Tag: ಹುಚ್ಚವೆಂಕಟ್

  • ಯಾರಾದ್ರೂ ಹುಚ್ಚ ವೆಂಕಟ್‍ಗೆ ಸಹಾಯ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು: ಪ್ರಥಮ್ ಮನವಿ

    ಯಾರಾದ್ರೂ ಹುಚ್ಚ ವೆಂಕಟ್‍ಗೆ ಸಹಾಯ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು: ಪ್ರಥಮ್ ಮನವಿ

    ಬೆಂಗಳೂರು: ಒಂದು ಕಡೆ ಹುಚ್ಚವೆಂಕಟ್ ಅವರಿಗೆ ಚಿಕಿತ್ಸೆಯ ಸಹಾಯವಿದೆ ಎಂದು ನಟ ಭುವನ್ ಮನವಿ ಮಾಡಿಕೊಂಡಿದ್ರೆ, ಇತ್ತ ಬಿಗ್‍ಬಾಸ್ ವಿನ್ನರ್ ಪ್ರಥಮ್, ನಾವು ಹುಚ್ಚವೆಂಕಟ್ ಎಂದು ಹೇಳುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

    ನಟ ಪ್ರಥಮ್ ಹುಚ್ಚವೆಂಕಟ್ ಸ್ಥಿತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪತ್ರವನ್ನು ಬರೆದು ಅದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ “ಯಾರಾದರೂ ಹುಚ್ಚವೆಂಕಟ್ ಅವರಿಗೆ ಸಹಾಯ ಮಾಡಬೇಕು ಅಂತ ಇದ್ದರೆ ಇಷ್ಟು ಮಾಡಿ ಸಾಕು. ಅದೇ ದೊಡ್ಡ ಉಪಕಾರ. ಇದನ್ನೂ ಎಲ್ಲರೂ ಶೇರ್ ಮಾಡಿ. ಒಂದು ಒಳ್ಳೆಯ ವಿಚಾರ ನಾಲ್ಕು ಜನಕ್ಕೆ ತಲುಪಿಸಿದರೆ ಅದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದು ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನೆನ್ನೆ ರಾತ್ರಿ ನನ್ನ ಗೆಳತಿಯೊಬ್ಬರು ಮೆಸೇಜ್ ಮಾಡಿ, “ಏನ್ರೀ ಪ್ರಥಮ್, ಹುಚ್ಚವೆಂಕಟ್‍ಗೆ ಸಹಾಯ ಮಾಡ್ರಿ ಪಾಪ” ಎಂದರು. ತಕ್ಷಣ ನಾನು ಹೌದು ವೆಂಕಟ್ ಅವರಿಗೆ ಸಹಾಯ ಮಾಡುತ್ತೀನಿ. ಈಗಾಗಲೇ ನಾನು ಸಹಾಯ ಮಾಡಿದ್ದೀನಿ ಎಂದೆ. ಅದಕ್ಕೆ ಅವರು ಯಾವಾಗ ಸಹಾಯ ಮಾಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು “ನಾನು ಅವರನ್ನು ವೆಂಕಟ್ ಅಂತ ಕರೆಯುವುದೇ ನಾನು ಅವರಿಗೆ ಮಾಡುವ ಸಹಾಯ ಎಂದೆ. ಅವರನ್ನು ಹುಚ್ಚವೆಂಕಟ್ ಅಂತ ಪ್ರಚೋದಿಸುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದರು.

    ನಾವೆಲ್ಲರೂ ಅವರನ್ನು ವೆಂಕಟ್ ಆಗೇ ನೋಡೋಣ, ಅವರಿಗೆ ಅನುಕಂಪ ತೋರಿಸುವ ಬದಲು ಅವಮಾನ ಮಾಡದೇ ಅವರನ್ನು ಅವರಷ್ಟಕ್ಕೆ ಬಿಡೋಣ. ಇದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

  • ಹುಚ್ಚವೆಂಕಟ್ ಅಭಿಮಾನಿ ಕಡೆಯಿಂದ ನಟಿಗೆ ಧಮ್ಕಿ

    ಹುಚ್ಚವೆಂಕಟ್ ಅಭಿಮಾನಿ ಕಡೆಯಿಂದ ನಟಿಗೆ ಧಮ್ಕಿ

    ಬೆಂಗಳೂರು: ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ಅಭಿಮಾನಿ ಕಡೆಯಿಂದ ಸೂಪರ್ ಜೋಡಿಯ ಖ್ಯಾತಿಯ ನಟಿ ರಚನಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವೆಂಕಟ್ ಅಭಿಮಾನಿಯೊಬ್ಬ ಭಾನುವಾರ ರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ನಟಿ ಆರೋಪಿಸುತ್ತಿದ್ದಾರೆ. ಬಳಿಕ ಈ ವಿಚಾರವಾಗಿ ರಚನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ನಟಿ ರಚನಾ `ಸಮರ್ಥ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ಬರುವ ಒಂದು ಡೈಲಾಗ್‍ಗೆ ವೆಂಕಟ್ ಅಭಿಮಾನಿ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಸಿದ ನಟಿ ರಚನಾ, ಶುಕ್ರವಾರ ಸಮರ್ಥ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿದ ಅಭಿಮಾನಿಯೊಬ್ಬರು ನನಗೆ ಕರೆ ಮಾಡಿದ್ದರು. ಆಗ ನಿಮ್ಮ ಸಿನಿಮಾ ಡೈಲಾಗ್ ಕೇಳಿ ನಮ್ಮ ಅಣ್ಣನಿಗೆ ಬೇಜಾರಾಗಿದೆ. ನೀನೇನು ದೊಡ್ಡ ಹೀರೋಯಿನಾ. ನಾವು ಮನಸ್ಸು ಮಾಡಿದ ನಾಳೆನೇ ಸಿನಿಮಾವನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ ಅಂತ ಹೇಳಿದ್ದಾರೆ.

    ಈ ವೇಳೆ ನಾನು ಯಾರು ನೀವು ಎಂದು ಕೇಳಿದೆ. ಆದರೆ ಅವನು ಕೊನೆವರೆಗೂ ತಾನು ಯಾರೆಂದು ಹೇಳಲು ಭಯಪಡುತ್ತಿದ್ದನು. ಕೊನೆಗೆ ನಾನು ಹುಚ್ಚ ವೆಂಕಟ್ ಅಭಿಮಾನಿ ಎಂದು ಹೇಳಿದ್ದಾನೆ. ಸದ್ಯಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ಅವರು ವಿಚಾರಣೆ ಮಾಡಿ ಯಾರು ಎಂದು ಪತ್ತೆ ಮಾಡುತ್ತೇವೆ ಅಂತ ಹೇಳಿದ್ದಾರೆ ಎಂದು ರಚನಾ ತಿಳಿಸಿದ್ದಾರೆ.

    ಈ ಹಿಂದೆ ರಚನಾ ನಾನು ಪ್ರೀತಿಸುತ್ತಿದ್ದೇವೆ ಅಂತ ಹುಚ್ಚ ವೆಂಕಟ್ ವಿವಾದ ಸೃಷ್ಟಿಸಿದ್ದರು.

  • 5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆ ಮೂಲಕ ತಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಿರ್ಮಿಸುತ್ತಾ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಇದೀಗ ರಾಜಕೀಯವಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ. ಈ ಹಿನ್ನಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿ ರಾಜಕೀಯ ಪಕ್ಷಗಳು ಆಫರ್ ಕೊಟ್ಟರೆ ಹೋಗುತ್ತೇನೆ. ನಾನು ಚುನಾವಣೆಯಲ್ಲಿ ಸೀರೆ, ಹೆಂಡ, ಹಣ ಕೊಡಲ್ಲ. ಜನರಿಗೆ ಕೈ ಮುಗಿಯಲ್ಲ ಮತ್ತು ಕ್ಯಾನ್ವಾಸ್ ಮಾಡಲ್ಲ. ನಾನು ಓಟ್ ನ ಭಿಕ್ಷೆ ಬೇಡಲ್ಲ. ಇಲ್ಲ ನಿಮ್ಮನ್ನ ನಾನು ಕೊಂಡುಕೊಳ್ಳಲ್ಲ. ನಿಮ್ಮ ಕೆಲಸ ಮಾಡಬೇಕು ಎಂದು ಬಂದಿದ್ದೇನೆ ಕೆಲಸ ಕೊಡಿ ಎಂದು ಹೇಳಿದ್ದಾರೆ.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ. ಜನರಿಗೆ ಕೈ ಕೂಡಾ ಮುಗಿಯುವುದಿಲ್ಲ. ಜನರ ಕೆಲಸ ಮಾಡಬೇಕು ಅಂತಾ ನಾನು ಬರುತ್ತಿದ್ದೇನೆ. ಜನತೆ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

    ನಾನು ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಕೂಡಾ ಆಗುತ್ತೇನೆ. ನಂತರ ಪ್ರಧಾನಿ ಕೂಡ ಆಗುತ್ತೇನೆ. ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ, ನನಗೆ ಕೇವಲ 5 ದಿನ ಪ್ರಧಾನಿಯಾಗುವ ಅವಕಾಶ ನೀಡಿದರೆ ದೇಶವನ್ನು ಬದಲಾಯಿಸುತ್ತೇನೆ. ಇಡೀ ವಿಶ್ವವೇ ಭಾರತ ನಂ. 1 ಎನ್ನುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

    ನಾನು ಇಲ್ಲಿ ಸೋತರೆ ದೆಹಲಿಗೆ ಹೋಗುತ್ತೇನೆ. ಅಲ್ಲೂ ಸೋತರೆ ಅಮೆರಿಕಕ್ಕೆ ಹೋಗುತ್ತೇನೆ. ನನಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ಎಲ್ಲ ಕಡೆನೂ ಇದ್ದಾರೆ. ಆದರೆ ನನ್ನ ಮನೆ ಇರುವುದು ಕರ್ನಾಟಕದಲ್ಲಿ ನನ್ನನ್ನು ಸೋಲಿಸಿದರೂ ನಾನು ಬೇಸರಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟ ಪಡಿಸಿದ್ದಾರೆ.

  • ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಬೆಂಗಳೂರು: ಇಂದು ಫಿಲ್ಮ್ ಚೇಂಬರ್‍ನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಹುಚ್ಚವೆಂಕಟ್ ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.

    ಶುಕ್ರವಾರ ಹುಚ್ಚವೆಂಕಟ್ ಅಭಿನಯದ ‘ಪೊರ್ಕಿ ಹುಚ್ಚವೆಂಕಟ್’ ಸಿನಿಮಾ ಬಿಡುಗಡೆಯಾಗಿತ್ತು. ಪತ್ರಿಕೆಯೊಂದು ಸಿನಿಮಾ ವಿಮರ್ಷೆಯನ್ನು ಪ್ರಕಟಿಸಿತ್ತು. ಈ ವಿಮರ್ಷೆಗೆ ಹುಚ್ಚ ವೆಂಕಟ್ ಕಿಡಿಕಾರಿದ್ದರು.

    ಈ ವಿಚಾರದ ಬಗ್ಗೆ ಫಿಲ್ಮ್ ಚೇಂಬರ್‍ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹುಚ್ಚವೆಂಕಟ್ ಮಾಧ್ಯಮಗಗಳ ಜೊತೆ ವಾಗ್ವಾದಕ್ಕಿಳಿದರು. ಹುಚ್ಚ ವೆಂಕಟ್ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದು ಹುಚ್ಚ ವೆಂಕಟ್ ಆವೇಶಭರಿತರಾಗಿ ವಿಮರ್ಶೆ ಮಾಡಲು ನಿವ್ಯಾರು, ವಿಮರ್ಶೆ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು, ಅದನ್ನು ಜನರು ತಿರ್ಮಾನ ಮಾಡುತ್ತಾರೆ ಎಂದು ಮಾಧ್ಯಮದವರ ಮೇಲೆಯೇ ಸಿಟ್ಟಾದರು.

    ಇದನ್ನೂ ಓದಿ: ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

    ರಾಜ್ಯದ ಮುಖ್ಯಮಂತ್ರಿಗಳು 50 ಸಾವಿರ ರೂ. ಖರ್ಚು ಮಾಡಿ ತೆಲಗು ಸಿನಿಮಾ ನೋಡುತ್ತಾರೆ. ಕನ್ನಡ ಚಿತ್ರಗಳನ್ನು ನೋಡಲಿ. ನನ್ನಿಂದ ತಪ್ಪಾಗಿದಲ್ಲಿ ಕ್ಷಮೆ ಇರಲಿ. ನಿಮಗೆ ಬರೆಯೋ ಅಧಿಕಾರ ಇದೆ. ಆದರೆ ವಿಮರ್ಷೆ ಮಾಡೋ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಲು ಬರಬೇಡಿ ಎಂದು ವೆಂಕಟ್ ಮಾಧ್ಯಮಗಳಿಗೆ ಹೇಳಿದರು.

    ಈ ಸಮಸ್ಯೆಗಳನ್ನ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ವೆಂಕಟ್ ಹತ್ರ ಮಾತಾಡಿ ಕೊನೆ ಮಾಡುವಂತೆ ಹೇಳಿದ್ದೇನೆ. ಅದಕ್ಕೂ ಅವರೂ ಒಪ್ಪಿ ಬಂದಿದ್ದಾರೆ ಎಂದು ಸಾ.ರಾ.ಗೋವಿಂದು ಮಾಧ್ಯಮಗಳಿಗೆ ತಿಳಿಸಿದರು.

     ಇದನ್ನೂ ಓದಿ: 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ

  • ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

    ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

    ಬೆಂಗಳೂರು: ನನ್ ಮಗಂದ್, ನನ್ ಎಕ್ಕಡಾ ಎಂಬ ಬೈಗುಳದ ಮಾತುಗಳಿಂದಲೇ ಫೇಮಸ್ ಆಗಿದ್ದ ಹುಚ್ಚ ವೆಂಕಟ್ ಈ ಬಾರಿ ಗಳಗಳನೇ ಕಣ್ಣೀರು ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಬಾಹುಬಲಿ-2′ ಸಿನಿಮಾ ಬಿಡುಗಡೆಯಂದೇ ಹುಚ್ಚ ವೆಂಕಟ್ ನಿರ್ದೇಶಿಸಿ, ನಿರ್ಮಿಸಿ, ನಟಿಸಿದ `ಪೊರ್ಕಿ ಹುಚ್ಚ ವೆಂಕಟ್’ ಎಂಬ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಇಡೀ ದೇಶವೇ ಬಾಹುಬಲಿ-2 ಚಿತ್ರಕ್ಕೆ ಕಾತರರಾಗಿ ಕುಳಿತಿದ್ದ ಸಮಯದಲ್ಲಿ ವೆಂಕಟ್ ಈ ಚಿತ್ರವನ್ನು ರಿಲೀಸ್ ಮಾಡಿದ್ದರು.

    ಕನ್ನಡಿಗರು ನನ್ನ ಚಿತ್ರ ನೋಡುತ್ತಾರೆ. ನನ್ನನ್ನು ಪ್ರೀತಿಸಿ, ಪ್ರೋತ್ಸಾಹಿಸುತ್ತಾರೆ ಅನ್ನೋ ನಂಬಿಕೆಯಿಂದ ಅವರು ಚಿತ್ರವನ್ನು ಬಿಡುಗಡೆಗೊಳಿಸಿದ್ದರು. ಆದ್ರೆ ಜನ ಕನ್ನಡ ಸಿನಿಮಾ ನೋಡಲು ಬದಲು ತೆಲುಗು ಚಿತ್ರ ಬಾಹುಬಲಿ-2 ಚಿತ್ರವನ್ನು ವೀಕ್ಷಿಸುವಲ್ಲಿ ಮುಗಿಬಿದ್ದಿದ್ದಾರೆ. ಇದರಿಂದ ಹುಚ್ಚ ವೆಂಕಟ್ ಅವರಿಗೆ ಕನ್ನಡಿಗರ ಮೇಲಿದ್ದ ನಿರೀಕ್ಷೆ ಹುಸಿಯಾಯ್ತು. ಹೀಗಾಗಿ ಮನನನೊಂದ ವೆಂಕಟ್ ವೀಡಿಯೋ ಮೂಲಕ ಕಣ್ಣೀರು ಹಾಕುತ್ತಾ ನನ್ನ ಸಿನಿಮಾ ನೋಡಿ ಎಂದು ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡಿದ್ದಾರೆ.

    ದಯವಿಟ್ಟು ನನ್ನ ಸಿನಿಮಾ ನೋಡಿ, ಇಲ್ಲವಾದಲ್ಲಿ ನಾನು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ದಿನ ಹೌಸ್ ಫುಲ್ ಮಾಡಿ ಪ್ಲೀಸ್ ಅಂತಾ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ದುಡ್ಡು ಕೊಟ್ಟು ಹುಚ್ಚ ವೆಂಕಟ್ ಸಿನಿಮಾ ನೋಡಲು ಆಗಲ್ಲ ಅಂತಂದ್ರೆ ಫ್ರೀ ಆಗಿ ನೋಡಲು ಕೆ.ಜಿ ರೋಡ್ ನಲ್ಲಿರೋ ಅನುಪಮಾ ಥಿಯೇಟರ್ ಗೆ ಬನ್ನಿ. ಸಿನಿಮಾ ನೋಡಿದ ಬಳಿಕ ಈ ಸಿನಿಮಾಕ್ಕೊಂದು ವ್ಯಾಲ್ಯು ಇದೆ ಅಂತಾ ಹಣ ಕೊಡಲು ಮನಸ್ಸಾದ್ರೆ ನೀಡಿ ಅಂತಾ ಹುಚ್ಚ ವೆಂಕಟ್ ಹೇಳಿದ್ದಾರೆ.

    ಮೊನ್ನೆ ಒಂದು ಕುಟುಂಬ ಬಂದು ನನ್ನೊಂದಿಗೆ ಸೆಲ್ಫಿ ತಗೊಂಡ್ರು. ಆ ಬಳಿಕ ತೆಲುಗು ಚಿತ್ರಕ್ಕೆ ಹೋದ್ರು. ಫೋಟೋಗೆ ಮಾತ್ರ ನಾನು ಬೇಕಾ. ನಾಳೆ ಕಷ್ಟ ಅಂತಾ ಬಂದ್ರೆ ತೆಲುಗು ಅವನು ಬರಲ್ಲ ಕನ್ನಡಿಗನಾಗಿರೋ ನಾನು ಬರ್ತೀನಿ. ಈ ಸಿನಿಮಾ ಪ್ಲಾಪ್ ಆದ್ರೂ ಕನ್ನಡಿಗರ ಕಷ್ಟಕ್ಕೆ ನಾನು ಯಾವತ್ತೂ ಸ್ಪಂದಿಸುತ್ತೇನೆ ಅಂತಾ ಹೇಳುತ್ತಾ ವೆಂಕಟ್ ಅತ್ತುಬಿಟ್ರು. ಸದ್ಯ ಇವರ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.