Tag: ಹುಬ್ಬಳ್ಳಿ

  • ಕೆಪಿಎಂಇ ತಿದ್ದುಪಡಿ ಮಸೂದೆಗೆ ಜೆಡಿಎಸ್ ಸಂಪೂರ್ಣ ವಿರೋಧ- ಎಚ್‍ಡಿ ದೇವೇಗೌಡ

    ಕೆಪಿಎಂಇ ತಿದ್ದುಪಡಿ ಮಸೂದೆಗೆ ಜೆಡಿಎಸ್ ಸಂಪೂರ್ಣ ವಿರೋಧ- ಎಚ್‍ಡಿ ದೇವೇಗೌಡ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ಜೆಡಿಎಸ್ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಂಇ ಮಸೂದೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಈ ಸರ್ಕಾರ ಇಷ್ಟೊಂದು ತರಾತುರಿ ಮಾಡಬಾರದಿತ್ತು. ಈ ಮಸೂದೆಯನ್ನು ಇನ್ನೂ ಸದನದಲ್ಲಿ ಮಂಡಿಸಿಯೇ ಇಲ್ಲ ಅಂದ್ರು.

    ಒಂದು ವೇಳೆ ಸದನದಲ್ಲಿ ಮಸೂದೆ ಮಂಡನೆ ಆದ್ರೆ ಈ ಬಗ್ಗೆ ಸದನದಲ್ಲೂ ಜೆಡಿಎಸ್ ವಿರೋಧ ವ್ಯಕ್ತಪಡಿಸಲಿದೆ. ಯಾರು ನಕಲಿ ವೈದ್ಯರಿದ್ದಾರೋ ಅವರ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ಕಾಯ್ದೆಯನ್ನು ಜಾರಿ ಮಾಡಬಾರದು. ಈ ಕಾಯ್ದೆ ಜಾರಿಯಾದ್ರೆ ವೈದ್ಯರ ಗತಿ ಏನಾಗುತ್ತೆ ಎಂದು ಹೇಳಿದ್ರು.

     

  • ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಜೀವ ಬೆದರಿಕೆ ಪತ್ರ

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಜೀವ ಬೆದರಿಕೆ ಪತ್ರ

    ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿ ನಿವಾಸಕ್ಕೆ ಜೀವ ಬೆದರಿಕೆ ಹಾಕಿರುವ ಅನಾಮಧೇಯ ಪತ್ರವೊಂದು ಬಂದಿದೆ.

    ಪತ್ರ ದಲ್ಲಿ ಕೇವಲ ನಾಲ್ಕು ಸಾಲುಗಳಿದ್ದು, ನಿಮ್ಮನ್ನು ಗುಂಡಿಕ್ಕಿ ಕೊಲೆ ಮಾಡಲು ಮುಂಬೈನಿಂದ ಐವರು ತಂಡವೊಂದು ಹುಬ್ಬಳ್ಳಿಗೆ ಬಂದಿದ್ದು, ಇನ್ನೂ ಎರಡು ದಿನಗಲ್ಲಿ ನಿಮ್ಮನ್ನು ಕೊಲೆ ಮಾಡಲಿದ್ದಾರೆ ಎಂದು ಬರೆಯಲಾಗಿದೆ. ಪತ್ರವನ್ನು ಆಂಚೆ ಮೂಲಕ ಪೋಸ್ಟ್ ಮಾಡಲಾಗಿದ್ದು ಹುಬ್ಬಳ್ಳಿಯ ಉಣಕಲ್ ಗ್ರಾಮದಿಂದ ಪತ್ರ ಬಂದಿದೆ.

    ಪ್ರಸ್ತುತ ಹೊರಟ್ಟಿಯವರು ಬೆಂಗಳೂರಿನಲ್ಲಿರುವ ಕಾರಣದಿಂದ ಅವರ ಸಪ್ತ ಸಹಾಯಕನಿಂದ ಪತ್ರವನ್ನು ಡಿಸಿಪಿ ನೇಮಗೌಡರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ ಬಸವರಾಜ ಹೊರಟ್ಟಿಯವರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಈ ಹಿನ್ನೆಲೆಯಲ್ಲಿ ಪತ್ರ ಬಂದಿರಬಹುದು ಎನ್ನಲಾಗುತ್ತಿದೆ.

    ಈ ಕುರಿತು ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಪಿ ರೇಣುಕಾ ಸುಕುಮಾರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣ ಕುರಿತು ಯಾವುದೇ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.

     

  • ಇಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಏನೇನು ನಡೆಯಿತು? ಇಲ್ಲಿದೆ ಮಾಹಿತಿ

    ಇಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಏನೇನು ನಡೆಯಿತು? ಇಲ್ಲಿದೆ ಮಾಹಿತಿ

    ಹುಬ್ಬಳ್ಳಿ: ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸಮಾವೇಶ ಒಂದು ಕಡೆ ಯಶಸ್ವಿಯಾದರ ಮತ್ತೊಂದು ಕಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಸಮಾವೇಶದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡುತ್ತಾ ಒಂದು ತಂದೆಗೆ ಹುಟ್ಟಿದವರು ಲಿಂಗಾಯತರು ಐದು ಜನಕ್ಕೆ ಹುಟ್ಟಿದವರು ವೀರಶೈವರ ಎನ್ನುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾಷಣ ವೇಳೆ ಅವೇಶಭರಿತರಾಗಿ ಮಾತನಾಡಿದ ಅವರು ಮನುವಾದಿಗಳ ಕುತಂತ್ರಕ್ಕೆ ತಕ್ಕ ಉತ್ತರವನ್ನು ಬಸವರಾಜ ಹೊರಟ್ಟಿ ಹಾಗೂ ವಿನಯ್ ಕುಲಕರ್ಣಿಯವರು ಕೊಟ್ಟಿದ್ದಾರೆ. ಹುಬ್ಬಳ್ಳಿ ಅಂದರೆ ಸಾಕಷ್ಟು ಇತಿಹಾಸ ಪುರುಷರಿಗೆ ಜನ್ಮ ನೀಡಿದೆ. ಲಿಂಗಾಯತರಿಗೆ ಯಾವಾಗಲೂ ಬಸವಣ್ಣನೇ ತಂದೆಯಾಗಿರುತ್ತಾನೆ ಎಂದು ಹೇಳಿದ್ದಾರೆ.

    ಇನ್ನು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ ಮರುಕ್ಷಣವೇ ಸ್ವಾಮೀಜಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆ ಕುರಿತು ಸ್ಪಷ್ಟಣೆ ನೀಡಿದ ಸ್ವಾಮೀಜಿ, ಬಸವಣ್ಣನವರ ಅನುಯಾಯಿಗಳು ಒಬ್ಬ ತಂದೆ ಇದ್ದ ಹಾಗೆ, ವೀರಶೈವರು ಪಂಚ ಪೀಠದ ಅನುಯಾಯಿಗಳು ಅವರು ಐದು ಜನರ ಆರಾಧಕರು ಹೀಗಾಗಿ ಅವರು ಐದು ತಂದೆಯ ಮಕ್ಕಳು ಎಂದು ಹೇಳಿದೆ. ಆದರೆ ಯಾವುದೇ ಸಮುದಾಯದ ಜನರಿಗೆ ನೋವು ಉಂಟು ಮಾಡುವುದು ನನ್ನ ಉದ್ದೇಶವಲ್ಲ. ಯಾರು ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆಂದು ಸ್ಪಷ್ಟಣೆ ನೀಡಿದ್ದಾರೆ.

    ಧರ್ಮಕ್ಕಾಗಿ ಹೋರಾಟ ಘೋಷಣೆ: ಅದು ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಪ್ರತ್ಯೇಕ ಧರ್ಮದ ಹೋರಾಟ ಕೆಲವು ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರತ್ಯೇಕ ಧರ್ಮ ಕೂಗೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಸಮಾವೇಶದದ ಯಾವ ಭಾಗದಲ್ಲಿ ನೋಡಿದರು ಜನ ಸಾಗರ ಕೈಯಲ್ಲಿ ಕೆಂಪು ಬಾವುಟ ಹಿಡಿದಕೊಂಡು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಒಗ್ಗಟಾಗಿ ಹೋರಾಟ ನಡೆಸುವ ದೃಶ್ಯಗಳು ಕಂಡು ಬಂತು. ಇಂದು ನಡೆದ ಹೋರಾಟ ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾಪನೆಯ ಸೆಮಿಪೈನಲ್ ಆಗಿ ಕಂಡು ಬಂತು. ಈ ಹಿಂದೆ ಬೀದರ್, ಕಲಬುರಗಿ, ಬೆಳಗಾವಿ ಯಲ್ಲಿ ನಡೆದ ಸಮಾವೇಶಗಳು ಇದಕ್ಕೆ ಸಾಕ್ಷಿಯಾಗಿವೆ. ಸಮಾವೇಶದಲ್ಲಿ ನಿರಂತರವಾಗಿ ಬಸವಣ್ಣನ ಅನುಯಾಯಿಗಳು ಎಲ್ಲರ ತಲೆಯ ಮೇಲೆ ಧರ್ಮಕ್ಕಾಗಿ ಹೋರಾಟ ಅನ್ನೋ ಘೋಷಣೆಗಳನ್ನು ಕೂಗಿದರು.

    ಶಪಥ: ಇಂದು ಬೆಳ್ಳಗೆ 11 ಗಂಟೆಗೆ ಬಸವಣ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಲಿಂಗಯತ ಧರ್ಮಕ್ಕೆ ಸಂಬಂಧಪಟ್ಟ ಸಂಸ್ಕ್ರತ ಗ್ರಂಥ ಹಾಗೂ ವಚನ ಸಾಹಿತ್ಯ ಪುಸ್ತಕಗಳನ್ನು ಚಿತ್ರದುರ್ಗದ ಮುರುಘಾ ಶ್ರೀಗಳಿಂದ ಬಿಡುಗಡೆ ಮಾಡಲಾಯಿತು. ನಂತರ ವೇದಿಕೆಯಲ್ಲಿದ್ದ ಗಣ್ಯರು ಸೇರಿ ಎಲ್ಲರೂ ಒಟ್ಟಾಗಿ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರೋ ಹೋರಾಟ ಪ್ರತ್ಯೇಕ ಧರ್ಮ ಆಗೋವರೆಗೂ ಹಿಂದೆ ಸರಿಯುವುದಿಲ್ಲ ಎನ್ನುವ ಶಪಥ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಲಿಂಗಾಯತ ಏಜುಕೇಷನ್ ಸೊಸೈಟಿಯ ಪ್ರಭಾಕರ್ ಕೊರೆ ಹಾಗೂ ವಿಪಕ್ಷ ನಾಯಕ ಶೆಟ್ಟರ್ ವಿರುದ್ಧ ವಾಗ್ಧಾಳಿ ನಡೆಸಿದರು. ನೀವು ಚುನಾವಣೆ ಗೆಲ್ಲಲು, ಲಿಂಗಾಯತ ವೋಟ್ ಬ್ಯಾಂಕ್ ಬೇಕು ಆಂದರೆ ನೀವು ವೀರಶೈವರ ಬಾಲ ಹಿಡಿದುಕೊಂಡು ಬೇಡಿ. ಲಿಂಗಾಯತ ಧರ್ಮದಲ್ಲಿ 99 ಒಳ ಪಂಗಡಗಳನ್ನು ಹೊಂದಿದ್ದು, ಇದರಲ್ಲಿ ವೀರಶೈವ ಸೇರಿದೆ. ಇಲ್ಲಿ ಸೇರಿರುವ ಎಲ್ಲಾ ಮುಖಂಡರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ವಿನಯ್ ಕುಲಕರ್ಣಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಅವರ ಪ್ರಮಾಣ ಪತ್ರದಲ್ಲಿಯೂ ಲಿಂಗಾಯತ ಎಂದಿದೆ. ವೀರಶೈವ ಎಂದು ಎಲ್ಲಿಯೂ ದಾಖಲಾಗಿಲ್ಲ ಎಂದು ಟೀಕೆ ಮಾಡಿದರು.

    ಬಳಿಕ ನೆಹರು ಮೈದಾನದಿಂದ ಎಲ್ಲಾ ಲಿಂಗಾಯತ ಮುಖಂಡರು ಹಾಗೂ ಮಠಧೀಶರ ನೈತೃತ್ವದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು. ನೆಹರು ಮೈದಾನದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೊರಟ ಬಸವಣ್ಣನ ಅನುಯಾಯಿಗಳು ನಗರದ ಕೊಪ್ಪಿಕರ್ ರೋಡ್, ಕೋಯಿನ್ ರಸ್ತೆ ಮೂಲಕ ಚೆನ್ನಮ್ಮ ವೃತ್ತದವರೆಗೆ ನಡೆದು ರಾಣಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಶಕ್ತಿ ಪ್ರದರ್ಶನ ನೀಡಿದರು.

    ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅನೇಕ ಸಚಿವರು ಮಠಾಧೀಶರು ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಆದಷ್ಟು ಬೇಗ ಸರ್ಕಾರದಿಂದ ಮಾನ್ಯತೆ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನೂ ಸಮಾವೇಶದಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ನಮ್ಮಲ್ಲಿ ವೀರಶೈವರೂ ಧರ್ಮ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮಲ್ಲಿ ವೀರಶೈವ-ಲಿಂಗಾಯತ ಅಂತ ಇಷ್ಟು ದಿನ ತುಳಿದಿದ್ದಾರೆ. ಇನ್ನು ಮುಂದೆ ನಾವು ಯಾರು ಮೋಸ ಹೋಗಬಾರದು. ನಾವು ಯಾರು ರಾಜಕೀಯ ಲಾಭಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ನಮಗೆ ವೋಟು ಕೊಟ್ಟ ಜನರ ಋಣ ತೀರಿಸೋ ಕೆಲಸ ಮಾಡಿತ್ತಿದ್ದೇವೆ ಎಂದರು.

     

     

  • ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ – 5 ಲಕ್ಷ ಮಂದಿ ಭಾಗಿ ನಿರೀಕ್ಷೆ, ಬಿಗಿ ಭದ್ರತೆ

    ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ – 5 ಲಕ್ಷ ಮಂದಿ ಭಾಗಿ ನಿರೀಕ್ಷೆ, ಬಿಗಿ ಭದ್ರತೆ

    ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ಬಲ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದ್ದು, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ. ವಾಣಿಜ್ಯ ನಗರಿಯಾದ ಹುಬ್ಬಳ್ಳಿ ನಾಳೆ ಲಿಂಗಾಯತರ ಶಕ್ತಿ ಪ್ರದರ್ಶನದ ಕೇಂದ್ರವಾಗಲಿದೆ.

    ಸಾಕಷ್ಟು ಪರ-ವಿರೋಧದ ಚರ್ಚೆಗಳ ನಡುವೆಯೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ರಣಕಹಳೆ ಮೊಳಗಿದೆ. ನೆಹರು ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆದಿದ್ದು, ಸುಮಾರು 5 ಲಕ್ಷ ಮಂದಿ ಈ ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬೃಹತ್ ಸಮಾವೇಶದಲ್ಲಿ ತೋಂಟದಾರ್ಯ ಶ್ರೀಗಳು, ಮುರುಘಾ ಶ್ರೀಗಳು, ಮಾತೆ ಮಹಾದೇವಿ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಿಳಿದ್ದಾರೆ.

    ಇನ್ನು ಈ ಸಮಾವೇಶಕ್ಕೆ ಬಿಜೆಪಿಯ ಜಗದೀಶ್ ಶೆಟ್ಟರ್‍ಗೆ ಬಸವರಾಜ ಹೊರಟ್ಟಿ ಆಹ್ವಾನ ನೀಡಿದ್ದಾರೆ. ಆದರೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ನಿರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

    ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಲಿಂಗಾಯತ ಸಮುದಾಯ ಹರಿದು ಬರುತ್ತಿದೆ. ಇವರಿಗೆಲ್ಲಾ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಇದನ್ನೆಲ್ಲ ಮಾಡುತ್ತಿರುವುದು ಹುಬ್ಬಳ್ಳಿಯ ಜೈನ ಮತ್ತು ಮುಸ್ಲಿಂ ಬಾಂಧವರು. ಎಂದಿನಂತೆ ಪೊಲೀಸ್ ಇಲಾಖೆಯು ಬಿಗಿ ಭದ್ರತೆಯನ್ನು ಕೈಗೊಂಡಿದೆ.

            

     

     

  • ಹಾಡಹಗಲೇ ಮಾರಕಾಸ್ತ್ರದಿಂದ ಅತ್ತೆಯ ಕತ್ತು ಸೀಳಿ ಕೊಲೆಗೈದ ಅಳಿಯ..!

    ಹಾಡಹಗಲೇ ಮಾರಕಾಸ್ತ್ರದಿಂದ ಅತ್ತೆಯ ಕತ್ತು ಸೀಳಿ ಕೊಲೆಗೈದ ಅಳಿಯ..!

    ಹುಬ್ಬಳಿ: ಹಾಡಹಗಲೇ ಮಾರಕಾಸ್ತ್ರದಿಂದ ಅಳಿಯನೊಬ್ಬ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಜಿಲ್ಲೆಯ ನವನಗರ ಪ್ರದೇಶದ ಗಾಮನಗಡ್ಡೆ ಗ್ರಾಮದ ನಿವಾಸಿಯದ ಕರಿಬಸವ್ವಾ ಬೆಂಗೇರಿ (65) ಎಂಬವರೇ ಕೊಲೆಯಾದ ದುರ್ದೈವಿ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕರಿಬಸವ್ವಾರ ಅಳಿಯ ಯಲ್ಲಪ್ಪ ಬೆಂಗೇರಿ ಎಂಬ ವ್ಯಕ್ತಿ ಕೊಲೆ ಮಾಡಿ ಪರಾರಿಯಾದ್ದಾನೆ.

    ಇಂದು ಸಂಜೆ ಕರಿಬಸವ್ವಾ ಅವರು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಅಳಿಯ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಕಾರಣ ಕರಿಬಸವ್ವಾ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

    ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ತಾಯಿ ಇಲ್ಲ, ತಂದೆ ಬಿಟ್ಟು ಹೋದ, ಇರೋ ಅಜ್ಜಿಗೆ ದೃಷ್ಟಿ ಸರಿಯಿಲ್ಲ- ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಬಾಲಕನಿಗೆ ಬೇಕಿದ ಶಿಕ್ಷಣ

    ತಾಯಿ ಇಲ್ಲ, ತಂದೆ ಬಿಟ್ಟು ಹೋದ, ಇರೋ ಅಜ್ಜಿಗೆ ದೃಷ್ಟಿ ಸರಿಯಿಲ್ಲ- ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಬಾಲಕನಿಗೆ ಬೇಕಿದ ಶಿಕ್ಷಣ

    ಹುಬ್ಬಳ್ಳಿ: ತಾಯಿ ಸಾವನ್ನಿಪ್ಪಿದ್ದಾರೆ. ತಂದೆ ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ಇರೋದು ಅಜ್ಜಿ ಮಾತ್ರ. ಆದರೆ ಅವರಿಗೆ ಸರಿಯಾಗಿ ದೃಷ್ಟಿ ಕಾಣುವುದಿಲ್ಲ. ಅಜ್ಜಿಗೆ ಆಪರೇಷನ್ ಮಾಡಿಸಿ ಮೈತುಂಬಾ ಸಾಲ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ಕುಟುಂಬ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.

    ಅಜ್ಜಿಯ ಕೈ ತುತ್ತು ತಿಂದು ಬೆಳೆಯುತ್ತಿರುವ ಬಾಲಕನ ಹೆಸರು ಮಂಜುನಾಥ್ ಠಾಕೋಲಿ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. ಕಳೆದ 15 ವರ್ಷಗಳ ಹಿಂದೆ ಈ ಬಾಲಕನ ತಾಯಿ ಸಾವನ್ನಪ್ಪಿದ್ದಾರೆ. ತಾಯಿ ಸಾವಿನ ಬಳಿಕ ತಂದೆ ಕೂಡ ಮಗನನ್ನು ಬಿಟ್ಟು ಹೋದವರು ಮತ್ತೆ ಇಲ್ಲಿವರೆಗೂ ಹಿಂದಿರುಗಿ ಬಂದಿಲ್ಲ.

    ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು, ತಂದೆಗೆ ಬೇಡವಾದ ಮಗನಾಗಿ ಮಂಜುನಾಥ್ ಠಾಕೋಲಿ ಅನಾಥನಾಗಿ ಬಿಟ್ಟಿದ್ದನು. ಆದರೆ ಅಜ್ಜಿ ಸರೋಜಮ್ಮ ಅವರು ಮೊಮ್ಮಗನಿಗೆ ಆಸರೆಯಾದರೂ. ಅವರಿವರ ಮನೆ ಕೆಲಸಗಳನ್ನು ಮಾಡಿಕೊಂಡು ಮೊಮ್ಮಗನಿಗೆ ವಿದ್ಯಾಭ್ಯಾಸ ಕೊಡಿಸಿ ಆತನ ಆರೈಕೆ ಮಾಡಿಕೊಂಡು ತಮ್ಮ ಪ್ರತಿನಿತ್ಯದ ಜೀವನವನ್ನು ಸವೆಸುತ್ತಿದ್ದಾರೆ.

    ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಿರುವ ಮಂಜುನಾಥ್ ಠಾಕೋಲಿ ಕುಂದಗೋಳದ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದಿನಲ್ಲಿ ಸದಾ ಮುಂದಿದ್ದು, ಎಲ್ಲಾ ಶಿಕ್ಷಕರಿಗೂ ನೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಆದರೆ ಅಜ್ಜಿ ಸರೋಜಮ್ಮ ಅವರು ದೃಷ್ಠಿ ದೋಷದಿಂದ ಬಳಲುತ್ತಿದ್ದರು. ಆದ್ದರಿಂದ ಸಾಲ ಮಾಡಿ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಕಣ್ಣಿನ ಚಿಕಿತ್ಸೆಗೆ ಮಾಡಿದ ಸಾಲವನ್ನು ತೀರಿಸಲಾಗದೇ ಈಗ ಹೊಟ್ಟೆಗೆ ಅನ್ನ ನೀರು ಇಲ್ಲದೇ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಅಜ್ಜಿ ತಮ್ಮ ಕೈಯಲ್ಲಿ ಆದಷ್ಟು ಇಲ್ಲಿಯವರೆಗೂ ಮೊಮ್ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದು, ಮುಂದಿನ ಓದಿಗೆ ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ನೊಂದ ಹೃಯದ ನಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಕೇಳಿಕೊಂಡು ಬಂದಿದ್ದಾರೆ.

  • ರಾಜ್ಯಕ್ಕೆ ಮೋದಿ ಆಗಮನದ ಹೊತ್ತಲ್ಲೇ ಮಾಜಿ ಸಚಿವ ವಿಜಯಶಂಕರ್ ಬಿಜೆಪಿಗೆ ಗುಡ್ ಬೈ

    ರಾಜ್ಯಕ್ಕೆ ಮೋದಿ ಆಗಮನದ ಹೊತ್ತಲ್ಲೇ ಮಾಜಿ ಸಚಿವ ವಿಜಯಶಂಕರ್ ಬಿಜೆಪಿಗೆ ಗುಡ್ ಬೈ

    – ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸ್ತಿರೋ ಹೊತ್ತಲ್ಲೇ ಬಿಜೆಪಿಯವರಿಂದಲೇ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಮೋದಿ ಬರ್ತಿರೋ ದಿನವೇ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ರೆ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಬಿಜೆಪಿಗೆ ಗುಡ್‍ಬೈ ಹೇಳ್ತಿದ್ದಾರೆ.

    ಭಾನುವಾರ ಮೋದಿ ಬರುತ್ತಿರೋ ದಿನವೇ ಬಿಜೆಪಿ ತೊರೆಯಲು ವಿಜಯಶಂಕರ್ ನಿರ್ಧರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನನ್ನನ್ನು ನಿಲ್ಲಿಸಿ ಇನ್ನೊಮ್ಮೆ ನನ್ನ ಬಲಿಪಶು ಮಾಡೋಕೆ ಬಿಜೆಪಿ ಹುನ್ನಾರ ಮಾಡಿತ್ತು. ಕಳೆದ ಬಾರಿ ಎಚ್.ಡಿ. ದೇವೇಗೌಡರ ವಿರುದ್ಧ ನನ್ನ ಕಣಕ್ಕೆ ಇಳಿಸಿ ಬಲಿಪಶು ಮಾಡಿದ್ದರು. ಇದೀಗ ಮತ್ತೆ ನಾನು ಬಲಿಪಶು ಆಗೋಕೆ ಸಿದ್ಧನಿಲ್ಲ. ಹೀಗಾಗಿ ಬಿಜೆಪಿ ತೊರೆಯುತ್ತಿದ್ದೇನೆ ಅಂತ ವಿಜಯ್ ಸ್ಪಷ್ಟಪಡಿಸಿದ್ದಾರೆ. ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ಒಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

    ಯೋಗೇಶ್ವರ್ ಬಿಜೆಪಿಗೆ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ನಾಳೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ರಾಮನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಯೋಗೇಶ್ವರ್, ಇಂಧನ ಇಲಾಖೆಯಲ್ಲಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇಂಧನ ಇಲಾಖೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಯುತ್ತಿದ್ದು, ಪಾವಗಡದ ಸೋಲಾರ್ ಘಟಕದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. ತಮಗೆ ಅನುಕೂಲ ಬಂದಂತೆ ಇಂಧನ ಖಾತೆ ದುರುಪಯೋಗ ನಡೆದಿದೆ. ನನ್ನ ಬಳಿ ಇಂಧನ ಇಲಾಖೆಯಲ್ಲಿ ನಡೆದಿರುವ ಅಕ್ರಮದ ದಾಖಲೆ ಇದೆ. ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ಇಂಧನ ಇಲಾಖೆಯ ಅಕ್ರಮ ಬಯಲು ಮಾಡುತ್ತೇನೆ ಅಂತ ಹೇಳಿದ್ದಾರೆ.

    ವಿಜಯ್ ಶಂಕರ್ ಪಕ್ಷ ತೊರೆಯುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಜಯ್ ಶಂಕರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಅವರು ಚುನಾವಣೆಗೆ ನಿಲ್ಲಬಹುದಿತ್ತು. ಆದ್ರೆ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಗೊತ್ತಿಲ್ಲ ಅಂತ ಹೇಳಿದ್ರು.

  • ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು

    ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು

    ಧಾರವಾಡ: ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಗರದ ಉಣಕಲ್ ಕ್ರಾಸ್‍ನಲ್ಲಿ ನಡೆದಿದೆ.

    ಪ್ರವೀಣ್ ನವಲಗುಂದ ಎಂಬವರ ಮನೆಯಲ್ಲಿದ್ದ ಪಟಾಕಿ ಬಾಕ್ಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪಟಾಕಿ ಸಿಡಿದ್ದಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಹೊತ್ತಿ ಉರಿದಿವೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನೇ ಆವರಿಸಿ ಧಗಧಗನೆ ಉರಿದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ರಾತ್ರಿಯಿಡೀ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

    ಈ ಬಾರಿಯ ದೀಪಾವಳಿ ಸುಮಾರು 40ಕ್ಕೂ ಹೆಚ್ಚು ಮಕ್ಕಳ ಬದುಕನ್ನ ಕತ್ತಲು ಮಾಡಿದೆ. ಶುಕ್ರವಾರ ರಾತ್ರಿ ಸುಮಾರು 14 ಜನ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಂಡಿದ್ದಾರೆ. ಚಾಮರಾಜಪೇಟೆಯ ಸಿದ್ದರಾಜು ರಾಕೆಟ್ ಹಚ್ಚಲು ಹೋಗಿ ಅದೇ ಈತನಿಗೆ ತಿರುಗುಬಾಣವಾಗಿದೆ. ಆಂಧ್ರ ಮೂಲದ ಸುಧಾಕರ್ ಪಟಾಕಿ ಹಚ್ಚಲು ಹೋಗಿ ತನ್ನ ಎಡಗಣ್ಣನ್ನ ಕಳೆದುಕೊಂಡಿದ್ದಾನೆ. ಸದ್ಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಹುಬ್ಬಳ್ಳಿ: ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಜಾನುವಾರಗಳು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗಣೇಶ ಪೇಟೆಯ ಬಡಾವಣೆಯಲ್ಲಿ ನಡೆದಿದೆ.

    ನಗರದ ಗಣೇಶ ಪೇಟೆ ಶೆಟ್ಟರ್ ಓಣಿಯಲ್ಲಿ ಮಲ್ಲಿಕಾರ್ಜುನ್ ಕೊರವಿ ಅವರ ಶಿಥಿಲಾವಸ್ಥೆಯಲ್ಲಿದ್ದ, ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದಿದೆ. ಈ ಪರಿಣಾಮ ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿವೆ.

    ಎತ್ತುಗಳನ್ನು ಕಳೆದುಕೊಂಡಿದ್ದರಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಮಲ್ಲಿಕಾರ್ಜುನ್ ಅವರ ಮಗಳು ವನಜಾ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಯಂತ್ರ ಬಳಸಿ ಎತ್ತುಗಳನ್ನು ಹೊರ ತೆಗೆಯಲು ಗ್ರಾಮಸ್ಥರ ಸಹಾಯದಿಂದ ಪೊಲೀಸ್ ಸಿಬ್ಬಂದಿ ಹೊರ ತೆಗೆದಿದ್ದಾರೆ.

  • ಭಾರೀ ಮಳೆಗೆ ಬೆಳೆ ಸಂಪೂರ್ಣ ಹಾಳಾಗಿದ್ರೂ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ ತೋಟಗಾರಿಕಾ ಅಧಿಕಾರಿಗಳು!

    ಭಾರೀ ಮಳೆಗೆ ಬೆಳೆ ಸಂಪೂರ್ಣ ಹಾಳಾಗಿದ್ರೂ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ ತೋಟಗಾರಿಕಾ ಅಧಿಕಾರಿಗಳು!

    ಕಲಬುರಗಿ/ಹುಬ್ಬಳ್ಳಿ: ಕಳೆದ ಒಂದು ತಿಂಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಕಲಬುರಗಿಯ ಚಿತ್ತಾಪುರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಸಜ್ಜಾ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.

    ಆದ್ರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತು, ಸಜ್ಜಾ ಬೆಳೆ ಬೆಳೆದೇ ಇಲ್ಲ ಅಂತ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ. ಈ ವರದಿ ಸುಳ್ಳು ಅಂತ ರೈತ ಮುಖಂಡರೇ ಖುದ್ದು ಸರ್ವೇ ಮಾಡಿ ಇದನ್ನ ತೋಟಗಾರಿಕೆ ಇಲಾಖೆಗೆ ತೋರಿಸಿ ಸರಿಯಾದ ವರದಿ ಸಲ್ಲಿಸುವಂತೆ ಆಗ್ರಹಿಸಿದ್ದಾರೆ.

    ಇತ್ತ ಚಿಕ್ಕೋಡಿಯ ರಾಯಭಾಗ ಹಾಗೂ ಗೋಕಾಕ್ ಭಾಗದಲ್ಲಿ ರೈತರು ಕಷ್ಟಪಟ್ಟು ಬೆಳದಿದ್ದ ಕಬ್ಬು, ಗೋವಿನ ಜೋಳ, ಮುಸುಕಿನ ಜೋಳ ಸೈನಿಕ ಹುಳುವಿನ ಪಾಲಾಗಿದೆ.

    ಹುಬ್ಬಳ್ಳಿಯ ಬಡಿಗೇರ ಓಣಿಯಲ್ಲಿ ಮನೆಯ ಗೋಡೆ ಕುಸಿದು ಒಂದು ಕಾರು ಹಾಗೂ ಎರಡು ಬೈಕ್ ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟಿನಲ್ಲಿ ಭಾರೀ ಮಳೆಯಿಂದ ರಾಜ್ಯದ ರೈತರ ಬದುಕು ಮೂರಾಬಟ್ಟೆಯಾಗಿದೆ.