Tag: ಹುಲಿ ಗಣತಿ

  • ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್

    ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್

    – ಇನ್ಮುಂದೆ ಪ್ರತಿ ವರ್ಷ ಸುಲಭವಾಗಿ ನಡೆಯಲಿದೆ ಹುಲಿ ಗಣತಿ, ಕ್ಯಾಪ್ಚರ್ ಕಾರ್ಯ

    ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಇಂತಹ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಕುರಿತು ರಿಸರ್ಚ್ ನಡೆಸಬೇಕಿದರೆ ಅರಣ್ಯಾಧಿಕಾರಿಗಳು ಪಡಬಾರದ ಪರಿಪಾಟಿಲು ಪಡುತ್ತಿದ್ದರು. ಆದರೆ, ಆ ಸಂಕಷ್ಟಕ್ಕೆ ಈಗ ಬ್ರೇಕ್ ಬಿದ್ದಿದೆ.

    ಬಂಡೀಪುರ ಈ ಹೆಸರು ಕೇಳಿದ್ರೆ ಸಾಕು ಪ್ರಾಣಿ ಪ್ರಿಯರು ಹಾಗೂ ಪರಿಸರವಾದಿಗಳ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಯಾಕಂದ್ರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಈ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್‌ನ ಪ್ರಕೃತಿಯ ಸೌಂದರ್ಯದ ವರ್ಚಸ್ಸೆ ಅಂತಹದ್ದು. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ರಾಜ್ಯದಲ್ಲೇ ಅತಿ ಹೆಚ್ಚು ಆನೆ ಮತ್ತು ಚಿರತೆಗಳನ್ನ ಹೊಂದಿರುವ ಟೈಗರ್ ರಿಸರ್ವ್ ಫಾರೆಸ್ಟ್ ಇದು. ಇಂತಹ ಖ್ಯಾತಿ ಪಡೆದ ಬಂಡೀಪುರದಲ್ಲಿ ಹುಲಿಯ ಗಣತಿ ಕಾರ್ಯ ಅಥವಾ ಯಾವುದಾದ್ರು ವ್ಯಾಘ್ರದ ಕುರಿತು ರಿಸರ್ಚ್ ಮಾಡ್ಬೇಕಿದ್ರೆ ದೂರದ ಬೆಂಗಳೂರಿನ ಕೇಂದ್ರ ಕಚೇರಿಗೆ ತೆರಳಬೇಕಿತ್ತು. ಇದರಿಂದ ಅರಣ್ಯಾಧಿಕಾರಿಗಳಿಗೆ ಭಾರೀ ಸಂಕಷ್ಟ ಎದುರಾಗುತ್ತಿತ್ತು. ಈಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ಟೈಗರ್ ರಿಸರ್ಚ್ ಸೆಲ್ ಆರಂಭಗೊಳ್ಳಲಿದೆ.

    ಬಂಡೀಪುರ ಸೇರಿದಂತೆ ರಾಜ್ಯದಲ್ಲಿ ಬಿಳಿಗಿರಿ ಟೈಗರ್ ರಿಸರ್ವ್, ಭದ್ರ ಟೈಗರ್ ರಿಸರ್ವ್ ನಾಗರಹೊಳೆ ಟೈಗರ್ ರಿಸರ್ವ್ ಫಾರೆಸ್ಟ್‌ಗಳಿವೆ. ರಾಜ್ಯ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಟೈಗರ್ ರಿಸರ್ಚ್ ಎಂಡ್ ಮಾನಿಟರಿಂಗ್ ಸೆಲ್‌ನ ಅನಿವಾರ್ಯತೆ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ವರದಿ ನೀಡಲಾಗಿತ್ತು. ಈ ವರದಿ ಆಧಾರದ ಮೇಲೆ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟೈಗರ್ ಸೆಲ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ಮೊದಲ ಹಂತವಾಗಿ ಬಂಡೀಪುರದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇನ್ನು ಕೆಲ ದಿನಗಳಲ್ಲೇ ನೂತನ ಟೈಗರ್ ರಿಸರ್ಚ್ ಎಂಡ್ ಮಾನಿಟರಿಂಗ್ ಸೆಲ್ ಲೋಕಾರ್ಪಣೆಗೊಳ್ಳಲಿದೆ. ಇದರಿಂದ ಬಂಡೀಪುರದಲ್ಲಿ ಪ್ರತಿಯೊಂದು ಹುಲಿಯ ಮಾನಿಟರಿಂಗ್ ಮಾಡಬಹುದು. ವರ್ಷದಿಂದ ವರ್ಷಕ್ಕೆ ಎಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗಿದೀಯಾ ಅಥವಾ ಕಡಿಮೆ ಆಗಿದ್ಯಾ ಎಂಬುದರ ನಿಖರ ಮಾಹಿತಿ ದೊರೆಯಲಿದೆ. ಇದರ ಜೊತೆಗೆ ಕ್ಯಾಪ್ಚರಿಂಗ್ ಕಾರ್ಯ ಹಾಗೂ ಯಾವುದಾದ್ರು ಹುಲಿಯ ಮೇಲೆ ರಿಸರ್ಚ್‌ ಅನ್ನು ಸಹ ಇಲ್ಲೇ ಮಾಡಬಹುದಾಗಿದೆ.

    ಸದ್ಯ ರಾಜ್ಯ ಸರ್ಕಾರದ ಈ ನಡೆಯಿಂದ ಮುಂಬರುವ ಕಾಡುಪ್ರಾಣಿಗಳ ಕುರಿತಾದ ನಿಖರ ಹಾಗೂ ಸ್ಪಷ್ಟ ಮಾಹಿತಿ ಸಿಗಲಿದೆ, ಇದರ ಜೊತೆಗೆ ಇನ್ನೂ ಅಧಿಕವಾಗಿ ವನ್ಯಮೃಗಗಳನ್ನ ಅಧ್ಯಯನ ಮಾಡಬಹುದಾಗಿದೆ.

  • ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

    ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

    ಚಾಮರಾಜನಗರ: ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಹುಲಿ ಅಂದಾಜು ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಎಂ ಸ್ಟ್ರೈಪ್ಸ್ ಎಂಬ ಎಕೋಲಾಜಿಕಲ್ ಆ್ಯಪ್‍ನ್ನು ಬಳಸಲಾಗುತ್ತಿದೆ.

    ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಆರಂಭವಾಗಿದೆ. ಇಂದಿನಿಂದ ಫೆಬ್ರವರಿ 8 ರವರಗೆ ಗಣತಿ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಬಂಡೀಪುರವನ್ನು ಮೂರು ಬ್ಲಾಕ್‍ಗಳನ್ನಾಗಿ ವಿಂಗಡಿಸಿ 112 ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ.

    ಕೊರೊನಾ ಸಂದರ್ಭದಲ್ಲಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗಿನಿಂದ ಬಂದವರಿಂದ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಗಣತಿ ಕಾರ್ಯದಲ್ಲಿ ಸ್ವಯಂಸೇವಕರ ಸೇವೆ ಬಳಸಿಕೊಳ್ಳುತ್ತಿಲ್ಲ. ಗಣತಿ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಸೇರಿದಂತೆ 300 ಹೆಚ್ಚು ಮಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

    ಹುಲಿಗಳ ಗಣತಿಗೆ ಇದೇ ಮೊದಲ ಬಾರಿಗೆ ಎಂ ಸ್ಟ್ರೈಪ್ಸ್ ಎಂಬ ಎಕಾಲಾಜಿಕಲ್ ಆ್ಯಪ್‍ನ್ನು ಬಳಸಲಾಗುತ್ತಿದೆ. ಎಂ ಸ್ಟ್ರೈಪ್ಸ್ ಆ್ಯಪ್‍ನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿವ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಬಂಡೀಪುರದಲ್ಲಿ 40 ಮೊಬೈಲ್‍ಗಳಿಗೆ ಈ ತಂತ್ರಾಂಶ ಅಳವಡಿಸಲಾಗಿದೆ.

    ಅಂದಾಜು ಪ್ರಕ್ರಿಯೆಗೆ ನಿಯೋಜಿಸಲಾಗಿರುವ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಭ್ಯವಾಗುವ ಮಾಹಿತಿಗಳನ್ನು ಈ ಆ್ಯಪ್‍ನಲ್ಲಿ ದಾಖಲಿಸಲಿದ್ದು, ಹೆಚ್ಚಿನ ನಿಖರತೆ ಇರಲಿದೆ. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ

    ಈಗಾಗಲೇ ಕ್ಯಾಮೆರಾ ಟ್ರಾಪ್ ಮೂಲಕ ಹುಲಿ ಅಂದಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅಂತಿಮ ಹಂತದ ಅಂದಾಜು ಪ್ರಕ್ರಿಯೆ ಇದೀಗ ಆರಂಭಗೊಂಡಿದೆ. 2018ರಲ್ಲಿ ಕೈಗೊಂಡಿದ್ದ ನಾಲ್ಕನೇ ಅಖಿಲ ಭಾರತ ಮಟ್ಟದ ಗಣತಿ ಕಾರ್ಯ ಬಂಡಿಪುರ ಸಂರಕ್ಷಿತ ಪ್ರದೇಶದಲ್ಲಿ 173 ಹುಲಿಗಳನ್ನು ಗುರುತಿಸಲಾಗಿತ್ತು. ಈ ಬಾರಿ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

  • ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಮಂಗಳೂರು/ ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಕೇವಲ 15 ದಿನಗಳಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.

    ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ‘ರಾಣಿ’ ಹುಲಿ 5 ಮರಿಗಳಿಗೆ ಜನ್ಮ ನೀಡಿದೆ. 8 ವರ್ಷದ ರಾಯಲ್ ಬೆಂಗಾಲಿ ಟೈಗರ್ ರಾಣಿ ಮೂರು ವಾರಗಳ ಹಿಂದಯೇ ಜನ್ಮ ನೀಡಿರುವ ಮರಿಗಳ ಪೈಕಿ 3 ಹೆಣ್ಣು ಹಾಗೂ 2 ಗಂಡು ಆಗಿವೆ. ಈ ಐದು ಮರಿಗಳು ಆರೋಗ್ಯದಿಂದಿವೆ ಎಂದು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ವಿಶ್ವ ಹುಲಿ ದಿನವಾದ ಜುಲೈ 29ರಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶವು ಟಾಪ್ ಒನ್ ಸ್ಥಾನಕ್ಕೆ ಏರಿತ್ತು. ಹೀಗಾಗಿ 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈಗ ಕರ್ನಾಟಕದ ಹುಲಿಗಳ ಸಂಖ್ಯೆ 524+5 ಸೇರಿ 529 ಆಗಿದೆ. ಈ ಮೂಲಕ ಕರ್ನಾಟಕ ಮತ್ತೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ.

    ಹಿಂದಿನ ವರದಿ ಹೀಗಿತ್ತು:
    ಭಾರತದಲ್ಲಿ 2018ರ 4ನೇ ಹುಲಿ ಗಣತಿಯ ಅನ್ವಯ 2967 ಹುಲಿಗಳು ಇರುವುದಾಗಿ ವರದಿಯಿಂದ ತಿಳಿದು ಬಂದಿತ್ತು. ಇದರಲ್ಲಿ ಕರ್ನಾಟಕದ ಹುಲಿಗಳ ಸಂಖ್ಯೆ 524 ಎಂದು ಲೆಕ್ಕ ಹಾಕಲಾಗಿತ್ತು. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

    2006ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು 2018ರಲ್ಲಿ ನಾಲ್ಕನೇ ಸಮೀಕ್ಷೆ ನಡೆಸಲಾಗಿತ್ತು. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮೆರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿತ್ತು.

    2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿದ್ದವು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿತ್ತು. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್ ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದರು.