Tag: ಹೆಣ್ಣು ಶಿಶು

  • ಡೆಲಿವರಿಯಾದ ತಕ್ಷಣ ಹೆಣ್ಣು ಶಿಶುವನ್ನು ಕೊಂದ 15ರ ಬಾಲಕಿ

    ಡೆಲಿವರಿಯಾದ ತಕ್ಷಣ ಹೆಣ್ಣು ಶಿಶುವನ್ನು ಕೊಂದ 15ರ ಬಾಲಕಿ

    ಮುಂಬೈ: 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋ (Youtube Video) ಗಳನ್ನು ನೋಡಿದ ಬಳಿಕ ಮನೆಯಲ್ಲಿಯೇ ಹೆಣ್ಣು ಮಗು (Girl Baby) ವಿಗೆ ಜನ್ಮ ನೀಡಿದ್ದಾಳೆ. ನಂತರ ಆಕೆ ನವಜಾತ ಶಿಶುವನ್ನು ಕೊಂದ ಘಟನೆ ಮಹಾರಾಷ್ಟ್ರ (Maharastra) ದ ನಾಗ್ಪುರ (Nagpur) ನಗರದಲ್ಲಿ ನಡೆದಿದೆ.

    ಬಾಲಕಿ ಅಂಬಾಜಾರಿ ಪ್ರದೇಶದ ನಿವಾಸಿ. ಈಕೆಗೆ ಸಾಮಾಜಿಕ ಜಾಲತಾಣ (Social Media) ದಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಪರಿಚಯ ಸಲುಗೆಗೆ ತಿರುಗಿ ಆತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನ ಪ್ರವೇಶ ವಿಚಾರಕ್ಕೆ ಹಲ್ಲೆ- ಕಲ್ಲು ತೂರಾಟ, ಬೈಕ್ ಜಖಂ, 30 ಮಂದಿ ವಿರುದ್ಧ ದೂರು

    ವ್ಯಕ್ತಿಯ ಕಾಮತೃಷೆಗೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ ತಾಯಿ ಬಳಿ ಮಾತ್ರ ತನಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುತ್ತಾ ತಾನು ಗರ್ಭಿಣಿ (Girl Pregnant) ಎಂಬ ವಿಚಾರವನ್ನು ಮುಚ್ಚಿಟ್ಟಳು. ಅಲ್ಲದೆ ಗೌಪ್ಯತೆ ಕಾಪಾಡಿಕೊಳ್ಳಲು ಆಕೆ ಯೂಟ್ಯೂಬ್ ಮೊರೆ ಹೋಗಿದ್ದಾಳೆ. ಮಾರ್ಚ್ 2 ರಂದು ಅವಳು ತನ್ನ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹುಟ್ಟಿದ ತಕ್ಷಣವೇ ಆಕೆ ನವಜಾತ ಶಿಶುವನ್ನು ಕತ್ತು ಹಿಸುಕಿ ಸಾಯಿಸಿದಳು. ನಂತರ ಶವವನ್ನು ತನ್ನ ಮನೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದಾಳೆ.

    ಇತ್ತ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಮನೆಗೆ ಮರಳಿದ ಬಳಿಕ ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನವಜಾತ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

    ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆ ಆರೋಪ ಹೊರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

     

  • 100 ಬಾರಿ ಇರಿದ ರೀತಿಯಲ್ಲಿ 2 ದಿನದ ಹೆಣ್ಣು ಮಗುವಿನ ಶವ ಪತ್ತೆ

    100 ಬಾರಿ ಇರಿದ ರೀತಿಯಲ್ಲಿ 2 ದಿನದ ಹೆಣ್ಣು ಮಗುವಿನ ಶವ ಪತ್ತೆ

    – ಎದೆ, ಬೆನ್ನಿನ ಭಾಗದಲ್ಲಿ ಗಾಯದ ಗುರುತುಗಳು
    – ಸ್ಕ್ರೂಡ್ರೈವರ್‌ನಲ್ಲಿ ಚುಚ್ಚಿ ಕೊಂದ್ರಾ ಪಾಪಿಗಳು?

    ಭೋಪಾಲ್: ಎರಡು ದಿನದ ಹಸುಗೂಸಿನ ಮೃತದೇಹವೊಂದು ಭೋಪಾಲ್ ನ ಅಯೋಧ್ಯಾ ನಗರದಲ್ಲಿ ಪತ್ತೆಯಾಗಿದೆ. ಮಗುವಿನ ದೇಹದ ತುಂಬಾ ಗಾಯದ ಗುರುತುಗಳಿದ್ದು, ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಮಗು ಮನೆಯಲ್ಲೇ ಹುಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಯೋಧ್ಯಾ ನಗರದ ಜಿ ಸೆಕ್ಟರ್ ನ ಸೈಂಟ್ ಥೋಮಸ್ ಶಾಲೆಯ ಮುಂಭಾಗದಲ್ಲಿರುವ ದೇವಸ್ಥಾನವೊಂದರ ಪಕ್ಕದಲ್ಲಿ ಹಸುಗೂಸು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲಿನಿಂದ ಸುತ್ತಿದ್ದ ಮಗುವಿನ ಮೃತದೇಹವನ್ನು ತೆರೆದು ನೋಡಿದಾಗ ಅದರ ಎದೆ ಹಾಗೂ ಬೆನ್ನಿನ ಭಾಗದಲ್ಲಿ ಸುಮಾರು 100 ಬಾರಿ ಇರಿತವಾಗಿರುವ ಗುರುತುಗಳು ಇರುವುದನ್ನು ಪೊಲೀಸರು ಗಮನಿಸಿದರು. ಹೀಗಾಗಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

    ಮಗುವನ್ನು ರಾತ್ರಿ ದೇವಾಲಯದಲ್ಲಿ ಪಕ್ಕದಲ್ಲಿ ಬಿಟ್ಟು ಹೋಗಿರಬೇಕು. ಹೀಗಾಗಿ ಪ್ರಾಣಿಗಳು ಕಚ್ಚಿ ಗಾಯಗೊಳಿಸಿರಬಹುದು ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಣ್ಣದಾದ ಸ್ಕ್ರೂಡ್ರೈವರ್ ನಂತಹ ಗಟ್ಟಿಯಾದ ಹಾಗೂ ಮೊಂಡಾಗಿರುವ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿ ಬಂದಿದೆ.

    ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪೊಲೀಸರು ಅಪರಿಚಿತ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವಜಾತ ಶಿಶುವನ್ನು ಯಾರು ಬಿಟ್ಟು ಹೋಗಿದ್ದು ಎಂದು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಚಂಡೀಗಢ: ಶ್ವಾನಗಳೆರಡು ಚರಂಡಿಯಲ್ಲಿ ಬಿದ್ದ ಶಿಶುವನ್ನು ರಕ್ಷಣೆ ಮಾಡಿದ್ದು, ಆ ಕಂದಮ್ಮನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ಆತಂಕಕಾರಿ ಘಟನೆಯೊಂದು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಪುಟ್ಟ ಮಗುವನ್ನು ಅದರ ತಾಯಿಯೇ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಚರಂಡಿಗೆ ಬಿಸಾಡಿದ್ದಾಳೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.

     ಸಿಸಿಟಿವಿಯಲ್ಲೇನಿತ್ತು?:
    ಮುಂಜಾನೆ ಮಹಿಳೆಯೊಬ್ಬಳು ಕೈತಾಲ್ ನಲ್ಲಿರುವ ಡೋಗ್ರಾ ಗೇಟ್ ಬಳಿ ನಡೆದುಕೊಂಡು ಬರುತ್ತಾಳೆ. ಪಕ್ಕದಲ್ಲೇ ಚರಂಡಿಯೊಂದಿದ್ದು, ಮಹಿಳೆ ತನ್ನ ಕೈಯಲ್ಲಿದ್ದ ವಸ್ತುವನ್ನು ಎಸೆಯುತ್ತಾಳೆ. ಹೀಗೆ ಚರಂಡಿಗೆ ಬಿದ್ದ ಮಗು ಜೋರಾಗಿ ಬಿದ್ದು ಅಳಲು ಆರಂಭಿಸಿದೆ. ಈ ಶಬ್ಧ ಕೇಳಿ ಪಕ್ಕದಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸಿವೆ. ಅಲ್ಲದೆ ಕೂಡಲೇ ಶಬ್ಧ ಕೇಳಿ ಬಂದ ಕಡೆ ದೌಡಾಯಿಸಿವೆ. ಹೀಗೆ ಚರಂಡಿ ಬಳಿ ಬಂದ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿವೆ.

    ನಾಯಿಗಳು ಏನು ಮಾಡುತ್ತಿವೆ ಎಂದು ನಿಂತು ನೋಡುತ್ತಿದ್ದ ಜನರಿಗೆ ಅದು ಮಗು ಎಂದು ಗೊತ್ತಾದ ಕೂಡಲೇ ಎಚ್ಚೆತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಶಿಶುವನ್ನು ಸ್ಥಳೀಯ ಕೈತಾಲ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿಶು ಬದುಕಿದ್ದು, ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಸರಿಸುಮಾರು 100 ಗ್ರಾಂ ಇದ್ದು, ಆಕೆಯನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಶಿಶುವಿನ ಆರೋಗ್ಯ ಸುಧಾರಿಸಿದ ಬಳಿಕ ಮಗುವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್)ಗೆ ಹಸ್ತಾಂತರಿಸಲಾಗುವುದು. ಆ ಬಳಿಕ ಅಲ್ಲಿಂದ ಹಲವು ಪ್ರಕ್ರಿಯೆಗಳ ಮೂಲಕ ಪಂಚಕುಲ ಅನಾಥಾಶ್ರಮಕ್ಕೆ ಮಗುವನ್ನು ನೀಡಲಾಗುವುದು ಎಂದು ಮತ್ತೊಬ್ಬ ವೈದ್ಯ ತಿಳಿಸಿದ್ದಾರೆ.

    ಶಿಶುವನ್ನು ಚರಂಡಿಗೆ ಬಿಸಾಕಿದ ಸಂಬಂಧ ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • 5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋದ್ರು!

    5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋದ್ರು!

    ಮುಂಬೈ: ಇಲ್ಲಿನ  ಚರ್ಚ್‍ಗೇಟ್ ಬಳಿ 5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದು, ಸೋಮವಾರ ಸಂಜೆ ಪ್ರಯಾಣಿಕರೊಬ್ಬರಿಂದಾಗಿ ಬೆಳಕಿಗೆ ಬಂದಿದೆ.

    ಮುಂಬೈ ಸ್ಥಳೀಯ ರೈಲಿನಲ್ಲಿ ಪುಟ್ಟ ಕಂದಮ್ಮನನ್ನು ಬಿಟ್ಟು ಹೋಗಿದ್ದರು. ರೈಲಿನ ಅಂಗವಿಕಲ ಬೋಗಿಯಲ್ಲಿದ್ದ ಮಗುವನ್ನು ಕಂಡ ಪ್ರಯಾಣಿಕರೊಬ್ಬರು ಜಿಆರ್ ಪಿ (ಸರ್ಕಾರಿ ರೈಲ್ವೇ ಪೊಲೀಸರು) ಅಧಿಕಾರಿಗಳಿಗೆ ಕರೆ ಮಾಡಿ ಅಂಗವಿಕಲರ ಬೋಗಿಯಲ್ಲಿ ಯಾರೋ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ರೈಲ್ವೇ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬಿಳಿ ಬಟ್ಟೆಯಿಂದ ಸುತ್ತಿ ಮಗುವನ್ನು ಸೀಟ್ ನಲ್ಲಿ ಬಿಟ್ಟು ಹೋಗಿದ್ದರು. ಬಹಳ ದುರ್ಬಲ ಸ್ಥಿತಿಯಲ್ಲಿದ್ದ ಶಿಶುವನ್ನು ಜಿಆರ್ ಪಿ ಅಧಿಕಾರಿಗಳು ಮುಂಬೈ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಮಗುವಿನ ಹೆತ್ತವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೋಗಿಯಲ್ಲಿ ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂದು ಹುಡುಕುತ್ತಿದ್ದೇವೆ. ಜೊತೆಗೆ ಯಾರೆಲ್ಲ ಮಗುವಿನೊಂದಿಗೆ ರೈಲು ಹತ್ತಿದ್ದಾರೆ ಎಂದು ಕಂಡುಹಿಡಿಯಲು ಎಲ್ಲಾ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಸುತ್ತಿದ್ದೇವೆ ಎಂದು ಜಿಆರ್ ಪಿ ಅಧಿಕಾರಿ ಹೇಳಿದರು.

  • ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆ

    ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆ

    ರಾಯಚೂರು: ನಗರದ ಮಂಗಳವಾರ ಪೇಟೆಯ ರಾಜಭಕ್ಷ ದರ್ಗಾ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿರುವ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದೆ.

    ನಾಯಿಗಳು ಶಿಶುವನ್ನು ಎಳೆದು ಚರಂಡಿಗೆ ಹಾಕಿದಾಗ ಸಾರ್ವಜನಿಕರ ಗಮನಕ್ಕೆ ಬಂದಿದೆ. ಶಿಶು ಜನಿಸಿ ಒಂದೆರಡು ದಿನಗಳು ಮಾತ್ರ ಆಗಿರಬಹುದು ಎನ್ನಲಾಗಿದೆ. ಹೆಣ್ಣು ಶಿಶು ಕಾರಣಕ್ಕೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಗುರುತುಗಳಿವೆ.

    ಶಿಶು ಜನಿಸುವಾಗಲೇ ಸಾವನ್ನಪ್ಪಿತ್ತಾ ಅಥವಾ ದರ್ಗಾ ಬಳಿ ಬಿಟ್ಟು ಹೋದಾಗ ಸಾವನ್ನಪ್ಪಿದೆಯಾ ಎಂದು ತಿಳಿದು ಬಂದಿಲ್ಲ. ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರು ಮಗುವಿನ ಶವವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

  • 3 ದಿನದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಪಾಪಿಗಳು!

    3 ದಿನದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಪಾಪಿಗಳು!

    – ಮಗು ಮೈಮೇಲೆ ಇರುವೆ ಮುತ್ತಿರೋದು ಕಂಡು ಸಾರ್ವಜನಿಕರಿಂದ ಹಿಡಿಶಾಪ

    ಧಾರವಾಡ: ನಗರದ ಹೊರವಲಯದ ನವಲಗುಂದ ರಸ್ತೆಯ ಗೋವನಕೊಪ್ಪ ಗ್ರಾಮ ಬಳಿ ನವಜಾತ ಹೆಣ್ಣು ಶಿಶುವೊಂದನ್ನು ಎಸೆದು ಹೋಗಿದ್ದಾರೆ.

    ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೆ ಈ ಮಗುವನ್ನ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದ್ದು, ಈ ಮಗು ಜನಿಸಿ ಮೂರು ದಿನಗಳು ಕಳೆದ ನಂತರ ಎಸೆದು ಹೋಗಲಾಗಿದೆ. ಇಂದು ಬೆಳಿಗ್ಗೆ ಹೊಲದಲ್ಲಿ ಬಿದ್ದಿದ್ದ ಮೃತ ನವಜಾತ ಶಿಶುವನ್ನ ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಗು ಮೈಮೇಲೆ ರಕ್ತ ಇರುವ ಕಾರಣ ಇರುವೆಗಳು ಮುತ್ತಿಕೊಂಡ ದೃಶ್ಯ ಮನಕಲಕುವಂತೆ ಇದ್ದವು. ಕೆಲವರು ಮಗುವಿನ ಮೈಮೇಲೆ ಇರುವೆ ಮುತ್ತಿರುವುದನ್ನ ಕಂಡು, ಈ ಮಗು ಎಸೆದು ಹೋದ ಪಾಪಿಗಳಿಗೆ ಹಿಡಿಶಾಪ ಕೂಡಾ ಹಾಕಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.