Tag: ಹೆಚ್ ಡಿ ರೇವಣ್ಣ

  • ಕಾಂಗ್ರೆಸ್ ನಾಯಕರಿಗೆ ಕಡಿವಾಣ ಹಾಕಲು ಬಿಜೆಪಿ ಅಸ್ತ್ರ ಪ್ರಯೋಗಿಸ್ತಾ ಜೆಡಿಎಸ್?

    ಕಾಂಗ್ರೆಸ್ ನಾಯಕರಿಗೆ ಕಡಿವಾಣ ಹಾಕಲು ಬಿಜೆಪಿ ಅಸ್ತ್ರ ಪ್ರಯೋಗಿಸ್ತಾ ಜೆಡಿಎಸ್?

    ಬೆಂಗಳೂರು: ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ ಎಂದು ಸಿಎಂ ಸೇರಿದಂತೆ ಎಲ್ಲ ದಳ-ಕೈ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಮೇಲ್ನೋಟಕ್ಕೆ ಎಲ್ಲವು ಸರಿಯಾಗಿ ನಡೆಯುತ್ತಿದೆ ಎಂದು ತೋರಿಸಲು ಸಂಪುಟದ ಸಚಿವರು ಪ್ರಯತ್ನ ಮಾಡುತ್ತಿದ್ದಾರೆ. ಎರಡು ಪಕ್ಷದೊಳಗಿನ ಆಂತರಿಕ ಕಲಹ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಮೈತ್ರಿ ಪಕ್ಷಗಳ ಶಾಸಕರು ಪರೋಕ್ಷವಾಗಿ ಒಬ್ಬರನ್ನೊಬ್ರನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರಿಗೆ ಕಡಿವಾಣ ಹಾಕಲು ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿಯ ಅಸ್ತ್ರವನ್ನು ಪ್ರಯೋಗಿಸದಂತೆ ಕಾಣುತ್ತಿದೆ.

    ಕಾಂಗ್ರೆಸ್ ನಾಯಕರು ಸಾರ್ವಜನಿಕ ಸಮಾರಂಭಗಳಲ್ಲಿ ಜೆಡಿಎಸ್ ನಾಯಕರನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತ ಸಚಿವ ಹೆಚ್.ಡಿ.ರೇವಣ್ಣ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಮಂಗಳವಾರ ಸಂಜೆ ರೇವಣ್ಣ ಬಿಜೆಪಿ ನಾಯಕರನ್ನು ಭೇಟಿಯಾಗಿ ಒಂದು ಗಂಟೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕರು ಮಾನಸಿಕವಾಗಿ ನೀಡುತ್ತಿರುವ ಕಿರುಕುಳವನ್ನು ಹಂಚಿಕೊಂಡಿದ್ದಾರೆ. ಈ ರಹಸ್ಯ ಮಾತುಕತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದ್ದರು ಎಂದು ಹೇಳಲಾಗುತ್ತಿದೆ.

    ಮಂಗಳವಾರ ಯಡಿಯೂರಪ್ಪನವರು ವಿಶ್ರಾಂತಿಯಲ್ಲಿದ್ದರು. ಹಾಗಾಗಿ ಅವರು ಯಾರನ್ನು ಭೇಟಿಯಾಗಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಬೇಸತ್ತು ರೇವಣ್ಣವರೇ ಈ ರೀತಿಯ ಸುದ್ದಿಯೊಂದನ್ನು ರಾಜಕೀಯ ಅಂಗಳದಲ್ಲಿ ಹರಿಬಿಟ್ಟರಾ ಎಂಬುವುದು ಗೊತ್ತಿಲ್ಲ. ಒಟ್ಟಿನಲ್ಲಿ ರೇವಣ್ಣ ಮಂಗಳವಾರ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ಗುಸು ಗುಸು ಚರ್ಚೆ ಆರಂಭವಾಗಿರೋದಂತು ಸತ್ಯ.

    ಒಂದು ವೇಳೆ ಭೇಟಿ ನಿಜವಾದಲ್ಲಿ ಕಾಂಗ್ರೆಸ್‍ಗೆ ರೇವಣ್ಣರ ನಡೆ ನುಂಗಲಾರದ ತುತ್ತಾಗಲಿದೆ. ಲೋಕಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್‍ಗೆ ದೊಡ್ಡ ಹೊಡೆತವೇ ಬಿದ್ದಂತಾಗುತ್ತದೆ. ಜೆಡಿಎಸ್ ತಮ್ಮ ಬೆಂಬಲವನ್ನು ಬಿಜೆಪಿ ನೀಡಿದರೆ ಆಪರೇಷನ್ ಕಮಲ ನಡೆಸುವ ಅವಶ್ಯಕತೆ ಕಮಲ ನಾಯಕರಿಗಿರಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ರಾಜಕಾರಣದ ರಿಯಲ್ ಮಹಾಭಾರತ !

    ರಾಜ್ಯ ರಾಜಕಾರಣದ ರಿಯಲ್ ಮಹಾಭಾರತ !

    -ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯುವಿನ ಉತ್ಸಾಹಕ್ಕೆ ಬ್ರೇಕ್

    ಬೆಂಗಳೂರು: ಇದು ರಾಜ್ಯ ರಾಜಕಾರಣದ ದೊಡ್ಡ ಮನೆಯ ಮಹಾಭಾರತದ ಕಥೆ. ಲೋಕಸಭೆ ಚಕ್ರವ್ಯೂಹ ಭೇದಿಲು ಮುಂದಾಗಿದ್ದ ಆಧುನಿಕ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಉತ್ಸಾಹಕ್ಕೆ ದೊಡ್ಡ ಗೌಡರು ಅಂದ್ರೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ನಿಖಿಲ್ ಸಹ ಪದೇ ಪದೇ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕ್ಷೇತ್ರದ ಪರಿಸರ ತುಂಬಾ ವಿಭಿನ್ನವಾಗಿದ್ದು, ದೋಸ್ತಿ ಪಕ್ಷಗಳೆರೆಡು ಪ್ರಬಲವಾಗಿವೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯಕ್ಕೆ ಕ್ಷೇತ್ರಕ್ಕೆ ಭೇಟಿ ನೀಡೋದನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ದೇವೇಗೌಡರು ಮೊಮ್ಮಗನಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬ ಸೂಕ್ಷ್ಮ ಗೊಂದಲಗಳು ಮೈತ್ರಿಯಲ್ಲಿದೆ. ಜೆಡಿಎಸ್ ನಲ್ಲಿಯೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸದ್ಯದ ಸಂಸದ ಶಿವರಾಮೇಗೌಡರು ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ದಿ.ಅಂಬರೀಶ್ ಅವರ ಪತ್ನಿ ಅಥವಾ ಪುತ್ರನನ್ನು ಚುನಾವಣೆ ಕಣಕ್ಕೆ ಇಳಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಸಂಸದೆ ರಮ್ಯಾ ಸಹ ಮಂಡ್ಯ ಕ್ಷೇತ್ರದ ಮೇಲೆ ಒಂದು ಕಣ್ಣೀಟ್ಟಿದ್ದಾರೆ ಎನ್ನಲಾಗುತ್ತಿದೆ.

    ದಾಯಾದಿ ಕಲಹಕ್ಕೆ ವೇದಿಕೆಯಾಗುತ್ತಾ ಮಂಡ್ಯ?
    ಈ ಹಿಂದೆ ಜೆಡಿಎಸ್ ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ವಿಧಾನಸಭಾ ಕ್ಷೇತ್ರಕ್ಕೆ ನೀಡುವ ವಿಚಾರ ಪ್ರಸ್ತಾಪವಾದಾಗ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅಸಮಾಧಾನ ಹೊರಹಾಕಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಚುನಾವಣಾ ಕಣಕ್ಕೀಳಿಯುವುದು ಬಹುತೇಕ ಖಚಿತವಾಗಿದೆ. ಒರ್ವ ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮತ್ತೋರ್ವನಿಗೆ ಕೊಡದೇ ಇದ್ರೆ ಕುಟುಂಬದಲ್ಲಿಯೇ ಭಿನ್ನಮತ ಸ್ಫೋಟವಾಗುತ್ತಾ? ಅಥವಾ ದೊಡ್ಡ ಗೌಡರ ಆದೇಶವನ್ನು ಒಪ್ಪಿಕೊಳ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ದೇವೇಗೌಡರ ಈ ಸೂಚನೆಯಿಂದಾಗಿ ರಣೋತ್ಸಾಹದಲ್ಲಿದ್ದ ನಿಖಿಲ್ ಕುಮಾರ್ ಅವರಿಗೆ ಬೇಸರ ತಂದಿರೋದು ಸತ್ಯ. ಮಂಡ್ಯದಲ್ಲಿ ಬೇರೆ ಬೇರೆ ರೀತಿಯ ರಾಜಕೀಯ ಧೃವೀಕರಣದ ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಗೌಡರು ಕಾದು ನೋಡುವ ತಂತ್ರಕ್ಕೆ ಮುಂದಾದಂತೆ ಕಾಣುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಯಶಸ್ವಿಯಾಗಲು ದೋಸ್ತಿ ಸರ್ಕಾರ ಮಾಡಿದ ತಪ್ಪುಗಳು ಪಟ್ಟಿ ಇಲ್ಲಿದೆ

    ಆಪರೇಷನ್ ಕಮಲ ಯಶಸ್ವಿಯಾಗಲು ದೋಸ್ತಿ ಸರ್ಕಾರ ಮಾಡಿದ ತಪ್ಪುಗಳು ಪಟ್ಟಿ ಇಲ್ಲಿದೆ

    ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಆಪರೇಷನ್ ಕಮಲ ತಂತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಇದರ ಪರಿಣಾಮ ಪಕ್ಷೇತರರ ಶಾಸಕರಾದ ಹೆಚ್.ನಾಗೇಶ್ ಮತ್ತು ಆರ್.ಶಂಕರ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಂಡರು. ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದುವು. ಆದರೆ ಎಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರು ನಾವು ಯಾರನ್ನು ಸಂಪರ್ಕ ಮಾಡಿಲ್ಲ. ಅವರಾಗಿಯೇ ಬಂದರೆ ಸ್ವಾಗತ ಅಂತಾನೇ ಹೇಳುತ್ತಿದ್ದರು.

    ಇಬ್ಬರು ಪಕ್ಷೇತರರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದುಕೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಎಲ್ಲಿಯೂ ಬಿಜೆಪಿ ನಾಯಕರು ನಾವೇ ಅವರನ್ನು ಬರಮಾಡಿಕೊಂಡಿದ್ದೇವೆ ಅಂತಾ ಹೇಳಿಲ್ಲ. ಆದ್ರೆ ಯಡಿಯೂರಪ್ಪ ಮೊಗದಲ್ಲಿ ಮಂದಹಾಸ ಮೂಡಿರುವುದು ಮಾತ್ರ ಸತ್ಯ. ಸರ್ಕಾರ ರಚನೆಯ ಬಳಿಕ ಸಿಎಂ ಸೇರಿದಂತೆ ಕಾಂಗ್ರೆಸ್ ಕೆಲ ನಾಯಕರು ಗೊತ್ತೋ, ಗೊತ್ತಿಲ್ಲದ ತಪ್ಪುಗಳು ಬಿಜೆಪಿಗೆ ವರವಾಯ್ತಾ ಎಂಬ ವಿಮರ್ಶೆಗಳು ಆರಂಭವಾಗಿವೆ. ಹಾಗಾದ್ರೆ ದೋಸ್ತಿ ಸರ್ಕಾರದ ತಪ್ಪುಗಳೇನು? ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು ಯಾಕೆ: ಕಾರಣ ಕೊಟ್ಟ ಪಕ್ಷೇತರರು

    ಸಿದ್ದರಾಮಯ್ಯ ಮಾಡಿದ ತಪ್ಪುಗಳು:
    ಸಮನ್ವಯ ಸಮಿತಿ ಸಭೆ ಮಾಡದೇ ಇರೋದು. ಬಹಿರಂಗವಾಗಿ ಸಿಎಂಗೆ ಪತ್ರ, ಟ್ವಿಟ್ ಮೂಲಕ ಪರೋಕ್ಷ ಟೀಕೆ. ಬಳ್ಳಾರಿ ಶಾಸಕರ ಬಂಡಾಯ ಶಮನ ಮಾಡದೇ ಇದ್ದಿದ್ದು. ತನ್ನದೇ ಶಿಷ್ಯರು ಬಂಡಾಯ ಎದ್ದಾಗಲು ಸುಮ್ಮನಿದ್ದಿದ್ದು, ರಾಜ್ಯದಲ್ಲಿ ಬಂಡಾಯ ಎದ್ದಾಗಲೆಲ್ಲಾ ದೂರ ವಿದೇಶ ಪ್ರವಾಸ ಕೈಗೊಂಡಿದ್ದು, ಮೈತ್ರಿ, ಲೋಕ ಚುನಾವಣೆವರೆಗೆ ಮಾತ್ರ ಅಂತ ಅರಂಭದಲ್ಲೆ ಶಾಂತಿವನದಲ್ಲಿ ಕೂತು ಹೇಳಿಕೆ ನೀಡಿದ್ದರು.ಗಂಭೀರವಾಗಿ ಆಪರೇಶನ್ ನಡೀತಾ ಇದ್ರು `ಡೋಂಟ್ ಕೇರ್’ ಸ್ವಭಾವ ಪ್ರದರ್ಶಿಸಿದ್ದು, ನಿಗಮ ಮಂಡಳಿ ನೇಮಕ ವಿಚಾರದಲ್ಲೂ ತನ್ನದೇ ಕೈ ಮೇಲಾಗುವಂತೆ ನೋಡಿಕೊಂಡು ಅತೃಪ್ತರ ಅಸಮಾಧಾನ ಹೆಚ್ಚಾಗುವಂತೆ ಮಾಡಿದ್ದು ಆಪರೇಷನ ಕಮಲಕ್ಕೆ ಮುಂದಾಗುವಂತೆ ಮಾಡಿತು. ಸಂಪುಟ ವಿಸ್ತರಣೆ ವೇಳೆ ತನ್ನವರಿಗೆ ಪ್ರಬಲ ಖಾತೆ ಕೊಡಿಸಿದ್ದು, ಕೊನೆ ಕ್ಷಣದವರೆಗೂ ತಮ್ಮ ಶಾಸಕರು ಕೈ ಕೊಡಲ್ಲ ಅಂತ ಅತಿಯಾದ ಆತ್ಮವಿಶ್ವಾಸ ತೋರಿಸಿದ್ದು ದೋಸ್ತಿಗೆ ಕಂಟಕವಾಗಿರುವ ಸಾಧ್ಯತೆಗಳಿವೆ. ಇದನ್ನೂ ಓದಿ: ಮೈತ್ರಿ ಸರ್ಕಾರದಲ್ಲಿನ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣವೇ?

    ಸಿಎಂ ಕುಮಾರಸ್ವಾಮಿ ಮಾಡಿದ ತಪ್ಪುಗಳು:
    ಎಲ್ಲಾ ಅಧಿಕಾರ ನನಗೆ ಮತ್ತು ನಮ್ಮ ಮನೆಯವರಿಗೆ ಎಂಬ ಪರಿಪಾಠ. ಸಚಿವ ರೇವಣ್ಣ ಎಷ್ಟೇ ತಪ್ಪು ಮಾಡಿದ್ರು ಸಹೋದರನ ಪರವಹಿಸಿದ್ದರು. ಆಪರೇಷನ್ ಕಮಲ ಆಗಲ್ಲ ಅನ್ನೋ ಅತಿಯಾದ ಕಾನ್ಫಿಡೆನ್ಸ್ ಹೊಂದಿದ್ದರು. ಶತ್ರುವಿನ ಸಾಮರ್ಥ್ಯವನ್ನ ಅರಿಯದೇ ನಿರ್ಲಕ್ಷ್ಯ ತೋರಿದ್ದರು. ಸಂಪುಟ ವಿಸ್ತರಣೆ ಮುಂದೂಡುತ್ತಲೇ ಬಂದಿದ್ದು ಮತ್ತು ದೋಸ್ತಿ ಪಕ್ಷದ ವಿರುದ್ಧದ ಕೆಲ ಹೇಳಿಕೆಗಳು ನೀಡಿದ್ದರು. ಹಲವು ಬಾರಿ ಬಹಿರಂಗವಾಗಿ ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದರು. ಇದನ್ನೂ ಓದಿ: ದೋಸ್ತಿ ಸರ್ಕಾರ ಉರುಳುತ್ತಾ? ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಏನೆಲ್ಲ ‘ಮ್ಯಾಜಿಕ್’ ನಡೆಯಬೇಕು?

    ಹೆಚ್.ಡಿ. ರೇವಣ್ಣ ಮಾಡಿದ ತಪ್ಪುಗಳು: 
    ಎಲ್ಲಾ ನಮಗೇ ಬೇಕು ಅನ್ನೋ ರೀತಿಯ ಮನೋಭಾವ. ಎಲ್ಲಾ ವಿಚಾರ ಮತ್ತು ಖಾತೆಯಲ್ಲೂ ಹಸ್ತಕ್ಷೇಪ ಮಾಡಿದ ಆರೋಪಗಳ ಜೊತೆಗೆ ಸೂಪರ್ ಸಿಎಂ ರೀತಿಯ ವರ್ತನೆ. ಕಾಂಗ್ರೆಸ್ ಶಾಸಕರಿಗೆ, ಸಚಿವರಿಗೆ ಬೆಲೆಯೇ ಕೊಡದೆ ಇದ್ದಿದ್ದು ಮತ್ತು ನಮ್ ದಾರಿ ನಮಗೆ, ನಿಮ್ ದಾರಿ ನಿಮಗೆ ಹೇಳಿಕೆ ಕೊಟ್ಟಿದ್ದು ಬಿಜೆಪಿ ವರವಾಗಿದ್ದರು ಆಗಿರಬಬುದು.

    ಡಿಕೆ ಶಿವಕುಮಾರ್ ಮಾಡಿದ ತಪ್ಪುಗಳು:
    ಅವಶ್ಯಕತೆ ಇಲ್ಲದಿದ್ದರೂ ಬೆಳಗಾವಿ ಪಾಲಿಟಿಕ್ಸ್ ಗೆ ಮೂಗು ತೂರಿಸಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಸಪೋರ್ಟ್ ಮಾಡಿ ಬೆಳಗಾವಿ ಬ್ರದರ್ಸ್ ಬಂಡಾಯಕ್ಕೆ ದಾರಿ ಮಾಡಿಕೊಟ್ಟಿದ್ದು. ಆಪರೇಷನ್ ಕಮಲವನ್ನ ಲಘುವಾಗಿ ತೆಗೆದುಕೊಂಡಿದ್ದು, ಎಂಥಾ ಪರಿಸ್ಥಿತಿ ಬಂದ್ರೂ ನಿಭಾಯಿಸುತ್ತೇನು ಅನ್ನೋ ಅತಿಯಾದ ಆತ್ಮವಿಶ್ವಾಸ ಹೊಂದಿದ್ದು ಆಪರೇಷನ್ ಕಮಲಕ್ಕೆ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ. ಬಳ್ಳಾರಿ ಉಪಚುನಾವಣೆಗೆ ಸ್ಥಳೀಯ ಶಾಸಕರ ವಿರೋಧ ಕಟ್ಟಿಕೊಂಡು ಹೊರಗಿನ ವ್ಯಕ್ತಿಗೆ ಟಿಕೆಟ್ ಕೊಡಿಸಿ, ಶಾಸಕ ನಾಗೇಂದ್ರನ ಸಹೋದರನಿಗೆ ಕಳೆದ ಎಂಪಿ ಟಿಕೆಟ್ ತಪ್ಪಿಸಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದ ಸಚಿವ ರೇವಣ್ಣ

    ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದ ಸಚಿವ ರೇವಣ್ಣ

    ಹಾಸನ: ಸಚಿವ ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಚಿವ ಹೆಚ್.ಡಿ.ರೇವಣ್ಣ, ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ. ಎಲ್ಲ ಗೊಂದಲಗಳು ಕೆಲವೇ ದಿನಗಳಲ್ಲಿ ಅಂತ್ಯವಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

    ಜನವರಿ 3 ರಿಂದ 13ರೊಳಗೆ ಎಲ್ಲವೂ ಸರಿ ಹೋಗಲಿದೆ ಅಂತಾ ನಾನೇ ಜೋತಿಷ್ಯ ನುಡಿಯುತ್ತಿದ್ದೇನೆ. ರಮೇಶ್ ಜಾರಕಿಹೊಳಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಅಸಮಾಧಾನವಿದೆ. ಎಲ್ಲಾ ಸಚಿವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ರಮೇಶಣ್ಣ ನನ್ನ ಅತ್ಮೀಯ ಗೆಳೆಯರು ಆಗಿದ್ದಾರೆ. ರಮೇಶಣ್ಣ, ನಾಗೇಂದ್ರ ಸೇರಿದಂತೆ ಎಲ್ಲರನ್ನೂ ಜೊತೆಗಿಟ್ಟುಕೊಳ್ಳುತ್ತೇವೆ. ಈ ತಿಂಗಳ 3 ರಿಂದ 13 ರಿಂದ ಎಲ್ಲಾ ಸರಿ ಹೋಗುತ್ತದೆ, ಸಮ್ಮಿಶ್ರ ಸರ್ಕಾರ ಐದು ವರ್ಷವನ್ನು ಪೂರ್ಣಗೊಳಿಸುತ್ತದೆ ಎಂದು ರೇವಣ್ಣವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.

    ಹಾಸನ ಜಿಲ್ಲೆಯ ಶಾಲಾ-ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತೆರೆಯಬೇಕು. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇಲ್ಲವಾದಲ್ಲಿ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ರದ್ದು ಮಾಡಿ, ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ನೀಡಲಿ. ಇದು ನನ್ನ ಸ್ವಂತ ಅಭಿಪ್ರಾಯ ಇದರಲ್ಲಿ ರಾಜಿಯೇ ಇಲ್ಲ ಎಂದು ಹೇಳಿದರು.

    ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ. ಶ್ರೀಮಂತರ ಮಕ್ಕಳಂತೆ ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು ಎಂಬುವುದು ನಮ್ಮ ಆಶಯ. ಈ ಬಗ್ಗೆ ಧ್ವನಿ ಎತ್ತಲು ಬುದ್ದಿ ಜೀವಿಗಳಿಗೂ ಮನವಿ ಮಾಡುತ್ತೇನೆ. ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಡೆಗಟ್ಟಲು ಸಾಧ್ಯವಿಲ್ಲ. ಕಾರಣ ಹಣವಂತರು ಶಾಲೆಗಳನ್ನು ನಡೆಸುತ್ತಿದ್ದಾರೆ. ಇಂಗ್ಲಿಷ್ ಭಾಷೆಯ ಶಿಕ್ಷಕರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಅಂತಾ ಅಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂತ್ರಿ ಪದವಿ ಉಳಿಸಿಕೊಳ್ಳಲು, ಓಲೈಕೆಗಾಗಿ ಹೊಗಳಿಕೆಗೆ- ರೇವಣ್ಣ ಹೊಗಳಿದ್ದ ಜಯಮಾಲಾ ವಿರುದ್ಧ ಮಂಜು ಕಿಡಿ

    ಮಂತ್ರಿ ಪದವಿ ಉಳಿಸಿಕೊಳ್ಳಲು, ಓಲೈಕೆಗಾಗಿ ಹೊಗಳಿಕೆಗೆ- ರೇವಣ್ಣ ಹೊಗಳಿದ್ದ ಜಯಮಾಲಾ ವಿರುದ್ಧ ಮಂಜು ಕಿಡಿ

    ಹಾಸನ: ಸಚಿವ ಹೆಚ್.ಡಿ ರೇವಣ್ಣ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೊಗಳಿದ್ದು ಕಾಂಗ್ರೆಸ್ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಪರಿಷತ್ ಸದಸ್ಯೆಯಾಗಿರುವ ಜಯಮಾಲಾ ಭಾಷಣ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಂತ್ರಿ ಪದವಿ ಉಳಿಸಿಕೊಳ್ಳುವುದಕ್ಕಾಗಿ ದೇವೇಗೌಡರನ್ನು ಓಲೈಸಿಕೊಳ್ಳಲು ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಜಯಮಾಲಾ ವಿರುದ್ಧ ನೇರವಾಗಿ ಆರೋಪ ಮಾಡಿದರು.

    ಇಂದು ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಎ. ಮಂಜು ಸಿನಿಮಾದವರು ಅವರನ್ನು ಹಾಡಿ ಹೊಗಳಿದ್ದಾರೆ. ಅದು ನಟನೆ ಅಷ್ಟೇ. ಅದು ರಿಯಾಲಿಟಿ ಅಲ್ಲ ಎಂದು ವ್ಯಂಗ್ಯವಾಡಿದರು. ಸಚಿವೆ ಜಯಮಾಲಾಗೆ ಅನುಭವದ ಕೊರತೆ ಇದೆ. ಈಗ ಮಂತ್ರಿಯಾಗಿದ್ದಾರೆ. ಅವರು ಭಾಗವಹಿಸಿದ್ದು ಪೂಜ್ಯ ಸ್ವಾಮೀಜಿಗಳಿಗೆ ಶಾಂತಿ ಪ್ರಶಸ್ತಿಯನ್ನು ನೀಡಲು. ಆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಸಾಧನೆ ಕುರಿತು ಮಾತನಾಡಬೇಕಿತ್ತು. ಈ ಪ್ರಶಸ್ತಿ ಅವರಿಗೆ ನೀಡಲಿಕ್ಕೆ ಕಾರಣವೇನು ಎನ್ನುವುದರ ಕುರಿತು ಮಾತನಾಡಬೇಕಿತ್ತು, ಅವರಿಗೆ ಶುಭ ಕೋರಬೇಕಿತ್ತು. ಆದರೆ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪನವರನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳ ಹೇಳಿಕೆಯಿಂದ ಹೆದರಿ ಈ ರೀತಿ ಗೌಡರ ಕುಟುಂಬಕ್ಕೆ ಹತ್ತಿರವಾಗಲು ಈ ರೀತಿ ಮಾತನಾಡಿದ್ದಾರೆ ವಿನಃ ಪಕ್ಷದ ಹೇಳಿಕೆ ಅಲ್ಲ ಎಂದರು. ಇದನ್ನೂ ಓದಿ: ಸಚಿವ ರೇವಣ್ಣರನ್ನ ಹೊಗಳಿ, ಸ್ವಪಕ್ಷೀಯರಿಗೆ ಸಚಿವೆ ಜಯಾಮಾಲಾ ಟಾಂಗ್

    ಪಕ್ಷವನ್ನು ಕಡೆಗಣಿಸಿ ತಮ್ಮ ಮಂತ್ರಿ ಪದವಿ ಉಳಿಸಿಕೊಳ್ಳಲು ಮತ್ತು ಯಾರನ್ನೋ ಓಲೈಸಿಕೊಳ್ಳಲು ಈ ಹೇಳಿಕೆ ಕೊಟ್ಟಿದ್ದಾರೆ. ಇದು ಮಹಾ ತಪ್ಪು ಎಂದು ಅಸಮಧಾನ ವ್ಯಕ್ತಪಡಿಸಿದರು. ನನಗೂ ಕೂಡ ಜಯಮಾಲಾ ಹತ್ತಿರದವರೇ ಆದರೆ ಅವರಿಗೆ ಪಕ್ಷದ ಕುರಿತು ಕಾಳಜಿ ಇಲ್ಲವೆನ್ನುವುದು ಇಲ್ಲಿ ಸಾಬೀತಾಗಿದೆ. ಕೆಪಿಸಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ದೂರು ನೀಡುತ್ತೇನೆ. ಈ ಹಿಂದೆ ಸಚಿವ ಮಹದೇವಪ್ಪನವರ ವಿರುದ್ಧವೂ ಕೆಪಿಸಿಸಿಗೆ ದೂರು ನೀಡಿದ್ದೆ. ಜಯಮಾಲಾ ವಿಚಾರವೂ ಹೇಳುತ್ತೇನೆ ಎಂದು ತಿಳಿಸಿದರು.

    ಈಗ ಜಯಮಾಲಾ ಹೇಳಿರುವುದು ಅವರ ವೈಯುಕ್ತಿಕ ವಿಚಾರ, ಹಾಸನ ಜಿಲ್ಲೆಯಲ್ಲಿ ಮಾಜಿ ಪ್ರಧಾನಿಯನ್ನು ಸೋಲಿಸಿದ್ದಾರೆ. ರೇವಣ್ಣ ಅವರನ್ನು ಸೋಲಿಸಿದ್ದಾರೆ, ನನ್ನನ್ನೂ ಸೋಲಿಸಿದ್ದಾರೆ. ಆದರೆ ಜಯಮಾಲಾ ರವರು ಒಂದೂ ಚುನಾವಣೆಗೆ ನಿಲ್ಲದೇ ಈ ರೀತಿ ಹೇಳಿರುವುದು ಅವರಿಗೆ ಅನುಭವದ ಕೊರತೆ ಇದೆ ಎನ್ನವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

    ಉಪಚುನಾವಣೆಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಮಂಡ್ಯ ಎಲ್ಲಿಯೂ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಹೇಳಿದರು. ಕಾಂಗ್ರೆಸ್‍ನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ, ನಮ್ಮ ಅಸ್ತಿತ್ವಕ್ಕಾಗಿ ನಮ್ಮ ಕೂಗು ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಶಿಪ್ ಹಾಸನಕ್ಕೆ ಹೋಗಲು ಬಿಡಲ್ಲ- ಸೂಪರ್ ಸಿಎಂಗೆ ಸತೀಶ್ ಜಾರಕಿಹೋಳಿ ಸೆಡ್ಡು

    ಕೆಶಿಪ್ ಹಾಸನಕ್ಕೆ ಹೋಗಲು ಬಿಡಲ್ಲ- ಸೂಪರ್ ಸಿಎಂಗೆ ಸತೀಶ್ ಜಾರಕಿಹೋಳಿ ಸೆಡ್ಡು

    ಬೆಳಗಾವಿ: ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿ ಹಾಸನಕ್ಕೆ ಹೋಗಲು ನಾನು ಬಿಡುವುದಿಲ್ಲ. ನಮ್ಮಲ್ಲೇ ಹಲವು ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ ಎಲ್ಲ ವಿಚಾರಗಳನ್ನು ತಿಳಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಸೂಪರ್ ಸಿಎಂ ಹೆಚ್.ಡಿ.ರೇವಣ್ಣರಿಗೆ ಸೆಡ್ಡು ಹೊಡೆದಿದ್ದಾರೆ.

    ಕೇವಲ ಕಚೇರಿ ಸ್ಥಳಾಂತರದಿಂದ ಉತ್ತರ ಕರ್ನಾಟಕಕ್ಕೆ ಏನು ಅನ್ಯಾಯ ಆಗೋದಿಲ್ಲ. ಸ್ಥಳೀಯ ಶಾಸಕನಿಗೆ ಯಾವುದೇ ಮಾಹಿತಿ ನೀಡದೇ ಕಚೇರಿ ಸ್ಥಳಾಂತರಿಸೋದು ತಪ್ಪು. ನಮ್ಮಲ್ಲಿ ಇನ್ನು ಕೆಲಸಗಳು ನಡೆಯುತ್ತಿದ್ದು, ಹಾಗಾಗಿ ಕಚೇರಿ ಸ್ಥಳಾಂತರಿಸಲು ಬಿಡಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಅಭಿಪ್ರಾಯ ಯಾಕೆ ಕೇಳಿಲ್ಲ ಅಂತಾ ಸಿಎಂ ಹಾಗೂ ಮಂತ್ರಿಗಳಿಗೆ ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದರು.

    ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಹೊಂದಾಣಿಕೆ ಅಸಾಧ್ಯ. ಮೈತ್ರಿ ಕೇವಲ ಲೋಕಸಭೆಗೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಲೋಕಸಭೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ಇಲ್ಲಿಂದ ಯಾರು ಸ್ಪರ್ಧೆ ಮಾಡಿದರೂ ನಾನು ಬೆಂಬಲ ನೀಡುತ್ತೇನೆ. ಆದ್ರೂ ನನ್ನ ಹೆಸರು ಕೇಳಿ ಬರುತ್ತಿದ್ದು, ಅಭ್ಯರ್ಥಿ ಯಾರೆಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದ್ರು.

     

    ಹಾಸನಕ್ಕೆ ಶಿಫ್ಟ್ ಆಗುವ ಕಚೇರಿಗಳು:
    ಬೆಳಗಾವಿಯಲ್ಲಿರುವ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಜುಲೈ 27, 2018ರಂದು ಆದೇಶ ಹೊರಡಿಸಿತ್ತು. ಬೆಳಗಾವಿ ನಗರದಲ್ಲಿರುವ ಕೆಶಿಪ್ ವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪ ವಿಭಾಗೀಯ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯನ್ನು ಹೊಳೆನರಸೀಪುರಕ್ಕೆ ಶಿಫ್ಟ್ ಮಾಡಲು ಹಾಗೂ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಅಲ್ಲದೆ ಶಿವಮೊಗ್ಗ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿಯನ್ನು ಅರಸೀಕೆರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು.

    ಜಿಲ್ಲೆಯಿಂದ ಕೆಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ,ರಾಜ್ಯ ಹೆದ್ದಾರಿ ಯೋಜನೆಯನ್ನ ಬೆಳಗಾವಿಯಂದ ಸ್ಥಳಾಂತರ ಮಾಡಿರುವುದಕ್ಕೆ ಸೂಪರ್ ಸಿಎಂ ರೇವಣ್ಣ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಹುದ್ದೆಗಳ ಸಮೇತವಾಗಿ ಈ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ಆದೇಶ ಹೊರ ಬಿದ್ದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನಮ್ ಸರ್ಕಾರನಾ ಏಕೆ ಟೀಕಿಸ್ತೀರಾ – ಈಶ್ವರಪ್ಪ ಜೊತೆ ರೇವಣ್ಣ ಶಿಷ್ಯರ ತಗಾದೆ

    ನಮ್ ಸರ್ಕಾರನಾ ಏಕೆ ಟೀಕಿಸ್ತೀರಾ – ಈಶ್ವರಪ್ಪ ಜೊತೆ ರೇವಣ್ಣ ಶಿಷ್ಯರ ತಗಾದೆ

    – ಏನು ಕುಡಿದಿದ್ದೀಯಾ ಸುಮ್ನಿರು ಎಂದ ಈಶ್ವರಪ್ಪ

    ಬೆಂಗಳೂರು: ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೊಠಡಿ ಮುಂದೆ ಮೆಗಾ ಡ್ರಾಮಾ ನಡೆದಿದೆ. ಸಚಿವ ರೇವಣ್ಣರನ್ನ ಭೇಟಿ ಮಾಡಲು ಅವರ ಕೊಠಡಿ ಬಳಿ ಮಾಜಿ ಡಿಸಿಎಂ ಈಶ್ವರಪ್ಪ ಹೋಗಿದ್ದರು. ಆದರೆ ಅಲ್ಲಿ ಸಚಿವರು ಇರಲಿಲ್ಲ. ವಾಪಸ್ ಆಗುತ್ತಿದ್ದ ವೇಳೆ ಸಚಿವ ರೇವಣ್ಣರ ಶಿಷ್ಯರು ನಮ್ಮ ಸರ್ಕಾರವನ್ನು ಏಕೆ ಟೀಕಿಸುತ್ತೀರಿ ಎಂದು ಈಶ್ವರಪ್ಪ ಜೊತೆ ತಗಾದೆ ತೆಗೆದರು.

    ಈಶ್ವರಪ್ಪನವರು ಮಾಧ್ಯಮದವರ ಜತೆ ಮಾತನಾಡುವಾಗ ರೇವಣ್ಣ ಶಿಷ್ಯರು ತಗಾದೆ ತೆಗೆಯಲು ಆರಂಭಿಸಿದರು. ಜೆಡಿಎಸ್ ಸರ್ಕಾರವನ್ನ ಏಕೆ ಟೀಕೆ ಮಾಡ್ತಿರಾ ಅಂತಾ ಪ್ರಶ್ನೆ ಮಾಡಿದ್ರು. ಬಿಜೆಪಿ ಸರ್ಕಾರವಿದ್ದಾಗ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ನೋಡಿದ್ದೇವೆ. ಅಂದು ನೀವು ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಹೇಳಿ ಎಂದು ಕೇಳಿದರು. ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ, ಏನು ಕುಡಿದ್ದೀಯಾ…ಮುಚ್ಕೊಂಡು ಇರು ಅಂತಾ ಹೇಳಿ ಬಿಸಿ ಮುಟ್ಟಿಸಿದರು.

    ಸಚಿವ ರೇವಣ್ಣರಿಗೆ ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ನೀಡಿದೆ. ತಮ್ಮ ಇಲಾಖೆಯ ಕೆಲಸಗಳನ್ನು ನೋಡುವುದು ಬಿಟ್ಟು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಸಚಿವರ ಈ ಹಸ್ತಕ್ಷೇಪ ತಪ್ಪು ಎಂದು ಹೇಳುತ್ತಿದ್ದೇನೆ. ಈಶ್ವರಪ್ಪರ ಅಥವಾ ಯಡಿಯೂರಪ್ಪರ ಬಗೆ ಮಾತನಾಡುವ ಹಕ್ಕು ರೇವಣ್ಣರಿಗಿಲ್ಲ ಎಂದು ಗುಡುಗಿದರು.

    ನಿನ್ನೆಯವರೆಗೂ ಉದ್ಯೋಗ ಇಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕುಳಿತಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯರನವರು ಕಾಂಗ್ರೆಸ್ ನಿಂದ ಹೊರ ಹಾಕಿದಾಗ ಉದ್ಯೋಗವಿಲ್ಲದೇ ಕುಳಿತುಕೊಂಡಿದ್ದರು. ಇಂದು ರಾಜ್ಯಾಧ್ಯಕ್ಷರಾದ ಕೂಡಲೇ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಗ್ಗೆ ವಿಶ್ವನಾಥ್ ಹಗುರವಾಗಿ ಮಾತನಾಡಬಾರು ಎಂದು ಈಶ್ವರಪ್ಪ ಎಚ್ಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=-jOV2CgFzN4

  • ದೋಸ್ತಿ ಸರ್ಕಾರದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು!

    ದೋಸ್ತಿ ಸರ್ಕಾರದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು!

    -ನಮ್ಮ ಮಾತಿಗೆ ಬೆಲೆ ಇಲ್ವಾ? ಕಾಂಗ್ರೆಸ್ ಶಾಸಕರ ಅಸಮಾಧಾನ?

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರು ಮತ್ತು ನಾಯಕರು ನಮ್ಮಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಶಾಸಕರು ಪಕ್ಷದ ಮುಖಂಡರ ಮುಂದೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ.ರೇವಣ್ಣ ಅವರ ರಾಜಕೀಯ ಲೆಕ್ಕಾಚಾರದ ವಿರುದ್ಧ ಕಾಂಗ್ರೆಸ್ ಶಾಸಕರು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಎದುರು ದೂರಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.

    ಯಾಕೆ ಈ ಮುನಿಸು?:
    ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ನ ಸಚಿವರು, ಶಾಸಕರು ಹಾಗೂ ಸಂಸದರು ಸಿದ್ದರಾಮಯ್ಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರಂತೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯರನ್ನ ವರ್ಗಾಯಿಸಿ ಅವರ ಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಅವರ ಆಪ್ತ ಕರಿಗೌಡರನ್ನ ನೇಮಿಸಲಾಗಿದೆ. ಸಿಎಂ ತಮ್ಮ ಆಪ್ತ ಕರಿಗೌಡರಿಗೆ ಅವಕಾಶ ಕಲ್ಪಿಸಲು ಪಾಲಯ್ಯರನ್ನ ವರ್ಗಾವಣೆ ಮಾಡಲಾಗಿದೆ ಎಂದು ಸಂಸದ ವೀರಪ್ಪ ಮೊಯ್ಲಿ ಹಾಗೂ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಇನ್ನೊಂದೆಡೆ ಕೆಎಎಸ್ ನಿಂದ ಐಎಎಸ್ ಗೆ ಇತ್ತೀಚೆಗಷ್ಟೆ ಪದೋನ್ನತಿ ಹೊಂದಿದ ಕರಿ ಗೌಡರನ್ನು ಅರ್ಹತೆ ಮೀರಿ ಮುಖ್ಯಮಂತ್ರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಇತ್ತ ಕಾಂಗ್ರೆಸ್ ಸಚಿವರೊಬ್ಬರು ತಮ್ಮ ಇಲಾಖೆಗೆ ತಾವು ಹೇಳಿದ ಅಧಿಕಾರಿಯನ್ನು ನೇಮಿಸಿಲ್ಲ ಅಂತಾ ಸಿಟ್ಟು ಮಾಡಿಕೊಂಡಿದ್ದಾರಂತೆ. ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತರನ್ನಾಗಿ ಸತೀಶ್ ಅವರನ್ನು ನೇಮಕ ಮಾಡಿದ್ದರಿಂದ ತಾವು ಹೇಳಿದವರನ್ನು ನೇಮಿಸಿಲ್ಲ ಎಂದು ಸಚಿವ ಯು.ಟಿ.ಖಾದರ್ ಕೂಡ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.

    ಅಧಿಕಾರಿಗಳ ವರ್ಗಾವಣೆಯ ವಿಷಯದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಸಲಹೆ ಪಡೆಯದೇ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದೇ ವಿಷಯ ದೋಸ್ತಿ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ದೋಸ್ತಿ ಕುಸ್ತಿಗೆ ವೇದಿಕೆ ಸಿದ್ಧವಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

  • ಸೂಪರ್ ಸಿಎಂ ಹೊಡೆತಕ್ಕೆ ಡಿಸಿಎಂ ಶಾಕ್

    ಸೂಪರ್ ಸಿಎಂ ಹೊಡೆತಕ್ಕೆ ಡಿಸಿಎಂ ಶಾಕ್

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಅಂತಾ ಕರೆಸಿಕೊಳ್ಳವ ಎಚ್.ಡಿ.ರೇವಣ್ಣರ ರಾಜಕೀಯ ಲೆಕ್ಕಾಚಾರಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೇ ಶಾಕ್‍ಗೆ ಒಳಗಾಗಿದ್ದಾರಂತೆ. ಪರಮೇಶ್ವರ್ ಖಾತೆಯ ದೊಡ್ಡ ಯೋಜನೆಯೊಂದನ್ನು ಹೆಚ್.ಡಿ.ರೇವಣ್ಣ ಹೈಜಾಕ್ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

    ಬೆಂಗಳೂರು ಎಲಿವೇಟೆಡ್ ರಿಂಗ್ ರೋಡ್ ಎಂಬ ಮಹತ್ವದ ಯೋಜನೆಗೆ ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ 16 ಸಾವಿರ ಕೋಟಿ ಮೀಸಲಿಟ್ಟಿದ್ದರು. ಈ ಮಹತ್ವದ ಯೋಜನೆ ಡಿಸಿಎಂ ಪರಮೇಶ್ವರ್ ಹೊಂದಿರುವ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಎಚ್.ಡಿ.ರೇವಣ್ಣ ಅವರು ತಮ್ಮ ಪ್ರಭಾವ ಬಳಸಿ ಬೆಂಗಳೂರು ನಗರಾಭಿವೃದ್ದಿ ಇಲಾಖೆ ವ್ಯಾಪ್ತಿಯ ಎಲಿವೇಟೆಡ್ ರಿಂಗ್ ರೋಡ್ ಲೋಕೋಪಯೋಗಿ ಇಲಾಖೆ ಅಧೀನಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರೇವಣ್ಣರ ನಡೆಗೆ ಸಿಎಂ ಸಮ್ಮುಖದಲ್ಲೆ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದುಬಂದಿದೆ.

    ರೇವಣ್ಣರ ವಿರುದ್ಧ ಪರಮೇಶ್ವರ್ ಅಸಮಾಧಾನ ಹೊರ ಹಾಕಿದರೂ ಸಿಎಂ ಮಾತ್ರ ಸೈಲಂಟ್ ಆಗಿದ್ದಾರೆ ಎನ್ನಲಾಗುತ್ತಿದೆ.

  • ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ: ಪಬ್ಲಿಕ್ ಟಿವಿ ವರದಿಗೆ ರೇವಣ್ಣ ಕೆಂಡಾಮಂಡಲ

    ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ: ಪಬ್ಲಿಕ್ ಟಿವಿ ವರದಿಗೆ ರೇವಣ್ಣ ಕೆಂಡಾಮಂಡಲ

    ಬೆಂಗಳೂರು: ಇಂದು ಬೆಳಗ್ಗೆ ನಿಮ್ಮ ಪಬ್ಲಿಕ್ ಟಿವಿ ಬಿತ್ತರಿಸಿದ್ದ ವರದಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೋಪಗೊಂಡಿದ್ದಾರೆ.

    ವಾಸ್ತು ಪ್ರಕಾರದಲ್ಲಿ ಕುಮಾರಕೃಪಾ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಅನಗತ್ಯ ನೀರು ರಸ್ತೆಗೆ ಹರಿಯುವಂತೆ ಮಾಡಲಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ವರದಿ ಮಾಡಿದ್ದಕ್ಕೆ ಅದನ್ನೆಲ್ಲಾ ಕೇಳೊಕೆ ನೀವ್ಯಾರೋ? ನಾನು ನಿಮಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ನನ್ನ ಮತ ನೀಡಿ ಬಂದ ಜನರಿಗೆ ಉತ್ತರ ನೀಡುತ್ತೇನೆ. ಕೆಲ ಪತ್ರಿಕೆ ನನ್ನ ಬಗ್ಗೆ ಬರೆದರೂ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಬ್ಲಿಕ್ ಟಿವಿ ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

    ಮಳೆಯಾದರೆ ಕುಮಾರಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.

    ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

    ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ಕಟ್ಟಡವನ್ನು ಹೆಚ್.ಡಿ.ರೇವಣ್ಣರಿಗೆ ನೀಡಲಾಗಿದೆ. ಸದ್ಯ ಆಷಾಢ ಮಾಸ ಆಗಿರೋದ್ರಿಂದ ಕಟ್ಟಡಕ್ಕೆ ಪ್ರವೇಶ ನೀಡಿಲ್ಲ. ಆಷಾಢ ಕಳೆಯುತ್ತಿದ್ದಂತೆ ಶ್ರಾವಣ ಮಾಸದ ಆರಂಭದಲ್ಲಿ ಸಚಿವರು ಕುಮಾರಕೃಪಾಕ್ಕೆ ಪ್ರವೇಶಿಸಲಿದ್ದಾರೆ.

    ಸಚಿವ ರೇವಣ್ಣರಿಗೆ ಪಬ್ಲಿಕ್ ಟಿವಿ ಪ್ರಶ್ನಾವಳಿ:
    1. ನೀವು ಸರ್ಕಾರಿ ದುಡ್ಡಲ್ಲಿ ವಾಸ್ತು ಪ್ರಕಾರ ಮನೆ ನವೀಕರಣ ಮಾಡುತ್ತಿಲ್ವಾ?
    2. ಚರಂಡಿ ನೀರು ರಸ್ತೆಗೆ ಬಿಟ್ಟು ಜನರಿಗೆ ಕಿರಿಕಿರಿ ಮಾಡುತ್ತಿಲ್ವಾ?
    3. ಪಬ್ಲಿಕ್ ಟಿವಿ ನಿಮ್ಮ ಮೇಲೆ ಸುಖಾಸುಮ್ಮನೆ ವರದಿ ಮಾಡಿಲ್ಲ. ದೃಶ್ಯ ಸಾಕ್ಷಿ ಸಮೇತ ನಿಮ್ಮ ಮುಂದಿಟ್ಟಿದ್ದು ಸುಳ್ಳಾ?
    4. ನೀವು ಸಚಿವರಾದ ಮಾತ್ರಕ್ಕೆ ಪ್ರಶ್ನಾತೀತರೇ?