು ತಗುಲಿದ್ದರೆ, ಕೂಡಲೇ ಟ್ರಯಾಜ್ ಸೆಂಟರ್ ಗಳಿಗೆ ಭೇಟಿ ಕೊಟ್ಟರೆ, ಅಲ್ಲಿರುವ ವೈದ್ಯರು ಸೋಂಕಿನ ತೀವ್ರತೆ, ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ, ಮನೆಯಲ್ಲಿದ್ದರೆ ಸಾಕೇ? ಕೋವಿಡ್ ಕೇರ್ ಸೆಂಟರ್‌ಗೆ ಬರಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಕೊಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಮನೆಯತ್ತ ವೈದ್ಯರು: ಕೋವಿಡ್ ನಿಯಂತ್ರಣ ಮಾಡಲೇಬೇಕೆಂಬ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ವೈದ್ಯರ ತಂಡದೊಂದಿಗೆ ಸಾಕಷ್ಟು ಶ್ರಮಿಸಲಾಗುತ್ತಿದೆ. ಹೀಗಾಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹಳ್ಳಿಗಳ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಲಕ್ಷಣಗಳು ಕಂಡು ಬಂದರೆ ಅಲ್ಲಿಯೇ ಟೆಸ್ಟ್ ಮಾಡಿ, ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದರು.

    ಸೋಂಕಿತರ ಸಂಖ್ಯೆ ಇಳಿಮುಖ: ಯಶವಂತಪುರ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಸಾವಿನ ಪ್ರಮಾಣದಲ್ಲೂ ಕಡಿಮೆಯಾಗುತ್ತಿದೆ. ಹೀಗಾಗಿ ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಬೇಕು. ಜೊತೆಗೆ ವ್ಯಾಕ್ಸಿನೇಶನ್ ಪಡೆದುಕೊಳ್ಳಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಿವಿಮಾತು ಹೇಳಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಆರ್ಯ ಶ್ರೀನಿವಾಸ್ ಸೇರಿದಂತೆ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಬಿಜೆಪಿ ಸೇರ್ಪಡೆಗೊಂಡ ಅರುಣ್ ಕುಮಾರ್: ಹೆಮ್ಮಿಗೆಪುರ ವಾರ್ಡ್ 198ರ ತಲಘಟ್ಟಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಅರುಣ್ ಕುಮಾರ್ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ವೇಳೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಂದ 198 ಹೆಮ್ಮಿಗೆಪುರ ವಾರ್ಡ್ ಪಡಿತರ ಕಿಟ್ ವಿತರಣೆಗೆ ಚಾಲನೆ ನೀಡಲಾಯ್ತು.

    24 ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ವಿತರಣೆ: ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಸಚಿವರಾದ ಸೋಮಶೇಖರ್ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಧನಸಹಾಯವನ್ನು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ವಿತರಣೆ ಮಾಡಿದರು. ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಮಂದಿಗೆ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮಂದಿ ಹಾಗೂ ನೆಲಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿಯ ಆರ್ಥಿಕವಾಗಿ ಹಿಂದುಳಿದವರ ಕುಟುಂಬ ವರ್ಗದವರಿಗೆ ಸಹಾಯಧನವನ್ನು ಸಚಿವರು ವಿತರಿಸಿದರು. ಈ ಮೂಲಕ ಒಟ್ಟು 24 ಕುಟುಂಬಗಳಿಗೆ ಭಾನುವಾರ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳ ಸಹಾಯಧನವನ್ನು ಸಚಿವರು ವಿತರಣೆ ಮಾಡಿದರು.

    ಕೊರೋನಾ ವಾರಿಯರ್ಸ್ ಗಳಿಗೆ ಪ್ರೋತ್ಸಾಹಧನ ವಿತರಣೆ: ಸೋಮನಹಳ್ಳಿ, ತರಳು, ನೆಲಗುಳಿ ಗ್ರಾಮ ಪಂಚಾಯಿತಿಗಳ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಹಾಗೂ ವಾಟರ್ ಮನ್ ಗಳಿಗೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರೋತ್ಸಾಹಧನ ಮತ್ತು ಪಡಿತರ ಕಿಟ್ ವಿತರಣೆ ಮಾಡಲಾಯಿತು. ಕಗ್ಗಲಿಪುರ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ವಾರಿಯರ್ಸ್‌ಗಳಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹಧನ, ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು.

    ಪಟ್ಟರೆಡ್ಡಿಪಾಳ್ಯದಲ್ಲಿ ಮಕ್ಕಳಿಗೆ ಪ್ರೋತ್ಸಾಹಧನ: ಪಟ್ಟರೆಡ್ಡಿಪಾಳ್ಯದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಶಿಬಿರ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಇದೇ ವೇಳೆ, ಸದಸ್ಯರಿಗೆ ನಂದಿನಿ ತುಪ್ಪವನ್ನು ವಿತರಣೆ ಮಾಡಲಾಯಿತು.