Tag: ಹುಕ್ಕೇರಿ ಮಠ

  • ಹುಕ್ಕೇರಿ ಮಠದಿಂದ ಬೆಳಗಾವಿ ಜಿಲ್ಲೆಗೆ ಎರಡು ಅಂಬುಲೆನ್ಸ್ ದಾನ

    ಹುಕ್ಕೇರಿ ಮಠದಿಂದ ಬೆಳಗಾವಿ ಜಿಲ್ಲೆಗೆ ಎರಡು ಅಂಬುಲೆನ್ಸ್ ದಾನ

    ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹುಕ್ಕೇರಿ ತಾಲೂಕು ಆಡಳಿತಕ್ಕೆ ಅಂಬುಲೆನ್ಸ್ ದಾನ ನೀಡುವದರ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

    ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ಅಂಬುಲೆನ್ಸ್ ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಎರಡು ಅಂಬುಲೆನ್ಸ್ ನೀಡುವ ಮೂಲಕ ಸರ್ಕಾರದ ಜೋತೆ ಕೈ ಜೋಡಿಸಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದರು.

    ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀ ಗಳು ಜಿಲ್ಲೆಗೆ ಎರಡು ಅಂಬುಲೆನ್ಸ್ ನೀಡುವ ಮೂಲಕ ಸಾಮಾಜಿಕವಾಗಿ ಕಳಕಳಿ ಹೊಂದಿದ್ದಾರೆ ಎಂದರು.

    ನಂತರ ವಿಡಿಯೋ ಸಂದೇಶ ಮೂಲಕ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ತಾಲೂಕಿನ ಜನರ ಅನಕೂಲಕ್ಕಾಗಿ ಶ್ರೀ ಮಠದಿಂದ ಅಂಬುಲೆನ್ಸ್ ನೀಡಲಾಗಿದೆ. ಈ ವರ್ಷ ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವ ಕೈ ಬಿಟ್ಟು ಜನರ ಸೇವೆ ಮಾಡಲಾಗುತ್ತಿದೆ. ಹಿರೇಮಠದಿಂದ ಕೊರೊನಾ ಮೊದಲನೇ ಅಲೆಯಲ್ಲಿ 12 ಲಕ್ಷ ರೂಪಾಯಿ ಮೌಲ್ಯದ ಆಹಾರ ಕೀಟ್ ವಿತರಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉಮಾ ಸಾಲಿಗೌಡರ, ಕೃಷಿ ಅಧಿಕಾರಿ ಮಹಾದೇವ ಪಟಗುಂದಿ, ಮಹಾವೀರ ನಿಲಜಗಿ, ಪರಗೌಡಾ ಪಾಟೀಲ್, ಚನ್ನಪ್ಪಾ ಗಜಬರ, ಅಕ್ಷರ ದಾಸೋಹ ನಿರ್ದೆಶಕ ಶ್ರೀಶೈಲ್ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು.

  • ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ

    ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ

    ಹಾವೇರಿ: ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯ್ತು.

    ನಮ್ಮ ಜಗತ್ತು ಅತೀ ಸುಂದರವಾಗಿದ್ದು ಅದನ್ನು ಆಸ್ವಾದಿಸಲು ಭಗವಂತ ನೀಡಿರುವ ಕಣ್ಣುಗಳು ಅಮೂಲ್ಯ ಸಂಪತ್ತುಗಳಾಗಿದ್ದು ಅವುಗಳನ್ನು ಸೂಕ್ತವಾಗಿ ಕಾಪಾಡಬೇಕೆಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಹುಕ್ಕೇರಿಮಠದಲ್ಲಿ ಲಿಂ.ಶಿವಬಸವ ಸ್ವಾಮಿಗಳ 74 ನೇ ಮತ್ತು ಲಿಂ.ಶಿವಲಿಂಗ ಸ್ವಾಮಿಗಳ 11 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಉತ್ಸವ ಸಮಿತಿ, ಲಯನ್ಸ ಕ್ಲಬ್, ದಿಶಾ ಪೌಂಡೇಶನ್, ಜಿಲ್ಲಾ ನೇತ್ರ ಘಟಕ ಹಾವೇರಿ, ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತ ನೇತ್ರ ಚಿಕಿತ್ಸೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಮಾನವ ಶರೀರವು ಅದ್ಭುತ ರಚನೆಯಾಗಿದ್ದು, ಪ್ರತಿ ಅಂಗವು ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿಯೂ ಕಣ್ಣುಗಳು ಅತೀ ಮುಖ್ಯವಾಗಿದ್ದು, ಕುರುಡನನ್ನು ಕೇಳಿದರೆ ಕಣ್ಣಿನ ಮಹತ್ವ ಗೊತ್ತಾಗುತ್ತದೆ. ಅದನ್ನು ಧೂಳಿನಿಂದ, ವಿಕಿರಣಗಳಿಂದ, ಪಟಾಕಿಗಳಿಂದ ನಾವೇ ಹಾಳು ಮಾಡಿಕೊಳ್ಳುತ್ತೇವೆ. 40ರ ನಂತರ ನಿಯಮಿತವಾಗಿ ನುರಿತ ವೈದ್ಯರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

    ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿ, ನೇತ್ರದಾನವು ಅತೀ ಶ್ರೇಷ್ಠವಾಗಿದ್ದು, ಮರಣದ ನಂತರವೂ ನಾವು ಈ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಣ್ಣಲ್ಲಿ ಮಣ್ಣಾಗುವ ಬದಲು ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕೇಂದು ಹೇಳಿದರು. ಜಿಲ್ಲಾ ನೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂರಾಜಶೇಖರ್, ಡಾ. ನಾಗರಾಜ್ ನಾಯಕ್, ಡಾ. ರಾಜೇಂದ್ರ ದೊಡ್ಡಮನಿ, ಡಾ. ಸಿ.ಎಸ್.ವಿರಕ್ತಮಠ ಮತ್ತು ಡಾ. ದಾಕ್ಷಾಯಣಿ ಕಣ್ಣಿನ ತಪಾಸಣೆ ಮಾಡಿದರು.

    ಸಮಾರಂಭದಲ್ಲಿ ಬಸವರಾಜ್ ಕೇಸರಿ, ಸುನಿಲ್ ಸನಣೂರ, ರೇಖಾ ಬಿ ಶೆಟ್ಟಿ, ಲಯನ್ಸ್ ಕ್ಲಬ್‍ನ ಪ್ರೋ ಪಿ.ಸಿ.ಹಿರೇಮಠ, ನಿತೀನ್ ಹೊರಡಿ, ನವೀನಕುಮಾರ್ ಹಾವನೂರು, ಶಿವಮೂರ್ತಿ ಸಾದರ, ಮಹಾಂತೇಶ್ ಮಳಿಮಠ, ಮಹೇಶ್ ಹೆಬ್ಬಳ್ಳಿ, ರಾಚಣ್ಣ ಮಾಗನೂರ, ಅಶೋಕ್ ಹೇರೂರ, ದಯಾನಂದ್ ಯಡ್ರಾಮಿ, ಆನಂದ್ ಅಟವಾಳಗಿ, ಶಂಕರ್ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 342 ರೋಗಿಗಳು ನೇತ್ರ ಚಿಕಿತ್ಸೆಗೆ ಒಳಪಟ್ಟರು. 154 ಜನರು ಶಸ್ತ್ರ ಚಿಕಿತ್ಸೆ ನೋಂದಣಿಯಾದರು.

  • ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಹಾವೇರಿ: ಯೋಗವು ಭಾರತೀಯ ಪರಂಪರೆಯ ತಾಯಿ ಬೇರಾಗಿದ್ದು, ಭಾರತವು ವಿಶ್ವಕ್ಕೆ ನೀಡಿದ ಅತೀ ಪ್ರಮುಖ ಕೊಡುಗೆ. ಯೋಗವು ನಮ್ಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿ ಮಠ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಯೋಗಾಸನ ಚಾಂಪಿಯನ್‍ಶಿಫ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸದಾಶಿವ ಸ್ವಾಮೀಜಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.

    ಪ್ರಾಚೀನ ಕಾಲದಲ್ಲಿ ಸಂತ ಮಹಾತ್ಮರು ಆರಂಭಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದೆ. ಯಾವುದೇ ವಯೋಮಾನದವರು ಕೂಡಾ ಯೋಗವನ್ನು ಮಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಬಹುದು ಎಂದು ಸ್ವಾಮೀಜಿ ಹೇಳಿದರು.

    ಎಲ್ಲ ಭಾಗ್ಯಗಳಿಗಿಂತ ಆರೋಗ್ಯದ ಭಾಗ್ಯವೇ ದೊಡ್ಡದು ಎನ್ನುವಂತೆ ಹಿತ ಮಿತವಾದ ಊಟ, ಚಟುವಟಿಕೆಯುಕ್ತ ಜೀವನ ಹಾಗೂ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಅಳವಡಿಸಿಕೊಳ್ಳಬೇಕು. ಆಗ ರೋಗ ಮುಕ್ತ ಬದುಕನ್ನು ಹಾಗೂ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂದು ಕಿವಿಮಾತು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತ ಯೋಗ ಫೆಡರೇಶನ್‍ನ ಉಪಾಧ್ಯಕ್ಷ ಗಂಗಾಧರಪ್ಪ ಅವರು ಮಾತನಾಡಿ, ಇಂದು ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಿದ್ದು, ಯೋಗ ಅಂತರಾಷ್ಟ್ರೀಯ ಸ್ಪರ್ಧೆಯಾಗಿ ಮಾರ್ಪಾಡಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ ಒಲಿಂಪಿಕ್ಸ್ ನಲ್ಲಿ ಯೋಗವನ್ನು ಸೇರ್ಪಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

    ಯೋಗ ಚಾಂಪಿಯನ್‍ಶಿಪ್‍ನಲ್ಲಿ 30 ಜಿಲ್ಲೆಗಳಿಂದ ಒಟ್ಟು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟನ ಶಶಿಕಾಂತ ಜೈನ್ ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಟಿ, ವೀರಣ್ಣ ಅಂಗಡಿ, ಎಂ.ಸಿ ಮಳಿಮಠ, ಬಿ. ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು. ಯೋಗ ಸಂಯೋಜಕರಾದ ಪ್ರೇಮಕುಮಾರ ಮುದ್ದಿ ಕಾರ್ಯಕ್ರಮ ನಿರ್ವಹಿಸಿದರು.