Tag: ಹೆಚ್ ಡಿ ರೇವಣ್ಣ

  • ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

    ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

    ಹಾಸನ: ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಂತಿಮವಾದಂತಹ ತೀರ್ಮಾನವನ್ನು ಜನತೆ, ಜನಾರ್ದನ ಕೊಡ್ತಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಹೇಳಿದ್ದಾರೆ.

    ಎಚ್.ಡಿ ರೇವಣ್ಣ (HD Revanna) ಹಾಗೂ ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ವಿಚಾರ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ಮತ್ತು ರೇವಣ್ಣ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ನಾನು ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇವೆ. ಆದರೆ ಅದನ್ನು ಎಡಿಟಿಂಗ್ ಮಾಡಿ ತಮಗೆ ಉಪಯುಕ್ತವಾಗುವ ರೀತಿಯಲ್ಲಿ ತುಂಡು ತುಂಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ನನ್ನ ಕ್ಷೇತ್ರದ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ತಾವು ಮಾಡ್ತಾ ಇದ್ದೀರಿ. ಇದರಿಂದ ನೀವು ಯಶಸ್ಸು ಕಾಣುವುದಿಲ್ಲ. ಕ್ಷೇತ್ರದ ಜನತೆಗೆ ನಾನು ಯಾರು ಏನು ಅಂತಾ ಗೊತ್ತಿದೆ ಎಂದರು.

    ಮಾಜಿ ಸಚಿವರಾಗಿ, ಜಿಲ್ಲೆಯ ನಾಯಕರಾಗಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಕೆಲಸವನ್ನು ನೀವು ಏನ್ ಮಾಡ್ತಿದ್ದೀರಿ ನಿಮಗೆ ಶೋಭೆ ತರುವಂತಹದ್ದಲ್ಲ. ನೀವು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀರಿ, ನಾನು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀನಿ. ನಿಮಗೆ ಸಾಮಾಜಿಕ ಜಾಲತಾಣದ ಬಗ್ಗೆ ಅಷ್ಟು ಅರಿವಿಲ್ಲ ಅಂತ ಭಾವಿಸಿದ್ದೇನೆ. ನನಗೂ ಅದರ ಬಗ್ಗೆ ಅರಿವಿಲ್ಲ. ಆದರೆ ಯಾರೋ ಮಧ್ಯದಲ್ಲಿ ರಾಜಕೀಯ ಕುತಂತ್ರವನ್ನು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಅವರ ಮಾತಗಳನ್ನು ಕೇಳಿ ಇಂತಹ ಸಣ್ಣತನದ ರಾಜಕಾರಣ ನೀವು ಮಾಡಲಿಕ್ಕೆ ಪ್ರೇರಣೆಯನ್ನು ಕೊಡತಕ್ಕಂಹದ್ದು ನಿಮ್ಮ ರಾಜಕೀಯ ಜೀವನಕ್ಕೆ ಒಂದು ಕಳಂಕ ಆಗುತ್ತೆ. ರೇವಣ್ಣ ಅವರೇ ಇದಕ್ಕೆ ಅವಕಾಶವನ್ನು ಕೊಡಬೇಡಿ. ರಾಜಕೀಯದಲ್ಲಿ ಪಕ್ಷಾಂತರ ಅನ್ನುವುದು ಸರ್ವೆ ಸಾಮಾನ್ಯವಾದ ವಿಚಾರ. ನಿಮಗೂ ನಮಗೂ ಭಿನ್ನಾಭಿಪ್ರಾಯ ಬಂತು. ನಾವು ಇವತ್ತು ಬೇರೆ ಕಡೆ ಹೋಗ್ತಾ ಇದ್ದೀವಿ, ನೀವು ಬೇರೆ ಕಡೆ ಇದ್ದೀರಾ. ಯಾವುದೇ ರೀತಿಯಾದ ಭಿನ್ನಾಭಿಪ್ರಾಯ ನಮ್ಮಲ್ಲಿ ನಿಮ್ಮಲ್ಲಿ ಇಲ್ಲ. ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದು ನಾವು ಬೇರೆ ಆಗಿದ್ದೇವೆ. ಅದಕ್ಕೆ ನೀವು ಈ ರೀತಿ ಸಣ್ಣತನಕ್ಕೆ ಇಳಿದು ಇಂತಹ ಪ್ರವೃತ್ತಿಯನ್ನು ರೂಢಿಮಾಡಿಕೊಳ್ಳಬಾರದು ಅದು ಒಳ್ಳೆಯದಲ್ಲ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.

  • ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಹಾಸನ: ಚುನಾವಣೆ (Election) ಹೊತ್ತಲ್ಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ (K.M.Shivalinge Gowda) ನಡುವೆ ನಡೆದಿರುವ ಮಾತುಕತೆಯ ಆಡಿಯೋ (Audio) ಇದೀಗ ವೈರಲ್ (Viral) ಆಗಿದೆ.

    ಶಿವಲಿಂಗೇಗೌಡರು ಪಕ್ಷ ಬಿಡದಂತೆ ಹೆಚ್.ಡಿ.ರೇವಣ್ಣನವರು ಪ್ರಯತ್ನ ಮಾಡಿರುವುದನ್ನು ಈ ಆಡಿಯೋ ಮೂಲಕ ತಿಳಿದುಕೊಳ್ಳಬಹುದಾಗಿದೆ. ಶಿವಲಿಂಗೇಗೌಡ ಏನೇನು ಮಾಡಿದ್ದಾರೆ ಅದನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ರೇವಣ್ಣನವರು ಹೇಳಿದ್ದರು. ಇದನ್ನೂ ಓದಿ: ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್ 

    ರೇವಣ್ಣ: ಏನ್ ಶಿವಲಿಂಗಣ್ಣ, ನಾನ್ ಹೇಳೋದು.. ಅವು, ಇವು ಆಡ್ತವೆ ಅಂತ ನೀನು ಆಡಲು ಹೋಗಬೇಡ. ಯಾವತ್ತಾದರೂ ನಾನು ನಿನಗೆ ಕೆಟ್ಟದು ಮಾಡಿದ್ದೀನಾ?
    ಕೆಎಂಶಿ: ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ ಅಣ್ಣಾ?
    ರೇವಣ್ಣ: ನಾನೆಲ್ಲಿ ಹಾಗಂತ ಹೇಳಿದ್ದೀನಿ?
    ಕೆಎಂಶಿ: ನಾನು ರಾಜಿ ಮಾಡ್ಕತಿನಿ ತಡಿ ಅಂತ ಹೇಳಿದ್ದೀನಲ್ಲಣ್ಣ. ಅಷ್ಟರಲ್ಲಿ ನನ್ನ ಕರೆಯದೆ ಸಭೆ ಮಾಡಿದ್ದೀರಾ?
    ರೇವಣ್ಣ: ನನಗೆ ಇರೋದು ಇನ್ನಾ 39 ದಿನ. ನಿನ್ನ ಹತ್ರಲೇ ಬರ್ತರೆ, ನಿಂದೆ ವೈರ್‌ಲೆಸ್ ಆಗ್ತಾರೆ.
    ಕೆಎಂಶಿ: ಯಾವುದಾದರೂ ವೈರ್‌ಲೆಸ್ ಹಾಕಲಿ. ಅವರಂಗೆ ನನಗೆ ಎಡಿಟ್ ಮಾಡಲು ಆಗಲ್ಲ.
    ರೇವಣ್ಣ: ನಾನು ಅವತ್ತಿಂದ ಹೇಳಿಲ್ವಾ? ಕುಮಾರಣ್ಣ, ನಾನು ಗೆಲ್ಲಿಸಿಕೊಂಡು ಬರ್ತಿವಿ ಅಂತಾ?
    ಕೆಎಂಶಿ: ರೇವಣ್ಣ ಹತ್ರ ಹೋಗು ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಅಂತ ಹೇಳಿದ್ದೀನಿ. ಎರಡು ವರ್ಷದ ಹಿಂದೇನೇ ಅವನ್ಯಾವನೋ ಬರ್ತನೆ. ಕಾಂಗ್ರೆಸ್‌ನಲ್ಲಿ ನಿಂತರೆ ನಾನು ಗೆಲ್ತೀನಿ ಅಂತಾ ಹೇಳಿದ್ದೀನಿ. ಎರಡು ವರ್ಷ ಆಗಿದೆ.
    ರೇವಣ್ಣ: ಅದು ನನಗೆ ಗೊತ್ತಿಲ್ಲ.
    ಕೆಎಂಶಿ: ಈ ಮಾತ್ರೆ ಅನ್ನೋನು ಬಂದಿದ್ದನಲ್ಲಾ?
    ರೇವಣ್ಣ: ಸ್ವಲ್ಪ ತಾಳ್ಮೆಯಿಂದ ಕೇಳ್ಕಳೋ. ನನ್ನ ನಿನ್ನ ಸಂಬಂಧ ಹದಿನೆಂಟು ವರ್ಷದ್ದು. ಶಿವಲಿಂಗೇಗೌಡಗೆ ತೊಂದರೆ ಆಗಬಾರದು ಅಂತಾ ನನ್ನ ಭಾವನೆ ಇದೆ. ಅದರ ಮೇಲೆ ನಿನ್ನಿಷ್ಟ. ಅವತ್ತು ನೀನು ಏನು ಹೇಳ್ದೆ. ಯಾವುದೇ ಕಾರಣಕ್ಕೂ ನಾನು ಅವನ ಎದುರು ಸೋಲುವುದಾರೆ ನಿಲ್ಲಲ್ಲ. ಯಾವನಾದ್ರು ನಿಲ್ಸಣ ಅಂದೆ.
    ಕೆಎಂಶಿ: ನಾನು ಈಗಲೂ ನಿಲ್ತೀನಿ ಅಂತ ಎಲ್ಲಿ ಹೇಳಿದ್ದೀನಿ ಹೇಳಿ?
    ರೇವಣ್ಣ: ನೋಡಯ್ಯ ನಿನ್ನ ಹಣೇಲಿ ಬರೆದಿರೋದು ಯಾರು ತಪ್ಸಕೆ ಆಗಲ್ಲ.
    ಕೆಎಂಶಿ: ನನ್ನ ಹಣೆಗಿಣೆ ಪರೀಕ್ಷೆ ಇಲ್ಲೆ ಜನರ ಎದುರೇ ಮಾಡ್ತೀನಿ. ಜನರೇ ನನ್ನ ಹಣೆ ಪರೀಕ್ಷೆ ಮಾಡೋರು. ನಾನು ಐವತ್ತು ಸಾವಿರದಲ್ಲಿ ಗೆಲ್ತೀನಿ ಅಂತಾ ಈಗ ಹೇಳಿದ್ದಲ್ಲ. ಎರಡು ವರ್ಷ ಆಯಿತೆ. ಅವನ್ಯಾವನೋ ಚೀಟ್ ಮಾಡ್ಕಂಡು ಇಟ್ಕಂಡು ಈಗ ಹಾಕವ್ನೆ. ಯಡಿಯೂರಪ್ಪನ ಸಿ.ಡಿ ಮಾಡಿ ಬಂದವನು ಇಲ್ಲೂ ಮಾಡ್ತವ್ನೆ ಸಿ.ಡಿ.
    ಕೆಎಂಶಿ: ಡಿಸಿಸಿ ಬ್ಯಾಂಕ್ ನಮ್ಮ ಹತ್ರ ಇಲ್ಲ. ರೇವಣ್ಣ ಅವರದ್ದು ಅವರ ಹತ್ರ ಹೋಗು ಅಂದಿದ್ದೀನಿ. ಆ ನನ್ಮಗ ರೇವಣ್ಣ ಹತ್ರಕ್ಕೆ ಹೋಗು ಅಂತಾ ಹೇಳಿದ್ನಾ. ಎಡಿಟ್ ಮಾಡಿ ಹಾಕವ್ನೆ.
    ರೇವಣ್ಣ: ಲೋನ್‌ಗೂ ನನಗೂ ಸಂಬಂಧವಿಲ್ಲ.
    ಕೆಎಂಶಿ: ನನ್ನ ಜೀವಮಾನ ಇರೋವರೆಗೂ ನಿಮ್ಮನ್ನೆಲ್ಲ ಏಕವಚನದಲ್ಲಿ ಮಾತನಾಡಲ್ಲ. ಅಂತಹ ಥರ್ಡ್ ಕ್ಲಾಸ್ ಅಲ್ಲ ನಾನು. ಅವನು ಇಂತಹವು ಎಡಿಟ್ ಮಾಡಿ ಐವತ್ತು ಸಿ.ಡಿ, ವ್ಯಾಟ್ಸಪ್ ಬಿಟ್ಟ ನನ್ನ ಮೇಲೆ ನಾನು ಮಾತಾಡಿದಂಗೆ ಮಿಮಿಕ್ರಿ ಮಾಡ್ತಾನೆ. ನಾನು ಮಾತಾಡಿದಂಗೆ ಮಾತಾಡುಸ್ತಾನೆ. ಏನು ಮಾಡೋಣ ಅಂಥವು ಏಸು ಎಟ್ಕಂಡವ್ನೋ ಇನ್ನುವೇ ಯಾವಾಗ ಯಾವಾಗ ಬಿಡಕೆ.
    ರೇವಣ್ಣ: ನಾನು ಹೇಳೋದು ಸುಮ್ನೆ. ಯಾವನೋ, ಯಾವನೋ ಹೇಳ್ತನೆ ಅಂತಾ ಕೇಳೋದು ಬೇಡ ಕಣೋ.
    ಕೆಎಂಶಿ: ನಾನು ಯಾರ ಮಾತು ಕೇಳಿಲ್ಲ.
    ರೇವಣ್ಣ: ಮತ್ತೆ ಏನ್ ಮಾಡಣ ನಾನು.
    ಕೆಎಂಶಿ: ಒಂದು ಗುಂಪು ರಾಜಿ ಆಗಬೇಕು.
    ರೇವಣ್ಣ: ನೀನು ಏನು ಹೇಳ್ತಿಯಾ ಕೇಳ್ತಿನಿ, ನನಗೇನು.
    ಕೆಎಂಶಿ: ಆ ಗುಂಪು ರಾಜಿಯಾಗೋವರೆಗೆ, ನಾಳಿಕ್ಕೆ ಅರಸೀಕೆರೆ ತುಂಬಾ ಬಾವುಟ ಕಟ್ಟವ್ರೆ ಈಗೇನ್ ಮಾಡ್ತಿರಾ ಮಾಡಿ.
    ರೇವಣ್ಣ: ಅರಸೀಕೆರೆ ತುಂಬಾ ಬಾವುಟ ಕಟ್ಟಿದ್ರೆ, ನಾನು ಮೊನ್ನೆನೇ ಹೇಳಿ ಬಂದಿಲ್ವಾ.
    ಕೆಎಂಶಿ: ನೀವು ಹೇಳ ಬಂದವ್ರು, ಅಟ್‌ಲಿಸ್ಟ್ ಹದಿನೈದು ದಿನದೊಳಗೆ ಒಂದು ಸಭೆ ಮಾಡಬೇಕು. ಮಾಡದಿದ್ದರೆ ಮಾಡು ಇಲ್ಲ ಅಂದಿದ್ರೆ ಬೇರೆ ದಾರಿ ಮಾಡ್ಕತಿವಿ ಅಂತ ಹೇಳಿದ್ರೆ ನಾನು ಒಪ್ಕತಿದ್ದೆ.
    ರೇವಣ್ಣ: ನಾಳೆ ಸಭೆ ರದ್ದು ಮಾಡನೇನಯ್ಯ.
    ಕೆಎಂಶಿ: ಅದೆಂಗೆ ಸಭೆ ರದ್ದು ಮಾಡಲು ಆಗುತ್ತೆ?
    ರೇವಣ್ಣ: ಇವತ್ತು ಹೇಳು, ಸಭೆ ರದ್ದು ಮಾಡಿ ಇನ್ನೂ ಹದಿನೈದು ದಿನದಲ್ಲಿ ಶಿವಲಿಂಗೇಗೌಡರೇ ಸಭೆ ಕರಿತರೆ ಅಂತ ಹೇಳಿ ಬಿಡ್ಲೇನಯ್ಯ.
    ಕೆಎಂಶಿ: ಇಲ್ಲಾ, ಅವೆಲ್ಲಾ ಆಗಲ್ಲ ಈಗ. ಬಂದು ಮಾಡ್ಕಂಡು ಹೋಗಿ. ನಾಳೆ ನಮ್ಮ ಮನೇಲಿ ಮದುವೆ. ಅದುನ್ನು ಗೊತ್ತಿಲ್ಲದಂಗೆ ಅವನು ಲೋಫರ್ ನನ್ಮಕ್ಕಳು ನಿಮಗೆ ಡೇಟ್ ಮಿಸ್ ಮಾಡಿ ಹೇಳಿದ್ದಾರೆ. ನಮ್ಮ ಸ್ವಂತ ಬಾಮೈದನ ಮದುವೆ.
    ರೇವಣ್ಣ: ನಾಳೆ ಸಭೆಲಿ ಏನು ಹೇಳಬೇಕು ಹೇಳಪ್ಪ.
    ಕೆಎಂಶಿ: ಏನಾದ್ರು ಹೇಳಿ. ಅವರ ಮನೇಲಿ ಮದುವೆ ಇದೆ, ಬರಕ್ಕಿಲ್ಲ ಅಂತ ಹೇಳಿ.
    ರೇವಣ್ಣ: ಅವರು ಬರಕ್ಕಾಗಲ್ಲ ಅವರು ಇಲ್ಲೇ ಇರ್ತಾರೆ ಅಂಥ ಹೇಳ್ಲಾ?
    ಕೆಎಂಶಿ: ಇರ್ತೀನಿ ಅಂತಾ ಪದ ಬೇಡ. ನಾನು ಇರ್ತೀನಿ, ಹೋಗ್ತೀನಿ ಅನ್ನೋದನ್ನ ನಿಮ್ಮ ಮನೆಗೆ ಬಂದು ಹೇಳ್ತೀನಿ. ದೊಡ್ಡವರಿಗೆ ಹೇಳ್ದಲೇ ನಾನು ಎಲ್ಲೂ ಹೋಗಲ್ಲ. ಎಲ್ಲಿಗೂ ಬರಲ್ಲ. ನನ್ನ ಜಡ್ಜ್ಮೆಂಟ್, ಅಸೆಸ್‌ಮೆಂಟ್ ಇದಿಯಲ್ಲಾ ಅದು ಯಾವತ್ತು ಸುಳ್ಳು ಆಗಲ್ಲ. ಈಗ ಏನಿಲ್ಲ ಕುರುಬರವೆಲ್ಲಾ 75% ಅವನಿಗೆ ಹೋಗ್ತವೆ. ನಮ್ಮ ಒಕ್ಕಲಿಗರವು ಅವನ್ಯಾರೋ ಅಶೋಕ ಅನ್ನವನಿಗೆ ಹೋಗ್ತಾವೆ. ಈ ಒಕ್ಕಲಿಗರವು 50%, 60% ಹೋಗ್ತವೆ. ಇಲ್ಲಿ ಕಾಂಗ್ರೆಸ್ ಬಂದ್ರು ಗೆಲ್ಲಕೆ ಏನು ಆಗಲ್ಲ. ನಾವೇನು ಅಷ್ಟು ದಡ್ಡರಲ್ಲ ರಾಜಕಾರಣದಲ್ಲಿ ಯಾವೋ ಗೊತ್ತಿಲ್ಲದವು ನಾಯಿ, ನರಿ, ಊರು ಗೊತ್ತಿಲ್ಲದವು ಬಂದು ಹೇಳ್ತಾರೆ ಅಂತ ಕೇಳಕೆ ಹೋಗ್ಬೇಡಿ.
    ರೇವಣ್ಣ: ಲೇ ದೇವ್ರಾಣೆ, ನನ್ನ ತಂದೆ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ನಿನಗೆ ಬಿಡಬೇಕು ಅಂತಿಲ್ಲ. ನಿನ್ನೆನೂ ಟ್ರೈ ಮಾಡ್ದೆ, ನೀನು ಮೀಟಿಂಗ್‌ನಲ್ಲಿದ್ದೆ.
    ಕೆಎಂಶಿ: ನಾನು ನಿನ್ನೆ ಎಸ್ಟಿಮೇಟ್ ಕಮಿಟಿ ಮೀಟಿಂಗ್ ಇತ್ತಲ್ಲ, ಅಲ್ಲಿಗೆ ಹೋಗಿದ್ದೆ.
    ರೇವಣ್ಣ: ಶಿವಲಿಂಗಣ್ಣ ನನ್ನ ಜೊತೆ ಗೆಲ್ಲಿಸಿಕೊಳ್ಳಬೇಕು ಅಂತ ಅಷ್ಟೇ ಕಣೋ.
    ಕೆಎಂಶಿ: ಗೆಲ್ಲಿಸಿಕೊಳ್ಳಲು ಎಲ್ಲಾ ಕ್ಷೇತ್ರದಂತಲ್ಲಾ ಇದು.
    ರೇವಣ್ಣ: ನಾನು ನಿನ್ನ ಬಿಟ್ಟಿರಕೆ ಆಗಲ್ಲ ಕಣೋ ದಯಮಾಡಿ. ನೀನು ಏನಾದ್ರು ಅನ್ಕೋ ನಿನ್ನ ಬಿಟ್ಟಿರಲು ನನಗೆ ಆಗಲ್ಲ ಕಣೋ ದಯಮಾಡಿ. ನನ್ ಮಾತು ಕೇಳೋ ಆ ಜವರೇಗೌಡ ಅವರೆಲ್ಲ ಆಡಿಕೊಳ್ಳಂಗೆ ಆಗುತ್ತೆ ಕಣೋ ಶಿವಲಿಂಗಣ್ಣ.
    ಕೆಎಂಶಿ: ಜವರೇಗೌಡರು ಬೆನ್ನೆಲುಬು ಇಲ್ಲದ ರಾಜಕಾರಣಿ.
    ರೇವಣ್ಣ: ಯಾರು ಏನೇನ್ ಮಾಡಿದರೆ ಅಂತಾ ಎಲ್ಲಾ ನಿನಗೆ ಗೊತ್ತಿದೆಯಲ್ಲೋ ಶಿವಲಿಂಗಣ್ಣ.
    ಕೆಎಂಶಿ: ಎಲ್ಲಾ ನನಗೆ ಗೊತ್ತಿದೆ. ಗೊತ್ತಿರೋದಕ್ಕೆ ಎಲ್ಲರಿಗೂ ಒಂದೇ ಉತ್ತರ ನಂದು.
    ರೇವಣ್ಣ: ನಾನು ಹೇಳದು ನಿನ್ನ ಒಳ್ಳೆಯದಕ್ಕೋಸ್ಕರ. ನೀನೇ ಮಂತ್ರಿಯಾಗಯ್ಯ ಅಲ್ಲೇ ಘೋಷಣೆ ಮಾಡ್ತಿನಿ.
    ಕೆಎಂಶಿ: ಇನ್ನೂಂದು ನಾಲ್ಕೈದು ದಿನ ಕಾಯ್ದಿದ್ರೆ ಏನಾಗೋದು. ಮಂತ್ರಿ ತಗೊಂಡು ತಿಪ್ಪೆಗುಂಡಿಗೆ ಎಸಿರಿ ಯಾವ ನನ್ಮಗನಿಗೆ ಬೇಕು.
    ರೇವಣ್ಣ: ನನಗೆ ಯಾವನಿಗೆ ಮಂತ್ರಿ ಬೇಕಾಗಿದೆ.
    ಕೆಎಂಶಿ: ನಾವೇನ್ ಅಂತಹ ಥರ್ಡ್ ಕ್ಲಾಸ್ ನನ್ಮಕ್ಕಳಲ್ಲ. ಮಂತ್ರಿಗೆ ಅದಕ್ಕೆ ಇದಕ್ಕೆ ಆಸೆ ಪಡೋಕೆ.
    ರೇವಣ್ಣ: ಇನ್ನೂ ಒಂದು ಅರ್ಧಗಂಟೆ ಕುಮಾರಣ್ಣನ ಹತ್ರ ಮಾತಾಡಿ ನಿನ್ನ ಹತ್ರ ಮಾತಾಡ್ತಿನಿ ತಡಿ.
    ಕೆಎಂಶಿ: ಆಯ್ತು ಮಾತಾಡಣ. ಇದನ್ನೂ ಓದಿ: ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್

  • ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

    ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

    ಹಾಸನ: ವಿಧಾನಸಭಾ ಕ್ಷೇತ್ರದ ಟಿಕೆಟ್‍ಗಾಗಿ ಭವಾನಿ ರೇವಣ್ಣ (Bhavani Revanna) ಹಾಗೂ ಎಚ್.ಪಿ ಸ್ವರೂಪ್ (H.P Swaroop) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಟಿಕೆಟ್ ಪ್ರಹಸನಕ್ಕೆ ಇನ್ನೂ ಕೂಡ ತೆರೆ ಬಿದ್ದಿಲ್ಲ. ಇದೀಗ ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಮೂರನೇ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

    ಎರಡು ಬಾರಿ ಕಾಂಗ್ರೆಸ್‍ (Congress) ನಿಂದ ಸ್ಪರ್ಧಿಸಿ ಎಚ್.ಎಸ್ ಪ್ರಕಾಶ್ (H S Prakash) ವಿರುದ್ಧ ಸೋತು ನಂತರ ಜೆಡಿಎಸ್‍ಗೆ ಸೇರಿದ್ದ ಮಾಜಿ ಹುಡಾ ಅಧ್ಯಕ್ಷ ಕೆ.ಎಂ ರಾಜೇಗೌಡರಿಗೆ ಮಣೆ ಹಾಕಲು ದಳಪತಿಗಳು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ (HD Devegowda) ರು ಹಾಗೂ ಎಚ್.ಡಿ ಕುಮಾರಸ್ವಾಮಿ (H D Kumaraswamy) ಕೆ.ಎಂ.ರಾಜೇಗೌಡರ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಎಚ್.ಪಿ.ಸ್ವರೂಪ್‍ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.

    ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿತ್ತಾಟ ತಾರಕಕ್ಕೇರಿದ್ದು, ಟಿಕೆಟ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರ್ಯಕರ್ತ ಸ್ವರೂಪ್ ಮತ್ತು ರೇವಣ್ಣ ಪತ್ನಿ ಭವಾನಿ ಹೆಸರಿನ ಜೊತೆಗೆ ಮತ್ತೊಂದು ಹೆಸರು ಕೇಳಿ ಬಂದಿದೆ. ಸ್ವರೂಪ್ ಪ್ರಕಾಶ್ ಹೆಸರು ಮನದಲ್ಲಿಟ್ಟುಕೊಂಡು ಕಾರ್ಯಕರ್ತನಿಗೆ ಟಿಕೆಟ್ ಅಂತಿರುವ ಎಚ್.ಡಿ ಕುಮಾರಸ್ವಾಮಿಗೆ ಬ್ರದರ್ ಎಚ್.ಡಿ.ರೇವಣ್ಣ ಫ್ಯಾಮಿಲಿ ಟಕ್ಕರ್ ಕೊಡಲು ಮುಂದಾಗಿದೆ. ಸ್ವರೂಪ್ ಹೆಸರಿನ ಜೊತೆಗೆ ಜೆಡಿಎಸ್ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರನ್ನು ಪ್ರಸ್ತಾಪಿಸಿದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎನ್ನುವುದಾದರೆ ರಾಜೇಗೌಡರಿಗೆ ಕೊಡಿ ಎಂಬ ಹೊಸ ದಾಳ ಉರುಳಿಸಿದ್ದಾರೆ.

    ಹಿರಿಯ ನಾಯಕ, ಕಾರ್ಯಕರ್ತನ ಹೆಸರು ಪ್ರಸ್ತಾಪಿಸಿ ಹೆಚ್‍ಡಿಕೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಫ್ಯಾಮಿಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಭವಾನಿಗೆ ಟಿಕೆಟ್ ಇಲ್ಲ ಎಂದು ಎಚ್‍ಡಿಕೆ ಖಡಕ್ ಆಗಿ ಹೇಳಿದ್ದು, ಭವಾನಿಗೆ ಟಿಕೆಟ್ ಸಿಗದಿದ್ದರೆ ಸ್ವರೂಪ್‍ಗೂ ಬೇಡ ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ. ಹಾಗಾಗಿಯೇ ತಮ್ಮ ಆಪ್ತ, ಹಿರಿಯ ನಾಯಕ ಹಾಗೂ ದೇವೇಗೌಡರ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ರಾಜೇಗೌಡರಿಗೆ ಟಿಕೆಟ್ ಕೊಡಿಸಲು ಮೆಗಾಪ್ಲಾನ್ ಮಾಡಿದ್ದಾರೆ. ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ರೇವಣ್ಣರ ಪ್ರಾಬಲ್ಯ ಕುಗ್ಗುವ ಆತಂಕ ಎದುರಾಗಿದ್ದು, ತಮ್ಮನ್ನು ಲೆಕ್ಕಿಸದೆ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವ ಸ್ವರೂಪ್‍ಗೆ ರೇವಣ್ಣ ಅಡ್ಡಗಾಲಾಗಿದ್ದಾರೆ. ಏನೇ ಆದ್ರೂ ಸ್ವರೂಪ್, ರಾಜೇಗೌಡ ಗೊಂದಲದ ನಡುವೆ ಕೊನೆ ಗಳಿಗೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸುವ ತಂತ್ರಕ್ಕೆ ಮುಂದಾಗಿದೆ. ಹಾಗಾಗಿ ಇದೇ ಮಾನದಂಡ ಮುಂದಿಟ್ಟುಕೊಂಡು ಸ್ವರೂಪ್‍ಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಡಿ ಎಂದು ರೇವಣ್ಣ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

    ಈ ಬಗ್ಗೆ ಕೆ.ಎಂ ರಾಜೇಗೌಡ ಪ್ರತಿಕ್ರಿಯಿಸಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನೊಂದಿಗೆ ಮಾತಾಡಿದ್ದಾರೆ. ಎಲ್ಲರೂ ಒಟ್ಟಿಗೆ ನನ್ನ ಪರ ನಿಲ್ಲುವುದಾದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಕ್ಷ ಬಿಟ್ಟು ಜೆಡಿಎಸ್ ಸೇರಿದ್ದೆ. 2 ಬಾರಿ ಟಿಕೆಟ್ ಕೈ ತಪ್ಪಿತು ಈಗ ಅವಕಾಶ ಬಂದಿದೆ. ಭವಾನಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ನಾನು ಟಿಕೆಟ್ ಕೇಳಿರಲಿಲ್ಲ. ಸ್ವರೂಪ್‍ಗೂ ದುಡುಕಬೇಡ, ರೇವಣ್ಣ ಕುಟುಂಬದ ವಿರುದ್ಧ ಹೋಗಬೇಡ ಎಂದಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ: ಮುನಿರತ್ನ

    ಒಟ್ಟಾರೆ ಸಾಮಾನ್ಯ ಕಾರ್ಯಕರ್ತನ ಹೆಸರಿನಲ್ಲಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಡಿದೇಳುವ ಭೀತಿಯಿಂದ ರೇವಣ್ಣ ಫ್ಯಾಮಿಲಿ ಹೊಸ ಅಸ್ತ್ರ ಪ್ರಯೋಗಿಸಿ ಹೆಚ್‍ಡಿಕೆಯನ್ನು ಪೇಚಿಗೆ ಸಿಲುಕಿಸಿದೆ. ಇತ್ತ ದೇವೇಗೌಡರ ಅಂಗಳದಲ್ಲಿ ಟಿಕೆಟ್ ಚೆಂಡು ಬಿದ್ದಿದ್ದು ಹಾಸನದಲ್ಲಿ ಪಂಚರತ್ನ ಯಾತ್ರೆ ಮುಗಿಯುವ ವೇಳೆಗೆ ಅಂತಿಮವಾಗುತ್ತಾ ಕಾದು ನೋಡಬೇಕಿದೆ.

  • ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    – ಅರಕಲಗೂಡು ಕ್ಷೇತ್ರದ ಜೆಡಿಎಸ್‍ನಲ್ಲಿ ಅಪಸ್ವರ

    ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ ಜೆಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಇದೆಲ್ಲದರ ನಡುವೆ ಮಂಗಳವಾರದಿಂದ 5 ದಿನಗಳ ಕಾಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ (Panchayatre Yatre) ನಡೆಯಲಿದೆ.

    ಹೌದು, ಹಾಸನ ಜಿಲ್ಲೆ ಜೆಡಿಎಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹಾಸನ ಟಿಕೆಟ್ ಗೊಂದಲ ಮುಂದುವರಿದಿದೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda), ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (At Ramaswamy) ಜೆಡಿಎಸ್ ಪಕ್ಷ ತೊರೆದಿದ್ದಾರೆ. ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ.

    ಎ.ಮಂಜು ಜೆಡಿಎಸ್ ಸೇರ್ಪಡೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅಧ್ಯಕ್ಷತೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಲಾಯಿತು. ಸಭೆಯಲ್ಲಿ ಎ.ಮಂಜು ಅಭ್ಯರ್ಥಿಯಾದರೆ ಹೇಗೆ ಎಂಬ ಅಭಿಪ್ರಾಯ ಸಂಗ್ರಹಿಸಲಾಯ್ತು. ಆದರೆ ಸಭೆಯಲ್ಲಿ ಮಾಜಿ ಸಚಿವ ಎ.ಮಂಜುಗೆ ಟಿಕೆಟ್ ಕೊಡಲು ಅಪಸ್ವರ ಕೇಳಿ ಬಂದಿದೆ. ಎ.ಟಿ.ರಾಮಸ್ವಾಮಿ ಪಕ್ಷದಲ್ಲಿ ಹಿಂದೆ ಸರಿದಂತಾಗಿದೆ. ಎ. ಮಂಜುಗೆ ಟಿಕೆಟ್ ಕೊಟ್ರೆ ನಮ್ಮ ಕಾರ್ಯಕರ್ತರಿಗೆ ಅವಕಾಶ ಸಿಗಲ್ಲ ಅಂತ ಅಸಮಾಧಾನ ಹೊರಹಾಕಿದ್ರು. ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಬೆಂಬಲ ಸೂಚಿಸಿದ್ರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

    ಆದರೆ ರೇವಣ್ಣ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಂಜು ಹೆಸರು ಘೋಷಣೆ ಮಾಡಿದ್ರು. ಅಧಿಕೃತವಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅದಕ್ಕೆ ಸಮ್ಮತಿ ಇದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ.ಮಂಜಣ್ಣ ಅವರು ನಿಲ್ತಾರೆ ಅಂತ ರೇವಣ್ಣ ಹೇಳಿದ್ರು.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಇಂದು ಚನ್ನರಾಯಪಟ್ಟಣ, ನಾಳೆ ಅರಸೀಕೆರೆ, ನಾಡಿದ್ದರು ಹೊಳೆನರಸೀಪುರ ಹೀಗೆ ಅರಕಲಗೂಡು, ಸಕಲೇಶಪುರದಲ್ಲಿ ಪಂಚರತ್ನ ನಡೆಯಲಿದೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕಗ್ಗಂಟಿನಿಂದ ಪಂಚರತ್ನ ಯಾತ್ರೆ ನಿಗದಿ ಮಾಡಿಲ್ಲ.

  • ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯ ಕ್ರೆಡಿಟ್ ರೇವಣ್ಣ (H.D.Revanna) ಅವರಿಗೆ ಸಲ್ಲಬೇಕು. ಅವರ ಚಿಂತನೆಯಿಂದಲೇ ಈ ಹೆದ್ದಾರಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ.

    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು. ಇದರ ಉದ್ಘಾಟನೆಯನ್ನು ಮೋದಿಯವರು (Narendra Modi) ಮಾಡುತ್ತಿದ್ದಾರೆ. ಇದು ಸಂತೋಷದ ವಿಷಯ. ಆದರೆ ಇದನ್ನು ಚುನಾವಣೆಗೆ ಬಳಸುತ್ತೇವೆ ಎಂದರೆ ಆ ರೋಡಿನಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಸೀಟೂ ಬರುವುದಿಲ್ಲ. ಎಷ್ಟೇ ಶೋಗಳನ್ನು ಮಾಡಿದರೂ ಆಗುವುದಿಲ್ಲ. ಸುಮಲತಾ (Sumalatha Ambareesh) ಬಿಜೆಪಿಗೆ (BJP) ಸೇರಬೇಕು ಎನ್ನುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾರಾಯಣ ಗೌಡ (Narayana Gowda) ಕಾಂಗ್ರೆಸ್‌ಗೆ (Congress) ಹೋಗುತ್ತಾರೆ ಎನ್ನುತ್ತಾರೆ. ಹೀಗಾದರೆ ರಾಜಕೀಯದಲ್ಲಿ ನೈತಿಕತೆ ಎಲ್ಲಿ ಉಳಿಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ

    ಜನತಾ ದಳದ (JDS) ವಿಷನ್ ಕ್ಲಿಯರ್ ಆಗಿದೆ. ಜೈಲು, ಬೇಲ್ ಇಲ್ಲದವರಿಗೆ ಮಾತ್ರ ಜೆಡಿಎಸ್ ಟಿಕೆಟ್ ನೀಡುತ್ತಿದೆ. 17ರಲ್ಲಿ ಎಷ್ಟು ಜನ ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ. ಇವರಲ್ಲಿ ನಾವು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಅವರೇ ಬಂದರೂ ನಾವು ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟ ತೀರ್ಮಾನ ಮಾಡಿದ್ದೇವೆ. ಇವತ್ತು ನಾವು ಒಬ್ಬೊಬ್ಬರನ್ನು ತೂಕ ಮಾಡಿ, ಅಳತೆ ಮಾಡಿ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಈ ಪಕ್ಷವನ್ನು ಒಂದು ಬುನಾದಿ ಮೇಲೆ ತೆಗೆದುಕೊಂಡು ಹೋಗಬೇಕು. ನಾವು ಕಾರ್ಯಕ್ರಮದ ಮೇಲೆ ಚುನಾವಣೆಗೆ ಹೋಗುತ್ತಿದ್ದೇವೆ ಹೊರತು ರೋಡ್ ಶೋ (Road Show) ಮೇಲಲ್ಲ ಎಂದರು.

    ಬಿಜೆಪಿ ಮೋದಿ ಹೆಸರಿನ ಮೇಲೆ, ಕಾಂಗ್ರೆಸ್ ಸೋನಿಯಾ ಹೆಸರಿನ ಮೇಲೆ ಚುನಾವಣೆಗೆ ಹೋಗುತ್ತಿದೆ. ಆದರೆ ನಾವು ಪಂಚರತ್ನ ಕಾರ್ಯಕ್ರಮದ ಮೇಲೆ ಹೋಗುತ್ತಿದ್ದೇವೆ. ಅವರೆಲ್ಲಾ ಉಚಿತ ಖಚಿತ ಎನ್ನುತ್ತಾರೆ. ಯಾರಿಗೆ ಕೊಡುತ್ತಾರೆ? ಸೊಸೆಗಾ ಅಥವಾ ಅತ್ತೆಗಾ? ಹೀಗಾಗಿ ನಾವು 65 ವರ್ಷ ವಯಸ್ಸಾದವರಿಗೆ ಪೆನ್ಷನ್ ಹಾಗೂ ವಿಧವೆಯರಿಗೆ 500 ರೂ. ನೀಡುತ್ತೇವೆ ಎಂದು ಖಚಿತವಾಗಿ ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವುದಕ್ಕೂ ಸಿಜೆಐಗೆ ಪತ್ರ ಬರೆದಿದ್ದಕ್ಕೂ ಸಂಬಂಧ ಇಲ್ಲ: ವಿವೇಕ್ ರೆಡ್ಡಿ

    ಸೋಮಣ್ಣ (V.Somanna) ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾನು ಅವರ ಬಳಿ ಮಾತನಾಡಿದ್ದೇನೆ. ಅವರಿಗೂ, ಬಿ.ಎಸ್.ಯಡಿಯೂರಪ್ಪನವರಿಗೂ (B.S.Yediyurappa) ಭಿನ್ನಾಭಿಪ್ರಾಯವಿದೆ ಅಷ್ಟೇ. ಇದು ಆಂತರಿಕ ಸಮಸ್ಯೆಯಾಗಿದ್ದು ಅವರಿಗೂ, ಇವರಿಗೂ, ವಿಜಯೇಂದ್ರಗೂ ಸರಿ ಹೊಂದುತ್ತಿಲ್ಲ ಅಷ್ಟೇ. ಸೋಮಣ್ಣನವರಿಗೆ ಇದ್ದ ವರ್ಚಸ್ಸು ಅವರಿಗೆ ಇದ್ದೇ ಇದೆ. ಸೋಮಣ್ಣನಿಗೆ ಶಕ್ತಿ ದೊರತಿದ್ದೇ ಜನತಾ ದಳದಿಂದ ಎಂದರು.

    ಈಶ್ವರ್ ಖಂಡ್ರೆ ಅವರು ಲೋಕಸಭೆ ಚುನಾವಣೆಯಲ್ಲಿ ನಿಂತಿದ್ದರಲ್ಲಾ, ಒಂದು ಲಿಂಗಾಯತರ ಮತ ಬಂತಾ ಅವರಿಗೆ? ಈಶ್ವರ್ ಖಂಡ್ರೆಗೂ ಶಾಮನೂರು ಅವರಿಗೂ ಲಿಂಗಾಯತರಿಂದ ಒಂದು ಮತ ಬರಲಿಲ್ಲ. ಅವರ ಹೆಂಡತಿಯೇ ಒಂದು ಮತ ಹಾಕಲಿಲ್ವೇನೋ ಗೊತ್ತಿಲ್ಲ. ಮತ ಹಾಕುವುದು ಸಾಬರು. ಆದರೆ ವೀರಶೈವ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯಲು ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನಿಂದ ಹೊರ ಹೋಗಿದ್ದೇ ಕಾರಣ. ಇದು ಅವರಿಗೆ ವರದಾನವಾಯಿತು. ಇಲ್ಲವೆಂದರೆ ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯುತ್ತಿರಲಿಲ್ಲ. ಇವರ ಶಕ್ತಿಯೇನು ಎಂದು ನಮಗೆ ಗೊತ್ತಿದೆ ಎಂದು ಹೇಳಿದರು.

    ನಮ್ಮ ಪ್ರತಿನಿಧಿಗಳು ಚುನಾವಣಾ ಆಯೋಗದ ಸಭೆಗೆ ಹೋಗಿದ್ದಾರೆ. ಕುಕ್ಕರ್ ಹಂಚುವಿಕೆ ಹಾಗೂ ಸೀರೆ ಹಂಚುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಬಹಿರಂಗವಾಗಿ ಮಾಡುತ್ತಿದೆ. ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರು ಗಂಭೀರಗೊಂಡಿದ್ದಾರೆ. ಇದರ ಬಗ್ಗೆ ಪೊಲೀಸರು ಅಥವಾ ಚುನಾವಣಾ ಆಯೋಗ ಇದನ್ನು ಗಮನಕ್ಕೆ ತೆಗೆದುಕೊಂಡಿದೆಯಾ? ಈ ಕುರಿತು ಬೀದರ್ ಡಿಸಿ ಹಾಗೂ ಎಸ್ಪಿ ಕ್ರಮ ಕೈಗೊಳ್ಳದೇ ಇದ್ದರೆ ನಾನು 15ನೇ ತಾರೀಕಿನಂದು ಡಿಸಿ ಕಚೇರಿ (DC Office) ಮುಂದೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷ ರಿಲೀಸ್ ಆಗಲಿ ಎಂದು ಹೇಳಿದ್ದೇವೆ. ಚರ್ಚೆ ಇನ್ನೂ ಮುಗಿದಿಲ್ಲ. ಹಾಗಾಗಿ ಪಟ್ಟಿ ರಿಲೀಸ್ ಫೈನಲ್ ಆಗಲಿಲ್ಲ ಎಂದರು. ಅಪ್ಲಿಕೇಷನ್ ಶುಲ್ಕ ಒಂದು ಲಕ್ಷ ರೂ. ಮಾಡಿದ್ದೇವೆ. ದಲಿತ ಅಭ್ಯರ್ಥಿಗಳಿಗೆ 50 ಸಾವಿರ ರೂ. ಮಾಡಿದ್ದೇವೆ. ಕುರುಬ ನಾಯಕರು ಇದ್ದೇ ಇದ್ದಾರೆ. ಜಿಲ್ಲೆಗೊಂದು, ತಾಲೂಕಿಗೊಂದು ಎಂದು ಏನಿಲ್ಲ. ಸಾಮಾಜಿಕ ನ್ಯಾಯ ಮನಸಿನಲ್ಲಿ ಇಟ್ಟುಕೊಂಡು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲ್ಲ: ಕಟೀಲ್

  • ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

    ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

    ಹಾಸನ: ಮಾಜಿ ಶಾಸಕ ಎ.ಮಂಜು (A.Manju) ಜೊತೆ ಅಡ್ಜಸ್ಟ್ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಶಾಸಕ ಎ.ಟಿ ರಾಮಸ್ವಾಮಿ (A.T.Ramaswamy) ಸಾಬೀತು ಪಡೆಸಿದರೆ ನಾನು ಅವರು ಹೇಳುವ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D.Revanna) ವಾಗ್ದಾಳಿ ನಡೆಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಟಿ ರಾಮಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮಗನ ಮೇಲೆ ಕೇಸ್ ದಾಖಲಿಸಿದವನ ಜೊತೆ ರಾಜಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಅವರು ಸೀನಿಯರ್ ಅಡ್ವಕೇಟ್ ಇಟ್ಟುಕೊಂಡರು ಸಹ ಹೈಕೋರ್ಟ್‍ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದರ ಪ್ರತಿಯನ್ನು ರಾಮಸ್ವಾಮಿ ಓದಿಕೊಳ್ಳಲಿ. ನಮ್ಮ ಸಂಪೂರ್ಣ ಆಸ್ತಿಯನ್ನು ಐಟಿಗೆ ನೀಡಿದ್ದೇನೆ ಇಡಿ ಮೂಲಕ ತನಿಖೆ ನಡೆಸಿಕೊಳ್ಳಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

    ರಾಮಸ್ವಾಮಿಯವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದರು ಎಂದು ಹೇಳಲಿ. ಹಾಸನ ಮತ್ತು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಅವರಿಗೆ ಸೀಟ್ ಕೊಡದೆ ಒದ್ದು ಓಡಿಸಿದ್ದಕ್ಕೆ ನಿಮ್ಮ ಹತ್ರ ಬಂದಿದ್ದಾರೆ ಎಂದು ಶಿವಲಿಂಗೇಗೌಡರು ಹೇಳಿದ್ರಾ? ಹಾಗಾದರೆ ಶಿವಲಿಂಗೇಗೌಡರು ಧರ್ಮಸ್ಥಳದ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.

    ಎರಡು ವರ್ಷದಿಂದ ಕಾಂಗ್ರೆಸ್ ಕದ ತಟ್ಟುತ್ತಿದ್ದರು. ಅಲ್ಲಿ ಸೋಲ್ತಾರೆ ಎಂದ ಮೇಲೆ ನಮ್ಮ ಬಳಿ ಬಂದಿದ್ದಾರೆ. ನಾವು ಯಾರ ಹತ್ರವೂ ಅಡ್ಜಸ್ಟ್ ಆಗಿಲ್ಲ. ಎ. ಮಂಜು ಬರ್ತೀನಿ ಅಂದ್ರೆ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

    ಶಿವಲಿಂಗೇಗೌಡ (K.L.Shivalinge Gowda) ಪಕ್ಷ ತೊರೆದ ವಿಚಾರವಾಗಿ, ನಾವು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು. ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

    ದೇವರಾಣೆ ಪಕ್ಷ ಬಿಡಲ್ಲ ಎಂದು ಕೆ.ಎಂ ಶಿವಲಿಂಗೇಗೌಡ ಅಂದಿದ್ರು, ಆದರೂ ಪಕ್ಷ ತೊರೆದಿದ್ದಾರೆ. ಕುಮಾರಸ್ವಾಮಿಯವರ (H.D.Kumaraswamy) ಮನೆಯಲ್ಲಿ ಈ ಮಾತು ಹೇಳಿಲ್ಲ ಎಂದರೆ ಅವರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮೇಲೆ ಆಣೆಮಾಡಲಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸವಾಲು ಹಾಕಿದ್ದಾರೆ.

    ಶಿವಲಿಂಗೇಗೌಡರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇವೆ. ಜೆಡಿಎಸ್ (JDS) ಗೆ ದುಡ್ಡು ಕೊಟ್ಟು ವೋಟು ತೆಗೆದುಕೊಳ್ಳುವ ಶಕ್ತಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬಳಿ ಖಜಾನೆಯಿದೆ ಎಂದಿದ್ದಾರೆ.

    ಅರಸಿಕೆರೆಯಲ್ಲಿ ಬಿಜೆಪಿಯವನು ನಿಂತರೆ ಸೋಲುತ್ತೇನೆ. ಲಿಂಗಾಯತರೆಲ್ಲ ಒಂದೇ ಕಡೆ ಓಟು ಹಾಕುತ್ತಾರೆ ಎಂದು ಶಿವಲಿಂಗೇಗೌಡರು ಹೇಳಿದ್ದರು. ಕಳೆದ ಬಾರಿ ಐದು ಶಾಸಕರು ಕಾಂಗ್ರೆಸ್ (Congress) ತೊರೆದಿದ್ದರು. ಅರಸಿಕೆರೆ ಜನ ದುಡ್ಡಿಗೆ ಮತ ಹಾಕುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

  • ಟಿಕೆಟ್ ಕೇಳುವ ಹಕ್ಕು ಭವಾನಿಗೂ ಇದೆ, ಪ್ರತಿಯೊಬ್ಬ JDS  ಕಾರ್ಯಕರ್ತನಿಗೂ ಇದೆ – ಇಬ್ರಾಹಿಂ

    ಟಿಕೆಟ್ ಕೇಳುವ ಹಕ್ಕು ಭವಾನಿಗೂ ಇದೆ, ಪ್ರತಿಯೊಬ್ಬ JDS ಕಾರ್ಯಕರ್ತನಿಗೂ ಇದೆ – ಇಬ್ರಾಹಿಂ

    ಹಾಸನ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ (JDS) ಟಿಕೆಟ್ ಕೇಳುವ ಹಕ್ಕು ಭವಾನಿ (Bhvavani Revanna), ಸ್ವರೂಪ್ ಸೇರಿದಂತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

    ಹಾಸನ (Hassan) ಜಿಲ್ಲೆ ಬೇಲೂರು ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಜೊತೆಗೆ ಕಳೆದ ಭಾನುವಾರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ಸಭೆ ಕರೆದೇ ಇಲ್ಲ ಎಂದು ಇಬ್ರಾಹಿಂ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

    ಹೆಚ್.ಡಿ ರೇವಣ್ಣ (HD Revanna), ಹೆಚ್.ಡಿ ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ್ ಈ ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಬರುತ್ತೆ ಅಂತಾ ಯಾರಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆ ನಾಲ್ಕು ಮಂದಿ ಯಾವತ್ತಿದ್ದರೂ ಒಂದೇ. ಅವರು ಹೇಗಿದ್ದಾರೆ ಅನ್ನೋದನ್ನ ಕಳೆದ 50 ವರ್ಷಗಳಿಂದಲೂ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

  • ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

    ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

    ಹಾಸನ: ರಾಜ್ಯದಲ್ಲಿ ಕುಮಾರಸ್ವಾಮಿಯವರ (H.D.Kumaraswamy) ಸರ್ಕಾರ ಹೋದ ಮೇಲೆ ಹಾಸನದಲ್ಲಿ (Hassan) ಜೆಡಿಎಸ್ (JDS) ಕಾರ್ಯಕರ್ತರ ಮೇಲೆ ಆಗುತ್ತಿರುವ ಕಿರುಕುಳ ನನಗೆ ತಿಳಿದಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಬೇಸರ ವ್ಯಕ್ತಪಡಿಸಿದ್ದಾರೆ.

    ಹಾಸನದ ಬೈಲಹಳ್ಳಿಯಲ್ಲಿ (Bylahalli) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯಕರ್ತರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿ ಕಾರ್ಯಕರ್ತರನ್ನು ಜೈಲಿಗೆ ಕಳಿಸುವ ಅಥವಾ ಗಡಿಪಾರು ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ನಳಿನ್ ಕುಮಾರ್ ಕಟೀಲ್

    ಕೆಲವರು ದುಡ್ಡಿನಿಂದ ರೌಡಿಸಂ ಮಾಡಲು ಹೊರಟಿದ್ದಾರೆ. ನಿನ್ನೆ ಉಗನೆ (Ugane) ಗ್ರಾಮಕ್ಕೆ ಹೋಗಿದ್ದೆ. ಅಲ್ಲಿ ಜನ ನನ್ನ ಬಳಿ ರಕ್ಷಣೆ ಬೇಕು ಎಂದು ಹೇಳುತ್ತಾರೆ. ಈ ಕ್ಷೇತ್ರವನ್ನು ನಾನು ಸವಾಲಾಗಿ ಸ್ವೀಕರಿಸಿ ಮುನ್ನಡೆಸುವ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ತಿರ್ಮಾನ ಕೈಗೊಳ್ಳುತ್ತೇನೆ ಎಂದರು.

    ಇಲ್ಲಿನ ಜನರಿಂದ ದೇವೇಗೌಡರು (H.D.Deve Gowda) ಈ ಮಟ್ಟಕ್ಕೆ ಬೆಳೆದರೂ, ನಾಲ್ಕು ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಚುನಾವಣೆಯು ದೇವೇಗೌಡರು ಹಾಗೂ ನಾನು ಜಿಲ್ಲೆಗೆ ಕೊಟ್ಟ ಕೊಡುಗೆಯ ಪರೀಕ್ಷೆಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಲೇಜು ಪ್ರಿನ್ಸಿಪಾಲ್‍ಗೇ ಬೆಂಕಿ ಇಟ್ಟ ವಿದ್ಯಾರ್ಥಿ – ಚಿಕಿತ್ಸೆ ಫಲಿಸದೇ ಸಾವು

  • ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k