Tag: ಹುಲಿಯಾ

  • ಹೌದು ಹುಲಿಯಾ ಎಂದ ಕಾರ್ಯಕರ್ತ- ರಾಜಾಹುಲಿ ಬಂದ್ಬಿಟ್ಟಿದ್ದಾರೆ ಎಂದ ಸಿದ್ದು

    ಹೌದು ಹುಲಿಯಾ ಎಂದ ಕಾರ್ಯಕರ್ತ- ರಾಜಾಹುಲಿ ಬಂದ್ಬಿಟ್ಟಿದ್ದಾರೆ ಎಂದ ಸಿದ್ದು

    ಬೆಳಗಾವಿ: ನನಗೆ ಹುಲಿಯಾ ಎಂದು ಕರೆದವರು ಜನರು. ಆದರೆ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಅವರ ಪಕ್ಷದವರೇ ಕರೆದರು ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಕಾಂಗ್ರೆಸ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಡಿಕೆ ಶಿವಕುಮಾರ್ ಅಧ್ಯಕ್ಷರು ಅಲ್ಲದ ಕಾಲದಲ್ಲಿ ಬೆಳಗಾವಿ ಬಗ್ಗೆ ಹೆಚ್ಚು ಆಸಕ್ತಿ ತೆಗೆದುಕೊಂಡಿದ್ದರು ಎಂದು ಹೇಳಿದರು. ಈ ವೇಳೆ ಕಾರ್ಯಕರ್ತರೊಬ್ಬರು ಹೌದು ಹುಲಿಯಾ ಎಂದರು. ಕಾರ್ಯಕರ್ತನ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಸವಕಲು ಆಗಿ ಹೊಯ್ತು, ಈಗ ರಾಜಾಹುಲಿ ಕಣ್ರಯ್ಯಾ ಎಂದ ನಗೆ ಚಟಾಕಿ ಹಾರಿಸಿದರು. ಬಳಿಕ ನನಗೆ ಹುಲಿಯಾ ಅಂತಾ ಕರೆದವರು ಜನರು. ಯಡಿಯೂರಪ್ಪಗೆ ರಾಜಾಹುಲಿ ಅಂತಾ ಕರೆದವರು ಅವರ ಪಕ್ಷದವರು ಅಂತಾ ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿಎಂ ಬಿಎಸ್‍ವೈಗೆ ‘ರಾಜಾಹುಲಿ’ ಹೆಸ್ರು ಬಂದಿದ್ದು ಹೇಗೆ?

    ಕಾಂಗ್ರೆಸ್ ಪಕ್ಷಕ್ಕೂ ಬೆಳಗಾವಿಗೂ ಬಹಳ ಅವಿನಾಭಾವ ಸಂಬಂಧ ಇದೆ. ಬೆಳಗಾವಿಯಲ್ಲಿ ಈಗ ಸ್ವಲ್ಪ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಎಂಇಎಸ್ ನವರು ಇರುವುದರಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಹೋಗಲಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹದಿನೈದು ಸ್ಥಾನ ಗೆಲ್ಲಬೇಕು. 2018ರ ಚುನಾವಣೆಯಲ್ಲಿ ಬಿಜೆಪಿಗೆ ಜನರ ಆಶೀರ್ವಾದ ಇರಲಿಲ್ಲ. ಕಾಂಗ್ರೆಸ್ 80 ಸ್ಥಾನ ಗೆಲುವು ಪಡೆದಿದೆ, ಆದರೆ ಮತಗಳ ಶೇಕಡಾ ಪ್ರಮಾಣದಲ್ಲಿ ನಮಗೇ ಹೆಚ್ಚು ಮತ ಬಂದಿದೆ. ರಾಜ್ಯಪಾಲರು ಕರೆದು ಸಿಎಂ ಆಗಿ ಅಂದ್ರೂ ಯಡಿಯೂರಪ್ಪ ಸಿಎಂ ಆದ ಬಳಿಕ ಬಹುಮತ ತೋರಿಸಲು ಆಗಲಿಲ್ಲ. ಆಗ ರಾಜೀನಾಮೆ ಕೊಟ್ಟು ಹೋದರು. ಆದರೆ ಮತ್ತೆ ಒಬ್ಬ ಶಾಸಕರಿಗೆ ಇಪ್ಪತ್ತು, ಮೂವತ್ತು ಕೋಟಿ ರೂ. ಕೊಟ್ಟು ಬಿಡಲಿಲ್ಲ. ಯಡಿಯೂರಪ್ಪ ರಾಜ್ಯಕ್ಕೆ ಒಳ್ಳೆಯದು ಮಾಡಲು ಅಧಿಕಾರಕ್ಕೆ ಬರಲಿಲ್ಲ, ಲೂಟಿ ಹೊಡೆಯಲು ಬಂದು ಕುಳಿತ್ತಿದ್ದಾರೆ ಎಂದು ಟೀಕೆ ಮಾಡಿದರು.

    ಯಡಿಯೂರಪ್ಪ ನಿಮ್ಮಷ್ಟು ಭ್ರಷ್ಟ ಯಾರು ಇಲ್ಲ, ಅಧಿಕಾರ ಬಿಟ್ಟು ತೊಲಗಿ ಅಂತಾ ಹೇಳಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕೆಟ್ಟ, ಭ್ರಷ್ಟ ಸರ್ಕಾರ ಯಾವ ಕಾಲದಲ್ಲಿ ಬಂದಿಲ್ಲ. ಇದನ್ನ ಹೇಳಿದರೆ ಸಿದ್ದರಾಮಯ್ಯ, ಯಡಿಯೂರಪ್ಪನನ್ನು ಟೀಕೆ ಮಾಡುತ್ತಿದ್ದಾನೆ ಅಂತಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಬಳ ಕೊಡಲು ದುಡ್ಡಿಲ್ಲ. ನಾವು ಅಧಿಕಾರಕ್ಕೆ ಬರಲು ಈ ಮಾತು ಹೇಳುತ್ತಿಲ್ಲ ಎಂದರು.

    ರಾಜ್ಯ ಆರ್ಥಿಕತೆಯಲ್ಲಿ ಹತ್ತು ವರ್ಷ ಹಿಂದೆ ಹೋಗಿದೆ. ಮುಂದೆ ನಾವೇ ಅಧಿಕಾರಕ್ಕೆ ಬಂದರೂ ಸರಿಪಡಿಸಲು ಮೂರು ವರ್ಷ ಬೇಕು. ಎಲ್ಲಾ ಭಾಗ್ಯ ನಾವು ಕೊಟ್ಟಿದ್ದು, ಇವರು ತಿನ್ನಪ್ಪ ನುಂಗಪ್ಪ ಮಾಡಿದ್ದು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಈ ವರ್ಷ ತೊಂಬತ್ತು ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ. ಬಜೆಟ್ ನಲ್ಲಿ ಐವತ್ತು ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದರು. ಆದರೆ ಈಗ ತೊಂಬತ್ತು ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿ ಇರಬೇಕಾ ನೀವೇ ಹೇಳಿ. ಈಗಲೇ ಹಳ್ಳಿ ಹಳ್ಳಿಗೆ ಹೋಗಿ ಏನು ನಡೆಯುತ್ತಿದೆ ಎಂದು ಹೇಳಬೇಕು. 2023ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಕಾರ್ಯಕರ್ತರು ಎಲೆಕ್ಷನ್ ವಾರಿಯರ್ಸ್ ಆಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

  • ಹುಲಿಯಾನ ಮೇಲೆ ರಾಜಾಹುಲಿಗೆ ಸಾಫ್ಟ್ ಕಾರ್ನರ್

    ಹುಲಿಯಾನ ಮೇಲೆ ರಾಜಾಹುಲಿಗೆ ಸಾಫ್ಟ್ ಕಾರ್ನರ್

    ಬೆಂಗಳೂರು: ಸದನದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಹಾವು ಮುಂಗುಸಿಯಂತೆ ಆಡಿದ್ದರು. ಸರಿಯಾಗಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಟ್ಟುಮಾಡಿಕೊಂಡು ಸಭಾತ್ಯಾಗವನ್ನೂ ಮಾಡಿದ್ದರು.

    ಆದರೆ ಸ್ಪೀಕರ್ ಕಚೇರಿ ಸಂಧಾನದ ನಂತರ ಸಭೆಯ ನಿರ್ಣಯಕ್ಕೆ ಬೆಲೆ ಕೊಟ್ಟು ಅಧಿವೇಶನದಲ್ಲಿ ಭಾಗವಹಿಸಿದ ವಿಪಕ್ಷ ನಾಯಕನಿಗೆ ಸಿಎಂ ಸದನದಲ್ಲೇ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಬಾದಾಮಿ ಕ್ಷೇತ್ರದ 3 ಫೈಲ್‍ಗಳಿಗೆ ಸದನದಲ್ಲೇ ಕುಳಿತು ಮುಖ್ಯಮಂತ್ರಿ ಯಡಿಯೂರಪ್ಪ ಸಹಿ ಹಾಕಿದರು. ಕೃಷಿ, ನೀರಾವರಿ ಹಾಗೂ ಪ್ರವಾಸೋದ್ಯಮದ ಮೂರು ಫೈಲ್‍ಗಳಿಗೆ ಸದನದಲ್ಲಿಯೇ ಕುಳಿತು ಸಹಿ ಮಾಡಿದ್ದಾರೆ.

    ಸ್ಪೀಕರ್ ಕಚೇರಿ ಸಭೆ ಮುಗಿಸಿ ಬಂದು ಸದನ ಆರಂಭವಾದ ಕೆಲವೇ ಹೊತ್ತಿನಲ್ಲಿ ಸದನದಲ್ಲೇ ಸಿಎಂ ಟೇಬಲ್‍ಗೆ ಬಾದಾಮಿ ಕ್ಷೇತ್ರದ ಮೂರು ಪ್ರಮುಖ ಫೈಲ್ ಗಳು ಬಂದವು. ಅಂದಾಜು 600 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಿ ಹಾಕಲಾದ ಸಹಿ ಎನ್ನಲಾಗುತ್ತಿದೆ. ಕುಳಿತಲ್ಲೇ ಸಹಿ ಹಾಕಿ ತಮ್ಮ ಕಾರ್ಯದರ್ಶಿ ಸೆಲ್ವಾ ಕುಮಾರ್‍ಗೆ ಸಿಎಂ ಫೈಲ್ ರವಾನಿಸಿದ್ದರು. ರಾಜಾಹುಲಿಗೆ ಹುಲಿಯನ ಮೇಲೆ ಇನ್ನಿಲ್ಲದ ಕಾಳಜಿ ಕುಳಿತಲ್ಲೇ ಸಹಿ ಹಾಕಿ ತೋರಿಸಿದ್ದಾರೆ.