Tag: ಹೆಚ್ ಡಿ ಕುಮಾರಸ್ವಾಮಿ

  • ರೈತರ ಸಾಲಮನ್ನಾಕ್ಕೆ ಸಿಎಂ ಎಚ್‍ಡಿಕೆ ಸೂತ್ರ

    ರೈತರ ಸಾಲಮನ್ನಾಕ್ಕೆ ಸಿಎಂ ಎಚ್‍ಡಿಕೆ ಸೂತ್ರ

    ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಂ ಆದ 24 ಗಂಟೆಗಳಲ್ಲಿ ನಾಡಿನ ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದು, ಇದೀಗ ಬಿಜೆಪಿ ಸಾಲಮನ್ನಾ ಮಾಡುವಂತೆ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದೆ.

    ನಾನು ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ಆದ್ರೆ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದರಿಂದ ಎಲ್ಲರ ವಿಶ್ವಾಸ ಪಡೆದುಕೊಂಡು ಸಾಲಮನ್ನಾ ಮಾಡಲು ಅವಕಾಶ ಬೇಕೆಂದು ನಾಡಿನ ರೈತರಲ್ಲಿ ಮುಖ್ಯಮಂತ್ರಿ ಹೇಳಿಕೊಂಡಿದ್ರು. ಆದ್ರೆ ಇಂದು ಸಿಎಂ ಇದೇ ವಿಷಯವಾಗಿ ಸಭೆ ಕರೆದಿದ್ದು, ಯಾವ ನಿರ್ಧಾರ ಕೈಗೊಳ್ಳತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಇದನ್ನೂ ಓದಿ: ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ -ಸಾಲಮನ್ನಾ ವಿಚಾರದಲ್ಲಿ ಉಳಿದ ರಾಜ್ಯಗಳು ಏನು ಮಾಡಿವೆ..?-ಕರ್ನಾಟಕದ ಸ್ಥಿತಿ ಏನು?

    ರೈತರ ಸಾಲಮನ್ನಾಕ್ಕೆ ಸಿಎಂ ಸೂತ್ರ ಏನು..?
    ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆ ಸಮಾಲೋಚನೆ ನಡೆಸಿ ರೈತರ ಸಾಲಗಳನ್ನ ಸರ್ಕಾರ ವಹಿಸಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡೋದು. ಬ್ಯಾಂಕ್‍ಗಳನ್ನು ಒಪ್ಪಿಸಿ ರೈತರ ಸಾಲಗಳನ್ನ ಸರ್ಕಾರವೇ ವಹಿಸಿಕೊಳ್ಳೊದು. ಒಂದು ವೇಳೆ ಬ್ಯಾಂಕ್‍ಗಳು ಒಪ್ಪಿದ್ರೆ 4 ಕಂತುಗಳಲ್ಲಿ ಸರ್ಕಾರವೇ ಸಾಲ ಭರಿಸೋದು. ಈ ಮೂಲಕ ಕೃಷಿ ಸಾಲದಿಂದ ಎಲ್ಲಾ ರೈತರನ್ನ ಮುಕ್ತಿಗೊಳಿಸೋದು.

    ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‍ಗಳ ಸಾಲಗಳ ಬಗ್ಗೆ ಪ್ರತ್ಯೇಕ ನಿರ್ಧಾರ ತೆಗೆದುಕೊಂಡು ಸಂಪನ್ಮೂಲ ಹೊಂದಿಸಿಕೊಳ್ಳುವ ಹಾಗೂ ಕಾರ್ಯಸೂಚಿ ರೂಪಿಸುವ ಬಗ್ಗೆ ಚಿಂತನೆ ನಡೆಸುವುದು. ಜಿಎಸ್‍ಟಿಯಿಂದ ಬರುವ ಹೆಚ್ಚುವರಿ ಆದಾಯವನ್ನ ತೋರಿಸಿ ಕೇಂದ್ರದಿಂದ ಸಾಲ ತರುವ ಪ್ಲಾನ್ ಮಾಡೋದು. ರಾಜ್ಯ ಸರ್ಕಾರ ಕೆಲ ಯೋಜನೆಗಳಿಗೆ ಅನುದಾನ ಕಡಿತಗೊಳಿಸುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಮಾಡುವುದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪರಿಸ್ಥಿತಿ ಅನುಗುಣವಾಗಿ ರೈತರ ಕೃಷಿ ಸಾಲಮನ್ನಾ ನಿರ್ವಹಣೆಗೆ ಮಾರ್ಗಸೂಚಿ ರೂಪಿಸುವುದು.

  • ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ

    ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ

    ಬೆಂಗಳೂರು: ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.

    ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಪಕ್ಷ ನಾಯಕರೂ ಆಗಿರುವ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ಉಪ ಮುಖ್ಯಮಂತ್ರಿ ಪರಮೇಶ್ವರ್‍ರನ್ನು ಆಹ್ವಾನಿಸಲಾಗಿದೆ. ಆದ್ರೆ ಯಡಿಯೂರಪ್ಪ ಇವತ್ತು ಮಂಗಳೂರಿಗೆ ಭೇಟಿ ನೀಡ್ತಿದ್ದು, ಅವರ ಬದಲಿಗೆ ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ ಭಾಗವಹಿಸ್ತಾರೆ. ಪ್ರತಿ ಜಿಲ್ಲೆಯಿಂದಲೂ ನಾಲ್ಕು ಪ್ರಗತಿಪರ ರೈತರು ಅಂದ್ರೆ ಒಟ್ಟು 150 ಮಂದಿ ರೈತರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಹಣಕಾಸು, ತೋಟಗಾರಿಕೆ, ಕೃಷಿ, ಸಹಕಾರ ಇಲಾಖೆಗಳ ಅಧಿಕಾರಿಗಳು ಸಭೆಗೆ ಭಾಗಿಯಾಗಲಿದ್ದಾರೆ.

    ಪ್ರಮುಖವಾಗಿ ಸಾಲಮನ್ನಾ ವಿಷಯ ಚರ್ಚೆ ಆಗಲಿದ್ದು, ರೈತರ ಸಂಪೂರ್ಣ ಸಾಲಮನ್ನಾ ಒಂದೇ ಬಾರಿ ಮನ್ನಾ ಮಾಡಬೇಕಾ ಅಥವಾ 5 ವರ್ಷಗಳಲ್ಲಿ ಕಂತಿನ ಆಧಾರದಲ್ಲಿ ಸಾಲಮನ್ನಾ ಮಾಡಬೇಕಾ ಅನ್ನೋ ಕೆಲ ಮಾನದಂಡದ ಕುರಿತು ರೈತ ಸಂಘಟನೆಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

    ಸರ್ಕಾರದ ಮುಂದಿರುವ ಪ್ರಶ್ನೆಗಳು:
    1. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಹೀಗೆ ಎಲ್ಲ ಸ್ವರೂಪದ ಸಾಲ ಮನ್ನಾ ಮಾಡಬೇಕಾ..?
    2. ಕೇವಲ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಬೇಕಾ..?
    3. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಬೇಕಾ..?

    ಮಾರ್ಗಗಳು:
    1. ಹಂತ-ಹಂತವಾಗಿ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ.
    2. ಹಂತವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲ ಮನ್ನಾದ ಮೊತ್ತ ಪಾವತಿ.
    2. ಆರ್‍ಬಿಐ ಮೂಲಕ ಬಾಂಡ್‍ಗಳನ್ನು ಘೋಷಿಸಿ ಆ ಮೂಲಕ ಸಂಪನ್ಮೂಲ ಕ್ರೋಡಿಕರಣ.
    3. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲ ಮನ್ನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೆರವಿಗೆ ಒತ್ತಡ.

    ಉಳಿದ ರಾಜ್ಯಗಳು ಏನು ಮಾಡಿವೆ..?
    1. ಮಹಾರಾಷ್ಟ್ರ – 1.5 ಲಕ್ಷ ರೂಪಾಯಿವರೆಗೆ ರೈತ ಬೆಳೆ ಸಾಲ ಮನ್ನಾ – ಹೊರೆ 34 ಸಾವಿರ ಕೋಟಿ
    2. ಉತ್ತರಪ್ರದೇಶ – 1 ಲಕ್ಷ ರೂಪಾಯಿವರೆಗೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ – ಹೊರೆ 36 ಸಾವಿರ ಕೋಟಿ
    3. ಪಂಜಾಬ್ – ಸಣ್ಣ ಮತ್ತು ಮಧ್ಯಮ ವರ್ಗದ ರೈತರ 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲ, 2 ಲಕ್ಷಕ್ಕಿಂತ ಮೇಲ್ಪಟ್ಟ ಸಾಲವಿದ್ದಲ್ಲಿ 2 ಲಕ್ಷ ರೂಪಾಯಿ ಮನ್ನಾ – ಹೊರೆ 10 ಸಾವಿರ ಕೋಟಿ
    4. ತೆಲಂಗಾಣ – 1 ಲಕ್ಷ ರೂಪಾಯಿವರೆಗೆ ರೈತರ ಬೆಳೆ ಸಾಲ ಮನ್ನಾ – ಹೊರೆ 17 ಸಾವಿರ ಕೋಟಿ ರೂಪಾಯಿ

    ಕರ್ನಾಟಕದ ಸ್ಥಿತಿ ಏನು..?
    * ಮಾರ್ಚ್ 2016ರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೃಷಿ ಸಾಲದ ಮೊತ್ತ – 34,637 ಕೋಟಿ ರೂ.
    * ಇದರದಲ್ಲಿ ಬೆಳೆ ಸಾಲದ ಮೊತ್ತ 21,486 ಕೋಟಿ ರೂಪಾಯಿ
    * ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲದ ಮೊತ್ತ – 14, 703 ಕೋಟಿ ರೂ.
    * ಇದರಲ್ಲಿ ಬೆಳೆ ಸಾಲದ ಮೊತ್ತ – 10,270 ಕೋಟಿ ರೂಪಾಯಿ

    ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿರುವ ಸಾಲಮನ್ನಾ ಕುರಿತು ಮುಖ್ಯಮಂತ್ರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದುಮ ಇಂದು ತಿಳಿಯಲಿದೆ. ಇತ್ತ ಒಂದು ವಾರದೊಳಗೆ ರೈತರ ಸಾಲಮನ್ನಾ ಮಾಡೆದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • 100 ವರ್ಷವಾದ್ರೂ ಜೆಡಿಎಸ್‍ಗೆ ಪೂರ್ಣ ಬಹುಮತ ಬರಲ್ಲ, ಬರೆದಿಟ್ಟುಕೊಳ್ಳಿ – ಶ್ರೀರಾಮುಲು

    100 ವರ್ಷವಾದ್ರೂ ಜೆಡಿಎಸ್‍ಗೆ ಪೂರ್ಣ ಬಹುಮತ ಬರಲ್ಲ, ಬರೆದಿಟ್ಟುಕೊಳ್ಳಿ – ಶ್ರೀರಾಮುಲು

    ಕೊಪ್ಪಳ: ಸೂರ್ಯ-ಚಂದ್ರರು ಇರೋವರೆಗೂ ಜೆಡಿಎಸ್ ಪೂರ್ಣ ಬಹಮತದೊಂದಿಗೆ ಅಧಿಕಾರಕ್ಕೆ ಬರೋದಿಲ್ಲ ಎಂದು ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದರು.

    ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಆಗಮಿಸಿದ್ದ ಬಿ.ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನು 100 ವರ್ಷವಾದರೂ ಜೆಡಿಎಸ್ ಗೆ ಪೂರ್ಣ ಬಹುಮತ ಬರಲ್ಲ. ನೀವು ಇದನ್ನ ಬರೆದಿಟ್ಟುಗೊಳ್ಳಿ ಎಂದ ಶ್ರೀರಾಮಲು ಪರ್ತಕರ್ತರಿಗೆ ಹೇಳಿದ್ದಾರೆ.

    ಸಿದ್ದರಾಮಯ್ಯನ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಆದ ಅನ್ಯಾಯ ನಮ್ಮ ನಾಯಕರು ಎತ್ತಿ ಹಿಡಿಯುತ್ತಿದ್ದಾರೆ. ಸೋಮವಾರ ನಡೆದ ಬಂದ್ 30 ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. ಕುಮಾರಸ್ವಾಮಿ ಸಿಎಂ ಆದ ನಂತರ ಕಾಂಗ್ರೆಸ್ ಬಾಲ ಬಡಿಯುತ್ತಿದ್ದಾರೆ. ಮುಖ್ಯಮಂತ್ರಿ ಆಗೋ ಮುನ್ನ ಒಂದು ಇವಾಗ ಮತ್ತೊಂದು ಮಾತು ಹೇಳುತ್ತಿದ್ದಾರೆ ಅಂತಾ ಕಿಡಿಕಾರಿದ್ರು.

    ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಮುಲಾಜಿಲ್ಲಿದೀನಿ ಎಂದರೆ ನಾವು ಕೇಳುವುದಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದೀವಿ ಕೈಕಟ್ಟಿ ಕೂರೋಕ್ಕಾಗಲ್ಲ. ಕುಮಾರಸ್ವಾಮಿ ಸಾಲ ಮನ್ನಾ ಮಾಡದಿದ್ದರೆ ಖುರ್ಚಿ ಖಾಲಿ ಮಾಡಬೇಕು. ಸರ್ಕಾರ ಬಹಳ ದಿನ ಉಳಿಯೋದಿಲ್ಲ, ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀರಾಮುಲು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಸೋಮವಾರ ನಡೆದ ಬಂದ್ ನಲ್ಲಿ ಕೊಪ್ಪಳದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಿಟ್ಟ ದೌರ್ಜನ್ಯ ಮಾಡಿಸುತ್ತಿದ್ದಾರೆ. ಪೊಲೀಸರು ಸರ್ಕಾರದ ಮಾತು ಕೇಳಿದರೆ ನೌಕರಿ ಕಳೆದುಕೊಳ್ಳಬೇಕಾಗುತ್ತೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟ ಮಾತು ತಪ್ಪಿದ್ದಾರೆ. ಅದಕ್ಕಾಗಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೀವಿ ಎಂದು ಶಾಸಕ ಬಿ. ಶ್ರೀರಾಮಲು ಹೇಳಿದ್ದಾರೆ. ಇದನ್ನೂ ಓದಿ: ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ – ಡಿವೈಎಸ್‍ಪಿ ಮೇಲೆ ಕೈ ಮಾಡಿದ ಸಂಸದ ಸಂಗಣ್ಣ ಕರಡಿ

  • ಪ್ರಧಾನಿ ಮೋದಿ ಭೇಟಿಗೆ ತೆರಳಲಿರುವ ಸಿಎಂ ಹೆಚ್‍ಡಿಕೆ

    ಪ್ರಧಾನಿ ಮೋದಿ ಭೇಟಿಗೆ ತೆರಳಲಿರುವ ಸಿಎಂ ಹೆಚ್‍ಡಿಕೆ

    ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹೆಚ್.ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ಹೆಚ್.ಡಿ ಕುಮಾರಸ್ವಾಮಿ ದೆಹಲಿಯ ರಾಜ್‍ಘಾಟ್‍ನಲ್ಲಿರುವ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 3:30 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.

    ಪ್ರಧಾನಿ ಭೇಟಿ ವೇಳೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ಆಡಳಿತಾತ್ಮಕ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಿದ್ದಾರೆ.

    ಪ್ರಧಾನಿ ಭೇಟಿ ಬಳಿಕ ಕೇಂದ್ರದ ರೈಲು ಹಾಗೂ ಇಂಧನ ಸಚಿವರನ್ನು ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಲಿದ್ದು, ರೈಲ್ವೆ ಯೋಜನೆಗಳು ಹಾಗೂ ಕಲ್ಲಿದ್ದಲು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.

  • ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ವಿರುದ್ಧ ಸಿಟ್ಟು – ಬಿಜೆಪಿಯಿಂದ ಇಂದು ಕರ್ನಾಟಕ ಬಂದ್

    ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ವಿರುದ್ಧ ಸಿಟ್ಟು – ಬಿಜೆಪಿಯಿಂದ ಇಂದು ಕರ್ನಾಟಕ ಬಂದ್

    ಬೆಂಗಳೂರು: ಚುನಾವಣೆಗೂ ಮುನ್ನ ಸಾಲ ಮನ್ನಾ ಮಾಡ್ತೀನಿ ಅಂದಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಯೂ ಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ಇವತ್ತು ಕರ್ನಾಟ ಬಂದ್‍ಗೆ ಕರೆ ಕೊಟ್ಟಿದೆ. ಆದ್ರೆ ಬಿಜೆಪಿ ಕರೆ ಕೊಟ್ಟ ಇವತ್ತಿನ ಬಂದ್ ಯಶಸ್ವಿಯಾಗೋದು ಅನುಮಾನ.

    ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಿಜೆಪಿ ಕರೆ ನೀಡಿರುವ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ. ಕೆಲವೇ ಕೆಲವು ಜಿಲ್ಲೆಗಳಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದ, ದಕ್ಷಿಣ ಕನ್ನಡದಲ್ಲೇ ಬಂದ್‍ಗೆ ಬೆಂಬಲ ದೊರೆತಿಲ್ಲ.

    ಇತ್ತ ಬೆಂಗಳೂರಿನಲ್ಲೂ ಬಂದ್ ಇರುವುದಿಲ್ಲ. ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ಹೋಟೆಲ್‍ಗಳು, ಮಾಲ್‍ಗಳು, ಸಿನಿಮಾ ಪ್ರದರ್ಶನ ಎಂದಿನಂತೆ ಇರಲಿದೆ. ಇನ್ನು ರಾಜ್ಯಾದ್ಯಂತ ಯಾವುದೇ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಲ್ಲದೆ ಬಂದ್ ಮಾಡುವ, ಪ್ರತಿಭಟನೆ ಮಾಡುವ ರೈತ ಸಂಘಟನೆಗಳಿಗೆ ಬೆಂಬಲ ನೀಡೋದಾಗಿ ತಿಳಿಸಿದೆ.

  • ಎಚ್‍ಡಿಕೆ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಚರ್ಚೆ ನಡೆದಿಲ್ಲ: ಸಿದ್ದರಾಮಯ್ಯ

    ಎಚ್‍ಡಿಕೆ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಚರ್ಚೆ ನಡೆದಿಲ್ಲ: ಸಿದ್ದರಾಮಯ್ಯ

    ನವದೆಹಲಿ: ಹೆಚ್ ಡಿ ಕುಮಾರಸ್ವಾಮಿಯವರು ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

    ರಾಜ್ಯ ಸಚಿವ ಸಂಪುಟ ರಚನೆ ಕುರಿತಾದ ರಾಹುಲ್ ಗಾಂಧಿ ಜೊತೆಗಿನ ಸಭೆ ರದ್ದಾಗಿದೆ. ರಾಹುಲ್ ಗಾಂಧಿಯವರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಹಾಗಾಗಿ ಒಂದು ವಾರದ ಮಟ್ಟಿಗೆ ಸಭೆ ಮುಂದೂಡಿಕೆಯಾಗಿದೆ. ಮುಂದಿನವಾರ ಮತ್ತೆ ರಾಹುಲ್ ಗಾಂಧಿ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

    ಸಚಿವ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಖಾತೆ ಹಂಚಿಕೆ ಬಗ್ಗೆ ಚರ್ಚೆಯಾಗಬೇಕಿದೆ. ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಚರ್ಚಿಸುತ್ತಾರೆ. ಅಗತ್ಯ ಬಿದ್ದರೆ ನಾನು ಕೂಡ ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ. ಹೊಸಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಒತ್ತಡ ಇದೆ. ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಮೇ 25 ರಂದು ವಿಶ್ವಾಸಮತ ಸಾಬೀತು ಪಡಿಸಿದ ನಂತರ ದೆಹಲಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೂಚಿಸಿದ್ದರು.

  • ಯಡಿಯೂರಪ್ಪರ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ಅಯ್ಯೋ ಅನ್ನಿಸಿತು: ಹೆಚ್‍ಡಿಕೆ

    ಯಡಿಯೂರಪ್ಪರ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ಅಯ್ಯೋ ಅನ್ನಿಸಿತು: ಹೆಚ್‍ಡಿಕೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸದನದಲ್ಲಿ ಮಾಡಿದ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ನನಗೆ ಅಯ್ಯೋ ಅನ್ನಿಸಿತು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ಬಹುಮತ ಸಾಬೀತಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ವಿಶ್ವಾಸ ಮತದ ಬಳಿಕ ಯಡಿಯೂರಪ್ಪನವರು ಹತಾಶರಾಗಿದ್ದಾರೆ. ಸದ್ಯ ಅವರಿಗೆ ದೇವೇಗೌಡರು ಮತ್ತು ನಾನು ಪ್ರಮುಖ ವೈರಿಗಳಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಭಾಷಣದ ಉದ್ದಕ್ಕೂ ನಮ್ಮ ಕುಟುಂಬದ ಮೇಲೆ ಹರಿಹಾಯ್ದರು ಎಂದು ಟೀಕಿಸಿದರು.

    ಇಂದು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವಲ್ಲಿ ದೇವೇಗೌಡರು ಪ್ರಮುಖ ಪಾತ್ರವಹಿಸುತ್ತಾರೆ. ಈ ಹಿಂದೆ ದೇವೇಗೌಡರು ಚುನಾವಣೆ ಫಲಿತಾಂಶದ ಬಳಿಕ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಮಗನನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕ್ತೀನಿ ಅಂತಾ ಹೇಳಿದ್ರು. ಒಂದು ವೇಳೆ ದೇವೇಗೌಡರು ಆ ಮಾತು ಹೇಳದೇ ಇದ್ದಿದ್ರೆ ನಾನು ಬಿಜೆಪಿ ಜೊತೆ ಸೇರಿಕೊಳ್ಳುತ್ತೇನೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ರು ಎಂದು ತಿಳಿಸಿದ್ರು.

    ಯಡಿಯೂರಪ್ಪರವರು ಭಾಷಣದುದ್ದಕ್ಕೂ ವಿಷ, ಹಾವು, ನಾಗರ ಹಾವು, ಕೆರೆ ಹಾವು, ಕೆಟ್ಟ ಹಾವು ಏನೇನೋ ಭಾಷೆ ಬಳಕೆ ಮಾಡಿದ್ದು, ಅದು ಅವರ ವಿಕೃತ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಪ್ರದರ್ಶನ ಮಾಡಿದೆ. ನಾನು ಈಗಾಗಲೇ ಎಲ್ಲ ರೈತರಿಗೆ ಸಾಲಮನ್ನಾ ಮಾಡುತ್ತೇನೆ ಅಂತಾ ತಿಳಿಸಿದ್ದೇನೆ. ಆದ್ರೆ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇನೆ ಅಂತಾ ಹೇಳುವುದು ಕೇವಲ ಪೊಲಿಟಿಕಲ್ ಗಿಮಿಕ್ ಅಂತಾ ಲೇವಡಿ ಮಾಡಿದ್ರು.

  • ಸಿಎಂ ಆಗಿರೋವಾಗ ನೀವಿರೋದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಸ್ಪೀಕರ್ ಗೆ ಎಚ್‍ಡಿಕೆ ಅಭಿನಂದನೆ

    ಸಿಎಂ ಆಗಿರೋವಾಗ ನೀವಿರೋದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಸ್ಪೀಕರ್ ಗೆ ಎಚ್‍ಡಿಕೆ ಅಭಿನಂದನೆ

    ಬೆಂಗಳೂರು: ನೂತನ ಸ್ಪೀಕರ್ ಆಗಿ ಆಯ್ಕೆಯಾದ ಕೆ.ಆರ್.ರಮೇಶ್‍ಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

    ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಮಾತನಾಡಿದ ಅವರು, ಐದು ವರ್ಷಗಳ ನಡೆಸುವ ನಮ್ಮ ಸರ್ಕಾರಕ್ಕೆ ಸೂಕ್ತ ಮಾರ್ಗವನ್ನು ತೋರಿಸಬೇಕು. ನಿಮ್ಮ ಅನುಭವ ಎಲ್ಲರಿಗೂ ಮಾದರಿಯಾಗಿರಬೇಕು. ಇಂದು ನೀವು ನಮ್ಮೊಂದಿಗೆ ನೀವಿರುವುದು ನಮ್ಮೆಲ್ಲರ ಸೌಭಾಗ್ಯ. ವಿರೋಧ ಪಕ್ಷದ ನಾಯಕರು ಸಹ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

    1994ರಲ್ಲಿ ನೀವು ಸ್ಪೀಕರ್ ಆಗಿದ್ದಾಗ ನನ್ನ ಸ್ಥಾನದಲ್ಲಿ ನಮ್ಮ ತಂದೆಯವರಾದ ದೇವೇಗೌಡರು ಇದ್ದರು. ಇಂದು ಕಾಕತಾಳೀಯವಾಗಿ ಆ ಸ್ಥಾನದಲ್ಲಿ ನಾನಿದ್ದೇನೆ. ಹಾಗಾಗಿ ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ಬಣ್ಣಿಸಿದ್ರು.

    ಇದೇ ವೇಳೆ ಮೈಸೂರು ರಾಜರ ಆಳ್ವಿಕೆಯನ್ನು ಮೆಲಕು ಹಾಕಿಕೊಂಡ ಎಚ್‍ಡಿಕೆ ದೇಶದಲ್ಲಿಯೇ ಮೈಸೂರು ಆಳ್ವಿಕೆಗೆ ಹೆಸರು ವಾಸಿಯಾಗಿದೆ. ಸದನದ ಘನತೆ ಗೌರವವನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಅಂತಾ ಹೇಳಿದ್ರು.

    ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನೀವು ಸ್ಪೀಕರ್ ಆಗಿ ಆಯ್ಕೆಯಾಗಿರುವುದು ನಮ್ಮಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಪೀಕರ್ ಸ್ಥಾನ ಅತಿ ದೊಡ್ಡ ಸ್ಥಾನ ಆಗಿರುವದರಿಂದ ನಮ್ಮ ಅಭ್ಯರ್ಥಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. 1994 ರಿಂದ 99ರಲ್ಲಿಯೂ ನೀವು ಸ್ಪೀಕರ್ ಆಗಿ ಕೆಲಸ ಮಾಡಿರುವುದನ್ನು ನಾವು ನೋಡಿದ್ದೇವೆ. ನಿಮಗೆ ಪಕ್ಷದ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಅಂತಾ ತಿಳಿಸಿದ್ರು.

  • ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅನ್ನೋ ವಿಚಾರ ಮುಗಿದು ಹೋಗಿರೋ ಅಧ್ಯಾಯ: ಎಚ್‍ಡಿಕೆ

    ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅನ್ನೋ ವಿಚಾರ ಮುಗಿದು ಹೋಗಿರೋ ಅಧ್ಯಾಯ: ಎಚ್‍ಡಿಕೆ

    ತುಮಕೂರು: ನಾನು ಸಾಂದರ್ಭಿಕ ಶಿಶು. ಮುಖ್ಯಮಂತ್ರಿಯಾಗಿ ಮೆರೆಯಬೇಕು ಇಲ್ಲ ಇದೇ ಸ್ಥಾನದಲ್ಲಿ ಮುಂದುವರೆಯಬೇಕು ಅನ್ನೋ ಹುಚ್ಚು ನನಗೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ರಾಜಕೀಯ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಒಪ್ಪಿಗೆ ನೀಡಿದ್ದೇನೆ. ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎನ್ನುವ ವಿಚಾರ ಮುಗಿದು ಹೋಗಿರುವ ಅಧ್ಯಾಯ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಪರ ವಿರೋಧ ಟೀಕೆ ಬರುವುದು ಸಾಮಾನ್ಯ. ನಂತರದ ದಿನದಲ್ಲಿ ನಮ್ಮಗಳ ಭಾವನೆಗಳು ಅಭಿವೃದ್ಧಿ ಕಡೆಗೆ ಇರಬೇಕು ಅನ್ನೋದು ನನ್ನ ಭಾವನೆ ಎಂದು ಅಭಿಪ್ರಾಯಪಟ್ಟರು.

    ನನ್ನ 20 ತಿಂಗಳ ಆಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಅದರಿಂದಲೇ ನಾನು ಮತ್ತು ನನ್ನ ಪಕ್ಷ ಉಳಿದಿದೆ. ರಾಜ್ಯದ ಒಳಿತಿಗಾಗಿ ಮಾತ್ರ ಮೈತ್ರಿಗೆ ಒಪ್ಪಿಗೆ ಕೊಟ್ಟಿದ್ದೇನೆ ಹೊರತು ವೈಯಕ್ತಿಕ ಆಸೆ ಅಕಾಂಕ್ಷೆಗಾಗಿ ಅಲ್ಲ. ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿಯವರು ಜನರತ್ತ ಕೈ ಬೀಸಿ ಹಿಂತಿರುಗುವಾಗ ಭದ್ರತಾ ಲೋಪವಾಗಿತ್ತು. ಪೊಲೀಸರ ಬೆಂಗಾವಲಿನ ನಡುವೆಯೂ ಅಭಿಮಾನಿಯೋರ್ವ ಮುಂದೆ ನುಗ್ಗಿ ಸಿಎಂ ಕಾಲಿಗೆ ಬಿದ್ದಿದ್ದಾನೆ. ಅಭಿಮಾನಿಗೆ ಮತ್ತೆ ಸಿಗುತ್ತೇನೆ ಎಂದು ಎಚ್‍ಡಿಕೆ ಆಶ್ವಾಸನೆ ನೀಡಿದರು. ಅಭಿಮಾನಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    ಚುನಾವಣಾ ಪ್ರಚಾರ ಭಾಷಣದ ಸಮಯದಲ್ಲಿ ಸಿದ್ದರಾಮಯ್ಯನವರು, ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಬೆಂಬಲ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟ ಏರಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಮಾತು ಚರ್ಚೆಯಾಗುತ್ತಿದೆ.

     

     

  • ನಿಮ್ಮಲ್ಲಿ ಏನಾಗ್ತಿದೆ ಅದನ್ನು ಗಮನಿಸಿ, ನಮ್ ಪಕ್ಷದ ವಿಚಾರ ನಿಮಗ್ಯಾಕೆ: ಬಿಎಸ್‍ವೈಗೆ ಪರಂ ತಿರುಗೇಟು

    ನಿಮ್ಮಲ್ಲಿ ಏನಾಗ್ತಿದೆ ಅದನ್ನು ಗಮನಿಸಿ, ನಮ್ ಪಕ್ಷದ ವಿಚಾರ ನಿಮಗ್ಯಾಕೆ: ಬಿಎಸ್‍ವೈಗೆ ಪರಂ ತಿರುಗೇಟು

    ಬೆಂಗಳೂರು: ನಮ್ಮ ವಿಚಾರದಲ್ಲಿ ಅವರು ಗಮನ ಕೊಡುವುದು ಬೇಡ. ಬಿಜೆಪಿಯಲ್ಲಿ ಏನಾಗ್ತಿದೆ ಎನ್ನುವುದನ್ನು ಮೊದಲು ಗಮನಿಸಲಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಬಿಎಸ್ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.

    ತನ್ನನ್ನು ಬೆಂಬಲಿಸಿ ಕುಮಾರಸ್ವಾಮಿಯವರ ನಡೆಯನ್ನು ಟೀಕಿಸಿದ್ದ ಬಿಎಸ್‍ವೈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಾನು ಕರೆದ ಕಾರಣ ಈ ಸುದ್ದಿಗೋಷ್ಠಿಯಲ್ಲಿ ನಾನು ಮಾತನಾಡುವುದಿಲ್ಲ ಎಂದು ಮೊದಲೇ ಕುಮಾರಸ್ವಾಮಿಯವರಿಗೆ ತಿಳಿಸಿದ್ದೆ ಎಂದು ಸ್ಪಷ್ಟನೆ ನೀಡಿದರು.

    ಸಂಪುಟಕ್ಕೆ ಸೇರಿಸುವಾಗ ಕಳಂಕಿತರೋ, ಆರೋಪಿಗಳೋ ನೋಡುವುದಿಲ್ಲ ಜನರಿಂದ ಆಯ್ಕೆಯಾದ ಯಾರೇ ಆಗಲಿ ನಾವು ಸೇರಿಸುತ್ತೇವೆ ಎಂದರು.

    ಪರಮೇಶ್ವರ್ ಅವರನ್ನು ನಿರ್ಲಕ್ಷಿಸಿ ಏಕಾಂಗಿಯಾಗಿ ಸುದ್ದಿಗೋಷ್ಠಿ ನಡೆಸುವ ಮೂಲಕ ಸಿಎಂ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ. ಮಿತ್ರ ಪಕ್ಷದ ಮೇಲೆ ಅವರಿಗೆ ವಿಶ್ವಾಸವಿಲ್ಲವೆಂದು ಇದರಿಂದಲೇ ತಿಳಿಯುತ್ತದೆ. ಹೀಗಿರುವಾಗ ಈ ಅಪವಿತ್ರ ಮೈತ್ರಿ ಸರ್ಕಾರದಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿ ಯಡಿಯೂರಪ್ಪ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್!