Tag: ಹುತಾತ್ಮ

  • ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಬೆಳಗಾವಿ (ಚಿಕ್ಕೋಡಿ): ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂದಿಹಾಳ್ ಗ್ರಾಮದ ಯೋಧ ವೀರ ಮರಣವನ್ನಪ್ಪಿದ್ದಾರೆ.

    ಪ್ರಕಾಶ್ (ಭೋಜರಾಜ್) ಪುಂಡಲೀಕ ಜಾಧವ್ (28) ಹುತಾತ್ಮ ಯೋಧರಾಗಿದ್ದಾರೆ. ಯೋಧ ಭೋಜರಾಜ್ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಹೋರಾಡಿ, ವೀರ ಸ್ವರ್ಗವನ್ನಪ್ಪಿದ್ದಾರೆ.

    ಭೋಜರಾಜ್ ಮರಾಠಾ ರೆಜಿಮೆಂಟಿನಲ್ಲಿ ಕಳೆದ 11 ವರ್ಷಗಳಿಂದ ಯೋಧರಾಗಿದ್ದರು. ಅಲ್ಲದೇ ಇವರ ತಂದೆಯೂ ಕೂಡ ನಿವೃತ್ತ ಸೈನಿಕರಾಗಿದ್ದಾರೆ. ಮೃತ ಭೋಜರಾಜ್ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಮುದ್ದಾದ ಮೂರು ತಿಂಗಳ ಹೆಣ್ಣು ಮಗುವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಮುಗಿಸಿ ಸೇನೆಗೆ ವಾಪಾಸ್ಸಾಗಿದ್ದರು. ಯೋಧ ಭೋಜರಾಜ್ ಹೆಂಡತಿ, ಮಗು, ತಂದೆ-ತಾಯಿ ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

    ಜಾಧವ್ ಸಾವಿನ ಸುದ್ದಿಯಿಂದಾಗಿ ಕುಟುಂಬಸ್ಥರು ಹಾಗೂ ಸ್ವಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ. ಬುಧವಾರ ಮಧ್ಯಾಹ್ನ ಯೋಧ ಜಾಧವ್ ರ ಪಾರ್ಥಿವ ಶರೀರ ಬೂದಿಹಾಳ ಗ್ರಾಮಕ್ಕೆ ಬರುತ್ತದೆಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ಬೆಳಗಾವಿ: ಸಿಆರ್​ಪಿಎಫ್ ಯೋಧ ಉಮೇಶ್ ಅವರ ಪಾರ್ಥಿವ ಶರೀರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹುತಾತ್ಮ ಯೋಧನಿಗೆ ವಿಮಾನ ನಿಲ್ದಾಣದಲ್ಲೇ ಗೌರವ ಸಲ್ಲಿಸಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದರು.

    ಗೋಕಾಕ್ ಸಿಆರ್​ಪಿಎಫ್ ಯೋಧ ಮಣಿಪುರದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದ್ದೇವೆ. ಹುತಾತ್ಮ ಯೋಧ ಉಮೇಶ್ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ಧೈರ್ಯ ಹಾಗೂ ಸಾಹಸಕ್ಕೆ ನಾನು ನನ್ನ ನಮನವನ್ನು ಸಲ್ಲಿಸುತ್ತೇನೆ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

    ಅಲ್ಲದೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಜಮಖಂಡಿ ಚುನಾವಣೆ ಉಸ್ತುವಾರಿ ಆಗಿ ನನ್ನನ್ನು ನೇಮಕ ಮಾಡಿದ್ದಾರೆ. 5 ಕ್ಷೇತ್ರದಲ್ಲಿ ನಮ್ಮ ಗೆಲ್ಲುವು ನಿಶ್ಚಿತವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಮುಂದಿನ ಲೋಕಸಭಾ ಚುನಾವಣೆಗೆ ಈ ಎಲೆಕ್ಷನ್ ದಿಕ್ಸೂಚಿ ಅಲ್ಲ. ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಫ್ರೆಂಡ್ಸ್. ಅವರಿಬ್ಬರು ಮಾತನಾಡುವುದು ಸಹಜ. ಇವರಿಬ್ಬರಿಗೂ ಬಹಿರಂಗವಾಗಿ ಮಾತನಾಡದಿರಲು ಸೂಚಿಸುತ್ತೇವೆ. ಎಂಇಎಸ್ ಕರಾಳ ದಿನ ಆಚರಣೆ ಹೊಸದಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ರಾಯ್ಪುರ್: ನಕ್ಸಲರ ದಾಳಿಯಿಂದ ವೀರಮರಣವನ್ನಪ್ಪಿದ್ದ ಪೊಲೀಸ್ ಪೇದೆಯ ಪ್ರತಿಮೆಗೆ ಆತನ ತಂಗಿಯು ರಾಕಿ ಕಟ್ಟುವ ಮೂಲಕ ಛತ್ತೀಸಘಡ್‍ದ ದಾಂತೆವಾಡದಲ್ಲಿ ರಕ್ಷಾಬಂಧನವನ್ನು ಆಚರಿಸಿದ್ದಾರೆ.

    ದಾಂತೆವಾಡದ ಶಾಂತಿ ಉದೆ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಶಾಂತಿಯ ಅಣ್ಣ ರಾಜೇಶ್ ಗಾಯಕ್ವಾಡ್ ಪೊಲೀಸ್ ಪೇದೆಯಾಗಿದ್ದರು. 2014ರ ನಕ್ಸಲರ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಸಿಲುಕಿ ವೀರಮರಣವನ್ನಪ್ಪಿದ್ದರು. ಅಂದಿನಿಂದಲೂ ತಮ್ಮ ಊರಿನಲ್ಲಿರುವ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಸಂಪ್ರದಾಯವನ್ನು ಆರಂಭಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಅಣ್ಣನನ್ನು 2014ರ ಮಾರ್ಚ್ 11ರಂದು ನಕ್ಸಲ್ ಕಾರ್ಯಾಚರಣೆಗಾಗಿ ಸುಕ್ಮಾದ ತೊಂಗಾಪಾಲ್ ಪ್ರದೇಶಕ್ಕೆ ನೇಮಕ ಮಾಡಿದ್ದರು. ಆದರೆ ಅವನು ನಕ್ಸಲರ ದಾಳಿಗೆ ಹುತಾತ್ಮನಾದ. ನನ್ನ ಒಬ್ಬನೇ ಒಬ್ಬ ಅಣ್ಣನ ಸಾವಿನಿಂದಾಗಿ ನನಗೆ ತುಂಬಾ ದುಃಖವಾಯಿತು. ಕೊನೆಯವರೆಗೂ ರಾಕಿ ಕಟ್ಟುವ ಆಸೆಯಿಟ್ಟುಕೊಂಡಿದ್ದ ನನಗೆ ನಿರಾಸೆಯಾಯಿತು. ಹೀಗಾಗಿ ನಾನು ಅಂದಿನಿಂದಲೂ ನನ್ನ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಮೂಲಕ ಸಂಭ್ರಮಪಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ವಿಜಯಪುರ: ಅಸ್ಸಾಂನ ಗುವಾಹಾಟಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಅರುಣಾಚಲ ಪ್ರದೇಶ ಹಾಗೂ ಆಸ್ಸಾಂ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಸೈನ್ಯದಿಂದ 18 ಮಂದಿ ಯೋಧರು ಜೀಪ್ ನಲ್ಲಿದ್ದರು. ಆದರೆ ರಾತ್ರಿ ಇಡುಲಿ ಮತ್ತು ಕಾಬಾಂಗ್ ಗ್ರಾಮಗಳ ನಡುವೆ ಇದ್ದ ನದಿಯೊಳಗೆ ಇದ್ದಕ್ಕಿದ್ದಂತೆ ವಾಹನವು ಬಿದ್ದಿದೆ.

    ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಒಬ್ಬ ಯೋಧ ಕೂಡ ಸೇರಿದ್ದಾರೆ. ನಂತರ ಕೂಡಲೇ ಪೊಲೀಸ್ ಮತ್ತು ಸೇನೆಯವರು ರಕ್ಷಣಾ ಕಾರ್ಯಚರಣೆ ಮಾಡಿ 15 ಮಂದಿ ಯೋಧರನ್ನು ರಕ್ಷಿಸಿದ್ದಾರೆ. ಮೃತ ಮೂವರು ಯೋಧರಲ್ಲಿ ಒಬ್ಬರು ಇನ್ನು ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಇನ್ನು ಈ ಅವಘಡದಿಂದ ಗಾಯಗೊಂಡ ಸೈನಿಕರಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಚಾಪಕೋವಾ ಫಸ್ಟ್ ರೆಫರಲ್ ಘಟಕಕ್ಕೆ ರವಾನಿಸಲಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಸುರಾಮ ಖ್ಯಾತನ್ನವರ(32) ಮೃತ ಯೋಧ. ಇವರು 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರುವರಿ 9 ರಂದು ಕೋಲ್ಹಾರ ಪಟ್ಟಣದಲ್ಲಿ ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಫೆ. 11 ರಂದು ಸೇವೆಗಾಗಿ ತೆರಳಿದ್ದರು.

    ಮೃತರ ಕುಟುಂಬಕ್ಕೆ ಸೇನೆಯ ಮೇಜರ್ ಕರಿಯಪ್ಪ ಅವರಿಂದ ಮಾಹಿತಿ ರವಾನೆ ಆಗಿದೆ. ಇತ್ತ ಯೋಧನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ಬೀದರ್: ನಕ್ಸಲ್ ನಿಗ್ರಹ ಪಡೆಯ ಹೆಡ್ ಕಾನ್ ಸ್ಟೇಬಲ್ ಬೀದರ್ ಮೂಲದ ಬಿ.ಸುಶೀಲ್‍ಕುಮಾರ್ ಅವರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

    ಶುಕ್ರವಾರ ತಡರಾತ್ರಿ ತೆಲಂಗಾಣ-ಛತ್ತೀಸ್‍ಗಢ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾವೋ ನಕ್ಸಲ್ ದಮನದಲ್ಲಿ ಬೀದರ್‍ನ ಮೂಲದ ಪೊಲೀಸ್ ಪೇದೆ ಬಿ ಸುಶೀಲ್‍ಕುಮಾರ್ ಹುತಾತ್ಮನಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಿ. ಸುಶೀಲ್‍ಕುಮಾರ್ ಪಾರ್ಥಿವ ಶರೀರ ವಿಶೇಷ ಆಂಬುಲೆನ್ಸ್ ಮೂಲಕ ಬೀದರ್ ನಗರದ ಗ್ರೇಸ್ ಕಾಲೋನಿಯ ನಿವಾಸಕ್ಕೆ ಬಂದು ತಲುಪಿತ್ತು.

    ಹುತಾತ್ಮನ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಇಂದು ಬೀದರ್‍ನ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಗೆ ತೆಲಂಗಾಣ ಡಿಜಿಪಿ ಮಹೇಂದ್ರಕುಮಾರ್ ರೆಡ್ಡಿ ಬಂದು ಗೌರವ ಸಲ್ಲಿಸಿದ್ದಾರೆ.

    ರಾಜ್ಯ ಹಾಗೂ ತೆಲಂಗಾಣ ಪೊಲೀಸ್ ರಿಂದ ಜಂಟಿ ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ನಡೆದಿದೆ. ಸಂಬಂಧಿಕರು ಹಾಗೂ ಪೊಲೀಸ್ ಬಾಂಧವರು ಭಾಗಿಯಾಗಿದ್ದರು.

    ಬಿ.ಸುಶೀಲ್‍ಕುಮಾರ್ ತೆಲಂಗಾಣದ ಹೈದರಾವಾದ್ ನ ಗ್ರೇಹಹುಣ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಾರ್ಯಾಚರಣೆಯಲ್ಲಿ 10 ಜನ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

  • ಅರುಣಾಚಲಪ್ರದೇಶದ ತವಾಂಗ್ ನಲ್ಲಿ ಹಾವೇರಿ ಯೋಧ ಹುತಾತ್ಮ

    ಅರುಣಾಚಲಪ್ರದೇಶದ ತವಾಂಗ್ ನಲ್ಲಿ ಹಾವೇರಿ ಯೋಧ ಹುತಾತ್ಮ

    ಹಾವೇರಿ: ಕರ್ತವ್ಯ ನಿರತ ಭಾರತೀಯ ಸೇನೆ ಯೋಧರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಹುತಾತ್ಮರಾಗಿದ್ದಾರೆ.

    ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ಚಂದ್ರಶೇಖರ ಡವಗಿ ಅವರು ಹುತಾತ್ಮರಾಗಿದ್ದಾರೆ. ಕರ್ತವ್ಯದ ವೇಳೆ ಭಂಗಾ ಎಂ.ಎಚ್ ಪ್ರದೇಶದಲ್ಲಿ ಆಮ್ಲಜನಕ ಕೊರತೆಯಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದಂತೆ ಗ್ರಾಮದಲ್ಲಿ ಆವರಿಸಿದ ಕಾರ್ಮೋಡ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಚಂದ್ರಶೇಖರ್ 16 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2002ರಲ್ಲಿ ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಸೇವೆಗೆ ಸೇರಿದ್ದ ಇವರು ಜನವರಿ 29 ರಂದು ರಜೆ ಮುಗಿಸಿ ಸೇನೆಗೆ ಮರಳಿದ್ದರು.

    ಮೃತ ಚಂದ್ರಶೇಖರ್ ಅವರು ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಕೆಲವೇ ತಿಂಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಪೂರ್ಣಗೊಳಿಸಿ ಊರಿಗೆ ವಾಪಸ್ಸಾಗುತ್ತಿದ್ದರು. ಯೋಧನ ಗ್ರಾಮಕ್ಕೆ ಶಿಗ್ಗಾಂವ ತಹಸೀಲ್ದಾರ ಶಿವಾನಂದ ರಾಣೆ ಭೇಟಿ ನೀಡಿದ್ದಾರೆ.

    ಇಂದು ಸಂಜೆ ವೇಳೆಗೆ ಹುತಾತ್ಮ ಯೋಧನ ಪಾರ್ಥೀವ ಶರೀರ ಸ್ವ ಗ್ರಾಮಕ್ಕೆ ಬರುವ ನಿರೀಕ್ಷೆ ಇದ್ದು, ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ ಕೂಡ ಹೇಳಿಕೆ ನೀಡಿದ್ದಾರೆ.

  • ಕಾಶ್ಮೀರದಲ್ಲಿ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿ ಶವವಾಗಿ ಪತ್ತೆ!

    ಕಾಶ್ಮೀರದಲ್ಲಿ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿ ಶವವಾಗಿ ಪತ್ತೆ!

    ಶ್ರೀನಗರ: ಸಂಬಂಧಿಕರ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

    ಶೋಪಿಯಾನ್ ಜಿಲ್ಲೆಯ ಹರ್ವೆನ್ ಪ್ರದೇಶದಲ್ಲಿ ಇಂದು ಬೆಳಗ್ಗೆ 22 ವರ್ಷದ ಉಮ್ಮರ್ ಫಯಾಜ್ ಶವ ಪತ್ತೆಯಾಗಿದ್ದು, ದೇಹದೊಳಗೆ ಗುಂಡು ಹೊಕ್ಕಿರುವುದು ಕಂಡು ಬಂದಿದೆ.

    ನಡೆದಿದ್ದೇನು?: ದಕ್ಷಿಣ ಕಾಶ್ಮೀರದ ಕುಲ್ಗಾನ್ ಗ್ರಾಮದ ನಿವಾಸಿಯಾಗಿರೋ ಉಮ್ಮರ್, ಸಂಬಂಧಿಕರ ಮದುವೆ ಇದೆ ಎಂದು ತನ್ನ ಕೆಲಸಕ್ಕೆ ರಜೆ ಹಾಕಿ ತೆರಳಿದ್ದರು. ಅಂತೆಯೇ ಮಂಗಳವಾರ ಸಂಜೆ ಮದುವೆಗೆ ತೆರಳಿದ್ದ ಅವರನ್ನು ಅಂದು ರಾತ್ರಿ 10 ಗಂಟೆ ಸುಮಾರಿಗೆ ಅಪಹರಿಸಲಾಗಿತ್ತು.

    ಸೈನ್ಯಾಧಿಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರ ತಿಳಿದ ಮೂವರು ಉಗ್ರರು, ಉಮ್ಮರ್ ಇದ್ದ ಸ್ಥಳಕ್ಕೆ ಗನ್‍ಗಳೊಂದಿಗೆ ಬಂದು ಮನೆಯಿಂದ ಹೊರಗೆಳೆದು ಬಳಿಕ ಅಲ್ಲಿಂದ ಅಪಹರಿಸಿದ್ದಾರೆ ಅಂತಾ ಸಂಬಂಧಿಕರು ತಿಳಿಸಿದ್ದಾರೆ.

    ಉಮ್ಮರ್ ಅಪಹರಣದಿಂದ ಆತಂಕಕ್ಕೀಡಾಗಿರೋ ಸಂಬಂಧಿಕರು ಜೀವಂತವಾಗಿ ಹಿಂದುರುಗಿ ಬರುತ್ತಾರೆ ಅಂತಾ ನಂಬಿದ್ದರು. ಈ ಬಗ್ಗೆ ಭಯದಿಂದಲೇ ಹೇಳಿಕೆ ನೀಡಿದ್ದರು. ಆದ್ರೆ ಇಂದು ಬೆಳಗ್ಗೆ ಉಮ್ಮರ್ ಶವವಾಗಿ ಪತ್ತೆಯಾಗಿದ್ದಾರೆ ಅಂದಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ ಉಮರ್ ಫಯಾಜ್ 6 ತಿಂಗಳ ಹಿಂದಷ್ಟೇ ಸೇನೆಗೆ ಸೇರ್ಪಡೆಯಾಗಿದ್ದರು. ಅಲ್ಲದೇ ಇವರು ಉತ್ತಮ ವಾಲಿಬಾಲ್ ಹಾಗೂ ಹಾಕಿ ಆಟಗಾರರೂ ಕೂಡ ಆಗಿದ್ದರು. ಪುಲ್ವಾಮಾ, ಶೋಪಿಯಾನ, ಅನಂತ್ನಾಗ್ ಹಾಗೂ ಕುಲ್ಗಾಮ್ ಪ್ರದೇಶದಲ್ಲಿ ಉಗ್ರರ ಉಪಟಳವಿದೆ. ಇದರಿಂದ ತನಗೆ ಅಪಾಯವಿದೆ ಅಂತಾ ಗೊತ್ತಿದ್ದರೂ ಫಾರೂಕ್ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಮದುವೆ ಮನೆಗೆ ತೆರಳಿರುವುದರಿಂದ ಈ ಘಟನೆ ಸಂಭವಿಸಿದೆ ಅಂತಾ ಮೂಲಗಳು ತಿಳಿಸಿವೆ.

    ಸೇನಾ ಪಡೆಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಫಾರೂಕ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವೊಬ್ಬ ಅಧಿಕಾರಿಯೂ ಉಗ್ರರ ಉಪಟಳ ತೀವ್ರವಾಗಿರುವ ಪ್ರದೇಶಗಳ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಬಾರದು ಎಂದು ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ನವದೆಹಲಿ: ಮೋದಿ ಕ್ರಮ ಕೂಗೊಳ್ಳಲು ವಿಫಲರಾದ್ರೆ ನಾನೇ ನನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ತೀನಿ ಎಂದು ಕುಪ್ವಾರದಲ್ಲಿ ಹುತಾತ್ಮರಾದ ಯೋಧರೊಬ್ಬರ ತಾಯಿ ಹೇಳಿಕೆ ನೀಡಿದ್ದಾರೆ.

    ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಸೇರಿ ಮೂವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಕ್ಯಾಪ್ಟನ್ ಆಯುಷ್ ಯಾದವ್, ಜೆಸಿಒ ಭೂಪ್ ಸಿಂಗ್ ಗುಜ್ಜರ್ ದುಸ್ಸಾ ಹಾಗೂ ನಾೈಕ್ ವೆಂಕಟ್ ರಮಣ್ ಹುತಾತ್ಮರಾದ ಸೈನಿಕರು. ಇಬ್ಬರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿತ್ತು.

    25 ವರ್ಷದ ಮಗ ಆಯುಷ್ ಯಾದವ್ ಉಗ್ರರ ದಾಳಿಗೆ ಬಲಿಯಾಗಿರೋದ್ರಿಂದ ಮನನೊಂದ ತಾಯಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಯನ್ನ ಒತ್ತಾಯಿಸಿದ್ದಾರೆ. ಒಂದು ವೇಳೆ ಪ್ರಧಾನಿಯವರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ರೆ ನಾನೇ ಮಗನ ಸಾವಿನ ಸೇಡು ತೀರಿಸುತ್ತೇನೆ ಅಂತಾ ತಿಳಿಸಿದ್ದಾರೆ.

    ಆಯುಷ್ ಯಾದವ್ ತಂದೆ ಅರುಣ್ ಕಂಟ್ ಯಾದವ್ ಕೂಡ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದು, ಈ ರೀತಿ ನಮ್ಮ ಮಕ್ಕಳು ಹತ್ಯೆಯಾಗೋದನ್ನ ಎಲ್ಲಿಯತನಕ ನೋಡಿಕೊಂಡಿರಲು ಸಾಧ್ಯ? ಎಂದಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಹೋರಾಟಗಾರರ ಬಗ್ಗೆ ಕಿಡಿಕಾರಿದ ಅವರು, ಇಂತಹ ಘಟನೆಗಳ ಬಗ್ಗೆ ಅವರು ತುಟಿ ಬಿಚ್ಚಲ್ಲ. ಸೈನಿಕರು ಪ್ರತೀಕಾರ ತೀರಿಸಿಕೊಂಡಾಗ ಮಾನವ ಹಕ್ಕುಗಳ ಹೋರಾಟಗಾರರು ದೂರುತ್ತಾರೆ. ಆದ್ರೆ ಈ ಘಟನೆ ಅವರಿಗೇನೂ ಅಲ್ಲ. ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದಾಗ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ, ತನಿಖೆಗಳು ನಡೆಯುತ್ತದೆ, ಕ್ರಮ ಕೈಗೊಳ್ತಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

    ನನ್ನ ಅಣ್ಣನ ಮಗಳು ಮತ್ತು ಆಕೆಯ ಗಂಡ ಇಬ್ಬರೂ ಮೇಜರ್‍ಗಳಾಗಿದ್ದಾರೆ. ನನ್ನ ಮಗ ಬದುಕಿದ್ದರೆ ಮುಂದೊಂದು ದಿನ ಆತನೂ ಮೇಜರ್ ಆಗ್ತಿದ್ದ ಅಂತಾ ಯಾದವ್ ಹೇಳಿದ್ರು.

    ದೇಶದಲ್ಲಿ ಯಾವ ರೀತಿಯ ವಾತಾವರಣ ಇದೆ ಅಂತ ನೀವು ನೋಡಬಹುದು. ಬಲವಾದ ನೀತಿ ಇಲ್ಲದಿದ್ರೆ ಮತ್ತು ಸೂಕ್ತ ಕ್ರಮ ಕೈಗೊಳ್ಳದಿದ್ರೆ ಇದು ಮುಂದುವರೆಯುತ್ತದೆ. ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಏನಾದ್ರೂ ಮಾಡಲೇಬೇಕು. ಬೇರೆ ಯಾರ ಮಕ್ಕಳಿಗೂ ಈ ರೀತಿ ಆಗಬಾರದು ಅಂತ ಯಾದವ್ ಮರುಗಿದ್ರು.

  • ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅಂತ್ಯಕ್ರಿಯೆ

    ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅಂತ್ಯಕ್ರಿಯೆ

    ಬೆಳಗಾವಿ: ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.

    ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಪ್ಪ ಭಜಂತ್ರಿ ಸೋಮವಾರ ಉಗ್ರರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದರು.

    ಬಸಪ್ಪ ಅವರು ಕಳೆದ 20 ವರ್ಷಗಳಿಂದ ಸಿಆರ್‍ಪಿಎಫ್ ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಶ್ರೀನಗರ ಪಟಾಣ್ ಚೌಕ್ ಬಳಿ ಯೋಧರು ಸಾಗುತ್ತಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬಸಪ್ಪ ಅವರು ಸೇರಿದಂತೆ 10 ಜನ ಯೋಧರು ವೀರ ಮರಣವನ್ನಪ್ಪಿದ್ದರು. ಮಂಗಳವಾರ ಶ್ರೀನಗರದಿಂದ ವಿಮಾನದ ಮೂಲಕ ಗೋವಾ ಮಾರ್ಗವಾಗಿ ಹುಟ್ಟೂರಿಗೆ ತಡರಾತ್ರಿ ಪಾರ್ಥೀವ ಶರೀರ ಆಗಮಿಸಿತ್ತು. ಪಾರ್ಥೀವ ಶರೀರ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ವೀರ ಯೋಧ ಬಸಪ್ಪ ಭಜಂತ್ರಿರಿಗೆ ಪತ್ನಿ ಹಾಗೂ ಮೂರು ಜನ ಮಕ್ಕಳಿದ್ದಾರೆ. ಬಸಪ್ಪ ಸೇವಾವಧಿಯ 20 ವರ್ಷ ಪೂರೈಸಿದ ನಂತರ ಸ್ವಯಂ ನಿವೃತ್ತಿ ಪಡೆಯಬಹುದಿತ್ತು. ಆದರೆ ಕುಟುಂಬ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬಸಪ್ಪನ ಸ್ವಯಂ ನಿವೃತ್ತಿ ತೆಗೆದುಕೊಂಡಿರಲಿಲ್ಲ. ನಂತರ ಸೇವೆ ಮುಂದುವರಿಸಿದ ಬಸಪ್ಪ ಅವರು ಇತ್ತೀಚಿಗೆ ಮತ್ತೆ ಎರಡು ವರ್ಷ ಸೇವಾವಧಿಯನ್ನು ಮುಂದುವರೆಸಲು ಬರೆದುಕೊಟ್ಟಿದ್ದರು. ಕೊನೆಗೆ ಆ ವಿಧಿ ಸೇವೆಯಲ್ಲಿದ್ದಾಗಲೇ ಬಸಪ್ಪರನ್ನು ಇಹಲೋಕಕ್ಕೆ ಕರೆಸಿಕೊಂಡಿದೆ. ಇನ್ನೂ ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಗ್ರಾಮದ ಶಾಲೆಯಲ್ಲಿ ಸಾರ್ವಜನಿಕರ ದರ್ಶಕ್ಕೆ ಇಡಲಾಗಿತ್ತು.