Tag: ಹುಲ್ಲು

  • ರಸ್ತೆ ಪಕ್ಕದಲ್ಲಿ ಹುಲ್ಲಿಗೆ ಹಚ್ಚಿದ್ದ ಬೆಂಕಿಯಿಂದ ಸುಟ್ಟು ಕರಕಲಾಯಿತು ಬೈಕ್

    ರಸ್ತೆ ಪಕ್ಕದಲ್ಲಿ ಹುಲ್ಲಿಗೆ ಹಚ್ಚಿದ್ದ ಬೆಂಕಿಯಿಂದ ಸುಟ್ಟು ಕರಕಲಾಯಿತು ಬೈಕ್

    – ಬೈಕ್ ಸವಾರನ ಕುಟುಂಬದವರಿಗೆ ಗಾಯ

    ಗದಗ: ರಸ್ತೆ ಪಕ್ಕದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆಯಲ್ಲಿ ದಾರಿ ಕಾಣದೆ ಬೈಕ್ ಸವಾರ ಸೇರಿ ಕುಟುಂಬದ ಮೂವರು ಬೆಂಕಿನಲ್ಲಿ ಬಿದ್ದ  ಘಟನೆ ಜಿಲ್ಲೆಯ ರೋಣ ಪಟ್ಟಣದ ಬಳಿ ನಡೆದಿದೆ.

    ರೋಣ ಹಾಗೂ ಜಕ್ಕಲಿ ನಡುವೆ ಘಟನೆ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಬೈಕ್ ಸವಾರ, ಹಿಂಬದಿ ಕುಳಿತ ತಾಯಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ 29 ವರ್ಷದ ನಾಗರಾಜ್ ರ್ಯಾವಣಕಿ, 2 ವರ್ಷದ ಮಗು ಲಲಿತಾ ಹಾಗೂ ತಾಯಿ ಅಕ್ಕಮ್ಮ ಅವರಿಗೆ ಗಾಯಗಳಾಗಿವೆ. ಬೈಕ್ ಸುಟ್ಟು ಸಂಪೂರ್ಣ ಕರಕಲಾಗಿದೆ.

    ರಸ್ತೆ ಪಕ್ಕದಲ್ಲಿನ ಹುಲ್ಲಿಗೆ ಯಾರೋ ಬೆಂಕಿ ಹಚ್ಚಿದ್ದರಿಂದ ರಸ್ತೆ ತುಂಬೆಲ್ಲಾ ಹೊಗೆ ಆವರಿಸಿದೆ. ಹೊಗೆಯಲ್ಲೆ ಬೈಕ್ ಮೇಲೆ ಸಂಚಾರ ಮಾಡುವ ವೇಳೆ ರಸ್ತೆ ಕಾಣದೆ ರಸ್ತೆ ಪಕ್ಕ ಬೆಂಕಿನಲ್ಲಿ ಬಿದ್ದಿದ್ದಾರೆ. ಕೂಡಲೆ ಸ್ಥಳಿಯರು ದೌಡಾಯಿಸಿ ಈ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ.

    ಗಾಯಗೊಂಡ ಬೈಕ್ ಸವಾರ, ಮಗು, ತಾಯಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಕರೆತಂದರೂ ಸಿಬ್ಬಂದಿ ಬೇಗ ಬಾರದ ಹಿನ್ನಲೆ ಅಂಬುಲೆನ್ಸ್ ನಲ್ಲೇ 15 ನಿಮಿಷ ಮಗು, ತಾಯಿ ನರಳಾಡಬೇಕಾಯಿತು. ನಂತರ ಸಂಬಂಧಿಕರೇ ತುರ್ತು ಚಿಕಿತ್ಸಾ ಘಟಕ್ಕೆ ಮಗುವನ್ನು ಎತ್ತಿಕೊಂಡು ಹೋಗಿ ನಂತರ ತಾಯಿಯನ್ನು ಸ್ಟ್ರೇಚ್ಚರ್ ನಲ್ಲಿ ಶಿಫ್ಟ್ ಮಾಡಿದರು ಎಂದು ಗಾಯಾಳು ಕುಟುಂಬದವರು ಆರೋಪಿಸಿದ್ದಾರೆ. ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹಾಸನ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಹುಲ್ಲು ಹೊತ್ತಿ ಉರಿದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಜಿಲ್ಲೆ ಅರಕಲಗೂಡು ತಾಲೂಕಿನ ಚೌರಗಲ್ ಬಳಿ ನಡೆದಿದೆ.

    ಚಾಲಕ ಲಾರಿಯಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದನು. ಆದರೆ ಚೌರಗಲ್ ಬಳಿ ವಿದ್ಯುತ್ ಸ್ಪರ್ಶದಿಂದ ಭತ್ತದ ಹುಲ್ಲು ಹೊತ್ತಿಕೊಂಡು ಧಗಧಗ ಉರಿಯಲಾರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಚಾಲಕನಿಗೆ ಬೆಂಕಿ ಹೊತ್ತಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಚಾಲಕ ಹೆಚ್ಚಿನ ಅನಾಹುತ ತಪ್ಪಿಸಲು ಲಾರಿಯನ್ನು ಸಮೀಪದಲ್ಲಿ ಹರಿಯುತ್ತಿದ್ದ ಹೇಮಾವತಿ ನದಿಗೆ ಇಳಿಸಿದ್ದಾನೆ.

    ನಂತರ ಚಾಲಕ ಲಾರಿಯಿಂದ ಜಿಗಿದು ದಡಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ಹೊತ್ತಿದ್ದ ಲಾರಿಯನ್ನು ಹೇಮಾವತಿ ನದಿಗೆ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

  • ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಗಾಂಧಿನಗರ: ಗುಜರಾತಿನ ಗಿರ್ ಕಾಡಿನಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ.

    ಅಪ್ಪಟ ಮಾಂಸಹಾರಿಯಾಗಿರುವ ಸಿಂಹ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದನ್ನು ನಾವು ನೋಡಿದ್ದೇವೆ. ಆದರೆ ಈ ಸಿಂಹ ಕಾಡಿನಲ್ಲಿ ಇರುವ ಗರಿಕೆ ಹುಲ್ಲು ಮತ್ತು ಗಿಡಮೂಲಿಕೆಯನ್ನು ತಿನ್ನುತ್ತಿರುವುದು ವಿಚಿತ್ರ ಎಂದು ತೋರುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಿಂಹಗಳು ಹುಲ್ಲು ತಿನ್ನುವುದು ಸಹಜ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಪ್ರಾಣಿ ತಜ್ಞರು ಸಿಂಹಗಳು ಹಸಿ ಮಾಂಸವನ್ನು ತಿನ್ನುವುದರಿಂದ ಅದು ಬೇಗ ಜೀರ್ಣವಾಗುವುದಿಲ್ಲ. ಅದ್ದರಿಂದ ಜೀರ್ಣಕ್ರಿಯೇಗೆ ತೊಂದರೆಯಾದಾಗ ಸಿಂಹಗಳು ಹುಲ್ಲನ್ನು ತಿಂದು ಹೊಟ್ಟೆಯನ್ನು ಸ್ವಚ್ಛಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

    ಎಲ್ಲಾ ಜಾತಿಯ ಮಾಂಸಹಾರಿ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ. ಏಕೆಂದರೆ ಅವುಗಳು ಬೇಟೆಯಾಡಿ ಹಸಿ ಮಾಂಸವನ್ನು ತಿನ್ನುವ ಕಾರಣ ಅವುಗಳ ದೇಹಕ್ಕೆ ಫೈಬರ್ ಅಂಶವು ಜಾಸ್ತಿ ಸೇರುತ್ತದೆ. ಇದರಿಂದ ಅವು ತಮ್ಮ ಕರುಳುಗಳನ್ನು ಸ್ವಚ್ಛಮಾಡಿಕೊಳ್ಳಲು ಆಗಾಗ ಈ ರೀತಿ ಹುಲ್ಲುಗಳನ್ನು ತಿನ್ನುತ್ತವೆ ಎಂದು ಪ್ರಾಣಿ ತಜ್ಞರು ತಿಳಿಸಿದ್ದಾರೆ.

    https://twitter.com/Adamiington/status/1167016863802355712

    ಈ ವಿಡಿಯೋ ನೋಡಿದ ಕೆಲವರು ವ್ಯಂಗ್ಯವಾಗಿ ಕೂಡ ಕಮೆಂಟ್ ಮಾಡಿದ್ದು, ಪಾಪ ಆದರ ಗಂಡ ಡಯಟ್ ಮಾಡು ಎಂದು ಹೇಳಿರಬೇಕು ಅದಕ್ಕೆ ಅ ಸಿಂಹಿಣಿ ಹಲ್ಲು ತಿನ್ನುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಸಸ್ಯಾಹಾರಿ ಸಿಂಹ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

  • ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ – ಜಮೀನಿನ ತುಂಬಾ ಲಾರಿ ಚಾಲನೆ

    ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ – ಜಮೀನಿನ ತುಂಬಾ ಲಾರಿ ಚಾಲನೆ

    ಕೊಪ್ಪಳ: ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಗಂಗಾವತಿ ತಾಲೂಕಿನ ಗುಂಡೂರು ಕ್ಯಾಂಪ್‍ನ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿ ಚಾಲಕ ಸಾಯಪ್ಪನ ಜಾಣ್ಮೆ ಮತ್ತು ಧೈರ್ಯದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಮೀನಿನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಹೊಲದಲ್ಲಿದ್ದ ವಿದ್ಯುತ್ ಕಂಬದ ತಂತಿಗಳು ಹುಲ್ಲಿಗೆ ತಾಗಿ ಬೆಂಕಿ ಹತ್ತಿಕೊಂಡಿದೆ.

    ತಕ್ಷಣ ಧೃತಿಗೆಡದೆ ಲಾರಿ ಡ್ರೈವರ್ ಜಮೀನಿನ ತುಂಬಾ ಬೆಂಕಿ ಹತ್ತಿದ ಲಾರಿಯನ್ನು ಚಾಲಾಯಿಸಿದ್ದಾನೆ. ಇದರಿಂದ ಗಾಳಿಗೆ ಬೆಂಕಿ ಪ್ರಮಾಣ ಇಳಿಮುಖವಾಗಿ ಬಾರೀ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ಸ್ಥಳಕ್ಕೆ ಆಗಮಿಸುವವರೆಗೂ ಲಾರಿಯನ್ನು ಜಮೀನಿನಲ್ಲಿ ಸುತ್ತು ಹಾಕಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಲಾರಿ ಡ್ರೈವರ್ ಚಾಣಕ್ಷತನದಿಂದ ಸುಟ್ಟು ಕರಕಲಾಗಬೇಕಿದ್ದ ಲಾರಿ ಸುರಕ್ಷಿತವಾಗಿದೆ. ಈ ಘಟನೆ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.