ಹುಬ್ಬಳ್ಳಿ: ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯಲ್ಲಿ ನಡೆದಿದೆ.
ಬೆಂಗೇರಿಯ ತೋಟಗಾರಿಕೆ ಇಲಾಖೆಯ ಸಂತೆಯಲ್ಲಿ ಈ ಘಟನೆ ನಡೆದಿದೆ. ಸುಮಾರ 35 ರಿಂದ 40 ವಯಸ್ಸಿನ ವ್ಯಕ್ತಿ ಕೊಲೆಗೀಡಾಗಿದ್ದಾರೆ. ಆದ್ರೆ ವ್ಯೆಕ್ತಿಯ ಗುರುತು ಪತ್ತೆಯಾಗಿಲ್ಲ.
ಸ್ಥಳಕ್ಕೆ ಕೇಶ್ವಾಪುರ ಪೊಲೀಸರು ಹಾಗೂ ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮೈಮೇಲಿನ ರಕ್ತದ ಕಲೆಗಳನ್ನ ಗಮನಿಸಿದ ಪೊಲೀಸರು, ಇಂದು ಬೆಳಗಿನ ಜಾವ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಹುಬ್ಬಳ್ಳಿ: ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಿಂದ ಟಿಕೆಟ್ ಚೆಕ್ಕರ್‍ನನ್ನು ಹೊರ ತಳ್ಳಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ರೈಲ್ವೆ ಟಿಕೆಟ್ ಪರಿಶೀಲಕ ಚಿನ್ನಪ್ಪ ಎಂಬವರೇ ರೈಲಿನಿಂದ ಹೊರಬಿದ್ದ ರೈಲ್ವೆ ಅಧಿಕಾರಿ. ಭಾನುವಾರ ಬೆಳಗಿನ ಜಾವ ನಿಜಾಮುದ್ದಿನ-ವಾಸ್ಕೋಡಿಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ಕಳ್ಳನೊಬ್ಬ ಸುಮಾರು 18 ಸಾವಿರ ರೂ. ವೌಲ್ಯದ ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಈ ವೇಳೆ ರೈಲಿನಲ್ಲಿದ್ದ ಟಿಸಿ ಚಿನ್ನಪ್ಪ ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಶೌಚಾಲಯಕ್ಕೆ ಹೋಗುವುದಾಗಿ ತೆರಳಿ 10 ನಿಮಿಷವಾದರೂ ಬಂದಿರಲಿಲ್ಲ.
ಅನುಮಾನಗೊಂಡ ಚಿನ್ನಪ್ಪ ಅವರು ಶೌಚಾಲಯಾದ ಬಳಿ ತೆರಳಿದ್ದಾರೆ. ತನ್ನನ್ನು ಹುಡುಕಲು ಬಂದ ಟಿಸಿಯನ್ನು ಕಳ್ಳ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ. ಈ ವೇಳೆ ರೈಲು ರಾಯಭಾಗ-ಘಟಪ್ರಭಾ ಮಾರ್ಗದಲ್ಲಿ 65-75 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ರೈಲಿನಿಂದ ಹೊರಬಿದ್ದ ಟಿಸಿಯನ್ನು ಸ್ಥಳೀಯರು ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿನ್ನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳ್ಳನ ಬಗ್ಗೆ ಯವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ಘಟಪ್ರಭ ರೆಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ: ಬಸ್‍ಗಾಗಿ ಕಾಯುತ್ತಿದ್ದ ಅಪ್ರಾಪ್ತೆ ಬಾಲಕಿ ಮೇಲೆ ಕಾಮುಕರಿಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮುತ್ತಪ್ಪ (21), ಸಂತೋಷ್ ವಾಲ್ಮೀಕಿ(21) ಅತ್ಯಾಚಾರ ಮಾಡಿದ ವ್ಯಕ್ತಿಗಳು. ಹುಬ್ಬಳ್ಳಿಯಲ್ಲಿ ಆ.31 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸ್‍ಗಾಗಿ ಕಾಯುತ್ತಿದ್ದ ಅಪ್ರಾಪ್ತೆಯನ್ನ ಡ್ರಾಪ್ ಕೊಡುವದಾಗಿ ಹೇಳಿ ಆಟೋದಲ್ಲಿ ಹುಬ್ಬಳ್ಳಿಯ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಅಪ್ರಾಪ್ತೆ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ: ಹಣ ಅಂದ್ರೆ ದೇವ್ರನ್ನೂ ಬಿಡಲ್ಲ ಅನ್ನೋದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯಲ್ಲಾಗಿರುವ ಕೃತ್ಯ. ಭಕ್ತನ ವೇಷದಲ್ಲಿ ಪ್ಯಾಂಟ್-ಶರ್ಟ್, ಜರ್ಕಿನ್, ಬ್ಯಾಗ್ ಹಾಕ್ಕೊಂಡು ಬಂದ ವ್ಯಕ್ತಿಯೊಬ್ಬ ಗಣಪನ ಮುಂದೆ ಇಟ್ಟಿದ್ದ ಹುಂಡಿಯನ್ನೇ ಎತ್ಕೊಂಡು ಎಸ್ಕೇಪ್ ಆಗಿದ್ದಾನೆ.
ಚತುರ್ಥಿ ಪ್ರಯುಕ್ತ ಸಾರ್ವಜನಿಕವಾಗಿ ಗಣಪತಿಯನ್ನು ಕೂರಿಸಲಾಗಿತ್ತು. ಭಕ್ತರು ಕಾಣಿಕೆ ಹಾಕಲಿ ಅಂತಾ ಕಾಣಿಕೆ ಡಬ್ಬವನ್ನೂ ಇಡಲಾಗಿತ್ತು. ಆದ್ರೆ ಯಾರೂ ಇಲ್ಲದ ವೇಳೆ ಪೆಂಡಾಲ್ ಒಳಗೆ ಬಂದ ಕಳ್ಳ ತನ್ನ ಜರ್ಕಿನ್ ತೆಗೆದು ಅದರೊಳಗೆ ಹುಂಡಿಯನ್ನು ಮುಚ್ಚಿ ಎತ್ಕೊಂಡು ಹೋಗಿದ್ದಾನೆ.
ಹುಬ್ಬಳ್ಳಿಯ ದಾಜೀಬಾನ ಪೇಟೆಯ ಗವಳಿಗಲ್ಲಿಯ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶನ ಮುಂದಿನ ಹುಂಡಿ ಕಳ್ಳತನವಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹುಬ್ಬಳ್ಳಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಐಷಾರಾಮಿ ಕಾರುಗಳಿಗೆ ಇದೀಗ ಹುಬ್ಬಳ್ಳಿ ಮೂಲದ ಉದ್ಯಮಿ ಒಡೆಯರಾಗಿದ್ದಾರೆ.
ಹೌದು. ಸಾಲಮಾಡಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಐಷಾರಾಮಿ ಎರಡು ಕಾರುಗಳನ್ನ ಹುಬ್ಬಳ್ಳಿ ಮೂಲದ ಉದ್ಯಮಿ ಹನುಮಂತರೆಡ್ಡಿ ಆನ್‍ಲೈನ್ ಹರಾಜಿನಲ್ಲಿ ಕೇವಲ 1.40ಲಕ್ಷಕ್ಕೆ ಖರೀದಿಸಿದ್ದಾರೆ.
ಹುಬ್ಬಳ್ಳಿ ಗೋಕುಲ ರಸ್ತೆ ಮಂಜುನಾಥ್ ನಗರದ ನಿವಾಸಿಯಾಗಿರೋ ಹನುಮಂತರೆಡ್ಡಿ, ಕಳೆದ ಜನವರಿ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆದ ಆನ್ ಲೈನ್ ಹರಾಜಿನಲ್ಲಿ 13.15ಲಕ್ಷ ಮೌಲ್ಯದ ಹುಂಡೈ ಸೊನಾಟಾ ಗೋಲ್ಡ್ ಕಾರು 40 ಸಾವಿರಕ್ಕೆ ದೊರೆತಿದೆ. ಅಲ್ಲದೆ ಇನ್ನೊಂದು 21 ಲಕ್ಷಕ್ಕೂ ಅಧಿಕ ಮೌಲ್ಯದ ಹೋಂಡಾ ಎಕಾರ್ಡ್ ಕಾರು ಕೇವಲ 1 ಲಕ್ಷಕ್ಕೆ ಖರೀದಿಸಿದ್ದಾರೆ. ಎರಡೂ ಕಾರು ವ್ಯಾಟ್ ಸೇರಿ ಒಟ್ಟು 1 ಲಕ್ಷ 58 ಸಾವಿರದ 900 ರೂ ಪಾವತಿಸಿದ್ದಾರೆ.
ಹುಂಡೈ ಸೊನಾಟಾ ಗೋಲ್ಡ್ ಕಾರ್ 2002ರ ಮಾಡೆಲ್ ನಾಗಿದ್ದು, ಹೋಂಡಾ ಎಕಾರ್ಡ್ 2003 ನೇ ಮಾಡೆಲ್ ದಾಗಿದೆ. ಎರಡೂ ಕಾರ್ ಗಳು ಕೂಡ ಹೊಸ ಕಾರಿನಂತೆ ಉತ್ತಮವಾಗಿ ಓಡಾಡುತ್ತಿದೆ ಅಂತ ಮಾಲೀಕ ಹನುಮಂತ ರೆಡ್ಡಿ ಹೇಳಿದ್ದಾರೆ.
ಈ ಕಾರ್ ಹರಾಜಿಗೆ ಪಡೆದುಕೊಂಡ ಬಳಿಕ ಇದರ ಬೆಲೆ ಹೆಚ್ಚಾಗಿದೆ. ಅಲ್ಲದೇ ಹಲವಾರು ಮಂದಿ ಈ ಕಾರನ್ನು ಕೊಡುವುದಾದರೆ ಹೇಳಿ ನಾವು ಹರಾಜಿಗಿಂತ ದುಪ್ಪಟ್ಟು ಹಣ ಕೊಟ್ಟು ಖರೀದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಸೊನಾಟಾ ಗೋಲ್ಡ್ ಸೆಕೆಂಡ್ ಹ್ಯಾಂಡ್ ಕಾರ್ ಬೆಲೆ 2.5 ಲಕ್ಷ ರೂ. ಹಾಗೂ ಹೋಂಡಾ ಎಕಾರ್ಡ್ ಬೆಲೆ 4.5 ಲಕ್ಷ ಇದ್ದು, ಈ ಎರಡೂ ಕಾರ್ ಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಲ್ಲಿ ಮಾರುತ್ತೇನೆ ಅಂತ ಹನುಮಂತರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಮರುಪಾವತಿಸಲು ಸಾಧ್ಯವಾಗದೇ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಹಾರಿದ್ದಾರೆ. ಅವರನ್ನು ಭಾರತಕ್ಕೆ ಕರೆಸಲು ಹಲವು ಪ್ರಯತ್ನಗಳನ್ನು ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅವರ ಒಂದೊಂದೇ ಆಸ್ತಿ ಗಳನ್ನು ಹರಾಜು ಹಾಕಲಾಗುತ್ತಿದೆ.
ಹುಬ್ಬಳ್ಳಿ: ಪೋಷಕರೇ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡೋ ಮುನ್ನ ಎಚ್ಚರ. ರಾಜ್ಯಕ್ಕೂ ಕಾಲಿಟ್ಟಿದೆ ವಿಶ್ವಾದ್ಯಂತ ಹಲವು ಜೀವಗಳನ್ನ ಬಲಿ ಪಡೆದ ಡೆಡ್ಲಿ ಬ್ಲೂವೇಲ್ ಗೇಮ್.
ಹೌದು. ಬ್ಲೂವೇಲ್ ಗೇಮ್ ಆಡುತ್ತಾ 11 ವರ್ಷದ ಪೋರಿ ಬೆರಳು ಕುಯ್ದುಕೊಂಡ ಘಟನೆ ಹುಬ್ಬಳ್ಳಿಯ ರಾಜನಗರದಲ್ಲಿ ನಡೆದಿದೆ. ಮನೆಯಲ್ಲಿ ಬೆರಳು ಕುಯ್ದುಕೊಂಡ ವಿದ್ಯಾರ್ಥಿನಿ ಹಾಗೆಯೇ ಶಾಲೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯ ಗೆಳೆಯರು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆ ವಿದ್ಯಾರ್ಥಿನಿಯನ್ನು ಕರೆಸಿ ಕೌನ್ಸಿಲಿಂಗ್ ನಡೆಸಿದಾಗ, ತಾನು ಮನೆಯಲ್ಲಿ ಬ್ಲೂವೇಲ್ ಗೇಮ್ ಆಡುತ್ತಾ ಬೆರಳು ಕುಯ್ದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಈ ಬಗ್ಗೆ ಹೆಚ್ಚು ಮಾತನಾಡದೇ ಆ ಬಾಲಕಿಯನ್ನು ಶಿಕ್ಷಕರು ಕಳಿಸಿಕೊಟ್ಟಿದ್ರು. ಬಳಿಕ ಪೋಷಕರನ್ನು ಕರೆಸಿ ಬ್ಲೂವೇಲ್ ಗೇಮ್ ಅವಾಂತರಗಳ ಬಗ್ಗೆ ಮಾಹಿತಿ ನೀಡಿದ ಶಿಕ್ಷಕರು, ಆ ಡೆಡ್ಲಿ ಗೇಮ್ ಆನ್ ಇನ್‍ಸ್ಟಾಲ್ ಮಾಡಿಸಿದ್ರು. ಗಣೇಶನ ಹಬ್ಬ ಮುಗಿದ ನಂತರ ಪೋಷಕರ ಸಭೆ ಕರೆಯಲು ನಿರ್ಧರಿಸಿರುವ ಶಾಲೆಯ ಪ್ರಾಂಸುಪಾಲರು, ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದಾರೆ.
ಏನಿದು ಬ್ಲೂವೇಲ್ ಗೇಮ್?: ರಷ್ಯಾ ಮೂಲದ ಈ ಡೆಡ್ಲಿ ಗೇಮ್ ಇತ್ತೀಚಿಗಷ್ಟೇ ದೇಶದಲ್ಲಿ ಸದ್ದು ಮಾಡ್ತಿದೆ. ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಮಕ್ಕಳನ್ನ ಬಲಿ ಪಡೆದಿದೆ. ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್ ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಇದೀಗ ನೇರವಾಗಿ ಆರ್‍ಎಸ್‍ಎಸ್ ರಂಗಕ್ಕಿಳಿದಿದೆ. ಸ್ವತಂತ್ರ ಧರ್ಮದ ಬೇಡಿಕೆಯಿಂದ ಹಿಂದೆ ಸರಿಯುವಂತೆ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರ ಮನವೊಲಿಸುವಂತೆ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರಾಂತ ಬೈಠಕ್‍ನಲ್ಲಿ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ವೀರಶೈವರು ಮತ್ತು ಲಿಂಗಾಯತರ ನಡುವೆ ಸಹಮತ ಮೂಡಿಸಬೇಕು. ಅವರು ಒಗ್ಗಟ್ಟಿನಿಂದ ಇರುವ ಹಾಗೆ ನೋಡಿಕೊಳ್ಳಬೇಕು. ಇದು ರಾಜಕೀಯ ಹಾಗೂ ಧಾರ್ಮಿಕವಾಗಿಯೂ ಪ್ರಮುಖವಾದ ಕೆಲಸ. ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಘದ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು. ಅನ್ಯಾಯವಾದರೆ ತಕ್ಷಣ ಸ್ಪಂದಿಸಬೇಕು ಎಂದು ಮೋಹನ್ ಭಾಗವತ್ ಕರೆ ನೀಡಿದ್ರು ಎಂದು ತಿಳಿದುಬಂದಿದೆ.
ಹುಬ್ಬಳ್ಳಿ: ಇಷ್ಟು ದಿನ ಜನ ನಮ್ಮ ಏರಿಯಾದಲ್ಲಿ ರಸ್ತೆ ಹದಗೆಟ್ಟಿದೆ, ಇದನ್ನ ರಿಪೇರಿ ಮಾಡಿ ಅಂತ ರಾಜಕಾರಣಿಗಳ ಮನೆ ಅಲೆದಾಡುತ್ತಿದ್ರು. ರಾಜಕಾರಣಿಗಳು ಸಹ ದುರಸ್ಥಿ ಮಾಡುವುದಾಗಿ ಆಶ್ವಾಸನೆ ಕೊಡ್ತಾನೆ ಬಂದಿದ್ದಾರೆ. ಆದ್ರೆ ಕಚೇರಿ ಅಲೆದು ಅಲೆದು ಸುಸ್ತಾದ ಯುವಕರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಹುಬ್ಬಳ್ಳಿ ರಸ್ತೆಯಲ್ಲಿ ಓಡಾಡಿದ ಜನರಿಗೆ ಗೊತ್ತು ಇಲ್ಲಿನ ರಸ್ತೆಯ ಪರಿಸ್ಥಿತಿ ಹೇಗಿದೆ ಎಂದು. ಅಧಿಕಾರಿಗಳಿಗೆ, ಶಾಸಕರು-ಸಚಿವರಿಗೆ ಎಷ್ಟೇ ಕೇಳಿಕೊಂಡ್ರೂ ರಸ್ತೆ ಮಾತ್ರ ಸರಿಹೋಗಿಲ್ಲ. ಅದಕ್ಕೆ ಜನ ರಸ್ತೆಗಳ ದುಃಸ್ಥಿತಿಯ ಬಗ್ಗೆ `ಹುಬ್ಬಳ್ಳಿ ರಸ್ತೆ ಕೆಟ್ಟಾವಸ್ಥೆ ಜಲ್ದಿ ಕಟ್ರೊ ನಮ್ಮೂರ ರಸ್ತೆ’ ಎಂಬ ವಿಡಂಬನಾತ್ಮಕ ಹಾಡು ರಚಿಸಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಕಾರಣಿಗಳು ನಗರಕ್ಕೆ ತೋರಿದ ಅಸಡ್ಡೆಯ ಕುರಿತು 1.58 ನಿಮಿಷದ ವಿಡಿಯೊದಲ್ಲಿ ತೋರಿಸಲಾಗಿದೆ. ರೈಲ್ವೆ ಸ್ಟೇಷನ್ ರಸ್ತೆ, ಕೇಶ್ವಾಪುರ, ಕುಸುಗಲ್ ರಸ್ತೆಯಲ್ಲಿ ಚಲಿಸುವ ವಾಹನ ಸವಾರರ ಪರದಾಟ, ಗರ್ಭಿಣಿಯರು ಈ ರಸ್ತೆಗಳಲ್ಲಿ ಚಲಿಸಿದರೆ ಆಗುವ ದುರಂತ, ಕೆಟ್ಟು ನಿಲ್ಲುವ ವಾಹನಗಳ ಬಗ್ಗೆ ವಿಡಿಯೋದಲ್ಲಿ ಬೆಳಕು ಚೆಲ್ಲಿದ್ದಾರೆ.
ಹುಬ್ಬಳ್ಳಿಯ ಜವಾರಿ ಭಾಷೆಯಲ್ಲಿ ವಿಡಂಬನಾತ್ಮಕವಾಗಿ ಹಾಡು ರಚಿಸಿ, ಸಮಸ್ಯೆ ಗಂಭೀರತೆಯನ್ನು ವಿಡಿಯೊದಲ್ಲಿ ತೋರಿಸಿದ್ದಾರೆ.
ಕಾರವಾರ/ಹುಬ್ಬಳ್ಳಿ/ಬೆಳಗಾವಿ: ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀದಿ ಬೀದಿ ಅಲೆದಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾಶಿವ ಅವರು ನಾನು ಮನೆಯಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.
ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು. ನನ್ನನ್ನು ಮಗ ಮತ್ತು ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಬೈಲಹೊಂಗಲದಲ್ಲಿ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕುಮಟಾದಲ್ಲಿ ಹೇಳಿದ್ದೇನು?:
ತನ್ನ ಅಳಿಯ ಹಾಗೂ ಮಗಳ ವರ್ತನೆಯಿಂದ ಬೇಸತ್ತ ಕನ್ನಡದ ಪೋಷಕ ನಟ ಸದಾಶಿವ ಬ್ರಹ್ಮಾವರ್ ತನ್ನ ಕುಟುಂಬವನ್ನು ತೊರೆದು ಹೊರಬಂದಿದ್ದು ಕುಮಟಾದ ನಗರದಲ್ಲಿ ಕೈಯಲ್ಲಿ ಹಣವಿಲ್ಲದೇ ಒಂದು ತುತ್ತಿಗೂ ಪರದಾಡುತ್ತಾ ಅಲೆಯುತ್ತಿದ್ದರು. ಸದಾಶಿವ ಅವರನ್ನು ಗುರುತಿಸಿದ ಕೆಲವರು ಸ್ಥಳೀಯರು ಕುಮಟಾದ ಹೋಟೆಲ್ ನಲ್ಲಿ ಊಟ ಹಾಕಿಸಿ ನೆಡೆದಾಡಲೂ ಕಷ್ಟಪಡುತಿದ್ದ ಇವರನ್ನ ವಿಚಾರಿಸಿದಾಗ ಮೊದಲು ಏನನ್ನೂ ಹೇಳಲಿಲ್ಲ. ಆದ್ರೆ ನಂತರ ಮನದಲ್ಲಿದ್ದ ನೋವು ಹಾಗು ಕೆಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದರು.
ಸ್ಥಳೀಯರು ಗೂಡು ಸೇರಿಸುವ ಪ್ರಯತ್ನ ಮಾಡಿದರಾದರೂ ಅದಕ್ಕೆ ಒಪ್ಪದ ಅವರು ನನ್ನ ಮನಸ್ಸಿಗೆ ನೋವಾಗಿದೆ. ಹಾಗಾಗಿ ನೋವು ಮರೆಯುವವರೆಗೆ ನಾನೆಲ್ಲೂ ಹೋಗಲಾರೆ. ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ಹೋಗುವುದಾಗಿ ತಿಳಿಸಿದ್ದು ಅವರ ಮಾತಿನಂತೆ ಹುಬ್ಬಳ್ಳಿಗೆ ಸ್ಥಳೀಯರೇ ಟಿಕೆಟ್ ಮಾಡಿಸಿ ಕಳುಹಿಸಿ ಕೊಟ್ಟಿದ್ದರು.
ಅಜ್ಜ ಎಲ್ಲವನ್ನು ಮರೆತು ಬಿಡ್ತಾರೆ:
ಅಜ್ಜನನ್ನು ಯಾರು ಮನೆಯಿಂದ ಹೊರ ಹಾಕಿಲ್ಲ. ಅವರು ತಾವಾಗಿಯೇ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಅವರಿಗೆ 90 ವರ್ಷ ವಯಸ್ಸಾಗಿದ್ದು, ನಾವುಗಳು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದೇವೆ. ಆದರೂ ಮನೆಯಿಂದ ಹೊರಗಡೆ ಇದ್ದಿದ್ದಾರೆ. ಆದರೆ ನಿಮಗೆ ಸದ್ಯ ಅಜ್ಜ ಬೈಲಹೊಂಗಲದಲ್ಲಿ ಸಿಗುತ್ತಾರೆ. ವಯಸ್ಸಾಗಿದ್ದರಿಂದ ಅವರಲ್ಲಿ ಮರೆವಿನ ಕಾಯಿಲೆಯಿದ್ದು, ಎಲ್ಲವನ್ನು ಮರೆತು ಬಿಡುತ್ತಾರೆ.ಅವರು ಹೇಳಿರುವ ಮಾತುಗಳೇ ಅವರಿಗೆ ನೆನಪಿನಲ್ಲಿರುವದಿಲ್ಲ ಎಂದು ಸದಾಶಿವ ಅವರ ಮೊಮ್ಮಗಳು ಪ್ರೀತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಈ ರೀತಿಯಾಗಿ ಕುಮಟಾದಲ್ಲಿ ಹೇಳಿಕೆ ನೀಡಿದ ಸದಾಶಿವ ಅವರು ಇದ್ದಕ್ಕಿದಂತೆ ಬೆಳಗಾವಿಯ ಬೈಲಹೊಂಗಲದಲ್ಲಿ ನನ್ನ ಮಗ ಮತ್ತು ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ನಟನೆಯ ಕೆಲವು ಸಿನಿಮಾದ ವಿಡಿಯೋಗಳನ್ನು ಈ ಕೆಳಗೆ ನೀಡಲಾಗಿದೆ
ಹುಬ್ಬಳ್ಳಿ: ಇಷ್ಟು ದಿನ ಧಾರವಾಡದ ಗರಗದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್(ಬಿಐಎಸ್) ಮಾನ್ಯತೆ ಪಡೆದ ರಾಷ್ಟ್ರಧ್ವಜವನ್ನ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಿಸಲಾಗುತ್ತಿದೆ.
ನಮ್ಮ ರಾಷ್ಟ್ರಧ್ವಜ ತಯಾರಾಗೋದು ಮಹಿಳೆಯರ ಕೈಯಲ್ಲಿ. 50ಕ್ಕೂ ಹೆಚ್ಚು ಮಹಿಳೆಯರು ವರ್ಷಪೂರ್ತಿ ಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
1957ರಲ್ಲಿ ಸಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಸ್ಥಾಪಿಸಿದ ಈ ಖಾದಿ ಕೇಂದ್ರ ಈಗ ದೇಶದ ಹೆಮ್ಮೆಯ ರಾಷ್ಟ್ರಧ್ವಜ ತಯಾರಿಸೋ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ತಯಾರಾಗೋ ಗುಣಮಟ್ಟದ ಖಾದಿ ಬಟ್ಟೆ ನೋಡಿ 2006 ಮತ್ತು 2007ರಲ್ಲಿ ಕೇಂದ್ರ ಸರ್ಕಾರ ಬಿಐಎಸ್ ಮಾನ್ಯತೆ ನೀಡಿದೆ.
ಧ್ವಜ ಹೇಗೆ ತಯಾರಾಗುತ್ತೆ?: ಮೊದಲು ಸ್ಥಳೀಯವಾಗಿ ಬೆಳೆಯುವ ಜೈದರ್ ಮತ್ತು ಎಲ್‍ಎಲ್‍ಆರ್ ತಳಿಯ ಹತ್ತಿಯನ್ನೇ ಬಳಸಲಾಗುತ್ತದೆ. ಈ ಹತ್ತಿಯಿಂದ ತೆಗೆದ 42 ಎಳೆ ಮಾಡಿದ ದಾರದಿಂದ ರಾಷ್ಟ್ರ ಧ್ವಜದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಒಂದು ಅಡಿ ದಾರ 28 ಗ್ರಾಂ ನಿಂದ 29 ಗ್ರಾಂ ಮೀರಬಾರದು. ಒಂದು ಸೆಂಟಿ ಮೀಟರ್ ಬಟ್ಟೆ 42 ದಾರದ ಎಳೆಗಳನ್ನು ಮಾತ್ರ ಹೊಂದಿರಬೇಕು. 1 ಮೀಟರ್ ಬಟ್ಟೆ 205 ಗ್ರಾಂ ತೂಕ ಮಾತ್ರ ಹೊಂದಿರಬೇಕು. ಇಷ್ಟೆಲ್ಲಾ ನಿಯಾಮಾವಳಿಗಳನ್ನು ಪಾಲಿಸಿ ನಮ್ಮ ರಾಷ್ಟ್ರ ಧ್ವಜವನ್ನು ತಯಾರಿಸಲಾಗುತ್ತದೆ.
1984 ರಿಂದಲೂ ಧಾರವಾಡ ತಾಲೂಕಿನ ಗರಗದಲ್ಲಿ ಧ್ವಜವನ್ನು ತಯಾರು ಮಾಡಲಾಗುತಿತ್ತು. ಈಗ ಕೇವಲ ಧ್ವಜಕ್ಕೆ ಬೇಕಾಗುವ ಬಟ್ಟೆಯನ್ನು ತಯಾರಿಸಲು ಮಾತ್ರ ಮಾನ್ಯತೆ ನೀಡಿದ್ದು, ಬೆಂಗೇರಿಯಲ್ಲೇ 9 ಬಗೆಯ ಧ್ವಜಗಳನ್ನು ತಯಾರು ಮಾಡಲಾಗುತ್ತಿದೆ. ಹೀಗೆ ಇಲ್ಲಿ ತಯಾರಾದ ರಾಷ್ಟ್ರ ಧ್ವಜ ದೇಶದೆಲ್ಲೆಡೆ ಗರ್ವದಿಂದ ಹಾರಾಡುತ್ತದೆ. ಎಲ್ಲಾ ವಿಧಾನಸಭೆ, ಸರ್ಕಾರಿ ಕಚೇರಿಗಳು ಸೇರಿದಂತೆ ವಿದೇಶಿ ರಾಯಭಾರಿ ಕಚೇರಿಗಳಲ್ಲೂ ಹಾರಾಡುತ್ತೆ ಅನ್ನೋದೇ ಹೆಮ್ಮೆಯ ವಿಚಾರವಾಗಿದೆ.