Tag: ಹುಬ್ಬಳ್ಳಿ ವಿಮಾನ ನಿಲ್ದಾಣ

  • ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ 2 ವರ್ಷದಲ್ಲಿ ಪೂರ್ಣ – ಜೋಶಿ ವಿಶ್ವಾಸ

    ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ 2 ವರ್ಷದಲ್ಲಿ ಪೂರ್ಣ – ಜೋಶಿ ವಿಶ್ವಾಸ

    – ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ಗೆ ಭಾನುವಾರ ಚಾಲನೆ

    ಹುಬ್ಬಳ್ಳಿ: ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಿಸಲು ಭಾನುವಾರ (ಇಂದು) ಚಾಲನೆ ನೀಡಿರುವ ವಾಣಿಜ್ಯ ನಗರಿ ಹುಬ್ಬಳಿ ವಿಮಾನ ನಿಲ್ದಾಣ ಕಾಮಗಾರಿ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿಶ್ವಾಸ ವ್ಯಕ್ತಪಡಿಸಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ (Hubli International Airport Terminal) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಅವರು ಮಾತನಾಡಿದರು. ಇದನ್ನೂ ಓದಿ: ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ಸುಮಾರು 340 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ವೇಗವಾಗಿ ಕಾಮಗಾರಿ ನಿರ್ವಹಿಸಲಾಗುತ್ತದೆ. 2 ವರ್ಷಗಳ ನಂತರ ಇಲ್ಲಿ 4 ರಿಂದ 10 ವಿಮಾನಗಳ ಪಾರ್ಕಿಂಗ್ (Airport  Parking) ವ್ಯವಸ್ಥೆ ಸಾಧ್ಯವಾಗಲಿದೆ. ನಿತ್ಯ 2,400 ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಭಾನುವಾರ ಪ್ರಧಾನಿ ಮೋದಿಯವರು ಭಾರತದಾದ್ಯಂತ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿಯೂ ಒಂದಾಗಿತ್ತು. 350 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಕರ್ಯದೊಂದಿಗೆ ಹುಬ್ಬಳ್ಳಿ ಹೊಸ ಟರ್ಮಿನಲ್ ಕಂಗೊಳಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ ಉಳಿಸಿ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕೌಸ್ತವ್ ಬಾಗ್ಚಿ

    ಅಭಿವೃದ್ಧಿ ಹೊಂದುತ್ತಿರುವ ಅವಳಿ ನಗರಗಳಿಗೆ ಈ ಹೊಸ ಕಾಮಗಾರಿ ಹೆಮ್ಮೆಯ ಗರಿಯಾಗಲಿದ್ದು, ವಿಕಸಿತ ಭಾರತಕ್ಕೆ (Vikasit Bharat) ತನ್ನದೆ ಆದ ಕೊಡುಗೆ ನೀಡಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ್‌, ಮಹೇಶ್ ಟೆಂಗಿನಕಾಯಿ, ಎಮ್.ಆರ್ ಪಾಟೀಲ್, ಪ್ರಸಾದ ಅಬ್ಬಯ್ಯ, ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಭಾರದ್ವಾಡ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರತಾಪ್ ಸಿಂಹ 10 ವರ್ಷದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ, ಟಿಕೆಟ್ ಸಿಗುವ ವಿಶ್ವಾಸವಿದೆ: ಜಿಟಿಡಿ

  • ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ಅನುದಾನ

    ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ಅನುದಾನ

    ನವದೆಹಲಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ (Hubli Airport Terminal) ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ 273 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅನುದಾನ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರಿಗೆ ಉತ್ತರ ಕರ್ನಾಟಕದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್

    ವಿಮಾನ ನಿಲ್ದಾಣದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಪ್ರಸ್ತಾವನೆಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸಿದೆ. 273 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ನ ನೆಲ ಮತ್ತು ಮೊದಲ ಮಹಡಿಯನ್ನು 20,000 ಚದರ ಮೀಟರ್‌ಗೆ ವಿಸ್ತರಣೆ ಮಾಡಲಾಗುವುದು. ಇದರಿಂದ ದಟ್ಟಣೆಯ ಸಮಯದಲ್ಲಿ 1,400 ಜನರು ಏಕಕಾಲದಲ್ಲಿ (ಆಗಮಿಸುವ ಮತ್ತು ನಿರ್ಗಮಿಸುವ) ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ಇದನ್ನೂ ಓದಿ: 370 ದಿನ, 8640 ಕಿ.ಮೀ – ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಕೇರಳದ ವ್ಯಕ್ತಿ

    ವಿಸ್ತರಣೆ ಕಾಮಗಾರಿ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ಪ್ರಹ್ಲಾದ್ ಜೋಶಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

  • ಹುಬ್ಬಳ್ಳಿ, ಹೈದರಾಬಾದ್ ನಡುವಿನ ವಿಮಾನ ಪಯಣಕ್ಕೆ ಹಸಿರು ನಿಶಾನೆ

    ಹುಬ್ಬಳ್ಳಿ, ಹೈದರಾಬಾದ್ ನಡುವಿನ ವಿಮಾನ ಪಯಣಕ್ಕೆ ಹಸಿರು ನಿಶಾನೆ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಹೈದರಾಬಾದ್ ನಗರಕ್ಕೆ ವಿಮಾನಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನ ಬೇಡಿಕೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಲೈಯನ್ಸ್ ಏರ್ ವೇಸ್ ನಿಂದ ಹೈದರಾಬಾದ್ ನಗರಕ್ಕೆ ಆರಂಭಿಸಲಾದ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ವಾರದಲ್ಲಿ ಮೂರು ದಿನ ಹೈದರಾಬಾದ್ ನಗರಕ್ಕೆ ವಿಮಾನ ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಮುಂದಿನ ದಿನಗಳಲ್ಲಿ ವಾರದ ಏಳು ದಿನವೂ ಸೇವೆ ವಿಸ್ತರಿಸಲಾಗುವುದು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯವರ ವಿಶೇಷ ಪ್ರಯತ್ನದಿಂದ ಹೈದರಾಬಾದ್ ನಗರಕ್ಕೆ ವಿಮಾನ ಯಾನ ಸೇವೆ ಆರಂಭವಾಗಿದೆ. ಅವರಿಗೆ ವಿಶೇಷ ಧನ್ಯವಾದಗಳು. ಹುಬ್ಬಳ್ಳಿ ಮಂಗಳೂರಿಗೆ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಬೇಡಿಕೆ ಇದೆ. ಇದನ್ನು ಸಹ ಶೀಘ್ರವಾಗಿ ಪ್ರಾರಂಭಿಸಲಾಗುವುದು.

    ಹುಬ್ಬಳ್ಳಿಯಲ್ಲಿ ರಾತ್ರಿ ಸಹ ವಿಮಾನ ಇಳಿಯಲು ಅವಕಾಶವಿದೆ. ಸ್ವಯಂ ಚಾಲಿತ ಲ್ಯಾಂಡಿಗ್ ಗೆ ವ್ಯವಸ್ಥೆಯಿದೆ. ಈಗಿನ ರನ್ ವೇ ಟ್ರಾಕ್ ವಿಸ್ತರಣೆ ಮಾಡಲಾಗುವುದು. ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ನೇರವಾಗಿ ವಿಮಾನ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ರನ್ ವೇ ವಿಸ್ತರಿಸಿದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗಲಿವೆ. ಈಗಾಗಲೇ ಮುಂಬೈ, ಅಹಮದಾಬಾದ್, ಕೊಚ್ಚಿ, ಕೊಣ್ಣೂರ್, ಗೋವಾಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ. ಕೊರೊನಾ ನಂತರದ ಸ್ಥಿತಿಗತಿಗಳನ್ನು ನೋಡಿಕೊಂಡು ಇತರೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಟ್ರೂ ಜಟ್ ಮಾಲೀಕರೊಂದಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಮಾತುಕತೆ ನಡೆಸಲಾಗಿದೆ ಎಂದರು.

    ಅಲೈಯನ್ಸ್ ಏರವೇಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಪ್ರ್ರೀತ್ ಎ ಡಿ ಸಿಂಗ್ ಮಾತನಾಡಿ, ಏರ್ ಇಂಡಿಯಾ ಭಾರತೀಯರ ಹೃದಯವನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಹುಬ್ಬಳ್ಳಿ ಮಹತ್ವದ ನಗರವಾಗಿದ್ದು ವಿಮಾನಯಾನ ಸಂಪರ್ಕದ ಅವಶ್ಯಕತೆ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನವಿ ಮೇರೆಗೆ ಹೈದರಾಬಾದ್ ನಗರಕ್ಕೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕ ಹಾಗೂ ತೆಲಂಗಾಣದ ಮಧ್ಯದ ಬಾಂಧವ್ಯ ವೃದ್ಧಿಯಾಗಲಿದೆ. ಅಲೈಯನ್ಸ್ ಏರ್ ವೇಸ್ ಗೋರಖ್ ಪುರ ದಿಂದ ಲಕ್ನೋ, ಬರೇಲಿಯಿಂದ ದೆಹಲಿ, ಬಿಲಾಸಪುರ್ ಜಬಲ್ ಪುರ್ ಹೀಗೆ ಹಲವು ನಗರಗಳಲ್ಲಿ ವಿಮಾನಯಾನ ಸೌಲಭ್ಯ ವಿಸ್ತರಿಸಿದೆ. ದಕ್ಷಿಣ ಭಾರತದಲ್ಲಿ ಮೈಸೂರುನಿಂದ ಮಂಗಳೂರು, ಕ್ಯಾಲಿಕಟ್, ಕಲಬುರ್ಗಿಯಿಂದ ಮುಂಬೈ ಹೀಗೆ ನಾನಾ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೆಚ್ ಎ ಎಲ್ ನೊಂದಿಗೆ ನಾಗರಿಕ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ್ ಠಾಕರೆ, ವಿಮಾನ ನಿಲ್ದಾಣ ಭದ್ರತಾಧಿಕಾರಿ ಜಗದೀಶ್ ಹಂಚಿನಾಳ್, ಏರ್ ಇಂಡಿಯಾ ಸಿಬ್ಬಂದಿ ನಾಗೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಯ ಬಾನಂಗಳದಲ್ಲೇ ಕೆಲಕಾಲ ಆತಂಕದ ಪರಿಸ್ಥಿತಿ ಎದುರಿಸಬೇಕಾಯಿತು. ತಾಂತ್ರಿಕ ದೋಷದಿಂದ ಆಗಿದೆ ಎನ್ನಲಾದ ಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆಗಿದ್ದ ಕೌಶಲ್ ವಿದ್ಯಾರ್ಥಿ ಎಂಬವರು ರಾಜ್ಯ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

    ಇಂದು ಬೆಳಗ್ಗೆ ಏನಾಯ್ತು?: ಕರಾವಳಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸುತ್ತಿದ್ದ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕೌಶಲ್ ದೂರಿನಲ್ಲಿ ಹೇಳಿದ್ದಾರೆ.

    ನಾನು ರಾಹುಲ್ ಗಾಂಧಿ ಸೇರಿ ನಾಲ್ವರ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಮ್ಮ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದ್ದರು. ಅಲ್ಲದೆ ರಾಮ್ ಪ್ರೀತ್, ರಾಹುಲ್ ರವಿ ಹಾಗೂ ಎಸ್‍ಪಿಜಿ ಅಧಿಕಾರಿಯಾಗಿದ್ದ ರಾಹುಲ್ ಗೌತಮ್ ಜೊತೆಗಿದ್ದರು. ದೆಹಲಿಯಿಂದ ಸುಮಾರು 9.20ಕ್ಕೆ ಹೊರಟ ವಿಮಾನ 11.45ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು.

    ಆದರೆ ಈ ಪ್ರಯಾಣದ ವೇಳೆ ನಮಗೆ ಹಲವು ತಾಂತ್ರಿಕ ತೊಂದರೆಗಳು ಎದುರಾದವು. ಸುಮಾರು 10.45ರ ವೇಳೆಗೆ ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತು. ವೇಗವಾಗಿ ಆಗಸದಿಂದ ಕೆಳಗಿಳಿಯುತ್ತಿರುವಂತೆ ಭಾಸವಾಯಿತು. ಹೊರಗೆ ಬಿಸಿಲು ಹಾಗೂ ಸಾಮಾನ್ಯ ವಾತಾವರಣವಿತ್ತು. ಯಾವುದೇ ರೀತಿಯ ವೇಗದ ಗಾಳಿಯೂ ಬೀಸುತ್ತಿರಲಿಲ್ಲ.

    ವಿಮಾನದ ಒಂದು ಭಾಗದಿಂದ ಸದ್ದು ಕೇಳುತ್ತಿತ್ತು. ಅಲ್ಲದೆ ನಾವು ಹೋಗಿ ಚೆಕ್ ಮಾಡಿದಾಗ ವಿಮಾನದ ಅಟೋ ಪೈಲಟ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಮೂರು ಬಾರಿ ವಿಮಾನವನ್ನು ಲ್ಯಾಂಡ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮೂರನೇ ಯತ್ನದಲ್ಲಿ ವಿಮಾನ ಲ್ಯಾಂಡ್ ಆಯಿತು. ನಾವು ಪ್ರಯಾಣಿಸುತ್ತಿದ್ದ ವಿಮಾನ ಬೆಳಗ್ಗೆ 11.25ರ ವೇಳೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯಿತು. ಈ ವೇಳೆ ವಿಮಾನ ಅಲುಗಾಡುತ್ತಿತ್ತು, ಜೊತೆಗೆ ನಮಗೆ ವಿಮಾನದಿಂದ ವಿಚಿತ್ರ ಶಬ್ದ ಕೇಳಿಸುತ್ತಿತ್ತು.

    ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ ಎಲ್ಲರಿಗೂ ಜೀವಭಯವಾಗಿತ್ತು. ಎಲ್ಲರ ಮುಖದಲ್ಲೂ ಆತಂಕ ಕಾಣಿಸುತ್ತಿತ್ತು. ಅಲ್ಲದೆ ವಿಮಾನದ ಸಿಬ್ಬಂದಿಯೂ ವಿಮಾನದ ವಿಚಿತ್ರ ಅನುಭವವನ್ನು ಖಚಿತಪಡಿಸಿದರು. ವಿಮಾನದಲ್ಲಿ ನಮಗಾದ ಅನುಭವ ಸಾಮಾನ್ಯವಾದುದಾಗಿರಲಿಲ್ಲ. ಹವಾಮಾನಕ್ಕೆ ಸಂಬಂಧಿಸಿದ್ದೂ ಆಗಿರಲಿಲ್ಲ. ವಿಮಾನದ ತಾಂತ್ರಿಕ ದೋಷದಿಂದಾಗಿಯೇ ಇಷ್ಟೆಲ್ಲಾ ಘಟನೆಗಳು ನಡೆಯಿತು. ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಈ ಸ್ಥಿತಿಗೆ ತಂದಿದ್ರಾ ಎಂಬುದನ್ನೂ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು.

    ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ವಿಮಾನದ ಸೂಕ್ತ ತಪಾಸಣೆ ನಡೆಸಬೇಕು. ವಿಮಾನದ ನಿರ್ವಹಣೆಯನ್ನು ಮಾಡುತ್ತಿದ್ದ ವ್ಯಕ್ತಿಗಳನ್ನು ಕೂಡಾ ವಿಚಾರಣೆಗೊಳಪಡಿಸಬೇಕು. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಬೇಕು. ಈ ವಿಮಾನವನ್ನು ತನಿಖೆ ಮುಗಿಯುವವರೆಗೆ ಹುಬ್ಬಳ್ಳಿಯಲ್ಲೇ ಇಟ್ಟುಕೊಳ್ಳಬೇಕು. ತನಿಖೆ ಮುಗಿಯುವವರೆಗೆ ಈ ವಿಮಾನದ ಹಾರಾಟಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

    ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

    ಘಟನೆ ಬಗ್ಗೆ ಟ್ವೀಟ್ ಮಾಡಿರುವ ನಟಿ ಹಾಗೂ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ, ಆಟೋ ಪೈಲಟ್ ಮಾತ್ರವಲ್ಲ, ವಿಮಾನದ ರಾಡಾರ್ ಸಂಪರ್ಕದಲ್ಲೂ ತೊಂದರೆಯಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಘಟನೆ ವೇಳೆ ವಿಮಾನದಲ್ಲಿದ್ದ ಕೌಶಲ್ ಕೆ ವಿದ್ಯಾರ್ಥಿ ರಾತ್ರಿ 10.09ಕ್ಕೆ ಟ್ವೀಟ್ ಮಾಡಿದ್ದಾರೆ. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನಾನು ಜೀವಂತವಾಗಿರುವುದಕ್ಕೆ ಧನ್ಯವಾದ. ನನ್ನ ಜೀವನದಲ್ಲಿ ಇಂತಹ ಭಯಾನಕ ಸ್ಥಿತಿ ಎದುರಿಸಿರಲಿಲ್ಲ. ವಿಮಾನ ಬೀಳುತ್ತೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ನಮ್ಮ ಅಧ್ಯಕ್ಷರು ಶಾಂತಚಿತ್ತರಾಗಿ ಪೈಲಟ್‍ಗಳ ಜೊತೆ ಮಾತನಾಡಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಗಮನಹರಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಶೇಷ ವಿಮಾನದ ಇಬ್ಬರು ಪೈಲಟ್‍ಗಳ ವಿರುದ್ಧ ಕರ್ತವ್ಯ ಲೋಪ ಆರೋಪದಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕಿರ್ ಸನದಿ ನೀಡಿದ ದೂರಿನ ಅನ್ವಯ ಏರ್ ಕ್ರಾಫ್ಟ್ ಕಾಯ್ದೆ 287, 336, ಐಪಿಸಿ ಸೆಕ್ಷನ್ 11 ಅನ್ವಯ ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಮೋದಿ ದೂರವಾಣಿ ಕರೆ: ಸದ್ಯ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅವರ ವಿಮಾನ ಸಂಪರ್ಕ ಕಳೆದುಕೊಂಡ ಮಾಹಿತಿ ತಿಳಿದು ಚೀನಾದಿಂದ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಅಲ್ಲದೆ ಪ್ರಧಾನಮಂತ್ರಿ ಕಾರ್ಯಾಲಯವೂ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ.