Tag: ಹುಲಿ ದಿನಾಚರಣೆ

  • ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಮಕ್ಕಳು

    ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಮಕ್ಕಳು

    ಬೆಂಗಳೂರು: ಇಂದು ವಿಶ್ವಾದ್ಯಂತ ಹುಲಿ ದಿನಾಚರಣೆಯನ್ನು ಆಚರಿಸಲಾಗಿತ್ತು. ಅದೇ ರೀತಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಹ ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಅರಿವಿನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

    ಬನ್ನೇರುಘಟ್ಟದಲ್ಲಿ ಹುಲಿ ದಿನಾಚರಣೆ ವೈವಿಧ್ಯಮಯವಾಗಿ ಆಚರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ಹಾಗೂ ಎಸ್‍ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾದ 55ಕ್ಕೂ ಹೆಚ್ಚು ಮಕ್ಕಳಿಗೆ ಹುಲಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಪಡಿಸಲಾಗಿತ್ತು. ಮಕ್ಕಳು ಹುಲಿ ಮುಖವಾಡ ಧರಿಸಿ ಉದ್ಯಾನದಲ್ಲಿ ಜಾಥಾ ಮಾಡುವ ಮೂಲಕ ಸಂಭ್ರಮಿಸಿದರು. ಹಾಗೆ ಪಾರ್ಕಿಗೆ ಬಂದಿದ್ದ ಸಾರ್ವಜನಿಕರು ಸಹ ಭಾಗವಹಿಸಿ ಹುಲಿಗಳು ಹಾಗೂ ಅವುಗಳ ವಾಸಸ್ಥಾನ ಎಂಬ ವಿಷಯವನ್ನು ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ ಅನೇಕ ಬಗೆಯ ಮಾಹಿತಿಯನ್ನು ಪಡೆದುಕೊಂಡರು.  ಇದನ್ನೂ ಓದಿ: ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಹುಲಿಗಳ ಚಲನ, ವಲನಗಳ ಬಗ್ಗೆ ಸಾರ್ವಜನಿಕರಿಗೆ ಅರಣ್ಯ ಅಧಿಕಾರಿಗಳು ಶಿಬಿರದಲ್ಲಿ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಓರ್ವ ವಿದ್ಯಾರ್ಥಿ ನಾವು ಹುಲಿ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಜೊತೆಗೆ ಹುಲಿ ಚಲನವಲನ ಬಗ್ಗೆ ಮತ್ತು ಎಷ್ಟು ಆಹಾರ ಸೇವಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಚನಾ ಎಂಬವರು ಹಿಮ ಎಂಬ ಹುಲಿಯನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ.

  • ಇಂದು ವಿಶ್ವ ಹುಲಿ ದಿನಾಚರಣೆ

    ಇಂದು ವಿಶ್ವ ಹುಲಿ ದಿನಾಚರಣೆ

    -ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು ಗೊತ್ತಾ?

    ಬೆಂಗಳೂರು: ಇಂದು ವಿಶ್ವ ಹುಲಿ ದಿನಾಚರಣೆಯಾಗಿದ್ದು, ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆ ಕರ್ನಾಟಕದಲ್ಲಿಯೇ ಅತಿಹೆಚ್ಚು ಇರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ.

    ಹೌದು, 2014ರ ಹುಲಿಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 2,264 ಹುಲಿಗಳಿದ್ದು, ಕರ್ನಾಟಕದಲ್ಲಿಯೇ ಸುಮಾರು 229 ಹುಲಿಗಳು ಕಂಡುಬರುತ್ತವೆ. ಈ ಮೂಲಕ ರಾಷ್ಟ್ರದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ರಾಜ್ಯದ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳು ಹುಲಿ ಸಂರಕ್ಷಿತ ಅಭಯಾರಣ್ಯಗಳಾಗಿವೆ.

    ಏನಿದು ಹುಲಿ ದಿನ?
    ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‍ನಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಹುಲಿ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ದೇಶಾದ್ಯಂತ ನಡೆಯುತ್ತದೆ. ಇಂದಿನ ದಿನಗಳಲ್ಲಿ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

    ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ವಿಶ್ವದಲ್ಲಿ ಒಟ್ಟು 6 ಜಾತಿಯ ಹುಲಿಗಳಿದ್ದು, ಅತಿಹೆಚ್ಚು ಹುಲಿಗಳು ಏಷ್ಯಾಖಂಡದಲ್ಲಿಯೇ ಕಾಣಸಿಗುತ್ತವೆ. ಭಾರತದಲ್ಲಿಯೇ ಸುಮಾರು 2,264 ಕ್ಕೂ ಹೆಚ್ಚು ಹುಲಿಗಳಿದ್ದು, 6000 ಹುಲಿಗಳು ವಾಸ ಮಾಡುವಷ್ಟು ಅರಣ್ಯ ಪ್ರದೇಶವನ್ನು ನಾವು ಹೊಂದಿದ್ದೇವೆ. ಅಲ್ಲದೇ 50 ಹುಲಿ ಸಂರಕ್ಷಿತ ಅಭಯಾರಣ್ಯಗಳನ್ನು ಭಾರತ ಹೊಂದಿದೆ.