Tag: ಹೂವಿನ ಹಡಗಲಿ

  • ಆಕಸ್ಮಿಕ ಬೆಂಕಿಗೆ 30 ಹುಲ್ಲಿನ ಬಣವೆಗಳು ಸುಟ್ಟು ಭಸ್ಮ

    ಆಕಸ್ಮಿಕ ಬೆಂಕಿಗೆ 30 ಹುಲ್ಲಿನ ಬಣವೆಗಳು ಸುಟ್ಟು ಭಸ್ಮ

     ಬೇಸಿಗೆಯಲ್ಲಿ ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿಟ್ಟಿದ್ದ ರೈತರು

    ಬಳ್ಳಾರಿ: ಆಕಸ್ಮಿಕ ಬೆಂಕಿಗೆ (Fire) 30 ಹುಲ್ಲಿನ ಬಣವೆಗಳು (Haystacks) ಸುಟ್ಟು ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ (Huvinahadagali) ತಾಲೂಕಿನ ಸೋಗಿ ಗ್ರಾಮದಲ್ಲಿ ನಡೆದಿದೆ.

    ರೈತರು ತಮ್ಮ ಜಾನುವಾರುಗಳಿಗೆ ಬೇಸಿಗೆಗಾಗಿ ಸುಮಾರು 30 ಬಣವೆಗಳನ್ನ ಸಂಗ್ರಹಿಸಿಟ್ಟಿದ್ದರು. ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಷ್ಟೂ ಮೇವಿನ ಬಣವೆಗಳು ಸುಟ್ಟು ಹೋಗಿವೆ.

    ಬಣವೆ ಇರುವ ಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ್ದ ರೈತರು (Farmers) ಸ್ಥಳಕ್ಕೆ ಹೋಗುವಷ್ಟರಲ್ಲಿ ಎಲ್ಲಾ ಬಣವೆಗಳಿಗೆ ಬೆಂಕಿ ತಗುಲಿತ್ತು. ಕೂಡಲೇ ರೈತರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬಣವೆಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಏಪ್ರಿಲ್ Vs ಡಿಸೆಂಬರ್ ವಾರ್!

    ರೈತರಾದ ರಫಿ, ನಾಗರಾಜ, ಆನಂದ, ಮಂಜವ್ವ, ಕೊಟ್ರೇಶ, ಖಾಜಾಸಾಬ್, ಜಿನ್ನಾಸಾಬ್, ಟಿ.ಬಸವರಾಜ, ನಾಗಪ್ಪ ತಳಕಲ್, ಕಾಗನೂರು ನಾಗರಾಜಪ್ಪ ಸೇರಿ ಒಟ್ಟು ಹತ್ತು ಜನ ರೈತರಿಗೆ ಸೇರಿದ್ದ ಲಕ್ಷಾಂತರ ಬೆಲೆ ಬಾಳುವ ಮೆಕ್ಕೆಜೋಳದ ಸಿಪ್ಪೆ ಹಾಗೂ ಭತ್ತದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾಗಿವೆ. ಇದನ್ನೂ ಓದಿ: ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್‌ ಮಾಡಿ ಹೇಳಿದ್ದ ಚೇತನ್‌

    ಪ್ರತಿವರ್ಷ ಬೇಸಿಗೆಯ ಸಂದರ್ಭದಲ್ಲಿ ಯಾರೋ‌ ಕಿಡಿಗೇಡಿಗಳು ಮೇವಿನ ಬಣವೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಆಗಿತ್ತು ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಇಟ್ಟಿಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

     

  • ತುಂಬಿದ ಕೊಡ ತುಳಕಿತಲೇ ಪರಾಕ್ – ಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ

    ತುಂಬಿದ ಕೊಡ ತುಳಕಿತಲೇ ಪರಾಕ್ – ಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ

    ಬಳ್ಳಾರಿ:ತುಂಬಿದ ಕೊಡ ತುಳಕಿತಲೇ ಪರಾಕ್‘ ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ (Mylara Lingeshwara Karnika) ದೈವವಾಣಿ ನುಡಿ.

    ವಿಜಯನಗರ ಜಿಲ್ಲೆ ಹೂವಿನಹಡಗಲಿ (Huvina Hadagali) ತಾಲೂಕಿನ ಮೈಲಾರದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

    ಉತ್ಸವ ಹೇಗೆ ನಡೆಯಿತು?
    ಆರಂಭದಲ್ಲಿ ದೇವಸ್ಥಾನದ ವಂಶಪಾರಂಪರ್ಯ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಇದನ್ನೂ ಓದಿ: ಮತ್ತೆ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ

    ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು.

    ಕ್ಷೇತ್ರದ ಪರಂಪರೆಯ ಸಂಕೇತವಾಗಿರುವ 12 ಅಡಿ ಎತ್ತರದ ಬಿಲ್ಲು ಏರಿದ ಗೊರವಯ್ಯ ‘ಸದ್ದಲೇ’ ಎಂದು ಕೂಗುತ್ತಿದ್ದಂತೆ ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾದರು. ನಂತರ ಆಗ ಗೊರವಯ್ಯ ರಾಮಣ್ಣ ದೈವವಾಣಿಯನ್ನು ನುಡಿದು ಕೆಳಕ್ಕೆ ಜಿಗಿದಾಗ ಅಲ್ಲಿ ನೆರೆದಿದ್ದ ಗೊರವ ಸಮೂಹದವರು ಅವರನ್ನು ಕಂಬಳಿಯಲ್ಲಿ ಹಿಡಿದರು. ಮೈಲಾರ ಲಿಂಗೇಶ್ವರನ ಕಾರಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾದರು. ಇದನ್ನೂ ಓದಿ: Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ

     

    ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯು ಈ ವರ್ಷದ ಭವಿಷ್ಯವಾಣಿ ಎಂಬುದು ಭಕ್ತರ ನಂಬಿಕೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ ಎಂದು ಮೈಲಾರ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಪ್ಪಯ್ಯ ಒಡೆಯರು ಕಾರಣಿಕವನ್ನು ವಿಶ್ಲೇಷಿಸಿದರು.

  • ಸಂಪಾಯಿತಲೇ ಪರಾಕ್: ಮೈಲಾರಲಿಂಗೇಶ್ವರ ಗೊರವಯ್ಯ ಕಾರ್ಣಿಕ

    ಸಂಪಾಯಿತಲೇ ಪರಾಕ್: ಮೈಲಾರಲಿಂಗೇಶ್ವರ ಗೊರವಯ್ಯ ಕಾರ್ಣಿಕ

    ವಿಜಯನಗರ: ಜಿಲ್ಲೆಯ ಹೂವಿನಹಡಗಲಿ (Hoovina Hadagali) ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು (Mylara Lingeshwara Karnika) ಅತ್ಯಂತ ಸಂಭ್ರಮ, ಸಡಗರದಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು.

    ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವೃತವನ್ನು ಆಚರಿಸಿದ ರಾಮಪ್ಪ ಗೊರವಯ್ಯ, ಸೋಮವಾರ ಸಂಜೆ 5:30ಕ್ಕೆ ಹದಿನೈದು ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೇ ಎನ್ನುತ್ತಲೇ ಸಂಪಾಯಿತಲೇ ಪರಾಕ್‌ ಎಂದು ಕಾರ್ಣಿಕವಾಣಿ(ವರ್ಷದ ಭವಿಷ್ಯವಾಣಿ) ನುಡಿದಿದ್ದಾರೆ.

    ಪ್ರತಿ ವರ್ಷ ಭರತ ಹುಣ್ಣಿಮೆ ಸಮಯದಲ್ಲಿ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆ ಪ್ರಯುಕ್ತ ಭರತ ಹುಣ್ಣಿಮೆಯ ಎರಡು ದಿನಗಳ ನಂತರ ಮೈಲಾರದ ಡೆಂಕನಮರಡಿಯಲ್ಲಿ ವರ್ಷದ ಭವಿಷ್ಯವಾಣಿ ಎಂದು ನಂಬಿಕೊಂಡು ಬಂದಿರುವ ಕಾರ್ಣಿಕೋತ್ಸವ ನಡೆಯುತ್ತದೆ. ಇದನ್ನೂ ಓದಿ: ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ: ಸ್ವಪಕ್ಷದ ವಿರುದ್ಧ ಶಾಸಕ ಅಲ್ಲಮಪ್ರಭು ಪಾಟೀಲ್ ಅಸಮಾಧಾನ

    ಮೈಲಾರಲಿಂಗೇಶ್ವರನ 2024ರ ಕಾರ್ಣಿಕ ವಾಣಿ ಬರದಿಂದ ಕಂಗಾಲಾಗಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 2023ರಲ್ಲಿನ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ನಾಡಿನ ರೈತರು ಅಕ್ಷರಶಃ ಕಂಗಾಲಾಗಿದ್ದರು. ಎರಡು, ಮೂರು ಬಿತ್ತನೆ ಮಾಡಿದರೂ ಮಾಡಿದ ಖರ್ಚು ಬಾರದಂತಾಗಿ ರೈತರು ದಿಕ್ಕು ತೋಚದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೇಸಿಗೆಗೂ ಮುನ್ನವೇ ನಾಡಿನ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಆದರೆ ಮೈಲಾರದಲ್ಲಿ ರಾಮಪ್ಪ ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ನೆರೆದಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತು. ಇದನ್ನೂ ಓದಿ: ನಂಬರ್‌ ಗೇಮ್‌ನಲ್ಲಿ ಮೂರು ಪಕ್ಷಗಳು – ಬಿಜೆಪಿ ಅತೃಪ್ತರು, ರೆಡ್ಡಿ ನಡೆ ಕುತೂಹಲ

    ಮೈಲಾರಲಿಂಗೇಶ್ವರನ ಕಾರ್ಣಿಕವಾಣಿಯನ್ನು ಆಲಿಸಲು ಮೈಲಾರಕ್ಕೆ ಆಗಮಿಸಿದ್ದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬರಗಾಲದಿಂದ ರೈತಾಪಿ ವರ್ಗದ ಜನರು ಸೇರಿದಂತೆ ನಾಡಿನ ಜನರು ಬರಗಾಲವನ್ನು ಅನುಭವಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಅನುಕೂಲ ಆಗಲಿದೆ. ಭವಿಷ್ಯದ ದಿನಗಳಲ್ಲಿ ಮಳೆ ಬೆಳೆ ಸಮೃದ್ಧಿಯಿಂದ ಕೂಡಿರಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.

    ಕಾರ್ಣಿಕದ ಬಗ್ಗೆ ಅಪಸ್ವರ:
    ಗೊರವಯ್ಯ ರಾಮಪ್ಪ ಕಾರ್ಣಿಕದ ಬಗ್ಗೆ ಸ್ವತಃ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದಾರೆ. ಈ ವರ್ಷದ ಕಾರ್ಣಿಕ ಸತ್ಯವಾಗಲ್ಲ. ನಿಯಮ – ಸಂಪ್ರದಾಯಗಳನ್ನು ಗಾಳಿಗೆ ತೂರಿ ಗುರುಪೀಠದ ನಿಯಮ ಪಾಲಿಸದೇ ಕಾರ್ಣಿಕ ನುಡಿದಿದ್ದಾರೆ. ಇದು ಕೇವಲ ಗೊರವಯ್ಯ ರಾಮಪ್ಪನ ನುಡಿ, ಇದು ದೈವ ವಾಣಿ ಅಲ್ಲ. ಕಾರ್ಣಿಕವನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಹಲವು ವರ್ಷಗಳಿಂದ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಹಾಗೂ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ವಡೆಯರ್ ನಡುವೆ ವೈಯಕ್ತಿಕ ಪ್ರತಿಷ್ಠೆ ಭಿನ್ನಾಭಿಪ್ರಾಯ ನಡೆಯುತ್ತಿದೆ. ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರತಿಷ್ಠೆಯ ಕದನ ನಡೆಯುತ್ತಿರುವುದು ಭಕ್ತರ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.