Tag: ಹುತಾತ್ಮ ಯೋಧರು

  • ‘ಹುತಾತ್ಮ ಯೋಧರ ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳಿವೆಯೇ ಪರಿಶೀಲಿಸಿ’ -ಸಿಎಸ್‍ಕೆ ವೈದ್ಯ ಕಿಕೌಟ್

    ‘ಹುತಾತ್ಮ ಯೋಧರ ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳಿವೆಯೇ ಪರಿಶೀಲಿಸಿ’ -ಸಿಎಸ್‍ಕೆ ವೈದ್ಯ ಕಿಕೌಟ್

    ಚೆನ್ನೈ: ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ಯ ಡಾ.ಮಧು ತೊಟ್ಟಪ್ಪಿಲಿಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಒಂದು ಕಡೆ ದೇಶ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದೆ. ಇದೇ ಸಮಯದಲ್ಲಿ ಡಾ.ಮಧು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ. “ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳು ಇವೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ” ಎಂದು ಡಾ.ಮಧು ತೊಟ್ಟಪ್ಪಿಲಿಲ್ ಬರೆದುಕೊಂಡಿದ್ದಾರೆ. ಈ ಹಿನ್ನೆಲೆ ಸಿಎಸ್‍ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ತಂಡದಿಂದ ಅವರನ್ನು ಅಮಾನತುಗೊಳಿಸಿದೆ.

    ಸಿಎಸ್‍ಕೆ ವಿಷಾದ:
    ಡಾ.ಮಧು ತೊಟ್ಟಪಿಲಿಲ್ ಟ್ವೀಟ್‍ನಿಂದಾಗಿ ನೆಟ್ಟಿಗರು ಅಸಮಾಧಾನ ಹೊರಹಾಕಿದು. ಹೀಗಾಗಿ ತಕ್ಷಣವೇ ಸಿಎಸ್‍ಕೆ ಕ್ರಮ ಕೈಗೊಂಡು ವೈದ್ಯರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್, “ಡಾ.ಮಧು ಅವರ ವೈಯಕ್ತಿಕ ಟ್ವೀಟ್ ವಿಚಾರ ನಮಗೆ ತಿಳಿದಿರಲಿಲ್ಲ. ಅವರನ್ನು ತಂಡದ ವೈದ್ಯರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಮ್ಯಾನೇಜ್ಮೆಂಟ್‍ಗೆ ಹೇಳದೆ ಅವರು ಮಾಡಿದ ಟ್ವೀಟ್‍ಗೆ ಸಿಎಸ್‍ಕೆ ವಿಷಾದಿಸುತ್ತದೆ” ಎಂದು ತಿಳಿಸಿದೆ.

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010, 2011 ಮತ್ತು 2018ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಟೂರ್ನಿಯಲ್ಲಿ ಒಟ್ಟು 190 ಪಂದ್ಯಗಳನ್ನು ಆಡಿರುವ ಎಂ.ಎಸ್.ಧೋನಿ 4,432 ರನ್ ಗಳಿಸಿದ್ದಾರೆ.

  • ಪುಲ್ವಾಮಾ ವೀರರಿಗೆ ಬಾಲಿವುಡ್ ಸಲಾಂ- ರಿಲೀಸ್ ಆಗ್ತಿದೆ ವಿಶೇಷ ಹಾಡು

    ಪುಲ್ವಾಮಾ ವೀರರಿಗೆ ಬಾಲಿವುಡ್ ಸಲಾಂ- ರಿಲೀಸ್ ಆಗ್ತಿದೆ ವಿಶೇಷ ಹಾಡು

    ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್ ವೀರ ಯೋಧರ ಬಲಿದಾನಕ್ಕೆ ಸ್ಮರಣಾರ್ಥಕವಾಗಿ `ತು ದೇಶ್ ಹೈ ಮೇರಾ’ ಎಂಬ ಧ್ಯೇಯ ವಾಕ್ಯದ ಹಾಡು ರಿಲೀಸ್ ಮಾಡಲಾಗುತ್ತಿದ್ದು, ಈ ಹಾಡಿನಲ್ಲಿ ಬಾಲಿವುಡ್ ಸ್ಟಾರ್ಸ್‍ ವೀರ ಯೋಧರಿಗೆ ನಮನ ಸಲ್ಲಿಸಲಿದ್ದಾರೆ.

    `ತು ದೇಶ್ ಹೈ ಮೇರಾ’ ಹಾಡಿನಲ್ಲಿ ಇಡೀ ಬಿಟೌನ್ ಸ್ಟಾರ್ ಗಳು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಆಮೀರ್ ಖಾನ್, ರಣ್‍ಬೀರ್ ಕಪೂರ್ ಹಾಡಿಗೆ ಸಾಥ್ ನೀಡಿದ್ದಾರೆ. ಹಾಡಿನ ಮೇಕಿಂಗ್‍ನಲ್ಲಿ ಕಾಣಿಸಿಕೊಂಡಿರುವ ನಟರ ಜೊತೆ ಸಲ್ಮಾನ್ ಖಾನ್, ಅಜಯ್ ದೇವಗನ್, ರಣ್‍ವೀರ್ ಸಿಂಗ್, ವರುಣ್ ಧವನ್, ಅನೂಪ್ ಖೇರ್, ಅಕ್ಷಯ್ ಕುಮಾರ್ ಮತ್ತು ಶಾರೂಖ್ ಖಾನ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಬಗ್ಗೆ ಸಿಆರ್​ಪಿಎಫ್ ಟ್ವೀಟ್ ಮಾಡಿದ್ದು, ಹುತಾತ್ಮ ಯೋಧರಿಗೆ ಹಾಗೂ ಭಾರತೀಯ ಸೈನ್ಯಕ್ಕೆ ಬಾಲಿವುಡ್ ಹಾಗೂ ಭಾರತೀಯ ಪ್ರಜೆಗಳು ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದ ತಿಳಿಸಿದೆ.

    ಟ್ವೀಟ್‍ನಲ್ಲಿ ಏನಿದೆ?
    ಬಾಲಿವುಡ್ ಸ್ಟಾರ್ಸ್‍ ಗಳು `ತು ದೇಶ್ ಹೈ ಮೇರಾ’ ಹಾಡನ್ನು ಹುತಾತ್ಮ ಯೋಧರಿಗೆ ಸಮರ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಹುತಾತ್ಮ ವೀರ ಯೋಧರ ಬಗ್ಗೆ ನೀವು ತೋರುತ್ತಿರುವ ಗೌರವ, ಬೆಂಬಲಕ್ಕೆ ನಾವು ನಿಮಗೆ ಧನ್ಯವಾದ ತಿಳಿಸುತ್ತಿದ್ದೇವೆ ಎಂದು ಬರೆದು, ಅಮಿತಾಬ್ ಬಚ್ಚನ್, ಆಮೀರ್ ಖಾನ್ ಹಾಗೂ ರಣ್‍ಬೀರ್ ಕಪೂರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿದೆ.

    ಸದ್ಯ ಈ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಆದಷ್ಟು ಬೇಗ ವೀರ ಯೋಧರಿಗೆ ಬಾಲಿವುಡ್ ಸಮರ್ಪಿಸುತ್ತಿರುವ ವಿಡಿಯೋ ಬಿಡುಗಡೆಯಾಗಲಿದೆ.

  • ಹುತಾತ್ಮ ಯೋಧರ ಕುಟುಂಬಗಳಿಗೆ 110 ಕೋಟಿ ನೆರವು ನೀಡಲು ಮುಂದಾದ ಅಂಧ ವಿಜ್ಞಾನಿ

    ಹುತಾತ್ಮ ಯೋಧರ ಕುಟುಂಬಗಳಿಗೆ 110 ಕೋಟಿ ನೆರವು ನೀಡಲು ಮುಂದಾದ ಅಂಧ ವಿಜ್ಞಾನಿ

    ಮುಂಬೈ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ 110 ಕೋಟಿ ರೂ. ನೀಡಲು ಅಂಧ ವಿಜ್ಞಾನಿಯೊಬ್ಬರು ಮುಂದಾಗಿದ್ದಾರೆ.

    ಮೂಲತಃ ರಾಜಸ್ಥಾನದ ಕೋಟಾ ಪ್ರದೇಶದವರಾದ ಮುರ್ತಾಜಾ.ಎ.ಹಮೀದ್ ಅವರು ಸಂಶೋಧಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟಿದಾಗಿನಿಂದಲೂ ಇವರಿಗೆ ಕಣ್ಣು ಕಾಣಿಸುತ್ತಿಲ್ಲ. ಆದರೇ ಇವರು ಅಂಗವೈಫಲ್ಯವನ್ನು ಮರೆತು ಸಾಧನೆ ಮಾಡಿದ್ದಾರೆ.

    ಸದ್ಯ ಮುಂಬೈನಲ್ಲಿ ನೆಲೆಸಿರುವ ಹಮೀದ್ ಅವರು 110 ಕೋಟಿ ರೂ. ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಜ್ಞಾನಿ ಪ್ರಧಾನಿ ಕಚೇರಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೇಳಿದ್ದಾರೆ.

    ಭಾನುವಾರ ಬೆಳಗ್ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಉಪಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಅವರು ಹಮೀದ್ ಅವರಿಗೆ ಕರೆ ಮಾಡಿ ತಮ್ಮ ವಿವರವನ್ನು ಕಳುಹಿಸುವಂತೆ ತಿಳಿಸಿದ್ದಾರೆ.

    ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಡುವ ಯೋಧರ ಕುಟಂಬಗಳ ಬೆಂಬಲಕ್ಕೆ ನಿಲ್ಲಬೇಕೆಂಬ ಆಸೆ ಇದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧರ ನೆರವಿಗೆ ನಿಲ್ಲಬೇಕು. ದೇಶಕ್ಕಾಗಿ ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ ನಿಂತು ನಮ್ಮೆಲ್ಲರ ಕುಟುಂಬವನ್ನು ಯೋಧರು ಕಾಯುತ್ತಾರೆ ಎಂದು ಹಮೀದ್ ತಿಳಿಸಿದ್ದಾರೆ.

    ಹಮೀದ್ ಅವರು `ಇಂಧನ ಉರಿತ ವಿಕಿರಣ ತಂತ್ರಜ್ಞಾನ’ (Fuel Burn Radiation Technology)ವನ್ನು ಸಂಶೋಧಿಸಿದ್ದಾರೆ. ಜಿಪಿಎಸ್ ಹಾಗೂ ಕ್ಯಾಮೆರಾ ಸೌಲಭ್ಯವಿಲ್ಲದ ವಾಹನಗಳನ್ನು ಈ ತಂತ್ರಜ್ಞಾನದ ಮೂಲಕ ಪತ್ತೆ ಮಾಡಬಹುದು. ಹಮೀದ್ ಈ ತಂತ್ರಜ್ಞಾನವನ್ನು 2016ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಿದ್ದರು. ಎರಡು ವರ್ಷಗಳ ಬಳಿಕ 2018ರಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಅನುಮೋದನೆ ನೀಡಿತ್ತು.

    ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್‍ಪಿಎಫ್‍ನ 40 ಯೋಧರು ಹುತಾತ್ಮರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಹೈದರಾಬಾದ್: ಜಾಮೀನು ಬೇಕಾದರೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 1 ಲಕ್ಷ ರೂ. ನೆರವನ್ನು ನೀಡಿ ಎಂದು ತೆಲಂಗಾಣ ಹೈಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.

    14 ಸಾವಿರ ಹೂಡಿಕೆದಾರರಿಗೆ ಮೋಸ ಮಾಡಿರುವ ಆರೋಪದ ಮೇಲೆ ಸನ್ ಪರಿವಾರ್ ಗ್ರೂಪ್‍ನ ಆಯೋಜಕರ ಮೇಲೆ ಪ್ರಕರಣ ದಾಖಲಾಗಿತ್ತು. ಹೂಡಿಕೆದಾರರಿಗೆ ಸುಮಾರು 150 ಕೋಟಿ ರೂ. ನಷ್ಟು ಹಣವನ್ನು ಈ ಕಂಪನಿ ವಂಚಿಸಿತ್ತು. ಆದರಿಂದ ಕಳೆದ ವರ್ಷ ಈ ಕಂಪನಿ ಮೇಲೆ ವಂಚನೆ ಕೇಸ್ ದಾಖಲಾಗಿತ್ತು. ಅಲ್ಲದೆ, ವಂಚಿಸಿದ್ದ ಆರೋಪಿಗಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತಿನ ಮೇರೆಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.

    ಆರೋಪಿಗಳು ತನಿಖೆಗೆ ಸರಿಯಾಗಿ ಹಾಜರಾಗದ ಕಾರಣ ಅವರ ಜಾಮೀನು ರದ್ದುಗೊಳಿಸಲಾಗಿತ್ತು. ರದ್ದಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು.

    ಈ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ. ಶಿವಶಂಕರ್ ಅವರು ಎಲ್ಲಾ ಆರೋಪಿಗಳು ತಮಗೆ ಜಾಮೀನು ಬೇಕಿದ್ದರೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ನೀಡಿದರೆ ಮಾತ್ರ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಅವರಿಗೆ ಸಹಕರಿಸಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಜೈಪುರ: ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ಅಜ್ಮೇರ್‍ದಲ್ಲಿ ಬದುಕಿದ್ದಾಗ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ ಅಜ್ಜಿಯೊಬ್ಬರ ಹಣವೂ ಈಗ ಯೋಧರ ಕುಟುಂಬಕ್ಕೆ ಸಹಾಯವಾಗಿದೆ.

    ಭಿಕ್ಷುಕಿ ನಂದಿನಿ ಶರ್ಮಾ ಸಂಪಾದನೆ ಮಾಡಿದ್ದ ಹಣವನ್ನು ಈಗ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ. ನಂದಿನಿ ಶರ್ಮಾ 2018 ಆಗಸ್ಟ್ ರಲ್ಲಿ ಮೃತಪಟ್ಟಿದ್ದು, ಮೃತಪಡುವುದಕ್ಕೂ ಮೊದಲು ನನ್ನ ಬಳಿ ಇರುವ ಹಣವನ್ನು ದೇಶ ಮತ್ತು ಸಮಾಜಕ್ಕಾಗಿ ಬಳಸಬೇಕೆಂಬುದು ಹೇಳಿಕೊಂಡಿದ್ದರಂತೆ. ಹೀಗಾಗಿ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ 6.61 ಲಕ್ಷ ಹಣವನ್ನು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ್ದ ಕುಟುಂಬದವರಿಗೆ ನೀಡಲಾಗಿದೆ.

    ಮೃತ ನಂದಿನಿ ಶರ್ಮಾ ಅಜ್ಮೇರ್  ಬಜರಂಗಢದಲ್ಲಿರುವ ಅಂಬೆ ಮಾತೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅವರು ಪ್ರತಿದಿನ ಗಳಿಸುತ್ತಿದ್ದ ಹಣವನ್ನು ಅಂದೇ ಬ್ಯಾಂಕಿಗೆ ಹೋಗಿ ಜಮಾ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಾವು ಸಂಪಾದಿಸಿ ಹಣವನ್ನು ಸುರಕ್ಷಿತವಾಗಿ ಬಳಸಬೇಕೆಂದು ಇಬ್ಬರು ಟ್ರಸ್ಟಿಗಳ ಬಳಿ ಸಹ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮೃತಪಟ್ಟ ನಂತರ ಈ ಹಣ ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ವಿಲ್ ಬರೆದಿಟ್ಟಿದ್ದರು.

    ಶರ್ಮಾ 2018 ಮೃತಪಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಸೂಕ್ತ ಸಮಯ ಬಂದಾಗ ಹಣವನ್ನು ದಾನ ಮಾಡಲು ಕಾಯುತ್ತಿದ್ದರು. ಇತ್ತೀಚೆಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ 44 ಯೋಧರು ಮೃತಪಟ್ಟಿದ್ದರು. ಇದೇ ಸೂಕ್ತ ಸಮಯ ಎಂದು ಟ್ರಸ್ಟಿಗಳು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡಲಾಗುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ರಸ್ಟ್ ಗಳಿಂದ ಹಣವನ್ನು ಪಡೆದು ಅವರಿಗೆ ರಶೀದಿ ನೀಡಲಾಗಿದೆ ಎಂದು ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವ ಮೋಹನ್ ಶರ್ಮಾ ತಿಳಿಸಿದ್ದಾರೆ.

    ಮೃತ ಅಜ್ಜಿ ಸಂಪಾದನೆ ಮಾಡಿದ್ದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಲಾದ ವಿಷಯ ತಿಳಿದು ದೇವಾಲಯ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ಭಕ್ತರು ಯಾವಾಗಲೂ ಗೌರವ ಕೊಡುತ್ತಿದ್ದರು. ಶರ್ಮಾ ಅವರಿಗೆ ಹಣದ ಜತೆ ಊಟ, ಬಟ್ಟೆಯನ್ನು ಸಹ ದಾನ ಮಾಡುತ್ತಿದ್ದರು. ಅವರು ಪ್ರತಿದಿನ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುತ್ತಿದ್ದ ವಿಚಾರ ಬಗ್ಗೆ ನಮಗೆಲ್ಲ ತಿಳಿದಿತ್ತು ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಪಾಕಿಸ್ತಾನ ಜಿಂದಾಬಾದ್ ಎಂದ ಟಿಸಿ ಅರೆಸ್ಟ್

    ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಪಾಕಿಸ್ತಾನ ಜಿಂದಾಬಾದ್ ಎಂದ ಟಿಸಿ ಅರೆಸ್ಟ್

    ಮುಂಬೈ: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಡೆದಿದ್ದ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ರೈಲ್ವೆ ಇಲಾಖೆಯ ಟಿಕೆಟ್ ಕಲೆಕ್ಟರ್ (ಟಿಸಿ) ನನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಲೋನಾವಾಲ ರೈಲು ನಿಲ್ದಾಣದ ಉಪೇಂದ್ರಕುಮಾರ್ ಶ್ರೀವೀರ್ ಬಹಾದೂರ್ ಸಿಂಗ್ (39) ಬಂಧಿತ ಟಿಸಿ. ಲೋನಾವಾಲದ ಶಿವಾಜಿ ಚೌಕ್‍ನಲ್ಲಿ ಸ್ಥಳೀಯರು ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಉಪೇಂದ್ರಕುಮಾರ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪುಣೆ ಗ್ರಾಮಾಂತರ ಠಾಣೆಯ ಪೊಲೀಸರು ಉಪೇಂದ್ರಕುಮಾರ್ ನನ್ನು ಬಂಧಿಸಿದ್ದಾರೆ. ಇದನ್ನು ಓದಿ : ಶ್ರದ್ಧಾಂಜಲಿ ವೇಳೆ ಪಾಕ್ ಪರ ಘೋಷಣೆ – ಗ್ರಾಮಸ್ಥರಿಂದ ಥಳಿತ, ಯುವಕ ಅರೆಸ್ಟ್

    ಉಪೇಂದ್ರಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 153 (ಬಿ) ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಹೇಳಿಕೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ. ಆತನನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಫೆಬ್ರವರಿ 18ರ ವರೆಗೆ ಉಪೇಂದ್ರಕುಮಾರ್‍ನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ರೈಲ್ವೇ ಇಲಾಖೆಯ ಮುಂಬೈ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜೈನ್ ಅವರು, ಉಪೇಂದ್ರ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಲೋನಾವಾಲ ನಗರ ಪೊಲೀಸ್ ಇನ್ಸ್‍ಪೆಕ್ಟರ್ ಬಲ್ವಂತ್ ಪಾಟೀಲ್, ಶ್ರದ್ಧಾಂಜಲಿ ಸಭೆಗೆ ಸಾವಿರಾರು ಜನರು ಸೇರುತ್ತಿದ್ದ ಹಿನ್ನಲೆಯಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಉಪೇಂದ್ರಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ರೈಲ್ವೇ ಇಲಾಖೆಗೂ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

    ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

    ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv