ಬೀಜಿಂಗ್: ಚೀನಾದ ಹುಬೆ ಪ್ರಾಂತ್ಯದಲ್ಲಿ ಹೇರಲಾಗಿದ್ದ ಲಾಕ್‍ಡೌನ್ ತೆರವುಗೊಳಿಸಿದ ಬೆನ್ನಲ್ಲೇ ಅಲ್ಲಿನ ಜನ ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ವುಹಾನ್ ಪ್ರಾಂತ್ಯದಲ್ಲಿ ವೈರಸ್ ಪತ್ತೆಯಾದ ಬಳಿಕ ಸುಮಾರು 5.6 ಕೋಟಿ ಜನರು ಇರುವ ಹುಬೆ ಪ್ರಾಂತ್ಯವನ್ನು ಜನವರಿ 23ರಿಂದ ಲಾಕ್‍ಡೌನ್ ಮಾಡಲಾಗಿತ್ತು. ವೈರಸ್ ಸೋಂಕಿತರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗಿತ್ತು.
ತೆರವು ಹಿನ್ನೆಲೆಯಲ್ಲಿ ಹತ್ತಿರದ ಜಿಯಾಂಗ್ಸಿ ಪ್ರಾಂತ್ಯಕ್ಕೆ ಹೋಗಲು ಜನ ಮುಂದಾಗಿದ್ದಾರೆ. ಎರಡೂ ಪ್ರಾಂತ್ಯಗಳನ್ನು ಸಂಪರ್ಕಿಸುವ ಸೇತುವೆ ಬಳಿ ಜನರು ಸೇರಿದಾಗ ಅವರನ್ನು ಪೊಲೀಸರು ತಡೆದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನ ಈ ವೇಳೆ ಸಿಟ್ಟಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ಧ್ವಂಸ ಮಾಡಿದ್ದಾರೆ ಎಂದು ವರದಿಯಾಗಿದೆ.
https://twitter.com/fiteray/status/1243458046992371713
ಕೊರೊನಾ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದಿಲ್ಲ ಎಂದು ತಿಳಿಯಲು ಚೀನಾ ಸರ್ಕಾರ ಹಸಿರು ಕಾರ್ಡ್ ನೀಡುತ್ತಿದೆ. ಈ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಹುಬೆ ಪ್ರಾಂತ್ಯದಿಂದ ಹೊರಹೋಗಲು ಸರ್ಕಾರ ಅನುಮತಿ ನೀಡಿತ್ತು. ಶುಕ್ರವಾರ ಜನ ಸೇರಿದಾಗ ಬ್ಯಾರಿಕೇಡ್ ಹಾಕಿ ಸೇತುವೆ ಬಂದ್ ಆಗಿದ್ದನ್ನು ಕಂಡು ಜನ ರೊಚ್ಚಿಗೆದ್ದು ವಾಹನಗಳನ್ನು ಧ್ವಂಸಗೈದಿದ್ದಾರೆ.
ಈ ಗಲಾಟೆ ಹೇಗೆ ನಡೆಯಿತು ಎಂಬುದು ತಿಳಿದು ಬಂದಿಲ್ಲ. ಎರಡು ಪ್ರಾಂತ್ಯಗಳ ಪೊಲೀಸರು ಗಲಾಟೆಯ ಬಗ್ಗೆ ಪ್ರತ್ಯೇಕ ಹೇಳಿಕೆಯ ವಿಡಿಯೋವನ್ನು ಆನ್ ಲೈನಲ್ಲಿ ಹಾಕಿದ್ದರು. ನಂತರ ಈ ವಿಡಿಯೋವನ್ನು ಆನ್ ಲೈನಿನಿಂದ ತೆಗೆಯಲಾಗಿದೆ.
https://twitter.com/FarhangNamdar/status/1243577616793305097
ಕಮ್ಯೂನಿಸ್ಟ್ ಸರ್ಕಾರದ ಆಡಳಿತದಲ್ಲಿ ಜನರು ಈ ರೀತಿ ಆಕ್ರೋಶ ವ್ಯಕ್ತಪಡಿಸುವುದು ಬಹಳ ಅಪರೂಪದ ವಿದ್ಯಮಾನವಾಗಿದ್ದು, ಗಲಾಟೆಯ ದೃಶ್ಯಗಳು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈಗ ಗಲಾಟೆಗೆ ಸಂಬಂಧಿಸಿದ ವಿಚಾರಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
