Tag: ಹುಣಸೂರು

  • ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಎಂ ಸವಾಲ್!

    ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಎಂ ಸವಾಲ್!

    ಮೈಸೂರು: ಮಾಜಿ ಪ್ರಧಾನಿ ದೇವೇಗೌಡ ಅವರು ಯಾರ ಪರವಾಗಿದ್ದಾರೆ ಅನ್ನೋದನ್ನು ಸ್ಪಷ್ಟಪಡಿಸಲಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವೇಗೌಡರಿಗೆ ಸವಾಲ್ ಹಾಕಿದ್ದಾರೆ.

    ಕೃಷಿ ಹೊಂಡ, ಅಕ್ಕಿ ನೀಡುವ ಹಾಗೂ ಹಾಲು ಉತ್ಪಾದಕರ ವಿಚಾರವಾಗಿ ದೇವೇಗೌಡರ ನಿಲುವು ಏನು ಅಂತ ಸಿಎಂ ಪ್ರಶ್ನಿಸಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಸರ್ಕಾರದ ವಿರುದ್ಧ ವ್ಯಂಗ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇವೇಗೌಡರಿಗೆ ಒಳ್ಳೆಯದಾಗಲಿ. ನಮ್ಮಿಬ್ಬರ ಸಂಬಂಧ ಇದ್ದದ್ದೇ. ಈಗ ರಾಜಕೀಯವಾಗಿ ಬೇರೆ ಇದ್ದೇವೆ ಅಷ್ಟೆ. ನಮ್ಮ ಸಿದ್ಧಾಂತ ಬೇರೆ, ಅವರ ಸಿದ್ಧಾಂತ ಬೇರೆ ಅಂದ್ರು.

    ಜೆಡಿಎಸ್ ನಾಯಕರು ನಿಮ್ಮ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಲೇವಡಿ ಮಾಡಿದ ಅವರು, ಅವರು ಸಾಫ್ಟ್ ಇಲ್ಲ ಹಾರ್ಡು ಇಲ್ಲ. ಸತ್ಯವಾದ ಸಂಗತಿ ಹೇಳಿದ್ರೆ ಸಾಕು ಅಂದ್ರು. ಬಿಜೆಪಿ ಅವರ ನಾಲಗೆ ಅವರ ಸಂಸ್ಕೃತಿ ಹೇಳುತ್ತೆ. ಬಿಜೆಪಿಯವರು ತಮಗೆ ಸಂಸ್ಕೃತಿ ಇದೆ ಅಂತಾರೆ ಇದೇನಾ? ನಾನು, ಮಹದೇವಪ್ಪ ಇಬ್ಬರು ಹಳ್ಳಿಯಿಂದ ಬಂದವರು. ನಮಗೂ ಕೆಟ್ಟದಾಗಿ ಬಯ್ಯೋದಕ್ಕೆ ಬರುತ್ತೆ. ಆದ್ರೆ ಅದು ನಮ್ಮ ಸಂಸ್ಕೃತಿ ಅಲ್ಲ ಅಂತ ಹೇಳಿದ್ರು.

    ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರನ್ನು ಈಗಾಗಲೇ ಪಕ್ಷದಿಂದ ತೆಗೆದು ಹಾಕಲಾಗಿದೆ. ಇದು ನಮ್ಮ ಕಾಂಗ್ರೆಸ್ ನ ಸಂಸ್ಕೃತಿ ಅಂತ ಸಿಎಂ ಬಿಜೆಪಿಗೆ ಟಾಂಗ್ ನೀಡಿದ್ರು. ಹೀಗೆ ಮಾತನಾಡುವ ಬಿಜೆಪಿ ಅವರಿಂದ ನಾವು ಏನೂ ನಿರೀಕ್ಷೆ ಮಾಡಲ್ಲ ಎಂದರು.

    ಸಿಎಂ ಗಂಟುಮೂಟೆ ಕಟ್ಟಿಕೊಂಡು ಮೈಸೂರಿಗೆ ಹೋಗ್ತಾರೆ ಎಂಬ ಬಿಎಸ್‍ವೈ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೂ ಬಿಎಸ್‍ವೈ ಸಿಎಂ ಆಗಲ್ಲ. ಅವರು ಅಧಿಕಾರಕ್ಕೆ ಬರಲ್ಲ ಅಂತ ಯಡಿಯೂರಪ್ಪ ವಿರುದ್ಧ ಗರಂ ಆದ್ರು.

    ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಕೂಡ ಸರ್ವೆ ಮಾಡಿಸಿದ್ದೇನೆ. ಆದ್ರೆ ಅದನ್ನು ಜನರ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ಈಗ ಮಾಡಿರುವ ಚುನಾವಣಾ ಸರ್ವೆಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಜಾತ್ಯಾತೀತ ಪಕ್ಷವಾಗಿ ನಾವು ಅತ್ಯಂತ ಬಲಿಷ್ಠರಾಗಿದ್ದೇವೆ. ಬೇರೆಯವರ ಸಹಾಯ ಪಡೆದು ಕೋಮುವಾದಿ ಪಕ್ಷವನ್ನು ಮಟ್ಟಹಾಕುವ ಅಗತ್ಯವಿಲ್ಲ. ಮುಂದಿನ ಬಾರಿಯೂ ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಾ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.

    ಪ್ರತಾಪ್ ಸಿಂಹ ನೆಲದ ಕಾನೂನು ಗೌರವಿಸಲಿ: ಹುಣಸೂರಿನಲ್ಲಿ ಹನುಮ ಜಯಂತಿ ಗಲಭೆ ಕುರಿತು ಮಾತನಾಡಿದ ಸಿಎಂ, ಗಲಾಟೆಗೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದ್ರು. ಹನುಮ ಜಯಂತಿ ಮಾಡಬೇಡಿ ಅಂತ ಯಾರೂ ಹೇಳಿಲ್ಲ. ಆದರೆ ಪ್ರತಾಪ್ ಸಿಂಹ ಮತ್ತು ಬಿಜೆಪಿಯವರು ನಿಷೇಧಿತ ರಸ್ತೆಯಲ್ಲಿ ಮೆರವಣಿಗೆ ಮಾಡಲು ಮುಂದಾದರು. ಆದ್ದರಿಂದ ಪರಿಸ್ಥಿತಿ ನಿಯಂತ್ರಿಸಬೇಕಾಯಿತು. ಬಿಜೆಪಿಯವರು ಮಾತ್ರ ಹಬ್ಬ ಮಾಡುತ್ತಾರಾ? ನಾವು ಮಾಡಲ್ವಾ? ನಾವೂ ಗೌರಿ-ಗಣೇಶ, ಯುಗಾದಿ, ಸಂಕ್ರಾಂತಿ ಹಬ್ಬ ಮಾಡುತ್ತೇವೆ. ಹನುಮ ಜಯಂತಿ, ರಾಮನವಮಿಯನ್ನೂ ಮಾಡುತ್ತೇವೆ. ಪ್ರತಾಪ್ ಸಿಂಹ ಅವರು ಮೊದಲು ನೆಲದ ಕಾನೂನು ಗೌರವಿಸಬೇಕು. ಕಾನೂನು ಮಾಡುವವರು ಮೊದಲು ಕಾನೂನು ಗೌರವಿಸಿ ಮಾದರಿಯಾಗಬೇಕು. ಸಂಸದನಾದ ಮಾತ್ರಕ್ಕೆ ಪೊಲೀಸರ ಬ್ಯಾರಿಕೇಡ್ ಹೊಡೆದುಕೊಂಡು ಹೋಗಬಹುದಾ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದ್ರು.

     

  • ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಮೈಸೂರು: ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ಗಲಭೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಡಳಿತ ಘಟನೆ ಕುರಿತು ಸ್ಪಷ್ಟೀಕರಣ ನೀಡಿದೆ.

    ಜಿಲ್ಲಾಧಿಕಾರಿ ಡಿ.ರಂದೀಪ್ ಇಡೀ ಘಟನೆಯ ಸಂಪೂರ್ಣ ವಿವರ ನೀಡಿದ್ದು, ಜಯಂತಿ ಆಚರಣೆಯ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಬಹಿರಂಗಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಗೃಹ ಕಾರ್ಯದರ್ಶಿಗಳ ನಡುವಿನ ಪತ್ರವ್ಯವಹಾರದ ಮಾಹಿತಿಯೂ ಬಹಿರಂಗವಾಗಿದೆ.

    ಮೆರವಣಿಗೆಗೆ ಅವಕಾಶವೇ ನೀಡಿಲ್ಲ ಅಂತ ಆರೋಪ ಮಾಡೋದು ಸರಿಯಲ್ಲ. ಎಲ್ಲವೂ ಕಾನೂನಿನ ರೀತಿಯಲ್ಲೆ ನಡೆದಿದೆ. ಆದ್ರೆ ಹನುಮ ಜಯಂತಿ ವೇಳೆ ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಮೆರವಣಿಗೆ ಹೊರಟಿಲ್ಲ. ಪರಿಣಾಮ ಸ್ಥಳದಲ್ಲಿ ಹೆಚ್ಚಿನ ಜನ ಸೇರುವಂತಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಉಪವಿಭಾಗಾಧಿಕರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರು ಕನಿಷ್ಠ ಬಲಪ್ರಯೋಗಿಸಿ ಗುಂಪು ಚದುರಿಸಿದ್ದಾರೆ. ಈ ಎಲ್ಲಾ ಕ್ರಮಗಳನ್ನ ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಸ್ಪಷ್ಟೀಕರಣ ನೀಡಿದ್ದಾರೆ.

    ಈದ್ ಮಿಲಾದ್, ಹನುಮಜಯಂತಿ ಮೆರವಣಿಗೆಗೆ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮೂರು ದಾಖಲೆಗಳನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ನಂತರ ಹನುಮಜಯಂತಿ ವಿಚಾರವಾಗಿ ಮೇಲ್ಮನವಿ ಸಲ್ಲಿಕೆ ಹಾಗೂ ಅದಕ್ಕೆ ಗೃಹಕಾರ್ಯದರ್ಶಿಗಳಿಂದ ಬಂದ ಉತ್ತರದ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದು, ದಾಖಲೆಗಳ ಸಮೇತ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆ.

  • ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್

    ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್

    ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಪೊಲೀಸ್ ಅಧಿಕಾರಿಗಳ ಮೇಲೆ ಮಾಡಿರುವ ಆರೋಪವನ್ನು ಎಸ್‍ಪಿ ರವಿ ಚೆನ್ನಣ್ಣನವರ್ ತಿರಸ್ಕರಿಸಿ, ನಾನು ಯಾರ ಆಳು ಅಲ್ಲ. ಕಾನೂನು ಮತ್ತು ಕರ್ತವ್ಯಕ್ಕೆ ಆಳು ಎಂದು ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಎಸ್‍ಪಿ ರವಿ ಚೆನ್ನಣ್ಣನವರ್, ಮಾನ್ಯ ಸಂಸದರ ಬಗ್ಗೆ ಅಪಾರ ಗೌರವವಿದೆ, ಅವರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾರ ಪರ ಅಥವಾ ವಿರೋಧವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಾವು ಸತ್ಯ ಹಾಗೂ ನ್ಯಾಯದ ಪರ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.

    ಒಂದು ವೇಳೆ ನನ್ನ ವಿರುದ್ಧ ಅಂತಹ ಅನುಮಾನ ಶಂಕೆ ಇದ್ದರೆ ನನ್ನ ಮೇಲೆ ಒಂದು ವ್ಯವಸ್ಥೆ ಇದೆ. ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ವ್ಯವಸ್ಥೆ ಇದ್ದು ಅಲ್ಲಿ ದೂರು ನೀಡಬಹುದು. ನಾನೇ ಅಂತಿಮನಲ್ಲ. ಯಾವ ಘಟನೆಯಲ್ಲಿ ಈ ರೀತಿ ಪಕ್ಷಪಾತವಾಗಿದೆ ಎಂಬುವುದನ್ನು ಸಂಸದರು ಸ್ಪಷ್ಟಪಡಿಸಬೇಕು. ಯಾರಿಗೆ ಅನ್ಯಾಯವಾಗಿದ್ದರೂ ಪರಿಹಾರ ಸಿಗುತ್ತದೆ. ಸಂಸದರ ಆರೋಪಗಳು ಅವರ ನನ್ನ ನಡುವಿನ ಸಣ್ಣ ಸಂವಹನ ಕೊರತೆಯಿಂದ ಉಂಟಾಗಿದೆ. ಈ ಕುರಿತು ಸ್ವತಃ ನಾನೇ ಕರೆಮಾಡಿ ಮಾತನಾಡುತ್ತೇನೆ ಎಂದರು.

    ಇನ್ನೂ ಭಾಷಣ ಮಾಡುವ ಕುರಿತ ಟೀಕೆಗೆ ಉತ್ತರಿಸಿದ ಅವರು, ನಾನು ಭಾಷಣ ಮಾಡುವುದು ಕಾನೂನು, ಕೋರ್ಟ್, ಅಧಿಕಾರಿಗಳು, ಪ್ರಜಾಪ್ರಭುತ್ವ, ಪೊಲೀಸ್ ಪೇದೆ ಕರ್ತವ್ಯಗಳ ಅರಿವು ಯಾರಿಗೆ ಇರುವುದಿಲ್ಲವೋ ಅವರ ತಿಳುವಳಿಕೆ ನೀಡಲು ನಾನು ಮಾತನಾಡುತ್ತೇನೆ. ಇದು ನನ್ನ ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

    ಇದುವರೆಗೂ ಹಿರಿಯ ಅಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದ ಮೂಲಕ ಕಾರ್ಯನಿರ್ವಹಿಸಿದ್ದೇವೆ, ಆದರೆ ಸಂಸದರು ಹೇಳಿರುವ ಒಂದು ಸತ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕಲಿಯುವುದು ಇನ್ನು ಇದೆ. ಅವರಿಂದಲೂ ನಾನು ಸಾಕಷ್ಟು ಕಲಿಯುವುದು ಇದೆ. ನನ್ನ ಪೊಲೀಸ್ ವೃತ್ತಿ ಜೀವನದ ಉದ್ದಕ್ಕೂ ಕಲಿಯುತ್ತೇನೆ. ನಾನು ಪರಿಪೂರ್ಣನಲ್ಲ, ಪೊಲೀಸ್ ಇಲಾಖೆಯಲ್ಲಿ 20 ರಿಂದ 30 ವರ್ಷ ಪೇದೆಯಾಗಿ, ಎಎಸ್‍ಐ ಆಗಿ ಕಾರ್ಯನಿರ್ವಹಿಸಿದ ವ್ಯಕ್ತಿಯಿಂದಲೂ ಕಲಿಯುತ್ತೇನೆ. ಗುಲ್ಬರ್ಗ, ಮೈಸೂರು, ಬೆಳಗಾವಿ, ಶಿವಮೊಗ್ಗ ಪ್ರತಿ ಸ್ಥಳದಲ್ಲಿ ಕೆಲಸ ಮಾಡುವ ವೇಳೆಯೂ ಹಲವರು ಒಳ್ಳೆ ವ್ಯಕ್ತಿಗಳಿಂದ ಉತ್ತಮ ಅಂಶಗಳನ್ನು ಕಲಿಯುತ್ತಿದ್ದೇನೆ ಎಂದು ಹೇಳಿದರು. ( ಇದನ್ನೂ ಓದಿ: ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್ )

    ಸಂಸದರನ್ನು ಕೂಡಲೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ, ಪ್ರಕರಣದ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಗಳಿದ್ದಾರೆ. ಯಾವುದೇ ವ್ಯಕ್ತಿಯನ್ನು ಬಂಧಿಸಿದ ನಂತರ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾನೂನು ಕ್ರಮಗಳಿರುತ್ತವೆ. ಅವುಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದರು.

    ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು. ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದರು. ಅಲ್ಲದೇ ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದರು.  ( ಇದನ್ನೂ ಓದಿ: ನಾನು ಕಾನೂನು ಉಲ್ಲಂಘಿಸಿಲ್ಲ, ಜಿಲ್ಲಾಡಳಿತ, ಪೊಲೀಸರಿಂದಲೇ ತಪ್ಪಾಗಿದೆ: ಪ್ರತಾಪ್ ಸಿಂಹ )

    https://www.youtube.com/watch?v=26wWJftihNg

    https://www.youtube.com/watch?v=yzTzIO0gaXM

  • ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್

    ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್

    ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

    12 ಗಂಟೆ ಬಳಿಕ ರಿಲೀಸ್: ಭಾನುವಾರ ಕಾರಿನಲ್ಲಿ ಬ್ಯಾರಿಕೇಡ್ ಗೆ ಗುದ್ದಿ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಉದ್ಧಟತನ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು, ನರಸೀಪುರ ಸೇರಿದಂತೆ ಮೊದಲಾದ ಕಡೆ ಸುಮಾರು 8 ಗಂಟೆ ಕಾಲ ರೌಂಡ್ ಹೊಡೆಸಿದ ನಂತರ ರಾತ್ರಿ 11 ಗಂಟೆ ಹೊತ್ತಿಗೆ ಟೀ ನರಸೀಪುರ ಪಟ್ಟಣ ಠಾಣೆಗೆ ಕರೆತಂದಿದ್ದರು. ಅಲ್ಲಿ ಪ್ರತಾಪ್ ಸಿಂಹ ಸ್ಟೇಷನ್ ಬೇಲ್ ಪಡೆದು ರಿಲೀಸ್ ಆಗಿದ್ದಾರೆ.

    ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿಮಗೆ ನಿಮ್ಮ ಅಹಂ ದೊಡ್ಡದಾಗಿತ್ತು. ಆದರೆ ಅದು ನಿಮ್ಮ ಮನಸ್ಥಿತಿಯಲ್ಲಿರುವ ಲೋಪ. ಅದನ್ನು ಅಡ್ಡ ತಂದು ನಮ್ಮ ಮೇಲೆ ಗಧಾಪ್ರಹಾರ ಮಾಡಬೇಡಿ. 2015ರಲ್ಲಿ ನೀವು ಬ್ಯಾನ್ ಮಾಡಿದ 3 ರಸ್ತೆಯಲ್ಲಿ ಸುಸೂತ್ರವಾಗಿ ಹನುಮ ಜಯಂತಿ ನಡೆದಿತ್ತು. ಆದರೆ ಇದೀಗ ಅವಕಾಶವೇ ಕೊಡುತ್ತಿಲ್ಲ. ನಾನೊಬ್ಬ ಸಂಸದನಾಗಿ ಹುಣಸೂರಿಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತೀನಿ ಎಂದು ನಿಮಗೆ ಕನಸು ಬಿದ್ದಿತ್ತಾ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದ್ರು.

  • ಹುಣಸೂರು ಘರ್ಷಣೆ- ರಾತ್ರೋರಾತ್ರಿ ಹನುಮನ ಮೂರ್ತಿ ತೆರವು

    ಹುಣಸೂರು ಘರ್ಷಣೆ- ರಾತ್ರೋರಾತ್ರಿ ಹನುಮನ ಮೂರ್ತಿ ತೆರವು

    ಮೈಸೂರು: ಹುಣಸೂರಿನಲ್ಲಿ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಹನುಮನ ಮೂರ್ತಿಯನ್ನ ತೆರವುಗೊಳಿಸಲಾಗಿದೆ.

    ಮುನೇಶ್ವರ ಕಾವಲ್ ಮೈದಾನದಲ್ಲಿ ಇರಿಸಲಾಗಿದ್ದ ಹನುಮನ ಬೃಹತ್ ಮೂರ್ತಿಗಳನ್ನ ತೆರವು ಮಾಡಲಾಗಿದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ರಾತ್ರೋರಾತ್ರಿ ತೆರವು ಕಾರ್ಯ ನಡೆದಿದೆ.

    ಬ್ರಾಹ್ಮಣ ಬೀದಿಯಲ್ಲಿರುವ ರಂಗನಾಥ ದೇವಾಲಯಕ್ಕೆ ಹನುಮನ ಬೃಹತ್ ಮೂರ್ತಿಯನ್ನ ಸ್ಥಳಾಂತರ ಮಾಡಲಾಗಿದೆ. ಹನುಮ ಮೂರ್ತಿ ಮುಟ್ಟಿದ್ರೆ ಪರಿಸ್ಥಿತಿ ಸರಿ ಇರಲ್ಲ ಎಂಬ ಪ್ರತಾಪ್ ಸಿಂಹ ಎಚ್ಚರಿಕೆ ನಡುವೆಯೂ ಮೂರ್ತಿ ತೆರವುಗೊಳಿಸಲಾಗಿದೆ.

    ಭಾನುವಾರ ಕಲ್ಲು ತೂರಾಟ ನಡೆದಿದ್ದ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆಯಿಂದಲೇ ಹುಣಸೂರು ಪಟ್ಟಣ ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

  • ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಮೈಸೂರು: ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾತರದಂದು ಕಲ್ಲು ತೂರಾಟ ನಡೆದಿದ್ದ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಆಚರಿಸಲಾಗ್ತಿದೆ.

    ಹುಣಸೂರು ಬಂದ್‍ಗೆ ಬಿಜೆಪಿ ನಾಯಕರು ಕರೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಕೇಸರಿ ಪಡೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಿದೆ. ರಾತ್ರಿ ಬೇಲ್ ಮೇಲೆ ರಿಲೀಸ್ ಆದ ಸಂಸದ ಪ್ರತಾಪ ಸಿಂಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

    ಹುಣಸೂರು ಪಟ್ಟಣ ಬೆಳಗ್ಗೆಯಿಂದಲೇ ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಬಸ್‍ಗಳು ಕೂಡ ರಸ್ತೆಗೆ ಇಳಿದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೈಸೂರು ಜಿಲ್ಲಾಡಳಿತ ಹುಣಸೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಣೆ ಮಾಡಲಾಗಿದೆ.

  • ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

    ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

    ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ವೇಳೆ ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣವರ್ ಹೇಳಿದ್ದಾರೆ.

    ಗುಂಪು ಚದುರಿಸುವ ವೇಳೆ ಕೆಲವು ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ರವಿ ಚನ್ನಣ್ಣವರ್ ಸ್ಪಷ್ಟನೆ ನೀಡಿದ್ದಾರೆ.

    ಹನುಮ ಮಾಲಾಧಾರಿಗಳು ನಗರದಲ್ಲಿ ಮೆರವಣಿಗೆ ನಡೆಸಲು ಪ್ರತ್ಯೇಕ ಮಾರ್ಗವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲವರು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಜಿಲ್ಲಾಧಿಕಾರಿಗಳಿಂದ ಈ ಪತ್ರಕ್ಕೆ ಅನುಮತಿ ಸಿಗದ ಕಾರಣ ಮೆರವಣಿಗೆ ವೇಳೆ ಶಾಂತಿ ಕಾಪಾಡಲು ಭದ್ರತೆ ಕ್ರಮವನ್ನು ತೆಗೆದುಕೊಂಡಿದ್ದೆವು. ಈ ವೇಳೆ ಕೆಲ ಮಂದಿ ಅನುಮತಿ ರಹಿತ ಮಾರ್ಗವಾಗಿ ಮೆರವಣಿಗೆ ನಡೆಸಲು ಹೊರಟಿದ್ದರು. ಅವರನ್ನು ನಾವು ತಡೆದಿದ್ದೆವೆ. ಶಾಂತಿ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ವಾಹನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದೂಡಿ ಕಾರನ್ನು ಚಲಾಯಿಸಿದ್ದಕ್ಕೆ ಸಂಸದ ಪ್ರತಾಪ್‍ಸಿಂಹ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಡಿಯೋ ಲಭ್ಯವಾಗಿದ್ದು, ಸ್ಥಳದಲ್ಲಿರುವ ಅಧಿಕಾರಿಗಳನ್ನು ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸದ್ಯ ಸಂಸದ ಪ್ರತಾಪ್ ಸಿಂಹ ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದರು.

     

     

  • ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶಗೊಂಡು ಬ್ಯಾರಿಕೇಡ್ ಕಿತ್ತು ಹಾಕಿ ಕಾನೂನು ಉಲ್ಲಂಘಿಸಿ  ಪ್ರತಿಭಟಿಸಿದ್ದಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಹನುಮ ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಮತ್ತು ನೂರಾರು ಜನ ಮೈಸೂರಿನ ಹುಣಸೂರು ರಸ್ತೆಯಲ್ಲಿ ಮೆರವಣಿಗೆ ಹೊರಟಿದ್ದರು. ಆದರೆ ಯಾವುದೇ ಗಲಾಟೆ ಆಗಬಾರದು. ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಪೊಲೀಸರು ಬ್ಯಾರಿಕೇಡ್ ಹಾಕಿ ಮೆರವಣಿಗೆ ತಡೆಯುವ ಪ್ರಯತ್ನ ಮಾಡಿದ್ದರು.

    ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರು ವಾಹನ ತಡೆಗಾಗಿ ಹಾಕಿದ್ದ ಬ್ಯಾರಿಕೇಡ್ ಭೇದಿಸಿ ಡ್ರೈವರ್ ಇಳಿಸಿ ಪ್ರತಾಪ್‍ಸಿಂಹ ಕಾರನ್ನು ಚಲಾಯಿಸಿದ್ದರು. ಈ ವೇಳೆ ಸ್ವಲ್ಪದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಸದರ ಅತಿವೇಗ ಕಂಡು ಮಹಿಳಾ ಅಧಿಕಾರಿ ದೂರ ಸರಿದಿದ್ದಾರೆ.

    ನಂತರ ಹುಣಸೂರು ಪ್ರವೇಶಕ್ಕೂ ಮುನ್ನವೇ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಸಂಸದರು ಇರುವ ಜಾಗಕ್ಕೇ ಮೈಸೂರು ಎಸ್‍ಪಿ ರವಿ ಚನ್ನಣ್ಣವರ್ ಆಗಮಿಸಿದರು. ಈ ವೇಳೆ ಪ್ರತಾಪ್ ಸಿಂಹ ಪೊಲೀಸರ ನಡೆಯನ್ನು ಪ್ರಶ್ನಿಸಿದರು. ಕೊನೆಗೆ ಎಸ್‍ಪಿ ರವಿ ಚನ್ನಣ್ಣವರ್ ಪ್ರತಾಪ್ ಸಿಂಹ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಾತನ್ನು ಕೇಳದೇ ಇದ್ದಾಗ ಸಂಸದರ ಜೊತೆ ಹನುಮ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದರು.

    ಬಂಧನದ ವಿಚಾರ ತಿಳಿದ ಮೇಲೆ ಹುಣಸೂರಿನ ಬಿಳಿಕೆರೆಯಲ್ಲಿ ಸಂಸದರನ್ನು ಬಿಡುಗಡೆ ಮಾಡಿ ಅಂತ ಕಲ್ಲು ತೂರಾಟ ನಡೆಯಿತು. ಪೊಲೀಸರು ವಿಧಿಯಿಲ್ಲದೇ ಲಾಠಿಚಾರ್ಜ್ ಮಾಡಿ ಹಲವರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಸಂಸದ ಪ್ರತಾಪ್ ಸಿಂಹ ಮೇಲೆ ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು. ಐಪಿಸಿ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಐಪಿಸಿ 332(ಕರ್ತವ್ಯಕ್ಕೆ ಅಡ್ಡಿ) ಐಪಿಸಿ 279(ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು) ಕಾಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

     

     

    https://youtu.be/f0lk2O1Ndno

  • ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

    ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

    ಮೈಸೂರು: ಜೆಡಿಎಸ್ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಹುಣಸೂರು ಕ್ಷೇತ್ರದಿಂದ ಟಿಕೆಟ್ ಮಿಸ್ಸಾಗಿದ್ದಕ್ಕೆ ಕುಟುಂಬದ ವಿರುದ್ಧವೇ ಸಿಟ್ಟಾಗಿರುವ ರೇವಣ್ಣ ಪುತ್ರ ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ, ಚಿಕ್ಕಪ್ಪ ಕುಮಾರಸ್ವಾಮಿ ಹಾಗೂ ತಾತನ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಣಸೂರಿನಲ್ಲಿ ನಿಂತು ಜೆಡಿಎಸ್ಸೇ ಹುಬ್ಬೇರುವಂತೆ ಮಾಡಿದ್ದಾರೆ.

    ಮೈಸೂರಿನ ಹುಣಸೂರು ಇದೀಗ ಜೆಡಿಎಸ್ ಪಕ್ಷಕ್ಕೆ ಹುಳಿ ಹುಳಿಯಾಗಿ ಪರಿಣಮಿಸಿದೆ. ಒಂದೆಡೆ ಕ್ಷೇತ್ರದಲ್ಲಿ ಸತತ 4 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಶಾಸಕ ಜಿ.ಟಿ.ದೇವೆಗೌಡರ ಪುತ್ರ ಟಿಕೆಟ್ ಆಕಾಂಕ್ಷಿಯಾಗಿದ್ರೆ. ಮತ್ತೊಂದೆಡೆ ಈಗಷ್ಟೆ ಪಕ್ಷ ಸೇರಿರುವ ಮಾಜಿ ಸಂಸದ ವಿಶ್ವನಾಥ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ. ಇವರಿಬ್ಬರ ಮಧ್ಯೆ ನಾನೇನು ಕಮ್ಮಿ ಅನ್ನೋ ಹಾಗೆ ಬಂದಿದೆ ದೇವೇಗೌಡರ ಕುಟುಂಬದ ಕುಡಿ, ಶಾಸಕ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ.

    ಕಳೆದ 3 ತಿಂಗಳಿನಿಂದ ಹುಣಸೂರಿನಲ್ಲಿ ಬಿರುಗಾಳಿಯಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ರು. ತನ್ನದೇ ಗುಂಪು ಕಟ್ಟಿಕೊಂಡು ನಾನು ಟಿಕೆಟ್ ಆಕಾಂಕ್ಷಿ ಅನ್ನೋದನ್ನ ತನ್ನ ತಾತ ದೇವೇಗೌಡ ಹಾಗೂ ಚಿಕ್ಕಪ್ಪ ಕುಮಾರಸ್ವಾಮಿಗೆ ಪರೋಕ್ಷವಾಗಿ ತಿಳಿಸಿದ್ರು. ಆದ್ರೆ ವಿಶ್ವನಾಥ್ ಪಕ್ಷ ಸೇರ್ಪಡೆ ಅಧಿಕೃತವಾದ ಮೇಲೆ ಲೆಕ್ಕಾಚಾರ ತಲೆಕೆಳಗಾಗಿದೆ. ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೂಡಾ ಸಿಗಲ್ಲ ಎನ್ನಲಾಗಿದೆ. ಅದಕ್ಕೀಗ ಪ್ರಜ್ವಲ್ ತನ್ನ ಕುಟುಂಬಸ್ಥರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸೂಟ್‍ಕೇಸ್ ತಂದವರಿಗೆ ಮುಂದಿನ ಕುರ್ಚಿ, ಪ್ರಮಾಣಿಕರಿಗೆ ಹಿಂದಿನ ಕುರ್ಚಿ ಅಂತಾ ಹೇಳೋ ಮೂಲಕ ತನ್ನ ಚಿಕ್ಕಪ್ಪನಿಗೆ ಟಾಂಗ್ ನೀಡಿದ್ದಾರೆ.

    ತಾತ, ಚಿಕ್ಕಪ್ಪನ ಜೊತೆಗೆ ಸ್ಥಳೀಯ ನಾಯಕರನ್ನು ಟಾರ್ಗೆಟ್ ಮಾಡಿರುವ ಪ್ರಜ್ವಲ್, ನಮ್ಮನ್ನು ಬೆಳೆಸಿದ ನಾಯಕರು ನಮ್ಮನ್ನೇ ವಿರೋಧಿಸುತ್ತಾರೆ. ಎರಡು ದೋಣಿಗಳ ಮೇಲೆ ಕಾಲಿಟ್ಟು ಅವರು ಆರಾಮಾಗಿದ್ದಾರೆ ಅಂತ ಕಿಡಿಕಾರಿದ್ರು. ಇನ್ನು ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ಧ ಎಂದ ಪ್ರಜ್ವಲ್, ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ರು.

    ಅಂತಿಮವಾಗಿ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದ ಪ್ರಜ್ವಲ್, ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ರು. ಅಲ್ಲದೆ ಈ ಸಭೆ ಯಾರ ವಿರುದ್ಧವೂ ಅಲ್ಲ. ನನ್ನ ಬೆಂಬಲಿಗರು ಹಾಗೂ ಅಭಿಮಾನಿಗಳು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಿ. ದೇವೇಗೌಡರ ಕೈ ಬಲಪಡಿಸಿ. ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡೋಣ ಎಂದರು.

    ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಪ್ರಜ್ವಲ್, ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ತಾತ ಹಾಗೂ ಚಿಕ್ಕಪ್ಪನ ವಿರುದ್ಧವೇ ಸಿಟ್ಟಾಗಿದ್ದು ಮಾತ್ರ ಎಲ್ಲರನ್ನು ಹುಬ್ಬೇರಿಸಿದೆ. ಪಕ್ಷದ ನಾಯಕತ್ವದ ಬಹಿರಂಗ ಟೀಕೆ ಹಿನ್ನೆಲೆ ದೇವೇಗೌಡರು ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಸಮಾಧಾನಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣರಿಂದ ಈ ಬಗ್ಗೆ ಸ್ಪಷ್ಟೀಕರಣ ಕೊಡಿಸಲು ಕುಟುಂಬದಲ್ಲಿ ಪ್ರಯತ್ನ ನಡೆದಿದ್ದು, ಇಂದು ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪಷ್ಟೀಕರಣ ಕೊಡ್ತಾರಾ ಎಂದು ಕಾದುನೋಡಬೇಕಿದೆ.

  • ಮದುವೆ ಆಮಂತ್ರಣ ಕೊಡಲು ಹೋಗ್ತಿದ್ದ ಕಾರು ಪಲ್ಟಿಯಾಗಿ ನಾಲ್ವರ ಸಾವು

    ಮದುವೆ ಆಮಂತ್ರಣ ಕೊಡಲು ಹೋಗ್ತಿದ್ದ ಕಾರು ಪಲ್ಟಿಯಾಗಿ ನಾಲ್ವರ ಸಾವು

    ಮೈಸೂರು: ಮದುವೆ ಆಹ್ವಾನ ಪತ್ರಿಕೆ ನೀಡಲು ಹೋಗುತ್ತಿದ್ದ ಕಾರೊಂದು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿರುವ ಭೀಕರ ಅಪಘಾತ ಹುಣಸೂರಿನ ಹೆಚ್.ಡಿ.ಕೋಟೆ ರಸ್ತೆಯಲ್ಲಿ ಸಂಭವಿಸಿದೆ.

    ಹುಣಸೂರಿನ ನಲ್ಲೂರು ಪಾಲಾ ಗ್ರಾಮದ ಬಳಿ ಟವೇರಾ ಕಾರು ಪಲ್ಟಿಯಾಗಿ ಈ ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಬೆಂಗಳೂರಿನವರೆಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅತಿಯಾದ ವೇಗದ ಚಾಲನೆಯಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು ಹುಣಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತರ ವಿವರ: ಘಟನೆಯಲ್ಲಿ ಮೃತಪಟ್ಟವರನ್ನು ಘೋರ್ಪಡೆ (49), ರಾಜನ್ ಸೋಲಂಕಿ (25), ಕೌಶಿಕ್ ಚೌಹಾಣ್ (32) ಹಾಗೂ ಕಿಶೋರ್ ಯಾದವ್ ಎಂದು ಗುರುತಿಸಲಾಗಿದೆ.

    ಅಪಘಾತದಲ್ಲಿ ಮೂವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಶೇಖರ್, ಯಶ್ವಂ

    ತ್ ರಾವ್ ಘೋರ್ಪಡೆ, ವಿಜಯ್ ಘೋರ್ಪಡೆ ಗಾಯಾಳುಗಳಾಗಿದ್ದು ಇವರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಾಳು ಚಂದ್ರಶೇಖರ್ ಎಂಬವರ ಕುಟುಂಬದವರಿಗೆ ಮದುವೆಗೆ ಆಹ್ವಾನಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.