Tag: ಹೆತ್ತವರು

  • ಅಪ್ಪ-ಅಮ್ಮ ನನಗಿಂತ ಹೆಚ್ಚು ಪ್ರೀತಿಸ್ತಾರೆಂದು ತಮ್ಮನನ್ನೇ ಮುಗಿಸಿದ ಅಪ್ರಾಪ್ತೆ!

    ಅಪ್ಪ-ಅಮ್ಮ ನನಗಿಂತ ಹೆಚ್ಚು ಪ್ರೀತಿಸ್ತಾರೆಂದು ತಮ್ಮನನ್ನೇ ಮುಗಿಸಿದ ಅಪ್ರಾಪ್ತೆ!

    ಚಂಡೀಗಢ: 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ 12 ವರ್ಷದ ಸಹೋದರನ್ನೇ ಕೊಲೆಗೈದ ಅಚ್ಚರಿಯ ಘಟನೆಯೊಂದು ಹರಿಯಾಣ (Hariyana) ದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಅಪ್ಪ- ಅಮ್ಮ ತನಗಿಂತ ತನ್ನ ತಮ್ಮನನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ನೊಂದು ಈ ಕೊಲೆ ಮಾಡಿದ್ದಾಳೆ. ಈ ಘಟನೆ ಹರಿಯಾಣದ ಬಲ್ಲಭಗಡ ಎಂಬಲ್ಲಿ ಮಂಗಳವಾರ ನಡೆದಿದೆ.

    ಇತ್ತ ಕೆಲಸ ಮುಗಿಸಿಕೊಂಡು ಹೆತ್ತವರು ಮನೆಗೆ ವಾಪಸ್ ಆದಾಗ ಮಗ ಕಾಣಲಿಲ್ಲ. ಹೀಗಾಗಿ ಮನೆಯೆಲ್ಲಾ ಹುಡುಕಾಡಿದ್ದಾರೆ. ಈ ವೇಳೆ ಬಾಲಕ ಕೋಣೆಯಲ್ಲಿ ಕಂಬಳಿ ಹೊದ್ದು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಕೂಡಲೇ ಆತನ ಬಳಿ ತೆರಳಿ ಎಬ್ಬಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಕಂಬಳಿ ತೆರೆದು ನೋಡಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ. ಘಟನೆ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು. ಇದನ್ನೂ ಓದಿ: 2ನೇ ಬ್ಯಾಚ್ – ಮತ್ತೆ 200 ಭಾರತದ ಮೀನುಗಾರರು ಪಾಕ್ ಜೈಲಿನಿಂದ ಬಿಡುಗಡೆ

    ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಇಬ್ಬರು ಮಕ್ಕಳು ಉತ್ತಪ್ರದೇಶದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಶಾಲೆಗೆ ರಜೆ ಇದ್ದ ಕಾರಣ ಇತ್ತೀಚೆಗೆ ಇಬ್ಬರು ಕೂಡ ಅಪ್ಪ-ಅಮ್ಮನ ಜೊತೆ ಇರಲು ಬಂದಿದ್ದಾರೆ. ಬಾಲಕಿ ತನಗಿಂತ ತನ್ನ ತಮ್ಮನನ್ನು ಹೆತ್ತವರು ಹೆಚ್ಚು ಪ್ರೀತಿಸುತ್ತಾರೆ ಎಂದು ನಂಬಿದ್ದಾಳೆ. ಹೀಗಾಗಿ ಆಕೆ ಬಾಲಕನನ್ನು ಕೊಲೆ ಮಾಡಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಹೆತ್ತವರು ಬಾಲಕನಿಗೆ ಇತ್ತೀಚೆಗೆ ಮೊಬೈಲ್ ಫೋನ್ (Mobile Phone) ಕೊಡಿಸಿದ್ದರು. ಅಂತೆಯೇ ಮಂಗಳವಾರ ಅಪ್ಪ-ಮ್ಮ ಕೆಲಸಕ್ಕೆ ಹೋದ ಬಳಿಕ ಆತ ತನ್ನ ಮೊಬೈಲ್ ನಲ್ಲಿ ಗೇನ್ಸ್ ಆಡ್ತಾ ಇದ್ದ. ಈ ವೇಳೆ ಬಾಲಕಿ ತನಗೊಮ್ಮೆ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಆತ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಆತನನನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಕಲಬುರಗಿ: ಸಹೋದರರಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.

    ಸುನೀಲ್ (17) ಹಾಗೂ ಶೇಖರ್ (12) ಆತ್ಮಹತ್ಯೆಗೆ ಶರಣಾದ ಸಹೋದರರು. ಇವರಿಬ್ಬರು ಮನೆಯಲ್ಲಿ ತಂದೆ-ತಾಯಿಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಹೊಲಕ್ಕೆ ಬಂದು ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೊಬೈಲ್ ವಿಷಯವಾಗಿ ಹೆತ್ತವರ ಜೊತೆ ಜಗಳವಾಡಿಕೊಂಡಿದ್ದಾರೆ. ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರಿಗೂ ಈಜು ಬರುವ ಹಿನ್ನೆಲೆ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

    ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಮಂಗಳೂರು: ಸರ್ಕಾರ ಆನ್‍ಲೈನ್ ಕ್ಲಾಸ್ ಮಾಡಲು ತಯಾರಿ ನಡೆಸುತ್ತಿದ್ದರೆ ಇತ್ತ ಆನ್‍ಲೈನ್ ಕ್ಲಾಸ್‍ಗೆ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆನ್‍ಲೈನ್ ಕ್ಲಾಸಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಟಿವಿ ಖರೀದಿಗಾಗಿ ಅನ್ನೋ ಮಾಹಿತಿ ಹೊರ ಬಿದ್ದಿದೆ.

    ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ. ಹೀಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಪೋಷಕರು ಮುಂದಾಗಿದ್ದಾರೆ.

    ಈ ವಿಚಾರನ್ನು ಪೋಷಕರು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.

  • ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ವಯಸ್ಸಾದ ಮೇಲೆ ವೃದ್ಧ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟು, ನಿರ್ಲಕ್ಷಿಸಿ ಶೋಷಿಸುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಿದೆ.

    2007ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದರಲ್ಲಿ ಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡಿತ್ತು.

    ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಬಲಪಡಿಸಿ, ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಆದ್ದರಿಂದ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಆದ್ಯತೆಗೆ ಒತ್ತು ನೀಡಲು ನಿರ್ಧರಿಸಿದೆ.

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ, ಅದರ ಕಾರ್ಯಸಾಧುತ್ವ ಮತ್ತು ಪರಿಣಾಮವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಸಹಾಯ ಪಡೆಯಲಿದ್ದು, ಆ ಸಂಸ್ಥೆಗೆ ಈ ಬಗ್ಗೆ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ. ಈ ಮೂಲಕ ಈಗಿರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಿಂದಿನ ಕಾನೂನಿನ ಪರಿಣಾಮ ಹೇಗಿದೆ? ಇದರಿಂದ ವೃದ್ಧ ಪೋಷಕರಿಗೆ ಯಾವ ರೀತಿ ಸಹಾಯವಾಗಿದೆ? ಹೀಗೆ ಹಲವು ವಿಚಾರಗಳ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚಿಸಲಿದೆ.

    ಇಲ್ಲಿಯವರೆಗೆ ಹೆತ್ತವರನ್ನು ನೋಡಿಕೊಳ್ಳುವ ಮಕ್ಕಳ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಆದರೆ ಮುಂದೆ ಅದನ್ನು ಮಕ್ಕಳು/ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.

    ಅಲ್ಲದೆ ಪೋಷಕರ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿಪಡಿಸಲಾದೆ. ಆದರೆ ಈ ಮೊತ್ತ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಯಾಕೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಹೆಚ್ಚು ಸಂಬಳ ಗಳಿಸುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

    ಹಾಗೆಯೇ ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ-ಕೇರ್ ಸೆಂಟರ್ ಗಳು, ವೃದ್ಧಾಶ್ರಮಗಳ ಗುಣಮಟ್ಟವನ್ನು ಹೆಚ್ಚಳವನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಕ್ಯಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ರೀತಿಯ ಸಂಸ್ಥೆಗಳು ವೃದ್ಧಾಶ್ರಮಗಳು, ಡೇ-ಕೇರ್ ಸೆಂಟರ್‍ ಗಳ ಪರಿಶೀಲನೆ ನಡೆಸಿ, ಅವುಗಳಿಗೆ ರೇಟಿಂಗ್ ಕೊಟ್ಟು ಗುಣಮಟ್ಟ ತಿಳಿಯಲು ಮುಂದಾಗಿದೆ.

  • ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಆತ್ಮಹತ್ಯೆ

    ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಆತ್ಮಹತ್ಯೆ

    ಚೆನ್ನೈ: ಪೋಷಕರು ತನ್ನ ಪ್ರೀತಿಯನ್ನು ನಿರಾಕರಿಸಿದ್ದರೆಂದು ಮನನೊಂದು ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಗ್ರಾಮದ ಬಳಿ ನಡೆದಿದೆ.

    27 ವರ್ಷದ ವಿ ಸತೀಶ್ ಆತ್ಮಹತ್ಯೆಗೆ ಶರಣಾದ ಪೇದೆಯಾಗಿದ್ದು, ಈತ ನಕ್ಕಲಪಟ್ಟಿ ಗ್ರಾಮದ ನಿವಾಸಿಯಾಗಿದ್ದು ಊಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.

    ಎರಡು ವಾರಗಳ ಹಿಂದೆ ಸತೀಶ್ ರಜೆಯ ಮೇಲೆ ಊರಿಗೆ ಬಂದಿದ್ದನು. ಸತೀಶ್ ತನ್ನದೇ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಚಾರವನ್ನು ಇತ್ತೀಚೆಗಷ್ಟೇ ಸತೀಶ್ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದನು. ಅಲ್ಲದೇ ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಆದ್ರೆ ಹೆತ್ತವರು ಮಗನ ಪ್ರೀತಿಗೆ ಒಪ್ಪಿಗೆ ಸೂಚಿಸದೆ ಮದುವೆಯನ್ನು ನಿರಾಕರಿಸಿದ್ರು.

    ಇತ್ತ ಯುವತಿ ಮನೆಯವರು ಬೇಗ ಮದುವೆಯಾಗು ಇಲ್ಲವೆಂದಲ್ಲಿ ಮಗಳಿಗೆ ಬೇರೆ ವರ ಹುಡುಕುವುದಾಗಿ ಒತ್ತಾಯಿಸುತ್ತಿದ್ದರು. ಇದರಿಂದ ಗೊಂದಲಕ್ಕೀಡಾದ ಯುವಕ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಈತ ಏನೇ ಮಾಡಿದ್ರೂ ಪ್ರೀತಿಸುತ್ತಿರುವ ಯುವತಿ ಜೊತೆ ಮದುವೆ ಮಾಡಲು ಸತೀಶ್ ಪೋಷಕರು ಸುತಾರಾಂ ಒಪ್ಪಲಿಲ್ಲ. ಇದರಿಂದ ನೊಂದ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.

    ಮಂಗಳವಾರ ರಾತ್ರಿ ತನ್ನ ಕೋಣೆಯೊಳಗೆ ತೆರಳಿ ಸತೀಶ್ ಬಾಗಿಲು ಹಾಕಿಕೊಂಡಿದ್ದಾನೆ. ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡ ಮಗ ಹೊರಗೆ ಬಾರದೇ ಇದ್ದರಿಂದ ಆತಂಕಗೊಂಡ ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಸತೀಶ್ ಕರೆ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಪೋಷಕರು ಕೋಣೆಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಸತೀಶ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಉಸಿಲಂಪಟ್ಟಿ ಜಿಲ್ಲಾಸ್ಪತ್ರೆಗೆ ಸತೀಶ್ ಮೃತದೇಹವನ್ನು ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯಲ್ಲಿದ್ದ ಕಾರು, 13 ಲಕ್ಷ ರೂ. ಕದ್ದಿದ್ದಕ್ಕೆ ಮಗನ ಮೇಲೆ ಹೆತ್ತವರಿಂದ ದೂರು

    ಮನೆಯಲ್ಲಿದ್ದ ಕಾರು, 13 ಲಕ್ಷ ರೂ. ಕದ್ದಿದ್ದಕ್ಕೆ ಮಗನ ಮೇಲೆ ಹೆತ್ತವರಿಂದ ದೂರು

    ನವದೆಹಲಿ: ಮನೆಯಿಂದಲೇ ಕಾರು ಹಾಗೂ ಲಕ್ಷಾಂತರ ರೂ. ಕದ್ದು ಪರಾರಿಯಾಗಿದ್ದಾನೆ ಅಂತ ಸ್ವಂತ ಮಗನ ವಿರುದ್ಧ ದೆಹಲಿಯ ಪೋಷಕರು ದೂರು ನೀಡಿದ್ದಾರೆ.

    18 ವರ್ಷದ ಯುವಕನೊಬ್ಬ ಗೆಳೆಯನಿಗಾಗಿ ಮನೆಯಲ್ಲಿದ್ದ 50 ಸಾವಿರ ರೂ. ಹಣವನ್ನು ಕದ್ದಿದ್ದಾನೆ. ಅಷ್ಟೇ ಅಲ್ಲದೆ ತಾಯಿಯ ಬ್ಯಾಂಕ್ ಖಾತೆಯಿಂದ ಸುಮಾರು 13 ಲಕ್ಷ ರೂ. ಜೊತೆಗೆ ತಂದೆಯ ಕಾರನ್ನು ಕದ್ದು ಪರಾರಿಯಾಗಿದ್ದಾನೆ. ಹಣವನ್ನು ಬಳಸಿಕೊಂಡು ಕೆಟ್ಟ ಚಟಕ್ಕೆ ಬಿದ್ದು ಮಗ ಹಾಳಾಗುತ್ತಿದ್ದಾನೆ. ಕೆಟ್ಟ ಕೆಲಸಕ್ಕೆ ಕಾರು ಹಾಗೂ ದುಡ್ಡನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ಡಿ. 19 ರಂದು ಮಗನ ವಿರುದ್ಧವೇ ಹೆತ್ತವರು ಕಳ್ಳತನದ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಮನೆಯಿಂದ ಹಣವನ್ನು ಕದ್ದು, ಅದರಿಂದ ಮಗ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದಾನೆ ಅಂತ ಅನುಮಾನವಿದೆ ಎಂದು ಪೋಷಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಯುವಕನ ಪ್ರೇಯಸಿಯನ್ನು ವಿಚಾರಿಸಿದರೂ ಆತನ ಬಗ್ಗೆ ಯಾವುದೇ ಸುಳಿವು ದೊರಕಿರಲಿಲ್ಲ.

    ಮಂಗಳವಾರ ಯುವಕ ಪೋಷಕರಿಗೆ ಕರೆ ಮಾಡಿ ನನ್ನನ್ನು ಹುಡುಕಬೇಡಿ. ನಾನು ಮತ್ತೆ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಯುವಕನ ಫೋನ್ ಟ್ರಾಕ್ ಮಾಡಿದಾಗ ಜೈಪುರ ಲೋಕೆಶನ್ ಸಿಕ್ಕಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿದೆ ಎಂದು ದೆಹಲಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಮುಂಬೈ: ಬೇಗನೆ ಸಿಗಬೇಕು ಅಂತ ಕೆಲವರು ತಮ್ಮ ಕತ್ತಿನಲ್ಲಿರುವ ತಮ್ಮ ಚೈನಿಗೆ ಸೇಫ್ಟಿ ಪಿನ್ ಹಾಕಿಕೊಂಡಿರುತ್ತಾರೆ. ಇದೊಂದು ಒಳ್ಳೆಯ ಉಪಾಯವಾದ್ರೂ ಇದರಿಂದ ಅಪಾಯ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಮುಂಬೈನಲ್ಲಿ ನಡೆದ ಘಟನೆ.

    ಹೌದು. ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರದಲ್ಲಿ ಪಿನ್ ಸಿಕ್ಕಿಸಿಕೊಂಡಿದ್ದರು. ಈ ಪಿನ್ ಮಗುವಿನ ಜೀವಕ್ಕೆ ಅಪಾಯವುಂಟು ಮಾಡಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗ ಅವರು ಕತ್ತಿನಲ್ಲಿರುವ ಚೈನ್ ಅನ್ನು ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ. ಅಂತೆಯೇ ಇಲ್ಲಿ ಕೂಡ ಮಗುವನ್ನು ತಾಯಿ ಎತ್ತಿಕೊಂಡಾಗ, ಮಗು ತನ್ನ ತಾಯಿ ಕತ್ತಿನಲ್ಲಿದ್ದ ಕರಿಮಣಿಯಲ್ಲಿ ಸಿಕ್ಕಿಸಿರುವ ಪಿನ್ ಅನ್ನು ನುಂಗಿದೆ. ಈ ಪಿನ್ ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ.

    ಮಗು ನಿರಂತವಾಗಿ ಅಳುತ್ತಿರೋದನ್ನು ಗಮನಿಸಿದ ಹೆತ್ತವರು ಗಾಬರಿಯಾಗಿದ್ದಾರೆ. ಅಲ್ಲದೇ ಮಗು ನೀರು ಕುಡಿಯಲು ಕೂಡ ನಿರಾಕರಿಸುತ್ತಿತ್ತು. ಹೀಗಾಗಿ ಹೆತ್ತವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಮಗುವಿನ ಎಕ್ಸ್ ರೇ ತೆಗೆದಾಗ ಮಗುವಿನ ಕುತ್ತಿಗೆಯಲ್ಲಿ ಪಿನ್ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ಅಲ್ಲಿಂದ ಕೂಡಲೇ ನಗರದ ಕೆಇಎಂ ಆಸ್ಪತ್ರೆಗೆ ತೆರಳಿರುವುದಾಗಿ ಮಗುವಿನ ತಂದೆ ತಿಳಿಸಿದ್ದಾರೆ.

    ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಗಂಟಲಲ್ಲಿ ಸಿಲುಕಿದ್ದ ಪಿನ್ ಹೊರತೆಗೆಯಲಾಗಿದೆ. ಆದ್ರೆ ಇದನ್ನು ತೆಗಯಲು ತುಂಬಾ ಕಷ್ಟವಾಯಿತು. ಯಾಕಂದ್ರೆ ಇದರಿಂದ ಮಗುವಿನ ಜೀವಕ್ಕೇ ಕುತ್ತು ತರುವಂತಿತ್ತು ಅಂತ ಆಸ್ಪತ್ರೆಯ ವೈದ್ಯರಾದ ಡಾ. ನೀಲಂ ಸತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ ಬಸ್ಸಿನಿಂದ ಬಾಲಕನ ಕಿಡ್ನಾಪ್, 50 ಲಕ್ಷಕ್ಕೆ ಬೇಡಿಕೆ- ಕಿಡ್ನಾಪರ್ ಎನ್‍ಕೌಂಟರ್ ಮಾಡಿ ಬಾಲಕನನ್ನು ರಕ್ಷಿಸಿದ ಪೊಲೀಸರು

    ಶಾಲಾ ಬಸ್ಸಿನಿಂದ ಬಾಲಕನ ಕಿಡ್ನಾಪ್, 50 ಲಕ್ಷಕ್ಕೆ ಬೇಡಿಕೆ- ಕಿಡ್ನಾಪರ್ ಎನ್‍ಕೌಂಟರ್ ಮಾಡಿ ಬಾಲಕನನ್ನು ರಕ್ಷಿಸಿದ ಪೊಲೀಸರು

    ನವದೆಹಲಿ: ಅಪಹರಣವಾಗಿದ್ದ ನಾಲ್ಕೂವರೆ ವರ್ಷದ ಬಾಲಕನನ್ನು ಸುಮಾರು 12 ದಿನಗಳ ಬಳಿಕ ಪೊಲೀಸರು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಾಲಕ ವಿಹಾನ್ ಶಾಲಾ ಬಸ್ ನಲ್ಲಿ ದಿಲ್ಶಾನ್ ಗಾರ್ಡನ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದರು. ಕೂಡಲೇ ಪೋಷಕರು ಮಗ ನಾಪತ್ತೆಯಾಗಿರುವ ಕುರಿತು ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ನೀಡಿದ್ದರು.

    ವಿಹಾನ್ ನಗರದ ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದು, ಜನವರಿ 25ರಿಂದ ನಾಪತ್ತೆಯಾಗಿದ್ದ. ನಾಪತ್ತೆಯಾದ 3 ದಿನಗಳ ಬಳಿಕ ಅಪರಿಚಿತರು ವಿಹಾನ್ ಪೋಷಕರಿಗೆ ಕರೆ ಮಾಡಿ, 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಅಪಹರಣಕಾರರ ಫೋನ್ ಮಾಹಿತಿ ಕಲೆ ಹಾಕಿದಾಗ ಅವರು ಘಜಿಯಾಬಾದ್ ನಲ್ಲಿ ಅಡಗಿಕೊಂಡಿರುವುದು ಗೊತ್ತಾಗಿತ್ತು.

    ಕೂಡಲೇ ಪೊಲೀಸರು ಘಜಿಯಾಬಾದ್ ಪೊಲೀಸ್ ತಂಡದ ನೆರವು ಪಡೆದು ಇಲ್ಲಿನ ಶಾಲಿಮಾರ್ ಸಿಟಿ ಅರ್ಪಾಟ್‍ಮೆಂಟ್ ನಲ್ಲಿ ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಓರ್ವ ಆರೋಪಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ. ಈ ಮಧ್ಯೆ ಮೂರನೇ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

    ಪೊಲೀಸರು ಅಪಹರಣಕಾರರನ್ನು ಬೆನ್ನಟ್ಟುವ ಮೊದಲು ಈ ಕುರಿತು ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. ಹೀಗಾಗಿ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

  • ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಮುಂಬೈ: ತನ್ನದಲ್ಲದ ತಪ್ಪಿಗೆ 4 ವರ್ಷದ ಬಾಲಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ 19 ವರ್ಷದ ರಹೀಮ್ ಶೌಕರ್ ಅಲಿ ಶೇಕ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈತ ಭಯಾಂಡರ್ ಪೂರ್ವದ ಆಜಾದ್ ನಗರದ ನಿವಾಸಿ ಅಂತ ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಹೆತ್ತವರ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಅವರ 4 ವರ್ಷದ ಬಾಲಕಿಯ ತಲೆಗೆ ಆರೋಪಿ ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮನೆಯ ಪಕ್ಕದಲ್ಲಿರೋ ಕಸದ ರಾಶಿಯ ಬಳಿ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಹೆತ್ತವರು ಗಮನಿಸಿದ್ದಾರೆ. ಬಳಿಕ ಅವರು ಆಕೆಯನ್ನು ಕೂಡಲೇ ಸ್ಥಳಿಯ ಕಸ್ತೂರಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.

    ಹಲ್ಲೆಗೆ ಕಾರಣವೇನು?: ಆರೋಪಿ ಬಾಲಕಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಹೀಗಾಗಿ ಹೆತ್ತವರು ಆತನ ಜೊತೆ ಸಲುಗೆಯಿಂದ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಆರೋಪಿಗೆ ತಿಳಿದು ಹೆತ್ತವರ ಮೇಲಿನ ಸಿಟ್ಟಿಗೆ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಆರೋಪಿ ಕಬ್ಬಿಣದ ರಾಡ್ ನಿಂದ ಬಾಲಕಿಯ ತಲೆಗೆ ಹೊಡೆದಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಆಕೆಯ ಮುಖ ಹಾಗೂ ಕಣ್ಣುಗಳಿಗೂ ಗಂಭೀರ ಗಾಯಗಳಾಗಿವೆ. ಹೀಗಾಗಿ ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯ ರಾಜೀವ್ ಅಗರ್ ವಾಲ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.