Tag: ಹುಣಸೂರು

  • ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರು: ಸಚಿವ ಶ್ರೀರಾಮುಲು ಹುಣಸೂರು ಬೈ ಎಲೆಕ್ಷನ್‍ನಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಸಿದ್ದರಾಮಯ್ಯ ಅಖಾಡದಲ್ಲೇ ರಾಮುಲು ಮತಬೇಟೆಯಾಡ್ತಿದ್ದಾರೆ. ಹಾಗಾಗಿ ಮೈಸೂರಲ್ಲಿ ಬಾದಾಮಿ ಫೈಟ್ ಪಕ್ಕಾ ಆಗಿದೆ. ಬಾದಾಮಿಯಲ್ಲಿ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ರಾಮುಲು ಸೋಲನುಭವಿಸಿದ್ದರು. ಅಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಮುಲು ಈಗ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

    ಸಚಿವ ಶ್ರೀರಾಮುಲು ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲಿಸಲು ಹೋರಾಟಕ್ಕೆ ಇಳಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮ ಶಿಷ್ಯ ಎಚ್.ಪಿ. ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ನಡುವೆ ಇವರಿಬ್ಬರೂ ಹುಣಸೂರನ್ನು ಬಾದಾಮಿ ಅಂದುಕೊಂಡಂತೆ ಕಾಣುತ್ತಿದೆ. ಏಕೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ 1,696 ಮತಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. ರಾಮುಲುಗೆ ಆ ಸೋಲಿನ ಸಿಟ್ಟು ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ, ಇಬ್ಬರು ಇಲ್ಲಿ ಮತ್ತೆ ತಾವೇ ಅಭ್ಯರ್ಥಿಗಳು ಎಂಬಂತೆ ಕಾದಾಟಕ್ಕೆ ಇಳಿದಿದ್ದಾರೆ.

    ಹುಣಸೂರಿನಲ್ಲೇ ಬೀಡುಬಿಟ್ಟಿರುವ ರಾಮುಲು ತಮ್ಮ ಸಮುದಾಯದ ಮತಗಳ ಸೆಳೆಯುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಸುಮಾರು 35 ಸಾವಿರ ಮತಗಳಿವೆ. ಈ ಮತಗಳಲ್ಲಿ ಬಹುಪಾಲು ಮತಗಳು ಬಿಜೆಪಿಗೆ ಬಂದರೆ ಅದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಶಕ್ತಿ. ತಮ್ಮ ಸಮುದಾಯದ ಮತಗಳ ಸೆಳೆಯುವ ಮೂಲಕ ರಾಮುಲು ತಮ್ಮ ಅಭ್ಯರ್ಥಿ ಗೆಲುವಿನ ಹಾದಿ ಹಿಡಿಯುವಂತೆ ಮಾಡಿ ತಾವು ನಾಯಕ ಸಮುದಾಯದ ದೊಡ್ಡ ನಾಯಕ ಅಂತ ಮತ್ತೆ ಸಾಬೀತು ಮಾಡಲು ಮುಂದಾಗಿದ್ದಾರೆ.

    ಹೀಗಾಗಿ, ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಅಂತಾ ಸವಾಲ್ ಹಾಕುತ್ತಿದ್ದಾರೆ. ಒಂದರ್ಥದಲ್ಲಿ ಇವರಿಬ್ಬರು ಟೀಕೆ – ಪ್ರತಿ ಟೀಕೆ ನೋಡಿದರೆ ಜನರು ಕೂಡ ಬಾದಾಮಿ ಚುನಾವಣೆಯನ್ನು ಕಣ್ಮುಂದೆ ತಂದುಕೊಳ್ತಿದ್ದಾರೆ. ಶ್ರೀರಾಮುಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಾದಾಮಿ ಸೇಡು ತೀರಿಸಿ ಕೊಳ್ತಾರಾ? ಅಥವಾ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಗೆಲ್ಲಿಸೋ ಮೂಲಕ ಶ್ರೀರಾಮುಲುಗೆ ಮತ್ತೆ ಮುಖ ಭಂಗ ಮಾಡ್ತಾರಾ ಕಾದು ನೋಡಬೇಕಿದೆ.

  • ಹುಣಸೂರಿನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ

    ಹುಣಸೂರಿನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ

    ಮೈಸೂರು: ಹುಣಸೂರು ಬೈ ಎಲೆಕ್ಷನ್‍ನಲ್ಲಿ ಜಾತಿ ಸಮೀಕರಣ ಹೆಚ್ಚಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಇಲ್ಲಿ ಕುರುಬ ವರ್ಸಸ್ ಕುರುಬ ಫೈಟ್ ಜೋರಾಗಿದೆ. ಕುರುಬ ಸಮುದಾಯಕ್ಕೆ ತಮ್ಮದೇ ಸಮುದಾಯದ ಎಚ್. ವಿಶ್ವನಾಥ್ ಅವರನ್ನು ಬೆಂಬಲಿಸಬೇಕೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂಬ ಗೊಂದಲದಲ್ಲಿದೆ. ಈ ನಡುವೆ ಹುಣಸೂರಲ್ಲಿ ಈಗ ಒಕ್ಕಲಿಗರ ಮತದ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗಿದೆ.

    ಹುಣಸೂರಿನಲ್ಲಿನ ಒಕ್ಕಲಿಗ ಮತದಾರರಿಗೆ ತಾವು ಯಾರ ವಿರುದ್ಧ ನಿಂತುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ಯಾರ ಪರ ನಿಂತರೆ ಯಾರಿಗೆ ನಷ್ಟವಾಗುತ್ತೆ ಎಂಬ ಲೆಕ್ಕಚಾರದಲ್ಲಿ ಮುಳುಗಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಒಕ್ಕಲಿಗ, ಅರೆ ಒಕ್ಕಲಿಗ ಮತಗಳು ಎಲ್ಲಾ ಸಮುದಾಯಕ್ಕಿಂತ ಹೆಚ್ಚಿವೆ. 45 ಸಾವಿರ ಒಕ್ಕಲಿಗ ಮತದಾರರು ಇದ್ದಾರೆ. ಅಲ್ಲಿಗೆ ಚುನಾವಣೆಯಲ್ಲಿ ಈ ಮತಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಒಕ್ಕಲಿಗರ ಮತ ಸೆಳೆಯಲು ಅಭ್ಯರ್ಥಿಗಳು ಪೈಪೋಟಿಗೆ ಇಳಿದಿದ್ದಾರೆ. ಇದರಿಂದ ಮಾಜಿ ಸಚಿವ ಜಿ.ಟಿ. ದೇವೇಗೌಡ ಮತ್ತು ಅವರ ಪುತ್ರನಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಕೆಲವರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ನಿಂತರೆ, ಕೆಲವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿದ್ದಾರೆ. ಮತ್ತೆ ಕೆಲವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ಜೆಡಿಎಸ್ ಸಂಪ್ರದಾಯಿಕ ಮತ ಜೆಡಿಎಸ್‍ಗೆ ಬಂದರೆ ಕಾಂಗ್ರೆಸ್‍ಗಿಂತಾ ಬಿಜೆಪಿಗೆ ನಷ್ಟ ಹೆಚ್ಚಿದೆ. ಹೀಗಾಗಿ ಬಿಜೆಪಿ ಒಕ್ಕಲಿಗ ಮತಗಳ ಒಲಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ. ಕಾಂಗ್ರೆಸ್ ಮಾತ್ರ ಒಕ್ಕಲಿಗ ಮತಗಳು ನಮಗೆ ಬರಲಿ ಇಲ್ಲದೆ ಇದ್ದರೆ ಜೆಡಿಎಸ್‍ಗೆ ಹೋಗಲಿ, ಬಿಜೆಪಿಗೆ ಮಾತ್ರ ಹೋಗಬಾರದು ಅಂತಾ ರಣತಂತ್ರ ಹೆಣೆಯುತ್ತಿದೆ.

  • ಅನರ್ಹ ಎಂದು ಟೀಕಿಸ್ತಾರೆ, ನಾನು ಅನರ್ಹ ಅಲ್ಲ- ಎಚ್.ವಿಶ್ವನಾಥ್

    ಅನರ್ಹ ಎಂದು ಟೀಕಿಸ್ತಾರೆ, ನಾನು ಅನರ್ಹ ಅಲ್ಲ- ಎಚ್.ವಿಶ್ವನಾಥ್

    ಮೈಸೂರು: ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲದೆ ನನ್ನನ್ನು ಅನರ್ಹ ಶಾಸಕ ಎಂದು ಟೀಕೆ ಮಾಡುತ್ತಿದ್ದಾರೆ. ನಾನು ಅನರ್ಹ ಅಲ್ಲ ನಾನು ಅರ್ಹ ಎಂದು ಟೀಕಾರರ ವಿರುದ್ಧ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಕಿಡಿ ಕಾರಿದರು.

    ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ವಿಶ್ವನಾಥ್ ಭ್ರಷ್ಟಚಾರಿ ಅಲ್ಲ, ವಿಶ್ವನಾಥ್ ಅಸಮರ್ಥ ಅಲ್ಲ. ಹೀಗಾಗಿ ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲದೆ ನನ್ನನ್ನು ಅನರ್ಹ ಶಾಸಕ ಎಂದು ಟೀಕೆ ಮಾಡುತ್ತಿದ್ದಾರೆ. ನಾನು ಅನರ್ಹ ಅಲ್ಲ ನಾನು ಅರ್ಹ. ಎಲ್ಲ ರೀತಿಯಲ್ಲೂ ಅರ್ಹ ಎಂದು ಸಮರ್ಥಿಸಿಕೊಂಡರು.

    ಹುಣಸೂರಿನಲ್ಲಿ ಮಾಜಿ ಶಾಸಕರು ಶಿಖಂಡಿ ರಾಜಕಾರಣ ಮಾಡುತ್ತಿದ್ದರು. ವಿರೋಧಿಗಳನ್ನು ಹತ್ತಿಕ್ಕಲು ದಲಿತರನ್ನು ಮುಂದೆ ಬಿಟ್ಟು, ಅವರ ವಿರುದ್ಧ ಜಾತಿ ನಿಂದನೆ ಕೇಸ್ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

    ನಾಮಪತ್ರ ಸಲ್ಲಿಕೆಗೂ ಮುನ್ನ ಎಚ್.ವಿಶ್ವನಾಥ್ ಅವರು ಮಾಜಿ ಶಾಸಕ ಎಸ್.ಚಿಕ್ಕಮಾದು ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಬೃಹತ್ ಸಮಾವೇಶ ಮಾಡುವ ಮೂಲಕ ಹುಣಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಸಮಾವೇಶದಲ್ಲಿ ಸಚಿವ ಶ್ರೀರಾಮುಲು, ಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ವಿಜಯ್‍ಶಂಕರ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಿದ್ದರು. ಮುನೇಶ್ವರ ಕಾವಲ್ ಮೈದಾನದಲ್ಲಿ ಸಾವಿರಾರು ಕಾರ್ಯಕರ್ತರ ನಡುವೆ ಸಮಾವೇಶ ನಡೆಸಲಾಯಿತು.

    ಎರಡು ನಾಮಪತ್ರ ಸಲ್ಲಿಕೆ
    ಹೆಚ್.ವಿಶ್ವನಾಥ್ ಅವರು ಹುಣಸೂರು ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಒಂದೇ ದಿನ ಎರಡೆರಡು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.30ರ ಸಂದರ್ಭದಲ್ಲಿ ಮೊದಲ ನಾಮಪತ್ರ ಸಲ್ಲಿಸಿದ್ದರು. ನಂತರ 2.45ರಲ್ಲಿ ಸಚಿವ ಶ್ರೀರಾಮುಲು ಜೊತೆ ಸೇರಿ ಮೆರವಣಿಗೆಯಲ್ಲಿ ತೆರಳಿ ಎರಡನೆ ನಾಮಪತ್ರ ಸಲ್ಲಿಸಿದರು. ಎರಡು ನಾಮ ಪತ್ರ ಸಲ್ಲಿಸುವ ಮೂಲಕ ಕುತೂಹಲ ಮೂಡಿಸಿದರು.

  • ಹುಣಸೂರಿನಲ್ಲಿ ಆಮಿಷವೊಡ್ಡಿ ಬಿಜೆಪಿ ಮತದಾರರನ್ನು ಸೆಳೆಯುತ್ತಿದೆ: ಕಾಂಗ್ರೆಸ್ ಆರೋಪ

    ಹುಣಸೂರಿನಲ್ಲಿ ಆಮಿಷವೊಡ್ಡಿ ಬಿಜೆಪಿ ಮತದಾರರನ್ನು ಸೆಳೆಯುತ್ತಿದೆ: ಕಾಂಗ್ರೆಸ್ ಆರೋಪ

    ಬೆಂಗಳೂರು: ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಆಮಿಷ ಒಡ್ಡಿ ಮತದಾರರನ್ನು ಸೆಳೆಯುತ್ತಿದ್ದು ಚುನಾವಣೆ ಆಯೋಗ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಧ್ಯಮ ವಿಭಾಗ ಮುಖ್ಯಸ್ಥ ಉಗ್ರಪ್ಪ, ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಹುಣಸೂರು ಕ್ಷೇತ್ರದಲ್ಲಿ ಅವ್ಯವಹಾರ, ಅಕ್ರಮ ನಡೆಯುತ್ತಿದೆ. ಯೋಗೇಶ್ವರ್ ಫೋಟೋ ಸಮೇತ ಸೀರೆಗಳು ಕ್ಷೇತ್ರದಲ್ಲಿ ಸಿಕ್ಕಿವೆ. ಯೋಗೇಶ್ವರ್ ಅವರ ಭಾವಚಿತ್ರ ಸಮೇತ ಮತ ಬಿಜೆಪಿ ಹಾಕಿ ಅಂತ ಆಮಿಷ ಒಡ್ಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

    ಬಿಜೆಪಿ ಅಕ್ರಮ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿದೆ. ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗಿದ್ದಾರೆ. ಆದರೆ ಬಿಜೆಪಿ ಅವರೇ ಇದನ್ನು ಮಾಡಿದ್ದಾರೆ. ಕೂಡಲೇ ಚುನಾವಣೆ ಆಯೋಗ ಸುಮೋಟೋ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕಾರ ಮಾಡಬೇಕು. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಚುನಾವಣೆ ಕಣದಿಂದ ಹಿಂದೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ವೇಳೆ ಮಾತನಾಡಿದ ಉಗ್ರಪ್ಪ ಬಿಜೆಪಿಯ ಈ ಕೆಲಸ ನೋಡಿದರೆ ಸೋಲನ್ನು ಒಪ್ಪಿಕೊಂಡಿದ್ದಾರೆ ಅನ್ನಿಸುತ್ತೆ. 15 ಕ್ಷೇತ್ರದಲ್ಲಿ ಗೆಲುವು ಸಾಧ್ಯ ಇಲ್ಲ ಅಂತ ವಾಮ ಮಾರ್ಗದಲ್ಲಿ ಗೆಲ್ಲಲು ಪ್ಲ್ಯಾನ್ ಮಾಡಿದೆ. ಹುಣಸೂರಿನಲ್ಲಿ 30 ಸಾವಿರ ಸೀರೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಕೂಡಾ ಶಿವಾಜಿನಗರದ ಟಿಕೆಟ್ ಅನ್ನು ತಮಿಳು ಜನಾಂಗದವರಿಗೆ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಅನರ್ಹರನ್ನ ಮಂತ್ರಿ ಮಾಡೋದಾಗಿ ಸಿಎಂ ಹೇಳಿದ್ದಾರೆ. ಶಂಕರ್ ಅವರನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡ್ತೀನಿ ಎಂದು ಸಿಎಂ ಹೇಳಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧ.ಬಿಜೆಪಿ ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ಹೋಗ್ತಿದೆ, ಕೂಡಲೇ ಚುನಾವಣೆ ಆಯೋಗ ಕ್ರಮ ಜರುಗಿಸಬೇಕು ಅಂತ ಒತ್ತಾಯಿಸಿದರು.

  • ಹುಣಸೂರಲ್ಲಿ ಇದು 4ನೇ ಬೈಎಲೆಕ್ಷನ್- ಘಟಾನುಘಟಿ ನಾಯಕರಿಗೆ ಜನ್ಮ, ಪುನರ್ಜನ್ಮ!

    ಹುಣಸೂರಲ್ಲಿ ಇದು 4ನೇ ಬೈಎಲೆಕ್ಷನ್- ಘಟಾನುಘಟಿ ನಾಯಕರಿಗೆ ಜನ್ಮ, ಪುನರ್ಜನ್ಮ!

    ಮೈಸೂರು: ಹುಣಸೂರಿನಲ್ಲಿ ಈ ಬಾರಿ ನಡೆಯುತ್ತಿರೋ ಉಪ ಚುನಾವಣೆ ಸೇರಿ ಇದುವರೆಗೂ ನಾಲ್ಕು ಉಪ ಚುನಾವಣೆಗಳು ನಡೆದಿವೆ. ಆಯ್ಕೆಯಾದವರ ಸಾವಿನಿಂದಾದ ಉಪ ಚುನಾವಣೆಗಳು ಇವಲ್ಲ. ಆದರೆ ಇವು ಗೆದ್ದವರ ಅಧಿಕಾರದ ಅತಿ ಆಸೆಯಿಂದ ನಡೆದ ಚುನಾವಣೆಗಳು. ಈ ಬಾರಿಯೂ ಒಂದರ್ಥದಲ್ಲಿ ಅದೇ ಆಗುತ್ತಿದೆ.

    ಮೈಸೂರಿನ ಹುಣಸೂರು ಕ್ಷೇತ್ರ ಉಪಚುನಾವಣೆಯಿಂದಲೇ ಫೇಮಸ್ ಆಗುತ್ತಿದೆ. ವಿಧಾನಸಭೆಗೆ ಗೆದ್ದವರು ಅವಧಿ ಪೂರೈಸದೇ ಸಂಸದರಾಗಿದ್ದು, ಚುನಾವಣೆಗೆ ನಿಲ್ಲದೆ ಸಿಎಂ ಸ್ಥಾನಕ್ಕೆ ಏರಿದವರಿಗೆ ಸ್ಥಾನ ಕಲ್ಪಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಇಂತಹ ಕಾರಣದಿಂದ ಹುಣಸೂರಿನಲ್ಲಿ ಉಪ ಚುನಾವಣೆಗಳು ನಡೆದು ಹೋಗಿವೆ. ಈಗ ನಡೆಯುತ್ತಿರುವ ಉಪ ಚುನಾವಣೆಯೂ ಕೂಡ ಇದರ ಮುಂದುವರಿದ ಭಾಗವಾಗಿದೆ.

    ಉಪಚುನಾವಣೆ ಇತಿಹಾಸ:
    1972 ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆ ನಡೆಯಿತು. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ. ದೇವರಾಜ ಅರಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ದೇವರಾಜ ಅರಸ್ ಮುಖ್ಯಮಂತ್ರಿ ಆಗ್ತಾರೆ. ಆಗ ಈ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದ ಕರಿಯಪ್ಪಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ದೇವರಾಜ ಅರಸ್ ಇಲ್ಲಿಂದ್ದ ಸ್ಪರ್ಧಿಸಿ ಗೆಲ್ಲುತ್ತಾರೆ. 1989 ರಲ್ಲಿ ಹುಣಸೂರ ಕ್ಷೇತ್ರದಿಂದ ಗೆದ್ದಿದ್ದ ಡಿ. ದೇವರಾಜ ಅರಸ್ ಪುತ್ರಿ 1991 ರಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಆಗ ನಡೆದ ಉಪ ಚುನಾವಣೆಯಲ್ಲಿ ಎಸ್. ಚಿಕ್ಕಮಾದು ಗೆಲ್ಲುತ್ತಾರೆ.

    1994 ರಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಂ ಸಿ.ಎಚ್. ವಿಜಯಶಂಕರ್ ಲೋಕಸಭೆಗೆ ಆಯ್ಕೆ ಆಗುತ್ತಾರೆ. ಆಗ 1998 ರಲ್ಲಿ ನಡೆದ ಮೂರನೇ ಉಪ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಆಯ್ಕೆಯಾಗುತ್ತಾರೆ. ಇದು ಜಿಟಿಡಿಗೆ ಸಿಕ್ಕ ರಾಜಕೀಯ ಜನ್ಮ. ಹೀಗಾಗಿ ಹುಣಸೂರು ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ, ಪುನರ್ ಜನ್ಮ ಸಿಕ್ಕಿದೆ.

    ಒಟ್ಟಿನಲ್ಲಿ ಹುಣಸೂರಿನಲ್ಲಿ ನಡೆಯುವ ಉಪ ಚುನಾವಣೆಗಳು ಒಬ್ಬೊಬ್ಬ ನಾಯಕರಿಗೆ ರಾಜಕೀಯ ಜನ್ಮ ಕೊಟ್ಟಿರೋದು ಸ್ಪಷ್ಟ. ಈ ಬಾರಿಯೂ ಹುಣಸೂರಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಯಾರಿಗೆ ರಾಜಕೀಯ ಮರು ಜನ್ಮ ಸಿಗುತ್ತೋ, ಯಾರ ರಾಜಕೀಯ ಅಂತ್ಯವಾಗುತ್ತೋ ಕಾದು ನೋಡಬೇಕಿದೆ.

  • ಗೆದ್ದು ಮಂತ್ರಿಯಾಗಿ ಹುಣಸೂರನ್ನು ಜಿಲ್ಲೆ ಮಾಡ್ತೇನೆ- ವಿಶ್ವನಾಥ್ ಶಪಥ

    ಗೆದ್ದು ಮಂತ್ರಿಯಾಗಿ ಹುಣಸೂರನ್ನು ಜಿಲ್ಲೆ ಮಾಡ್ತೇನೆ- ವಿಶ್ವನಾಥ್ ಶಪಥ

    ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತೆ ಮೈಸೂರು ವಿಭಜನೆಯ ಕೂಗು ಎತ್ತಿದ್ದು, ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಶಪಥ ಮಾಡಿದ್ದಾರೆ.

    ಹುಣಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಅಖಾಡಕ್ಕಿಳಿದ ಮೊದಲ ದಿನವೇ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನಾನು ಹುಣಸೂರಿನಿಂದ ಗೆದ್ದು ಮಂತ್ರಿಯಾಗುತ್ತೇನೆ. ಹುಣಸೂರು ತಾಲೂಕನ್ನು ಹೊಸ ಜಿಲ್ಲೆಯಾಗಿ ಮಾಡುತ್ತೇನೆ. ಇದು ನನ್ನ ಶಪಥ ಎಂದು ಭರವಸೆ ನೀಡಿದ್ದಾರೆ.  ಇದನ್ನೂ ಓದಿ: ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ನನ್ನದು ಬರೀ ಮಾತು, ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡುತ್ತೇನೆ. ನಮ್ಮದೇ ಸರ್ಕಾರ ಇದೆ. ಹುಣಸೂರು ತಾಲೂಕಿನ್ನು ಜಿಲ್ಲೆಯನ್ನಾಗಿ ಮಾಡಿಯೇ ಮಾಡುತ್ತೇನೆ. ಅದಕ್ಕೆ ದೇವರಾಜ ಅರಸು ಹೆಸರನ್ನು ಇಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶದ ಮರುದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ವಿಶ್ವನಾಥ್ ಮಾತು ಕೊಟ್ಟಿದ್ದಾರೆ.

    ಬಿಜೆಪಿ ಸೇರುವುದಕ್ಕೂ ಮುನ್ನ ಸಹ ಸಹ ವಿಶ್ವನಾಥ್ ಅವರು ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ್ದರು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.

  • ‘ಸೈನಿಕ’ನ ಹುಣಸೂರು ಕನಸು ಭಗ್ನ-ಪಾಂಪ್ಲೆಟ್ ಪ್ರಿಂಟ್ ಹಾಕಿಸಿದ್ದ ಯೋಗೇಶ್ವರ್

    ‘ಸೈನಿಕ’ನ ಹುಣಸೂರು ಕನಸು ಭಗ್ನ-ಪಾಂಪ್ಲೆಟ್ ಪ್ರಿಂಟ್ ಹಾಕಿಸಿದ್ದ ಯೋಗೇಶ್ವರ್

    ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧಗೊಂಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕನಸು ಭಗ್ನಗೊಂಡಿದೆ. ಉಪಚುನಾವಣೆಯಲ್ಲಿ ನನಗೆ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಿಂದ ಸಿ.ಪಿ.ಯೋಗೇಶ್ವರ್ ತಯಾರಿ ಮಾಡಿಕೊಂಡಿದ್ದರು.

    ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಎಲ್ಲರೂ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಸಹ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹುಣಸೂರಿನಿಂದ ಹೆಚ್.ವಿಶ್ವನಾಥ್ ಸ್ಪರ್ಧೆ ಮಾಡೋದು ಖಚಿತವಾಗಿದೆ. ಇತ್ತ ಹೆಚ್.ವಿಶ್ವನಾಥ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಯೋಗೇಶ್ವರ್ ಅವರಿಗೆ ನಿರಾಸೆಯಾಗಿದೆ.

    ಬಿಜೆಪಿಯಿಂದ ತಮಗೇ ಟಿಕೆಟ್ ಸಿಗುತ್ತೆ ಎಂಬ ಭರವಸೆಯಲ್ಲಿ ಒಳಗೊಳಗೇ ಸ್ಪರ್ಧೆಗೆ ಸಂಪೂರ್ಣ ಸಿದ್ಧತೆ ನಡೆಸಿಕೊಂಡಿದ್ದರು. ಮತದಾರರಿಗೆ ಹಂಚಲು 50 ಸಾವಿರಕ್ಕೂ ಹೆಚ್ಚು ಪಾಂಪ್ಲೆಟ್ಸ್ ಪ್ರಿಂಟ್ ಮಾಡಿಸಿದ್ದರು. ಪಾಂಪ್ಲೆಟ್‍ಗಳಲ್ಲಿ ಬಿಜೆಪಿಯ ರಾಜ್ಯ ನಾಯಕರ ಜೊತೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಫೋಟೋಗಳನ್ನು ಹಾಕಿಸಿದ್ದರು. ಹುಣಸೂರು ಕ್ಷೇತ್ರದ ಸ್ಥಳೀಯ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಿ.ಪಿ. ಯೋಗೇಶ್ವರ್, ಗುಟ್ಟಾಗಿ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.

  • ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನ- ಬಿಜೆಪಿ ಸೇರಲು ಜಿಟಿಡಿ ನಿರ್ಧಾರ!

    ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನ- ಬಿಜೆಪಿ ಸೇರಲು ಜಿಟಿಡಿ ನಿರ್ಧಾರ!

    ಬೆಂಗಳೂರು: ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನವಾಗುವ ಲಕ್ಷಣ ಕಾಣುತ್ತಿದೆ. ಸರ್ಕಾರ ಬಿದ್ದ ಮೇಲೆ ಪಕ್ಷದಿಂದ ಬಹುತೇಕ ದೂರವೇ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ.

    ಹುಣಸೂರು ಉಪ ಚುನಾವಣೆಯ ಬಿಜೆಪಿ ಟಿಕೆಟ್ ಅನ್ನು ತಮ್ಮ ಮಗನಿಗೆ ನೀಡುವಂತೆ ಕೇಸರಿ ಪಡೆಯ ನಾಯಕರಿಗೆ ಜಿ.ಟಿ.ದೇವೇಗೌಡ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಕ್ಕರೆ ಮಾಜಿ ಸಚಿವರು ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರುವುದು ಪಕ್ಕಾ ಆಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡ ಅವರು ಈಗಾಗಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರ ಮೂಲಕ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ನಾಯಕರ ಜೊತೆಯೂ ಸಂಪರ್ಕದಲ್ಲಿ ಇದ್ದಾರೆ. ಹುಣಸೂರು ಕ್ಷೇತ್ರದಿಂದ ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪರ್ಧೆ ಮಾಡುವುದು ಬಹುತೇಕ ಡೌಟ್. ಹೀಗಾಗಿ ತಮ್ಮ ಮಗನಿಗೆ ಟಿಕೆಟ್ ಕೊಡುವಂತೆ ಬಿಜೆಪಿ ನಾಯಕರಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬಿಜೆಪಿ ನಾಯಕರು ಜಿ.ಟಿ.ದೇವೇಗೌಡ ಅವರ ಮನವಿಗೆ ಒಪ್ಪಿದರೆ ಬಹುತೇಕ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಟಿಕೆಟ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಜಿಟಿ ದೇವೇಗೌಡ ಅವರಿಗೆ ತಿಳಿಸಿದೆ. ಹೀಗಾಗಿ ಬುಧವಾರ ಹೊರ ಬೀಳಲಿರುವ ಅನರ್ಹ ಶಾಸಕರ ಪ್ರಕರಣದ ತೀರ್ಪಿನ ಮೇಲೆ ಜಿಟಿ ದೇವೇಗೌಡ ಅವರ ಬೇಡಿಕೆ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಜಿ.ಟಿ.ದೇವೇಗೌಡ ಅವರು ವಾರದ ಹಿಂದಷ್ಟೇ ಕಂದಾಯ ಸಚಿವ ಆರ್.ಅಶೋಕ್ ಅವರ ಮನೆಗೆ ನೀಡಿದ್ದರು. ಈ ವೇಳೆ ಬಿಜೆಪಿ ಸೇರ್ಪಡೆ ಕುರಿತ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದರು. ಉಪಚುನಾವಣೆಗೂ ಮುನ್ನ ಪಕ್ಷ ಸೇರ್ಪಡೆಗೊಂಡರೆ ಬಿಜೆಪಿಗೆ ಬಲ ಸಿಗುತ್ತದೆ. ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಮಾಜಿ ಸಚಿವರು ಹಾಕಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

  • ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ಮೈಸೂರು: ನಾನು ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಹಣವನ್ನು ತಾವೇ ಉಳಿಸಿಕೊಂಡಿದ್ದರೆ ಸಂತೋಷವಿತ್ತು. ಆದರೆ ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಲು ಹೋಗಿ ಸೋತಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ. ಯಾರಾದರು ಅವರ ಬೆನ್ನುತಟ್ಟಿ ನನ್ನ ವಿರುದ್ಧ ನಿಲ್ಲವಂತೆ ಹೇಳಿದರೂ ಅವರು ಹಾಗೇ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಹೈಕಮಾಂಡ್ ಹಾಗೂ ಪಕ್ಷದ ನಿಧಾರವನ್ನು ಪಾಲಿಸುತ್ತೇನೆ. ನಮ್ಮ ಪಕ್ಷ ಏನು ತೀರ್ಮಾನ ಕೈಗೊಂಡಿದೆಯೋ ಅದಕ್ಕೆ ನಮ್ಮ ಸಹಮತವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾವಿದೆ ಎಂದು ಎಚ್.ಪಿ.ಮಂಜುನಾಥ್ ಮೂರು ಬಾರಿ ಹೇಳಿದರು.

  • ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಮೈಸೂರು: ಕೆರೆಗೆ ಈಜಲು ಹೋದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಹೈರೆಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಘಟನೆ ನಡೆದ ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಇಬ್ಬರು ಮಕ್ಕಳ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ರಾತ್ರಿಯಾದ ಕಾರಣ ಕಾರ್ಯಚರಣೆಯನ್ನ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಕಾರ್ಯಚರಣೆ ಆರಂಭ ಮಾಡಿ ಮತ್ತಿಬ್ಬರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

    ನಾಪತ್ತೆಯಾಗಿದ್ದ ನಾಲ್ವರೂ ಸಹಪಾಠಿಗಳಾಗಿದ್ದು, ಹುಣಸೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರಿನ ನಿವಾಸಿಗಳಾದ ಅನಿಲ್, ಭರತ್, ಧನಂಜಯ್, ಯಶವಂತ್ ಮೃತ ವಿದ್ಯಾರ್ಥಿಗಳು.

    ಕಾರ್ಯಾಚರಣೆ ನಡೆಸಿದ ಕೆರೆಯ ದಡದಲ್ಲಿ ಚಪ್ಪಲಿ, ವಾಚ್, ಬೈಕ್ ಪತ್ತೆಯಾಗಿದ್ದು, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.