Tag: ಹೆಚ್ ಡಿ ರೇವಣ್ಣ

  • ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಎಡವಟ್ಟು- ಹೀಗೆ ಮಾಡ್ಬಹುದಾ ಸಚಿವರೇ?

    ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಎಡವಟ್ಟು- ಹೀಗೆ ಮಾಡ್ಬಹುದಾ ಸಚಿವರೇ?

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿಯೇ ಸೂಪರ್ ಸಿಎಂ ಅಂತಾನೆ ಕರೆಸಿಕೊಳ್ಳುವ ಎಚ್.ಡಿ.ರೇವಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಸರ್ಕಾರ ರಚನೆಯ ಬಳಿಕ ಎಲ್ಲ ಸಚಿವರಿಗೂ ಸರ್ಕಾರಿ ಬಂಗಲೆಯನ್ನು ನೀಡಲಾಗಿದೆ. ಆದ್ರೆ ಎಚ್.ಡಿ.ರೇವಣ್ಣ ತಮ್ಮ ಕಟ್ಟಡದ ಕೊಳಚೆ ನೀರನ್ನು ರಸ್ತೆಗೆ ತಿರುಗಿಸುವ ಕೆಲಸ ಮಾಡಿದ್ದಾರೆ.

    ಸದ್ಯ ಆಷಾಢ ಮಾಸ ಇರೋದರಿಂದ ಸರ್ಕಾರಿ ಬಂಗಲೆಗೆ ಸಚಿವರು ಪ್ರವೇಶ ಮಾಡಿಲ್ಲ. ಆಷಾಢ ಕಳೆದ ಮೇಲೆ ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ನಂಬರ್ 1 ನಿವಾಸಕ್ಕೆ ಎಚ್.ಡಿ.ರೇವಣ್ಣ ಪ್ರವೇಶ ಮಾಡಲಿದ್ದಾರೆ. ಆದರೆ ಪ್ರವೇಶಕ್ಕೂ ಮುನ್ನವೇ ವಾಸ್ತು ಪ್ರಕಾರ ಕಟ್ಟಡದ ನವೀಕರಣ ನಡೆಯುತ್ತಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹೆಚ್.ಸಿ.ಮಹಾದೇವಪ್ಪ ತಮ್ಮ ಪ್ರವೇಶದ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡದ ನವೀಕರಣಗೊಳಿಸಿದ್ದರು. ಈಗ ಮತ್ತೆ ಅದೇ ಕಟ್ಟಡದ ನವೀಕರಣ ನಡೆಯುತ್ತಿದೆ.

    ಮಳೆಯಾದರೆ ಕುಮಾರ ಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.

    ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿದಂತಾಗುತ್ತದೆ. ಸಚಿವರೇ ನೀವು ಹೇಗೆ ಮಾಡಬಹುದಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

  • ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ಹಾಸನ: ಸಚಿವ ಹೆಚ್.ಡಿ.ರೇವಣ್ಣ ಇಂದು ವಾಸ್ತು ಪ್ರಕಾರವೇ ಶಿರಾಡಿ ಘಾಟ್ ಉದ್ಘಾಟಿಸಿದ್ದಾರೆ.

    ಅಧಿಕಾರಿಗಳು ಶಿರಾಡಿ ಘಾಟ್ ಉದ್ಘಾಟನೆಯನ್ನು ಪಶ್ಚಿಮಾಭಿಮುಖವಾಗಿ ಸಿದ್ಧಪಡಿಸಿದ್ದರು. ಸ್ಥಳಕ್ಕಾಗಮಿಸಿದ ಸಚಿವರು ಶುಭಕಾರ್ಯಗಳನ್ನು ಪೂರ್ವಾಭಿಮುಖವಾಗಿ ಮಾಡಬೇಕು ಎಂದು ಟೇಪ್ ಕೆಳಗೆ ನುಸುಳಿ ಎಲ್ಲರಿಗೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದರು.

    ಸಚಿವರು ದಿಕ್ಕು ಬದಲಿಸಿದ್ದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ನಿಂತ ಸಚಿವರು ಟೇಪ್ ಕತ್ತರಿಸಿ ಶಿರಾಡಿ ಘಾಟ್ ಸಂಚಾರವನ್ನು ಮುಕ್ತಗೊಳಿಸಿದರು. ತಡೆಗೋಡೆ, ಸೂಚನಾ ಫಲಕ, ಸಣ್ಣ-ಪುಟ್ಟ ಕಾಮಗಾರಿಗಳು ಪ್ರಗತಿ ಬಾಕಿ ಹಿನ್ನೆಲೆಯಲ್ಲಿ ಕೇವಲ ಲಘು ವಾಹನಗಳಿಗೆ ಮಾತ್ರ ಸಂಚಾರ ಮುಕ್ತಗೊಳಿಸಲಾಗಿದೆ.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಇಂದು ಸಂಚಾರ ಮುಕ್ತವಾಗಿದೆ.

  • ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಬೆಂಗಳೂರು: ವಿಧಾನಸಭೆಯಲ್ಲಿ ಮೊದಲ ಬಾರಿಗೆ ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಪಕ್ಷದ ನಾಯಕ ಸಚಿವ ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಯಡಿಯೂರಪ್ಪ ಇರುವಾಗ ಹಾಲಿಗೆ ಎರಡು ರೂ. ಪ್ರೋತ್ಸಾಹ ಧನ ಇತ್ತು. ನಾನು ಅದನ್ನು 4-5 ರೂ. ಮಾಡಿದೆ. ಆದಾದ್ಮೇಲೆ 50,000 ಹಾಲು ಒಂದು ದಿನಕ್ಕೆ ಬರುತ್ತಿದ್ದದ್ದು, 75 ಲಕ್ಷ ಹಾಲು ಒಂದು ದಿನಕ್ಕೆ ಹೆಚ್ಚಾಗಿತ್ತು. ಆಗಂತ ನಾನು ಕೆಎಂಎಫ್‍ನಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲ್ಲ. ಅನಗತ್ಯ ನೇಮಕಾಗಿ ಮಾಡಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಸಂಬಳ ಕೊಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಕೊಟ್ಟಿದ್ದ ಪ್ರೋತ್ಸಾಹ ಧನ ದುರುಪಯೋಗ ಆಗಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಮಾತನಾಡಿದ ಬಳಿಕ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ. ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಅಂತ ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಉತ್ತರ ನೀಡಿದರು.

  • ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್

    ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್

    ಹಾಸನ: ವಾಸ್ತು ಪ್ರಕಾರ ಪೂಜೆ ಮಾಡದ ಹಿನ್ನೆಲೆ ಅರ್ಚಕರಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಕ್ಲಾಸ್ ತಗೆದುಕೊಂಡಿದ್ದಾರೆ.

    ಭಾನುವಾರ ನಗರದ ಜಿಲ್ಲಾಸ್ಪತ್ರೆ ಸಮೀಪದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಶಂಕು ಸ್ಥಾಪನೆಗೆ ಸಚಿವ ರೇವಣ್ಣ ಆಗಮಿಸಿದ್ದರು. ಈ ವೇಳೆ ಪ್ರಾರಂಭವಾಗಿದ್ದ ಪೂಜೆ ತಡೆದು, ದಿಕ್ಕು ಬದಲಿಸುವಂತೆ ಅರ್ಚಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಾಸ್ತು ಪ್ರಕಾರ ನೀವು ಪೂಜೆ ಮಾಡುತ್ತಿಲ್ಲ ಎಂದು, ತಾವೇ ಮುಂದೆ ನಿಂತು ಪೂಜೆ ಮಾಡಿಸಲು ಮುಂದಾದ ಸಚಿವರು, “ರೀ ನೀರು ಮೊದಲು ಹಾಕಿ, ನೀವು ನಮ್ಮ ತಲೆ ಬಿಸಿ ಮಾಡಬೇಡಿ” ಎಂದು ಅರ್ಚಕ ರವಿ ಅವರ ವಿರುದ್ಧ ರೇಗಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಅರ್ಚಕ ರವಿ ಅವರು, ನಾವು ಮೊದಲು ಪೂಜೆ ಮಾಡುತ್ತಿದ್ದ ದಿಕ್ಕನ್ನು ಬದಲಾಯಿಸಿ, ವಾಸ್ತು ಪ್ರಕಾರ ಈಶಾನ್ಯ ದಿಕ್ಕಿಗೆ ಪೂಜೆ ಮಾಡಬೇಕು ಎಂದು ತಾಖೀತು ಮಾಡಿದರು. ಆದರೆ ನಾವು ಪೂಜೆ ಮಾಡುತ್ತಿರುವ ದಿಕ್ಕು ಸರಿಯಾಗಿದ್ದರು ಬದಲಾಯಿಸಬೇಕೆಂದು ಸಚಿವರು ಹೇಳಿದರು ಎಂದು ತಿಳಿಸಿದರು.

  • ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣ ಸೂಪರ್ ಸಿಎಂ ಅನ್ನೋ ಮಾತು ಚರ್ಚೆಯಲ್ಲಿವೆ. ಈ ಸಮಯದಲ್ಲಿಯೇ ಶುಕ್ರವಾರ ರೇವಣ್ಣರಿಗಾಗಿಯೇ ಸಿಎಂ ಕುಮಾರಸ್ವಾಮಿ ಸಂಪುಟ ಸಭೆ ಕರೆದಿದ್ದಾರೆ.

    ಮುಖ್ಯವಾಗಿ ಹೊಳೆನರಸೀಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಾಸನ ಜಿಲ್ಲೆಯ ಏತ ನೀರಾವರಿ ಯೋಜನೆ, ಹೊಸ ಕಾಲೇಜಗಳ ಸ್ಥಾಪನೆ ಬಗ್ಗೆ ಚರ್ಚೆ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ರೇವಣ್ಣ ಅವರನ್ನ ಪ್ರಶ್ನಿಸಿದಾಗ, ಹಾಗೆಲ್ಲಾ ಇಲ್ಲ. ನನ್ನ ಕ್ಷೇತ್ರದಷ್ಟೇ ಅಲ್ಲ ಬೇರೆ ವಿಷಯಗಳು ಚರ್ಚೆಗೆ ಬರಲಿವೆ. ಕಾಂಗ್ರೆಸ್ ನಾಯಕರು ನನ್ನ ಸೂಪರ್ ಸಿಎಂ ಅಂದ್ರೆ ಆಶೀರ್ವಾದ ಅಂದ್ಕೋತೀನಿ ಅಂದ್ರು.

    ಡಿ.ಕೆ.ಶಿವಕುಮಾರ್ ನಾವು ಚೆನ್ನಾಗಿಯೇ ಇದೀವಿ. ಬೇರೆ ಮಾಡಬೇಕು ಅಂತ ಅಂದ್ರೆ ಏನು ಮಾಡೋದು. ಎಂಜಿನಿಯರ್‍ಗಳ ವರ್ಗಾವಣೆಯಲ್ಲಿ ಅಸಮಾಧಾನ ವಿಚಾರಗೊತ್ತಿಲ್ಲ ಅಂದ್ರು. ಇದರ ಬೆನ್ನಲ್ಲೇ ಬಜೆಟ್ ಪೂರ್ವ ಭಾವಿ ಸಭೆಗಾಗಿ ಶಕ್ತಿಭವನಕ್ಕೆ ಕಂದಾಯ ಸಚಿವ ದೇಶಪಾಂಡೆ ಅವರು ಬಂದಾಗ ಗೇಟ್ ಒಂದಕ್ಕೆ ಬೀಗ ಹಾಕಿತ್ತು. ಪೊಲೀಸರು ಇದನ್ನ ತೆಗೆಯದೇ ದೂರ ಉಳಿದಿದ್ರು. ಹಾಗಾಗಿ, ಬೇರೊಂದು ಗೇಟ್ ಮೂಲಕ ದೇಶಪಾಂಡೆ ನಡೆದುಕೊಂಡು ಹೋದ್ರು.

    ಇತ್ತ ರೇವಣ್ಣವರು ಬಂದು ಕ್ಲೋಸ್ ಆಗಿರುವ ಗೇಟ್‍ನ ಬೀಗ ತೆಗೆಸಿ ಒಳಗೆ ಹೋದ್ರು. ಈ ಮಧ್ಯೆ, ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿ ಅಂತ ಸಚಿವ ಡಿಕೆಶಿ ಕಾರನ್ನ ಎತ್ತಿಸಿದ ಘಟನೆಯೂ ನಡೆದಿದೆ. ಇನ್ನು, ಶುಕ್ರವಾರ ಕ್ಯಾಬಿನೆಟ್‍ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಫೈನಲ್ ಸಾಧ್ಯತೆ ಇದೆ.

    https://www.youtube.com/watch?v=LHr-hAmzNAw

  • ಸರ್ಕಾರಿ ಬಂಗಲೆಗಳಲ್ಲಿ ಇರಲೇಬೇಡಿ- ಮಕ್ಕಳಿಬ್ಬರಿಗೆ ದೇವೇಗೌಡರ ಸಲಹೆ

    ಸರ್ಕಾರಿ ಬಂಗಲೆಗಳಲ್ಲಿ ಇರಲೇಬೇಡಿ- ಮಕ್ಕಳಿಬ್ಬರಿಗೆ ದೇವೇಗೌಡರ ಸಲಹೆ

    ಬೆಂಗಳೂರು: ಯಾವುದೇ ಕಾರಣಕ್ಕೂ ಸರ್ಕಾರಿ ಬಂಗಲೆಗಳು ಬೇಡವೇ ಬೇಡ. ಸರ್ಕಾರಿ ಬಂಗಲೆಗಳ ವಾಸ್ತು ಸರಿ ಇಲ್ಲ, ಅಲ್ಲಿ ವಾಸ್ತವ್ಯ ಮಾಡೋದು ಬೇಡ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಕ್ಕಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಅವರಿಗೆ ಸಲಹೆ ನೀಡಿದಾರಂತೆ.

    ನಮ್ಮ ಮನೆಗಳಲ್ಲಿ ವಾಸ್ತು ಚೆನ್ನಾಗಿದೆ ಅಲ್ಲೇ ಇರಿ ಅಂತಾ ಮಕ್ಕಳಿಗೆ ಗೌಡರು ಸಲಹೆ ನೀಡಿದ್ದು, ಆದರೆ ಹಾಲಿ ಇರುವ ಖಾಸಗಿ ನಿವಾಸಗಳಲ್ಲಿ ಜನರು, ಕಾರ್ಯಕರ್ತರನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ವಾಸ್ತು ಸರಿ ಇರುವಂತಹ ದೊಡ್ಡ ಬಂಗಲೆಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಈ ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ ಸರ್ಕಾರಿ ಬಂಗಲೆ ಅನುಗ್ರಹದಲ್ಲಿದ್ದರು. ಬಳಿಕ ಅದೇ ಅನುಗ್ರಹ ನಿವಾಸದಲ್ಲಿ ವಸತಿ ಸಚಿವರಾಗಿದ್ದಾಗ ರೇವಣ್ಣ ಸಹ ವಾಸವಿದ್ದರು. ಇನ್ನು 2006ರಲ್ಲಿ ಸಿಎಂ ಆದಾಗ ಹೆಚ್.ಡಿ.ಕುಮಾರಸ್ವಾಮಿ ಕೂಡ ಅನುಗ್ರಹದಲ್ಲಿ ನಿವಾಸದಲ್ಲಿಯೇ ವಾಸವಾಗಿದ್ದರು. ಇದನ್ನೂ ಓದಿ: ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!

    ಸರ್ಕಾರಿ ಬಂಗಲೆಗೆ ಬೇಡಿಕೆ : ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ವಾಸ್ತವ್ಯಕ್ಕೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ಹಂಚಿಕೆ ಮಾಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಮಾಜಿ ಸಚಿವ ರಮಾನಾಥ್ ರೈ ಇದೇ ನಿವಾಸದಲ್ಲಿ ವಾಸವಾಗಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಮಾನಾಥ ರೈ ಸೋತಿರುವ ಕಾರಣ ಆರು ತಿಂಗಳಲ್ಲಿ ರೇಸ್ ವ್ಯೂ ಕಾಟೇಜ್ ಖಾಲಿ ಮಾಡಬೇಕಿದೆ.

    2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ ‘ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

  • ತಾಕತ್ತಿದ್ದರೆ ರೈತರ ಸಾಲ ಮನ್ನಾ ಮಾಡಲಿ: ಕೇಂದ್ರ ಸರ್ಕಾರಕ್ಕೆ ಸಚಿವ ರೇವಣ್ಣ ಸವಾಲ್

    ತಾಕತ್ತಿದ್ದರೆ ರೈತರ ಸಾಲ ಮನ್ನಾ ಮಾಡಲಿ: ಕೇಂದ್ರ ಸರ್ಕಾರಕ್ಕೆ ಸಚಿವ ರೇವಣ್ಣ ಸವಾಲ್

    ಹಾಸನ: ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಅವರು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಸವಾಲು ಹಾಕಿದ್ದಾರೆ.

    ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ಚನ್ನಕೇಶವ ದೇವರ ಆಶೀರ್ವಾದ ಪಡೆದು ಮಾತನಾಡಿದ ಸಚಿವರು, ಕೇಂದ್ರ ಬಿಜೆಪಿ ಸರ್ಕಾರ ನಾಲ್ಕು ವರ್ಷದ ಅವಧಿಯಲ್ಲಿ ರೈತರಿಗೆ ಯಾವ ಸವಲತ್ತು ನೀಡಿದೆ ಎನ್ನುವುದನ್ನು ರಾಜ್ಯ ಬಿಜೆಪಿ ನಾಯಕರು ತಿಳಿಸಲಿ. ಬಿಜೆಪಿಯವರ ಆಡಳಿತದ ಬಗ್ಗೆ ದೇಶದ ಜನತೆಗೆ ಗೊತ್ತಿದೆ. ನಾನು ಅದರ ಬಗ್ಗೆ ತಿಳಿಸುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಚನ್ನಕೇಶವನ ಆಶೀರ್ವಾದದಿಂದ ಅಧಿಕಾರ ಸಿಕ್ಕಿದೆ. ಸರ್ಕಾರ ಇಷ್ಟೇ ದಿನವಿರುತ್ತದೆ ಅಂತಾ ನಾನು ಹೇಳುವುದಿಲ್ಲ. ಸರ್ಕಾರ ಇದ್ದಷ್ಟು ದಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

  • ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?

    ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?

    ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಹೋದರ ರೇವಣ್ಣ ಅವರೇ ತಲೆನೋವು ಆಗಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆಯಲ್ಲಿ ರೇವಣ್ಣ ವರ್ತನೆಯಿಂದ ಈ ಪ್ರಶ್ನೆ ಹುಟ್ಟಿಕೊಂಡಿದೆ.

    ಹೆಚ್‍ಡಿಕೆ ಅಧಿಕಾರಿಗಳ ಸಭೆ ಕರೆದಿದ್ದರೆ ರೇವಣ್ಣ ಅವರು ಹೋಗಿ ಕುಳಿತುಬಿಟ್ಟಿದ್ದರು. ರೇವಣ್ಣ ಮೂಗು ತೋರಿಸಿದ್ದರಿಂದ ವಿಧಾನಸೌಧದಲ್ಲಿ ಇವತ್ತು ಹೆಚ್‍ಡಿಕೆ ಮುಜುಗರ ಅನುಭವಿಸುವಂತಾಯಿತು.

    ಹಾಸನ ವೈದ್ಯಕೀಯ ಕಾಲೇಜಿಗೆ ಸಂಬಂಧಪಟ್ಟ ಸಭೆ ನೆಪದಲ್ಲಿ ರೇವಣ್ಣ ಮೂರು ಸಭೆಗಳಲ್ಲಿ ಹಾಜರಿದ್ದರು. ಅಷ್ಟೇ ಅಲ್ಲದೇ ಹೆಚ್‍ಡಿಕೆ ಸುದ್ದಿಗೋಷ್ಠಿ ಕರೆದಾಗಲೂ ರೇವಣ್ಣ ಮಾತಾಡೋದಕ್ಕೆ ಶುರು ಮಾಡಿ ಸಿಎಂಗೆ ಮುಜುಗರ ತಂದಿಟ್ಟರು.

    ಹಾಲಿನ ದರ ವಿಚಾರಕ್ಕೆ ಏನು ಮಾಹಿತಿ ಅದು ಅಂತಾ ಹೆಚ್‍ಡಿಕೆ ರೇವಣ್ಣ ಅವರನ್ನ ಪ್ರಶ್ನಿಸಿದರು. ಆಗ ಪ್ರೆಸ್‍ಮೀಟ್ ನಲ್ಲಿ ತಾವೇ ಮಾತಾಡಲು ರೇವಣ್ಣ ಶುರು ಮಾಡಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಹೆಚ್‍ಡಿಕೆ, ನೀನು ಒಂದು ಪ್ರೆಸ್‍ಮೀಟ್ ಕರೆದು ಎಲ್ಲ ಹೇಳಿಬಿಡು ಎಂದು ಹೇಳಿ ಸುಮ್ಮನಾಗಿಸಿದ್ರು.

    ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿ ದೇವೇಗೌಡ ಮತ್ತು ರಾಹುಲ್ ಗಾಂಧಿ ಹೈಕಮಾಂಡ್ ಆಗಿರುವ ಜೊತೆಗೆ ಈಗ ರೇವಣ್ಣನವರ ವರ್ತನೆಯಿಂದ ಅವರು ಮೂರನೇ ಹೈಕಮಾಂಡ್ ಆಗಿದ್ದಾರಾ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ಮತ್ತೆ ಮದುವೆಯಾದ ಜೆಡಿಎಸ್ ನಾಯಕ ಹೆಚ್‍ಡಿ ರೇವಣ್ಣ!

    ಮತ್ತೆ ಮದುವೆಯಾದ ಜೆಡಿಎಸ್ ನಾಯಕ ಹೆಚ್‍ಡಿ ರೇವಣ್ಣ!

    ಹಾಸನ: ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ.

    ಹೌದು, ಇಂದು ಹಾಸನದಲ್ಲಿ ಜ್ಞಾನಕ್ಷಿ ಕನ್‍ವೆನ್‍ಷನ್ ಸೆಂಟರ್‍ನಲ್ಲಿ ನಡೆದ ಅದ್ಧೂರಿ ಮದುವೆಗೆ ಸ್ವತಃ ರೇವಣ್ಣನವರ ತಂದೆ, ಮಾಜಿ ಪ್ರಧಾನಿಯಾದ ಹೆಚ್.ಡಿ ದೇವೇಗೌಡ್ರು ಹಾಗೂ ತಾಯಿ ಚನ್ನಮ್ಮ ಸಾಕ್ಷಿಯಾದ್ರು.

    ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿದು ಶಾಕ್ ಆಗ್ಬೇಡಿ. ಮೊನ್ನೆಯಷ್ಟೇ 60ರ ವಸಂತಕ್ಕೆ ರೇವಣ್ಣ ಕಾಲಿರಿಸಿದ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಷಷ್ಠಿಪೂರ್ತಿ ಹಿನ್ನೆಲೆಯಲ್ಲಿ ಇಂದು ರೇವಣ್ಣ ಮತ್ತೊಮ್ಮೆ ಭವಾನಿ ರೇವಣ್ಣನವರಿಗೆ ತಾಳಿ ಕಟ್ಟುವುದರ ಮೂಲಕ ಸಂಭ್ರಮ ಹಂಚಿಕೊಂಡರು.

    ಹೀಗೆ ಮತ್ತೊಮ್ಮೆ ದಾಂಪತ್ಯಕ್ಕೆ ಕಾಲಿರಿಸಿದ ದಂಪತಿಗೆ ಆದಿಚುಂಚನಗಿರಿಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ಮಾಡಿದ್ರು. ತಂದೆ-ತಾಯಿಯ ಈ ಸುಂದರ ಕ್ಷಣಕ್ಕೆ ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಸೂರಜ್ ಅವರ ಭಾವಿ ಪತ್ನಿ ಸಾಕ್ಷಿಯಾದ್ರು. ಇವರಷ್ಟೇ ಅಲ್ಲದೇ ಕುಟುಂಬ ಸದಸ್ಯರು, ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸಿ ಶುಭಕೋರಿದ್ರು.