Tag: ಹುಳಿಮಾವು ಕೆರೆ

  • ಪಾಪ ಹೆಚ್‍ಡಿಕೆಗೆ ಪುರುಸೋತ್ತಿದೆ ಬೇಕಾದನ್ನ ಮಾಡ್ಲಿ: ಸಿಎಂ ಟಾಂಗ್

    ಪಾಪ ಹೆಚ್‍ಡಿಕೆಗೆ ಪುರುಸೋತ್ತಿದೆ ಬೇಕಾದನ್ನ ಮಾಡ್ಲಿ: ಸಿಎಂ ಟಾಂಗ್

    – ಹುಳಿಮಾವು ಸಂತ್ರಸ್ತರಿಗೆ ಪರಿಹಾರ

    ದಾವಣಗೆರೆ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಅವರಿಗೆ ಪುರುಸೋತ್ತಿದೆ ಬೇಕಾದನ್ನ ಮಾಡಲಿ. ಯಾರು ಬೇಡ ಎನ್ನುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಪ್ರತಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ಕೊಡುವ ವಿಚಾರ ಹಾಗೂ ಚುನಾವಣೆಯ ಪ್ರಚಾರದಲ್ಲಿ ವೀರಶೈವ ಸಮಾಜಕ್ಕೆ ಕರೆ ಕೊಟ್ಟ ವಿಚಾರವಾಗಿ ಮಾತನಾಡಿ, ಅವರಿಗೆ ಪುರುಸೋತ್ತಿದೆ ಬೇಕಾದನ್ನ ಮಾಡಲಿ, ಯಾರು ಬೇಡ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ

    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗೆ 8 ಕ್ಷೇತ್ರಕ್ಕಿಂತ ಕಡಿಮೆ ಸ್ಥಾನ ಬಂದರೆ ಮಧ್ಯಂತರ ಚುನಾವಣೆ ಬರುತ್ತೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ವಿಪಕ್ಷ ನಾಯಕರ ಹೇಳಿಕೆಗೆ ನಾವು ಮಹತ್ವ ಕೊಡಬೇಕಿಲ್ಲ. ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಇಷ್ಟಪಡಲ್ಲ. ಡಿ. 9 ರಂದು ಯಾರು ಮನೆಗೆ ಹೋಗ್ತಾರೆ ಎನ್ನುವುದು ಗೊತ್ತಾಗುತ್ತೆ. ಜನರ ಆಶೀರ್ವಾದ ಇದೆ. ನಾವು 15 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಕಿಡಿಕಾರಿದರು.

    15ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. ಯಾರದೇ ಸಹಕಾರ ಬೇಡ, ಬೆಂಬಲ ಬೇಡ ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ. ಮೂರೂವರೆ ವರ್ಷ ಅವಧಿ ಪೂರ್ಣ ಮಾಡುತ್ತೇವೆ. ಜನರ ಆಶೀರ್ವಾದವಿದೆ, ನಾನು ಸಿಎಂ ಸ್ಥಾನದಲ್ಲಿ ಉಳಿಯಬೇಕೆಂಬ ಆಸೆ ಜನರಿಗಿದೆ. ಹೀಗಾಗಿ ಯಾರು ಜಾತಿ, ಧರ್ಮ ಬೇಧವಿಲ್ಲದೆ ಬಿಜೆಪಿಗೆ ಮತಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

    ಹುಳಿಮಾವು ಕೆರೆ ಒಡೆದ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಎಲ್ಲಾ ಸಂತ್ರಸ್ತರಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಕುಟುಂಬಕ್ಕೂ ಸಹ ಪರಿಹಾರ ನೀಡಲಾಗುವುದು. ಸಂಜೆಯೊಳಗೆ ಚರ್ಚೆ ಮಾಡಿ ಪರಿಹಾರದ ಬಗ್ಗೆ ಘೋಷಿಸುತ್ತೇನೆ ಎಂದು ತಿಳಿಸಿದರು.

  • ಕಿತ್ತು ಹೋಗ್ತಿದೆ ಹುಳಿಮಾವು ಕೆರೆಯ ಒಡ್ಡು – ನಿದ್ದೆಯಿಲ್ಲದೇ ರಾತ್ರಿ ಕಳೆದ ಸಾವಿರಾರು ಮಂದಿ

    ಕಿತ್ತು ಹೋಗ್ತಿದೆ ಹುಳಿಮಾವು ಕೆರೆಯ ಒಡ್ಡು – ನಿದ್ದೆಯಿಲ್ಲದೇ ರಾತ್ರಿ ಕಳೆದ ಸಾವಿರಾರು ಮಂದಿ

    ಬೆಂಗಳೂರು: ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹುಳಿಮಾವು ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದೆ. ಸ್ಥಳಿಯರು ಆತಂಕದಲ್ಲಿದ್ದರೆ, ರಾತ್ರಿ ಒಡ್ಡು ಹಾಕಿ ಹೋಗಿದ್ದ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇನ್ನೂ ಇತ್ತ ಬಂದಿಲ್ಲ.

    ಜೆಸಿಬಿ ಮೂಲಕ ಬಿಡಿಎ ಕಂಟ್ರಾಕ್ಟರ್ ಕಾರ್ತಿಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಕೆರೆ ಒಡೆದಿದ್ದು, ಸತತ ಐದಾರು ಗಂಟೆಗಳ ಕಾರ್ಯಾಚರಣೆ ಮಾಡಿ ಕೆರೆ ಒಡೆದ ಸ್ಥಳದಲ್ಲಿ ಮಣ್ಣು ಹಾಕಿ ರಾತ್ರಿ 8 ಗಂಟೆ ವೇಳೆಗೆ ನೀರಿಗೆ ತಡೆ ಒಡ್ಡಲಾಯ್ತು. ಇದರಿಂದ ಮುಂದಾಗಬಹುದಾಗಿದ್ದ ಇನ್ನಷ್ಟು ಅನಾಹುತ ತಪ್ಪಿತು. ಆದರೆ ಈಗ ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಇದನ್ನೂ ಓದಿ:ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನಾಳುವ ಮಂದಿ ಸೃಷ್ಟಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸೊಂಟ ಮಟ್ಟಕ್ಕೆ ನೀರು ಆವರಿಸಿದೆ. ಅಪಾರ್ಟ್ ಮೆಂಟ್‍ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ. ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ. ಮನೆಯಲ್ಲಿದ್ದ ಪಾತ್ರೆ ಪಗಡಿ, ಫ್ರಿಡ್ಜ್, ದವಸ ಧಾನ್ಯ ಸೇರಿ ನಿತ್ಯದ ವಸ್ತುಗಳು ಬೀದಿಪಾಲಾಗಿವೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಯಿಡೀ ಒದ್ದಾಡಿದ್ದಾರೆ.

    ಬೀಳೆಕಳ್ಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳು ಪರದಾಡಿದ್ದಾರೆ. ಹರಿವ ನೀರಿನ ಮಧ್ಯೆಯೇ ರಬ್ಬರ್ ಬೋಟ್‍ಗಳ ಮೂಲಕ ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ನೀರಲ್ಲಿ ಕೊಚ್ಚಿ ಹೋಗ್ತಿದ್ದ ಮೂರು ನಾಯಿಗಳನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಕೃಷ್ಣಲೇಔಟ್‍ನಲ್ಲಿ ನಡೆದಿದೆ. ಮೂರು ನಾಯಿಗಳು ರಭಸದಿಂದ ಹರಿಯುತ್ತಿದ್ದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು, ನಾಯಿಗಳನ್ನು ಹಿಡಿದು ತಳ್ಳು ಗಾಡಿಯಲ್ಲಿರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಸುಮಾರು 140 ಎಕರೆ ವಿಸ್ತೀರ್ಣದ ಕೆರೆ ಇತ್ತೀಚೆಗೆ ಸುರಿದ ಮಳೆಯ ಕಾರಣ ತುಂಬಿತ್ತು. ಇದೀಗ ಹುಳಿಮಾವು ಕೆರೆಯ ಅರ್ಧದಷ್ಟು ನೀರು ಖಾಲಿ ಆಗಿದೆ. ಕೃತಕ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ಸಾಯಿ ಬಾಬಾ ಟೆಂಪಲ್, ಟೆನಿಸ್ ಕೋರ್ಟ್ ಹಾಗೂ ಮ್ಯಾರೇಜ್ ಹಾಲ್‍ಗಳಲ್ಲಿ ಸಂತ್ರಸ್ತರ ಶಿಬಿರ ತೆರೆದು ಇರಿಸಲಾಗಿದೆ.

    ಆರ್.ಆರ್ ಲೇಔಟ್‍ನ ರಸ್ತೆಯ ಕೆಳಮಹಡಿಯಲ್ಲಿ ನಿಂತಿರೊ ಕೆರೆ ನೀರು ತೆರವು ಕಾರ್ಯಚರಣೆ ಮುಂದುವರಿದಿದೆ. ಕೆರೆ ನೀರು ನುಗ್ಗಿರೊ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರು ಮಾಯವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ಕಾಗಿ 102 ಪೌರಕಾರ್ಮಿಕರ ನೇಮಕ ಮಾಡಲಾಗಿದೆ. ಪ್ರತಿ ಲೇಔಟ್‍ಗೂ 12 ಜನ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಹಾಗೆಯೇ ಮಾರ್ಷಲ್‍ಗಳಿಗೆ ಸ್ವಚ್ಚತಾ ಕಾರ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

    ಕೆರೆ ನೀರು ನಿಂತಿರೊ ಹಿನ್ನೆಲೆಯಲ್ಲಿ ಕರೆಂಟ್ ಜಲಾವೃತ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪವರ್ ಕಟ್ ಮಾಡಲಾಗಿದೆ. ವಿದ್ಯುತ್ ಅವಘಡ ಸಂಭವಿಸದಿರಲಿ ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

    ಈ ಅನಾಹುತಕ್ಕೆ ಹೊಣೆ ಹೋರಲು ಯಾರು ಸಿದ್ಧರಿಲ್ಲ. ನಮಗೆ ಕಾಮಗಾರಿಯ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ ಎಂದು ಕಾರ್ಪೋರೇಟರ್ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಮೇಯರ್ ಅಂತೂ ಯಾಕೆ ಈ ಅನಾಹುತ ಆಯ್ತು ಅನ್ನೋದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೇ, ಇದು ಕಿಡಿಗೇಡಿಯ ಕೃತ್ಯ ಎಂದು ಹೇಳುತ್ತಿದ್ದಾರೆ. ಜೊತೆಗೆ ಹಾನಿಯಾದ ಮನೆಗಳಿಗೆ 3800 ರೂಪಾಯಿಗಳ ಪುಡಿಗಾಸಿನ ನೆರವು ಘೋಷಿಸಿದ್ದಾರೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಅವರು ಕಾಂಟ್ರಾಕ್ಟರ್ ವಿರುದ್ಧ ಕ್ರಮದ ಮಾತನಾಡಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.

  • ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ನಗರ ಹೊರವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಶಾಂತಿನಿಕೇತನ, ಕೃಷ್ಣನಗರ, ಸೇರಿ ಹಲವು ಲೇಔಟ್‍ಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬಿಳೇಕಳ್ಳಿ ಬಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ.

    140 ಎಕರೆ ವಿಸ್ತೀರ್ಣದಲ್ಲಿರುವ ಹುಳಿಮಾವು ಕೆರೆಯನ್ನು ಬಿಡಿಎ ವತಿಯಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಜೆಸಿಬಿಯಿಂದ ಕೆರೆಯ ಕಟ್ಟೆಗೆ ಡ್ಯಾಮೇಜ್ ಆಗಿದ್ದರಿಂದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಬಿಬಿಎಂಪಿ ಗಮನಕ್ಕೆ ತರದೇ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

    ಬಿಡಿಎದವರು ನಮ್ಮ ಗಮನಕ್ಕೂ ತರದೇ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಹೇಳುತ್ತಾರೆ. ಆದರೆ ಮೇಯರ್ ಗೌತಮ್ ಕುಮಾರ್, ಇದು ಕಿಡಿಗೇಡಿಯ ಕೃತ್ಯ ಅಂತ ಆರೋಪಿಸಿದ್ದಾರೆ. ಅಲ್ಲದೇ ಹಾನಿಯಾದ ಮನೆಗಳಿಗೆ ಅಗತ್ಯ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ.

    ಸದ್ಯ ನೀರಿನಲ್ಲಿ ಸಿಲುಕಿದ ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಬಿಬಿಎಂಪಿ ವತಿಯಿಂದ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ, ಎಸಿಪಿ, ಕೆಎಸ್‍ಆರ್‍ಪಿ, ಎನ್‍ಡಿಆರ್‍ಎಫ್, ಸಿಆರ್ ಪಿಎಫ್‍ನಿಂದ ಕೆರೆ ಒಡೆದು ಹೋದ ಸ್ಥಳದಲ್ಲಿ ಮಣ್ಣು ಹಾಕಿ ಹರಿಯುವ ನೀರನ್ನ ತಡೆಯುವ ಕಾರ್ಯಚರಣೆ ನಡೆಯುತ್ತಿದೆ. ಬಿಡಿಎ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.