Tag: ಹೆಣ್ಣು ಮಕ್ಕಳು

  • 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ – ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

    14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ – ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

    ಬೆಂಗಳೂರು: 14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ (HPV Vaccine) ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

    ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಯಲು 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ ನೀಡಲು ನಿರ್ಧರಿಸಿದ್ದು, ಗಣಿಭಾದಿತ ಮತ್ತು ಕಲ್ಯಾಣ ಕರ್ನಾಟಕದ 20 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ವ್ಯಾಕ್ಸಿನ್ ನೀಡಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಗಣಿಗಾರಿಕೆಯಿಂದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು. 9 ಕೋಟಿ ವೆಚ್ಚದಲ್ಲಿ ಹೆಚ್‌ಪಿವಿ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ತುಮಕೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ 20 ತಾಲೂಕುಗಳಲ್ಲಿ 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ ನೀಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ತರಾತುರಿಯಲ್ಲಿ ದೆಹಲಿಗೆ ತೆರಳಿದ ಡಿಕೆಶಿ – ಸಿಎಂ ಮುಜುಗರದ ಹೇಳಿಕೆಗಳಿಗೆ ಬೇಸತ್ರಾ ಡಿಸಿಎಂ?

  • PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

    PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

    ರಾನ್‌ನಲ್ಲಿ (Iran) ಪುರುಷ ಪ್ರಧಾನ ನಿಯಮಗಳ ವಿರುದ್ಧ ಮಹಿಳೆಯರ (Women) ಅಸಮಾಧಾನದ ಕಟ್ಟೆ ಒಡೆದಿದೆ. ಹಿಜಬ್‌ (Hijab) ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿಗೆ ಸುಂದರ ಯುವತಿ ಬಲಿಯಾಗಿದ್ದು, ಈ ದೇಶದ ಪ್ರತಿ ಮಹಿಳೆಯ ಒಡಲಲ್ಲಿ ಕಿಚ್ಚು ಹೊತ್ತಿಸಿತು. ಆಗ ಸಾವಿರಾರು ಮಹಿಳೆಯರು ಬೀದಿಗಿಳಿದು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತಿದರು. ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಮಹಿಳೆಯರ ಆಕ್ರೋಶಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆಯೇ ಒಂದು ಕ್ಷಣ ನಡುಗಿ ಹೋಯಿತು. ಇದರ ನಡುವೆಯೇ ಮಹಿಳೆಯರ ಹೋರಾಟ ಹತ್ತಿಕ್ಕಲು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಯಿತು. ಇತ್ತ ಹೋರಾಟ ತೀವ್ರಗೊಂಡಿದ್ದರೆ ಅತ್ತ ಅದನ್ನು ಹತ್ತಿಕ್ಕುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದವು. ಹೆಣ್ಣುಮಕ್ಕಳು ಶಿಕ್ಷಿತರಾದರೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆಂಬ ಆತಂಕ ಇರಾನ್‌ನ ಆಡಳಿತ ವ್ಯವಸ್ಥೆಗೆ ಆತಂಕ ಮೂಡಿಸಿತು. ಹೀಗಾಗಿ ಅವರನ್ನು ಶಿಕ್ಷಣ ವಂಚಿತರನ್ನಾಗಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಘನಘೋರ ಕುಕೃತ್ಯದ ಸನ್ನಿವೇಶಕ್ಕೆ ಇರಾನ್‌ ಸಾಕ್ಷಿಯಾಗಿದೆ.

    ಹಿಜಬ್ ವಿರೋಧಿಸಿ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆ ನಡೆದ ಬಳಿಕ ಇದೀಗ ದೇಶದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ (Education) ಮಾಡಬಾರದು ಎಂಬ ಕಾರಣಕ್ಕೆ ಕೆಲ ಕಿಡಿಗೇಡಿಗಳು ನೂರಾರು ವಿದ್ಯಾರ್ಥಿನಿಯರಿಗೆ ವಿಷಪ್ರಾಶನ (Poisoning) ಮಾಡಿರುವುದು ಈಚೆಗೆ ವರದಿಯಾಗಿ ಸದ್ದು ಮಾಡಿತ್ತು. ಇರಾನ್‌ನಲ್ಲಿ ಹೆಣ್ಣುಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಏಕೆ ನಡೆಯುತ್ತಿದೆ? ಇದೆಲ್ಲ ಏಕೆ ನಡೆಯುತ್ತಿದೆ? ಇದಕ್ಕೆ ಮೂಲ ಕಾರಣವೇನು ಎಂಬೆಲ್ಲ ಪ್ರಶ್ನೆಗಳು ಕಾಡದೇ ಇರದು.

    ಹೆಣ್ಣುಮಕ್ಕಳಿಗೆ ವಿಷವಿಕ್ಕಿದ್ರಾ ದುರುಳರು?
    ಕೆಲ ದಿನಗಳ ಹಿಂದೆ ಇಸ್ಲಾಮಿಕ್ ರಾಷ್ಟ್ರದ ಶಾಲೆಯೊಂದರಲ್ಲಿ ನೂರಾರು ವಿದ್ಯಾರ್ಥಿನಿಯರಿಗೆ ವಿಷವುಣಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಗೆ ಇರಾನ್‌ನ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೆಲ ಕಿಡಿಗೇಡಿಗಳು ಹೆಣ್ಣುಮಕ್ಕಳ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂತ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಹೆಣ್ಣುಮಕ್ಕಳಿಗೆ ವಿಷ ನೀಡಿರುವಂತಹ ಪ್ರಕರಣ ಇರಾನ್‌ನಲ್ಲಿ ಇದೇ ಮೊದಲ ಬಾರಿಗೆ ನಡೆದಿಲ್ಲ. ಕಳೆದ ವರ್ಷ ನವೆಂಬರ್‌ನಿಂದ ಇಂತಹ ಆಪಾದಿತ ಘಟನೆಗಳು ವರದಿಯಾಗುತ್ತಲೇ ಇದೆ. 2022ರ ನವೆಂಬರ್‌ನಿಂದ ಇರಾನ್‌ನಾದ್ಯಂತ ಸುಮಾರು 700 ವಿದ್ಯಾರ್ಥಿಗಳು ವಿಷಪ್ರಾಶನ ಮಾಡಲಾಗಿದೆ ಎನ್ನಲಾಗಿದೆ.

    ನವೆಂಬರ್ 30 ರಂದು ಮೊದಲ ಘಟನೆ ಕೋಮ್ ನಗರದ ನೂರ್ ತಾಂತ್ರಿಕ ಶಾಲೆಯಲ್ಲಿ ವರದಿಯಾಗಿತ್ತು. ಅಂದು 18 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಬೊರುಜೆರ್ಡ್ ನಗರದ 4 ಶಾಲೆಗಳಲ್ಲಿ 194 ವಿದ್ಯಾರ್ಥಿನಿಯರಿಗೆ ವಿಷವುಣಿಸಲಾಗಿತ್ತು. ರಾಜಧಾನಿ ಟೆಹ್ರಾನ್ ಬಳಿಯ ಪಾರ್ಡಿಸ್‌ನಲ್ಲಿರುವ ಖಯ್ಯಾನ್ ಬಾಲಕಿಯರ ಶಾಲೆಯಲ್ಲಿ 37 ವಿದ್ಯಾರ್ಥಿಗಳು ವಿಷಪ್ರಾಶನಕ್ಕೊಳಗಾಗಿದ್ದರು ಎಂದು ವರದಿಯಾಗಿದೆ.

    ವಿಷಪ್ರಾಶನಕ್ಕೆ ನೂರಾರು ವಿದ್ಯಾರ್ಥಿನಿಯರು ಒಳಗಾಗಿದ್ದರೂ ಇಲ್ಲಿಯವರೆಗೆ ಯಾವುದೇ ಸಾವುಗಳು ವರದಿಯಾಗಿಲ್ಲ. ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ವಿಷ ಅಲ್ಪ ಪ್ರಮಾಣದಲ್ಲಿ ಹಾನಿ ಮಾಡುವಂತದ್ದಾಗಿದೆ. ಆದರೆ ವಿಷ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ, ವಾಕರಿಕೆ, ತೆಲೆ ತಿರುಗುವಿಕೆ, ಆಯಾಸದಿಂದ ಬಳಲಿದ್ದಾರೆಂದು ವರದಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಪೋಷಕರು, ಹೋರಾಟಗಾರರ ಆಕ್ರೋಶ
    ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರು, ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಾದ್ಯಂತ ಸಂತ್ರಸ್ತರ ಪೋಷಕರು ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಅವಾಂತರಗಳಿಗೂ ಅಧಿಕಾರಿಗಳು ಉತ್ತರ ನೀಡಬೇಕೆಂದು ಪೋಷಕರು ಪಟ್ಟು ಹಿಡಿದಿದ್ದಾರೆ.

    ವಿಷಪ್ರಾಶನಕ್ಕೆ ಕಾರಣವೇನು?
    ಇರಾನ್‌ನಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಲು ಕಾರಣವೇನು ಎಂಬುದಕ್ಕೆ ನಿರ್ದಿಷ್ಟವಾದ ಉತ್ತರವಿಲ್ಲ. ಕೆಲವರು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರವಿರಿಸಲು ಈ ರೀತಿಯ ಕಿಡಿಗೇಡಿತನದ ಕೆಲಸ ಮಾಡುತ್ತಿದ್ದಾರೆ ಎಂಬುದು ಕೆಲವರ ಮಾತು. ಹೆಣ್ಣುಮಕ್ಕಳ ಪೋಷಕರನ್ನು ಭಯಭೀತಗೊಳಿಸಲು ಹಾಗೂ ತಮ್ಮ ಮಕ್ಕಳನ್ನು ಶಾಲೆಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಕೆಲವರ ಅಭಿಪ್ರಾಯವೇನೆಂದರೆ, ಕಳೆದ ವರ್ಷ ಹಿಜಬ್ ಧರಿಸಿಲ್ಲ ಎಂದು ನೈತಿಕ ಪೊಲೀಸ್‌ಗಿರಿಗೆ ಯುವತಿಯೊಬ್ಬಳು ಬಲಿಯಾಗಿದ್ದಳು. ಹಿಜಬ್ ಅನ್ನು ವಿರೋಧಿಸಿದ್ದ ಯುವತಿ ಮಹ್ಸಾ ಆಮಿನಿ ಸಾವಿನ ಬಳಿಕ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಯುವತಿ ಪರವಾಗಿ ಹಾಗೂ ಹಿಜಬ್ ವಿರೋಧಿಸಿ ನಡೆಸಲಾದ ಹಿಂಸಾಚಾರದಲ್ಲಿ ನೂರಾರು ಜನರ ಸಾವೂ ಸಂಭವಿಸಿತ್ತು. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

    ಸರ್ಕಾರ ಹೇಳೋದೇನು?
    ವಿಷಪ್ರಾಶನದ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ, ಈ ಘಟನೆಗಳು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿಲ್ಲ ಎಂದು ಸರ್ಕಾರ ತಿಳಿಸಿತ್ತು. ಶಾಲೆಗಳಲ್ಲಿ ಚಳಿಗಾಲದ ವೇಳೆ ವಾತಾವರಣವನ್ನು ಬೆಚ್ಚಗಿಡಲು ನೈಸರ್ಗಿಕ ಅನಿಲ ಬಿಸಿ ಮಾಡಲಾಗುತ್ತದೆ. ಇದರ ಕಾರ್ಬನ್ ಮಾನಾಕ್ಸೈಡ್ ವಿದ್ಯಾರ್ಥಿನಿಯರ ಮೇಲೆ ಪರಿಣಾಮ ಬೀರಿದೆ ಎಂದು ಆಪಾದನೆಯಿಂದ ಜಾರಿಕೊಳ್ಳುವ ಹೇಳಿಕೆಯನ್ನು ಸರ್ಕಾರ ನೀಡಿತ್ತು. ದೇಶದ ಶಿಕ್ಷಣ ಸಚಿವರೂ ಆರೋಪಗಳನ್ನು ವದಂತಿ ಎಂದು ತಳ್ಳಿ ಹಾಕಿದ್ದರು.

    ಉಪ ಆರೋಗ್ಯ ಸಚಿವರು ಹೇಳ್ತಿರೋದೇನು?
    ವಿಷ ಸೇವನೆಯ ಘಟನೆಗಳು ದೇಶದ ಹಲವೆಡೆ ವರದಿಯಾಗುತ್ತಿದ್ದಂತೆ ಇದು ಆಕಸ್ಮಿಕವಲ್ಲ ಎಂಬ ಅನುಮಾನ ಹೆಚ್ಚಾಗಿತ್ತು. ಬಳಿಕ ಇರಾನ್‌ನ ಪ್ರಾಸಿಕ್ಯೂಟರ್ ಜನರಲ್ ತನಿಖೆಗೆ ಆದೇಶಿಸಿದ್ದು, ಉದ್ದೇಶಪೂರ್ವಕವಾಗಿಯೇ ಇಂತಹ ಅಪರಾಧಗಳನ್ನು ಮಾಡುತ್ತಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಘಟನೆ ಬಗ್ಗೆ ಗುಪ್ತಚರ ಸಚಿವಾಲಯವೂ ತನಿಖೆ ನಡೆಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ ಹೇಳಿದ್ದು, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ. ಕೋಮ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥರಾದ ಬಳಿಕ ಬಾಲಕಿಯರ ಶಾಲೆಯನ್ನು ಮುಚ್ಚಬೇಕೆಂದು ಕೆಲವರು ಆಗ್ರಹಿಸಿರುವುದು ತಿಳಿದುಬಂದಿದೆ. ಆದರೆ ಇಲ್ಲಿಯವರೆಗೆ ಘಟನೆಗೆ ಸಂಬಂಧಿಸಿದಂತೆ ಯಾವ ಆರೋಪಿಗಳನ್ನೂ ಬಂಧಿಸಲಾಗಿಲ್ಲ.

    ಏನಿದು ಹಿಜಬ್‌ ವಿರೋಧಿ ಹೋರಾಟ?
    ಮಹ್ಸಾ ಅಮಿನಿ ಯುವತಿ ಹಿಜಬ್‌ ಧರಿಸಿಲ್ಲ ಎಂಬ ಕಳೆದ ವರ್ಷ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ನೈತಿಕ ಪೊಲೀಸ್‌ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್‌ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಯುವತಿ ಸಾವಿನ ಬಳಿಕ ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು. ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್‌ ಸುಟ್ಟು ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಘಟನೆ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಹೆಣ್ಣುಮಕ್ಕಳನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ವಿಷವುಣಿಸುವಂತಹ ಕೃತ್ಯ ನಡೆಸಲಾಗುತ್ತಿದೆ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

    (2014ರಲ್ಲಿ ಇರಾನ್‌ನ ಇಸ್ಫಹಾನ್ ನಗರದಲ್ಲಿ ಮಹಿಳೆಯರ ಮೇಲೆ ಸರಣಿ ಆಸಿಡ್ ದಾಳಿ ನಡೆದಿತ್ತು. ಸಂತ್ರಸ್ತರಲ್ಲಿ ಹೆಚ್ಚಿನವರು ಇಸ್ಲಾಮಿಕ್ ಮಾನದಂಡಗಳಿಗೆ ಅನುಗುಣವಾಗಿ ಬಟ್ಟೆ, ಹಿಜಬ್ ಅನ್ನು ಧರಿಸಿರಲಿಲ್ಲ ಎಂಬುದು ಕಂಡುಬಂದಿದೆ.)

  • 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

    8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

    ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ತಂದೆಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆಗಾಗಿ 8 ಲಕ್ಷ ರೂ.ಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಘಟನೆ ಛಿಪಬರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡಿಸೆಂಬರ್ 22 ರಂದು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂದೆ ಹಣ ಪಡೆದು ತನಗೆ ಮತ್ತು ತನ್ನ ತಂಗಿಗೆ ಮದುವೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ನವೆಂಬರ್ 13ರಂದು ಬದ್ರಿಲಾಲ್‌ ಮತ್ತು ಸುರೇಶ್ ಮಾರುತಿ, ವ್ಯಾನ್‍ನಲ್ಲಿ ಮನೆಗೆ ಬಂದಿದ್ದರು. ನಂತರ ಇಬ್ಬರನ್ನು ವ್ಯಾನ್‍ನಲ್ಲಿ ಅವರೊಂದಿಗೆ ಕರೆದೊಯ್ದರು. ಬದ್ರಿ ಮೀನಾ ಬಾಲಕಿಗೆ ದೈಹಿವಾಗಿ ಹಿಂಸೆ ನೀಡಿದ್ದು, ಸುರೇಶ್ ಆಕೆಯ ತಂಗಿಯನ್ನು ತನ್ನ ಮನೆಗೆ ಕರೆದೊಯ್ದು ಕೋಣೆಯಲ್ಲಿ ಕೂಡಿಹಾಕಿ ಹಿಂಸೆ ಕೊಟ್ಟಿದ್ದಾರೆ. ಈ ಬಗ್ಗೆ ಅಪ್ರಾಪ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಬಾಲಕಿ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬರನ್ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣಮಲ್ ಮೀನಾ ತಿಳಿಸಿದ್ದಾರೆ. ಸದ್ಯ ಪೊಲೀಸರು ಬಾಲಕಿಯರ ತಂದೆಯನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

  • ಗಂಡು ಮಗುವಿಗಾಗಿ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟ ಅಪ್ಪ

    ಗಂಡು ಮಗುವಿಗಾಗಿ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟ ಅಪ್ಪ

    ಚಿಕ್ಕಬಳ್ಳಾಪುರ: ಗಂಡು ಮಗು ಬೇಕೇ ಬೇಕೆಂದು ವ್ಯಕ್ತಿ ತನ್ನ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟಿದ್ದಾನೆ. ಮಕ್ಕಳನ್ನು ಮಾರುವುದು ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರದಬ್ಬಿದ್ದಾನೆ.

    ನಗರದ ಅಂಬೇಡ್ಕರ್ ಕಾಲೋನಿಯ ಪಾಪಿ ತಂದೆಯ ಹೆಸರು ಮುನಿಯಪ್ಪ, ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಈತ, 8 ವರ್ಷಗಳ ಹಿಂದೆ ಸಂಜು ಅವರನ್ನು ಮದುವೆಯಾಗಿದ್ದ. ಬಳಿಕ 4 ಹೆಣ್ಣು ಮಕ್ಕಳ ತಂದೆಯಾಗಿದ್ದಾನೆ. ಆದರೆ ಗಂಡು ಮಗು ಬೇಕೇ ಬೇಕೆಂದು ಪತ್ನಿಗೆ ಅಪರೇಷನ್ ಮಾಡಿಸಿಲ್ಲ. ಮಾತ್ರವಲ್ಲದೆ ಈಗಿರುವ 4 ಹೆಣ್ಣು ಮಕ್ಕಳು ನಮಗ್ಯಾಕೆ, ಗಂಡು ಮಗು ಮಾಡಿಕೊಳ್ಳೋಣ ಎಂದು ಹೆಣ್ಣು ಮಕ್ಕಳನ್ನು ಕದ್ದು ಮುಚ್ಚಿ ಮಾರಾಟ ಮಾಡೋಕೆ ಮುಂದಾಗಿದ್ದಾನೆ.

    ಇದನ್ನು ಪತ್ನಿ ವಿರೋಧಿಸಿದ್ದಕ್ಕೆ ಪ್ರತಿ ದಿನ ಹಿಂಸೆ ನೀಡಿ, ಹಲ್ಲೆ ಮಾಡಿ, ಮನೆಯಿಂದಲೇ ಹೊರಹಾಕಿದ್ದಾನೆ. ಹಲ್ಲೆ ತಾಳಲಾಗದ ಪತ್ನಿ, ಇಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಉಳಿದಿಬ್ಬರು ಮಕ್ಕಳ ಜೊತೆ ಮನೆ ಬಿಟ್ಟು ಹೊರ ಬಂದಿದ್ದಾರೆ. ಏನು ಮಾಡಬೇಕೆಂದು ಗೊತ್ತಾಗದೆ ಬೀದಿ ಅಲೆದು ಕೊನೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಂತನ ಕೇಂದ್ರದ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.

    ಮಹಿಳೆಯ ಕಷ್ಟ ಆಲಿಸಿದ ಸಾಂತ್ವನ ಕೇಂದ್ರದ ಅಧಿಕಾರಿಗಳು, ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಿ ಪತಿಗೆ ಬುದ್ಧಿವಾದ ಹೇಳಿದ್ದಾರೆ. 4 ಮಕ್ಕಳನ್ನು ಸದ್ಯ ಬಾಲಮಂದಿರಕ್ಕೆ ಸೇರಿಸಿಕೊಂಡು ಉಚಿತ ವಿದ್ಯಾಭ್ಯಾಸ ಕೊಡಿಸುವ ಭರವಸೆ ನೀಡಿ ಕ್ರಮ ಕೈಗೊಳ್ಳುತ್ತಿದ್ದಾರೆ.

  • ಪುತ್ರಿಯರಿಂದಲೇ ಕೊರೊನಾದಿಂದ ಮೃತ ತಂದೆಯ ಅಂತ್ಯಕ್ರಿಯೆ

    ಪುತ್ರಿಯರಿಂದಲೇ ಕೊರೊನಾದಿಂದ ಮೃತ ತಂದೆಯ ಅಂತ್ಯಕ್ರಿಯೆ

    ದಾವಣಗೆರೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಕುಟುಂಬಸ್ಥರು ಅಂಬುಲೆನ್ಸ್ ನಲ್ಲೇ ಬಿಟ್ಟುಹೋಗುವ ಪ್ರಕರಣಗಳನ್ನು ನೋಡಿದ್ದೇವೆ. ಕೆಲವರು ಅಪ್ಪನ ಹಣ ಬೇಕು, ಅಪ್ಪ ಬೇಡ ಎಂದವರೂ ಇದ್ದಾರೆ. ಇಂತಹವರ ಮಧ್ಯೆ ಕೋವಿಡ್ ನಿಂದ ಮೃತರಾದ ತಂದೆಯ ಶವದ ಅಂತ್ಯಕ್ರಿಯೆಯನ್ನು ಇಬ್ಬರು ಹೆಣ್ಣುಮಕ್ಕಳು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠ ಅವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳು, 12 ದಿನ ಕೋವಿಡ್ ಸೆಂಟರ್ ನಲ್ಲಿ ತಂದೆಯ ಆರೈಕೆ ಮಾಡಿ, ನಿಧನದ ನಂತರ ದೇಹವನ್ನು ಅವರೇ ಅಂಬುಲೆನ್ಸ್ ಮೂಲಕ ಮನೆಯ ಹತ್ತಿರ ತೆಗೆದುಕೊಂಡು ಹೋಗಿ, ತಾಯಿ, ಅಜ್ಜಿ ಕಡೆಯಿಂದ ಪೂಜೆ ಮಾಡಿಸಿ, ನಂತರ ತಂದೆಯ ಶವಕ್ಕೆ ಆಗ್ನಿ ಸ್ಪರ್ಶ ಮಾಡಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

    ಕೊರೊನಾ ರೋಗಿಗಳನ್ನು ಕುಟುಂಬಸ್ಥರು, ಸ್ನೇಹಿತರು ಎಂಬ ಕನಿಕರ ಇಲ್ಲದೆ, ಮನುಷ್ಯತ್ವ ಮರೆತು ನೋಡುವವರ ಮಧ್ಯೆ 17, 18 ವರ್ಷದ ಈ ಇಬ್ಬರು ಹೆಣ್ಣುಮಕ್ಕಳು ಧೈರ್ಯವಾಗಿ ಯಾವುದೇ ಆಳುಕಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

  • ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಚಿನ್ನ ದೋಚಿದ..!

    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಚಿನ್ನ ದೋಚಿದ..!

    – ಟ್ಯೂಷನ್ ಕೊಡಲು ಬಂದ ಶಿಕ್ಷಕಿಯನ್ನೂ ಹತ್ಯೆಗೈದ

    ಜೆಮ್‍ಶೆಡ್‍ಪುರ್: ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಕಡ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಟಿಸ್ಟಾ ರಸ್ತೆಯಲ್ಲಿರುವ ವಸತಿ ಕ್ವಾಟ್ರಸ್ ನಲ್ಲಿ ನಡೆದಿದೆ.

    ಆರೋಪಿಯನ್ನು ದೀಪಕ್ ಕುಮಾರ್(42) ಎಂದು ಗುರುತಿಸಲಾಗಿದೆ. ಈತ ಟಾಟಾ ಸ್ಟೀಲ್ ಕಂಪನಿಯ ಉದ್ಯೋಗಿ. ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ದೀಪಕ್ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಕೊಲೆಯಾದ ಪತ್ನಿಯನ್ನು ವೀಣಾ ಕುಮಾರಿ(35) ಹಾಗೂ ಅಪ್ರಾಪ್ತ ಮಕ್ಕಳನ್ನು ದಿಯಾ ಕುಮಾರಿ(15) ಹಾಗೂ ಸಂವಿ ಕುಮಾರಿ(11) ಜೊತೆಗೆ ಈ ಇಬ್ಬರು ಮಕ್ಕಳಿಗೆ ಟ್ಯೂಷನ್ ನೀಡುತ್ತಿರುವ ಶಿಕ್ಷಕಿ ರಿಂಕಿ ಘೋಷ್(22) ಹೀಗೆ ನಾಲ್ವರನ್ನು ದೀಪಕ್ ಕೊಲೆ ಮಾಡಿದ್ದಾನೆ.

    ಕಡ್ಮಾದ ರಂಜನಂ ನಗರದಲ್ಲಿ ವಾಸವಾಗಿರುವ ರಿಂಕಿ ಘೋಷ್ ಸೋಮವಾರ ಬೆಳಗ್ಗೆ 11 ಗಂಟೆಗೆ ದಿಯಾ ಹಾಗೂ ಸಂವಿಗೆ ಟ್ಯೂಶನ್ ಕೊಡಲು ಬಂದಿದ್ದರು. ಹೀಗೆ ಬಂದ ರಿಂಕಿ ಮಧ್ಯಾಹ್ನ 1 ಗಂಟೆಯಾದರೂ ತನ್ನ ಮನೆಗೆ ವಾಪಸ್ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಿಂಕಿ ಪೋಷಕರು ಆಕೆಯನ್ನು ಹುಡುಕಿಕೊಂಡು ದೀಪಕ್ ನಿವಾಸಕ್ಕೆ ಬಂದಿದ್ದಾರೆ.

    ಈ ವೇಳೆ ದೀಪಕ್ ಮನೆಯಲ್ಲಿ ಏನೋ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಂತೆಯೇ ರಿಂಕಿ ಪೋಷಕರು ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ರಿಂಕಿ ಸೇರಿದಂತೆ ನಾಲ್ವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ.

    ಇತ್ತ ಮೃತ ಮಹಿಳೆ ವೀಣಾ ಸಹೋದರ ವಿನೋದ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಧ್ಯಾಹ್ನದ ಬಳಿಕ ಸಹೋದರಿ ಮನೆಗೆ ಬಂದೆ. ಈ ವೇಳೆ ಮನೆಯ ಬಾಗಿಲು ಮುಚ್ಚಿತ್ತು. ಆದರೆ ಒಳಗಡೆ ಎಸಿ ಆನ್ ಆಗಿತ್ತು. ಹೀಗಾಗಿ ಮನೆಯೊಳಗೆ ಇದ್ದಾರೆ ಅಂತ ಕಿಟಿಕಿ ಮೂಲಕ ನೋಡಿದೆ. ಈ ವೇಳೆ ಇಬ್ಬರು ಸೊಸೆಯರ ಹಾಗೂ ಸಹೋದರಿಯ ಮೃತದೇಹ ಬೆಡ್ ಮೇಲೆ ಬಿದ್ದಿರುವುದು ಗಮನಕ್ಕೆ ಬಂತು. ಅಲ್ಲದೆ ಇನ್ನೊಂದು ಕೋಣೆಯಲ್ಲಿ ಶಿಕ್ಷಕಿಯ ಶವ ಬಿದ್ದಿತ್ತು.

    ಹಿಂದಿನ ದಿನ ದೀಪಕ್ ಮನೆಗೆ ಬಂದು ಪತ್ನಿಯ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದನು. ಅಲ್ಲದೆ ಪತ್ನಿ ಹಾಗೂ ಮಕ್ಕಳನ್ನು ರಾಂಚಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದನು ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ನಗರ ಎಸ್‍ಪಿ ಸುಭಾಷ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಹರಿತವಾದ ಆಯುಧಗಳನ್ನು ಬಳಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ತಂದೆಯ ಕ್ಲೀನ್ ಶೇವ್ ನೋಡಿ ಅವಳಿ ಮಕ್ಕಳ ಕಣ್ಣೀರು- ವೀಡಿಯೋ ವೈರಲ್

    ತಂದೆಯ ಕ್ಲೀನ್ ಶೇವ್ ನೋಡಿ ಅವಳಿ ಮಕ್ಕಳ ಕಣ್ಣೀರು- ವೀಡಿಯೋ ವೈರಲ್

    ತಂದೆ ತಲೆ ಕೂದಲು, ಗಡ್ಡ ಬೋಳಿಸಿಕೊಂಡಿರುವುದ್ದನ್ನು ನೋಡಿ ಗುರುತು ಸಿಗದೇ ಅವಳಿ ಜವಳಿ ಹೆಣ್ಣು ಮಕ್ಕಳು ಹೆದರಿ ಅತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಟಿಕ್‍ಟಾಕ್ ಬಳಕೆದಾರರಾದ ಜೊನಾಥನ್ ನಾರ್ಮೊಯ್ಲ್ ಎಂಬ ವ್ಯಕ್ತಿ ತಲೆ ಕೂದಲು ಮತ್ತು ಗಡ್ಡ ತೆಗೆದ ತಂದೆಯ ಹೊಸ ಲುಕ್ ನೋಡಿದ ಇಬ್ಬರು ಹೆಣ್ಣು ಮಕ್ಕಳು ಅವರನ್ನು ಅಪರಿಚಿತರೆಂದು ಭಾವಿಸಿಕೊಂಡು ಗಳಗಳನೇ ಅತ್ತಿದ್ದಾರೆ.

    ವೈರಲ್ ಆಗಿರುವ ವೀಡಿಯೋನಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾರೆ. ಈ ವೇಳೆ ತಂದೆಯನ್ನ ಮಕ್ಕಳು ದಿಟ್ಟಿಸಿ ನೋಡುತ್ತಿರುವ ವೇಳೆ ಜೊನಾಥನ್ ನಾರ್ಮೊಯ್ಲ್ ಮಾತಾನಾಡಿಸಲು ಮುಂದಾಗುತ್ತಾರೆ. ಹಾಯ್, ಇಬ್ಬರು ಏನು ಮಾಡುತ್ತಿದ್ದೀರಾ? ಎಂದು ಕೇಳುತ್ತಾರೆ ಇದರಿಂದ ಭಯಭೀತರಾದ ಮಕ್ಕಳಿಬ್ಬರು ಒಬ್ಬರ ನಂತರ ಒಬ್ಬರು ಅಳಲು ಪ್ರಾರಂಭಿಸುತ್ತಾರೆ.

    https://twitter.com/Aqualady6666/status/1367372395762229248

    ಬಳಿಕ ತಂದೆ ಮಗುವೊಂದಕ್ಕೆ ಎತ್ತಿಕೊಳ್ಳುವುದಾಗಿ ಕೈಚಾಚುತ್ತಾರೆ. ಈ ವೇಳೆ ಮತ್ತೊಂದು ಮಗು ತನ್ನ ಸಹೋದರಿಗೆ ಹೋಗದಂತೆ ಕೈ ಅಡ್ಡವಿಟ್ಟು ರಕ್ಷಣೆ ಮಾಡುತ್ತದೆ. ಸದ್ಯ 37 ಸೆಕೆಂಡ್ ಇರುವ ಈ ಮುದ್ದು ಮುಖದ ಮಕ್ಕಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, 45 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ ಹಾಗೂ 1.8 ಲಕ್ಷ ಲೈಕ್ಸ್ ಮತ್ತು 44,000 ಕಮೆಂಟ್ಸ್ ಪಡೆದುಕೊಂಡಿದೆ.

  • ಐವರು ಹೆಣ್ಣು ಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

    ಐವರು ಹೆಣ್ಣು ಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

    ಜೈಪುರ: ಐವರು ಹೆಣ್ಣು ಮಕ್ಕಳು ತಂದೆಯ ಶವಕ್ಕೆ ಕೊಳ್ಳಿ ಇಡುವ ಮೂಲಕ ರಾಜಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.

    ರಾಜಸ್ಥಾನದ ದುಂಗರ್‍ಪುರ್ ಜಿಲ್ಲೆಯ ನವಶ್ಯಾಮ್ ಗ್ರಾಮದ ನಿವಾಸಿ ಕರುಲಾಲ್ ತ್ರಿವೇದಿ ಎಂಬವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಅವರ ಐವರು ಪುತ್ರಿಯರಾದ ನಿರ್ಮಲಾ, ಚಂದ್ರಕಾಂತ, ನೀತಾ, ಜಯಶ್ರೀ ಮತ್ತು ಸುರೇಖ ತಂದೆಯ ಅಂತಿಮ ವಿಧಿವಿಧಾನವನ್ನು ತಾವೇ ಮಾಡಲು ನಿರ್ಧರಿಸಿದರು. ಇವರ ಈ ನಿರ್ಧಾರಕ್ಕೆ ಅವರ ಸಂಬಂಧಿಗಳು ಸಂತೋಷದಿಂದ ಸಮ್ಮತಿ ಸೂಚಿಸಿದರು.

    ಈ ಐವರು ಹೆಣ್ಣು ಮಕ್ಕಳು ತಂದೆಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ತಂದೆಯ ದೇಹಕ್ಕೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ ನಮ್ಮ ಪೋಷಕರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಎಂದಿಗೂ ಅವರು ಗಂಡು ಮಕ್ಕಳ ಮೇಲೆ ವ್ಯಾಮೋಹ ಹೊಂದಿರಲಿಲ್ಲ ಎಂದು ನೀತಾ ಹೇಳಿದ್ದಾರೆ.

  • ಗಂಡು ಮಗು ಜನಿಸದ್ದಕ್ಕೆ ಮುದ್ದಾದ 4 ಹೆಣ್ಣು ಮಕ್ಕಳನ್ನು ಕೊಂದ ತಾಯಿ

    ಗಂಡು ಮಗು ಜನಿಸದ್ದಕ್ಕೆ ಮುದ್ದಾದ 4 ಹೆಣ್ಣು ಮಕ್ಕಳನ್ನು ಕೊಂದ ತಾಯಿ

    ಚಂಡೀಗಡ: ಗಂಡು ಮಗು ಜನಿಸದ್ದಕ್ಕೆ ತಾಯಿಯೊಬ್ಬಳು ತನ್ನ ಮುದ್ದಾದ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಬಂಧಿಸಲಾಗಿದೆ. 2020ರಲ್ಲಿ ನಡೆದ ಘಟನೆಯ ಆರೋಪಿಯನ್ನು ಈಗ ಸೆರೆ ಹಿಡಿಯಲಾಗಿದೆ. ಪತಿ ಖುರ್ಷಿದ್ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋದಾಗ ಫರ್ಮೀನಾ ಈ ನಿರ್ಧಾರ ಕೈಗೊಂಡಿದ್ದು, ತನ್ನ 6, 4, 3 ಹಾಗೂ 1 ವರ್ಷದ ಹೆಣ್ಣು ಮಕ್ಕಳ ಗಂಟಲನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿದ್ದಾಳೆ. ಮಕ್ಕಳು ಅಮ್ಮಾ ಎನ್ನುತ್ತಲೇ ಪ್ರಾಣ ಬಿಟ್ಟಿವೆ.

    ಕತ್ತು ಕುಯ್ದು ಮಕ್ಕಳನ್ನು ಅಲ್ಲೇ ಬಿಟ್ಟ ತಾಯಿ, ನಂತರ ತಾನೂ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾಳೆ. ಅಷ್ಟರಲ್ಲೇ ಆಕೆಯ ಪತಿ ಆಗಮಿಸಿದ್ದು, ಮನೆಯನ್ನು ಒಳಗಿನಿಂದ ಚಿಲಕ ಹಾಕಿದ್ದರಿಂದ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿದ್ದಾನೆ. ಅಷ್ಟರಲ್ಲಾಗಲೇ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪತ್ನಿ ಮಾತ್ರ ಒದ್ದಾಡುತ್ತಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.

    ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಮೀನಾ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಕ್ಕಳ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಪೊಲೀಸರು ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ತಾಯಿಯಿಂದ್ಲೇ ಹೆಣ್ಣು ಮಕ್ಕಳ ಕೊಲೆ – 10 ತಿಂಗಳ ಬಳಿಕ ಸತ್ಯ ಬಯಲು

    ತಾಯಿಯಿಂದ್ಲೇ ಹೆಣ್ಣು ಮಕ್ಕಳ ಕೊಲೆ – 10 ತಿಂಗಳ ಬಳಿಕ ಸತ್ಯ ಬಯಲು

    ಯಾದಗಿರಿ: ಜ್ಯೂಸ್ ಅಂತ ಕ್ರಿಮಿನಾಶಕ ಸೇವಿಸಿ ಪ್ರಾಣಬಿಟ್ಟ ಮಕ್ಕಳ ಕೇಸ್‍ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಲವಂತವಾಗಿ ವಿಷ ಕುಡಿಸಿ ತನ್ನ ಎರಡು ಮಕ್ಕಳನ್ನು ಹೆತ್ತ ತಾಯಿಯೇ ಕೊಂದಿರುವ ಸತ್ಯ ಎಫ್‍ಎಸ್‍ಎಲ್ ವರದಿಯಲ್ಲಿ ಬಹಿರಂಗವಾಗಿದೆ.

    ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ಬರೋಬ್ಬರಿ 10 ತಿಂಗಳ ಹಿಂದೆ ನಡೆದಿದ್ದ ಘಟನೆಗೆ ರೋಚಕ ತಿರುವು ಸಿಕ್ಕಿದೆ. ಕಂದಮ್ಮಗಳನ್ನು ಕೊಂದ 26 ವರ್ಷದ ಶಹನಾಜ್ ಈಗ ಜೈಲುಪಾಲಾಗಿದ್ದಾಳೆ.

    ಕೊಡಾಲ್ ಗ್ರಾಮದ ಶಹನಾಜ್‍ಗೆ ಒಟ್ಟು ನಾಲ್ವರು ಮಕ್ಕಳು ಜೊತೆಗೆ ಕಿತ್ತು ತಿನ್ನುವ ಬಡತನ, ನಾಲ್ವರಲ್ಲಿ ಮೂವರು ಹೆಣ್ಣುಮಕ್ಕಳು, ಮಕ್ಕಳನ್ನು ಸಾಕಲಾಗದೇ ಶಹನಾಜ್ ರೋಸಿ ಹೋಗಿದ್ದಳು. ಇದೇ ಕಾರಣಕ್ಕೆ ನಾಲ್ವರು ಮಕ್ಕಳಲ್ಲಿ 2 ವರ್ಷದ ಖೈರುನ್, 4 ತಿಂಗಳ ಅಪ್ಸಾನಾ ಎಂಬ ಇಬ್ಬರು ಹೆಣ್ಣು ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ಸಾಯಿಸಿದ್ದಾಳೆ.

    ಮಕ್ಕಳನ್ನು ಕೊಂದ ಬಳಿಕ ಅನುಮಾನ ಬಾರದಂತೆ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೀತಿ ನಾಟಕವಾಡಿದ್ದಳು. ಅನುಮಾನ ಬಂದ ಪೊಲೀಸರು ಮಣ್ಣು ಮಾಡಿದ್ದ ಶವಗಳನ್ನ ಹೊರತೆಗೆಸಿ ಶವಪರೀಕ್ಷೆ ಮಾಡಿಸಿ ಬಳಿಕ ಅಂತ್ಯಸಂಸ್ಕಾರ ಮಾಡಿಸಿದ್ದರು. 10 ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ.