Tag: ಹುಲಿ

  • Mysuru| ರೈತನ ಬಲಿ ಪಡೆದಿದ್ದ ಹುಲಿ ಸೆರೆ

    Mysuru| ರೈತನ ಬಲಿ ಪಡೆದಿದ್ದ ಹುಲಿ ಸೆರೆ

    ಮೈಸೂರು: ದನ ಮೇಯಿಸಲು ಹೋಗಿದ್ದ ವೇಳೆ ರೈತನನ್ನು (Farmer) ಬಲಿ ಪಡೆದಿದ್ದ ಹುಲಿಯನ್ನು (Tiger) ಅರಣ್ಯ ಇಲಾಖೆ (Forest Department) ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

    ಸಾಕಾನೆಗಳ ಸಹಾಯದಿಂದ ಹುಲಿಯನ್ನು ಸೆರೆಹಿಡಿಯಲಾಗಿದೆ. ಸರಗೂರು (Saraguru) ತಾಲೂಕಿನ ಮುಳ್ಳೂರು ಬಳಿ ಹುಲಿ ಸೆರೆಯಾಗಿದೆ. ಯಡಿಯಾಲ ಅರಣ್ಯ ವಲಯದ ಮುಳ್ಳೂರು ಬಳಿ ಅರವಳಿಕೆ ನೀಡಿ ಹುಲಿಯನ್ನು ಸೆರೆಹಿಡಿಯಲಾಯಿತು. ಸೆರೆಹಿಡಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಸದ್ಯ ಹುಲಿ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು| ದನ ಮೇಯಿಸುವಾಗ ಹುಲಿ ದಾಳಿಗೆ ರೈತ ಬಲಿ

    ಘಟನೆ ಏನು?
    ದನ ಮೇಯಿಸಲು ಹೋಗಿದ್ದ ವೇಳೆ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರಾಜಶೇಖರ (58) ಮೃತ ರೈತ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ದನ ಮೇಯಿಸುವಾಗ ಹುಲಿ ದಾಳಿಗೆ ರೈತ ಬಲಿ ಕೇಸ್ – ಶವಾಗಾರಕ್ಕೆ ಆಗಮಿಸಿದ ಖಂಡ್ರೆಗೆ ರೈತರಿಂದ ಘೇರಾವ್

    ಸೋಮವಾರ (ಅ.27) ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ದರು. ಈ ವೇಳೆ ರೈತರು ಸಚಿವರಿಗೆ ಘೇರಾವ್ ಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕು. ಘಟನೆಗೆ ಕಾರಣೀಕರ್ತರಾದವರಿಗೆ ತಕ್ಷಣ ವಜಾ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಸರಗೂರಿನಲ್ಲಿ ಹುಲಿ ದಾಳಿಗೆ ರೈತ ಬಲಿ – ಅಧಿಕಾರಿಗಳ ನಿರ್ಲಕ್ಷ್ಯ ಇದ್ರೆ ಕ್ರಮ ಗ್ಯಾರಂಟಿ: ಈಶ್ವರ್‌ ಖಂಡ್ರೆ

    ಅಲ್ಲದೇ ಮೃತ ರೈತನ ಮೃತದೇಹವನ್ನು ಮೈಸೂರಿಗೆ ತಂದಿದಕ್ಕೆ ಆಕ್ಷೇಪ ಹೊರಹಾಕಿದ್ದರು. ಭಾನುವಾರ ಸರಗೂರಿನಲ್ಲಿದ್ದರೂ ಸಚಿವರು ಬರಲಿಲ್ಲ. ಘಟನಾ ಸ್ಥಳದಲ್ಲಿ ಗಲಾಟೆ ಆಗುತ್ತೆ ಅಂತ ಗೊತ್ತಿತ್ತು. ಅದಕ್ಕೆ ಮೈಸೂರಿಗೆ ಮೃತದೇಹ ತಂದಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಮೈಸೂರು| ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾವೇ ಜಲಸಮಾಧಿಯಾದ ಇಬ್ಬರು ಸಹೋದರರು

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    – ʻಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶʼ ಪ್ರಸ್ತಾವನೆ ಮುನ್ನೆಲೆಗೆ
    – ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ

    ಬೆಂಗಳೂರು/ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (Malai Mahadeshwara Wildlife Sanctuary) ಮತ್ತೊಂದು ಹುಲಿ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದರು.

    ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ (Tiger Reserve Forest) ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ಈಗಾಗಲೇ ವನ್ಯಜೀವಿ ಮಂಡಳಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ತಿಳಿಸಿದರು.

    ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಲು ಮತ್ತು ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ (Wild Animal Death) ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.

    ಜಾಗೃತಿ ಮೂಡಿಸಿ:
    ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದ ಅಂಚಿನ ಗ್ರಾಮಗಳಲ್ಲಿ ಮತ್ತು ಅರಣ್ಯದ ಹಾಡಿಯ ಬಳಿ ವನ್ಯಜೀವಿಗಳಿಗೆ ವಿಷ ಹಾಕುತ್ತಿರುವ ಘಟನೆಗಳು ಮತ್ತು ಕಳ್ಳಬೇಟೆ ಪ್ರಕರಣಗಳು ವರದಿಯಾಗುತ್ತಿದ್ದು, ಅರಣ್ಯವಾಸಿಗಳು ಮತ್ತು ಕಾಡಿನಂಚಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಹಾಗೂ ವನ್ಯಜೀವಿಗಳಿಂದ ಬೆಳೆ ಹಾನಿ ಆಗಿದ್ದಲ್ಲಿ ಪರಿಶೀಲಿಸಿ, ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಶಂಕಿತರಿಬ್ಬರು ವಶಕ್ಕೆ:
    ಹುಲಿಯನ್ನು ಮೂರು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಿರುವ ಪ್ರಕರಣದ ಇಬ್ಬರು ಶಂಕಿತರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆದಿದ್ದು, ಶೀಘ್ರವೇ ಹುಲಿ ಹತ್ಯೆಗೆ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

    ಮಲೆ ಮಹದೇಶ್ವರ ಅರಣ್ಯ ಭಾಗದಲ್ಲಿ ಗಸ್ತು ಹೆಚ್ಚಿಸಲು ಸೂಚಿಸಿದ ಸಚಿವರು, ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಹಾಗೂ 5 ಹುಲಿ ಹಾಗೂ ಮೊನ್ನೆ ನಡೆದಿರುವ ಹುಲಿ ಹತ್ಯೆಯ ಆರೋಪಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ಕ್ರಮಕೈಗೊಂಡು ಸ್ಪಷ್ಟ ಸಂದೇಶ ರವಾನಿಸಲು ಸೂಚಿಸಿದರು.

    ಮೂಲಸೌಕರ್ಯ ಒದಗಿಸಲು ಸೂಚನೆ:
    ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿದೆಯೇ ಇಲ್ಲವೇ, ಇವರು ಸರಿಯಾಗಿ ಗಸ್ತು ನಡೆಸುತ್ತಿದ್ದಾರೋ ಇಲ್ಲವೋ, ಎಂಸ್ಟ್ರೈಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಚಿವರು ಸೂಚಿಸಿದರು.

    ಸಿಬ್ಬಂದಿ ಗಸ್ತು ತಿರುಗುತ್ತಿರುವ ಕುರಿತಂತೆ ಜಿಪಿಎಸ್ ಸಹಿತ ಫೋಟೋ ತೆಗೆಯಲು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳು ಆಗಾಗ್ಗೆ ಪರಾಮರ್ಶಿಸಬೇಕು, ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದೂ ಈಶ್ವರ ಖಂಡ್ರೆ ತಿಳಿಸಿದರು. ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿರುವ ಸಿಬ್ಬಂದಿಗೆ ಬೂಟು, ಜಾಕೆಟ್, ಕುಡಿಯುವ ನೀರು, ಆಹಾರ ಧಾನ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲೂ ಸಚಿವರು ಸೂಚನೆ ನೀಡಿದರು.

    ಚನ್ನಪಟ್ಟಣ ಆನೆ ಸಾವಿನ ಬಗ್ಗೆ ಪರಾಮರ್ಶೆ:
    ಚನ್ನಪಟ್ಟಣದ ಗೊಲ್ಲರದೊಡ್ಡಿಯ ಬಳಿ ಇಂದು ತೆಂಗಿನಮರದ ಹೊಂಬಾಳೆ ತಿನ್ನಲು ಯತ್ನಿಸಿದ ಆನೆಯೊಂದು ಪಕ್ಕದಲ್ಲಿದ್ದ ವಿದ್ಯುತ್ ಕಂಬದ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು. ಪ್ರತಿವರ್ಷ ಸರಾಸರಿ ವಿದ್ಯುತ್ ಸ್ಪರ್ಶದಿಂದ 14 ಆನೆಗಳು ಮೃತಪಡುತ್ತಿವೆ. ಆದ್ರೆ ಈ ವರ್ಷ 7 ಆನೆಗಳು ಮಾತ್ರ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ರೈತರಿಗೆ, ತೋಟದ ಮಾಲೀಕರಿಗೆ ಬೇಲಿಯ ತಂತಿಗೆ ಅಕ್ರಮವಾಗಿ ವಿದ್ಯುತ್ ಹರಿಸದಂತೆ ಮನವಿ ಮಾಡಲಾಗಿದೆ. ತಪಾಸಣೆ ನಡೆಲಾಗುತ್ತಿದೆ ಎಂದೂ ಸಭೆಗೆ ಅಧಿಕಾರಿಗಳು ತಿಳಿಸಿದರು.

    ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗದಂತೆ ಹಾಗೂ ಅರಣ್ಯ ಪ್ರದೇಶದಲ್ಲಿ ಅಥವಾ ಅರಣ್ಯದಂಚಿನಲ್ಲಿ ತೂಗಾಡುತ್ತಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಯ ದುರಸ್ತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆದು ಕ್ರಮ ವಹಿಸಲು ಸೂಚಿಸುವಂತೆ ತಿಳಿಸಿದರು.

    ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಮತ್ತಿತರರು ಪಾಲ್ಗೊಂಡಿದ್ದರು.

  • ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    – ಪಿಸಿಸಿಎಫ್ ನೇತೃತ್ವದ ತಂಡದಿಂದ ತೀವ್ರ ಪರಿಶೀಲನೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 12 ಅಡಿ ಉದ್ದ 12 ವರ್ಷ ಪ್ರಾಯದ 250 ಕೆಜಿಗೂ ಅಧಿಕ ತೂಕದ ಹುಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅಲ್ಲದೇ ಪಿಸಿಸಿಎಫ್ (PCCF) ನೇತೃತ್ವದ ತಂಡ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಬಗ್ಗೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು,ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಹುಲಿ ಹತ್ಯೆಯೂ ಕೂಡ ಪ್ರತೀಕಾರಕ್ಕೆ ನಡೆದಿದೆ ಅನ್ನೋ ವಾದ ಪರಿಸರವಾದಿಗಳಾಗಿದ್ದಾಗಿದೆ.

    mm hills sanctuary tiger death

    ಮಲೆ ಮಹದೇಶ್ವರ ವನ್ಯಧಾಮದ ಹನೂರು (Hanuru) ತಾಲೂಕಿನ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಹುಲಿಯ ಹತ್ಯೆ ನಡೆದಿರುವುದೇ ಪ್ರತೀಕಾರಕ್ಕೆ ಎಂಬ ಆತಂಕಕಾರಿ ವಿಚಾರ ಗೊತ್ತಾಗ್ತಿದೆ. ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ ಮೂರು ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದಾರೆ. ಆದ್ರೆ ಹುಲಿಯ ತೂಕ ಹೆಚ್ಚಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಎರಡು ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ (Tiger Death) ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು.

    ಮರಣೋತ್ತರ ಪರೀಕ್ಷೆ ನಡೆಸಿದರು ಕೂಡ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಬಾರದೆಂದು ಹುಲಿಯ ಕರುಳು ಹಾಗೂ ಲಿವರ್ ಎರಡನ್ನೂ ಕೂಡ ಬೇರೆಡೆ ತೆಗೆದುಕೊಂಡು ಹೋಗಿ ಬಿಸಾಕಿ ಸಾಕ್ಷ್ಯ ನಾಶಕ್ಕೂ ಕೂಡ ಮುಂದಾಗಿದ್ದಾರೆಂಬ ಆತಂಕಕಾರಿ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಆ ಹುಲಿಯ ಹತ್ಯೆ ಎಷ್ಟು ಭೀಕರವಾಗಿತ್ತು ಅನ್ನೊದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದೆ. ಹುಲಿಯ ದೇಹವನ್ನು ಒಂದು ಮರದ ತುಂಡಿನ ಮೇಲೆ ಇರಿಸಿ ಕೊಡಲಿಯಿಂದ ಕತ್ತರಿಸಿದ್ದಾರೆ. ಅಲ್ಲದೇ ಹುಲಿಯ ಕರುಳು ಹಾಗೂ ಲೀವರ್ ಅನ್ನೂ ಕೂಡ ಬೇರೆಡೆ ಬಿಸಾಡಿದ್ದಾರೆ. ಹಂತಕರ ಕೈಗೆ ಅಂಟಿದ್ದ ರಕ್ತವನ್ನು ಪಕ್ಕದಲ್ಲಿ ಹರಿಯುವ ನೀರಿನಲ್ಲಿ ತೊಳೆದಿದ್ದಾರೆ. ಸಂಪೂರ್ಣ ಪ್ಲ್ಯಾನ್ ಮಾಡೇ ಈ ದೈತ್ಯ ಹುಲಿಯ ಹತ್ಯೆಗೆ ಸಂಚು ಮಾಡಿದ್ದಾರೆಂಬುದು ಈ ದೃಶ್ಯಗಳಿಂದ ಗೊತ್ತಾಗ್ತಿದೆ.

    ಅರಣ್ಯ ಸಚಿವರ ಆದೇಶದ ಹಿನ್ನೆಲೆ ಹುಲಿ ಹತ್ಯೆ ನಡೆದ ಸ್ಥಳಕ್ಕೆ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ಭೇಟಿ ಕೊಟ್ಟು ತನಿಖೆಗೆ ಮುಂದಾಗಿದೆ. ಗಸ್ತಿನ ಸಿಬ್ಬಂದಿ ಹಾಗೂ ಅರಣ್ಯಾಧಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ಕೊಟ್ಟು ಕೆಲವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ.

    ಒಟ್ನಲ್ಲಿ ಈ ಹುಲಿ ಹತ್ಯೆಯ ಹಿಂದೆ ಅಕ್ಕಪಕ್ಕದ ಗ್ರಾಮಸ್ಥರೇ ಇದ್ದಾರೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಇಬ್ಬರು ಅಥವಾ ಮೂವರು ಭಾಗಿಯಾಗಿರುವ ಶಂಕೆ ಕೂಡ ಇದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

  • ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮತ್ತೆ ಹುಲಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಹುಲಿಯ ಅರ್ಧ ದೇಹ ಪತ್ತೆಯಾಗಿದೆ.

    ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿವೆ. ಸಿಕ್ಕಿರುವ ಕಳೇಬರದ ಭಾಗದಲ್ಲಿ ‌ಉಗುರು ಮತ್ತು ಹಲ್ಲುಗಳು ಸೇಫ್ ಆಗಿವೆ.

    ಹುಲಿಯ ಕಳ್ಳಬೇಟೆ ಶಂಕೆ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ. ಹುಲಿ ದೇಹದ ಉಳಿತ ಭಾಗ ಹುಡುಕಲು ಶೋಧ ನಡೆದಿದೆ. ಹುಲಿ ಸಾವಿಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಎಂಬುದನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಮಹದೇಶ್ವರ ಬೆಟ್ಟದ ಬಳಿ ಐದು ಹುಲಿಗಳಿಗೆ ವಿಶಪ್ರಾಷಣ ಮಾಡಿ ಕೊಲ್ಲಲಾಗಿತ್ತು. ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ ಮೃತ ಹಸುವಿನ ದೇಹಕ್ಕೆ ವಿಷ ಹಾಕಿ, ಮಾಂಸವನ್ನು ತಿಂದು ಹುಲಿಗಳು ಸಾಯುವಂತೆ ಮಾಡಲಾಗಿತ್ತು.

  • ಹುಲಿ ಹಿಡಿಯಲು ವಿಫಲ – ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿಗೆ ಕೂಡಿ ಹಾಕಿದ ಜನ

    ಹುಲಿ ಹಿಡಿಯಲು ವಿಫಲ – ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿಗೆ ಕೂಡಿ ಹಾಕಿದ ಜನ

    ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಅರಣ್ಯದ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ – ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಜೀವ ಭಯದಲ್ಲಿರುವ ಜನರಿಗೆ ಅರಣ್ಯ ಇಲಾಖೆ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ, ಹುಲಿ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿದ ಘಟನೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

    ಹುಲಿ, ಚಿರತೆ ದಾಳಿಗೆ ಬೇಸತ್ತ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಹುಲಿ ಹಿಡಿಯಲು ಎಂದು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಣ ಭಯದಲ್ಲಿ ಜೀವ ನಡೆಸುತ್ತಿರುವ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಜಮೀನಿನಲ್ಲಿ ಇದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 2 ತಿಂಗಳಿನಿಂದ ಗ್ರಾಮದ ಹೊರವಲಯದಲ್ಲಿ ಹುಲಿ ಹಾಗೂ ಚಿರತೆ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬವರ ಜಮೀನಿನಲ್ಲಿ ಬೋನು ಇಡಲಾಗಿದೆ. ಮಂಗಳವಾರ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಜನರು ಅರಣ್ಯ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.

    ಜಾನುವಾರುಗಳ ಮೇಲೆ ದಾಳಿ:
    ತಿಂಗಳಿನಿಂದ ಗ್ರಾಮದ ಸುತ್ತಲೂ ಓಡಾಡುತ್ತಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ನಂತರ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇತ್ತ ಸುಳಿಯದೇ ಇರುವುದು ರೈತರು ಪಿತ್ತ ನೆತ್ತಿಗೇರಿಸಿತ್ತು.

    ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೋನ್​​ನಲ್ಲಿ ಇರಿಸಿದ ಬಗ್ಗೆ ಮಾಹಿತಿ ಪಡೆದ ಗುಂಡ್ಲುಪೇಟೆ ವಲಯದ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ವಲಯದ ಎಸಿಎಫ್ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ. ಈ ವೇಳೆ, ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ‌ ಚಕಮಕಿ ನಡೆಯಿತು. ಕಾಡುಪ್ರಾಣಿಗಳ ಭೀತಿಯಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಸಿಬ್ಬಂದಿಯನ್ನ ಬೋನಿನಿಂದ ಹೊರ ಬಿಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವೊಲಿಸಿದರು.

  • ಕಗ್ಗಲಹುಂಡಿ ಗ್ರಾಮದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ – ಕೂಂಬಿಂಗ್‌ ನಡೆಸಲು ಮುಂದಾದ ಅರಣ್ಯ ಇಲಾಖೆ

    ಕಗ್ಗಲಹುಂಡಿ ಗ್ರಾಮದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ – ಕೂಂಬಿಂಗ್‌ ನಡೆಸಲು ಮುಂದಾದ ಅರಣ್ಯ ಇಲಾಖೆ

    – ಹುಲಿ ಕಂಡು ಆತಂಕದಲ್ಲಿ ಗ್ರಾಮಸ್ಥರು

    ಚಾಮರಾಜನಗರ: ಜಿಲ್ಲೆಯ ಕಗ್ಗಲಹುಂಡಿ ಗ್ರಾಮದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

    ಈಗಾಗಲೇ ಸಾಕಷ್ಟು ಬಾರಿ ಜನರಿಗೆ ಹುಲಿ ದರ್ಶನವಾಗಿದೆ. ಹುಲಿ ಸೆರೆ ಹಿಡಿಯಲು ಮುಂದಾಗದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. ಜನರ ಆಕ್ರೋಶಕ್ಕೆ ಮಣಿದು ಸದ್ಯ ಕೂಂಬಿಂಗ್ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ.

    ಬಂಡೀಪುರದಲ್ಲಿ ಹುಲಿ ಸಂಖ್ಯೆ ಹೆಚ್ಚಳ ಹಿನ್ನೆಲೆ ಕಾಡಂಚಿನ ಗ್ರಾಮದಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಇದೀಗ ಗುಂಡ್ಲುಪೇಟೆ ತಾಲೂಕಿನ ಕಗ್ಗಲಹುಂಡಿ ಗ್ರಾಮದ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿಯಿಂದಲೂ ಬಂಡೀಪುರ ಪೊಲೀಸರು ಅಲರ್ಟ್ ಆಗಿದ್ದಾರೆ.

    ಗ್ರಾಮಸ್ಥರು ಹೊರಗಡೆ ಓಡಾಡಲು ಭಯಪಡುತ್ತಿದ್ದಾರೆ. ಜನರ ಒತ್ತಾಯಕ್ಕೆ ಮಣಿದು, ಆನೆಗಳನ್ನು ಬಳಸಿಕೊಂಡು ಕೂಂಬಿಂಗ್ ಕೆಲಸಕ್ಕೆ ಇಲಾಖೆ ಮುಂದಾಗಿದೆ.

  • ಇಂದು ವಿಶ್ವ ಹುಲಿ ದಿನಾಚರಣೆ – ಚಾಮರಾಜನಗರ ಹುಲಿಗಳ ನಾಡಾಗಿದ್ದು ಹೇಗೆ?

    ಇಂದು ವಿಶ್ವ ಹುಲಿ ದಿನಾಚರಣೆ – ಚಾಮರಾಜನಗರ ಹುಲಿಗಳ ನಾಡಾಗಿದ್ದು ಹೇಗೆ?

    ಚಾಮರಾಜನಗರ: ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಾಮರಾಜನಗರ (Chamarajanagar) ಜಿಲ್ಲೆಯಲ್ಲೂ ಕೂಡ ಕಳೆದ 15 ವರ್ಷದಲ್ಲಿ 150ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಪ್ರತಿ ವರ್ಷ ಜುಲೈ 29ರಂದು ‘ವಿಶ್ವ ಹುಲಿ ದಿನ’ವನ್ನಾಗಿ (International Tiger Day) ಆಚರಿಸಲಾಗುತ್ತದೆ. ಹಿಂದೆ ಹುಲಿಗಳ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಆದರೀಗ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಗಡಿಜಿಲ್ಲೆ ಚಾಮರಾಜನಗರ ‘ಹುಲಿಗಳ ನಾಡು’ ಎಂದೇ ಹೆಸರು ಗಳಿಸಿದೆ. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ

    ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮವೂ ಕೂಡ ಹುಲಿ ಸಂರಕ್ಷಿತ ಪ್ರದೇಶ ಆಗುವ ನಿರೀಕ್ಷೆಯಿದೆ. ಅದರ ಜೊತೆಗೆ ಕಾವೇರಿ ವನ್ಯಧಾಮ ಕೂಡ ಚಾಮರಾಜನಗರ ಜಿಲ್ಲೆಯಲ್ಲಿದೆ. ಎರಡು ಹುಲಿ ಸಂರಕ್ಷಿತ ಅರಣ್ಯ, ಎರಡು ವನ್ಯಧಾಮ ಹೊಂದಿರುವ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಬಂಡೀಪುರ ಅರಣ್ಯ ಪ್ರದೇಶವು 1973ರಲ್ಲಿ ಮೊದಲಿಗೆ ಹುಲಿ ಸಂರಕ್ಷಿತ ಅರಣ್ಯಪ್ರದೇಶವಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿ 12 ಹುಲಿಗಳಷ್ಟೇ ಇತ್ತು ಎಂದು ಅಂದಾಜು ಮಾಡಲಾಗಿತ್ತು. ಕ್ರಮೇಣ ಹುಲಿಗಳ ಸಂರಕ್ಷಣೆ ಹೆಚ್ಚಾಗಿದೆ. ಇದನ್ನೂ ಓದಿ: 7 ದಿನ, 170 ಗಂಟೆ ಭರತನಾಟ್ಯ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ರೆಮೋನಾ ಪಿರೇರಾ

    ಇದಿಗ 2024ರ ಕರ್ನಾಟಕ ಅರಣ್ಯ ಇಲಾಖೆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 393 ಹುಲಿಗಳಿವೆ. ಅದರಲ್ಲಿ ಬಂಡೀಪುರದಲ್ಲಿ ಸುಮಾರು 154ಕ್ಕೂ ಹೆಚ್ಚು ಹುಲಿಗಳಿರೋದು ಗೊತ್ತಾಗಿದೆ. ನಾಗರಹೊಳೆ 149, ಭದ್ರಾ 29, ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲೂ ಅಂದಾಜು 39 ಹುಲಿಗಳಿರೋದು ಕಂಡು ಬಂದಿದೆ. ಕಾಳಿ (ಅಣಶಿ ದಾಂಡೇಲಿ) 22, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 15 ರಿಂದ 20ಕ್ಕೂ ಹೆಚ್ಚು ಹುಲಿಗಳಿದ್ದು, ಇದೀಗ ಅದರ ಸಂಖ್ಯೆ 25ರಿಂದ 30ಕ್ಕೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 15 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ, ಅರಣ್ಯ ಇಲಾಖೆಯ ಸರಂಕ್ಷಣಾ ಕ್ರಮಗಳು ಹುಲಿಗಳ ಸಂಖ್ಯೆ ಹೆಚ್ಚಾಗಲೂ ಕಾರಣವಾಗಿದೆ. ಇದನ್ನೂ ಓದಿ: ಶಿರಡಿಗೆ ಹೋಗಿದ್ದಾಗ ಕೃಷಿ ಅಧಿಕಾರಿ ಮನೆ ಬೀಗ ಮುರಿದು ಕಳ್ಳತನ: 26 ಲಕ್ಷದ ಚಿನ್ನಾಭರಣ ಕದ್ದು ಪರಾರಿ

    ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಕಳ್ಳ ಬೇಟೆಗಾರರ ಮೇಲೆ ಇಲಾಖೆ ಸಾಕಷ್ಟು ನಿಗಾ ಇಟ್ಟಿತು. ಇದರಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೇ ರೀತಿ ಕಾಡಿನ ಸಂರಕ್ಷಣೆಯಲ್ಲೂ ಹುಲಿಗಳು ಮಹತ್ವದ ಪಾತ್ರ ವಹಿಸಿದೆ. ಇದನ್ನೂ ಓದಿ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

    ಹುಲಿಗಳ ಸಂಖ್ಯೆ ಚಾಮರಾಜನಗರ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರೂ ಕೂಡ ಸಂತೋಷಗೊಂಡಿದ್ದಾರೆ. ಹುಲಿಗಳ ದರ್ಶನದಿಂದ ಪುಳಕಿತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಪೋಷಣೆ ಆಗುತ್ತಿರುವುದರಿಂದ ‘ಹುಲಿಗಳ ನಾಡು’ ಎಂಬ ಪ್ರಖ್ಯಾತಿ ಗಳಿಸಿದೆ. ಇದನ್ನೂ ಓದಿ: ಯೆಮನ್‌ನಲ್ಲಿ ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣ ರದ್ದು; MEA ರಿಯಾಕ್ಷನ್‌ ಏನು?

  • ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?

    ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?

    ಚಾಮರಾಜನಗರ: ಮಲೆಮಹದೇಶ್ವರ (Male Mahadeshwara Hills) ಬೆಟ್ಟದಲ್ಲಿ 5 ಹುಲಿಗಳ ಸಾವಿನಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಹುಲಿಗಳ (Tigers) ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ.

    ಮರಣೋತ್ತರ ಪರೀಕ್ಷೆ ಬಳಿಕ ಅಗ್ನಿಸ್ಪರ್ಶದ ಮೂಲಕ ಹುಲಿ, ಹಸು ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ಹುಲಿಗಳ ದೇಹದ ಪ್ರಮುಖ ಅಂಗಾಂಗ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ. ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿದ್ದು, ಪ್ರತ್ಯೇಕವಾಗಿ ಮೂರು ಲ್ಯಾಬ್‌ಗಳಿಗೆ ಸ್ಯಾಂಪಲ್‌ಗಳನ್ನು ರವಾನಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಗಾಜನೂರು, ಕೊಪ್ಪ ಹಾಗೂ ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು, ಹುಲಿಗೆ ವಿಷವಿಟ್ಟ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಡಿಗೆ ಹಸುವನ್ನು ಮೇಯಿಸಲು ಬಿಡುತ್ತಿದ್ದ ಕಳ್ಳಬ್ಬೆದೊಡ್ಡಿಯ ಶಿವಣ್ಣ ಎಂಬಾತ, ಹಸು ಸತ್ತಿದ್ದಕ್ಕೆ ಕೋಪಗೊಂಡು ವಿಷವಿಟ್ಟಿರೋದಾಗಿ ಗೊತ್ತಾಗಿದೆ. ಇನ್ನೂ, ಹುಲಿಗಳ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಹಸುವನ್ನ ಹುಲಿ ಬೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದ್ಯಾ? ಅಥವಾ ಮೊದಲೇ ಹಸುವಿಗೆ ವಿಶ ಪ್ರಾಷನ ಮಾಡಲಾಗಿತ್ತ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ. ಇದನ್ನೂ ಓದಿ: ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ಹುಲಿ ಹಸುವಿನ ಹಿಂಬದಿಗೆ ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. ಮೂರು ದಿನದ ಹಿಂದೆ ಈ ಸಾವು ಸಂಭವಿಸಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮಾಹಿತಿ ನೀಡಿದ್ದಾರೆ. ಯಾರು ಹೊಣೆಗಾರರು ಎಂಬುದನ್ನ ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ. ವಾಚರ್‌ಗಳಿಗೆ ಸಂಬಳ ತಡವಾಗಿದೆ ಎಂಬುದಕ್ಕೆ ಗಸ್ತು ಮಾಡಿಲ್ಲ ಎಂಬ ಆರೋಪಗಳು ಇವೆ. ಹುಲಿಗಳ ಸಾವಿಗೆ ಹೊಣೆ ಯಾರು ಎಂಬುದನ್ನ ತನಿಖೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

    ಹುಲಿಗಳ ಸಾವಿನ ಪ್ರಕರಣದಲ್ಲಿ ಅರಣ್ಯ ಇಲಾಖೆಯ (Forest Department) ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಹುಲಿಗಳು ಸತ್ತು 2 ದಿನಗಳು ಕಳೆದರೂ ಅರಣ್ಯ ಇಲಾಖೆಗೆ ಮಾಹಿತಿಯೇ ಗೊತ್ತಿರಲಿಲ್ವಾ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: Bengaluru | ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ KSRTC ಬಸ್ ಡಿಕ್ಕಿ

  • ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

    ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

    ಚಾಮರಾಜನಗರ: ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ದೇಶಿಪುರ ಕಾಲೊನಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇದು ಎರಡನೇ ಸಾವಾಗಿದೆ.

    ದೇಶಿಪುರ ಕಾಲೊನಿಯ ಪುಟ್ಟಮ್ಮ ಎಂಬಾಕೆ ಹುಲಿಗೆ ಬಲಿಯಾದವರು. ಕಾಲೊನಿ ಸಮೀಪ ಕುರಿಗಳನ್ನು ಮೇಯಿಸುವಾಗ ಹುಲಿಯೊಂದು ಏಕಾಏಕಿ ಮೇಲೆರಗಿದ್ದು ಕುತ್ತಿಗೆ, ಎದೆಭಾಗ, ಹೊಟ್ಟೆ ಭಾಗದಲ್ಲಿ ಬಲವಾಗಿ ದಾಳಿ ನಡೆಸಿ ಕೊಂದಿದೆ. ನಂತರ, ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದಿತ್ತು. ಗ್ರಾಮಸ್ಥರು ಹುಡುಕಾಡಿದಾಗ ಪುಟ್ಟಮ್ಮನ ಶವ ದೊರೆತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಹುಲಿ ದಾಳಿ ನಡೆದಿದೆ.

    ಬಂಡೀಪುರ ಸಿಎಫ್ಒ ಪ್ರಭಾಕರನ್ ಮಾತನಾಡಿ, ಮಹಿಳೆ ಹುಲಿ ದಾಳಿಗೆ ಮೃತಪಟ್ಟಿರುವುದು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.

    ಕಳೆದ 10 ರಂದು ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ದೇಹದ ಅಲ್ಪಸ್ವಲ್ಪ ತಿಂದಿತ್ತು. ಬಳಿಕ, ಬಿಆರ್‌ಟಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಹುಲಿ ಸೆರೆ ಹಿಡಿದಿದ್ದರು.

  • ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

    ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

    ಕಾರ್ಯಾಚರಣೆಗೆ ಸೂಚನೆ – ಕೆಲವೇ ಗಂಟೆಯಲ್ಲಿ ಹುಲಿ ಸೆರೆ

    ಬೆಂಗಳೂರು: ಚಾಮರಾಜನಗರ (Chamarajanagar) ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ (55) ಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwara Khandre) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ನಿನ್ನೆ ರಾತ್ರಿ ಇದೇ ಹಾಡಿಯಲ್ಲಿ ರವಿ ಎಂಬುವವರ ಮೇಲೆ ಹುಲಿ (Tiger) ದಾಳಿ ಮಾಡಿತ್ತು, ರವಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಮಹಿಳೆ ರಂಗಮ್ಮ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಮನುಷ್ಯರ ರಕ್ತದ ರುಚಿ ಕಂಡ ಹುಲಿ ಅಪಾಯಕಾರಿ, ಹೀಗಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಜನಸಂಖ್ಯೆ 146 ಕೋಟಿ – ಮಹಿಳೆಯರಲ್ಲಿ ಕುಸಿಯುತ್ತಿದೆ ಸಂತಾನೋತ್ಪತ್ತಿ

     

    ಹುಲಿ ದಾಳಿಯಿಂದ ಗಾಯಗೊಂಡಿರುವ ರವಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಸಚಿವರು, ಮೃತ ರಂಗಮ್ಮ ಅವರ ಕುಟುಂಬದ ಸದಸ್ಯರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

    ರವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತರ ಹತ್ತಿರದ ಬಂಧುಗಳಿಗೆ ಪರಿಹಾರದ ಮೊತ್ತ ವಿತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿರುವ ಈಶ್ವರ ಖಂಡ್ರೆ, ಕಾಡಿನಂಚಿನ ಜನರು ರಾತ್ರಿಯ ವೇಳೆ ಮತ್ತು ಮುಂಜಾನೆ ವನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.