Tag: ಹೂ ಅಲಂಕಾರ

  • 10 ವರ್ಷದ ಹಿಂದೆ ಸೈಕಲೂ ಇರ್ಲಿಲ್ಲ, ಈಗ ಕೋಟಿಗಳ ಒಡೆಯ – ಭಕ್ತನಿಂದ ದೇವಸ್ಥಾನ ಪುಷ್ಪಮಯ

    10 ವರ್ಷದ ಹಿಂದೆ ಸೈಕಲೂ ಇರ್ಲಿಲ್ಲ, ಈಗ ಕೋಟಿಗಳ ಒಡೆಯ – ಭಕ್ತನಿಂದ ದೇವಸ್ಥಾನ ಪುಷ್ಪಮಯ

    ಉಡುಪಿ: ಕಷ್ಟ ಬಂದಾಗ ದೇವರಿಗೆ ವಿಧವಿಧದ ಹರಕೆ ಹೋರುತ್ತಾರೆ. ಆದರೆ ಇಲ್ಲೊಬ್ಬ ಭಕ್ತ ಪ್ರತಿವರ್ಷ ಇಡೀ ದೇವಸ್ಥಾನವನ್ನೇ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ತನ್ನ ಹರಕೆಯನ್ನು ಪೂರೈಸುತ್ತಿದ್ದಾರೆ.

    ರಮೇಶ್ ಬಾಬು ಹೂವಿನಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ಇವರು ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲ್ ಕೂಡ ಇರಲಿಲ್ಲ. ಆದರೆ ಇಂದು ಇವರು ಕೋಟಿಗಳ ಒಡೆಯರಾಗಿದ್ದಾರೆ. ಹೀಗಾಗಿ ರಮೇಶ್ ತಮ್ಮ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದುಕೊಂಡು ಪೂಜೆ ಮಾಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್, ಕಳೆದ ಮೂರು ವರ್ಷದಿಂದ ಆಷಾಢದ ಶುಕ್ರವಾರದಂದು ಜನಾರ್ದನ- ಮಹಾಕಾಳಿ ದೇವಾಲಯದಲ್ಲಿ ನಿರಂತರವಾಗಿ ಅಮ್ಮನವರಿಗೆ ಹೂವಿನ ಅಲಂಕಾರ ಮಾಡಿಕೊಂಡು ಬರುತ್ತಿದ್ದೇನೆ. ಹೀಗಾಗಿ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ. ಈ ರೀತಿಯ ಹರಕೆ ನೀಡುತ್ತಿರುವುದು ಆರನೇ ಬಾರಿಯಾಗಿದೆ ಎಂದು ಹೇಳಿದ್ದಾರೆ.

    ಹೂವಿನ ಅಲಂಕಾರ ಸಂಕಲ್ಪ ಏಕೆ?
    ಒಮ್ಮೆ ಈ ತಾಯಿಯ ಸನ್ನಿಧಾನಕ್ಕೆ ಬಂದಾಗ ನಮ್ಮ ಊರಿನ ರೀತಿಯಲ್ಲಿ ಈ ತಾಯಿಗೂ ಏಕೆ ಹೂವಿನ ಅಲಂಕಾರ ಮಾಡಬಾರದು ಎಂದು ನಮ್ಮ ತಂಡದವರ ಜೊತೆ ಮಾತನಾಡಿದೆ. ಆಗ ಅವರು ಕೂಡ ಖುಷಿಯಿಂದ ಒಪ್ಪಿಕೊಂಡಿದ್ದರು. ಹೀಗಾಗಿ ಎಲ್ಲರೂ ಇಲ್ಲಿಗೆ ಬಂದು ಹೂವಿನ ಅಲಂಕಾರ ಮಾಡುತ್ತಿದ್ದೇವೆ. ಪ್ರತಿಬಾರಿ ಹೂವಿನ ಅಲಂಕಾರ ಮಾಡಿ ಹೋದಾಗೆಲ್ಲಾ ನಾವು ಹಂತಹಂತವಾಗಿ ಬೆಳೆಯುತ್ತಾ ಹೋದೆವು. ಇಂದು ನಾನು ಚಿಕ್ಕಬಳ್ಳಾಪುರದಲ್ಲಿ ನಗರಸಭಾ ಸದಸ್ಯನಾಗಿದ್ದೇನೆ. ನಾನು ಸಾಮಾನ್ಯ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೆ. ಆದರೆ ಇಂದು ನನಗೆ ಒಂದು ಸ್ಥಾನ ಸಿಕ್ಕಿದೆ ಅಂದರೆ ಅದಕ್ಕೆ ಈ ತಾಯಿಯೇ ಕಾರಣ. ಹೀಗಾಗಿ ನನ್ನ ಉಸಿರಿರುವ ತನಕ ಪ್ರತಿವರ್ಷ ಬಂದು ಹೂವಿನ ಅಲಂಕಾರ ಮಾಡುತ್ತೇನೆ ಎಂದು ರಮೇಶ್ ಬಾಬು ಹೇಳಿದ್ದಾರೆ.

    ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್, ಉಡುಪಿಗೆ ಬಂದಿದ್ದಾರೆ. ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತಂದಿದ್ದು, ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡಿದ್ದಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸಿದ್ದಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಾಲಯವಾಗಿ ಇಂದು ಪರಿವರ್ತನೆಗೊಂಡಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

    ಶುಕ್ರವಾರದಿಂದ ಮೂರು ದಿನ ಈ ಅಲಂಕಾರ ಇರುತ್ತದೆ. ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. ಈ ಮೂಲಕ ವಿಭಿನ್ನ ಹರಕೆಯನ್ನು ದೇವರಿಗೆ ಅರ್ಪಿಸಲಾಗಿದೆ.

  • ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಉಡುಪಿ: ಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ. ಕಷ್ಟ ಬಗೆಹರಿಸು ದೇವಾ ಅಂತ ನಾನಾ ವಿಧದ ಹರಕೆಗಳನ್ನು ಹೊರುತ್ತೇವೆ. ಕಷ್ಟ ಬಗೆಹರಿದು ಸುಖ ಸಿಕ್ಕಾಗ ಹರಕೆ ತೀರಿಸುತ್ತೇವೆ. ಇಲ್ಲೊಬ್ಬ ಭಕ್ತರು ವಿಭಿನ್ನ ಹರಕೆ ಹೊತ್ತು, ಪ್ರತಿ ವರ್ಷ ದೇವರನ್ನು ನಂದನವನದಲ್ಲಿ ಕೂರಿಸುತ್ತಾರೆ.

    ಮೂಲತಃ ಚಿಕ್ಕಬಳ್ಳಾಪುರದ ನಿವಾಸಿ ರಮೇಶ್ ಬಾಬು ಎಂಬವರು ದೇವರಿಗೆ ವಿಶೇಷ ಹರಕೆ ಸಲ್ಲಿಸುತ್ತಾ ಬಂದಿದ್ದಾರೆ. 10 ವರ್ಷದ ಹಿಂದೆ ಇವರ ಬಳಿ ಒಂದು ಸೈಕಲ್ ಕೂಡ ಇರಲಿಲ್ಲ. ಆದ್ರೆ ಇವತ್ತು ಕೋಟಿಗಳ ಒಡೆಯ. ರಮೇಶ್ ಅವರ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದು ನಂಬಿದ್ದಾರೆ. ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತಿ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ರಮೇಶ್ ಬಾಬು ಮಾತನಾಡಿ, ನಾನು 20 ವರ್ಷದ ಹಿಂದೆ ಏನೂ ಆಗಿರಲಿಲ್ಲ. ದಿನಸಿ ಸಾಮಾನು ಕಟ್ಟಿಕೊಂಡಿದ್ದೆ. ಅಂಬಲ್ಪಾಡಿ ಮಹಾಕಾಳಿ- ಜನಾರ್ದನ ದೇವಸ್ಥಾನಕ್ಕೆ ಬಂದ ನಂತರ ನನ್ನ ಜೀವನವೇ ಬದಲಾಯ್ತು. ಇವತ್ತಿಗೆ ಕೋಟಿ ರೂಪಾಯಿ ಸಂಪಾದನೆ ಮಾಡಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಅಮ್ಮನ ದೇವಸ್ಥಾನವನ್ನು ಸ್ಥಾಪನೆ ಮಾಡಿದ್ದೇನೆ. ನಾಲ್ಕು ವರ್ಷದಿಂದ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ ಹರಕೆ ತೀರಿಸುತ್ತಿದ್ದೇನೆ. ಕೊನೆಯ ಉಸಿರು ಇರೊವರೆಗೂ ಈ ಹರಕೆ ಮುಂದುವರೆಯುತ್ತದೆ ಎಂದು ಹೇಳಿದರು.

    ಆಷಾಢದ ಕೊನೆಯ ಶುಕ್ರವಾರದಂದು 200 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರ್ತಾರೆ. ಕಳೆದ ನಾಲ್ಕು ವರ್ಷದಿಂದ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಿದ್ದಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಪರಿವರ್ತನೆಗೊಳ್ಳುತ್ತದೆ.

    ಚಿಕ್ಕಬಳ್ಳಾಪುರದಿಂದ ಉಡುಪಿಗೆ ಫ್ಲವರ್ ಡೆಕೋರೇಟ್ ಮಾಡುವ ಭೈರೇಗೌಡ ಮತ್ತು ತಂಡ ಬರುತ್ತದೆ. ದಿನಪೂರ್ತಿ ಹೂವಿನ ಅಲಂಕಾರ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಕೂತು ಈ ಅಲಂಕಾರ ಮಾಡಿದ್ದೇವೆ. ಹೂವಿನ ದೇವಸ್ಥಾನದಂತೆ ಅಮ್ಮನ ದೇವಸ್ಥಾನ ಕಾಣಿಸುತ್ತಿದೆ. ನಮಗೆ ಇದೇ ಮನಸ್ಸಿಗೆ ಖುಷಿ. ರಮೇಶ್ ಬಾಬು ಅವರ ಈ ಹರಕೆ ನೋಡಿದ ಮೇಲೆ ನೂರಾರು ಮಂದಿ ಹೂವನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಅದನ್ನೆಲ್ಲಾ ಅಲಂಕಾರಕ್ಕೆ ಉಪಯೋಗಿಸಿದ್ದೇವೆ ಅಂತ ಭೈರೇಗೌಡ ಹೇಳಿದ್ದಾರೆ.

    ಲಕ್ಷಾಂತರ ರೂಪಾಯಿಯ ಹೂವಿನಿಂದ, ಸಾವಿರಾರು ರೂಪಾಯಿಯ ದ್ರಾಕ್ಷಿ, ಅನನಾಸು, ಜೋಳ, ಹಣ್ಣು ಹಂಪಲಿನಿಂದ ದೇವಸ್ಥಾನವನ್ನು ಈ ಯುವಕರ ತಂಡ ಸಿಂಗಾರ ಮಾಡಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಂಬಲ್ಪಾಡಿ ದೇವಸ್ಥಾನ ಹೂವಿನ ದೇವಸ್ಥಾನದಂತೆ ಕಂಗೊಳಿಸ್ತಾಯಿತ್ತು.