Tag: ಹೂಡಿಕೆ

  • ಅವಳಿ ನಗರಗಳಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ 10 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ್

    ಅವಳಿ ನಗರಗಳಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ 10 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ್

    – ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ

    ಹುಬ್ಬಳ್ಳಿ: ನಗರದಲ್ಲಿ ಏಕಸ್, ಯಫ್ಲೆಕ್ಸ್, ರಾಜೇಶ್ ಎಕ್ಸೋ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ. ಇದರಿಂದ ಸ್ಥಳೀಯವಾಗಿ 10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಇದರಿಂದ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗ ಅರಸಿ ಬೆಂಗಳೂರು, ಪೂಣೆ, ಮುಂಬೈಗಳಿಗೆ ವಲಸೆ ಹೋಗುವುದು ತಪ್ಪಲಿದೆ ಸ್ಥಳೀಯವಾಗಿ ವಿಪುಲ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆದ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ನಗರದ ಮಹಿಳಾ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದರು. ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳಲ್ಲಿನ ಬಂಡವಾಳ ಹೂಡಿಕೆಯನ್ನು ರಾಜ್ಯದ ಎರೆಡು ಹಾಗೂ ಮೂರನೇ ಹಂತದ ನಗರಗಳಲ್ಲಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.

    ಸರ್ಕಾರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ವಿತರಣೆ ಮಾಡುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ಪರೀಕ್ಷೆಗಳಿಗೆ ಹೆಚ್ಚಿನ ಜ್ಞಾನ ಪಡೆಯಲು ಅವಕಾಶವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೆರಿಟ್‍ಗೆ ಹೆಚ್ಚಿನ ಅವಕಾಶವಿದೆ. ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳದೆ ಅಧ್ಯಯನ ನಡೆಸಿ. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸುತ್ತವೆ ಎಂದರು.

    ಇದೇ ಸಂದರ್ಭದಲ್ಲಿ ಮಹಿಳಾ ವಿದ್ಯಾಪೀಠದ ಪ್ರಾಚಾರ್ಯೆ ಗೀತಾ ಎಂ. ಅವರ ಮನವಿ ಸ್ಪಂದಿಸಿ, ವಿವಿಧ ಕಂಪನಿಗಳ ಸಿ.ಎಸ್.ಆರ್ ನಿಧಿಯಡಿ ಕಾಲೇಜಿಗೆ ಅಗತ್ಯ ಇರುವ ಕಂಪ್ಯೂಟರ್ ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ನ 440 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲಾಯಿತು. ಕಾಲೇಜಿನ ಪ್ರಾಚಾರ್ಯ ಆನಂದ ಖಾನಾಪುರ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಗಲ್ವಾನ್‍ನಲ್ಲಿ ಶಾಂತಿ – ಚೀನಾದ 45 ಹೂಡಿಕೆಗಳಿಗೆ ಮತ್ತೆ ಒಪ್ಪಿಗೆ?

    ಗಲ್ವಾನ್‍ನಲ್ಲಿ ಶಾಂತಿ – ಚೀನಾದ 45 ಹೂಡಿಕೆಗಳಿಗೆ ಮತ್ತೆ ಒಪ್ಪಿಗೆ?

    ನವದೆಹಲಿ: ಭಾರತ, ಚೀನಾ ನಡುವಿನ ಗಲ್ವಾನ್ ಘರ್ಷಣೆಯ ವಿವಾದ ತಣ್ಣಗಾಗುತ್ತಿದ್ದಂತೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತೆ ಚಿಗುರೊಡೆದಿದೆ. ಈ ಮೊದಲು ತಡೆ ನೀಡಿದ್ದ 150 ಹೂಡಿಕೆಗಳ ಪೈಕಿ ಸುಮಾರು 45 ಹೂಡಿಕೆಗಳಿಗೆ  ಭಾರತ ಮತ್ತೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

    ಗ್ರೇಟ್ ವಾಲ್ ಮೋಟರ್ ಮತ್ತು ಸೈಕ್ ಮೋಟರ್ ಕಾರ್ಪ್ ಸಹಿತ ಇತರ 45 ಹೂಡಿಕೆಗಳಿಗೆ ಭಾರತ ಸರ್ಕಾರ ಮರು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರ ಮತ್ತು ಕೈಗಾರಿಕಾ ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.

    ಈ ಎಲ್ಲಾ ಹೂಡಿಕೆಗಳಿಗೆ ಭಾರತ ಹಾಗೂ ಚೀನಾದ ಕಂಪನಿಗಳ ನಡುವೆ ಕಳೆದ ವರ್ಷವೇ ಒಪ್ಪಂದ ನಡೆದಿತ್ತು. ಆದರೆ ಗಲ್ವಾನ್ ಘರ್ಷಣೆಯಿಂದಾಗಿ ಭಾರತ 2 ಶತಕೋಟಿ ಡಾಲರ್ ಮೌಲ್ಯದ 150 ವಿವಿಧ ಹೂಡಿಕೆಗಳಿಗೆ ತಡೆ ನೀಡಿತ್ತು. ಈಗ ಭಾರತ ಮತ್ತೆ ಈ ಎಲ್ಲಾ ಹೂಡಿಕೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.

    ಕೇಂದ್ರ ಗೃಹ ಸಚಿವಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತರ ಸರ್ಕಾರಿ ಮೂಲದ ಮಾಹಿತಿ ಮತ್ತು ಕೈಗಾರಿಕಾ ಮೂಲದಿಂದ ತಿಳಿದು ಬಂದ ಮಾಹಿತಿ ಪ್ರಕಾರ ಗ್ರೇಟ್ ವಾಲ್ ಮತ್ತು ಜನರಲ್ ಮೋಟರ್ಸ್, ಅಮೆರಿಕ ಕಾರು ತಯಾರಿಕಾ ಘಟಕವನ್ನು ಖರೀದಿಸಿ ಭಾರತದಲ್ಲಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಬರೋಬ್ಬರಿ 250 ದಶಲಕ್ಷ ಡಾಲರ್ – 300 ದಶಲಕ್ಷ ಡಾಲರ್ ಮೌಲ್ಯ ಇರಬಹುದು ಎಂದು ಅಂದಾಜಿಸಲಾಗಿದೆ.

    ಮುಂದಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಲು ಗ್ರೇಟ್ ವಾಲ್ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ ಕಾರುಗಳನ್ನು ಮಾರಾಟ ಮಾಡಿ ನಂತರ ಎಲೆಕ್ಟ್ರಿಕ್ ಕಾರು ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಗಡಿ ಘರ್ಷಣೆಯ ನಂತರ ಚೀನಾದ ಆಟೋಮೊಬೈಲ್ಸ್, ಕೆಮಿಕಲ್ಸ್, ಟೆಕ್ಸ್ಟೈಲ್ ಸಹಿತ ಇತರ ಪ್ರಮುಖ ಕೈಗಾರಿಕಾ ಪ್ರಸ್ತಾಪಗಳಿಗೆ ಭಾರತ ತಡೆ ನೀಡಿತ್ತು.

  • ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ

    ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ

    ಮುಂಬೈ: ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ (ಎಡಿಐಎ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‍ನಲ್ಲಿ (ಆರ್.ಆರ್.ವಿ.ಎಲ್) 5,512.50 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಲ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಮಂಗಳವಾರ ಘೋಷಣೆ ಮಾಡಿದೆ.

    ಆರ್.ಆರ್.ವಿ.ಎಲ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾಗಿದೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.20% ಈಕ್ವಿಟಿ ಪಾಲು ಖರೀದಿಯನ್ನು ಎಡಿಐಎ ಮಾಡಿದಂತಾಗುತ್ತದೆ.

    ಈಗಿನ ವ್ಯವಹಾರವೂ ಸೇರಿಕೊಂಡಂತೆ ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬದಾಲ, ಜಿಐಸಿ, ಟಿಪಿಜಿ ಹಾಗೂ ಎಡಿಐಎ ಈ ಎಲ್ಲವೂ ಸೇರಿ ಕಳೆದ ನಾಲ್ಕು ವಾರದೊಳಗೆ 37,710 ಕೋಟಿ ರುಪಾಯಿಯನ್ನು ಸಂಗ್ರಹಿಸಿದಂತಾಗುತ್ತದೆ. ಇದು ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್‍ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಆರ್.ಆರ್.ವಿ.ಎಲ್‍ಗೆ ಇದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಾತನಾಡಿ, ಎಡಿಐಎ ಸದ್ಯದ ಹೂಡಿಕೆಯಿಂದ ಬಹಳ ಖುಷಿಯಾಗಿದೆ. ಅದರ ಮುಂದುವರಿದ ಬೆಂಬಲ ಮತ್ತು ಜಾಗತಿಕ ಮಟ್ಟದಲ್ಲಿ ಬಲವಾದ ಹಿನ್ನೆಲೆಯಿಂದ ಅನುಕೂಲ ಆಗುವ ಭರವಸೆಯ ಮೂಲಕ ನಾಲ್ಕು ದಶಕಕ್ಕೂ ಹೆಚ್ಚು ಸಮಯದಿಂದ ಮೌಲ್ಯವನ್ನು ಸೃಷ್ಟಿಸುತ್ತಿದೆ. ರಿಲಯನ್ಸ್ ರೀಟೇಲ್ ಸಾಮಥ್ರ್ಯ ಹಾಗೂ ಪ್ರದರ್ಶನಕ್ಕೆ ಇದು ಮತ್ತೊಂದು ನಿದರ್ಶನ. ಹೊಸ ವಾಣಿಜ್ಯ ವ್ಯವಹಾರದ ಮಾದರಿಯೊಂದು ಸಿದ್ಧವಾಗುತ್ತಿದೆ ಎಂದಿದ್ದಾರೆ.

    ಎಡಿಐಎಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹಮದ್ ಷಾವನ್ ಅಲ್ಧೇರಿ ಮಾತನಾಡಿ, ಭಾರತದ ಪ್ರಮುಖ ರೀಟೇಲ್ ವ್ಯವಹಾರದ ಉದ್ಯಮವಾಗಿ ರಿಲಯನ್ಸ್ ರೀಟೇಲ್ ಬಹಳ ಶೀಘ್ರವಾಗಿ ರೂಪುಗೊಂಡಿತು. ಅದಕ್ಕೆ ಅದರ ಫಿಸಿಕಲ್ ಹಾಗೂ ಡಿಜಿಟಲ್ ಪೂರೈಕೆ ಜಾಲದ ಬಲವೂ ಇದೆ. ಆರ್.ಆರ್.ವಿ.ಎಲ್‍ನ ಇನ್ನಷ್ಟು ಬೆಳವಣಿಗೆಗೆ ಪೂರಕ ಸ್ಥಿತಿಯಲ್ಲಿದೆ. ಹೆಚ್ಚು ಬಳಕೆ ಆಧಾರಿತ ಬೆಳವಣಿಗೆ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಎಲ್ಲಿ ವೇಗವಾಗಿ ಆಗುತ್ತಿದೆಯೋ ಏಷ್ಯಾದ ಅಂಥ ಪ್ರಾದೇಶಿಕ ಭಾಗದಲ್ಲಿ ಹೂಡಿಕೆ ಮಾಡುವುದು ನಮ್ಮ ಸ್ಟ್ರಾಟೆಜಿಯ ಭಾಗ ಎಂದು ಅವರು ಹೇಳಿದ್ದಾರೆ.

    ಎಡಿಐಎ ಆರಂಭವಾದದ್ದು 1976ರಲ್ಲಿ. ಜಾಗತಿಕ ಮಟ್ಟದಲ್ಲಿ ವಿವಿಧ ಹೂಡಿಕೆ ಸಂಸ್ಥೆಗಳಲ್ಲಿ ಅಬುಧಾಬಿ ಸರ್ಕಾರದ ಪರವಾಗಿ ಹೂಡಿಕೆ ಮಾಡಿಕೊಂಡು ಬಂದಿದೆ. ದೀರ್ಘಕಾಲದಲ್ಲಿ ಮೌಲ್ಯವನ್ನು ಸೃಷ್ಟಿಸುವಂತೆ ಮಾಡುವ ಕಡೆಗೆ ಎಡಿಐಎ ಗಮನ ನೆಟ್ಟಿರುತ್ತದೆ. ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

  • ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್‍ನಲ್ಲಿ 6,247.5 ಕೋಟಿ ರೂ. ಹೂಡಿಕೆ

    ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್‍ನಲ್ಲಿ 6,247.5 ಕೋಟಿ ರೂ. ಹೂಡಿಕೆ

    ಮುಂಬೈ: ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‍ವೆಸ್ಟ್ ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 6,247.5 ಕೋಟಿ ರುಪಾಯಿ (AED 3.1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಗುರುವಾರ ಘೋಷಣೆ ಮಾಡಿವೆ.

    ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.40% ಈಕ್ವಿಟಿ ಪಾಲು ಖರೀದಿಯನ್ನು ಮುಬದಾಲ ಮಾಡಿದಂತಾಗುತ್ತದೆ.

    ಈ ವರ್ಷದ ಆರಂಭದಲ್ಲಿ ಮುಬದಾಲದಿಂದ ಜಿಯೋ ಪ್ಲಾಟ್ ಫಾಮ್ರ್ಸ್ ನಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆ ಮಾಡಲಾಗಿತ್ತು. ಜಿಯೋ ಪ್ಲಾಟ್ ಫಾರ್ಮ್ಸ್ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನ ಮತ್ತೊಂದು ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಮುಬದಾಲ ಮಾಡುತ್ತಿರುವ ಅತಿ ಮುಖ್ಯವಾದ ಹೂಡಿಕೆ ಇದು.

    ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಮೌಲ್ಯಯುತ ಹೂಡಿಕೆದಾರರಾಗಿ ಮುಬದಾಲವನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಜ್ಞಾನ ಶ್ರೀಮಂತಿಕೆಯಿಂದ ಕೂಡಿರುವ ಮುಬದಾಲದಂಥ ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಿರುವುದನ್ನು ಗೌರವಿಸುತ್ತೇವೆ ಎಂದಿದ್ದಾರೆ.

    ಭಾರತದ ರೀಟೇಲ್ ವಲಯವನ್ನು ಬಲಪಡಿಸಬೇಕು ಎಂದಿರುವ ನಮ್ಮ ಗುರಿಯ ಮೇಲೆ ಮುಬದಾಲ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅದು ಕೂಡ ಲಕ್ಷಾಂತರ ಸಣ್ಣ ಪ್ರಮಾಣದ ಚಿಲ್ಲರೆ ಮಾರಾಟಗಾರರು, ವರ್ತಕರು- ತಂತ್ರಜ್ಞಾನದ ಶಕ್ತಿಯ ಮೂಲಕ. ಮುಬದಾಲದ ಹೂಡಿಕೆ ಮತ್ತು ಮಾರ್ಗದರ್ಶನವು ಈ ಪ್ರಯಾಣದಲ್ಲಿ ಬೆಲೆಯೇ ಕಟ್ಟಲಾಗದ ಬೆಂಬಲ ಆಗಲಿದೆ ಎಂದಿದ್ದಾರೆ.

    ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ ಸಮೂಹದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಖಲ್ದೂನ್ ಅಲ್ ಮುಬಾರಕ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

    ಅವರ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡಂತೆ ಭಾರತದ ಗ್ರಾಹಕರ ಆರ್ಥಿಕತೆಯನ್ನು ಡಿಜಿಟೈಸೇಷನ್ ಶಕ್ತಿಯ ಮೂಲಕ ಬದಲಾವಣೆ ಮಾಡುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ ಪಡೆಯಲು ಸಹಾಯ ಮಾಡುತ್ತದೆ. ಕಂಪೆನಿಯ ನಿರಂತರ ಬೆಳವಣಿಗೆಗೆ ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

    ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

  • ಇನ್ವೆಸ್ಟ್ ಕರ್ನಾಟಕ – 72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ!

    ಇನ್ವೆಸ್ಟ್ ಕರ್ನಾಟಕ – 72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ!

    – 90 ಸಾವಿರ ಉದ್ಯೋಗ ಸೃಷ್ಟಿ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಒಟ್ಟು 51 ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಸಮಾವೇಶದ ಬಳಿಕ ಡೆನಿಸ್ಸನ್ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾವೇಶದ ಕುರಿತು ಮಾಹಿತಿ ನೀಡಿದರು. ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದೆ. 1500 ಕ್ಕೂ ಹೆಚ್ಚು ಉದ್ಯಮಿಗಳು ಆಗಮಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಯು ಈ ಸಮಾವೇಶದ ಯಶಸ್ಸಿಗೆ ಸಾಕ್ಷಿಯಾದವು ಎಂದರು.

    ಒಟ್ಟು ಸಮಾವೇಶದಲ್ಲಿ 51 ಕಂಪನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, 72 ಸಾವಿರ ಕೋಟಿ ಹೂಡಿಕೆ ಹರಿದು ಬರಲಿದೆ. ಇದರಿಂದ 90 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.

    ಇನ್ವೆಸ್ಟ್ ಮಾಡಿದ ಕಂಪನಿಗಳು:
    ರಾಜೇಶ್ ಎಕ್ಸ್ ಪೋಟ್ರ್ಸ್ ಲಿಮಿಟೆಡ್ 50 ಸಾವಿರ ಕೋಟಿ, ಸೊನಾಲಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 4800 ಕೋಟಿ ರೂ., ನ್ಯಾಟ್‍ಕ್ಯಾಪ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಜೆಟ್‍ವಿಂಗ್ಸ್ ಏರೋಸ್ಪೇಸ್ ಆಂಡ್ ಏವಿಯೇಷನ್ 2060 ಕೋಟಿ, ಅಯನಾ ರಿನಿವೆಬಲ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಲುಗ್ಸೋರ್ ಎನರ್ಜಿ ಪ್ರೈವೆಟ್ ಲಿಮಿಟೆಡೆ 1200 ಕೋಟಿ ಸೇರಿದಂತೆ ಭಾಗೀರಥ ಕೆಮಿಕಲ್ಸ್, ಎಚ್‍ಪಿಸಿ, ಐಒಸಿ, ಪವರ್ ರಿನ್ಯೂ, ಗುಜರಾತ್ ಅಂಬುಜಾ, ಕೆಎಲ್‍ಇ ಸೊಸೈಟಿ, ದೋಡ್ಲಾ ಡೈರಿ, ಎಸಿಸಿ ಲಿಮಿಟೆಡ್, ಡೆಪೆಡ್ರೊ ಶುಗರ್, ವುಕ್ಸಿ ಮೆಂಗ್ಯಾಂಗ್ ಮೆಷಿನರಿ ಕಂಪನಿಗಳು ಒಳಗೊಂಡಿವೆ.

  • 78 ಕೋಟಿ ಹೂಡಿಕೆ – ಐಶ್ವರ್ಯ ಶಿವಕುಮಾರ್‌ಗೆ ಇಡಿ ಸಮನ್ಸ್

    78 ಕೋಟಿ ಹೂಡಿಕೆ – ಐಶ್ವರ್ಯ ಶಿವಕುಮಾರ್‌ಗೆ ಇಡಿ ಸಮನ್ಸ್

    ಬೆಂಗಳೂರು: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೆ ವಿಚಾರಣೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.

    ಸೆ.12 ರಂದು ಬೆಳಗ್ಗೆ 11 ಗಂಟೆಗೆ ಇಡಿ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಐಶ್ವರ್ಯ ಅವರಿಗೆ ಸೂಚನೆ ನೀಡಲಾಗಿದೆ. ಡಿಕೆ ಶಿವಕುಮಾರ್ ಅವರ ಕಸ್ಟಡಿಯ ಅವಧಿ ಇದೇ 13 ರಂದು ಮುಕ್ತಾಯವಾಗುತ್ತಿರುವುದರಿಂದ 12 ರಂದೇ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿರುವುದು ವಿಶೇಷವಾಗಿದೆ.

    ಐಶ್ವರ್ಯ ಅವರ ಹೆಸರಿನಲ್ಲಿ ಸೋಲ್ ಅಂಡ್ ಸೇಲ್ಸ್ ನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಐಶ್ವರ್ಯಾ ಟ್ರಸ್ಟಿಯಾಗಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ಪುತ್ರಿಯ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕುರಿತು ಇಡಿ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ಮೊತ್ತವನ್ನು ನನ್ನ ಹಿತೈಷಿಗಳು, ಕುಟುಂಬದವರು, ಸ್ನೇಹಿತರು ಕೊಟ್ಟ ಹಣ ಎಂದು ತಿಳಿಸಿದ್ದರು. ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಶ್ವರ್ಯ ಅವರಿಗೆ ಸಮನ್ಸ್ ನೀಡಿದೆ. ಇದನ್ನು ಓದಿ: ಕಸ್ಟಡಿ ಅಂತ್ಯವಾಗ್ತಿರೋ ಬೆನ್ನಲ್ಲೇ ಹೊಸ ಭೀತಿ- ಮತ್ತೆ 4 ದಿನ ಇಡಿ ಕಸ್ಟಡಿಗೆ ಡಿಕೆಶಿ

    ಸೋಲ್ ಅಂಡ್ ಸೇಲ್ಸ್ ಯೋಜನೆಯ ಕಚೇರಿ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಹೂಡಿಕೆ ಮಾಡಿರುವ ಹಣ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಅಲ್ಲದೇ ಬೇರೆ ಬೇರೆ ಮೂಲಗಳಿಂದ ಸಂಗ್ರಹ ಮಾಡಿರುವ ಅನುಮಾನ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗಿದೆ.

    ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹಣ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಳ್ಳುವುದು ಇಡಿಯ ಉದ್ದೇಶವಾಗಿದೆ ಎನ್ನಲಾಗಿದೆ. ಅಲ್ಲದೇ ಐಶ್ವರ್ಯ ಅವರಿಗೆ ಈ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ತಿಳಿದಿದೆಯೇ ಎಂಬ ಬಗ್ಗೆಯೂ ಇಡಿ ವಿಚಾರಣೆಗೆ ನಡೆಸಲಿದೆ. ಸದ್ಯ ಇಡಿ ಅಧಿಕಾರಗಳ ಎದುರು ಐಶ್ವರ್ಯ ಯಾವ ಉತ್ತರ ನೀಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನು ಓದಿ: ಡಿಕೆಶಿಗೆ ಮತ್ತೊಂದು ಬಿಗ್ ಶಾಕ್- ಆಪ್ತನ ಮನೆ ಮೇಲೆ ಇಡಿ ದಾಳಿ

    ಈ ಹಿಂದೆ 2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು.

    ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ಅವರು ಇದುವರೆಗೂ ಹೇಳಿಲ್ಲ ನಾನು ಕೇಳಿಲ್ಲ ಎಂದು ಐಶ್ವರ್ಯ ಹೇಳಿದ್ದರು. ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು? ನೀವು ಪಾಲುದಾರರಾ ಎಂದು ಕೇಳಿದ್ದಕ್ಕೆ ನಾನು ಪಾಲುದಾರಳಾಗಿ ಇಲ್ಲ. ಅಪ್ಪ ಮಾಡಿರಬಹುದು ಅದರ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿ ಇದ್ದೇನೆ ಎಂದು ಉತ್ತರ ನೀಡಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಇದನ್ನು ಓದಿ: ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ

    ಟ್ರಸ್ಟಿ ಎಂದರೆ ಏನು? ನಿಮ್ಮ ಕೆಲಸ ಏನಿರುತ್ತದೆ ಎಂದಿದ್ದಕ್ಕೆ ಇಡೀ ಕಾಲೇಜಿನ ಬಗ್ಗೆ ಶಿಕ್ಷಣ ಟ್ರಸ್ಟ್ ಅಂತ ಮಾಡಲಾಗಿದೆ. ಅದರಲ್ಲಿ ನಾನು ಒಬ್ಬಳು ಟ್ರಸ್ಟಿ ಅಷ್ಟೇ. ಸಲಹೆ ಸೂಚನೆಗಳನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದರು. ಕಾಲೇಜಿನ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾವು ಮಾಡಿಕೊಂಡಿರುವುದು ಎಜ್ಯುಕೇಶನ್ ಟ್ರಸ್ಟ್ ಅಂತ ಅಲ್ಲಿ ಹಣಕಾಸಿನ ವ್ಯವಹಾರ ಬರುವುದಿಲ್ಲ ಎಂದು ಹೇಳಿದ್ದರು. ಕೋರ್ಸ್ ಗಳಿಗೆ ಶುಲ್ಕ ನಿಗದಿಯನ್ನು ನಿಮ್ಮ ಟ್ರಸ್ಟ್ ಮಾಡುತ್ತಾ ಎಂದು ಕೇಳಿದ್ದಕ್ಕೆ ನಾವು ಬೇರೆ ಬೇರೆ ಕಾಲೇಜಿನ ಮಾಹಿತಿ ಹೇಳ್ತೀವಿ. ಶುಲ್ಕ ನಿಗದಿ ಮಾಡುವುದು ನಿರ್ದೇಶಕರು ಎಂಬುದಾಗಿ ಉತ್ತರ ನೀಡಿದ್ದರು.

  • ಐಎಂಎ ಹಣ ಹೂಡಿದ್ದ ವಿಷಯ ತಿಳಿದು ಮನೆ ಬಿಟ್ಟ ಪತ್ನಿ

    ಐಎಂಎ ಹಣ ಹೂಡಿದ್ದ ವಿಷಯ ತಿಳಿದು ಮನೆ ಬಿಟ್ಟ ಪತ್ನಿ

    ಬೆಂಗಳೂರು: ಐಎಂಎ ನಲ್ಲಿ ಹಣ ಹೂಡಿದವರ ಎಲ್ಲರದ್ದೂ ವಿಭಿನ್ನ ಕಥೆಗಳು. ಮಕ್ಕಳ ಶಾಲಾ ಫೀ, ಮಗಳ ಮದುವೆ, ತಂದೆಯ ಪಿಂಚಣಿ, ತಾಯಿಯಡ ಹಣ ಹೀಗೆ ಅಲ್ಪಾವಧಿಯಲ್ಲಿ ಹೆಚ್ಚು ಗಳಿಸಬಹುದೆಂಬ ಒಂದೇ ಒಂದು ಆಸೆಯಿಂದ ಕನಸನ್ನು ಐಎಂಎ ನಲ್ಲಿ ಹೂಡಿಕೆ ಮಾಡಿದ್ದರು. ತನ್ನ ಪತಿ ಐಎಂಎ ನಲ್ಲಿ 25 ಲಕ್ಷ ರೂ. ಹೂಡಿರುವ ವಿಷಯ ತಿಳಿದಿರುವ ಪತ್ನಿ ತವರು ಮನೆ ಸೇರಿಕೊಂಡಿದ್ದಾರೆ.

    ಬೆಂಗಳೂರಿನ ಅರಕೆರೆ ನಿವಾಸಿಯಾಗಿರೋ ಶಬ್ಬೀರ್ ಎಂಬವರು ತಮ್ಮ ಚಿಕ್ಕಮಗಳೂರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ, ಕಳೆದ 6 ತಿಂಗಳ ಹಿಂದೆ ಐಎಂಎಗೆ ಬರೋಬ್ಬರಿ 25 ಲಕ್ಷ ಹೂಡಿಕೆ ಮಾಡಿದ್ದರು. ಈ ವಿಚಾರ ಪತ್ನಿಗೆ ಗೊತ್ತಿರಲಿಲ್ಲ. ಮೊದಲ ಮೂರು ತಿಂಗಳು ತಲಾ 50 ಸಾವಿರ ಲಾಭದ ಹಣ ಪಡೆದ ಶಬ್ಬೀರ್‍ಗೆ ನಂತರ ಒಂದು ನಯಾಪೈಸೆಯೂ ಬಂದಿಲ್ಲ. ಇದನ್ನೂ ಓದಿ:    ಐಎಂಎ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಬಯಲು

    ಯಾವಾಗ ಮನ್ಸೂರ್ ವಂಚನೆ ಬೆಳಕಿಗೆ ಬಂತೋ ಶಬ್ಬೀರ್ ಶಾಕ್ ಆಗಿದ್ದರು. ಕೊನೆಗೆ ಈ ವಿಚಾರ ಶಬ್ಬೀರ್ ಪತ್ನಿಗೂ ಗೊತ್ತಾಗಿದೆ. ನನ್ನ ಗಮನಕ್ಕೂ ತರದೆ ಇಷ್ಟೊಂದು ಮೊತ್ತದ ಹಣ ಹೇಗೆ ಹಾಕಿದೆ ಅಂತಾ ಗಲಾಟೆ ಮಾಡಿದ ಪತ್ನಿ, ರಾತ್ರಿ ಮುಗಿದು, ಬೆಳಗಾಗೋಷ್ಟರಲ್ಲಿ ಎರಡು ವರ್ಷದ ಮಗು ಜೊತೆ ಮನೆಬಿಟ್ಟು ಹೋಗಿದ್ದಾರೆ.  ಇದನ್ನೂ ಓದಿ: ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಐಎಂಎ ಕಂಪನಿಯನ್ನು ನಂಬಿ 25 ಲಕ್ಷ ಹಣ ಹಾಕಿದ ತಪ್ಪಿಗೆ ಹಣದ ಜೊತೆಗೆ ಹೆಂಡ್ತಿ, ಮಗುವನ್ನು ಕಳೆದುಕೊಂಡು ಶಬ್ಬೀರ್ ಅನಾಥವಾಗಿದ್ದಾರೆ. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಬಹುತೇಕರು ಜೀವಮಾನದ ಸಂಪಾದನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಸಿಂಗಾಪುರ: 2017ರ ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ(ಜಿಆರ್‍ಡಿಐ) ಪ್ರಕಟವಾಗಿದ್ದು ಬಂಡವಾಳ ಹೂಡಿಕೆಗೆ ಪ್ರಾಶಸ್ತ್ಯ ಕಲ್ಪಿಸಿದ 30 ಅಭಿವೃದ್ಧಿ ಶೀಲ ದೇಶಗಳ ಪೈಕಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಆರ್ಥಿಕತೆ ಏರಿಕೆ, ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ ಕಾರಣ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ ಎಂದು ಜಿಆರ್‍ಡಿಐ ತಿಳಿಸಿದೆ.

    ಆರ್ಥಿಕ ಬೆಳವಣಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಚೀನಾ ಎರಡನೇ ಸ್ಥಾನಕ್ಕೆ ಜಾರಿದೆ. 2015ರ ಸೂಚ್ಯಂಕದಲ್ಲಿ ಭಾರತ 13 ಸ್ಥಾನ ಏರಿಕೆಯಾಗಿ ಪಟ್ಟಿಯಲ್ಲಿ 15ನೇ ಸ್ಥಾನಗಳಿಸಿತ್ತು.

    ವಾರ್ಷಿಕ ಶೇ.20ರ ದರದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದ್ದು ಕಳೆದ ವರ್ಷ 3 ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಿದ್ದು, 2020ರ ವೇಳೆ ಇದು ದ್ವಿಗುಣವಾಗಲಿದೆ ಎಂದು ಅದು ಅಂದಾಜಿಸಿದೆ.

    ನಗರೀಕರಣ, ಮಧ್ಯಮ ವರ್ಗದ ಕುಟುಂಬಗಳಲ್ಲಿ ಆದಾಯ ಏರಿಕೆ, ಎಫ್‍ಡಿಐ ನಿಂದಾಗಿ ಭಾರತದ ಆರ್ಥಿಕತೆ ಏರಿಕೆಯಾಗುತ್ತಿದೆ ಎಂದು ಅದು ತಿಳಿಸಿದೆ. ಒಂದು ವೇಳೆ ವಾರ್ಷಿಕವಾಗಿ ಈ ಶೇ.30ರ ದರದಲ್ಲಿ ಅಭಿವೃದ್ಧಿಯಾದರೆ 2020ರ ವೇಳೆ 48 ಶತಕೋಟಿ ಡಾಲರ್ ತಲುಪಬಹುದು ಎಂದು ಜಿಆರ್‍ಡಿಐ ಅಂದಾಜಿಸಿದೆ.

    ಕ್ಯಾಶ್‍ಲೆಸ್ ವ್ಯವಹಾರಕ್ಕೆ ಕೇಂದ್ರ ಸರ್ಕಾರದ ಉತ್ತೇಜನ ಮತ್ತು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಿಂದಾಗಿ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ ದರ ಏರಿಕೆಯಾಗಲಿದೆ ಎಂದು ಹೇಳಿದೆ.