Tag: ಹುಣಸೂರು

  • ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಹುಣಸೂರು ನೂತನ ಶಾಸಕ

    ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಹುಣಸೂರು ನೂತನ ಶಾಸಕ

    ಮೈಸೂರು: ಸುತ್ತೂರು ಮಠಕ್ಕೆ ಹುಣಸೂರು ನೂತನ ಕಾಂಗ್ರೆಸ್ ಶಾಸಕ ಹೆಚ್ ಪಿ ಮಂಜುನಾಥ್ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

    ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ಸುತ್ತೂರು ಶ್ರೀಗಳು ಶಾಸಕ ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿದರು. ಶ್ರೀಗಳ ಜೊತೆ ಶಾಸಕ ಎಚ್ ಪಿ ಮಂಜುನಾಥ್ ಕೆಲ ಕಾಲ ಚರ್ಚೆ ನಡೆಸಿದರು.

    ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಅವರನ್ನು ಹೆಚ್ ಪಿ ಮಂಜುನಾಥ್ ಸೋಲಿಸಿದ್ದರು. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದರು. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದರು.

  • ಗೆಲುವಿನ ಲೆಕ್ಕದ ಚೀಟಿ ವೈರಲ್

    ಗೆಲುವಿನ ಲೆಕ್ಕದ ಚೀಟಿ ವೈರಲ್

    ಮೈಸೂರು: ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೂ ಕೆಲ ಗಂಟೆಗಳು ಬಾಕಿ ಇವೆ. ಆದರೂ ಅಧಿಕೃತ ಫಲಿತಾಂಶಕ್ಕೂ ಮುನ್ನ ತರಾವರಿ ಲೆಕ್ಕಚಾರಗಳು ನಡೆದಿವೆ.

    ಹುಣಸೂರು ಉಪಚುನಾವಣೆಯಲ್ಲಿ ಗೆಲುವು ಯಾರಿಗೆ ಎಂಬ ಹೊಸ ಲೆಕ್ಕಚಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಚಾರ ಹಾಕಿರುವ ಪಕ್ಷಗಳ ಕಾರ್ಯಕರ್ತರು, ಇಂತಹ ಜಾತಿ ಮತ ತಮಗೆ ಇಷ್ಟೇ ಪ್ರಮಾಣದಲ್ಲಿ ಬರುತ್ತೆ ಎನ್ನುವುದರ ವಿಶ್ವಾಸದ ಮೇಲೆ ಗೆಲುವಿನ ಲೆಕ್ಕ ಬರೆದಿದ್ದಾರೆ. ಇದನ್ನೂ ಓದಿ: ಅಗ್ನಿಪರೀಕ್ಷೆಯಲ್ಲಿ ಬಿಎಸ್‍ವೈ ಸರ್ಕಾರ ಪಾಸ್ – ಉಪಕದನದಲ್ಲಿ ಬಿಜೆಪಿಗೆ 8-10 ಕ್ಷೇತ್ರಗಳಲ್ಲಿ ಮುನ್ನಡೆ

    ನಾವು ಇಷ್ಟೇ ಅಂತರದಲ್ಲಿ ಗೆಲ್ಲುತ್ತೇವೆ ಅಂತ ಬಿಳಿ ಹಾಳೆಯಲ್ಲಿ ಬರೆದಿರುವ ಲೆಕ್ಕದ ಚೀಟಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಜೆಪಿ ಕಾರ್ಯಕರ್ತರ ಲೆಕ್ಕದಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ 75,645 ಮತ ಪಡೆದು 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಲೆಕ್ಕದಲ್ಲಿ ಮಂಜುನಾಥ್ 81,935 ಮತಪಡೆದು 13 ಸಾವಿರ ಮತದ ಅಂತರದಲ್ಲಿ ಜಯ ಗಳಿಸುತ್ತಾರೆ. ಆದರೆ ಜೆಡಿಎಸ್ ಮಾತ್ರ ಎರಡನೇ ಸ್ಥಾನಕ್ಕೆ ಲೆಕ್ಕ ಹಾಕಿದೆ. ಈ ಚೀಟಿ ಕೂಡ ವೈರಲ್ ಆಗುತ್ತಿದೆ. ಇದು ಹುಣಸೂರು ಉಪ ಚುನಾವಣೆ ಎಷ್ಟರಮಟ್ಟಿಗೆ ಟೈಟ್ ಫೈಟ್‍ನಲ್ಲಿ ನಡೆದಿದೆ ಎಂಬುದಕ್ಕೆ ಸ್ಯಾಂಪಲ್ ಆಗಿದೆ.

    ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ. 80.62 ಮತದಾನವಾಗಿದೆ. ಸೋಮವಾರ ಫಲಿತಾಂಶ ಹೊರ ಬೀಳಲಿದ್ದು, ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

  • ಜೆಡಿಎಸ್ ಸ್ಥಾನದ ಮೇಲೆ ಹುಣಸೂರು ಫಲಿತಾಂಶ

    ಜೆಡಿಎಸ್ ಸ್ಥಾನದ ಮೇಲೆ ಹುಣಸೂರು ಫಲಿತಾಂಶ

    ಮೈಸೂರು: ಹುಣಸೂರು ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಕಿಂಗ್ ಆಗುತ್ತಾ ಅಥವಾ ಕಿಂಗ್ ಮೇಕರ್ ಆಗುತ್ತಾ?, ಬೈ ಎಲೆಕ್ಷನ್ ನ ಗೆಲುವಿನ ಲೆಕ್ಕಾಚಾರದಲ್ಲಿ ಜೆಡಿಎಸ್‍ನ ಪಾತ್ರ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಈ ರೀಪೋರ್ಟ್ ನಲ್ಲಿದೆ.

    ಹುಣಸೂರು ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಿರೋದು ಯಾರನ್ನೂ ಸೋಲಿಸಲು ಅಥವಾ ಯಾರನ್ನೋ ಗೆಲ್ಲಿಸಲು ಅಲ್ಲ. ಬದಲಾಗಿ ನಾವೇ ಗೆಲ್ಲುವುದಕ್ಕೆ ಸ್ಪರ್ಧೆ ಮಾಡಿದ್ದೇವೆ ಅಂತ ದಳಪತಿಗಳು ಪದೇ ಪದೇ ಹೇಳುತ್ತಿದ್ದರು. ಆದರೆ, ಮತದಾನ ನಡೆದ ಮೇಲೆ ಜೆಡಿಎಸ್ ಸ್ಪರ್ಧೆ ಈ ಕ್ಷೇತ್ರದಲ್ಲಿ ಯಾರನ್ನೋ ಸೋಲಿಸುವ ಸಲುವಾಗಿಯೇ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲಿಗೆ ನಾವೇ ಕಿಂಗ್ ಅಂತ ಹೇಳುತ್ತಿದ್ದ ಜೆಡಿಎಸ್ ಮತದಾನದ ದಿನ ಕಿಂಗ್‍ಮೇಕರ್ ಸ್ಥಾನಕ್ಕೆ ಬಂದು ಕುಳಿತಿರೋದು ಸ್ಪಷ್ಟ.

    ಹುಣಸೂರು ಉಪ ಚುನಾವಣೆಯ ಫಲಿತಾಂಶ ಜೆಡಿಎಸ್ ಪಡೆಯೋ ಮತಗಳ ಮೇಲೆ ನಿಂತಿದೆ. ಜೆಡಿಎಸ್‍ನ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ಸಿಗೆ ಶಿಫ್ಟ್ ಆಗಿವೆ ಅನ್ನೋ ಮಾತು ಮತದಾನದ ಬಳಿಕ ದಟ್ಟವಾಗಿ ಕೇಳಿ ಬರುತ್ತಿದೆ. ಅಲ್ಲಿಗೆ ಈ ಮಾತು ನಿಜವೇ ಆದರೆ ಈ ಫಲಿತಾಂಶದ ದಿಕ್ಕೂ ನಿರ್ಧಾರವಾಗುವುದು ಜೆಡಿಎಸ್ ಪಡೆಯೋ ಮತಗಳಿಂದ ಅನ್ನೋದು ಸ್ಪಷ್ಟ.

    ಜೆಡಿಎಸ್ ಈ ಚುನಾವಣೆಯಲ್ಲಿ 30 ಸಾವಿರಕ್ಕಿಂತ ಹೆಚ್ಚು ಮತ ಪಡೆದರೆ ಅದು ಬಿಜೆಪಿ ಪಾಲಿಗೆ ವರವಾಗಲಿದೆ. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜೆಡಿಎಸ್ ಇಷ್ಟು ಮತ ದಾಟಲೇ ಬೇಕು. ಒಂದು ವೇಳೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಂತರೆ ಅದು ಕಾಂಗ್ರೆಸ್ಸಿಗೆ ವರವಾಗಲಿದೆ. ಕಾಂಗ್ರೆಸ್ ಗೆಲುವಿನ ಹಾದಿ ಹಿಡಿಯಬೇಕಾದರೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಲ್ಲಬೇಕು.

    ಹೀಗಾಗಿಯೆ ಬಿಜೆಪಿ-ಕಾಂಗ್ರೆಸ್ ತಾವು ಪಡೆಯೋ ಮತಗಳ ಲೆಕ್ಕಕ್ಕಿಂತ ಜೆಡಿಎಸ್ ಪಡೆಯೋ ಮತಗಳು ಎಷ್ಟು ಎಂಬುದರ ಮೇಲೆ ಗೆಲುವಿನ ಲೆಕ್ಕ ಬರೆದಿವೆ. ಜೆಡಿಎಸ್ ತಾನು ಸೋತು ಹಳ್ಳಿಹಕ್ಕಿಯ ಗೆಲುವಿನ ರೆಕ್ಕೆ ತುಂಡು ಮಾಡುತ್ತಾ? ಅಥವಾ ಜೆಡಿಎಸ್ ತನ್ನ ವೋಟ್ ಬ್ಯಾಂಕ್ ತನ್ನಲ್ಲೇ ಉಳಿಸಿಕೊಂಡು ಕಾಂಗ್ರೆಸ್ ಕೈ ಕಟ್ ಮಾಡುತ್ತಾ ಎಂಬುದನ್ನು ಸೋಮವಾರದವರೆಗೆ ಕಾದು ನೋಡಬೇಕಿದೆ.

  • ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಮೈಸೂರು: ಉಪಚುನಾವಣೆಯ ಫಲಿತಾಂಶಕ್ಕೆ ಇನ್ನೂ ಒಂದು ದಿನ ಬಾಕಿ ಇದ್ದು, ಕ್ಷೇತ್ರಗಳಲ್ಲಿ ತರಾವರಿ ಲೆಕ್ಕಾಚಾರ ಶುರುವಾಗಿವೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಜೋರಿದ್ದು, ಈ ನಡುವೆ ಹುಣಸೂರು ಉಪ ಚುನಾವಣೆ ಅಖಾಡದಲ್ಲಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಟೆಂಪಲ್ ರನ್ ನಡೆಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮಹಾರಾಷ್ಟ್ರದ ಶಿರಡಿಗೆ ತೆರಳಿ ಸಾಯಿಬಾಬಾರಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಸಾಯಿಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿರಡಿಯ ಸಾಯಿಬಾಬಾನ ದರ್ಶನ ಪಡೆದ ಬಳಿಕ ಮಂತ್ರಾಲಯಕ್ಕೆ ತೆರಳಲಿರುವ ವಿಶ್ವನಾಥ್, ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಪೂಜೆ ಮುಗಿಸಿ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ್ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಶ್ರೀ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಕೂಡ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಯಾವ ದೇವರು ಯಾರಿಗೆ ಗೆಲುವಿನ ವರ ಕೊಡುತ್ತಾರೆ ಎಂಬುದು ಸೋಮವಾರ ಸ್ಪಷ್ಟವಾಗಲಿದೆ.

  • ನಮಗೆ ಅನ್ಯಾಯ ಮಾಡಿದ್ದರ ಶಾಪ ಫಡ್ನವಿಸ್‍ಗೆ ತಟ್ಟಿದೆ – ಶಿವಲಿಂಗೇಗೌಡ

    ನಮಗೆ ಅನ್ಯಾಯ ಮಾಡಿದ್ದರ ಶಾಪ ಫಡ್ನವಿಸ್‍ಗೆ ತಟ್ಟಿದೆ – ಶಿವಲಿಂಗೇಗೌಡ

    ಮೈಸೂರು: ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಅವತ್ತು ನಮಗೆ ಅನ್ಯಾಯ ಮಾಡಿದ್ದರ ಶಾಪದಿಂದ ಇಂದು ಅವರ ಅಧಿಕಾರ ಹೋಯ್ತು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

    ಇಂದು ಹುಣಸೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ನಿಮ್ಮ ತೀರ್ಪಿಗೆ ಅನ್ಯಾಯ ಮಾಡಿ ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿ ಅವರಿಗೆ ಅನ್ಯಾಯ ಮಾಡಿದ್ದಾರೆ. ರಾಜೀನಾಮೆ ನೀಡಿ ಮುಂಬೈಗೆ ಹೋಗಿ ಕುಳಿತುಕೊಂಡಿದ್ದರು ಎಂದು ಅನರ್ಹ ಶಾಸಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.

    ಅಂದು ನಾವು ಅನರ್ಹ ಶಾಸಕರನ್ನು ಹುಡುಕಿಕೊಂಡು ಮುಂಬೈಗೂ ಕೂಡ ಹೋಗಿದ್ದೆವು. ಆದರೆ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಮ್ಮನ್ನು ಹೋಟೆಲ್ ಒಳಗೆ ಬಿಡದೆ ರಸ್ತೆಯಲ್ಲಿ ನಿಲ್ಲಿಸಿದರು. ಅಂದು ನಾವು ರಸ್ತೆಯಲ್ಲಿ ನಿಂತುಕೊಂಡು ತಿಂಡಿ ಮಾಡಿದ್ದೇವೆ. ಅವತ್ತು ದೇವೇಂದ್ರ ಫಡ್ನವಿಸ್ ನಮಗೆ ಮೋಸ ಮಾಡಿದ್ದ ಕಾರಣದಿಂದಲೇ ಅವರ ಅಧಿಕಾರ ಹೋಯ್ತು ಎಂದು ಹೇಳಿದರು.

    ಅಂದು ನಮಗೆ ಮುಂಬೈ ಗೊತ್ತಿಲ್ಲ. ಭಾಷೆ ಗೊತ್ತಿಲ್ಲ ಆದರೆ ಅವತ್ತು ನಮ್ಮನ್ನು ಮಹಾರಾಷ್ಟ್ರ ಪೊಲೀಸರು ಜೀಪಿನಲ್ಲಿ ಕರೆದುಕೊಂಡು ಹೋಗಿ ಸಂಜೆವರೆಗೂ ಮಹಾರಾಷ್ಟ್ರದ ರಸ್ತೆಗಳನ್ನೆಲ್ಲ ಸುತ್ತಿಸಿದರು. ನಂತರ ಸಂಜೆ ವೇಳೆ ಕರೆದುಕೊಂಡು ಬಂದು ನಮ್ಮನ್ನು ಬಿಟ್ಟರು. ಆ ಕಾರಣದಿಂದಲೇ ಫಡ್ನವಿಸ್ ಅವರು ಇಂದು ಬಹುಮತ ಸಾಬೀತು ಮಾಡಲಾಗದೆ ಅಧಿಕಾರ ಕಳೆದುಕೊಂಡರು ಎಂದು ಶಿವಲಿಂಗೇಗೌಡರು ಹೇಳಿದ್ದಾರೆ.

  • ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಮೈಸೂರು: ಹುಣಸೂರು ಉಪಚುನಾವಣಾ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಣಸೂರು ನಗರದ ಕುಲ್ಕಣಿ ಉಮೇಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಗುರುವಾರ ಆಯಾಸಗೊಂಡಿದ್ದ ಅವರು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ತಕ್ಷಣವೇ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ಚುನಾವಣಾ ಅಧಿಕಾರಿಗಳು ಉಮೇಶ್ ಅವರಿಗೆ ಕ್ರಮಸಂಖ್ಯೆ 9 ಹಾಗೂ ಫ್ರಾಕ್ ಗುರುತು ನೀಡಿದ್ದಾರೆ. ಬಿಜೆಪಿಯಿಂದ ಎಚ್.ವಿಶ್ವನಾಥ್, ಕಾಂಗ್ರೆಸ್‍ನಿಂದ ಎಚ್.ಪಿ.ಪಾಟೀಲ್, ಜೆಡಿಎಸ್‍ನಿಂದ ಸೋಮಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ.

    2018ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ 91,667 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ 83,092 ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಪಿ.ಲಕ್ಷ್ಮಣ 83,092 ಮತ ಗಳಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಜೆ.ಎಸ್.ರಮೇಶ್ ಕುಮಾರ್ ಕೇವಲ 6,406 ಮತ ಪಡೆಯಲು ಶಕ್ತವಾಗಿದ್ದರು.

  • ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣಾಧಿಕಾರಿಗಳು ಅಕ್ರಮ ಹಣ, ಮದ್ಯ, ವಸ್ತುಗಳು ಸಾಗಿಸಬಾರದೆಂದು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ಹುಣಸೂರು ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಬೊಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ 3 ಚೀಲಗಳಲ್ಲಿ ಹಣವನ್ನು ಇಟ್ಟುಕೊಂಡು ಕೊಂಡೊಯ್ಯಲಾಗುತ್ತಿತ್ತು. ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರು ಹಣದ ಜೊತೆ ಪ್ರಯಾಣ ಮಾಡುತ್ತಿದ್ದರು. ಪಿರಿಯಾಪಟ್ಟಣ ಬ್ಯಾಂಕಿಗೆ ಇದನ್ನು ಸಾಗಿಸುತ್ತಿರುವುದಾಗಿ ಬ್ಯಾಂಕ್ ನೌಕಕರು ಪೊಲೀಸರಿಗೆ ಹೇಳಿದ್ದಾರೆ.

    ಬ್ಯಾಂಕಿಗೆ ಹಣ ಸಾಗಿಸುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಯಾಕೆ ಪಡೆಯಲಿಲ್ಲ? ಅದರಲ್ಲೂ ಗನ್ ಮ್ಯಾನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡುತ್ತಿರುವುದು ತಪ್ಪು. ಬ್ಯಾಂಕಿಗೆ ಸೇರಿದ ಹಣವನ್ನು ಚೀಲಗಳಲ್ಲಿ ಸಾಗಿಸುವ ಅವಶ್ಯಕತೆ ಏನು, ಸೂಕ್ತ ದಾಖಲೆ ಇಲ್ಲದೆ ಯಾಕೆ ಹಣ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣ ಬಹುಶಃ ಉಪಚುನಾವಣೆಗೆ ಹಂಚಲು ಸಾಗಿಸುತ್ತಿದ್ದಾರಾ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

    ಈ ಸಂಬಂಧ ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.

  • ಯಾರ ಬೆಂಬಲಕ್ಕೂ ನಿಂತಿಲ್ಲ, ಸದ್ಯಕ್ಕೆ ತಟಸ್ಥ: ಜಿಟಿಡಿ

    ಯಾರ ಬೆಂಬಲಕ್ಕೂ ನಿಂತಿಲ್ಲ, ಸದ್ಯಕ್ಕೆ ತಟಸ್ಥ: ಜಿಟಿಡಿ

    ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ನನಗೆ ಮೂರು ಪಕ್ಷದವರು ಬೆಂಬಲ ಕೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

    ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನಂತರ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಅಲ್ಲದೆ ಮೂರು ಪಕ್ಷಗಳ ಅಭ್ಯರ್ಥಿಗಳು ಬೆಂಬಲ ಕೇಳಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಅಷ್ಟೆ. ಈ ಹಿಂದೆ ಹೇಳಿದಂತೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದರು.

    ನಾನು ಸಾಕಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜಿ.ಟಿ.ದೇವೆಗೌಡರ ಆಸ್ತಿ ಎಷ್ಟು, ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದವರ ಆಸ್ತಿ ಎಷ್ಟಿದೆ ಎಂಬುದನ್ನು ಯಾರು ನೋಡುವುದಿಲ್ಲ. ಹಾಗೇ ರಾಜಕೀಯದಲ್ಲಿ ಪ್ರಾಮಾಣಿಕತೆ ಎಲ್ಲಿದೆ ಎಂದು ದುಡ್ಡು ಮಾಡುವವರು ಕೇಳುತ್ತಾರೆ. ಈಗಿನ ರಾಜಕೀಯ ಯಾರಿಗೂ ಬೇಡ, ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಯಾವ ರೀತಿ ಕಚ್ಚಾಡಿದರು. ಆದರೆ ಫಲಿತಾಂಶ ಬಂದ ನಂತರ ಲವರ್ ತರಹ ತಬ್ಬಿಕೊಂಡರು ಹೀಗೆ ಎಲ್ಲವೂ ಅನಿರೀಕ್ಷಿತ ಎಂದು ಬೇಸರ ವ್ಯಕ್ತಪಡಿಸಿದರು.

    ಇದೀಗ ಮಾಜಿ ಸಿಎಂ ಕುಮಾರಸ್ವಾಮಿಯವರು ಯಡಿಯೂರಪ್ಪನವರ ಸರ್ಕಾರ ಬೀಳಿಸುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಯಡಿಯೂರಪ್ಪ ಧನ್ಯವಾದ ಅಂತಾರೆ. ಈ ರೀತಿ ಪರಿಸ್ಥಿತಿ ಇರುವಾಗ ಹೋರಾಟ ಮಾಡಿದವರ ಕತೆ ಏನು? ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ತತ್ವ ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಒಳ್ಳೆಯ ಆಡಳಿತಗಾರ: ಹಾಡಿ ಹೊಗಳಿದ ಎಚ್.ವಿಶ್ವನಾಥ್

    ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಒಳ್ಳೆಯ ಆಡಳಿತಗಾರ: ಹಾಡಿ ಹೊಗಳಿದ ಎಚ್.ವಿಶ್ವನಾಥ್

    – ಜೀವ ಇರುವವರೆಗೂ ಎಚ್‍ಡಿಡಿಗೆ ಪೂಜೆ ಮಾಡ್ತೇನಿ

    ಮೈಸೂರು: ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿ ಅಲ್ಲ, ಒಳ್ಳೆಯ ಆಡಳಿತಗಾರ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಡಿ ಹೊಗಳಿದ್ದಾರೆ.

    ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನನಾಯಕರು. ನಾನು ಕೂಡ ಅವರನ್ನು ಮೆಚ್ಚಿದ್ದೇನೆ. ಹೀಗಾಗಿ ಅವರನ್ನು ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಕರೆದುಕೊಂಡು ಬಂದಿದ್ದೆ, ಮುಖ್ಯಮಂತ್ರಿಯಾಗಲು ಗುಂಪು ಮಾಡಿದ್ದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಕೈಬಿಟ್ಟಾಗ ಈ ರಾಜ್ಯದ ಜನರು ಅವರಿಗೆ ಆಶೀರ್ವಾದ ಮಾಡಿ, ಆಶ್ರಯ ಕೊಟ್ಟರು. ಇದಕ್ಕೆ ನಾವು ಬೆನ್ನೆಲುಬಾಗಿ ನಿಂತಿದ್ದೇವು ಎಂದು ಹೇಳಿದರು. ಇದನ್ನೂ ಓದಿ: ಎಲ್ಲರಿಗೂ ನಾನು ಅಂದ್ರೆ ಭಯ, ಅದಕ್ಕಾಗಿ ನನ್ನೇ ಟಾರ್ಗೆಟ್ ಮಾಡ್ತಾರೆ: ಸಿದ್ದರಾಮಯ್ಯ 

    ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ನೀಡಿದರು. ಹಣಕ್ಕಾಗಿ ಎಂದಿಗೂ ಹಪಾಹಪಿ ಮಾಡಲಿಲ್ಲ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿಯಲ್ಲ, ಉತ್ತಮ ನಾಯಕ. ಅವರನ್ನ ಕಂಡರೆ ಯಾರಿಗೂ ಭಯವಿಲ್ಲ. ನನ್ನನ್ನೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರನ್ನು ಪ್ರೀತಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಅನರ್ಹ ಎಂದು ಟೀಕಿಸ್ತಾರೆ, ನಾನು ಅನರ್ಹ ಅಲ್ಲ- ಎಚ್.ವಿಶ್ವನಾಥ್  

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟ ರೀತಿಯಲ್ಲೇ ಸ್ವಾಭಿಮಾನಕ್ಕಾಗಿ ನಾನು ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇನೆ. ಈ ಕುರುಬನನ್ನು ಗೆಲ್ಲಿಸಿದ್ದು ನಾವು ಎಂದು ಹಂಗಿಸುತ್ತಿದ್ದರು. ನಿಮ್ಮ ಜಾತಿಯವರು ಮತ ಹಾಕಿ ಗೆಲ್ಲಿಸಿಲ್ಲ ಎಂದು ಜೆಡಿಎಸ್ ಮುಖಂಡು ಹೀಯಾಳಿಸುತ್ತಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವುದಕ್ಕೆ ಹೋದರೆ ಗೇಟ್ ಹತ್ತಿರ ನಿಲ್ಲಿಸುತ್ತಿದ್ದರು ಎಂದು ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಹುಣಸೂರಿನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ

    ಜೀವ ಇರುವವರೆಗೂ ಎಚ್.ಡಿ.ದೇವೇಗೌಡರ ಫೋಟೋಗೆ ಪೂಜೆ ಮಾಡುತ್ತೇನೆ. ಅವರ ವಿರುದ್ಧ ಒಂದು ಮಾತು ಕೂಡ ಆಡುವುದಿಲ್ಲ. ನಾನು ಯಾಕೆ ರಾಜೀನಾಮೆ ಕೊಟ್ಟಿದ್ದೇನೆ ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನವರ ಆರೋಪಕ್ಕೆ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.

  • ತಂದೆಯ ರಾಜಕೀಯ ಶೈಲಿಯನ್ನು ವಿವರಿಸಿದ ಸಿದ್ದು ಪುತ್ರ

    ತಂದೆಯ ರಾಜಕೀಯ ಶೈಲಿಯನ್ನು ವಿವರಿಸಿದ ಸಿದ್ದು ಪುತ್ರ

    ಮೈಸೂರು: ತಮ್ಮ ತಂದೆಯವರನ್ನು ಯಾರಾದರೂ ವೈಯಕ್ತಿಕವಾಗಿ ಟೀಕೆ ಮಾಡಿದರೆ ಅದಕ್ಕೆ ಅವರೇ ಉತ್ತರ ಕೊಡುತ್ತಾರೆ. ಬೇರೆಯವರ ಸಹಾಯ ನಿರೀಕ್ಷೆ ಮಾಡಲ್ಲ. ಇದು ನನ್ನ ತಂದೆಯ ರಾಜಕೀಯ ಶೈಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿದ್ದಾರೆ.

    ನಗರದ ಹುಣಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆ ಮಾಸ್ ಲೀಡರ್. ಅವರನ್ನು ಟೀಕೆ ಮಾಡಿ ಅವರಿಂದ ವಿವಾದಾತ್ಮಕ ಹೇಳಿಕೆ ಬಂದರೆ ಅದು ತಮಗೆ ಲಾಭ ಅನ್ನೋದು ಅನೇಕರ ಲೆಕ್ಕಚಾರವಾಗಿದೆ. ಆದರೆ ತಂದೆಯನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ರೆ ಅವರೇ ಖಡಕ್ ಉತ್ತರ ಕೊಡುತ್ತಾರೆ ಎಂದು ಅಪ್ಪನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

    ಇದೇ ವೇಳೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಳಿಯಿಂದ ಸಾಲ ಪಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ನನಗೆ ಗೊತ್ತಿರೋ ಪ್ರಕಾರ ನನ್ನ ತಂದೆ ಯಾರ ಬಳಿಯೂ ಸಾಲ ಮಾಡಿಲ್ಲ. ಮನೆಯ ವಿಚಾರಕ್ಕೆ ಅವರು ಸಾಲ ಪಡೆದಿದ್ದರೆ ಅದು ನನಗೆ ಗೊತ್ತಾಗುತ್ತಿತ್ತು. ಆದರೆ, ಅವರು ರಾಜಕೀಯವಾಗಿ ಸಾಲ ಮಾಡಿದ್ದಾರಾ ಎಂಬುದು ನನಗೆ ಗೊತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಅವರು ಯಾರ ಬಳಿಯೂ ಸಾಲ ಪಡೆದಿಲ್ಲ ಎಂದರು. ಇದನ್ನೂ ಓದಿ: ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ

    ಎಂಟಿಬಿ ಆರೋಪವೇನು?
    ಬುಧವಾರ ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಎಂಟಿಬಿ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ. ಕೃಷ್ಣಬೈರೇಗೌಡ ಸಾಲ ಪಡೆದು ವಾಪಸ್ ನೀಡಿದ್ದಾನೆ. ಆದರೆ ಉಳಿದವರು ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಎಂಟಿಬಿ ಖಾತೆಗೆ ಇವತ್ತೇ ಹಣ ಜಮೆ- ಹೊಸೂರು ಬ್ಯಾಂಕ್ ಕತೆ ಹೇಳಿದ ನಂಜೇಗೌಡ