Tag: ಹುಲಿ ಸಂರಕ್ಷಿತ ಪ್ರದೇಶ

  • ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ʻʻಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆ ತಟ್ಟಿದವು ಒಂದೇ ಒಂದು ಶಬ್ಧವೂ ಇಲ್ಲ. ಮತ್ತೆ ಕಾಲುಗಳು ಅಲ್ಲಾಡಿದವು ಶವ ಸಜೀವವಾಗುತ್ತಿದೆಯೇ? ಅಂತ ನನಗೆ ಗಾಬರಿಯಾಯ್ತು. ಕೋವಿ, ಟಾರ್ಚನ್ನು ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು. ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲು ಮತ್ತು ವಾರಸುದಾರರು ಸಜೀವಗೊಂಡಿಲ್ಲ. ನರಭಕ್ಷಕ ಅನ್ನು ಸಜೀವಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟಕ್ಕೆ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯೆಲ್ಲಾ ತೊಯ್ದುಹೋಗಿತ್ತುʼʼ.

    ಅಬ್ಬಬ್ಬಾ ಪೂರ್ಣಚಂದ್ರ ತೇಜಸ್ವಿ ಅವರ ʻಬೆಳ್ಳಂದೂರಿನ ನರಭಕ್ಷಕʼ ಅನುವಾದ ಕೃತಿಯಲ್ಲಿ ಬರುವ ಈ ದೃಶ್ಯವನ್ನು ಓದಿದರೆ ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ನೂರಾರು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಮೈ ರೋಮಾಂಚನಗೊಳ್ಳುತ್ತದೆ. ಆದ್ರೆ ಮನುಷ್ಯನಲ್ಲಿ ನಾಗರಿಕತೆ ಬೆಳೆದಂತೆ ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಕುತ್ತು ಬರುತ್ತಿವೆ. ಅದರಲ್ಲೂ ರಾಷ್ಟ್ರೀಯ ಪ್ರಾಣಿ (National Animal) ಎಂದೇ ಗುರುತಿಸಿಕೊಂಡಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಕೆಲವು ಕಾಡುಗಳಲ್ಲಿ ವಂಶಾಭಿವೃದ್ಧಿಯೇ ಅಳಿಸಿಹೋಗುತ್ತಿದೆ ಎಂದು ವನ್ಯಜೀವಿ (Wildlife) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದ ಪಶ್ಚಿಮ ಪ್ರದೇಶದ ಏಕೈಕ ಹುಲಿ ಸಂರಕ್ಷಿತ ಪ್ರದೇಶವಾದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Sahyadri Tiger Reserve) ಹುಲಿಗಳ ಸಂತತಿಯನ್ನು ಪುನರುಜ್ಜೀವನಗೊಳಿಸಲು ರಾಜ್ಯದ ಅರಣ್ಯ ಇಲಾಖೆಯು ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ರಾಜ್ಯದ ಅರಣ್ಯ ಇಲಾಖೆಯು ಚಂದ್ರಾಪುರ ಜಿಲ್ಲೆಯ ತಡೋಬಾ-ಅಂಧಾರಿ ಹುಲಿ ಸಂರಕ್ಷತ ಪ್ರದೇಶದಿಂದ ಹುಲಿಗಳನ್ನು ಸ್ಥಳಾಂತರಿಸುವ ಕಾರಿಡಾರ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ʻಸಹ್ಯಾದ್ರಿ ಕೊಂಕಣ ವೈಲ್ಡ್‌ಲೈಫ್‌ ಕಾರಿಡಾರ್‌ʼ (Sahyadri-Konkan wildlife corridor) ಯೋಜನೆಗೆ ಮಹಾರಾಷ್ಟ್ರವೊಂದೇ ಅಲ್ಲ. ಕರ್ನಾಟಕ, ಗೋವಾ ಅರಣ್ಯ ಇಲಾಖೆಗಳೂ ಒಟ್ಟಾಗಿ ಕಾರ್ಯನಿರ್ವಹಿಸಿದ್ರೆ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಅಷ್ಟಕ್ಕೂ ವನ್ಯಜೀವಿ ಕಾರಿಡಾರ್‌ ಯೋಜನೆಯ ಪ್ರಯೋಜನಗಳೇನು? ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ಹಾಕಿಕೊಂಡಿದ್ದೇಕೆ? ಈ ಯೋಜನೆ ಹುಲಿ ಸಂರಕ್ಷಣೆಗೆ ಹೇಗೆ ಪಾತ್ರವಹಿಸುತ್ತದೆ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಸಹ್ಯಾದ್ರಿ ಹುಲಿಸಂರಕ್ಷಿತ ಪ್ರದೇಶ ಹೇಗಿದೆ?

    ಉತ್ತರ ಭಾರತದ ಪಶ್ಚಿಮ ಘಟ್ಟಗಳಲ್ಲಿ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ ನೆಲೆಗೊಂಡಿದೆ. 2010ರಲ್ಲಿ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲಾಯಿತು. ಇದು ಮಹಾರಾಷ್ಟ್ರದ ಕೊಲ್ಲಾಪುರ, ಸತಾರಾ, ಸಾಂಗ್ಲಿ ಮತ್ತು ರತ್ನಗಿರಿ ಜಿಲ್ಲೆಗಳನ್ನು ವ್ಯಾಪಿಸಿದೆ. ಅಲ್ಲದೇ ಚಂದೋಲಿ ರಾಷ್ಟ್ರೀಯ ಉದ್ಯಾನವನ ಮತ್ತು ಕೊಯ್ನಾ ವನ್ಯಜೀವಿ ಅಭಯಾರಣ್ಯಗಳೊಂದಿಗೆ ತನ್ನ ವ್ಯಾಪ್ತಿಯನ್ನು ಹಂಚಿಕೊಂಡಿದೆ. ಕಳ್ಳಬೇಟೆ, ಬದಲಾಗುತ್ತಿರುವ ಆವಾಸಸ್ಥಾನ, ಸಂತಾನೋತ್ಪತ್ತಿ ಕುಂಠಿತಗೊಂಡಿದ್ದರಿಂದಾಗಿ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಸಿಕ್ಕಿರುವ ಫೋಟೋ ಸಾಕ್ಷ್ಯಗಳ ಪ್ರಕಾರ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ 7-8 ಹುಲಿಗಳು ಮಾತ್ರ ಇವೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ಮಹಾರಾಷ್ಟ್ರ ಅರಣ್ಯ ಇಲಾಖೆಯು ಹುಲಿಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಹುಲಿಗಳ ಸಂಖ್ಯೆ ಹೆಚ್ಚಿಸಲು ಕರ್ನಾಟಕ ಮತ್ತು ಗೋವಾ ಅರಣ್ಯ ಪ್ರದೇಶಗಳಿಂದ ಹುಲಿಗಳನ್ನು ಸ್ಥಳಾಂತರಿಸುವ ಕೆಲಸ ಆಗಬೇಕು. ಇದರೊಂದಿಗೆ ಹುಲಿಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನೂ ಕಲ್ಪಿಸಿಕೊಟ್ಟಲ್ಲಿ, ಈ ಯೋಜನೆ ಯಶಸ್ವಿಯಾಲಿದೆ ಎಂದು ತಜ್ಞರು ಹೇಳುತ್ತಾರೆ.

    ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ?

    2006 ರಿಂದಲೂ ದೇಶದಲ್ಲಿ ಹುಲಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಹೌದು. 2006ರಲ್ಲಿ ಹುಲಿಗಳ ಸಂಖ್ಯೆ 1,411 ಆಗಿತ್ತು. ಆ ನಂತರ 2010 ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆ 2022ರ ಅಂಕಿ ಅಂಶದ ಪ್ರಕಾರ 3,682ಕ್ಕೆ ಹುಲಿಗಳ ಸಂಖ್ಯೆ ಏರಿಕೆಯಾಗಿದೆ.

    ಹುಲಿಗಳ ಸ್ಥಳಾಂತರ ಉತ್ತಮ ವಿಧಾನವೇ?

    ಭಾರತದಲ್ಲಿ 2008 ರಿಂದ ಹುಲಿಗಳ ಸ್ಥಳಾಂತರ (translocate tigers) ಯೋಜನೆಯನ್ನು ಪ್ರಾರಂಭಿಸಲಾಯಿತು. 2008ರಲ್ಲಿ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ, 2009ರಲ್ಲಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿರುವ ಉದಾಹರಣೆಯೂ ಇದೆ. ಅಲ್ಲದೇ ದೇಶದಲ್ಲೇ ಮೊದಲ ಅಂತರರಾಜ್ಯ ಸ್ಥಳಾಂತರ ಯೋಜನೆಗೆ ಕೈಹಾಕಿ ಒಡಿಶಾದ ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯೋಜನೆ ವೈಫಲ್ಯ ಅನುಭವಿಸಿದ ಉದಾಹರಣೆಯೂ ಇದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಜಿ ಸದಸ್ಯ ಕಾರ್ಯದರ್ಶಿ ಅನುಪ್ ನಾಯಕ್, ಹುಲಿಗಳ ಸ್ಥಳಾಂತರ ಉಪಕ್ರಮವು ದೀರ್ಘಾವಧಿ ಯೋಜನೆಯಾಗಿದ್ದು, ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಮೊದಲಿಗೆ ಹುಲಿಗಳ ಆವಾಸಸ್ಥಾ ಸುಧಾರಣೆ, ಕಳ್ಳಬೇಟೆಯಿಂದ ರಕ್ಷಣೆ, ಹುಲಿ ಸಂರಕ್ಷಿತಾರಣ್ಯಗಳ ಅಭಿವೃದ್ಧಿಪಡಿಸುವಂತಹ ಆಯ್ಕೆಗಳನ್ನು ನಿರ್ಣಿಸಬೇಕು. ಹುಲಿಗಳನ್ನು ಸ್ಥಳಾಂತರಿಸುವುದರಿಂದ ಒಳ್ಳೆಯದ್ದು ಆಗಬಹುದು, ವಿಫಲವೂ ಆಗಬಹುದು. ಹಾಗಾಗಿ ಅದನ್ನು ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಸ್ಥಳಾಂತರಿಸಿದ ನಂತರವು ಅವು ಜನವಸತಿ ಪ್ರದೇಶಗಳಿಂದ ಮುಕ್ತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಕೈಹಾಕಬೇಕು ಎಂದು ಸಲಹೆ ನೀಡಿದ್ದಾರೆ.

    ಜನರನ್ನೂ ಕೊಂದಿತ್ತು.. ಹುಲಿಯೂ ಸತ್ತಿತ್ತು..

    ಈ ಹಿಂದೆ ಸತ್ಕೋಸಿಯಾ ಮೀಸಲು ಅರಣ್ಯದಲ್ಲಿ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ವಿಫಲವಾಗಿತ್ತು. 2018ರಲ್ಲಿ ಕನ್ಹಾ ಸಂರಕ್ಷಿತ ಪ್ರದೇಶದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿಯನ್ನು ಸತ್ಕೋಸಿಯಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದ್ರೆ ಕಳಪೆ ನಿರ್ವಹಣೆಯಿಂದಾಗಿ ಹುಲಿಗಳು ಸ್ಥಳೀಯರ ಮೇಲೆ ದಾಳಿ ಮಾಡತೊಡಗಿದ್ದವು, ಕೆಲವರನ್ನು ಕೊಂದುಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಅಲ್ಲಿದ್ದ ʻಮಹಾವೀರ್‌ʼ ಎಂಬ ಗಂಡು ಹುಲಿ ಉರುಳಿಗೆ ಸಿಕ್ಕಿ ಸಾವನ್ನಪ್ಪಿತ್ತು. ಬಳಿಕ ಈ ಯೋಜನೆಯ ಪ್ರಸ್ತಾಪವನ್ನೇ ನಿಲ್ಲಿಸಲಾಗಿತ್ತು.

    ಸಹ್ಯಾದ್ರಿ-ಕೊಂಕಣ ಕಾರಿಡಾರ್‌ನ ಪ್ರಾಮುಖ್ಯತೆ ಏನು?

    ಈ ಯೊಜನೆಯು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಜೊತೆಗೆ ಸಹ್ಯಾದ್ರಿ, ರಾಧನಗರಿ, ಗೋವಾ, ಕರ್ನಾಟಕ, ಕಾರಿಡಾರ್‌ ಮತ್ತು ಪಶ್ಚಿಮ ಘಟ್ಟಗಳಲ್ಲಿ ದೀರ್ಘಾವಧಿವರೆಗೆ ಸಂರಕ್ಷಣೆ ಮಾಡುವ ಉದ್ದೇಶವಾಗಿದೆ. ಈ ಕಾರಿಡಾರ್‌ ಕರ್ನಾಟಕದ ʻಕಾಳಿʼ ಸಂರಕ್ಷಿತ ಪ್ರದೇಶ ಹಾಗೂ ಗೋವಾ ಒಳನಾಡಿನ ಕಾಡುಗಳನ್ನೂ ಸಂಪರ್ಕಿಸುತ್ತದೆ. ಜೊತೆಗೆ ರಾಧಾನಗರಿ ವನ್ಯಜೀವಿ ಅಭಯಾರಣ್ಯ, ಸಿಂಧುದುರ್ಗ ಜಿಲ್ಲೆಯ ಸಂರಕ್ಷಣಾ ಮೀಸಲು ಪ್ರದೇಶವನ್ನು ಸಂಪರ್ಕಿಸುತ್ತದೆ. ಈ ಕಾರಿಡಾರ್‌ಗಳು ವನ್ಯಜೀವಿಗಳಿಗೆ ಮಾತ್ರವಲ್ಲದೇ ಗೋವಾ ಮತ್ತು ಕರ್ನಾಟಕದ ಈ ಕಾಡುಗಳ ಸುತ್ತ ವಾಸಿಸುವ ಸಮುದಾಯಗಳ ನೀರಿನ ಸಂರಕ್ಷಣೆಗೂ ಸಹಾಯಕವಾಗಲಿದೆ. ಆದ್ದರಿಂದ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ನಡುವೆ ಉತ್ತಮ ಸಮನ್ವಯತೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

    ಹುಲಿಗಳ ಯೋಜನೆಗೆ ಆಯ್ಕೆ ಹೇಗೆ?

    ಹುಲಿಯೋಜನೆ ಸಂರಕ್ಷಿತ ಪ್ರದೇಶ ಆಯ್ಕೆಗೆ ಮಾನಂದಡವಾಗಿದ್ದು ಹುಲಿಗಳ ಸಂಖ್ಯೆಯ ಜತೆಗೆ ವಾಸಕ್ಕೆ ಪೂರಕವಾದ ಅಲ್ಲಿನ ದಟ್ಟಾರಣ್ಯದ ಪ್ರಮಾಣ. ಇದನ್ನು ಗಮನಿಸಿಯೇ ಮೊದಲ ಹಂತದಲ್ಲಿ 9 ಪ್ರದೇಶ ಗುರುತಿಸಲಾಯಿತು. ಇನ್ನಷ್ಟು ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವ ಮಾಹಿತಿ ಆಧರಿಸಿ ವಿಸ್ತರಿಸಲಾಗಿದೆ. ಜನಸಮುದಾಯದಿಂದ ಮುಕ್ತವಾದ ವನ್ಯಜೀವಿಗಳಿಗೆ ಮಾತ್ರ ಮೀಸಲಾದ ಸ್ಥಳ ನಿಗದಿಪಡಿಸುವ (ಕೋರ್ ಬಫರ್) ಲೆಕ್ಕಾಚಾರದ ಮೇಲೆಯೇ ಹುಲಿ ಸಂರಕ್ಷಿತ ಪ್ರದೇಶ ಗುರುತಿಸಲಾಗಿದೆ.

    ಹುಲಿ ಯೋಜನೆಯಿಂದ ಪ್ರಯೋಜನವೇನು?

    ಹುಲಿ ಯೋಜನೆ ಅನುಷ್ಠಾನಗೊಂಡ ನಂತರ ಸಂಪೂರ್ಣ ಅಳಿವಿನ ಅಂಚಿಗೆ ತಲುಪಿದ್ದ ಹುಲಿಯನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಈಗ ಹುಲಿಗೂ ತನ್ನದೇ ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶ. ಬಂಡೀಪುರ, ನಾಗರಹೊಳೆ, ರಣ ತಂಭೋರ್‌, ಕನ್ಹಾ ಸೇರಿದಂತೆ ಹಲವು ಪ್ರದೇಶಗಳು ಹುಲಿ ಸಂರಕ್ಷಣೆ ಮತ್ತು ವಂಶಾಭಿವೃದ್ಧಿಗೆ ಯೋಗ್ಯವಾದ ಸ್ಥಳಗಳಾಗಿವೆ. ಹುಲಿ ಯೋಜನೆ ಜಾರಿಗೊಳಿಸಿದ ಕೆಲವೇ ವರ್ಷದಲ್ಲಿ ಸುರಕ್ಷಿತ ವಲಯ ರೂಪುಗೊಂಡು ಹುಲಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ.

    – ಮೋಹನ ಬನ್ನಿಕುಪ್ಪೆ, ಮೈಸೂರು

  • ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲ್ಲ. ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪೊನ್ನಾಚಿಯಲ್ಲಿ ಆಲಂಬಾಡಿ ಮಠದ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಜರಾಯಿ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗಿಫ್ಟ್ – ಮಹಿಳೆಯರಿಗೆ ಬಳೆ, ಅರಿಶಿನ-ಕುಂಕುಮ

    ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮಲೆಮಹದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧ ಕ್ಷೇತ್ರ. ಈ ಭಾಗದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ. ಕಾಡಿನೊಳಗೂ ಗ್ರಾಮಗಳಿವೆ. ಈ ಭಾಗದ ಜನರಿಗೆ, ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಾರದು. ಮಲೆಮಹದೇಶ್ವರ ಬೆಟ್ಟಕ್ಕೆ ಈ ಭಾಗದ ರೈತರೇ ವಾರಸುದಾರರು. ಸರ್ಕಾರ ಅನುಷ್ಠಾನಗೊಳಿಸುವ ಯಾವುದೇ ಯೋಜನೆಗಳು ಜನರಿಗೆ ಅನುಕೂಲವೇಗಬೇಕೇ ಹೊರತು ಅನಾನುಕೂಲವಾಗಬಾರದು ಎಂದರು. ಇದನ್ನೂ ಓದಿ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ 

    ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಆಗ್ಬೇಕು: ಇದೇ ವೇಳೆ ಎಸ್‌ಡಿಪಿಐ ಸಂಘಟನೆ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬ್ಯಾನ್ ಆಗ್ಬೇಕು. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದು ಯಾರ ಪಾಪದ ಕೂಸು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಘಟನೆಗಳು ಎಲ್ಲರಿಗೂ ತಲೆನೋವಾಗಿದ್ದು, ಇವುಗಳನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು, ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವವರಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.

    ಈಗಾಗಲೇ ಅನಧಿಕೃತ ಕಟ್ಟದ ನಿರ್ಮಾಣ ಮಾಡಿರುವ 8 ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಇನ್ನು ಉಳಿದ 7 ಅಕ್ರಮ ಕಟ್ಟಡ ಸಂಬಂಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಕೇಂದ್ರ ಸರ್ಕಾರ 2012ರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ ಪ್ರಸ್ತುತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ 2010ರ ಅಗಸ್ಟ್ 31ರ ಬಳಿಕ ಕಟ್ಟಡ ನಿರ್ಮಾಣ ಮಾಡಿರುವ 3 ಪ್ರಕರಣಗಳಲ್ಲಿ ಅನ್ಯಕ್ರಾಂತವಾಗಿರುವ ಆದೇಶವನ್ನು ರದ್ದುಪಡಿಸುವ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಮುಂದಾಗಿದ್ದಾರೆ.

    ಪ್ರವಾಸೋದ್ಯಮ ಇಲಾಖೆಯವರು ಅನುಮತಿಸಿರುವ ಯಾವುದೇ ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಂ ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ಆದೇಶಕ್ಕೆ ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂ ಸ್ಟೇ ನಡೆಸದಂತೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗಮುದ್ರೆ ಆದೇಶ ಉಲ್ಲಂಘಿಸಿ ಹೋಂ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಮಾಲೀಕರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಸೇರಿದೆ. ಈ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಚಟುವಟಿಕೆ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದಾಗಿಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೂರ್ವಾನುಮತಿ ಪಡೆಯದೇ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ವರದಿ ನೀಡುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದರು. ತಹಶೀಲ್ದಾರರು ನೀಡಿದ ವರದಿ ಅನ್ವಯ ಜಿಲ್ಲಾಧಿಕಾರಿಯವರು ಕ್ರಮಕ್ಕೆ ಮುಂದಾಗಿದ್ದಾರೆ.