Tag: ಹೆಚ್

  • ಬಿಜೆಪಿ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ: ಹೆಚ್‍ಡಿಕೆ

    ಬಿಜೆಪಿ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ: ಹೆಚ್‍ಡಿಕೆ

    ರಾಮನಗರ: ಬಿಜೆಪಿ (BJP)ಯು ಜೆಡಿಎಸ್ (JDS) ಅನ್ನು ಮುಗಿಸಬೇಕು ಎನ್ನುವ ನಡವಳಿಕೆ ಹಾಗೂ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ ಎಂದು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‍ಗೆ ಹೀನಾಯ ಸೋಲು ವಿಚಾರದ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತಾ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ಕೊಡ್ತಾರಾ ಎಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿದರು. ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ. ಎಲ್ಲಾ ಲೆಕ್ಕಾಚಾರ ಮಾಡಿಯೇ ಸ್ಕೀಂ ಮಾಡಿರುತ್ತಾರೆ. ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕ್ತಿದ್ದಾರೆ. ನೋಡೋಣ ಮುಂದೆ ಏನ್ ಮಾಡ್ತಾರೆ ಅಂತ ಎಂದರು. ಇದನ್ನೂ ಓದಿ: ದಯವಿಟ್ಟು ನಮ್ಮನ್ನು ಕ್ಷಮಿಸಿ- ಹೀಗಂದಿದ್ಯಾಕೆ ಪ್ರತಾಪ್ ಸಿಂಹ?

    ಇದೇ ವೇಳೆ ಚುನಾವಣಾ ಸೋಲಿನ ಪರಾಮರ್ಶೆ ವಿಚಾರ ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆ ನಿಲ್ಲುತ್ತೇವೆ. ನನ್ನ ನಿರೀಕ್ಷೆ ಹುಸಿಯಾಗಿದೆ, ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ. ಪಂಚರತ್ನ ಯೋಜನೆಗಳು ಜನರಿಗೆ ಹಿಡಿಸಲಿಲ್ಲ ಅನ್ಸುತ್ತೆ. ಕಾಂಗ್ರೆಸ್‍ನ ಗ್ಯಾರಂಟಿಗಳ ನಂಬಿ ಮತಹಾಕಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ. ದೇವೇಗೌಡ (HD Devegowda) ರು ಎರಡು ಬಾರಿ ಸೋತ ಬಳಿಕವೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜನ ಮುಂದಿನ ದಿನಗಳಲ್ಲಿ ಮತ್ತೆ ಜೆಡಿಎಸ್ ಬೇಕು ಅಂತ ಬಯಸ್ತಾರೆ ಎಂದು ಹೇಳಿದರು.

    ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಕೃತಜ್ಞತೆ. 90 ಸಾವಿರಕ್ಕೂ ಅಧಿಕ ಮತಗಳನ್ನ ನೀಡಿರೋ ಚನ್ನಪಟ್ಟಣ ಮತದಾರರಿಗೆ ಧನ್ಯವಾದ. ಅಲ್ಲದೇ ರಾಜ್ಯದಲ್ಲಿ ಜೆಡಿಎಸ್ ಹಿನ್ನಡೆ ಕುರಿತು ಪರಾಮರ್ಶೆ ನಡೆಸುತ್ತೇನೆ ರಾಮನಗರದಲ್ಲಿ ನಿಖಿಲ್ (Nikhil) ಸೋಲಿನ ಬಗ್ಗೆ ಹೆಚ್‍ಡಿಕೆ ಬೇಸರ ವ್ಯಕ್ತಪಡಿಸಿದರು.

  • ಉಪ ಚುನಾವಣೆ ಎದುರಿಸಲು ನಮ್ಮ ಬಳಿ ಹಣವಿಲ್ಲ, ಅಭ್ಯರ್ಥಿಗಳನ್ನ ನಿಲ್ಲಿಸಲ್ಲ: ಹೆಚ್‍ಡಿಡಿ

    ಉಪ ಚುನಾವಣೆ ಎದುರಿಸಲು ನಮ್ಮ ಬಳಿ ಹಣವಿಲ್ಲ, ಅಭ್ಯರ್ಥಿಗಳನ್ನ ನಿಲ್ಲಿಸಲ್ಲ: ಹೆಚ್‍ಡಿಡಿ

    ರಾಯಚೂರು: ಈ ಬಾರಿಯ ಉಪ ಚುನಾವಣೆಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ. ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನ ಹಾಕುವುದಿಲ್ಲ ಅಂತ ಜೆಡಿಎಸ್ ವರಷ್ಠ ಹೆಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

    ನಗರದ ಯರಮರಸ್ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ದೆಹಲಿಗೆ ಹೋಗಿ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುವುದಿದೆ. ದೇವದುರ್ಗದ ಗಾಣಧಾಳ ಗ್ರಾಮದಲ್ಲಿ 2 ಗುಂಟೆ ಜಮೀನಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ರೈತನ ಮನೆಗೆ ಭೇಟಿ ನೀಡುತ್ತಿದ್ದೇನೆ. ಪಕ್ಷ ಸಂಘಟನೆಯ ಕೆಲಸಕ್ಕೆ ರಾಯಚೂರಿಗೆ ಬಂದಿದ್ದೇನೆ ಅಂತ ತಮ್ಮ ಕಾರ್ಯಕ್ರಮದ ವಿವರ ನೀಡಿದರು.

    2023ರಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಕುಮಾರಸ್ವಾಮಿ ಸರ್ಕಾರ ಮುಗಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪಕ್ಷ ಕಟ್ಟುವುದಕ್ಕಾಗಿ ನಾನು ಸಂಪೂರ್ಣ ಭಾಗಿಯಾಗುತ್ತೇನೆ. ಯಡಿಯೂರಪ್ಪ ಸರ್ಕಾರದ ಅಸ್ಥಿರತೆಗೆ ನಾನು ಮುಂದಾಗುವುದಿಲ್ಲ. ಜಾತ್ಯಾತೀತ ಜನತಾದಳದ ವರಿಷ್ಠನಾಗಿ ತೀರ್ಮಾನ ಮಾಡಿದ್ದೇನೆ .ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

    ನಮ್ಮಲ್ಲಿಯೂ 34 ಜನ ಶಾಸಕರಿದ್ದಾರೆ, ನಾವು ವಿಲೀನ ಆಗ್ತೇವೆ ಅಂತಾರೆ ನಾನು ಯಾರ ಬಗ್ಗೆ ಟೀಕೆ ಮಾಡಲ್ಲ. ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಯಾರ ಮನೆಗೂ ಹೋಗಿಲ್ಲ. ಗುಲಾಂನಬಿ ಆಜಾದ್ ಹಾಗೂ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗುಲಾಂನಬಿ ಆಜಾದ್ ಅವರೇ ಕುಮಾರಸ್ವಾಮಿ ಸಿಎಂ ಆಗಲು ಕಾರಣ. ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು. ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ. ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ನಾನು ಪಕ್ಷ ಕಟ್ಟುತ್ತೇನೆ. ಹಿಂದೆ ಟಿಕೆಟ್ ನೀಡುವ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಅಂತ ದೇವೇಗೌಡರು ಹೇಳಿದರು.

    ಇದೇ ವೇಳೆ ದೆಹಲಿಯಲ್ಲಿ ರೈತ ಹೋರಾಟದ ಟ್ರ್ಯಾಕ್ಟರ್ ಪರೇಡ್ ವಿಚಾರ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ ಅವಸರದಲ್ಲಿ ಬಿಲ್ ಪಾಸ್ ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತಗೊಳ್ಳಿ. ರೈತರು 11 ಸಭೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದಾರೆ. ಗಲಭೆ ಮಾಡಿದೋರು ಯಾವ ಪಕ್ಷಕ್ಕೆ ಸೇರದವರೆವೆಂಬ ಊಹಾಪೋಹ ಕೇಳಿ ಬರುತ್ತಿವೆ. ರೌಡಿ ಎಲೆಮೆಂಟ್ಸ್ ಮಾಡಿದ್ದಾರೆ ಎಂಬ ಊಹಾಪೋಹ ಇವೆ. ಕಾಂಕ್ರಿಟ್ ಗೋಡೆ ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ರೈತರ ಮೇಲೆ ಅಷ್ಟೊಂದು ಕಠಿಣ ಕ್ರಮ ಯಾಕೆ..? ರೈತರ ಹೋರಾಟ ಪ್ರತಿಷ್ಠೆಯಾಗಬಾರದು ಎಂದರು.

    ರೈತರಿಗೆ ಅನಗತ್ಯ ಹಿಂಸೆ ಕೊಡಬಾರದು ಎಂದು ಸಂಸತ್ ನಲ್ಲಿ ಹೇಳಿದ್ದೇನೆ. ಖಲಿಸ್ತಾನ, ಉಗ್ರರು ಗಲಭೆ ಮಾಡಿದ್ದರ ಬಗ್ಗೆ ಇಲ್ಲಿ ನಾನು ಏನೂ ಹೇಳಲ್ಲ, ಗೃಹ ಸಚಿವರು ತನಿಖೆ ನಂತರ ಹೇಳಲಿ ಎಂದರು.

    ರಾಜ್ಯದಲ್ಲಿ ಮೀಸಲಾತಿಗಾಗಿ ವಿವಿಧ ಸಮಾಜಗಳು ನಡೆಸಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನಲ್ಲಿರೋ ಏಕೈಕ ಸೆಕ್ಯೂಲರ್ ಲೀಡರ್ ಸಿದ್ದರಾಮಯ್ಯ. ಮೀಸಲಾತಿ ಬಗ್ಗೆ ಅವರು ಮಾತನಾಡುತ್ತಾರೆ ಅಂತ ಹೇಳಿದರು. ನಾಲ್ಕು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ ಎಂಬ ಭಾವನೆಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತದ್ದು, ಮತಗಳು ಕಡಿಮೆ ಬಂದ್ರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು. ಇಡೀ ಬಿಜೆಪಿ ಟೀಮ್ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆಯಾಗಬಹುದು. ಆದರೆ ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಸಿಎಂ ಆಗಲಿದ್ದಾರೆ ಅಂತ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

  • ವಿಶ್ವನಾಥ್ ‘ಗೂಗ್ಲಿ’ಗೆ ಕೈ, ತೆನೆ ನಾಯಕರು ಕಂಗಾಲು

    ವಿಶ್ವನಾಥ್ ‘ಗೂಗ್ಲಿ’ಗೆ ಕೈ, ತೆನೆ ನಾಯಕರು ಕಂಗಾಲು

    ಮೈಸೂರು: ಹುಣಸೂರು ಉಪಚುನಾವಣೆಯ ಮಾತಿನ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಕಟ್ಟಿ ಹಾಕುವುದು ಬಹುಸುಲಭ ಎಂದು ಕೈ, ತೆನೆ ನಾಯಕರು ಭಾವಿಸಿದ್ದರು. ವಿಶ್ವನಾಥ್ ವಿರುದ್ಧ ಅನರ್ಹಗಿಂತಾ ದೊಡ್ಡ ಅಸ್ತ್ರ ಬೇಕಾ? ಎನ್ನುವುದು ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣ. ಆದರೆ, ಹಳ್ಳಿ ಹಕ್ಕಿ ಹಾಕಿದ ಒಂದು ಗ್ಲೂಗಿಗೆ ಕೈ ಪಾಳಯ ತತ್ತರಿಸಿದಂತೆ ಕಾಣುತ್ತಿದೆ.

    ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹುಣಸೂರು ಚುನಾವಣಾ ಅಖಾಡಕ್ಕೆ ಇಳಿದ ಕೂಡಲೇ ಹುಣಸೂರು ಹೊಸ ಜಿಲ್ಲೆ ಮಾಡೇ ಮಾಡುತ್ತೇನೆ. ಇದು ನನ್ನ ಶಪಥ ಎಂದು ಘೋಷಿಸಿ ಬಿಟ್ಟರು. ವಿಶ್ವನಾಥ್ ಅವರ ಈ ಘೋಷಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಕ್ಕಾಬಿಕ್ಕಿಯಾಗಿ ಬಿಟ್ಟಿವೆ. ಚುನಾವಣೆ ಘೋಷಣೆಗೆ ಮುನ್ನ ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡಿದ್ದ ಎಚ್. ವಿಶ್ವನಾಥ್, ಚುನಾವಣಾ ಅಖಾಡಕ್ಕೆ ಇಳಿದ ದಿನವೇ ಈ ವಿಚಾರ ಮರು ಪ್ರಸ್ತಾಪಿಸಿ ಶಪಥ ಮಾಡಿ ಬಿಟ್ಟರು.

    ವಿಶ್ವನಾಥ್ ಮಾಡಿದ ಈ ಶಪಥ ನೋಡಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಅಲ್ಲಿಯವರೆಗೂ ವಿಶ್ವನಾಥ್ ಅವರನ್ನು ಅನರ್ಹ ಶಾಸಕ ಎಂದಯ ಕ್ಷೇತ್ರದಲ್ಲಿ ಹೇಳುತ್ತಾ ಅವರ ವಿರುದ್ಧ ಸುಲಭವಾಗಿ ಜನಾಭಿಪ್ರಾಯ ರೂಪಿಸಬಹುದು ಎಂದುಕೊಂಡಿದ್ದ ಕಾಂಗ್ರೆಸ್, ಜೆಡಿಎಸ್‍ಗೆ ಈ ಶಪಥ ದೊಡ್ಡ ಏಟನ್ನು ನೀಡುತ್ತಿದೆ. ಎಚ್. ವಿಶ್ವನಾಥ್ ಎತ್ತಿರುವ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ ವ್ಯಕ್ತಪಡಿಸಿದರೆ ಅದರಿಂದ ಆಗುವ ನಷ್ಟ ದೊಡ್ಡದಿದೆ. ಈ ಪ್ರಸ್ತಾಪಕ್ಕೆ ಧ್ವನಿಗೂಡಿಸಿದರೆ ಅದರಿಂದ ವಿಶ್ವನಾಥ್ ಹೆಚ್ಚು ಲಾಭವಾಗಲಿದೆ. ಹೀಗಾಗಿ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿವೆ.

    ಎಚ್. ವಿಶ್ವನಾಥ್ ತಮ್ಮ ಪ್ರತಿ ಪ್ರಚಾರದಲ್ಲೂ ಈ ಪ್ರತ್ಯೇಕ ಜಿಲ್ಲೆಯ ವಿಚಾರ ಪ್ರಸ್ತಾಪ ಮಾಡುತ್ತಾ ತಾನೂ ಗೆದ್ದರೆ ಮಾತ್ರ ಇದು ಸಾಧ್ಯ. ಇದು ಸಾಧ್ಯವಾದರೆ ಹುಣಸೂರಿನ ಅಭಿವೃದ್ಧಿ ಚಿತ್ರಣ ಬದಲಾಗುತ್ತೆ. ನಿಮಗೆ ಒಂದು ಜಿಲ್ಲೆಯಾದರೆ ದೊಡ್ಡ ಅನುಕೂಲ ಆಗುತ್ತೆ ಎಂದು ಜನರಲ್ಲಿ ಬಗೆಬಗೆಯ ಕನಸು ಬಿತ್ತುತ್ತಿದ್ದಾರೆ. ಜನರು ಮನದಲ್ಲಿ ಈ ಕನಸು ಉಳಿಯುತ್ತಿದೆ ಎಂಬುದು ನಿಧಾನವಾಗಿ ಸ್ಪಷ್ಟವಾಗುತ್ತಿರುವ ಕಾರಣ ಕಾಂಗ್ರೆಸ್, ಜೆಡಿಎಸ್ ನಾಯಕರು ಈ ‘ಗೂಗ್ಲಿ’ಗೆ ಪ್ರತಿಯಾಗಿ ಯಾವ ರೀತಿ ನಾವು ‘ಯಾರ್ಕರ್’ ಹಾಕಿ ವಿಶ್ವನಾಥ್ ಅವರನ್ನು ಕ್ಲೀನ್ ಬೌಲ್ಡ್ ಮಾಡಬಹುದು ಎಂದು ಚಿಂತಿಸುತ್ತಿದ್ದಾರೆ.

    ಕಾಂಗ್ರೆಸ್ – ಜೆಡಿಎಸ್ ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸುತ್ತವೆ ಎಂಬುದನ್ನು ಎಚ್. ವಿಶ್ವನಾಥ್ ಸ್ಪಷ್ಟವಾಗಿ ಅಂದಾಜು ಮಾಡಿಯೇ ಈ ಪ್ರತ್ಯೇಕ ಜಿಲ್ಲೆಯ ಬ್ರಹ್ಮಾಸ್ತ್ರ ಸಿದ್ಧ ಮಾಡಿಕೊಂಡು ಈಗ ಪ್ರಯೋಗಿಸಿದ್ದಾರೆ. ಈ ಕ್ಷಣದ ಮಟ್ಟಿಗೆ ಇದು ಕೆಲಸ ಮಾಡಿದಂತೆ ಕಾಣುತ್ತಿದೆ.

    ವಿಶ್ವನಾಥ್ ಹೇಳಿದ್ದು ಏನು?
    ಅಖಾಡಕ್ಕಿಳಿದ ಮೊದಲ ದಿನವೇ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ. ನಾನು ಹುಣಸೂರಿನಿಂದ ಗೆದ್ದು ಮಂತ್ರಿಯಾಗುತ್ತೇನೆ. ಹುಣಸೂರು ತಾಲೂಕನ್ನು ಹೊಸ ಜಿಲ್ಲೆಯಾಗಿ ಮಾಡುತ್ತೇನೆ. ಇದು ನನ್ನ ಶಪಥ ಎಂದು ವಿಶ್ವನಾಥ್ ಭರವಸೆ ನೀಡಿದ್ದಾರೆ.

    ನನ್ನದು ಬರೀ ಮಾತು, ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡುತ್ತೇನೆ. ನಮ್ಮದೇ ಸರ್ಕಾರ ಇದೆ. ಹುಣಸೂರು ತಾಲೂಕಿನ್ನು ಜಿಲ್ಲೆಯನ್ನಾಗಿ ಮಾಡಿಯೇ ಮಾಡುತ್ತೇನೆ. ಅದಕ್ಕೆ ದೇವರಾಜ ಅರಸು ಹೆಸರನ್ನು ಇಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶದ ಮರುದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ವಿಶ್ವನಾಥ್ ಮಾತು ಕೊಟ್ಟಿದ್ದಾರೆ.

    ಬಿಜೆಪಿ ಸೇರುವುದಕ್ಕೂ ಮುನ್ನ ಸಹ ಸಹ ವಿಶ್ವನಾಥ್ ಅವರು ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ್ದರು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.