Tag: ಹೆಣ್ಣು ಮಕ್ಕಳು

  • ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳೊಂದಿಗೆ ತಾಯಿ ವಿಷಸೇವಿಸಿ ಆತ್ಮಹತ್ಯೆ

    ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳೊಂದಿಗೆ ತಾಯಿ ವಿಷಸೇವಿಸಿ ಆತ್ಮಹತ್ಯೆ

    – ಹಿರಿಯ ಮಗಳಿಗೆ ಫಿಕ್ಸ್ ಆಗಿತ್ತು ಮದುವೆ

    ಹೈದರಾಬಾದ್: ತಾಯಿಯೊಬ್ಬಳು ತನ್ನಿಬ್ಬರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

    ಗೋವಿಂದಮ್ಮ(48), ಮಕ್ಕಳನ್ನು ರಾಧಿಕಾ(30) ಹಾಗೂ ರಮ್ಯ(28) ಆತ್ಮಹತ್ಯೆ ಮಾಡಿಕೊಂಡ ತಾಯಿ- ಮಕ್ಕಳು. ತೆಲಂಗಾಣದ ಖಮ್ಮಂನಲ್ಲಿರು ರಾಘವ ಥಿಯೇಟರ್ ಬಳಿ ಕುಟುಂಬ ವಾಸವಾಗಿತ್ತು. ಗೋವಿಂದಮ್ಮನ ಪತಿ ಚಿನ್ನದ ಕೆಲಸ ಮಾಡುತ್ತಿದ್ದು, ಈ ಮೂಲಕ ಬದುಕಿನ ಬಂಡಿ ಸಾಗುತ್ತಿತ್ತು.

    ಒಟ್ಟಿನಲ್ಲಿ ಕಡುಬಡತನದಿಂದ ಬದುಕುತ್ತಿರುವ ಈ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದಾರೆ. ಹೀಗಾಗಿ ಕುಟುಂಬದವರು ಹಿರಿಯ ಮಗಳಿಗೆ ಮದುವೆ ಮಾಡುವ ನಿರ್ಧಾರ ಮಾಡಿದರು. ಅಂತೆಯೇ ಮಗಳು ರಾಧಿಕಾ ಮದುವೆ ನಿಶ್ಚಯವಾಗಿದ್ದು, ಜನವರಿಯಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಇತ್ತ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಪರಿಣಾಮ ಮಗಳ ಮದುವೆ ಮಾಡಲು ಅಸಾಧ್ಯ ಎನ್ನುವಷ್ಟು ಆರ್ಥಿಕವಾಗಿ ಕುಗ್ಗಿ ಹೋಯಿತು.

    ಹುಡುಗನ ಕಡೆಯವರು ವರದಕ್ಷಿಣೆ ಕೂಡ ಕೇಳಿರಲಿಲ್ಲ. ಆದರೂ ಮಗಳ ಮದುವೆ ಬಗ್ಗೆಯೇ ಕುಟುಂಬ ಚಿಂತೆಯಲ್ಲಿತ್ತು. ಮನೆಯ ಯಜಮಾನನ್ನು ಬಿಟ್ಟು ತಾಯಿ ಹಾಗೂ ಇಬ್ಬರು ಮಕ್ಕಳು ಬುಧವಾರ ಚಿನ್ನ ಶುಚಿಗೊಳಿಸುವ ರಾಸಾಯನಿಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಪತಿ ಮನೆಗೆ ಹಿಂದುರುಗಿದಾಗ ಪತ್ನಿ ಹಾಗೂ ಮಕ್ಕಳ ಶವ ಕಂಡು ದಂಗಾಗಿದ್ದಾರೆ.

    ಘಟನೆಯಿಂದ ಆಘಾತಗೊಂಡ ಪತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

  • ಡ್ರಗ್ಸ್ ಪ್ರಕರಣದಲ್ಲಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ: ರಾಮಲಿಂಗಾರೆಡ್ಡಿ

    ಡ್ರಗ್ಸ್ ಪ್ರಕರಣದಲ್ಲಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ: ರಾಮಲಿಂಗಾರೆಡ್ಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಕೇವಲ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಇಂದು ಆನೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣದಲ್ಲಿ ಹೆಣ್ಣು ಮಕ್ಕಳು ಬಿಟ್ಟರೆ ಇನ್ನೂ ಯಾರೂ ಕೂಡ ಇಲ್ವಾ? ಬರಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರು ತಪ್ಪು ಮಾಡಿರಬಹುದು ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದರು.

    ನಾನು ಕೂಡ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಡ್ರಗ್ಸ್ ತಡೆಯ ಬಗ್ಗೆ ಸಾಕಷ್ಟು ಪ್ರಿಯಾರಿಟಿ ಕೊಟ್ಟಿದ್ದೆ. ಡ್ರಗ್ಸ್ ಬರುತ್ತಿರುವ ಮೂಲವನ್ನು ಕಂಟ್ರೋಲ್ ಮಾಡಬೇಕಿದೆ. ಪೊಲೀಸರಿಗೂ ಕೂಡ ಸಾಕಷ್ಟು ಮಾಹಿತಿ ಇದೆ. ಡ್ರಗ್ಸ್ ಪ್ರಕರಣ ಯುವಜನಾಂಗವನ್ನು ಹಾಳುಮಾಡುತ್ತಿದೆ. ಮೂರು ಜನರನ್ನೇ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿದರೆ ಈ ಪ್ರಕರಣ ಹಳ್ಳ ಹಿಡಿಯಬಹುದು. ಉಳಿದವರ ಬಂಧನ ಯಾಕೆ ಆಗುತ್ತಿಲ್ಲ ಗೃಹ ಮಂತ್ರಿಗಳಿಗೆ ಮಾಹಿತಿ ಇಲ್ಲವಾ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ಆರ್.ಆರ್.ನಗರ ಚುನಾವಣಾ ಕೇಸ್ ವಿಚಾರವಾಗಿ ಮಾತನಾಡಿ, ಸಣ್ಣಪುಟ್ಟ ವಿಚಾರಕ್ಕೆ ಕೇಸು ದಾಖಲಿಸುವುದು ಸರಿಯಲ್ಲ. ಚಾಲಕನಿಗೆ ಗೊತ್ತಾಗದೆ 100 ಮೀಟರ್ ಒಳಗೆ ಹೋಗಿದ್ದಾರೆ. ಇನ್ನು ಮೇಲೆ ಬರಬಾರದು ಅಂತ ಪೊಲೀಸರು ಹೇಳಿದರೆ ಮುಗಿದುಹೋಗುತ್ತಿತ್ತು. ಅದನ್ನೇ ದೊಡ್ಡದಾಗಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

    ಡಿಜೆ ಹಳ್ಳಿ ಕೆಜಿಹಳ್ಳಿ ಗಲಾಟೆ ವಿಚಾರ ಹೇಳಿಕೆ ನೀಡಿದ ರಾಮಲಿಂಗಾರೆಡ್ಡಿ, ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಗಲಾಟೆಗೆ ಕಾರಣ. ಸರ್ಕಾರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ತಪ್ಪು ಮಾಡಿದರೆ ಕ್ರಮಕೈಗೊಳ್ಳಲಿ. ನವೀನನನ್ನು ಕೂಡಲೇ ಬಂಧಿಸಿದರೆ ಈ ಗಲಾಟೆ ಆಗುತ್ತಿರಲಿಲ್ಲ. ಆರ್ ಆರ್ ನಗರ ಚುನಾವಣೆಗೆ ಒಂದು ವಾರ್ಡಿಗೆ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಕೂಡ ನೇಮಕ ಮಾಡಲಾಗಿದೆ. ಅವರು ಕೂಡ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದರು.

  • ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಿಂಟ್- ಮದ್ವೆ ಕಾರ್ಡ್ ವೈರಲ್

    ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಿಂಟ್- ಮದ್ವೆ ಕಾರ್ಡ್ ವೈರಲ್

    ಬಳ್ಳಾರಿ: ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಿಂಟ್ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿಗಳಾದ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬವರು ತಮ್ಮ ಮಗಳಾದ ಅನುಷಾ ಅವರ ಮದುವೆಯನ್ನು ಇದೇ ದಿನಾಂಕ 27 ರಂದು ಮಾಡಲಿದ್ದಾರೆ. ಕಾರಣ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಬೇಟಿ ಬಚಾವೋ ಬೇಟಿ ಪಾಡಾವೋ’ ಎನ್ನುವ ಸ್ಲೋಗನ್ ಪ್ರಿಂಟ್ ಮಾಡಿಸಿದ್ದಾರೆ. ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಇದೇ ದಿನಾಂಕ 27 ರಂದು ಮಗಳ ಮದುವೆಯನ್ನು ಬೆಳಗಾವಿ ಮೂಲದ ನಿತಿನ್ ಎಂಬವರ ಜೊತೆ ನಡೆಯಲಿದ್ದು, ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ. ಈ ಇಬ್ಬರೂ ದಂಪತಿಗೆ ಹೆಣ್ಣು ಮಕ್ಕಳು ಎಂದರೆ ತುಂಬಾನೇ ಇಷ್ಟ ಅಂತೆ ಹೀಗಾಗಿ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳೆಸಬೇಕು ಎನ್ನುವ ಉದ್ದೇಶದಿಂದ ಈ ರೀತಿಯಲ್ಲಿ ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ ಎನ್ನಲಾಗಿದೆ.

  • ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರ: ಜಿಲ್ಲೆಯಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಪ್ರಾತಿನಿಧ್ಯ ಕೊಡಲಾಗುತ್ತಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಓಬವ್ವ ಪಡೆ ರೋಡ್ ರೋಮಿಯೋಗಳಿಗೆ ಸಿಂಹಸ್ವಪ್ನವಾಗಲಿದೆ. ವಿಜಯಪುರದ ಹೆಣ್ಣು ಮಕ್ಕಳು ನಿಶ್ಚಿಂತೆಯಿಂದ ಯಾವ ಭಯವಿಲ್ಲದೆ ಓಡಾಡಬಹುದಾಗಿದೆ.

    ವೀರ ಒನಕೆ ಓಬವ್ವ ತನ್ನ ರಾಜ್ಯದ ಮೇಲೆ ಕಣ್ಣು ಹಾಕಿದ್ದ ಹೈದರಾಲಿ ಶತ್ರುಪಡೆಯನ್ನು ಬರಿ ಒನಕೆಯಿಂದಲೇ ಮಣ್ಣು ಮುಕ್ಕಿಸಿದ್ದಳು. ಈಗ ಈ ವೀರ ವನಿತೆ ಓಬವ್ವ ಹೆಸರಿನಲ್ಲಿ ಪಡೆಯೊಂದು ರೆಡಿಯಾಗಿದೆ. ಅದು ಹೆಣ್ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗಾಗಿ. ಇಲ್ಲಿಯವರೆಗೂ ಇಂತಹ ಯಾವ ಪಡೆಯೂ ವಿಜಯಪುರದಲ್ಲಿರಲಿಲ್ಲ, ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿಯೆ ವಿಶೇಷವಾಗಿ ಓಬವ್ವ ಪಡೆ ರೆಡಿಯಾಗುತ್ತಿದೆ.

    ವಿಜಯಪುರ ಜಿಲ್ಲಾ ಪೊಲೀಸ್ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 15 ಜನ ಮಹಿಳಾ ಪೊಲೀಸ್ ಪೇದೆಗಳನ್ನೊಳಗೊಂಡ ಪಡೆ ಇದಾಗಿದೆ. ಇವರಿಗೆ ಜಬರ್ದಸ್ತ್ ತರಬೇತಿ ಕೊಡಲಾಗುತ್ತಿದೆ. ಬೈಕ್ ರೈಡಿಂಗ್, ಕರಾಟೆ, ಸೇರಿದಂತೆ ಇತರೆ ತರಬೇತಿ ನೀಡಲಾಗುತ್ತಿದೆ. ವಿಜಯಪುರ ಎಸ್‍ಪಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಮಹಿಳಾ ಪೇದೆಗಳಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಓಬವ್ವ ಪಡೆ ಬೈಕ್ ಮೇಲೆ ಗಸ್ತು ತಿರುಗುತ್ತಲೇ ಇರುತ್ತದೆ. ಶಾಲಾ- ಕಾಲೇಜುಗಳ ಸುತ್ತಮುತ್ತ, ಮಾರುಕಟ್ಟೆಗಳಲ್ಲಿ ಚಿತ್ರಮಂದಿರದ ಹತ್ತಿರದ ಸ್ಥಳಗಳು ಹೀಗೆ ಎಲ್ಲಡೆ ಗಸ್ತು ತಿರುಗುತ್ತಲೆ ಇರುತ್ತಾರೆ. ಹೆಣ್ಣು ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗೆ ಓಬವ್ವ ಪಡೆ ಒದ್ದು ಬುದ್ಧಿ ಕಲಿಸಲಿದೆ. ಅಲ್ಲದೆ ಹೆಣ್ಣುಮಕ್ಕಳ ತಂಟೆಗೆ ಬರುವವರಿಗೆ ತಕ್ಕ ಶಿಕ್ಷೆಯೂ ನಿಶ್ಚಿತ.

    ಈ ಓಬವ್ವ ಪಡೆ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಲಿದೆ. ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ, ಪುಂಡ ಪೋಕರಿಗಳಿಗೆ ಬುದ್ಧಿ ಕಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಿದೆ. ಸೂಕ್ತ ತರಬೇತಿ ಪಡೆದು ಆದಷ್ಟು ಬೇಗ ಓಬವ್ವ ಪಡೆ ಫೀಲ್ಡ್ ಗೆ ಇಳಿಯಲಿದೆ. ಓಬವ್ವ ಪಡೆ ರೋಡ್ ರೋಮಿಯೋ, ಪುಡಾರಿಗಳು, ಕಾಮುಕರ ಹೆಡೆಮುರಿ ಕಟ್ಟಲಿದೆ.

    ಓಬವ್ವ ಪಡೆಗೆ ಜಿಲ್ಲೆಯಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳ ಆವರಣಗಳ ಮುಂದೆ ಮಹಿಳಾ ವಸತಿ ನಿಲಯಗಳ ಮುಂದೆ ಪಡ್ಡೆ ಹುಡುಗರ ಕಾಟ ಹೇಳತೀರದು. ಹೆಣ್ಣು ಮಕ್ಕಳನ್ನು ಚುಡಾಯಿಸುವವರಿಗೆ ಓಬವ್ವ ಪಡೆ ದೊಡ್ಡ ಭರವಸೆಯ ರಕ್ಷಣಾ ಕವಚವಾಗಿ ಮೂಡಿ ಬರಲೆಂದು ವಿಜಯಪುರದ ಜನ ಆಶಿಸುತ್ತಿದ್ದಾರೆ.

  • 11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    – ಕುಟುಂಬದಲ್ಲಿ ಮುಗಿಲುಮುಟ್ಟದ ಸಂಭ್ರಮ

    ಜೈಪುರ: ಒಂದು ಬೇಕು ಎರಡು ಸಾಕು ಹೋಗಿ ಇದೀಗ ಒಂದೇ ಮಗು ಅನ್ನೋ ನಿರ್ಧಾರಕ್ಕೆ ಬಂದ್ರೆ ಜೈಪುರದ ಮಹಿಳೆಯೊಬ್ಬಳು ಗಂಡು ಮಗುವಿಗೋಸ್ಕರ ಬರೋಬ್ಬರಿ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಹೌದು. ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿ ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನೆರೆಹೊರೆಯವರ ಬಾಯಿಮುಚ್ಚಿಸಿದ್ದಾಳೆ. ನವೆಂಬರ್ 20ರಂದು ಗಿಡ್ಡು ನಗರ ಆಸ್ಪತ್ರೆಯಲ್ಲಿ 12ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೆ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದು, ಆಘಾತಕಾರಿ ಅನುಭವವಾಗಿದೆ ಎಂದು ಗಿಡ್ಡು ಹೇಳುತ್ತಾಳೆ.

    42 ವರ್ಷದ ಗಿಡ್ಡುವಿನ ಪತಿ ಕೂಡ ಸಂತತಿ ಮುಂದುವರಿಯಲು ಗಂಡು ಮಗು ಬೇಕು ಎಂದು ಆಸೆ ಪಟ್ಟಿದ್ದರು. ಅಲ್ಲದೆ ಪತಿ ಕೃಷ್ಣ ಕುಮಾರ್ ಕೂಡ ಗಂಡು ಮಗು ಇಲ್ಲದೆ ನೊಂದಿದ್ದರು. ಸದ್ಯ ಗಂಡು ಮಗು ಹುಟ್ಟಿರುವುದು ಎಲ್ಲರಿಗೂ ಸಂತಸ ತಂದಿದೆ.

    ನವೆಂಬರ್ 20ರಂದು ಗುಡ್ಡಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಇಬ್ಬರನ್ನು ಬಿಟ್ಟು ಉಳಿದ ಎಲ್ಲಾ ಹೆಣ್ಣು ಮಕ್ಕಳು ಓದುತ್ತಿದ್ದಾರೆ. 11 ಮಂದಿ ಹೆಣ್ಣು ಮಕ್ಕಳಲ್ಲಿ ಮೂವರಿಗೆ ಈಗಾಗಲೇ ಮದುವೆಯಾಗಿದ್ದು ಕಿರಿಯ ಮಗಳಿಗೆ 22 ವರ್ಷ ವಯಸ್ಸಾಗಿದೆ. ಇಷ್ಟೊಂದು ಮಕ್ಕಳನ್ನು ಹೇಗೆ ಸಾಕುತ್ತೀರಿ ಎಂದು ಕೆಲವರು ಗುಡ್ಡಿಯನ್ನು ಪ್ರಶ್ನಿಸಿದರೆ, ಆಕೆ ಒಂದು ಸಣ್ಣ ನಗು ಬೀರುತ್ತಾಳೆ.

    ಹಲವು ಹೆಣ್ಣು ಮಕ್ಕಳ ನಂತರ ಗಂಡು ಮಗು ಜನಿಸಿದ್ದು ಇದೇ ಮೊದಲ ಕೇಸಲ್ಲ. ಈ ಹಿಂದೆ ಅಂದರೆ 2017ರಲ್ಲಿ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನಿಡಿದ್ದರು.

  • ಗಂಡು ಮಗುವಾಗ್ಲಿಲ್ಲವೆಂದು ಮೂವರು ಹೆಣ್ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ಳು

    ಗಂಡು ಮಗುವಾಗ್ಲಿಲ್ಲವೆಂದು ಮೂವರು ಹೆಣ್ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ಳು

    ಗಾಂಧಿನಗರ: ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನ ಮಹಿಸಾಗರ್ ಎಂಬಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಗು ದಾಮರ್ ಎಂದು ಗುರುತಿಸಲಾಗಿದೆ. ಈಕೆ ತನಗೆ ಗಂಡು ಮಗುವಾಗಲಿಲ್ಲ ಎಂದು ಮನನೊಂದು ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಬುಧವಾರ ಬೆಳಗಿನಿಂದಲೇ ಮಂಗು ವಿಚಲಿತಗೊಂಡಿದ್ದು, ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಅಲ್ಲದೆ ಅಡುಗೆಯೂ ಮಾಡಿರಲಿಲ್ಲ. ಇದರಿಂದ ಮೂವರಲ್ಲಿ ಒಬ್ಬಾಕೆ ಹಸಿವಿನಿಂದ ಅಳುತ್ತಿದ್ದಳು. ಇದನ್ನು ಕಂಡು ಬೇಸರಗೊಂಡ ಮಂಗು ಅತ್ತೆ, ತಾನೇ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಿದ್ದಾರೆ. ಅದೇ ದಿನ ರಾತ್ರಿ 8 ಗಂಟೆಯ ಸುಮಾರಿಗೆ ಹಿರಿಯ ಮಗಳ ಜೊತೆ ಮಂಗು ಮನೆಯಿಂದ ಹೊರಟಿದ್ದಳು. ನಂತರ ಮಧ್ಯರಾತ್ರಿ ಹೊತ್ತಲ್ಲಿ ವಾಪಸ್ ಮನೆಗೆ ಬಂದು ನಿದ್ದೆ ಮಾಡಿದ್ದಳು.

    ಮಾರನೇ ದಿನ ಬೆಳಗ್ಗೆ ಮೂವರು ಮಕ್ಕಳ ಜೊತೆ ಮಂಗು ಕೂಡ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಗಾಬರಿಗೊಂಡ ಇಡೀ ಕುಟುಂಬ ಹುಡುಕಾಟ ನಡೆಸಿತ್ತು. ಈ ವೇಳೆ ಕೆಲ ಸಂಬಂಧಿಕರು ಗ್ರಾಮದ ಬಾವಿಯ ಹತ್ತಿರ ಸ್ವೆಟ್ಟರ್ ಹಾಗೂ ಬೆಡ್ ಶೀಟ್ ನೋಡಿರುವುದಾಗಿ ಮಂಗು ಪತಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ಸಿಕ್ಕ ಕೂಡಲೇ ಪತಿ ರಮನ್ ಬಾವಿಯ ಬಳಿ ಹೋದಾಗ ಮೂವರು ಹೆಣ್ಣು ಮಕ್ಕಳ ಮೃತದೇಹಗಳು ಬಾವಿಯಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ನಂತರ ಕುಟುಂಬ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೂವರು ಮಕ್ಕಳ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದರು. ಮಂಗು ಮೃತದೇಹವನ್ನು ಬಾವಿಯಿಂದ ನೀರು ಹೊರತೆಗೆದ ಮೇಲೆ ಮೇಲಕ್ಕೆತ್ತಲಾಯಿತು.

    ಪ್ರಕರಣದ ತನಿಖೆ ನಡೆಸಿದಾಗ ರಾಮನ್, ಮದುವೆಯಾಗಿ 7 ವರ್ಷವಾಗಿದೆ. ನಮಗೆ ಮೂವರೂ ಹೆಣ್ಣು ಮಕ್ಕಳೇ ಇದ್ದು, ಗಂಡು ಮಗುವಾಗಿಲ್ಲ ಎಂದು ಮಂಗು ಬೇಸರಗೊಂಡಿದ್ದಳು ಎಂದು ತಿಳಿಸಿದ್ದಾನೆ.

  • ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್

    ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್

    – ಮೊದಲ ಪತಿಯ ಮಗಳಿಗೆ ವಿಷ ಹಾಕಿದ್ದ ಜ್ಯೂಲಿ
    – ಹೆಣ್ಣು ಮಗು ಇದೆ ಅನ್ನೋ ಕಾರಣಕ್ಕೆ 2 ಬಾರಿ ಗರ್ಭಪಾತ

    ತಿರುವನಂತಪುರಂ: ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಆಸ್ತಿಯನ್ನು ಅನುಭವಿಸುವ ಪ್ಲಾನ್ ಮಾಡಿದ್ದ ಕೇರಳ ಸೈನೈಡ್ ಕಿಲ್ಲರ್ ಜ್ಯೂಲಿ ತನಿಖೆ ವೇಳೆ ಆಘಾತಕಾರಿ ವಿಷಯ ಬಿಚ್ಚಿಟ್ಟಿದ್ದಾಳೆ. ತನಗೆ ಹೆಣ್ಣು ಮಕ್ಕಳನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಬಾಯ್ಬಿಟ್ಟಿದ್ದಾಳೆ.

    ಮಂಗಳವಾರ ವಿಶೇಷ ತನಿಖಾ ತಂಡ(ಎಸ್‍ಐಟಿ) ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾಗ, ಜ್ಯೂಲಿ ಹೆಣ್ಣು ಮಕ್ಕಳನ್ನು ದ್ವೇಷಿಸುತ್ತಾಳೆ ಎನ್ನುವ ಬಗ್ಗೆ ತಿಳಿದುಬಂದಿದೆ. ಜ್ಯೂಲಿ ಹೆಣ್ಣು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಇಟ್ಟುಕೊಂಡಿದ್ದಳು ಎಂದರೆ, ತನ್ನ ಮೊದಲ ಪತಿಯ 2 ವರ್ಷದ ಹೆಣ್ಣು ಮಗುವನ್ನು ಜ್ಯೂಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದಳು. ಅಲ್ಲದೆ ಆಕೆ ಗರ್ಭಿಣಿಯಾಗಿದ್ದಾಗ ತನ್ನ ಹೊಟ್ಟೆಯಲ್ಲಿ ಇರುವುದು ಹೆಣ್ಣು ಮಗು ಎಂದು ತಿಳಿದಾಗ, ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು ಎಂದು ಎಸ್‍ಐಟಿ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಜ್ಯೂಲಿಯ ಹೇಳಿಕೆಗಳನ್ನು ಎಸ್‍ಐಟಿ ಅಧಿಕಾರಿಗಳು ದಾಖಲಿಸಿಟ್ಟುಕೊಂಡಿದ್ದು, ಕ್ರೈಂ ಬ್ರಾಂಚ್ ಪೊಲೀಸರು ಈ ಸಂಬಂಧ ದೂರುದಾರರ ವಿಚಾರಣೆಯನ್ನು ಕೂಡ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಈ ಸೈನೈಡ್ ಕೊಲೆ ಪ್ರಕರಣ ವಿಚಾರಣೆ ನಡೆಸುತ್ತಿರುವ ಎಸ್‍ಐಟಿ ತನಿಖಾಧಿಕಾರಿಗಳು ಮೃತರ ಶವಗಳ ಪತ್ತೆಗಾಗಿ ದೇಶದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಗಳ ಸಹಾಯವನ್ನು ಕೋರಿದ್ದಾರೆ. ಜೊತೆಗೆ ಅಗತ್ಯವಿದ್ದರೆ ವಿದೇಶಿ ಪ್ರಯೋಗಾಲಯಗಳ ಸಹಾಯವನ್ನೂ ಕೂಡ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕೇರಳದ ಕೊಜ್ಹಿಕೊಡೆ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ಹಂತಕಿ ಜ್ಯೂಲಿಯ ಜೊತೆಗೆ 2ನೇ ಪತಿ ಹಾಗೂ ಮತ್ತೊಬ್ಬನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಹಂತಕಿ ಜ್ಯೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವುದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆ ಆಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜ್ಯೂಲಿ ಮತ್ತು ಆಕೆಯ ಎರಡನೇ ಗಂಡ ಶಜು 2002 ರಿಂದ 2016ರ ಅವಧಿಯಲ್ಲಿ ಕ್ಯಾಥೋಲಿಕ್ ಕುಟುಂಬದ 6 ಮಂದಿಯನ್ನು ಬಲಿಪಡೆದಿದ್ದಾರೆ.

    ಹಂತ ಹಂತವಾಗಿ ಕೊಲೆ: 2002 ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜ್ಯೂಲಿ ಕೊಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001 ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಎರಡರ ಕಂದಮ್ಮ ಬಲಿ: 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜ್ಯೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಅಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಅಮೆರಿಕದಲ್ಲಿ ನೆಲೆಸಿರುವ ಟಾಮ್ ಥಾಮಸ್ ಕಿರಿಯ ಪುತ್ರ ಮೆಜೊ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

    ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜ್ಯೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜ್ಯೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಸಿಕ್ಕಿ ಬಿದ್ದಿದ್ದು ಹೇಗೆ?
    ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

    ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

  • ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಹುಬ್ಬಳ್ಳಿ: ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಮನಬಂದಂತೆ ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

    ಪತ್ನಿ ಬೇಬಿ ಆಯಿಶಾ ದೌರ್ಜನ್ಯಕ್ಕೆ ಒಳಗಾದ ಪತ್ನಿ. ಆರೋಪಿ ಸಲ್ಮಾನ್ ಅಹ್ಮದ್ ಕಲಬುರ್ಗಿ ಪತ್ನಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಹಲ್ಲೆ ಮಾಡಿದ್ದಾನೆ. ಸದ್ಯಕ್ಕೆ ಪತ್ನಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಏಳು ವರ್ಷಗಳ ಹಿಂದೆ ಸಲ್ಮಾನ್ ಅಹ್ಮದ್ ಕಲಬುರ್ಗಿ ಮತ್ತು ಬೇಬಿ ಆಯಿಶಾ ಇಬ್ಬರ ವಿವಾಹವಾಗಿತ್ತು. ಪತ್ನಿ ಬೇಬಿ ಆಯಿಶಾಗೆ ಮೊದಲ ಹೆರಿಗೆಯಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿದೆ. 17 ದಿನಗಳ ಹಿಂದೆ ಎರಡನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ತನಗೆ ಮೂರು ಹೆಣ್ಣು ಮಕ್ಕಳಾಗಿವೆ ಎಂದು ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನು.

    ಇವರಿಬ್ಬರ ಜಗಳದ ಮಧ್ಯೆ ಸಮುದಾಯದ ಹಿರಿಯರು ಬಂದು ರಾಜಿಸಂಧಾನ ಮಾಡಿದರು. ಆದರೂ ಇಂದು ಪತ್ನಿ ಬೇಬಿ ಆಯಿಶಾ ಮೇಲೆ ಹಲ್ಲೆ ಮಾಡಿದಲ್ಲದೇ ಪೆಟ್ರೊಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆಗ ಆಯಿಶಾ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆಯಿಶಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಸಂಬಂಧ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಹಾಕೋದ್ರಿಂದ ರೇಪ್ ಆಗ್ತಿದೆ: ಬಸವಪ್ರಕಾಶ ಸ್ವಾಮೀಜಿ

    ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಹಾಕೋದ್ರಿಂದ ರೇಪ್ ಆಗ್ತಿದೆ: ಬಸವಪ್ರಕಾಶ ಸ್ವಾಮೀಜಿ

    ಧಾರವಾಡ: ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತಿವೆ ಎಂದು ಅಕ್ಕಮಹಾದೇವಿ ಅನುಭವ ಪೀಠದ ಬಸವಪ್ರಕಾಶ ಸ್ವಾಮೀಜಿಗಳು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಯುವತಿಯರು ಅಶ್ಲೀಲ ಬಟ್ಟೆಗಳನ್ನ ಹಾಕಿಕೊಂಡು ಓಡಾಡಬಾರದು. ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತವೆ ಎಂದು ಹೇಳಿದರು. ಅಲ್ಲದೇ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ ಪಾಲನೆ ಮಾಡಬೇಕು ಎಂದು ಹೇಳಿದ ಅವರು, ಈ ಹಿಂದೆ ಮಾತೇ ಮಹಾದೇವಿಯವರ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

    ರಾತ್ರಿ 12 ಗಂಟೆಯ ನಂತರ ಮಹಿಳೆಯರು ಓಡಾಡಬಾರದು. ಇದರಿಂದ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಮೈತುಂಬ ಬಟ್ಟೆ ಧರಿಸಿ ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಹೊರಟರೆ ಸಮಾಜ ಒಳ್ಳೆಯ ದಾರಿಯಲ್ಲಿ ನಡೆಯುತ್ತದೆ ಎನ್ನುವ ಉದ್ದೇಶದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ರಾಯಚೂರಿನ ವಿದ್ಯಾರ್ಥಿನಿ ಸಾವಿಗೆ ವಿಷಾದ ವ್ಯಕ್ತ ಪಡಿಸಿದ ಅವರು, ಈ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತ್ತಸ್ಥರನ್ನ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು ಎಂದು ಹೇಳಿದರು. ಸರ್ಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಳಗಾವಿ ಸುವರ್ಣಸೌಧದ ಬಳಿ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

    https://www.youtube.com/watch?v=lrTiKsfdWK0

  • 15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    – ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮಸ್ಥರ ಹಿಂದೇಟು

    ಪಟ್ನಾ: ಟ್ಯೂಷನ್ ಕಲಿಸುತ್ತಿದ್ದ ಬಿಹಾರದ ಗ್ರಾಮವೊಂದರ ಶಿಕ್ಷಕನೊಬ್ಬ ತನ್ನ ಬಳಿ ಬರುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಮದುವೆಯಾಗಿದ್ದಾನೆ.

    ನಾರಾಯಣ್‍ಪುರ ಗ್ರಾಮದಲ್ಲಿ ಶಿಕ್ಷಕ ಚಂದ್ರಪ್ರಕಾಶ್ ಮೆಹ್ತಾ(50) ವಿದ್ಯಾರ್ಥಿಗಳಿಗೆ ಖಾಸಗಿ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದನು. ಆತನ ಬಳಿ ಗ್ರಾಮದ ಹಲವು ಹೆಣ್ಣು ಮಕ್ಕಳು ಟ್ಯೂಷನ್‍ಗೆ ಹೋಗುತ್ತಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಚಂದ್ರಪ್ರಕಾಶ್ ಟ್ಯೂಷನ್‍ಗೆ ಬರುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದನು. ಅಷ್ಟೇ ಅಲ್ಲದೆ ಅವಳ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದನು.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೂ ಯಾರಾದರೂ ಮೋಡಿ ಮಾಡಿ ಮದುವೆಯಾಗಿಬಿಟ್ಟರೆ ಏನು ಗತಿ ಎಂದು ಹೆದರಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಅಂತ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳು ಈಗ ಕಣ್ಣೀರಿಡುತ್ತಿದ್ದಾರೆ. ಘಟನೆ ಕುರಿತು ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಪರ ಸಂಘಟನೆಯ ಸದಸ್ಯರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೇ ಗ್ರಾಮಸ್ಥರು ಮಾತ್ರ ಯಾರ ಮೇಲೂ ನಮಗೆ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭದ್ರತೆ ನಮಗೆ ಮುಖ್ಯ. ನಾವು ಅವರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv