Tag: ಹೆಚ್ ಡಿ ರೇವಣ್ಣ

  • ಬಂಧಿಸಿದ್ರೆ ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ: ರೇವಣ್ಣ ವ್ಯಂಗ್ಯ

    ಬಂಧಿಸಿದ್ರೆ ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ: ರೇವಣ್ಣ ವ್ಯಂಗ್ಯ

    ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟನಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರೇವಣ್ಣ ಆಕ್ರೋಶ ಹೊರಹಾಕಿದ್ರು.

    ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದೆವು. ಯೋಗ ಮಾಡಿ, ಕ್ಲಾಪ್ ಮಾಡಿ ಅಂದ್ರು ಮಾಡಿದ್ದೀವಿ. ಆದರೆ ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎಂದು ಆಗ್ರಹಿಸಿದರು.

    ರಾಜ್ಯದ ಜನರು ಸಿಎಂ ಫಂಡ್ ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದು ಕಿಡಿಕಾರಿದರು.

    ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದಾರೆ. ದಯಮಾಡಿ ಸಿಎಂ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿದ ರೇವಣ್ಣ, ಸರ್ಕಾರದ ನಡೆ ಬಗ್ಗೆ ಗರಂ ಆದರು.

  • ರೇವಣ್ಣ ಕೆಲಸ ಆಗ್ತಿವೆ, ನಮ್ಮ ಕೆಲಸ ಆಗ್ತಿಲ್ಲ: ಜೆಡಿಎಸ್ ಶಾಸಕರ ಟಾಂಗ್

    ರೇವಣ್ಣ ಕೆಲಸ ಆಗ್ತಿವೆ, ನಮ್ಮ ಕೆಲಸ ಆಗ್ತಿಲ್ಲ: ಜೆಡಿಎಸ್ ಶಾಸಕರ ಟಾಂಗ್

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಯಾವ ಸರ್ಕಾರ ಬಂದರೂ ಹೈಲೈಟ್ ಆಗ್ತಾ ಇರ್ತಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲೂ ರೇವಣ್ಣ ಕೆಲಸಗಳು ಆಗ್ತಿದ್ದವಂತೆ. ಈಗ ಯಡಿಯೂರಪ್ಪ ಸರ್ಕಾರದಲ್ಲೂ ಕೆಲಸಗಳು ಆಗ್ತಿವೆ ಅನ್ನೋ ಚರ್ಚೆ ಇವತ್ತು ನಡೆಯಿತು. ಈ ಮಾತನ್ನ ಹೇಳಿದ್ದು ಬೇರೆ ಯಾರು ಅಲ್ಲ, ಜೆಡಿಎಸ್ ಶಾಸಕರೇ ಹೀಗೆ ಹೇಳಿದ್ದು ವಿಶೇಷ.

    ಅಂದಹಾಗೆ ವಿಧಾನಸಭೆಯ ಸಭಾಂಗಣದಲ್ಲಿ ಇವತ್ತು ಮಾಧ್ಯಮ ಗ್ಯಾಲರಿ ಮುಂದೆ ಹೆಚ್.ಡಿ.ರೇವಣ್ಣ ಬಂದು ನಿಂತು ಮಾತಾಡುತ್ತಿದ್ದರು. ಆಗ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಪುಟ್ಟರಾಜು, ಹೆಚ್.ಕೆ.ಕುಮಾರಸ್ವಾಮಿ ಆಗಮಿಸಿದರು. ಇವತ್ತು ಯಡಿಯೂರಪ್ಪ ರೇವಣ್ಣನವರನ್ನ ಕರೆದು ಮಾತಾಡಿಸಿದ್ದಾರೆ, ಅವರ ಕೆಲಸ ಆಗ್ತಿವೆ ಬಿಡಿ ಅಂದ್ರು ಶಿವಲಿಂಗೇಗೌಡ. ಆಗ ಅಂಯ್ಯೋ ಸುಮ್ನೆ ಇರಣ್ಣ, ನಮ್ ಕೆಲಸಗಳು ಆಗ್ತಿಲ್ಲ ಅಂತಾ ರೇವಣ್ಣ ನಕ್ಕರು. ಆಗ ತಕ್ಷಣ ರಿಯಾಕ್ಟ್ ಮಾಡಿದ ಪುಟ್ಟರಾಜು, ಅಣ್ಣ ಕೊಡಣ್ಣ ಯಾವ ಕೆಲಸ ಆಗಿಲ್ಲ, ನಾನೇ ಸಿಎಂ ಹತ್ತಿರ ಹೋಗಿ ಸಹಿ ಮಾಡಿಸಿಕೊಂಡು ಬರ್ತೀನಿ ಅಂತಾ ಕೇಳಿದರು.

    ಇನ್ನು ಇದೇ ವೇಳೆ ಹೆಚ್.ಕೆ.ಕುಮಾರಸ್ವಾಮಿ ಅಯ್ಯೋ ಸುಮ್ನಿರಿ, ಅವರ ಕೆಲಸ ಚೆನ್ನಾಗಿಯೇ ಆಗ್ತಿವೆ. ನಮ್ ಕೆಲಸ ಆಗ್ತಿಲ್ಲ. ಆ ಸರ್ಕಾರದಲ್ಲೂ ಆಗ್ಲಿಲ್ಲ, ಈಗಲೂ ಆಗ್ತಿಲ್ಲ. ಎಷ್ಟು ಕೆಲಸಗಳು ಹಂಗೆ ಇವೆ ಅಂತಾ ಗೊಣಗಿಕೊಂಡು ಹೋದರು. ಇದರ ಬೆನ್ನಲ್ಲೇ ಅಯ್ಯೋ ಬಾರಣ್ಣ ಸುಮ್ನೆ ಮಾತೇಕೆ ಅಂತಾ ಶಿವಲಿಂಗೇಗೌಡರನ್ನ ಕರೆದುಕೊಂಡು ಪುಟ್ಟರಾಜು ಹೊರನಡೆದ್ರು. ಕಡೆಗೆ ಇದ್ದ ರೇವಣ್ಣ ಅಯ್ಯೋ ಸುಮ್ನಿರಿ ಅವರು ಹಂಗೆ ಹೇಳ್ತಾರೆ ಅಂತಾ ಸ್ಮೈಲ್ ಕೊಟ್ಟು, ತಮ್ಮ ಸೀಟಿಗೆ ಹೋದರು.

  • ಗೃಹಮಂತ್ರಿಗಳೇ ಪೊಲೀಸ್ರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ: ರೇವಣ್ಣ

    ಗೃಹಮಂತ್ರಿಗಳೇ ಪೊಲೀಸ್ರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ: ರೇವಣ್ಣ

    – ದೊರೆಸ್ವಾಮಿಯವರಲ್ಲಿ ಯತ್ನಾಳ್ ಕ್ಷಮೆ ಕೇಳಬೇಕು

    ಹಾಸನ: ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೈತರು 700 ಎಕರೆ ಜಮೀನು ಕೊಟ್ಟಿದ್ದಾರೆ. ಇದರಿಂದ ಸುಮಾರು 12 ಸಾವಿರ ನಿವೇಶನ ಆಗಲಿದೆ. ಜನರಿಗೂ ಕೂಡ ಕಡಿಮೆ ದರಕ್ಕೆ ಸೈಟ್ ಸಿಗುತ್ತೆ. ಜಮೀನು ಕೊಟ್ಟ ರೈತರಿಗೂ ಶೇ.50ರಷ್ಟು ಹಣ ದೊರೆಯಲಿದೆ. ಆದರೆ ಹಾಸನದಲ್ಲಿ ಹೌಸಿಂಗ್ ಬೋರ್ಡ್, ಪ್ರಾಧಿಕಾರಗಳಿಂದ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದರು.

    ಖಾಸಗಿಯವರ ಸೈಟ್ ದಂಧೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಈಗ ಪೊಲೀಸರು ಕೂಡ ಸೈಟ್ ಮಾಡಲು ಹೊರಟಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ರೇವಣ್ಣ ಗರಂ ಆಗಿದ್ದಾರೆ.

    ಈ ಬಗ್ಗೆ ಡಿಸಿಯವರ ಗಮನಕ್ಕೆ ತಂದಿದ್ದೇನೆ. ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನೇನಾದರೂ ಸಚಿವನಾಗಿದ್ರೆ ಅವನನ್ನು ಒದ್ದು ಒಳಗೆ ಹಾಕಿಸುತ್ತಿದ್ದೆ. ಪಿಡಿಓಗಳು ಕೂಡ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದ್ರು ನಿರಾಪೇಕ್ಷಣಾ ಪತ್ರ(ಎನ್‍ಓಸಿ) ಕೊಡ್ತಿದ್ದಾರೆ. ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿದ್ದು, ಹಾಸನ ನಗರ ನಾಶ ಆಗುತ್ತಿದೆ. ಆದರೆ ಹೇಳೋರು ಕೇಳೋರು ಯಾರೂ ಇಲ್ಲ. ರೌಡಿಗಳು ಚಾಕು ತೋರಿಸಿ ಹೆದರಿಸುತ್ತಿದ್ದಾರೆ. ಸರ್ಕಾರ ಖಾಸಗಿಯವರ ಜೊತೆ ಶಾಮೀಲಾದಂತೆ ಕಾಣುತ್ತಿದೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.

    ಯತ್ನಾಳ್ ಕ್ಷಮೆ ಕೇಳಬೇಕು:
    ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಮಾತನಾಡಿದ ಬಿಜೆಪಿ ಸಚಿವ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೊರೆಸ್ವಾಮಿ ಪಾಕ್ ಏಜೆಂಟ್, ದೇಶದ್ರೋಹದ ಪೋಸ್ಟ್ ಹಾಕಿದ್ರೆ ಬೀಳುತ್ತೆ ಗುಂಡೇಟು: ಯತ್ನಾಳ್ ವಾರ್ನಿಂಗ್

    ದೊರೆಸ್ವಾಮಿ ಬಗ್ಗೆ ಅತೀ ಹೆಚ್ಚಿನ ಗೌರವ ತೋರಿಸಬೇಕು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಎಲ್ಲಿಯೇ ಅನ್ಯಾಯ ಆದರೂ ಹೋರಾಡುತ್ತಾರೆ. ಯತ್ನಾಳ್ ಬಗ್ಗೆ ಗೌರವ ಇದೆ. ಅವರ ಬಾಯಲ್ಲಿ ಈ ರೀತಿ ಮಾತು ಬರಬಾರದಿತ್ತು. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಯುವಕರಿಗೆ ದಾರಿದೀಪವಾಗಿರುವ ದೊರೆಸ್ವಾಮಿಯನ್ನು ನಿಂದಿಸಿದ ಯತ್ನಾಳ್‍ರನ್ನು ಜೈಲಿಗೆ ಹಾಕಿ – ಜಾಲತಾಣಗಳಲ್ಲಿ ಪೋಸ್ಟ್

  • ದೇವೇಗೌಡ್ರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ: ರೇವಣ್ಣ

    ದೇವೇಗೌಡ್ರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ: ರೇವಣ್ಣ

    – ಹೆಚ್‍ಡಿಡಿ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ

    ಹಾಸನ: ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನ ಹಾಸನದಲ್ಲಿ ತಡೆ ಹಿಡಿದಿದ್ದು ಇದನ್ನು ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಜಿಲ್ಲೆಯ ಎಲ್ಲಾ ಶಾಸಕರು ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ, ಜಿಲ್ಲೆಯ ಎಲ್ಲಾ ಶಾಸಕರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

    ಯಡಿಯೂರಪ್ಪ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇವೇಗೌಡರು ವ್ಯಾಸಂಗ ಮಾಡಿದ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಿದ್ದಾರೆ. ಈ ಮೂಲಕ ದೇವೇಗೌಡರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಮುಂದಾಗಿದೆ. ಅಷ್ಟೇ ಅಲ್ಲದೇ ರಾಜ್ಯದ 33 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದು ಕಾಲೇಜು ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಮಂತ್ರಿ ಮಂಡಲ ರಚಿಸಲು ಹೋಗಿ ಈ ಸರ್ಕಾರ ಪಾಲಿಟೆಕ್ನಿಕ್ ಕಾಲೇಜು ಮುಚ್ಚುತ್ತಿದೆ. ಯಡಿಯೂರಪ್ಪರವರಿಗೆ ಶಿವಮೊಗ್ಗದಲ್ಲಿ ಕಾಲೇಜು ನಿರ್ಮಿಸಿದ ದೊರೆಸ್ವಾಮಿ ಕೈಯಲ್ಲಿ ಕಾಲೇಜು ಆಡಳಿತವಿದೆ. ದೇವೇಗೌಡರು ಸಿಎಂ ಆಗಿದ್ದಾಗ ತಲೆ ಕೆರೆದುಕೊಂಡು ಬಂದು ನಿಂತ್ಕೊಳ್ತಿದ್ದ ದೊರೆಸ್ವಾಮಿಗೆ, ಸಿಎಂ ಪಾಲಿಟೆಕ್ನಿಕ್ ಕಾಲೇಜು ಬಳುವಳಿ ಕೊಡ್ತಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

    ಇದೇ ವೇಳೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವೇಳೆ ಅಡ್ಡಿಪಡಿಸಿದ್ರೆ ಶಾಸಕರನ್ನ ಅಮಾನತು ಮಾಡಲು ಸರ್ಕಾರ ಮುಂದಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಅಮಾನತು ಮಾಡಲಿ ನೋಡೋಣ. ಅವರಿಗೆ ಹೆದರಿಕೆ ಇದೆ. ಎಮರ್ಜೆನ್ಸಿ ಇದೆ ಅದಕ್ಕೆ ಹಾಗೆ ಮಾಡ್ತಿದ್ದಾರೆ. ಆದರೆ ನಾವು ಹೋರಾಟ ಮಾಡ್ತೀವಿ ಎಂದು ಸವಾಲು ಹಾಕಿದ್ದಾರೆ.

  • ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ಬೆಂಗಳೂರು: ಲೋಕಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್ ದಿನೇ ದಿನೇ ಮಂಕಾಗುತ್ತಿದೆ. ಪಕ್ಷದ ನಾಯಕರು ಆ್ಯಕ್ಟೀವ್ ಆಗಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೂ ಬರುತ್ತಿಲ್ಲ. ಪಕ್ಷ ಸಂಘಟನೆ ನಿಂತಿಲ್ಲೇ ನಿಂತಿದೆ. ಶಾಸಕರು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮೌನವಾಗಿದ್ದಾರೆ. ಇದೆಲ್ಲದರ ಮಧ್ಯೆ ತೆನೆ ಹೊತ್ತ ಮಹಿಳೆ ಪ್ರಬಲ ನಾಯಕನಿಲ್ಲದೆ ಮೌನವಾಗಿದ್ದಾಳೆ.

    ಸೋತರು ಸದಾ ಪಕ್ಷ ಸಂಘಟನೆಯಲ್ಲಿ ಮುಂದಿರೋ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಅದ್ಯಾಕೋ ಪಕ್ಷದ ಸಂಘಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿರಂತೂ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದಿದ್ದಾರೆ. ಪಕ್ಷ ಇಂತಹ ಸಮಯದಲ್ಲಿ ಇದ್ದರು ಪ್ರವಾಸದ ಮೇಲೆ ಪ್ರವಾಸ ಮಾಡುತ್ತಿದ್ದಾರೆ.

    ಹುಟ್ಟು ಹಬ್ಬಕ್ಕಾಗಿ ಗೋವಾಗಿ ಫ್ಯಾಮಿಲಿ ಜೊತೆ ಹೋಗಿದ್ರು. ಈಗ ಹೊಸ ವರ್ಷದ ಆಚರಣೆಗೆ ಸಿಂಗಾಪುರ್ ಗೆ ಹಾರಿದ್ದು, ಪಕ್ಷ ಸಂಘಟನೆಯನ್ನೆ ಮರೆತಿದ್ದಾರೆ. ಮಾಜಿ ಸಚಿವ ರೇವಣ್ಣಗೆ ಹಾಸನವೇ ರಾಜ್ಯದಂತೆ ಅಲ್ಲಿಗೆ ಮಾತ್ರ ಸಿಮೀತವಾಗಿದ್ದಾರೆ. ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಯುವ ಘಟಕದ ಅಧ್ಯಕ್ಷ ಆಗಿದ್ದರೂ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಯುವಕರನ್ನು ಆಕರ್ಷಣೆ ಮಾಡಿಲ್ಲ. ಕಾರ್ಯಕರ್ತರ ಜೊತೆಯೂ ಮಾತಾಡಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅಲ್ಲಿ-ಇಲ್ಲಿ ಒಮ್ಮೊಮ್ಮೆ ರಾಜಕೀಯವಾಗಿ ಕಾಣಿಸಿಕೊಳ್ಳುತ್ತಾರೆ. ಮಾಜಿ ಸಚಿವರಂತೂ ಪಕ್ಷದ ಕಚೇರಿಗೂ ಮುಖ ಹಾಕಿಲ್ಲ.

    ಒಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಜೆಡಿಎಸ್, ವಿರೋಧ ಪಕ್ಷ ಅನ್ನೋದು ಮರೆತು ಕುಳಿತಿದೆ. ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ. ಜೆಡಿಎಸ್ ನಾಯಕರ ಈ ವರ್ತನೆ ನೋಡಿ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

  • ಸರ್ಕಾರದಿಂದ ಹಾಸನ ಜಿಲ್ಲೆ ಸಂಪೂರ್ಣ ಕಡೆಗಣನೆ – ರೇವಣ್ಣ ಕಿಡಿ

    ಸರ್ಕಾರದಿಂದ ಹಾಸನ ಜಿಲ್ಲೆ ಸಂಪೂರ್ಣ ಕಡೆಗಣನೆ – ರೇವಣ್ಣ ಕಿಡಿ

    ಹಾಸನ: ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡೋದು ನಮಗೂ ಗೊತ್ತಿದೆ ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಅಪಾರ ಬೆಳೆಹಾನಿಯಾಗಿದೆ. ಒಟ್ಟಾರೆಯಾಗಿ ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟವಾಗಿದೆ. ಪ್ರವಾಹ ಬಂದು 20 ದಿನಗಳು ಕಳೆದರೂ ಪರಿಹಾರ ಸರಿಯಾಗಿ ಬಂದಿಲ್ಲ. ಈ ರಾಜ್ಯದಲ್ಲಿ ಈ ಹಾಸನ ಜಿಲ್ಲೆಯನ್ನ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ ಮೇಲೆ ಗುಡುಗಿದರು.

    ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುವುದು ನಮಗೂ ಗೊತ್ತಿದೆ. ಮುಖ್ಯ ಮಂತ್ರಿಗಳಿಗೆ ಸಮಯಾವಕಾಶ ಕೊಡೋಣ, ಅವರೂ ಪಾಪ ಕ್ಯಾಬಿನೆಟ್ ರಚನೆ ಮಾಡೋದರಲ್ಲಿ ಬ್ಯುಸಿ ಇದ್ದಾರೆ ಎಂದು ಸುಮ್ಮನಿದ್ದೆ. ಆದರೆ ಈಗ ಪ್ರವಾಹದಿಂದ ಬೀದಿ ಪಾಲಾದ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲಿ. ಆಮೇಲೆ ಬೇಕಾದರೆ ಇತರೆ ಕೆಲಸಮಾಡಲಿ. ಸರ್ಕಾರ ಟೇಕ್ ಆಫ್ ಆಗಿದ್ಯಾ ಆಫ್ ಸೈಕಲ್ ಅಗಿದ್ಯಾ ಅದೆಲ್ಲ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟ ಆಗಿದೆ. ರಸ್ತೆಗಳು, ಕಟ್ಟಡಗಳು ಮತ್ತು ಕೃಷಿಕರ ಭೂಮಿ ಸೇರಿ ಅಪಾರ ನಷ್ಟವಾಗಿದೆ. 8000 ಎಕ್ರೆ ತೋಟಗಾರಿಕೆಯ ಪ್ರದೇಶ ಹಾಳಾಗಿ ಒಟ್ಟು 190 ಕೋಟಿ ನಷ್ಟವಾಗಿದೆ. ಆದರೆ ಎನ್‍ಡಿಆರ್‍ಎಫ್ ಪ್ರಕಾರ ಕೇವಲ ಒಂಬತ್ತು ಕೋಟಿ ಅಂತಾರೆ. ಒಟ್ಟಾರೆ ಜಿಲ್ಲೆಯ ಇಪ್ಪತ್ತೈದು ಸಾವಿರ ಎಕ್ರೆ ಪ್ರದೇಶದಲ್ಲಿ ನಷ್ಟವಾಗಿದೆ. ಅದನ್ನು ಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

    ಕೆಲವರು ಕುಮಾರಸ್ವಾಮಿ ಮತ್ತು ದೇವೇಗೌಡರು ಜಿಲ್ಲೆಗೆ ಏನೂ ಮಾಡಿದ್ದಾರೆ ಎಂದು ಕೇಳುತ್ತಾರೆ. ಅವರಿಗೆ ಗೊತ್ತಿಲ್ಲ ಈ ಹಿಂದೆ ನಮ್ಮ ಜಿಲ್ಲೆಯನ್ನು 10 ವರ್ಷಗಳ ಕಾಲ ಕಡೆಗಣಿಸಲಾಗಿತ್ತು ಕೇವಲ ತೋಟಗಾರಿಕೆಗೆ ಸಂಬಂಧ ಪಟ್ಟ ಹಣವನ್ನು ನಮ್ಮ ಜಿಲ್ಲೆಗೆ ನೀಡಿರಲಿಲ್ಲ. ಕುಮಾರಸ್ವಾಮಿ ಸಿಎಂ ಆದ ನಂತರ 22 ಲಕ್ಷ ನಾಶವಾದ ತೆಂಗಿನ ಬೆಳೆಗೆ 200 ಕೋಟಿ ಪರಿಹಾರ ಕೊಟ್ಟಿದ್ದರು. ಹತ್ತು ವರ್ಷ ನಮ್ಮ ಜಿಲ್ಲೆಯಲ್ಲಿ ಏನೇ ಆದರೂ ರೈತರ ಯಾವ ಸಮಸ್ಯೆಗಳಿಗೂ ಪರಿಹಾರ ನೀಡಲಿಲ್ಲ. ಪರಿಹಾರ ನೀಡಲು ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತು. ನಮ್ಮ ಸರ್ಕಾರ ಇದ್ದಾಗ ಮಾಡಿದ್ದನ್ನು ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ವಿವರಿಸುತ್ತೇನೆ ಎಂದು ಹೇಳಿದರು.

  • ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ವಿಜಯಪುರ: ಹೆಚ್.ಡಿ. ರೇವಣ್ಣನಿಂದ ಮೈತ್ರಿ ಸರ್ಕಾರಕ್ಕೆ ಪತನ ಆಗಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು ಹೆಚ್.ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರು ಆರೋಗ್ಯ ಇಲಾಖೆಯಲ್ಲೂ ಕೈ ಹಾಕಿದ್ದರು. ಅವರ ವಿರುದ್ಧ ನಮಗೂ ಸಾಕಷ್ಟು ಅಸಮಾಧಾನವಿದೆ. ಅಸಮಾಧಾನ ಇದೆ ಎನ್ನುವ ಕಾರಣಕ್ಕೆ ಸರ್ಕಾರವನ್ನು ಬೀಳಿಸಬೇಕೇ ಎಂದು ಪ್ರಶ್ನೆ ಮಾಡಿದರು.

    ಈ ವೇಳೆ ಕೆಎಂಎಫ್ ಅಧ್ಯಕ್ಷರನ್ನು ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ರೇವಣ್ಣ ಈ ವಿಷಯದಲ್ಲಿ ಕೈ ಹಾಕಿದ್ದು ತಪ್ಪು. ಅ ಸ್ಥಾನವನ್ನು ಕಾಂಗ್ರೆಸ್ ಶಾಸಕ ಭೀಮಾನಾಯಕ್ ಅವರಿಗೆ ನೀಡಲು ಮೊದಲೇ ತೀರ್ಮಾನ ಆಗಿತ್ತು ಎಂದು ತಿಳಿಸಿದರು.

  • ನಿಮ್ಮ ರಾಜಕೀಯ ಜೀವನದ ಮೊದಲ ವಿಲನ್ ಹೆಚ್.ಡಿ ರೇವಣ್ಣ: ಸಿಎಂಗೆ ಎ.ಮಂಜು ಪತ್ರ

    ನಿಮ್ಮ ರಾಜಕೀಯ ಜೀವನದ ಮೊದಲ ವಿಲನ್ ಹೆಚ್.ಡಿ ರೇವಣ್ಣ: ಸಿಎಂಗೆ ಎ.ಮಂಜು ಪತ್ರ

    ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಎ.ಮಂಜು ಇಂದು ಫೇಸ್‍ಬುಕ್ ನಲ್ಲಿ ಮುಖ್ಯಮಂತ್ರಿಗಳಿಗೆ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ರಾಜೀನಾಮೆ ನೀಡಿ ಹೊರ ಬನ್ನಿ ಎಂದು ಎ.ಮಂಜು ಮನವಿ ಮಾಡಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಸನ್ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಳಕಳಿಯ ಮನವಿ. ಸರ್ ನೀವು ಕನ್ನಡಿಗರ ಕಣ್ಮಣಿ ಆಗಿದ್ದವರು ಎಂದು ಬಳಸಲು ಸಕಾರಣವಿದೆ. ನೀವು ರಾಜ್ಯ ಕಂಡ ವಿಶೇಷ ರಾಜಕಾರಣಿ. ಮೊದಲ ಬಾರಿಗೆ ಶಾಸಕರಾಗಿ ಸಿಎಂ ಆದ ದಾಖಲೆ ನಿಮ್ಮ ಹೆಸರಲ್ಲೇ ಇದೆ. 2006ರ 20-20 ಸರ್ಕಾರದ ಸಮಯದಲ್ಲಿ ನೀವು ತೋರಿಸಿದ ಕಾರ್ಯ ಕ್ಷಮತೆ ಅನುಕರಣೀಯ. ಜನನಾಯಕ ಅಂದರೆ ಹೀಗಿರಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ತಾವು ಮಾಡುತ್ತಿರುವುದು ಏನು? ಯಾವ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡುತ್ತಿದ್ದೀರಾ? ಒಮ್ಮೆ ನಿಮ್ಮ ಪಟಾಲಂನ್ನು ದೂರವಿಟ್ಟು ಏಕಾಂತದಲ್ಲಿ ಕುಳಿತು ಯೋಚಿಸಿ.

    ನಿಮ್ಮ ರಾಜಕೀಯ ಜೀವನದ ಮೊದಲ ವಿಲನ್ ಸಹೋದರ ಹೆಚ್.ಡಿ ರೇವಣ್ಣ. ಸಮ್ಮಿಶ್ರ ಸರ್ಕಾರದ ಇವತ್ತಿನ ಸ್ಥಿತಿಗೆ ರೇವಣ್ಣ ಕೊಡುಗೆ ಅಪಾರ. ಆತ ಹುಟ್ಟುತ್ತಾ ಸಹೋದರರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿಗೆ ಅನ್ವರ್ಥನಾಗಿದ್ದಾನೆ. ನಿಮ್ಮನ್ನು ಆತ ವ್ಯವಸ್ಥಿತವಾಗಿ ಹಂತ ಹಂತವಾಗಿ ಮುಗಿಸಿಯೇ ಬಿಟ್ಟ. ಅದು ನಿಮಗೆ ಗೊತ್ತಾಗಲೇ ಇಲ್ಲ. ಇರಲಿ ಈಗಲಾದರೂ ಅದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಭವಿಷ್ಯ ಉತ್ತಮವಾಗುವುದು. ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ. ಸದ್ಯ ಸದನದಲ್ಲಿ ನಿಮ್ಮ ವರ್ತನೆ ರಾಜ್ಯದ ಜನರಿಗೆ ಮಾತ್ರವಲ್ಲ ನಿಮ್ಮದೇ ಸಮುದಾಯದ ಜನರಿಗೆ ಅಸಹ್ಯ ತರಿಸಿದೆ. ಅಸಹ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಗಬ್ಬೆದ್ದು ಹೋಗಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಶಾಸಕಾಂಗ ಕಾರ್ಯಾಂಗ ಪತ್ರಿಕಾರಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನ್ಯಾಯಾಂಗ ಸಂವಿಧಾನದ ಮೇಲೆ ಇನ್ನು ನಂಬಿಕೆ ಇಟ್ಟಿದ್ದಾರೆ. ಆದರೆ ನೀವು ಅದನ್ನೇ ಬುಡಮೇಲು ಮಾಡಲು ಹೊರಟಿದ್ದೀರಾ? ನಿಮ್ಮ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಿಲ್ಲ.

    ರೇವಣ್ಣನಂತವನು ಇದನ್ನು ಮಾಡುವುದು ನಿರೀಕ್ಷಿತ. ಆದರೆ ತಾವು ಅವನಂತಲ್ಲ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿಯೇ ನಿಮಗೆ ಸೌಜನ್ಯವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿಗೆ ಗೌರವ ಕೊಡಿ. ಹಿಂದಿನ ನಿದರ್ಶನಗಳನ್ನು ನೋಡಿ. ತೀರಾ ಹಿಂದೆಯಲ್ಲ ನೀವು ಸಿಎಂ ಆಗುವ ಮುನ್ನ ಆದ ಘಟನೆಗಳನ್ನು ನೆನಪಿಸಿಕೊಳ್ಳಿ. ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ದಂಡನಾಯಕ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ಸಂವಿಧಾನಬದ್ಧವಾಗಿ ಸಿಎಂ ಆದರು. ಆದರೆ ರಾಜಕೀಯ ತಂತ್ರಗಳನ್ನು ಬಳಸಿ ಅವರು ವಿಶ್ವಾಸ ಮತ ಸಾಬೀತು ಮಾಡದಂತೆ ಮಾಡಿ ಒಂದೇ ದಿನದಲ್ಲಿ ಅವರನ್ನು ಕೆಳಗಿಳಿಸಿದ್ದೀರಿ. ಅವತ್ತಿನ ಉದಾಹರಣೆಯನ್ನೇ ನೋಡುವುದಾದರೂ ಅವತ್ತು ಯಡಿಯೂರಪ್ಪನವರಿಗೆ ನ್ಯಾಯಾಲಯ ಒಂದು ದಿನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಸೂಚಿಸಿತ್ತು.

    104 ಜನ ಇದ್ದವರಿಗೆ ಬೇಕಾಗಿದ್ದು ಕೇವಲ 9 ಜನರ ಬೆಂಬಲ. ಆದರೆ ಎಲ್ಲಿ ಅದು ಸಿಕ್ಕಿ ಬಿಡುತ್ತದೋ ಎಂದು ಅದಕ್ಕೆ ಅವಕಾಶ ಕೊಡದೇ ಅವರನ್ನು ಇಳಿಸಿಬಿಟ್ಟಿರಿ. ಆದರೆ ಈಗ ನೀವು ಮಾಡ್ತಾ ಇರೋದು ಏನು ಸ್ವಾಮಿ? ಅದೇ ಕಾನೂನು ರಾಜ್ಯಪಾಲರು ಯಾರೇ ಹೇಳಿದರೂ ಕುರ್ಚಿಗೆ ಅಂಟಿಕೊಂಡು ಕೂರುವ ಕೆಟ್ಟ ಬುದ್ಧಿ ಅದ್ಯಾಕೆ ಬಂತು? ದಯಮಾಡಿ ಈಗಲೂ ಕಾಲ ಮಿಂಚಿಲ್ಲ. ನೀವು ಸದಾ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಹೇಳುತ್ತೀರಿ. ಅದನ್ನು ಕೇವಲ ಘೋಷಣೆಗೆ ಮಾತ್ರ ಸೀಮಿತಗೊಳಿಸದೇ ದಯಮಾಡಿ ಕಾರ್ಯ ರೂಪಕ್ಕೂ ತನ್ನಿ. ಮುಂದಿನ ಪೀಳಿಗೆಗೆ ಒಬ್ಬ ಒಳ್ಳೆಯ ಜನನಾಯಕರಾಗಿ ನೆನಪಿನಲ್ಲಿರಿ. ಕೆಟ್ಟ ಪರಂಪರೆಗೆ ಅಡಿಪಾಯ ಹಾಕಿ ಕೆಟ್ಟವರಾಗಿ ಬಿಂಬಿತರಾಗದಿರಿ. ಇನ್ನೂ ಕಾಲ ಮಿಂಚಿಲ್ಲ ನೀವೇ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಡಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ನಾನು ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

    ಎ ಮಂಜು
    ಮಾಜಿ ಸಚಿವರು

  • ಶೃಂಗೇರಿ ನಂತರ ತಿರುಪತಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

    ಶೃಂಗೇರಿ ನಂತರ ತಿರುಪತಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

    ಬೆಂಗಳೂರು: ಸರ್ಕಾರ ಉಳಿಯಲಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.

    ರೇವಣ್ಣ ಅವರು ಇಂದು ಬೆಳ್ಳಂಬೆಳಗ್ಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ಹೇಗಾದರೂ ಮಾಡಿ ಸರ್ಕಾರ ಉಳಿಸಪ್ಪ ಎಂದು ಬೇಡಿಕೊಂಡಿದ್ದಾರಂತೆ. ಅಲ್ಲದೆ ಕಳೆದ ಆರು ದಿನಗಳಿಂದ ಬರಿಗಾಲಲ್ಲೇ ಓಡಾಡುತ್ತಿರೋ ರೇವಣ್ಣ ಅವರಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಬುಧವಾರ ತಿರುಪತಿಗೆ ಹೋಗುವ ಮುನ್ನ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗುತ್ತಿಗೆದಾರರಿಗೆ 1,500 ಕೋಟಿ ರೂ. ಬಿಲ್ ಚುಕ್ತಾ ಮಾಡಿದ್ದಾರೆ ಎನ್ನಲಾಗಿದೆ.

    ಮಂಗಳವಾರ ಬೆಳಗ್ಗೆಯೇ ರೇವಣ್ಣ ಅವರು ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟದ ದೇವರಾಗಿದ್ದು, ಹೀಗಾಗಿ ಒಂದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಬಂದು ಪೂಜೆ ಸಲ್ಲಿಸಿದ್ದರು.

    ಈ ಹಿಂದೆ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕೂಡ ಶೃಂಗೇರಿಯಲ್ಲಿ ಮೂರ್ನಾಲ್ಕು ಯಾಗ ಮಾಡಿಸಿದ್ದರು. ಗುರುವಾರ ಸಚಿವ ರೇವಣ್ಣ ಮತ್ತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದರು.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126