Tag: ಹುಲಿಗಳು

  • ಹುಲಿಗಳು ಇನ್ನೂ ಉಸಿರು ಚೆಲ್ಲಬೇಕೆ? ವಿಷವಿಕ್ಕುವ ಕೃತ್ಯಕ್ಕೆ ಕೊನೆ ಎಂದು?

    ಹುಲಿಗಳು ಇನ್ನೂ ಉಸಿರು ಚೆಲ್ಲಬೇಕೆ? ವಿಷವಿಕ್ಕುವ ಕೃತ್ಯಕ್ಕೆ ಕೊನೆ ಎಂದು?

    ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (MM Hills Forest) 5 ಹುಲಿಗಳು ವಿಷಪ್ರಾಶನಕ್ಕೆ ಬಲಿ ಆಗಿರುವುದು ಇಡೀ ರಾಜ್ಯದಲ್ಲಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿವೆ. ಈಗಾಗಲೇ ಹಂತಕರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದೊಂದಿಗೆ ಮಾನವ ಹಾಗೂ ವನ್ಯಜೀವಿ ಸಂಘರ್ಷದ ಪಾತ್ರವೂ ಕಂಡುಬಂದಿದೆ.

    ಹೌದು. ಹುಲಿಗಳ ಸಂರಕ್ಷಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದೊಂದು ದಶಕದ ಅವಧಿಯಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, 3,650ಕ್ಕೂ ಹೆಚ್ಚು ಹುಲಿಗಳು (Tigers) ಭಾರತದಲ್ಲಿವೆ ಎಂಬುದನ್ನು ಸಮೀಕ್ಷೆಗಳು ತಿಳಿಸಿವೆ. ವಿಶ್ವದ ಒಟ್ಟು ಹುಲಿಗಳಲ್ಲಿ ಶೇ 75ರಷ್ಟು ಭಾರತದಲ್ಲಿಯೇ ಇವೆ. ಹುಲಿ ಸಂರಕ್ಷಣೆಯ ಸಾಧನೆ ಮೂಲಕ ವಿಶ್ವದ ಗಮನಸೆಳೆದಿರುವ ದೇಶದಲ್ಲಿ ಮನುಷ್ಯನ ಹಸ್ತಕ್ಷೇಪದಿಂದಾಗಿ ಹುಲಿಗಳ ದಾರುಣ ಸಾವುಗಳೂ ಸಂಭವಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ, ಚಾಮರಾಜನಗರ ಜಿಲ್ಲೆಯ ಮೀಣ್ಯಂನ ಕಾಡಿನಲ್ಲಿ ಸಂಭವಿಸಿರುವ ಐದು ಹುಲಿಗಳ ಸಾವು.

    ವನ್ಯಜೀವಿ ಮಾನವ ಸಂಘರ್ಷದ ಭಾಗವಾಗಿ ಪ್ರಾಣಿಗಳಿಗೆ ವಿಷವಿಕ್ಕುವುದು ಅವುಗಳನ್ನು ಹತ್ಯೆಗೈಯುವುದು ಹೊಸದೇನಲ್ಲ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಇಂತಹ ನೀಚ ಕೃತ್ಯಗಳನ್ನು ನೋಡುತ್ತಲೇ ಇರುತ್ತೇವೆ. ತಮ್ಮ ಜಾನುವಾರುಗಳನ್ನು ಕೊಂದು ಅದಕ್ಕೆ ವಿಷವಿಕ್ಕುವ ಮೂಲಕ ಆ ಪ್ರಾಣಿ (Animal) ಅಥವಾ ಮಾಂಸವನ್ನು ವನ್ಯಜೀವಿಗಳು ತಿಂದು ಮೃತಪಟ್ಟ ಘಟನೆಗಳು ಅನೇಕಬಾರಿ ಕರ್ನಾಟಕದಲ್ಲೇ ನಡೆದಿದೆ. ಆದ್ರೆ ಒಂದೇ ಬಾರಿ 5 ಹುಲಿಗಳು ಮೃತಪಟ್ಟಿರುವ ಘಟನೆ ದೇಶದಲ್ಲೇ ಮೊದಲಬಾರಿ ಆಗಿರುವುದರಿಂದ ಘಟನೆ ತೀವ್ರತೆ ಪಡೆದುಕೊಂಡಿದೆ. ಈ ಹೊತ್ತಿನಲ್ಲಿ ಹತ್ತಾರು ವರ್ಷಗಳಿಂದ ಇಂತಹ ಕೃತ್ಯಗಳು ನಡೆದಿದ್ದು, ಅವುಗಳನ್ನು ಒಂದು ಸುತ್ತು ಮೆಲುಕು ಹಾಕೋಣ. ಅದಕ್ಕೂ ಮುನ್ನ ಮಲೆ ಮದೇಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹೇಗೆ ಎಂಬುದನ್ನೂ ತಿಳಿಯೋಣ..

    ಬೆಟ್ಟದಲ್ಲಿ ಹುಲಿಗಳು ಸತ್ತಿದ್ದು ಹೇಗೆ?

    ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು, ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರವನ್ನು ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ʻಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಮೈಸೂರಿನಲ್ಲಿ ಆನೆಗಳಿಗೂ ವಿಷಪ್ರಾಶನ ನಡೆದಿತ್ತು

    2003-04ರ ಸಂದರ್ಭದಲ್ಲಿ ಮೈಸೂರು ಮೃಗಾಲಯದಲ್ಲಿ ಆತಂಕ ಮನೆ ಮಾಡಿತ್ತು. ಅಧಿಕಾರಿಗಳ ಪ್ರಾಮಾಣಿಕ ಕಾರ್ಯವನ್ನು ಸಹಿಸದ ಕೆಲವು ದುಷ್ಕರ್ಮಿಗಳು ಪ್ರಾಣಿಗಳನ್ನು ವಿಕೃತವಾಗಿ ಕೊಲ್ಲುವ, ಅವುಗಳಿಗೆ ವಿಷವಿಕ್ಕುವ ಕೃತ್ಯ ಎಸಗಿದ್ದರು. 2000 ಇಸವಿಗೂ ಮುನ್ನ ಮೈಸೂರು ಮೃಗಾಲಯ ಕೊಟ್ಟಿಗೆಯಂತಿತ್ತು. ನಂತರ ಮೃಗಾಲಯಕ್ಕೆ ಬಂದ ಅಧಿಕಾರಿ ಕುಮಾರ್‌ ಪುಷ್ಕರ್‌, ಮೃಗಾಲಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಟ್ಟರು. ಹೆಚ್ಚು ಸಂಖ್ಯೆಯಲ್ಲಿದ್ದ ಜಿಂಕೆಗಳನ್ನ ಕಡಿಮೆ ಮಾಡಿ ಜನರಿಗೆ ಅಗತ್ಯವಿರುವಷ್ಟನ್ನು ಮಾತ್ರ ಪ್ರದರ್ಶನಕ್ಕಿಡುವಂತೆ ಮಾಡಿದರು. ಸಿಬ್ಬಂದಿಗೆ ದಿನವಿಡೀ ಕೆಲಸ ಕೊಟ್ಟರು. ಇದನ್ನು ಸಹಿಸದ ಕೆಲವರು ಎಮು ಪಕ್ಷಿಯ ಕುತ್ತಿಗೆ ಕತ್ತರಿಸಿ ಹಾಕಿದ್ದರು. ಇದಾದ ಕೆಲ ದಿನಗಳಲ್ಲೇ ಹಂದಿಯನ್ನ ಕೊಂದು ಕಾಡೆಮ್ಮೆ ಕೋಣೆಯ ಮುಂದೆ ಬಿಸಾಡಿದ್ದರು, ಕಾಡೆಮ್ಮೆಯೆ ಕೊಂದಿದೆ ಎಂದು ಹಬ್ಬಿಸಿದ್ದರು. ಘಟನೆ ಬಳಿಕ ಪುಷ್ಕರ್‌ ಅವರನ್ನ ವರ್ಗಾವಣೆ ಮಾಡಲಾಗಿತ್ತು. ಆ ಜಾಗಕ್ಕೆ ಮನೋಜ್‌ ಕುಮಾರ್‌ ಅವರನ್ನು ನೇಮಕ ಮಾಡಲಾಯಿತು. ಕೆಲವೇ ದಿನಗಳಲ್ಲಿ ಆನೆಯೊಂದು ಸಾವಿಗೀಡಾಯಿತು. ಕಿಡಿಗೇಡಿಗಳು ಜಿಂಕ್‌ ಪಾಸ್ಪೆಟ್‌ ತಿನಿಸಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾತಿತು. ಧೈರ್ಯಗೆಡದ ಮನೋಜ್‌ ಕೆಲಸ ಮುಂದುವರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೆರಡು ಆನೆಗಳನ್ನು ಕೊಲ್ಲಲಾಯಿತು. ಅವುಗಳಿಗೂ ವಿಷಪ್ರಾಶನ ಮಾಡಿಸಲಾಗಿತ್ತು. ಸತ್ತ ಆನೆಗಳಲ್ಲಿ ಒಂದನ್ನು ವಿದೇಶಕ್ಕೆ ಕಳುಹಿಸಲು ರಾಷ್ಟ್ರಪತಿ ಕಚೇರಿಯಿಂದ ಆಯ್ಕೆ ಮಾಡಲಾಗಿತ್ತು. ಮುಂದೆ ಕಣ್ಣೊರೆಸುವ ತಂತ್ರಗಾರಿಕೆ ಭಾಗವಾಗಿ ತನಿಖೆ ನಡೆಯಿತು. ಆದ್ರೆ ಅದರಿಂದ ಏನಾಯಿತು ಅನ್ನೋ ಕಾರಣ ಮಾತ್ರ ಹೊರಗೆ ಬರಲೇ ಇಲ್ಲ.

    ಯಾವ-ಯಾವ ವರ್ಷ ಎಲ್ಲೆಲ್ಲಿ ಹುಲಿ ಸಾವು?

    2013: ಆ ವರ್ಷದ ಜನವರಿ 13ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ ಕುಪ್ಪೆ ವಲಯದ ಮಾಸ್ತಿಗುಡಿ ಬೀಟ್‌ನ ತಡಿಕೆಹಳ್ಳದ ಕಬಿನಿ ಹಿನ್ನೀರು ಪ್ರದೇಶದಲ್ಲಿ 4-5 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು. ಮೈಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಮತ್ತು ಅದರ ಅಂಗಾಂಗಗಳು ಸುರಕ್ಷಿತವಾಗಿದ್ದವು. ಬಳಿಕವೇ ಅದು ವಿಷಪ್ರಾಶನದಿಂದ ಮೃತಪಟ್ಟಿದೆ ಎಂಬುದು ಗೊತ್ತಾಯಿತು.

    2013ರ ಅದೇ ವರ್ಷ ಫೆ.16ರಂದು ಮೇಟಿಕುಪ್ಪೆ ವಲಯದ ಸೊಳ್ಳೇಪುರ ಹಾಡಿಯ ಬಳಿ ಹೆಣ್ಣು ಹುಲಿಯೊಂದು ಮೃತಪಟ್ಟಿತ್ತು. ಉರುವಲು ತರಲು ಹೋದ ಜನರು ಅದನ್ನ ನೋಡಿ ಅರಣ್ಯ ಇಲಾಖೆಗೆ ತಿಳಿಸಿದ್ದರು. ಹುಲಿ ಕಳೇಬರ ಸಿಕ್ಕಿದ್ದರ ಸಮೀಪದಲ್ಲಿ ಹಸುವಿನ ಕಳೇಬರ ಕೂಡ ಸಿಕ್ಕಿತ್ತು. ಕೊನೆಗೆ ವಿಷಪ್ರಾಶನದಿಂದ ಮೃತಪಟ್ಟಿರುವುದು ಗೊತ್ತಾಗಿ ಬೊಮ್ಮಲಾಪುರ ರೈತರೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಹಸುಗಳನ್ನು ಸಾಕಿಕೊಂಡು ಬದುಕುತ್ತಿದ್ದೇವೆ. ಹುಲಿಗಳ ಹಾವಳಿ ಇದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸಾಕು ಪ್ರಾಣಿಗಳನ್ನು ಕೊಂದು ತಿಂದರೆ ನಾವು ಬದುಕುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದರು.

    2014: 2014ರ ಜನವರಿ 26ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ ಅರಣ್ಯ ಪ್ರದೇಶದಲ್ಲಿ ಗಂಡು ಚಿರತೆಯನ್ನು ವಿಷವಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆಲತ್ತೂರು ಗ್ರಾಮದಲ್ಲಿ ಚಿರತೆ ಹಸುವಿನ ಮಾಂಸಕ್ಕೆ ವಿಷ ಹಾಕಿದ್ದಾರೆ ಅದರ ಮಾಂಸ ತಿಂದ ಕಾರಣ ಚಿರತೆ ಮೃತಪಟ್ಟಿತ್ತಯ ಎಂಬ ಆರೋಪ ಕೇಳಿಬಂದಿತ್ತು.

    2016: 2016ರ ಜುಲೈ 12ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ಪ್ರದೇಶದ ವ್ಯಾಪ್ತಿಯ ಗುಂಡ್ಲುಪೇಟೆ ಹಂಚಿಪುರ ಗ್ರಾಮದ ಜಮೀನಿನಲ್ಲಿ ಕಪ್ಪು ಚಿರತೆ ಸೇರಿ ಎರಡು ಚಿರತೆ ಸಾವನ್ನಪ್ಪಿದ್ದವು. ಚಿರತೆ ಒಂದು ನಾಯಿಯನ್ನು ಕೊಂದಿತ್ತು. ಅದಕ್ಕೆ ವಿಷ ಹಾಕಲಾಗಿತ್ತು ಎಂದು ಹೇಳಲಾಗಿತ್ತು.

    2023: 2023ರ ಜೂನ್‌ಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮೂರು ವರ್ಷದ ಹೆಣ್ಣು ಚಿರತೆಯನ್ನು ವಿಷ ಹಾಕಿ ಕೊಲ್ಲಲಾಗಿತ್ತು.

    2025: ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ನಾಗರಹೊಳೆ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದಲ್ಲಿ ಶೆಟ್ಟಿಹಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದ ಬಳಿ ಹಾರಂಗಿ ಸೇತುವೆ ಕೆಳಗೆ 5-6 ವರ್ಷದ ಹುಲು ಕಳೇಬರ ಪತ್ತೆಯಾಗಿತ್ತು. ಇದು ಕಿಡಿಗೇಡಿಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದ್ರೆ ಈವರೆಗೆ ಇದರ ತನಿಖಾ ವರದಿ ಹೊರಬಂದಿಲ್ಲ.

    13 ವರ್ಷಗಳಲ್ಲಿ 1,519 ಹುಲಿಗಳು ಸಾವು

    2013ರಿಂದ ಈ ವರ್ಷ ಜೂನ್‌ 26ರ ವರೆಗೆ ದೇಶಾದ್ಯಂತ 1,519 ಹುಲಿಗಳು ಸಾವನ್ನಪ್ಪಿವೆ. ಈ ವರ್ಷ ಮೊದಲ ಆರೂವರೆ ತಿಂಗಳಲ್ಲೇ 103 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರದಲ್ಲಿ 28, ಮಧ್ಯಪ್ರದೇಶದಲಲಿ 26, ಅಸ್ಸಾಂನಲ್ಲಿ 10 ಹುಲಿಗಳು ಮೃತಪಟ್ಟರೆ, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಸೇರಿದಂತೆ ಕರ್ನಾಟಕದ ಒಟ್ಟು 8 ಹುಲಿಗಳು ಮೃತಪಟ್ಟಿವೆ. ಇದಲ್ಲದೇ ಸಹಜ ಸಾವು, ಬೇಟೆ ಹೊರತುಪಡಿಸಿ ಅಸಹಜ ಸಾವು, ಮೂರ್ಛೆ ಅಥವಾ ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ 4-5 ವರ್ಷಗಳಲ್ಲಿ ನೂರಾರು ಹುಲಿಗಳು ಸತ್ತಿವೆ.

    ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಹುಲಿಗಳು ಸಾವು?

    2012 ರಿಂದ 2025ರ ಜೂನ್‌ ವರೆಗೆ
    * ಮಧ್ಯಪ್ರದೇಶ – 392
    * ಮಹಾರಾಷ್ಟ್ರ – 321
    * ಕರ್ನಾಟಕ – 189
    * ಉತ್ತರಾಖಂಡ – 140
    * ತಮಿಳುನಾಡು – 96
    * ಅಸ್ಸಾಂ – 95
    * ಕೇರಳ – 86
    * ಉತ್ತರ ಪ್ರದೇಶ- 71
    * ರಾಜಸ್ಥಾನ – 41
    * ಬಿಹಾರ – 22

    ದೇಶಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು?

    ದೇಶದಲ್ಲಿ ಹುಲಿಗಳ ಸಾವು ಒಂದೆಡೆಯಾದ್ರೆ ಸೂಕ್ತ ಪರಿಸರ ವ್ಯವಸ್ಥೆಯಿಂದ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇತ್ತು ಆಗ ಕರ್ನಾಟಕದಲ್ಲಿ 290 ಹುಲಿಗಳಿದ್ದವು. 2010ರಲ್ಲಿ ದೇಶದಲ್ಲಿ 1,706 ಈ ಪೈಕಿ ಕರ್ನಾಟಕದಲ್ಲಿ 300, 2014ರಲ್ಲಿ ದೇಶದಲ್ಲಿ 2,226 ಈ ಪೈಕಿ ಕರ್ನಾಟಕದಲ್ಲಿ 406, 2018ರಲ್ಲಿ ದೇಶದಲ್ಲಿ 2,967 ಈ ಪೈಕಿ ಕರ್ನಾಟಕದಲ್ಲಿ 524 ಹುಲಿಗಳಿದ್ದವು ಸದ್ಯ 2022ರ ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ 3,682 ಹುಲಿಗಳಿದ್ದರೆ ಈ ಪೈಕಿ ಕರ್ನಾಟಕದಲ್ಲಿ 563 ಹುಲಿಗಳಿವೆ. ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೆಮ 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದೆ.

    ಪರಿಸರ ವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಹಲಿಗಳ ಪಾತ್ರ ಬಹುಮುಖ್ಯವಾಗಿದೆ. ಕಾಡಿನ ಬೇಟೆಗಾರನಾಗಿರುವ ಹುಲಿ ಮಾಂಸಾಹಾರಿ ಪ್ರಾಣಿಯಾಗಿದ್ದು, ಇತರ ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಪ್ರಾಕೃತಿಕ ಸಮತೋಲನವನ್ನೂ ಕಾಪಾಡುತ್ತದೆ. ಈಗಾಗಲೇ ಗಂಧದಗುಡಿ, ಮಾಸ್ತಿ ಗುಡಿ ಅಂತಹ ಸಿನಿಮಾಗಳಲ್ಲಿ ಹುಲಿಗಳ ಪ್ರಾಮುಖ್ಯತೆಯನ್ನು ಸಾರಲಾಗಿದೆ. ಈ ನಿಟ್ಟಿನಲ್ಲಿ ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ.

  • ಬಂಡೀಪುರದಲ್ಲಿ ಸರಹದ್ದಿಗಾಗಿ ವ್ಯಾಘ್ರಗಳ ನಡುವೆ ಕಾದಾಟ- ಗಂಡು ಹುಲಿ ಸಾವು

    ಬಂಡೀಪುರದಲ್ಲಿ ಸರಹದ್ದಿಗಾಗಿ ವ್ಯಾಘ್ರಗಳ ನಡುವೆ ಕಾದಾಟ- ಗಂಡು ಹುಲಿ ಸಾವು

    ಚಾಮರಾಜನಗರ: ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

    ಸರಹದ್ದಿನ ಕದನದಲ್ಲಿ ಹುಲಿಯೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಎಲಚೆಟ್ಟಿ ಗಸ್ತಿನ ಆಲದಮರದ ಹಳ್ಳದಲ್ಲಿ ನಡೆದಿದೆ. ಅಂದಾಜು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಹುಲಿಗಳ ನಡುವಿನ ಸರಹದ್ದಿನ ಕಾದಾಟದಲ್ಲಿ ಸತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೃತ ಹುಲಿ ಮೈಮೇಲೆ ತೀವ್ರತರ ಗಾಯಗಳಾಗಿದ್ದು, ಉಗುರು, ಹಲ್ಲುಗಳು, ಅಂಗಾಂಗಗಳು ಸುರಕ್ಷಿತವಾಗಿವೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎನ್‍ಟಿಸಿಎ ಪ್ರತಿನಿಧಿ, ಪಶು ವೈದ್ಯರ ಸಮ್ಮುಖದಲ್ಲಿ ಹುಲಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸುಡಲಾಗಿದೆ.

  • ಚಾಮರಾಜನಗರ ವ್ಯಾಘ್ರಗಳ ಆವಾಸ ಸ್ಥಾನ- 250ಕ್ಕೂ ಹೆಚ್ಚು ಹುಲಿಗಳ ಆಗರ

    ಚಾಮರಾಜನಗರ ವ್ಯಾಘ್ರಗಳ ಆವಾಸ ಸ್ಥಾನ- 250ಕ್ಕೂ ಹೆಚ್ಚು ಹುಲಿಗಳ ಆಗರ

    ಚಾಮರಾಜನಗರ: ಅಳಿನಿನಂಚಿಗೆ ತಲುಪಿದ ಹುಲಿ ಸಂತತಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ರಾಜ್ಯದ ಅರಣ್ಯ ಇಲಾಖೆಗಳು ಹಮ್ಮಿಕೊಂಡ ಯೋಜನೆಗಳ ಫಲವಾಗಿ ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದ್ದು, ಕರ್ನಾಟಕ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಹಳೆ ಮೈಸೂರು ಭಾಗದಲ್ಲಿ 400ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡು ಕೊಂಡಿವೆ. ಅದರಲ್ಲೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ 250ಕ್ಕೂ ಹೆಚ್ಚು ಹುಲಿ ಇವೆ ಅನ್ನೋದೆ ದೊಡ್ಡ ಹೆಮ್ಮೆಯಾಗಿದೆ.

    ರಾಜ್ಯದ ದಕ್ಷಿಣ ಭಾಗದಲ್ಲಿ ಹುಲಿಗಳಿಗೆ ಹಿತಕರ ಹವಾಗುಣವಿದ್ದು, ಸದ್ಯ ಹಳೆ ಮೈಸೂರು ಭಾಗದಲ್ಲಿ 400ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 3 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಅದರಲ್ಲೂ ಚಾಮರಾಜ ಜಿಲ್ಲೆಯೊಂದರಲ್ಲೇ 2 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಹುಲಿಗಳ ಸುರಕ್ಷಿತ ನೆಲೆ, ಸಂತಾನವೃದ್ಧಿಗೆ ಸೂಕ್ತ ವಾತಾವರಣವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹುಲಿಗಳು ಹಳೆ ಮೈಸೂರು ಪ್ರಾಂತ್ಯದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿವೆ. 2018ರ ಹುಲಿ ಗಣತಿಯಲ್ಲಿ ವಿಶ್ವದಲ್ಲಿ 3,900 ಹುಲಿಗಳಿರುವುದನ್ನು ಖಾತರಿಪಡಿಸಿದೆ. ಅದರಲ್ಲಿ ಭಾರತದಲ್ಲೇ 2,967 ಹುಲಿಗಳಿವೆ. ಭಾರತದ 20 ರಾಜ್ಯಗಳಲ್ಲಿ ಹುಲಿಗಳ ನೆಲೆಗಳಿವೆ. 2018ರಲ್ಲಿ ದೇಶದಲ್ಲಿದ್ದ 2,967 ಹುಳಿಗಳಲ್ಲಿ ಮಧ್ಯಪ್ರದೇಶದಲ್ಲಿ ಅಂದಾಜು 526ಕ್ಕೂ ಹುಲಿಗಳಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 524 ಕ್ಕೂ ಹೆಚ್ಚು ಹುಲಿಗಳೊಂದಿಗೆ 2ನೇ ಹಾಗೂ 442 ಕ್ಕೂ ಹೆಚ್ಚು ಹುಲಿಗಳಿರುವ ಉತ್ತರಾಖಂಡ್ 3ನೇ ಸ್ಥಾನದಲ್ಲಿದೆ.

    ಗಂಧದ ಗುಡಿ ಎಂದೇ ಕರೆಯಲ್ಪಡುವ ರಾಜ್ಯ, ಅರಣ್ಯ ಸಂಪತ್ತಿನ ನೆಲೆಬೀಡಾಗಿದೆ. ಬೆಟ್ಟ-ಗುಟ್ಟ, ನದಿ ತೊರೆ, ಕಾಡನ್ನು ಮಡಿಲಲ್ಲಿಟ್ಟುಕೊಂಡಿದೆ. ಆನೆ, ಹುಲು ಸೇರಿದಂತೆ ನಾನಾ ಬಗೆಯ ವನ್ಯಜೀವಿಗಳ ಆವಾಸ ಸ್ಥಾನವೂ ಆಗಿದೆ. ಅದರಲ್ಲೂ ಕೂಡ ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ ಒಳಗೊಂಡ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ 250ಕ್ಕೂ ಹೆಚ್ಚು ಹುಲಿಗಳು ಇರೋದು ವಿಶೇಷವಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬರುವ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2018ರ ಹುಲಿ ಗಣತಿ ಪ್ರಕಾರ 127 ಹುಲಿಗಳಿವೆ. 1020 ಚ.ಕಿ.ಮೀ ವಿಸ್ತಾರದ ಮೂಲ ಅರಣ್ಯ ಪ್ರದೇಶದಲ್ಲಿ 380 ಕ್ಯಾಮರಾಗಳಲ್ಲಿ 3 ಹಂತಗಳಲ್ಲಿ ಬಳಸಿ ಗಣತಿ ಮಾಡಲಾಗಿತ್ತು. ಅದರೆ ಸದ್ಯ ಬಂಡೀಪುರದಲ್ಲಿ 150ಕ್ಕೂ ಹೆಚ್ಚು ಹುಲಿಗಳಿವೆ. ಮರಿಗಳು ಇದ್ದು ಇದರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

    ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ 572 ಚದರ ಕಿ.ಮೀ ವಿಸ್ತಾರವಿದೆ. 6 ವಲಯ, 2 ಉಪವಿಭಾಗಗಳಿವೆ. ಗಣತಿಯಲ್ಲಿ 70 ಕ್ಕೂ ಹೆಚ್ಚು ಹುಲಿಗಳು ಪತ್ತೆಯಾಗಿದೆ. 1,200 ಪಾಯಿಂಟ್ ಗುರುತಿಸಿ ಕ್ಯಾಮರಾ ಟ್ರ್ಯಾಪ್ ಮೂಲಕ ಗಣತಿ ಮಾಡಲಾಗಿತ್ತು. ಮಲೆ ಮಹದೇಶ್ವರ ಬೆಟ್ಟ ರಾಜ್ಯದ ನೂತನ ಹುಲಿ ಸಂರಕ್ಷಿತ ಪ್ರದೇಶವೆನಿಸಿದೆ. 920 ಚ.ಕಿ.ಮೀ ವಿಸ್ತಾರದಲ್ಲಿ ಬೆಟ್ಟ ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶವಿದೆ. 7 ರೇಂಜ್, 3 ಉಪವಿಭಾಗಗಳಲ್ಲಿ ಅಂದಾಜು 30 ಹುಲಿಗಳಿವೆ. ಹುಲಿ ಗಣತಿ ವೇಳೆ 20 ಹುಲಿಗಳು ಕಂಡು ಬಂದಿವೆ. ಸತ್ಯಮಂಗಲ, ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಮಲೆ ಮಹದೇಶ್ವರ ಬೆಟ್ಟದ ಕಾಡು ಇದೆ.

    ಹುಲಿ ಸಂತತಿ ಅಭಿವೃದ್ಧಿ ಹಾಗೂ ಆಹಾರ ಸಮತೋಲನಕ್ಕಾಗಿ ಜಿಲ್ಲೆಯ ಮೂರು ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ಹೆಚ್ಚಿಸಿದೆ. ಜಿಲ್ಲೆಯಲ್ಲಿ ಹುಲಿ ಹೆಚ್ಚಿರೋದು ನಮ್ಮ ಹೆಮ್ಮೆ. ಅರಣ್ಯ ಇಲಾಖೆಗೆ ಇನ್ನೂ ಹೆಚ್ಚಿನ ಸಿಬ್ಬಂದಿ ನೇಮಿಸಲಿ. ವನ್ಯಪ್ರಾಣಿ, ಹುಲಿಸಂತತಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಿ ಎಂಬ ಆಗ್ರಹ ಕೇಳಿಬಂದಿದೆ.

  • ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಮೈಸೂರು: ಈ ವಿಡಿಯೋ ನೋಡಿದರೆ ಆನೆಗಳಿಗೆ ಹುಲಿಗಳು ಹೆದುರುತ್ತವಾ ಎಂಬ ಪ್ರಶ್ನೆ ಕಾಡದೆ ಇರದು. ಅಷ್ಟೊಂದು ರೋಮಾಂಚನಕಾರಿಯಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

    ಕಾಡಿನಲ್ಲಿ ಹುಲಿ ಹಾಗೂ ಆನೆಗಳ ನಡುವಿನ ಸಂಘರ್ಷದಿಂದಾಗಿ ಆನೆಗಳಿಗೆ ಹುಲಿಗಳು ಹೆದರುತ್ತಿವೆ ಎನ್ನಲಾಗಿದೆ. ಹುಲಿಗಳನ್ನು ಆನೆಗಳು ಹೆದರಿಸಿ ಓಡಿಸುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಂಡೀಪುರ, ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದವರಿಗೆ ಈ ಅಪರೂಪದ ದೃಶ್ಯಗಳು ಸಿಗುತ್ತಿವೆ.

    ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಹುಲಿಗಳು ಆನೆಗಳನ್ನು ಬೇಟೆಯಾಡಿರುವ ಸಾಕಷ್ಟು ಪ್ರಕರಣಗಳು ನಡೆದಿವೆ. ಆದರೆ ಇದೀಗ ಆನೆಗಳೇ ರಾಜ ಗಾಂಭೀರ್ಯದಿಂದ ಹುಲಿಗಳನ್ನು ಓಡಿಸಿವೆ. ಈ ದೃಶ್ಯಗಳು ಎಂತಹವನ್ನಾದರೂ ರೋಮಾಂಚಿತವಾಗಿಸುತ್ತವೆ. ಪ್ರವಾಸಿಗರು ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

  • ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ?- ಲಾಕ್‍ಡೌನ್ ವೇಳೆ ನೆಟ್ಟಿಗರ ತಲೆ ಕೆಡಿಸಿದ ಫೋಟೋ

    ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ?- ಲಾಕ್‍ಡೌನ್ ವೇಳೆ ನೆಟ್ಟಿಗರ ತಲೆ ಕೆಡಿಸಿದ ಫೋಟೋ

    – ಬಾಲಿವುಡ್ ಮಂದಿಗೂ ಸವಾಲ್ ಆಯ್ತು ಹುಲಿಗಳ ಸಂಖ್ಯೆ

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಹುಲಿಗಳಿರುವ ಒಂದು ಚಿತ್ರ ಟ್ರೆಂಡ್ ಹುಟ್ಟುಹಾಕುತ್ತಿದ್ದು, ಈ ಫೋಟೋದಲ್ಲಿ ಎಷ್ಟು ಹುಲಿಗಳಿವೆ ಎಂದು ನೆಟ್ಟಿಗರು ಸಖತ್ ತಲೆಕೆಡಿಸಿಕೊಂಡಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮನೆಯಲ್ಲೇ ಕುಳಿತಿರುವ ಸಾಮಾನ್ಯ ಜನರು ಮತ್ತು ಸೆಲೆಬ್ರಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿವಾಗಿ ಇದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹುಲಿಗಳಿರುವ ಒಂದು ಫೋಟೋ ಸಖತ್ ಶೇರ್ ಆಗುತ್ತಿದ್ದು, ಅದರಲ್ಲಿ ಎಷ್ಟು ಹುಲಿಗಳಿವೆ ಎಂದು ಕಂಡು ಹಿಡಿಯಲು ನೆಟ್ಟಿಗರು ತುಂಬ ಕಷ್ಟಪಡುತ್ತಿದ್ದಾರೆ.

    ಮೊದಲಿಗೆ ಟ್ವಿಟ್ಟರ್ ಬಳಕೆದಾರ ಶರ್ಮಾ ನೀರ್ ಎಂಬುವವರು ಬುಧವಾರ ಈ ಚಿತ್ರವನ್ನು ಹಂಚಿಕೊಂಡು ಇದರಲ್ಲಿ ಎಷ್ಟು ಹುಲಿಗಳಿವೆ ಕಂಡುಹಿಡಿಯಿರಿ ಎಂದು ಚಾಲೆಂಜ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮೊದಲ ನೋಡಲು ಎರಡು ದೊಡ್ಡ ಹುಲಿಗಳು ಮತ್ತು ಎರಡು ಹುಲಿ ಮರಿಗಳು ಕಾಣುತ್ತವೆ. ಆದರೆ ಇದನ್ನೂ ಹತ್ತಿರದಿಂದ ಗಮನಿಸಿ ನೋಡಿದರೆ ಬಹಳ ಹುಲಿಗಳ ಚಿತ್ರ ನಮಗೆ ಕಂಡು ಬರುತ್ತವೆ. ಸದ್ಯ ಟ್ವಿಟ್ಟರ್ ನಲ್ಲಿ ಈ ಚಿತ್ರ ನೆಟ್ಟರಿಗರ ಕುತೂಹಲಕ್ಕೆ ಕಾರಣವಾಗಿದೆ.

    ಈ ಚಿತ್ರದ ಕುತೂಹಲದ ಕಥೆ ಬಾಲಿವುಡ್ ಮಂದಿಯ ತಲೆಯನ್ನು ಕೆಡಿಸಿದ್ದು, ಈ ಚಿತ್ರವನ್ನು ನೋಡಿದ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಕೂಡ ಚಿತ್ರದಲ್ಲಿರುವ ಹುಲಿಗಳನ್ನು ಎಣಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಗ್‍ಬಿ ಈ ಚಿತ್ರದಲ್ಲಿ 11 ಹುಲಿಗಳಿವೆ ಎಂದು ಬರೆದುಕೊಂಡಿದ್ದಾರೆ. ಬಿಗ್‍ಬಿ ನಂತರ ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ಹುಲಿಗಳನ್ನು ಎಣಿಸಿದ್ದು, ಇದರಲ್ಲಿ 16 ಹುಲಿಗಳಿವೇ ಎಂದು ಕಮೆಂಟ್ ಮಾಡಿದ್ದಾರೆ.

    https://twitter.com/Ajay_Singh56/status/1253155513472253952

    ದಿಯಾ ಮಿರ್ಜಾ ಅವರ ಸಂಖ್ಯೆಯನ್ನು ಒಪ್ಪಿಕೊಂಡಿರುವ ಬಾಲಿವುಡ್‍ನ ಮೊತ್ತೋರ್ವ ನಟಿ ಪ್ರಾಚಿ ದೇಸಾಯಿ, ಹೌದು ಈ ಚಿತ್ರದಲ್ಲಿ 16 ಹುಲಿಗಳು ಇವೆ ಇದೆ ಕಮೆಂಟ್ ಮಾಡಿದ್ದಾರೆ. ಆದರೆ ಟ್ವಿಟ್ಟರ್ ಬಳಕೆದಾರರು ಈ ಚಿತ್ರವನ್ನು ನೋಡಿ ತಮ್ಮದೇ ಅದ ಉತ್ತರಗಳನ್ನು ನೀಡುತ್ತಿದ್ದು, ಕೆಲವರು 20 ಹುಲಿಗಳಿವೆ 18 ಹುಲಿಗಳು ಇದ್ದಾವೆ ಎಂದು ಫೋಟೋವನ್ನು ಮಾರ್ಕ್ ಮಾಡಿ ಟ್ವೀಟ್ ಮಾಡಿದ್ದಾರೆ.

  • ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಮಂಗಳೂರು/ ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಕೇವಲ 15 ದಿನಗಳಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.

    ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ‘ರಾಣಿ’ ಹುಲಿ 5 ಮರಿಗಳಿಗೆ ಜನ್ಮ ನೀಡಿದೆ. 8 ವರ್ಷದ ರಾಯಲ್ ಬೆಂಗಾಲಿ ಟೈಗರ್ ರಾಣಿ ಮೂರು ವಾರಗಳ ಹಿಂದಯೇ ಜನ್ಮ ನೀಡಿರುವ ಮರಿಗಳ ಪೈಕಿ 3 ಹೆಣ್ಣು ಹಾಗೂ 2 ಗಂಡು ಆಗಿವೆ. ಈ ಐದು ಮರಿಗಳು ಆರೋಗ್ಯದಿಂದಿವೆ ಎಂದು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ವಿಶ್ವ ಹುಲಿ ದಿನವಾದ ಜುಲೈ 29ರಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶವು ಟಾಪ್ ಒನ್ ಸ್ಥಾನಕ್ಕೆ ಏರಿತ್ತು. ಹೀಗಾಗಿ 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈಗ ಕರ್ನಾಟಕದ ಹುಲಿಗಳ ಸಂಖ್ಯೆ 524+5 ಸೇರಿ 529 ಆಗಿದೆ. ಈ ಮೂಲಕ ಕರ್ನಾಟಕ ಮತ್ತೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ.

    ಹಿಂದಿನ ವರದಿ ಹೀಗಿತ್ತು:
    ಭಾರತದಲ್ಲಿ 2018ರ 4ನೇ ಹುಲಿ ಗಣತಿಯ ಅನ್ವಯ 2967 ಹುಲಿಗಳು ಇರುವುದಾಗಿ ವರದಿಯಿಂದ ತಿಳಿದು ಬಂದಿತ್ತು. ಇದರಲ್ಲಿ ಕರ್ನಾಟಕದ ಹುಲಿಗಳ ಸಂಖ್ಯೆ 524 ಎಂದು ಲೆಕ್ಕ ಹಾಕಲಾಗಿತ್ತು. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

    2006ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು 2018ರಲ್ಲಿ ನಾಲ್ಕನೇ ಸಮೀಕ್ಷೆ ನಡೆಸಲಾಗಿತ್ತು. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮೆರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿತ್ತು.

    2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿದ್ದವು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿತ್ತು. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್ ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದರು.

  • ಹುಲಿಯಿಂದ ಮಾಲೀಕರ ಜೀವ ಉಳಿಸಿದ ನಾಯಿ!

    ಹುಲಿಯಿಂದ ಮಾಲೀಕರ ಜೀವ ಉಳಿಸಿದ ನಾಯಿ!

    ಸಾಂದರ್ಭಿಕ ಚಿತ್ರ

    ಭೋಪಾಲ್: ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ಹಸುವನ್ನು ದಂಪತಿ ತಮ್ಮ ಸಾಕು ನಾಯಿ ಜೊತೆ ಹೋಗಿದ್ದರು. ಈ ವೇಳೆ ದಂಪತಿಯ ಮೇಲೆ ದಾಳಿಗೆ ಮುಂದಾದ ಹುಲಿಗಳಿಂದ ನಾಯಿ ತನ್ನ ಮಾಲೀಕರ ಜೀವವನ್ನು ರಕ್ಷಿಸಿದೆ. ಮಧ್ಯ ಪ್ರದೇಶದ ಮಾಲ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಮಾಲ್ಡಾ ಜಿಲ್ಲೆಯಲ್ಲಿ ನಿವಾಸಿಗಳಾದ ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಅವರನ್ನು ನಾಯಿ ರಕ್ಷಿಸಿದೆ. ಗುರುವಾರ ಸಂಜೆ ತಮ್ಮ ಊರಿನ ಉಪ ಸರಪಂಚ್ ಅವರ ಹಸುವನ್ನು ಹುಡುಕಿಕೊಂಡು ಬರಲು ಕನ್ಹಾ ಅಭಯಾರಣ್ಯಕ್ಕೆ ದಂಪತಿ ತೆರೆಳಿದ್ದರು. ಆಗ ಅವರೊಂದಿಗೆ ಅವರು ಸಾಕಿದ್ದ ನಾಯಿ ಕೂಡ ಹೋಗಿತ್ತು. ಸೂರ್ಯ ಮುಳುಗಿದ ಬಳಿಕ ಕತ್ತಲಾಗುತ್ತಿದ್ದಂತೆ ಕಾಡಿನಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರಿಗೆ ಹಸು ಕಂಡಿತ್ತು. ಬಳಿಕ ಅದನ್ನು ವಾಪಾಸ್ ಊರಿಗೆ ಕರೆತರುತ್ತಿರುವಾಗ ಎರಡು ಹುಲಿಗಳು ಅವರ ಮೇಲೆ ದಾಳಿ ನಡೆಸಲು ಕೂತಿದ್ದನ್ನು ದಂಪತಿ ಗಮನಿಸಿದರು. ಆಗ ಇನ್ನೇನು ಹುಲಿಗಳಿಗೆ ದಂಪತಿ ಬಲಿಯಾಗುತ್ತಾರೆ ಎನ್ನುವಷ್ಟರಲ್ಲಿ, ಸಾಕು ನಾಯಿ ಮುಂದೆ ಬಂದು ದಂಪತಿಯ ಜೀವ ಉಳಿಸಿದೆ.

    ದಂಪತಿ ಮತ್ತು ಹುಲಿಗಳ ಮಧ್ಯದಲ್ಲಿ ನಿಂತು ನಾಯಿ ಒಂದೇ ಸಮನೆ ಬೊಗಳಲು ಆರಂಭಿಸಿದೆ. ಈ ವೇಳೆ ದಂಪತಿ ಮೇಲೆ ದಾಳಿ ಮಾಡಲು ನೋಡುತ್ತಿದ್ದ ಹುಲಿಗಳು ನಾಯಿ ಬೊಗಳುತ್ತಿದ್ದದನ್ನು ಕೇಳಿ ಗೊಂದಲಗೊಂಡಿವೆ. ಆಗ ನಿಧಾನಕ್ಕೆ ತನ್ನ ಮಾಲೀಕರು ಅಲ್ಲಿಂದ ತಪ್ಪಿಸಿಕೊಳ್ಳುವವರೆಗೂ ಬೊಗಳುತ್ತ ನಿಂತು ಬಳಿಕ ತಾನು ಕೂಡ ವ್ಯಾಘ್ರಗಳಿಂದ ತಪ್ಪಿಸಿಕೊಂಡು ಮನೆಗೆ ಮರಳಿದೆ.

    ಹುಲಿಗಳಿಂದ ತಪ್ಪಿಸಿಕೊಂಡು ಬಂದಿದ್ದ ದಂಪತಿ ನಾಯಿ ಕಥೆ ಏನಾಯ್ತೋ ಎಂದು ಆತಂಕದಲ್ಲಿದ್ದರು. ಆದ್ರೆ ಮನೆಗೆ ಮರಳಿದ ನಾಯಿಯನ್ನು ನೋಡಿ ಮುದ್ದಾಡಿದ್ದಾರೆ. ಅಲ್ಲದೆ ಹುಲಿಗಳಿಂದ ತಪ್ಪಿಸಿಕೊಂಡು ಬರುತ್ತಿದ್ದ ವೇಳೆ ದಂಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ, ಬಹುಶಃ ನಾಯಿ ಬೊಗಳುವುದನ್ನು ಹುಲಿಗಳು ಕೇಳಿದ್ದು ಅದೇ ಮೊದಲ ಇರಬಹುದು. ಆದರಿಂದ ಗೊಂದಲಪಟ್ಟು ದಾಳಿ ಮಾಡದೇ ಹಿಂಜರಿದಿದೆ ಎಂದು ತಿಳಿಸಿದ್ದಾರೆ.